ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ: ಮುಡಾ ನಿವೇಶನ ಹಗರಣ– ನಿಷ್ಪಕ್ಷಪಾತ ತನಿಖೆ ಅಗತ್ಯ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರ ರೂಪದಲ್ಲಿ ನಿವೇಶನ ಹಂಚಿಕೆ ಮಾಡಿರುವಲ್ಲಿ ದೊಡ್ಡ ಮಟ್ಟದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ
Published 12 ಜುಲೈ 2024, 2:52 IST
Last Updated 12 ಜುಲೈ 2024, 2:52 IST
ಅಕ್ಷರ ಗಾತ್ರ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರ ರೂಪದಲ್ಲಿ ನಿವೇಶನ ಹಂಚಿಕೆ ಮಾಡಿರುವಲ್ಲಿ ದೊಡ್ಡ ಮಟ್ಟದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪವು ಹೆಚ್ಚು ಸದ್ದು ಮಾಡುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಭೂಪರಿಹಾರ ರೂಪದಲ್ಲಿ ಹಂಚಿಕೆ ಮಾಡಬೇಕಾಗಿದ್ದ ಎರಡು ನಿವೇಶನಗಳ ಬದಲು 14 ನಿವೇಶನಗಳನ್ನು ನೀಡಲಾಗಿದೆ ಎಂಬುದು ವಿರೋಧ ಪಕ್ಷಗಳ ಆರೋಪ. ಮಲ್ಲಿಕಾರ್ಜುನ ಸ್ವಾಮಿ ಅವರು ಖರೀದಿಸಿದ್ದ 3 ಎಕರೆ 16 ಗುಂಟೆ ಜಮೀನನ್ನು ತಮ್ಮ ತಂಗಿ ಪಾರ್ವತಿಯವರಿಗೆ ದಾನ ರೂಪದಲ್ಲಿ ನೀಡಿದ್ದರು. ‘ಮಲ್ಲಿಕಾರ್ಜುನ ಸ್ವಾಮಿ ಖರೀದಿಸುವ ಮೊದಲೇ ಈ ಜಮೀನು ಮುಡಾ ಸ್ವಾಧೀನದಲ್ಲಿತ್ತು.

ಕಂದಾಯ ದಾಖಲೆಗಳಲ್ಲಿ ಮುಡಾ ಹೆಸರಿನಲ್ಲಿದ್ದ ಜಮೀನನ್ನು ಖರೀದಿ ಮಾಡಲು ಹೇಗೆ ಸಾಧ್ಯ’ ಎಂಬುದು ಬಿಜೆಪಿ ವಾದ. ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ‘ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಈ ಹಂಚಿಕೆ ಆಗಿದೆ. ಆ ಪಕ್ಷದವರೇ ಮುಡಾ ಸದಸ್ಯರಾಗಿದ್ದರು. ಕಾನೂನು ಪ್ರಕಾರವೇ ಹಂಚಿಕೆ ನಡೆದಿದೆ. ನಿವೇಶನ ವಾಪಸ್ ಕೊಡಲು ತಾವು ತಯಾರಿದ್ದು ಜಮೀನಿನ ಮೌಲ್ಯ ಹಾಗೂ ಬಡ್ಡಿ ಸೇರಿ ₹62 ಕೋಟಿ ಕೊಡಲಿ’ ಎಂಬ ಸವಾಲನ್ನೂ ಹಾಕಿದ್ದಾರೆ.

ನಿವೇಶನ ಹಂಚಿಕೆಯಂತಹ ಪ್ರಕರಣಗಳಲ್ಲಿ ಕಾನೂನಿನ ಪರಿಮಿತಿಯ ಆಚೆಗೆ ನುಸುಳುವ ಚಾಳಿ ಅನೂಚಾನವಾಗಿ ನಡೆಯುತ್ತಲೇ ಇದೆ. ನಗರ ಪ್ರದೇಶಗಳು ವಿಸ್ತರಣೆಗೊಳ್ಳುತ್ತಾ ಹೋದಂತೆ ನಿವಾಸಿಗಳಿಗೆ ಸೂರು ಕಟ್ಟಿಕೊಳ್ಳಲು ನಿವೇಶನ ಕಲ್ಪಿಸಲು ಪ್ರಾಧಿಕಾರಗಳನ್ನು ರಚಿಸಲಾಯಿತು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು (ಬಿಡಿಎ) ಬಿಟ್ಟು ಉಳಿದ 30ಕ್ಕೂ ಹೆಚ್ಚು ಪ್ರಾಧಿಕಾರಗಳ ನಡಾವಳಿ, ಭೂಸ್ವಾಧೀನ, ನಿವೇಶನ ಅಭಿವೃದ್ಧಿ ಮತ್ತು ಹಂಚಿಕೆಗೆ ಸಂಬಂಧಿಸಿ ನಿರ್ದಿಷ್ಟ ನಿಯಮಗಳಿವೆ. ನಗರ ಪ್ರದೇಶಗಳು ಬೇಕಾಬಿಟ್ಟಿ ವಿಸ್ತರಣೆಯಾಗುವ ಬದಲು ಯೋಜಿತ ಮತ್ತು ಸಕಲ ಸೌಲಭ್ಯವಿರುವ ಬಡಾವಣೆಗಳನ್ನು ನಿರ್ಮಿಸುವುದು ಪ್ರಾಧಿಕಾರದ ಹೊಣೆ.

ಉದ್ದೇಶಿತ ಆಶಯ ಮರೆತ ಪ್ರಾಧಿಕಾರಗಳು ನಗರ ಯೋಜನೆಯ ಬಗ್ಗೆ ಕಾಳಜಿ ವಹಿಸದೇ ಭೂವ್ಯವಹಾರ ಹಾಗೂ ಭೂದಂಧೆಗೆ ಇಳಿದಿದ್ದರಿಂದಾಗಿ ಅವು ಅಕ್ರಮಗಳ ಕೂಪಗಳಾಗಿವೆ. ರಿಯಲ್ ಎಸ್ಟೇಟ್ ಸಂಸ್ಥೆಗಳಿಗೂ ಪ್ರಾಧಿಕಾರಗಳಿಗೂ ವ್ಯತ್ಯಾಸವೇ ಕಾಣಿಸದಂತಾಗಿದೆ. ಸರ್ಕಾರದ ಉಸ್ತುವಾರಿಯಲ್ಲಿರುವ ಪ್ರಾಧಿಕಾರಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ಆಯಾ ಕಾಲದ ಆಡಳಿತ ಪಕ್ಷಗಳೇ ನೇಮಕ ಮಾಡುತ್ತವೆ. ಶಾಸಕರೂ ಸದಸ್ಯರಾಗಿರುತ್ತಾರೆ.

ಕಾಂಗ್ರೆಸ್, ಬಿಜೆಪಿ ಅಥವಾ ಜೆಡಿಎಸ್ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಪ್ರಾಧಿಕಾರಗಳ ಅಧ್ಯಕ್ಷ ಅಥವಾ ಸರ್ಕಾರಿ ಅಧಿಕಾರಿಯಾಗಿರುವ ಆಯುಕ್ತರು, ಆಡಳಿತ ಪಕ್ಷದ ನಾಯಕರ ಮರ್ಜಿಗೆ ತಕ್ಕಂತೆ ಕೆಲಸ ಮಾಡುತ್ತಾ ಬಂದಿರುವುದು ರಹಸ್ಯವೇನಲ್ಲ. ಆಡಳಿತ ಪಕ್ಷದಲ್ಲಿದ್ದವರು ತಪ್ಪು ಮಾಡಿದಾಗ ವಿರೋಧ ಪಕ್ಷದಲ್ಲಿದ್ದವರು ಅಬ್ಬರಿಸಿ ಹೋರಾಟ ಮಾಡುತ್ತಾರೆ; ವಿರೋಧ ಪಕ್ಷದಲ್ಲಿದ್ದವರು, ಮುಂದೊಂದು ದಿನ ಚುನಾವಣೆಯಲ್ಲಿ ಗೆದ್ದು ಆಡಳಿತದ ಚುಕ್ಕಾಣಿ ಹಿಡಿದಾಗ ಮತ್ತೆ ಅದೇ ತಪ್ಪನ್ನು ಮಾಡುತ್ತಾರೆ. 

ಬೆಂಗಳೂರಿನ ಅರ್ಕಾವತಿ ಬಡಾವಣೆಯಲ್ಲಿ ರೀ–ಡೂ ಹೆಸರಿನಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದ ಬಿಜೆಪಿ, ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, ನ್ಯಾಯಮೂರ್ತಿ ಕೆಂಪಣ್ಣ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಿದ್ದರು.

‘ಆಪರೇಷನ್ ಕಮಲ’ ನಡೆಸಿದ ಬಿಜೆಪಿ, ರಾಜ್ಯದಲ್ಲಿ ಅಧಿಕಾರ ಹಿಡಿಯಿತು. ಕಾಂಗ್ರೆಸ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ರೀ–ಡೂ ಫಲಾನುಭವಿಗಳಾಗಿದ್ದವರು ‘ಆಪರೇಷನ್ ಕಮಲ’ದ ಫಲವುಂಡು, ಬಿಜೆಪಿ ಸೇರಿ ಸಚಿವರೂ ಆಗಿಬಿಟ್ಟರು. ಹೀಗೆ, ಹಗರಣದ ಪಾಲುದಾರರು ಎನ್ನಲಾದವರು ಎಲ್ಲೆಡೆಯೂ ಸಲ್ಲುವವರಾಗಿರುತ್ತಾರೆ.

ಏಕೆಂದರೆ, ಈ ಮಾದರಿಯ ಹಗರಣಗಳಲ್ಲಿ ಚುನಾಯಿತ ಪ್ರತಿನಿಧಿಗಳು, ರಾಜಕಾರಣಿಗಳು, ಅವರ ಹಿಂಬಾಲಕರು, ಅಧಿಕಾರಿಗಳು, ಮಧ್ಯವರ್ತಿ ದಲ್ಲಾಳಿಗಳಿಗಳಿಗಷ್ಟೇ ಲಾಭವಾಗುತ್ತಿದೆ. ನಿವೇಶನ ಪಡೆಯಲು ಕೂಡಿಟ್ಟ ದುಡ್ಡನ್ನು ಪ್ರಾಧಿಕಾರಕ್ಕೆ ಕಟ್ಟಿದವರು ದಶಕಗಳಿಂದ ಕಾಯುತ್ತಲೇ ಇದ್ದಾರೆ. ಬಹುತೇಕರಿಗೆ ನಿವೇಶನವೇ ಸಿಕ್ಕಿಲ್ಲ.

ಬಡಾವಣೆ ನಿರ್ಮಾಣಕ್ಕಾಗಿ ಭೂಸ್ವಾಧೀನ, ಪರಿಹಾರ, ಡಿನೋಟಿಫೈ, ನಿರ್ಮಾಣಗೊಂಡ ಬಳಿಕ ನಿವೇಶನ ಹಾಗೂ ಬದಲಿ ನಿವೇಶನ ಹಂಚಿಕೆಯಲ್ಲಿ ಅಕ್ರಮಗಳು ನಡೆಯುತ್ತಲೇ ಇವೆ. ಉಳ್ಳವರ ಹೊಟ್ಟೆಯನ್ನು ಮತ್ತಷ್ಟು ತುಂಬಿಸುವುದಕ್ಕೆ, ರಿಯಲ್ ಎಸ್ಟೇಟ್‌ ವ್ಯವಹಾರ ನಡೆಸುವವರಿಗೆ ಲಾಭ ಮಾಡಿಕೊಡುವುದಕ್ಕೆ ಪ್ರಾಧಿಕಾರಗಳ ಕಾರ್ಯವ್ಯಾಪ್ತಿ ಸೀಮಿತವಾದಂತಿದೆ. ಈಗ ಮುಖ್ಯಮಂತ್ರಿ ಕುಟುಂಬದವರ ವಿರುದ್ಧವೇ ಆರೋಪ ಎದುರಾಗಿದೆ.

ಅಳ್ಳಕವಾದ ನಿಯಮಗಳು ಹಾಗೂ ರಾಜಕೀಯ ಕೂಗಾಟದ ಆಚೆಗೆ ಸತ್ಯ ಇರುತ್ತದೆ. ಬಿಡಿಎ ಸೇರಿದಂತೆ ಎಲ್ಲ ಪ್ರಾಧಿಕಾರಗಳಲ್ಲಿ ಕಳೆದ 25 ವರ್ಷಗಳಲ್ಲಿ ನಡೆದಿರಬಹುದಾದ ಅಕ್ರಮ, ಹಗರಣಗಳ ಬಗ್ಗೆ ನ್ಯಾಯಾಂಗ ಅಥವಾ ಲೋಕಾಯುಕ್ತ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸುವ ಅವಕಾಶ ಸರ್ಕಾರಕ್ಕೆ ಸಿಕ್ಕಿದೆ. ಕಾಲಮಿತಿಯಲ್ಲಿ ತನಿಖೆಯನ್ನು ಪೂರ್ಣಗೊಳಿಸುವ ಜತೆಗೆ ಭೂಸ್ವಾಧೀನ, ಪರಿಹಾರ ನಿಗದಿ, ನಿಜವಾದ ಭೂಮಾಲೀಕರಿಗೆ ಪರಿಹಾರ ಸಿಗುವಂತೆ ನೋಡಿಕೊಳ್ಳಲು, ನಿವೇಶನ ಹಂಚಿಕೆಯಲ್ಲಿ ಪಾರದರ್ಶಕತೆ ತರಲು ಈಗಲಾದರೂ ಕ್ರಮ ವಹಿಸಬೇಕಿದೆ.

ಮುಡಾ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು ಸರಣಿಯೋಪಾದಿಯಲ್ಲಿ ಹೊರಬರುತ್ತಿವೆ. ಮುಖ್ಯಮಂತ್ರಿ ಕುಟುಂಬದ ವಿರುದ್ಧ ಬಂದಿರುವ ಆರೋಪವೂ ಸೇರಿದಂತೆ ಮುಡಾಗೆ ಸಂಬಂಧಿಸಿದ ಎಲ್ಲ ದೂರುಗಳ ಬಗ್ಗೆಯೂ ನಿಷ್ಪಕ್ಷಪಾತ ತನಿಖೆ ಆಗಬೇಕಿದೆ. ಸತ್ಯ ಹೊರಬರಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT