ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಅಂಗಸಂಸ್ಥೆಗಳ ಅಧಿಕಾರಿಗಳು, ನೌಕರರು ಹಾಗೂ ರಾಜ್ಯದಲ್ಲಿನ ಚುನಾಯಿತ ಪ್ರತಿನಿಧಿಗಳ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ಕುರಿತು ತನಿಖೆ ನಡೆಸುವುದಕ್ಕಾಗಿ ಲೋಕಾಯುಕ್ತದ ಪೊಲೀಸ್ ವಿಭಾಗವು ಕಾರ್ಯನಿರ್ವಹಿಸುತ್ತಿದೆ. ಅಧಿಕಾರಿಗಳು, ನೌಕರರು ಹಾಗೂ ಚುನಾಯಿತ ಪ್ರತಿನಿಧಿಗಳು ಘೋಷಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವುದು, ಲಂಚಕ್ಕೆ ಬೇಡಿಕೆ, ಲಂಚ ಪಡೆಯುವುದು, ಅಧಿಕಾರ ದುರ್ಬಳಕೆಯಂತಹ ಆರೋಪಗಳ ಕುರಿತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್ಐಆರ್ ದಾಖಲಿಸಿ, ತನಿಖೆ ನಡೆಸುವ ಅಧಿಕಾರವನ್ನು ಈ ತನಿಖಾ ಸಂಸ್ಥೆ ಹೊಂದಿದೆ. ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸಿದರೂ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 19ರ ಅಡಿಯಲ್ಲಿ ಸಕ್ಷಮ ಪ್ರಾಧಿಕಾರಗಳಿಂದ ಅಭಿಯೋಜನಾ ಮಂಜೂರಾತಿ ಪಡೆಯುವುದು ಕಡ್ಡಾಯ. ಆರೋಪಪಟ್ಟಿ ಸಲ್ಲಿಸಿ, ವಿಚಾರಣೆ ಆರಂಭಿಸಲು ಸಕ್ಷಮ ಪ್ರಾಧಿಕಾರಗಳು ಅನುಮತಿ ನೀಡದಿದ್ದರೆ ತನಿಖಾ ಸಂಸ್ಥೆ ನಡೆಸಿದ ತನಿಖೆಯು ನಿಷ್ಫಲವಾಗುತ್ತದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರವು 2023ರ ಮೇ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡ ನಂತರ ಈವರೆಗೆ ಲೋಕಾಯುಕ್ತ ಪೊಲೀಸರು ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ನೌಕರರು ಮತ್ತು ಚುನಾಯಿತ ಪ್ರತಿನಿಧಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೋರಿ ಸಕ್ಷಮ ಪ್ರಾಧಿಕಾರಗಳಿಗೆ 525 ಪ್ರಸ್ತಾವಗಳನ್ನು ಸಲ್ಲಿಸಿದ್ದರು. ಈ ಪೈಕಿ 329 ಪ್ರಸ್ತಾವಗಳಿಗೆ ಸಕ್ಷಮ ಪ್ರಾಧಿಕಾರಗಳು ಒಪ್ಪಿಗೆ ನೀಡಿವೆ. ಆರು ಪ್ರಸ್ತಾವಗಳನ್ನು ತಿರಸ್ಕರಿಸಲಾಗಿದೆ. 190 ಪ್ರಸ್ತಾವಗಳು ದೀರ್ಘಕಾಲದಿಂದಲೂ ಸಕ್ಷಮ ಪ್ರಾಧಿಕಾರಗಳ ಬಳಿ ಉಳಿದಿವೆ. ಗಣಿ ಗುತ್ತಿಗೆ ಮಂಜೂರಾತಿಯಲ್ಲಿ ಕಾನೂನು ಉಲ್ಲಂಘನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ

ಎಚ್.ಡಿ. ಕುಮಾರಸ್ವಾಮಿ, ಅಕ್ರಮ ಗಣಿಗಾರಿಕೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಶಾಸಕ ಜಿ. ಜನಾರ್ದನ ರೆಡ್ಡಿ ಸೇರಿದಂತೆ ಕೆಲವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೋರಿರುವ ಪ್ರಸ್ತಾವಗಳು ರಾಜ್ಯಪಾಲರ ಹಂತದಲ್ಲೇ ತೀರ್ಮಾನ ಆಗಬೇಕಿದೆ.

ಒಂದೂವರೆ ವರ್ಷದಲ್ಲಿ ಲೋಕಾಯುಕ್ತ ಪೊಲೀಸರು ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೋರಿರುವ ಪ್ರಸ್ತಾವಗಳಲ್ಲಿ ಶೇಕಡ 36.19ರಷ್ಟು ಬಾಕಿ ಉಳಿದಿವೆ ಎಂಬ ಮಾಹಿತಿಯು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಲೋಕಾಯುಕ್ತದ ರಿಜಿಸ್ಟ್ರಾರ್ ಬರೆದಿರುವ ಪತ್ರದಿಂದ ಬಹಿರಂಗವಾಗಿದೆ. ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದ ಪ್ರಕರಣ

ಗಳಲ್ಲಿ ತನಿಖೆ ಮತ್ತು ವಿಚಾರಣೆಯಲ್ಲಿನ ವಿಳಂಬವು ಆರೋಪಿಗಳಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ. ತ್ವರಿತವಾಗಿ ತನಿಖೆ ನಡೆಸಿ ಆರೋಪಪಟ್ಟಿಯನ್ನು ಸಲ್ಲಿಸಿ, ಕಾಲಮಿತಿಯಲ್ಲಿ ವಿಚಾರಣೆ ಪೂರ್ಣಗೊಳಿಸಿದರೆ ಮಾತ್ರ ಆರೋಪಿಗಳನ್ನು ಕಾನೂನು ಕ್ರಮಕ್ಕೆ ಒಳಪಡಿಸುವ ಅವಕಾಶ ಹೆಚ್ಚಾಗಿರುತ್ತದೆ. ಈ ಕಾರಣಕ್ಕಾಗಿಯೇ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್–19ಕ್ಕೆ 2018ರಲ್ಲಿ ತಿದ್ದುಪಡಿ ತಂದಿರುವ ಕೇಂದ್ರ ಸರ್ಕಾರವು ಭ್ರಷ್ಟಾಚಾರ ಪ್ರಕರಣಗಳಲ್ಲಿ ತನಿಖಾಧಿಕಾರಿಯು ಪ್ರಸ್ತಾವ ಸಲ್ಲಿಸಿದ ದಿನದಿಂದ ಮೂರು ತಿಂಗಳೊಳಗೆ ಸಕ್ಷಮ ಪ್ರಾಧಿಕಾರವು ತೀರ್ಮಾನ ಕೈಗೊಳ್ಳುವುದನ್ನು ಕಡ್ಡಾಯಗೊಳಿಸಿದೆ. ಈ ಕಾಲಮಿತಿಯನ್ನು ಸುಪ್ರೀಂ ಕೋರ್ಟ್ ಕೂಡ 2022ರ ತನ್ನ ತೀರ್ಪಿನಲ್ಲಿ ಎತ್ತಿಹಿಡಿದಿದೆ. ಆದರೂ, ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೋರಿ ತನಿಖಾ ಸಂಸ್ಥೆಗಳು ಸಲ್ಲಿಸುವ ಪ್ರಸ್ತಾವಗಳನ್ನು ದೀರ್ಘಕಾಲ ಬಾಕಿ ಇರಿಸಿಕೊಂಡು ಸತಾಯಿಸುವುದು ನಿರಂತರವಾಗಿ ನಡೆಯುತ್ತಲೇ ಇದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವುದೇ ಪಕ್ಷ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದರೂ ಈ ವಿಚಾರದಲ್ಲಿ ಭಿನ್ನವಾಗಿಯೇನೂ ವರ್ತಿಸಿಲ್ಲ.

ಚುನಾವಣೆ ಬಂದಾಗಲೆಲ್ಲ ಸಾರ್ವಜನಿಕ ವೇದಿಕೆಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಅಬ್ಬರಿಸುವ ರಾಜಕೀಯ ಪಕ್ಷಗಳ ನಾಯಕರು, ಅಧಿಕಾರ ಸಿಕ್ಕಾಗ ಆರೋಪಿಗಳ ಪ್ರಭಾವಕ್ಕೆ ಮಣಿದುಬಿಡುತ್ತಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 329 ಪ್ರಕರಣಗಳಲ್ಲಿ ಒಪ್ಪಿಗೆ ನೀಡಿದ್ದರೂ ಶೇ 36.19ರಷ್ಟು ಪ್ರಸ್ತಾವಗಳನ್ನು ಬಾಕಿ ಉಳಿಸಿಕೊಂಡಿರುವುದು ಒಪ್ಪತಕ್ಕ ನಡೆಯಲ್ಲ. ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾದವರನ್ನು ಕಾನೂನು ಕ್ರಮದ ವ್ಯಾಪ್ತಿಗೆ ತಂದಾಗ ಮಾತ್ರ ಈ ಪಿಡುಗಿಗೆ ಕಡಿವಾಣ ಹಾಕಲು ಸಾಧ್ಯ. ಆದರೆ, ಆರೋಪಪಟ್ಟಿ ಸಲ್ಲಿಸಲು ಕಾಲಮಿತಿಯಲ್ಲಿ ಅನುಮತಿ ನೀಡದೇ ಇದ್ದರೆ ತನಿಖಾ ಸಂಸ್ಥೆಗಳಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಆಗುವುದಿಲ್ಲ. ಆರೋಪಪಟ್ಟಿ ಸಲ್ಲಿಕೆಗೆ ಅನುಮತಿ ಕೋರುವ ಪ್ರಸ್ತಾವಗಳಿಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವಲ್ಲಿ ವಿಳಂಬ ಮಾಡುವುದು ಕೂಡ ಭ್ರಷ್ಟರನ್ನು ರಕ್ಷಿಸುವ ಕೆಲಸದಂತೆಯೇ ಕಾಣುತ್ತದೆ. ಈ ವಿಷಯದಲ್ಲಿ ಸಕ್ಷಮ ಪ್ರಾಧಿಕಾರಗಳನ್ನೇ ಹೊಣೆ ಮಾಡಬೇಕಿದೆ. ವಿಳಂಬ ಧೋರಣೆ ಅನುಸರಿಸುವ ಮೂಲಕ ಭ್ರಷ್ಟಾಚಾರದ ಆರೋಪಿಗಳ ರಕ್ಷಣೆಗೆ ನಿಲ್ಲುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ದಿಟ್ಟ ಹೆಜ್ಜೆಯನ್ನು ರಾಜ್ಯ ಸರ್ಕಾರ ಇಡಬೇಕು. ಭ್ರಷ್ಟಾಚಾರ ಪ್ರಕರಣಗಳ ಆರೋಪಿಗಳನ್ನು ಕಾನೂನು ಕ್ರಮಕ್ಕೆ ಒಳಪಡಿಸುವ ವಿಷಯದಲ್ಲಿ ಕಿಂಚಿತ್ತೂ ರಾಜಿ ಇಲ್ಲ ಎಂಬ ನಿಲುವು ರಾಜ್ಯ ಸರ್ಕಾರದ್ದಾಗಿರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.