ಗರ್ಭಿಣಿಯರನ್ನು ಅಕ್ರಮವಾಗಿ ಸ್ಕ್ಯಾನಿಂಗ್‌ಗೆ ಒಳಪಡಿಸಿ ಭ್ರೂಣಲಿಂಗ ಪತ್ತೆ ಮಾಡುವ ಜಾಲ ರಾಜ್ಯದಲ್ಲಿ ಸಕ್ರಿಯವಾಗಿರುವುದು ಆಘಾತಕಾರಿ ಸಂಗತಿ. ಲಿಂಗತಾರತಮ್ಯದ ವಿರುದ್ಧ ಎಷ್ಟೆಲ್ಲ ಜಾಗೃತಿ ಅಭಿಯಾನ ನಡೆದರೂ ಈ ವಿಷಯದಲ್ಲಿ ಸಮಾಜ ಇನ್ನೂ ಕುರುಡಾಗಿದೆ ಎನ್ನುವುದರ ದ್ಯೋತಕ ಇದು. ಮೊದಲು ಭ್ರೂಣಲಿಂಗ ಪತ್ತೆ ಮಾಡುವುದು, ಹೆಣ್ಣುಭ್ರೂಣ ಎಂದು ದೃಢಪಟ್ಟ ಬಳಿಕ ನಿರ್ದಯವಾಗಿ ಗರ್ಭಪಾತ ಮಾಡಿಸುವುದು ನಾಗರಿಕ ಸಮಾಜವೇ ನಾಚಿ, ತಲೆ ತಗ್ಗಿಸುವಂತಹ ಕೃತ್ಯ. ಇಂತಹ ಕೃತ್ಯದಲ್ಲಿ ಭಾಗಿಯಾಗುತ್ತಿರುವವರಿಗೆ ವೈದ್ಯಕೀಯ ತಂತ್ರಜ್ಞಾನವೇ ಆಯುಧವಾಗಿ ಸಿಕ್ಕಿರುವುದು ದುರದೃಷ್ಟಕರ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಭಾಗಗಳಲ್ಲೂ ಭ್ರೂಣಲಿಂಗ ಪತ್ತೆಯ ಹಾವಳಿ ಕಂಡುಬಂದಿರುವುದು ಈ ಜಾಲ ಎಷ್ಟು ಸಕ್ರಿಯವಾಗಿದೆ ಎನ್ನುವುದಕ್ಕೆ ನಿದರ್ಶನ. ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರಿನಲ್ಲಿ ಈ ಕೃತ್ಯದಲ್ಲಿ ತೊಡಗಿದ್ದ ಜಾಲವೊಂದು ಕಳೆದ ಮೂರು ವರ್ಷಗಳಲ್ಲಿ 650ಕ್ಕೂ ಅಧಿಕ ಭ್ರೂಣಲಿಂಗ ಪತ್ತೆ ಮಾಡಿರುವ ಸಂಗತಿ ತನಿಖೆಯಿಂದ ಬಯಲಾಗಿದೆ. ಅದರಲ್ಲಿ 200ಕ್ಕೂ ಅಧಿಕ ಹೆಣ್ಣುಭ್ರೂಣಗಳ ಹತ್ಯೆ ಆಗಿರುವುದಂತೂ ದಿಗಿಲುಗೊಳಿಸುವಂತಹ ವಿದ್ಯಮಾನ. ಮಂಡ್ಯ– ಪಾಂಡವಪುರ ರಸ್ತೆಯಲ್ಲಿದ್ದ ಆಲೆಮನೆಯೊಂದರಲ್ಲಿ ಸ್ಕ್ಯಾನಿಂಗ್ ಯಂತ್ರ ಇರಿಸಿ, ಅಲ್ಲಿಯೇ ಲಿಂಗ ಪತ್ತೆ ಮಾಡಿ, ಹೆಣ್ಣುಭ್ರೂಣವೆಂದುಗೊತ್ತಾಗುತ್ತಿದ್ದಂತೆ ಗರ್ಭಪಾತ ಮಾಡಿಸುತ್ತಿದ್ದ ಕೃತ್ಯದಲ್ಲಿ ತೊಡಗಿದವರು ಹೃದಯಹೀನರೇ ಸರಿ. ಸಾಮಾನ್ಯವಾಗಿ ಭ್ರೂಣಕ್ಕೆ 7–8 ವಾರಗಳು ತುಂಬಿದಾಗ ಲಿಂಗ ಪತ್ತೆ ಮಾಡಲು ಸಾಧ್ಯ. ಹೆಣ್ಣುಭ್ರೂಣ ಎಂದು ಗೊತ್ತಾಗಿ ಗರ್ಭಪಾತ ಮಾಡಿಸುವ ಪ್ರವೃತ್ತಿ ಈ ಸಂದರ್ಭದಲ್ಲೇ ಹೆಚ್ಚು. ಭ್ರೂಣಗಳಿಗೆ 10–12 ವಾರಗಳು ತುಂಬಿದಾಗ ಹೆಚ್ಚಿನ ವೈದ್ಯಕೀಯ ಗರ್ಭಪಾತ ಪ್ರಕರಣಗಳು ನಡೆಯುತ್ತಿರುವುದಕ್ಕೂ ಭ್ರೂಣಲಿಂಗ ಪತ್ತೆಗೂ ನೇರ ಸಂಬಂಧವಿದೆ ಎಂಬುದು ಸುಸ್ಪಷ್ಟ. ಭಾರತದಲ್ಲಿ ಭ್ರೂಣಕ್ಕೆ 24 ವಾರಗಳು ತುಂಬುವವರೆಗೂ ಗರ್ಭಪಾತ ಮಾಡಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಕಾನೂನು ಒದಗಿಸಿರುವ ಈ ಅವಕಾಶವು ವ್ಯಾಪಕವಾಗಿ ದುರ್ಬಳಕೆ ಆಗುತ್ತಿದೆ ಎಂಬ ವಾದಕ್ಕೆ ನಮ್ಮ ನಡುವೆ ನಡೆದಿರುವ ವಿದ್ಯಮಾನಗಳು ಪುರಾವೆಯಾಗಿವೆ.

ಸಮಾಜದಲ್ಲಿ ಹೆಚ್ಚು ಹೆಚ್ಚು ಜಾಗೃತಿ ಮೂಡಿದಂತೆ, ಸುಶಿಕ್ಷಿತ ಸಮುದಾಯದ ಪ್ರಮಾಣ ಹೆಚ್ಚುತ್ತಾ ಹೋದಂತೆ ಹೆಣ್ಣುಭ್ರೂಣ ಹತ್ಯೆಯಂತಹ ಪಿಡುಗು ನಿವಾರಣೆಯಾಗುತ್ತಾ ಹೋಗಬೇಕಿತ್ತು. ಆದರೆ, ರಾಜ್ಯದಲ್ಲಿ ನಡೆದಿರುವ ಬೆಳವಣಿಗೆಗಳು ತದ್ವಿರುದ್ಧವಾಗಿವೆ. ಇಷ್ಟಕ್ಕೂ ಹೆಣ್ಣುಮಗುವನ್ನು ಈ ಪರಿ ದ್ವೇಷಿಸಲು ಕಾರಣವೇನು? ಹಾಗೆ ಮಕ್ಕಳಲ್ಲಿ ತಾರತಮ್ಯ ಮಾಡುವಾಗ ನಾಚಿಕೆಯೇ ಆಗಲಾರದೇನು? ವಿಪರ್ಯಾಸದ ಸಂಗತಿ ಎಂದರೆ, ವಯಸ್ಸಾದ ಎಷ್ಟೋ ಮಹಿಳೆಯರೂ ಹೆಣ್ಣುಮಗುವನ್ನು ಬಯಸುವುದಿಲ್ಲ. ಹೆಣ್ಣುಮಕ್ಕಳನ್ನು ‘ಹೊರೆ’ ಎಂದು ಭಾವಿಸುವ ಮನಃಸ್ಥಿತಿಯೇ ಈ ಪ್ರವೃತ್ತಿಗೆ ಮೂಲ ಕಾರಣ. ಗಂಡುಮಕ್ಕಳ ಬಗ್ಗೆ ವಿಪರೀತ ಒಲವು ತೋರುವ ಪಕ್ಷಪಾತ ಧೋರಣೆಯು ತಲೆಮಾರುಗಳಿಂದಲೂ ಗಟ್ಟಿಯಾಗಿ ನೆಲೆಯೂರಿದೆ. ಸಮಾಜದಲ್ಲಿ ಬೇರೂರಿರುವ ಈ ಮನೋಭಾವದಿಂದಾಗಿ ಹೆಣ್ಣು–ಗಂಡಿನ ಲಿಂಗಾನುಪಾತದಲ್ಲೂ ಕುಸಿತವಾಗಿದೆ. 2011ರ ಜನಗಣತಿ ಪ್ರಕಾರ, ಪ್ರತಿ ಸಾವಿರ ಪುರುಷರಿಗೆ ಇರುವ ಮಹಿಳೆಯರ ಪ್ರಮಾಣ 918 ಮಾತ್ರ. ಲಿಂಗಾನುಪಾತ ಸಮ ಇದ್ದರಷ್ಟೇ ಅದು ಸ್ವಸ್ಥ ಸಮಾಜದ ಲಕ್ಷಣ. ಈ ಅನುಪಾತದಲ್ಲಿ ಏರುಪೇರು ಮಾಡುತ್ತಿರುವುದು ಸ್ವಯಂಕೃತ ಅಪರಾಧ. ಸುಧಾರಿತ ತಂತ್ರಜ್ಞಾನವು ಗ್ರಾಮಾಂತರ ಭಾಗಗಳಲ್ಲೂ ಸಿಗುವಂತಾಗಿರುವುದು, ಅದರ ದುರುಪಯೋಗ ಹೆಚ್ಚಿರುವುದು, ವರದಕ್ಷಿಣೆ ಪಿಡುಗು ಮತ್ತು ಮಗನನ್ನು ಅನ್ನದಾತನನ್ನಾಗಿ ನೋಡುವ ಪ್ರವೃತ್ತಿಯು ಹೆಣ್ಣುಭ್ರೂಣಕ್ಕೆ ಕಂಟಕವಾಗಿದೆ. ಭ್ರೂಣಲಿಂಗ ಪತ್ತೆಯು ‘ಗರ್ಭಧಾರಣೆಪೂರ್ವ ಮತ್ತು ಪ್ರಸವಪೂರ್ವ ಪತ್ತೆ ತಂತ್ರವಿಧಾನಗಳ (ಲಿಂಗ ಆಯ್ಕೆಯ ನಿಷೇಧ) ಅಧಿನಿಯಮ–1994’ರ ಪ್ರಕಾರ ಶಿಕ್ಷಾರ್ಹ ಅಪರಾಧ. ಹೀಗಿದ್ದೂ ಭ್ರೂಣಲಿಂಗ ಪತ್ತೆ ಮತ್ತು ಹೆಣ್ಣುಭ್ರೂಣ ಹತ್ಯೆ ಪ್ರಕರಣಗಳು ಹೆಚ್ಚಲು ಕಾಯ್ದೆಯ ಅನುಷ್ಠಾನದಲ್ಲಿ ಆಗಿರುವ ಲೋಪಗಳೇ ಕಾರಣ. ಭ್ರೂಣಲಿಂಗ ಪತ್ತೆಗೆ ಕಡಿವಾಣ ಹಾಕಿ, ಹೆಣ್ಣುಭ್ರೂಣ ಹತ್ಯೆಯನ್ನು ತಡೆಗಟ್ಟುವಲ್ಲಿ ಆರೋಗ್ಯ ಇಲಾಖೆಯ ಪಾತ್ರ ಮಹತ್ವದ್ದಾಗಿದೆ. ಸಮಾಜದಲ್ಲಿ ಜಾಗೃತಿ ಮೂಡಿಸುವ ಜತೆಜತೆಗೆ ಕುಕೃತ್ಯದಲ್ಲಿ ತೊಡಗಿರುವ ಜಾಲವನ್ನು ಮಟ್ಟಹಾಕುವ ಕೆಲಸವನ್ನೂ ಇಲಾಖೆ ಮಾಡಬೇಕಿದೆ. ಹೆಣ್ಣುಭ್ರೂಣ ಹತ್ಯೆಗೆ ಕಾರಣರಾದವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಿ, ಈ ಪಿಡುಗನ್ನು ಸಂಪೂರ್ಣವಾಗಿ ತೊಲಗಿಸಬೇಕಿದೆ. ಇಲ್ಲದಿದ್ದರೆ ‘ಬೇಟಿ ಬಚಾವೊ’ ಎನ್ನುವಂತಹ ಸರ್ಕಾರದ ಆಕರ್ಷಕ ಘೋಷಣೆಗಳು ಬರೀ ಘೋಷಣೆಗಳಾಗಿ ಉಳಿಯುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.