ಕೋವಿಡ್–19 ಕಾರಣದಿಂದ ಶೈಕ್ಷಣಿಕ ವರ್ಷದ ವೇಳಾಪಟ್ಟಿ ಏರುಪೇರಾಗಿದೆ. ಆರೇಳು ತಿಂಗಳ ಸುದೀರ್ಘ ಬಿಡುವಿನ ನಂತರ ಕಾಲೇಜುಗಳು ಆರಂಭವಾಗಿವೆ. ವರದಿಯಾಗುತ್ತಿರುವ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ತರಗತಿಗಳಿಗೆ ಬಹುಪಾಲು ವಿದ್ಯಾರ್ಥಿಗಳು ಖುದ್ದು ಹಾಜರಾಗುತ್ತಿದ್ದಾರೆ. ಆದರೆ, ಸರ್ಕಾರಿ ಕಾಲೇಜುಗಳಲ್ಲಿ ಬೋಧನೆಯು ಸಹಜ ಲಯ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣ– ಉಪನ್ಯಾಸಕರ ಕೊರತೆ. ಕಾಲೇಜುಗಳಲ್ಲಿನ ಕಾರ್ಯಭಾರಕ್ಕೆ ತಕ್ಕಂತೆ ಬೋಧಕರನ್ನು ಕಾಲಕಾಲಕ್ಕೆ ನೇಮಿಸಿಕೊಳ್ಳುವುದು ಅಗತ್ಯ ಎಂಬುದನ್ನು ಸರ್ಕಾರ ಮರೆತು ಎಷ್ಟೋ ವರ್ಷಗಳಾಗಿದೆ. ದೈನಂದಿನ ಪಾಠ ಬೋಧನೆಗೆ ಹೆಚ್ಚಿನ ಕಾಲೇಜುಗಳು ಅತಿಥಿ ಉಪನ್ಯಾಸಕ ರನ್ನೇ ಅವಲಂಬಿಸಿವೆ. ಅವರ ಸೇವೆ ಇಲ್ಲದೇ ಹೋದರೆ ಪಾಠ–ಕಲಿಕೆಗೆ ಗ್ರಹಣ ಬಡಿದಂತೆಯೇ ಸರಿ. ಕೊರೊನಾ ಕಾರಣದಿಂದ ಕಾಲೇಜುಗಳ ಬಾಗಿಲು ಬಂದ್ ಆಗಿದ್ದರಿಂದ ಅತಿಥಿ ಉಪನ್ಯಾಸಕರ ಮರುನೇಮಕ ಆಗಿರಲಿಲ್ಲ. ಹತ್ತು–ಹದಿನೈದು ವರ್ಷಗಳಿಂದ ಉಪನ್ಯಾಸಕರಾಗಿ ಪಾಠ ಮಾಡುತ್ತಿದ್ದವರು ತರಕಾರಿ ಮಾರಿ, ಕೂಲಿ ಕೆಲಸ ಮಾಡಿ ಹೊಟ್ಟೆ ಹೊರೆದುಕೊಳ್ಳಬೇಕಾದ ಸ್ಥಿತಿ ಎದುರಾಗಿತ್ತು.ಅತಿಥಿ ಉಪನ್ಯಾಸಕರಿಗೆ ಮೊದಲೇ ವರ್ಷದಲ್ಲಿ ಮೂರು ತಿಂಗಳು ಸಂಬಳ ಸಿಗುತ್ತಿರಲಿಲ್ಲ. ಉಳಿದ ತಿಂಗಳುಗಳ ಸಂಬಳ ಕಂತಿನಲ್ಲಿ ವರ್ಷದಲ್ಲಿ ಎರಡು ಸಲವೋ ಮೂರು ಸಲವೋ ಸಿಗುತ್ತಿತ್ತು. ಅವರ ಬವಣೆಯನ್ನು ಕೋವಿಡ್ ಮತ್ತಷ್ಟು ಹೆಚ್ಚಿಸಿತು. ನಾಲ್ಕೈದು ತಿಂಗಳು ಆನ್‍ಲೈನ್ ತರಗತಿಗಳೇ ಗತಿ ಎಂಬಂತಾಯಿತು. ಆದರೆ, ಅವು ಪೂರ್ಣಪ್ರಮಾಣದಲ್ಲಿ ನಡೆಯಲಿಲ್ಲ. ಈಗ ತರಗತಿಗಳಿಗೆ ವಿದ್ಯಾರ್ಥಿಗಳು ಉತ್ಸಾಹದಿಂದ ಹಾಜರಾಗುತ್ತಿದ್ದಾರೆ. ಆದರೆ, ಹಿಂದಿನ ವರ್ಷ ಕರ್ತವ್ಯ ನಿರ್ವಹಿಸಿದ್ದ ಅತಿಥಿ ಉಪನ್ಯಾಸಕರಲ್ಲಿ ಅರ್ಧದಷ್ಟು ಮಂದಿಯ ಸೇವೆ ಮಾತ್ರ ಮುಂದುವರಿಸುವಂತೆ ಜನವರಿಯಲ್ಲಿ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದಾಗಿ, ಬೋಧನೆಯನ್ನೇ ಅವಲಂಬಿಸಿರುವ ಅತಿಥಿ ಉಪನ್ಯಾಸಕರಿಗೆ ಆಗಿರುವ ತೊಂದರೆಗಿಂತ ಹೆಚ್ಚು ತೊಂದರೆಗೆ ಒಳಗಾದವರು ವಿದ್ಯಾರ್ಥಿಗಳು. ಬೋಧಕರೇ ಇಲ್ಲದಿದ್ದರೆ ಕಾಲೇಜುಗಳಲ್ಲಿ ಪಾಠ–ಕಲಿಕೆ ಸುಗಮವಾಗಿ ಸಾಗುವುದೆಂತು?

ಕಾಲೇಜುಗಳು ಆರಂಭವಾದರೂ ಉಪನ್ಯಾಸಕರ ಕೊರತೆಯಿಂದ ಬೋಧನೆ–ಕಲಿಕೆಗೆ ಅಡೆತಡೆ ಉಂಟಾಗಿರುವುದರ ಕುರಿತು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿವೆ. ವಿಧಾನ ಪರಿಷತ್ತಿನಲ್ಲಿಯೂ ಈ ವಿಷಯ ಪ್ರಸ್ತಾಪವಾಗಿದೆ. ‘ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2019–20ರಲ್ಲಿ 14,183 ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದರು. ಅಷ್ಟೂ ಜನರ ಸೇವೆಯನ್ನು ಪ್ರಸಕ್ತ ಸಾಲಿನಲ್ಲೂ ಮುಂದುವರಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಇದು, ಆದ್ಯತೆಯ ಮೇರೆಗೆ ಆಗಬೇಕಿರುವ ಕೆಲಸ. ಏಕೆಂದರೆ, ಉಳಿದಿರುವ ಅವಧಿ ಅತ್ಯಲ್ಪ. ಅಸ್ತವ್ಯಸ್ತಗೊಂಡಿರುವ ಶೈಕ್ಷಣಿಕ ಚಟುವಟಿಕೆಗಳನ್ನು ಪುನಃ ಹಳಿಗೆ ತರುವ ಕೆಲಸ ಬಿರುಸು ಪಡೆಯಬೇಕಾಗಿದೆ. ಅದಕ್ಕೆ ಬೇಕಾದ ಎಲ್ಲ ಸಹಕಾರವನ್ನು ಹಿಂದೆಮುಂದೆ ನೋಡದೆ ಸರ್ಕಾರ ಒದಗಿಸಬೇಕು.ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಶಿಕ್ಷಣ ಪಡೆಯುತ್ತಿರುವವರಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ಹೆಣ್ಣುಮಕ್ಕಳು. ಅವರಲ್ಲಿ ಬಹುತೇಕರು ಗ್ರಾಮೀಣ ಪ್ರದೇಶಗಳಿಗೆ ಸೇರಿದವರು. ದುರ್ಬಲ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳೇ ಅಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಓದಲು ಬರುತ್ತಾರೆ. ಈ ಕಾಲೇಜುಗಳನ್ನು ಸಮರ್ಪಕವಾಗಿ ನಿರ್ವಹಿಸದೇ ಇರುವುದು ಈ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣವನ್ನು ನಿರಾಕರಿಸುವುದಕ್ಕೆ ಸಮ. ಅಂತೆಯೇ ಅನೇಕ ವರ್ಷಗಳಿಂದ ಕಡಿಮೆ ಸಂಬಳಕ್ಕೆ ಸೇವೆ ಸಲ್ಲಿಸುತ್ತಿರುವಅತಿಥಿ ಉಪನ್ಯಾಸಕ ಸಮೂಹವು ಅನಾದರಕ್ಕೆ ಒಳಗಾಗಿದೆ. ದುಡಿಮೆ ಅಧಿಕ. ಸಂಬಳ ಮಾತ್ರ ಕನಿಷ್ಠ. ಉದ್ಯೋಗಕ್ಕೆ ಭದ್ರತೆ ಇಲ್ಲ. ಅನುಭವಕ್ಕೆ ಕಿಮ್ಮತ್ತು ಇಲ್ಲ. ಒಂದು ರೀತಿಯಲ್ಲಿ ಇದ್ದೂ ಇಲ್ಲದಂತಹ ಅತಂತ್ರ ಸ್ಥಿತಿ.ಇವರ ಬೇಡಿಕೆಗಳನ್ನೂ ಸರ್ಕಾರ ಸಹಾನು ಭೂತಿಯಿಂದ ಪರಿಶೀಲಿಸಬೇಕು. ಬೋಧಕ ಹುದ್ದೆಗಳನ್ನು ಅಗತ್ಯಾನುಸಾರ ಕಾಲಕಾಲಕ್ಕೆ ಭರ್ತಿ ಮಾಡಿದರೆ ‘ಅತಿಥಿ’ ಸೇವೆಯ ಅಗತ್ಯವೇ ಬೀಳುವುದಿಲ್ಲ. ಸರ್ಕಾರ ಈ ದಿಸೆಯಲ್ಲಿ ದೃಢ ಸಂಕಲ್ಪ ಮಾಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.