ಹಿಂದಿ ಇಡೀ ದೇಶದ ಭಾಷೆ ಆಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೀಡಿರುವ ಹೇಳಿಕೆ ಹೊಸ ವಿವಾದವೊಂದನ್ನು ಹುಟ್ಟುಹಾಕಿದೆ. ‘ಹಿಂದಿ ದಿನ’ದ ಪ್ರಯುಕ್ತ ಟ್ವಿಟರ್ನಲ್ಲಿ ಅವರು ವ್ಯಕ್ತಪಡಿಸಿರುವ ಈ ಅಭಿಪ್ರಾಯಕ್ಕೆ ದಕ್ಷಿಣ ಮತ್ತು ಈಶಾನ್ಯ ಭಾರತದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಭಾಷೆಯಾಗಿ ಗುರುತಿಸಿಕೊಳ್ಳಲು ಒಂದು ಭಾಷೆಯ ಅಗತ್ಯ ಇದೆ, ಅತಿಹೆಚ್ಚು ಜನ ಮಾತನಾಡುವ ಹಿಂದಿ ಮಾತ್ರ ಇಡೀ ದೇಶವನ್ನು ಒಂದಾಗಿ ಬೆಸೆಯುವ ಸಾಮರ್ಥ್ಯ ಹೊಂದಿದೆ ಎಂಬ ಅರ್ಥದ ಅವರ ಹೇಳಿಕೆಯು ಹಿಂದಿ ಹೇರಿಕೆಯ ಗುಮ್ಮನನ್ನು ಮತ್ತೆ ಮುನ್ನೆಲೆಗೆ ತಂದಿದೆ.ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಈಶಾನ್ಯದ ರಾಜ್ಯಗಳಲ್ಲಿ ಹಿಂದಿ ಹೇರಿಕೆಯ ಹುನ್ನಾರದ ವಿರುದ್ಧ ಜನರು ಸ್ವಯಂಪ್ರೇರಿತರಾಗಿ ಪ್ರತಿಭಟನೆಗಳನ್ನು ದಾಖಲಿಸಿದ್ದಾರೆ. ತಮಿಳು- ಇಂಗ್ಲಿಷ್ ದ್ವಿಭಾಷಾ ಸೂತ್ರವನ್ನು ಅನುಸರಿಸುತ್ತಿರುವ ತಮಿಳುನಾಡು ಈ ಪ್ರತಿಭಟನೆಯ ಮುಂಚೂಣಿಯಲ್ಲಿದ್ದು, ‘ಅಮಿತ್ ಶಾ ಅವರ ಹೇಳಿಕೆಯು ರಾಷ್ಟ್ರದ ಭಾವೈಕ್ಯವನ್ನು ಕದಡುವಂತಹುದು. ಈ ಬಗ್ಗೆ ಪ್ರಧಾನಿಯವರು ಸ್ಪಷ್ಟೀಕರಣ ನೀಡದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಅಲ್ಲಿನ ವಿರೋಧ ಪಕ್ಷದ ನಾಯಕ, ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಎಚ್ಚರಿಕೆ ನೀಡಿದ್ದಾರೆ. ‘ತ್ರಿಭಾಷಾ ಸೂತ್ರವನ್ನು ದೇಶವು ಬಹಳ ಹಿಂದೆಯೇ ಒಪ್ಪಿಕೊಂಡಿದೆ. ಈಗ ಅನಗತ್ಯವಾಗಿ ವಿವಾದ ಸೃಷ್ಟಿಸುವುದು ಬೇಡ’ ಎಂದು ಕಾಂಗ್ರೆಸ್ ಹೇಳಿದೆ. ಈಶಾನ್ಯ ಭಾಗ ಸೇರಿದಂತೆ ದೇಶದ ಎಲ್ಲೆಡೆ ಹಿಂದಿ ಕಲಿಕೆಯನ್ನು ವಿಸ್ತರಿಸಲಾಗುವುದು ಎಂದು ಶಾ ಹೇಳಿದ್ದಾರೆ. ಭಾಷೆಯಂತಹ ಭಾವನಾತ್ಮಕ ವಿಚಾರದಲ್ಲಿ ದೇಶದ ಗೃಹ ಸಚಿವರಿಂದ ಪ್ರಚೋದನಾತ್ಮಕ ಹೇಳಿಕೆಯು ಅನಪೇಕ್ಷಣೀಯ.

ಹಿಂದಿ ಭಾಷೆಯನ್ನು ಹೇರುವ ಪ್ರಯತ್ನಕ್ಕೆ ಸುದೀರ್ಘ ಇತಿಹಾಸವೇ ಇದೆ. ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತ ಇದ್ದಾಗಲೂ ಇಂತಹ ಪ್ರಯತ್ನಗಳು ನಡೆದಿದ್ದವು. ಈಗ ಬಿಜೆಪಿ ಸರದಿ. ಇತ್ತೀಚಿನ ಸಾರ್ವತ್ರಿಕ ಚುನಾವಣೆಯಲ್ಲಿ ಕೇಂದ್ರದಲ್ಲಿ ಪೂರ್ಣ ಬಹುಮತ ಪಡೆದ ಬಳಿಕ ಬಿಜೆಪಿಯು ಹಿಂದಿ ಹೇರಿಕೆಯ ಕಾರ್ಯಸೂಚಿಯನ್ನು ಇನ್ನಷ್ಟು ತೀವ್ರಗೊಳಿಸಿದಂತೆ ಕಾಣಿಸುತ್ತಿದೆ. ಕೇಂದ್ರ ಸಚಿವ ರಾಜನಾಥ್ ಸಿಂಗ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮುಂತಾದವರು ಹಿಂದಿ ಭಾಷೆಯ ಪರ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ‘ಸರ್ಕಾರಿ ಅಧಿಕಾರಿಗಳು ತಮ್ಮ ಕಡತಗಳಲ್ಲಿ ಹಿಂದಿಯಲ್ಲೇ ಸಹಿ ಮಾಡಬೇಕು’ ಎಂದು2015ರ ಸೆಪ್ಟೆಂಬರ್ನಲ್ಲಿ ರಾಜನಾಥ್ ಸಿಂಗ್ ಸೂಚಿಸಿದ್ದರು. ‘ಹಿಂದಿ ಇಲ್ಲದಿದ್ದರೆ ಭಾರತ ಅಭಿವೃದ್ಧಿ ಹೊಂದುವುದಿಲ್ಲ. ಇಂಗ್ಲಿಷ್, ಬ್ರಿಟಿಷರು ಬಿಟ್ಟು ಹೋಗಿರುವ ರೋಗ’ ಎಂದು ವೆಂಕಯ್ಯ ನಾಯ್ಡು ಹೇಳಿದ್ದರು. ಈ ವರ್ಷದ ಮೇ ತಿಂಗಳಲ್ಲಿ ಕೇಂದ್ರ ಸರ್ಕಾರವು ‘ರಾಷ್ಟ್ರೀಯ ಶಿಕ್ಷಣ ನೀತಿ-2019’ರ ಕರಡು ಪ್ರತಿಯನ್ನು ಪ್ರಕಟಿಸಿದಾಗ, ಹಿಂದಿಯೇತರ ರಾಜ್ಯಗಳ ವಿದ್ಯಾರ್ಥಿಗಳಿಗೆ ಹಿಂದಿ ಕಲಿಕೆ ಕಡ್ಡಾಯ ಮಾಡುವ ತ್ರಿಭಾಷಾ ಸೂತ್ರವನ್ನು ಅದರಲ್ಲಿ ಅಳವಡಿಸಲಾಗಿತ್ತು. ಆದರೆ, ಈ ಕರಡು ಪ್ರತಿಗೆ ಹಿಂದಿಯೇತರ ರಾಜ್ಯಗಳಿಂದ ತೀವ್ರ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮೂರೇ ದಿನಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಹಿಂದಿ ಕಡ್ಡಾಯ ನಿಯಮವನ್ನು ರದ್ದುಪಡಿಸಿತು. ಹಿಂದಿಯೇತರ ರಾಜ್ಯಗಳ ಮೇಲೆ ಹೀಗೆ ಹಿಂದಿ ಭಾಷೆಯನ್ನು ಹೇರುವ ಪ್ರಯತ್ನವು ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತದೆ ಎನ್ನುವ ಆತಂಕದಲ್ಲಿ ಅರ್ಥವಿದೆ. ಪ್ರತಿ ಭಾಷೆಯೂ ಅದರದ್ದೇ ಆದ ಮಹತ್ವ ಹೊಂದಿದೆ. ಈ ಮಹತ್ವವನ್ನು ಅರಿತೇ ನಮ್ಮ ಪೂರ್ವಸೂರಿಗಳು ರಾಜ್ಯಗಳನ್ನು ಭಾಷೆಯ ಆಧಾರದಲ್ಲಿ ವಿಂಗಡಿಸಿದರು ಎನ್ನುವುದನ್ನು ಮರೆಯಬಾರದು. ಹಿಂದಿ ಮಾತೃಭಾಷೆ ಯಾಗಿರುವ ರಾಜ್ಯಗಳಲ್ಲಿ ಅದನ್ನು ಆಡಳಿತ ಭಾಷೆ ಮಾಡಿರುವಂತೆಯೇ ಹಿಂದಿಯೇತರ ರಾಜ್ಯಗಳಲ್ಲಿ ಅಲ್ಲಿನ ಭಾಷೆಗಳಲ್ಲೇಆಡಳಿತ ನಡೆಯಬೇಕು. ಕೇಂದ್ರ ಸರ್ಕಾರದ ಅಧೀನದ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಕೇಂದ್ರದ ನೇಮಕಾತಿ ಪರೀಕ್ಷೆಗಳಲ್ಲಿ ರಾಜ್ಯಭಾಷೆಗಳಿಗೆ ಅವಕಾಶ ಇರಬೇಕು. ಭಾಷೆಗೂ ದೇಶದ ಏಕತೆಗೂ ನಂಟು ಕಲ್ಪಿಸುವುದು ಅರ್ಥಹೀನ. ಒಂದು ಭಾಷೆಗೆ ಕಿರೀಟ ತೊಡಿಸುವುದು, ಮತ್ತೊಂದು ಭಾಷೆಯನ್ನು ಕಡೆಗಣಿಸುವುದು ಸರಿಯಲ್ಲ. ಹಲವು ಭಾಷೆಗಳು ಮತ್ತು ಸಂಸ್ಕೃತಿಗಳ ಸಂಗಮವಾಗಿರುವ ನಮ್ಮ ದೇಶವು ವೈವಿಧ್ಯದಲ್ಲೇ ಏಕತೆಯನ್ನು ರೂಪಿಸಿಕೊಂಡಿದೆ. ಭಾರತದ ಸೊಗಸು ಇರುವುದೇ ಈ ವೈವಿಧ್ಯದಲ್ಲಿ.ಕರ್ನಾಟಕದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಇಂಗ್ಲಿಷ್ ದಬ್ಬಾಳಿಕೆಯಿಂದ ಸೊರಗಿರುವ ಕನ್ನಡಕ್ಕೆ ಹಿಂದಿ ಹೇರಿಕೆ ಇನ್ನಷ್ಟು ಮಾರಕವಾಗುವುದರಲ್ಲಿ ಅನುಮಾನವಿಲ್ಲ. ಶಾ ಅವರ ಹಿಂದಿ ಕುರಿತಾದ ಈ ಹೇಳಿಕೆ, ಭಾಷಾಬಾಂಧವ್ಯದ ಜೇನುಗೂಡಿಗೆ ಕಲ್ಲು ಹೊಡೆಯುವ ಪ್ರಯತ್ನ ವಲ್ಲದೆ ಇನ್ನೇನೂ ಅಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.