ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ಕಲ್ಪಿಸಲು ಅವಕಾಶ ನೀಡುವ ಮಹಿಳಾ ಮೀಸಲಾತಿ ಮಸೂದೆಗೆ ಸಂಸತ್ತು ಅಂಗೀಕಾರ ಕೊಟ್ಟು ತಿಂಗಳುಗಳು ಕಳೆದಿವೆ. ಆದರೆ ಹೊಸದಾಗಿ ರಚನೆಯಾಗಿರುವ ಲೋಕಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯ ಕಡಿಮೆ ಇದೆ. ಮಹಿಳೆಯರಿಗೆ ಸೂಕ್ತ ರೀತಿಯಲ್ಲಿ ಪ್ರಾತಿನಿಧ್ಯ ಒದಗಿಸುವ ವಿಚಾರದಲ್ಲಿ ಯಾವ ಪಕ್ಷವೂ ಬದ್ಧತೆಯನ್ನು ಪ್ರದರ್ಶಿಸಿಲ್ಲ. 18ನೇ ಲೋಕಸಭೆಯಲ್ಲಿ 74 ಮಹಿಳಾ ಸದಸ್ಯರು ಇರಲಿದ್ದಾರೆ. ಕಳೆದ ಲೋಕಸಭೆಯಲ್ಲಿ ಇದ್ದ ಮಹಿಳಾ ಸದಸ್ಯರಿಗಿಂತ ಈ ಸಂಖ್ಯೆ ಕಡಿಮೆ. ಹಿಂದಿನ ಬಾರಿ 78 ಸದಸ್ಯೆಯರು ಇದ್ದರು. ಶೇ 48ರಷ್ಟು ಮಹಿಳಾ ಮತದಾರರು ಇರುವ ದೇಶದಲ್ಲಿ, ಲೋಕಸಭೆಯಲ್ಲಿ ಮಹಿಳೆಯರ ಪ್ರಾತಿನಿಧ್ಯದ ಪ್ರಮಾಣ ಶೇ 13ರಷ್ಟು ಮಾತ್ರ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಣದಲ್ಲಿ ಇದ್ದ ಅಭ್ಯರ್ಥಿಗಳ ಒಟ್ಟು ಸಂಖ್ಯೆ 8,360. ಇವರಲ್ಲಿ ಮಹಿಳೆಯರ ಪ್ರಮಾಣ ಶೇ 10ರಷ್ಟು ಇತ್ತು. 155 ಕ್ಷೇತ್ರಗಳಲ್ಲಿ ಮಹಿಳಾ ಅಭ್ಯರ್ಥಿಗಳೇ ಇರಲಿಲ್ಲ.

ಬಿಜೆಪಿಯು 69 ಮಂದಿ ಮಹಿಳೆಯರನ್ನು ಕಣಕ್ಕೆ ಇಳಿಸಿತ್ತು, ಈ ಪೈಕಿ 32 ಮಂದಿ ಜಯ ಗಳಿಸಿದ್ದಾರೆ. ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಮಹಿಳಾ ಅಭ್ಯರ್ಥಿಗಳ ಸಂಖ್ಯೆ 41. ಇವರಲ್ಲಿ 13 ಮಂದಿ ಗೆದ್ದಿದ್ದಾರೆ. ಇಲ್ಲಿ ಟಿಎಂಸಿ ಸಾಧನೆ ಉತ್ತಮವಾಗಿದೆ. ಟಿಎಂಸಿ ಪಕ್ಷವು 12 ಮಂದಿ ಮಹಿಳೆಯರನ್ನು ಚುನಾವಣಾ ಕಣಕ್ಕೆ ಇಳಿಸಿತ್ತು. ಈ ಪೈಕಿ 11 ಮಂದಿ ಗೆಲುವು ಸಾಧಿಸಿದ್ದಾರೆ. ಟಿಎಂಸಿಯ ಒಟ್ಟು 29 ಸಂಸದರ ಪೈಕಿ ಮಹಿಳೆಯರ ಪಾಲು ಶೇ 38ರಷ್ಟಿದೆ. ಸಂಸತ್ತಿನಲ್ಲಿ ಮಹಿಳಾ ಪ್ರಾತಿನಿಧ್ಯವು ಬಹಳ ನಿಧಾನವಾಗಿ ಏರಿಕೆ ಕಾಣುತ್ತಿದೆ. ಮಹಿಳೆಯರು ಜೀವನದ ಇತರ ಕ್ಷೇತ್ರಗಳಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಆದರೆ ರಾಜಕಾರಣವು ಅವರ ಪಾಲಿಗೆ ಅನುಕೂಲಕರ ಆಗುತ್ತಿಲ್ಲ. ಚುನಾಯಿತರಾದ ಮಹಿಳಾ ಅಭ್ಯರ್ಥಿಗಳ ಪೈಕಿ, ರಾಜಕೀಯವಾಗಿ ಪ್ರಭಾವಿಯಾಗಿರುವ ಕುಟುಂಬಗಳ ಮಹಿಳೆಯರ ಸಂಖ್ಯೆ ಜಾಸ್ತಿ ಇದೆ. ಅಲ್ಲದೆ, ಸಿನಿಮಾ ಕ್ಷೇತ್ರದಿಂದ ಬಂದ ಮಹಿಳೆಯರ ಸಂಖ್ಯೆಯೂ ಹೆಚ್ಚಿದೆ. ಇಂತಹ ಹಿನ್ನೆಲೆಯ ಮಹಿಳೆಯರಿಗೆ ಇತರ ಮಹಿಳೆಯರಿಗಿಂತ ಹೆಚ್ಚಿನ ಅನುಕೂಲಗಳು ಇರುತ್ತವೆ ಎಂಬುದು ಗಮನಾರ್ಹ. ಮಹಿಳೆಯರಲ್ಲಿ ರಾಜಕೀಯವನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಬೇಕು, ಅವರು ರಾಜಕಾರಣಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಆಗಬೇಕು; ಯಾವುದೋ ಕುಟುಂಬದ ಪ್ರತಿನಿಧಿಯಾಗಿ ಕಣಕ್ಕೆ ಇಳಿಯುವ ಸ್ಥಿತಿ ಇರಬಾರದು. ಮಹಿಳೆಯರು ಪುರುಷರಿಗೆ ಸರಿಸಮಾನರಾಗಿ ರಾಜಕಾರಣದಲ್ಲಿ ಮೇಲೆ ಬರಲು ಅಗತ್ಯವಿರುವ ವಾತಾವರಣವನ್ನು ರೂಪಿಸುವುದು ಎಲ್ಲರ ಹೊಣೆ.

ಆದರೆ, ಮಹಿಳೆಯರಿಗೆ ಹೆಚ್ಚಿನ ಅವಕಾಶಗಳನ್ನು ನೀಡಲು ಸಿದ್ಧರಿಲ್ಲದ, ಮಹಿಳೆಯರ ಜೊತೆ ಅಧಿಕಾರ ಹಂಚಿಕೊಳ್ಳಲು ಒಲ್ಲದ ಪುರುಷರೇ ಇಂದಿನ ರಾಜಕಾರಣದಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ. ಅವರು ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲು ಒಪ್ಪದೇ ಇರುವುದಕ್ಕೆ ಕಾರಣ ಪುರುಷಪ್ರಧಾನ ಮನೋಭಾವ. ಹೀಗಿದ್ದರೂ, ಈಚಿನ ವರ್ಷಗಳಲ್ಲಿ ಮಹಿಳೆಯರು ಚುನಾವಣೆಯ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಿರುವುದು ಹೆಚ್ಚಾಗುತ್ತಿದೆ. ಈಗ ಮುಕ್ತಾಯಗೊಂಡಿರುವ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರು ಮತ ಚಲಾಯಿಸಿದ ಪ್ರಮಾಣ ಶೇ 66ರಷ್ಟು ಇತ್ತು. ಇದು ಪುರುಷರು ಮತ ಚಲಾಯಿಸಿದ ಪ್ರಮಾಣಕ್ಕೆ ಸರಿಸಮನಾಗಿದೆ. ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರ್ಕಾರಗಳು ಹಲವು ಯೋಜನೆಗಳನ್ನು ರೂಪಿಸುತ್ತಿವೆ, ರಾಜಕೀಯ ಪಕ್ಷಗಳು ಮಹಿಳೆಯರ ಮತ ಪಡೆಯಲು ವಿಶೇಷ ಪ್ರಯತ್ನಗಳನ್ನು ನಡೆಸುತ್ತವೆ. ಆದರೆ, ಅಧಿಕಾರ ಹಿಡಿಯುವ ಪುರುಷರಿಗೆ ಅನುಕೂಲ ಕಲ್ಪಿಸಿಕೊಡುವ ಮತಬ್ಯಾಂಕ್ ಆಗಿ ಮಾತ್ರವೇ ಮಹಿಳೆಯರನ್ನು ಕಾಣಲಾಗುತ್ತಿದೆ, ಆ ಕಾರಣಕ್ಕಾಗಿ ಅವರನ್ನು ಓಲೈಸಲು ಯತ್ನಿಸಲಾಗುತ್ತಿದೆ. ಮಹಿಳಾ ಮೀಸಲಾತಿ ಮಸೂದೆಯು ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಅನುಷ್ಠಾನಕ್ಕೆ ಬರುವುದು ಕೂಡ ಅನುಮಾನ. ಸಂಸತ್ತಿನಲ್ಲಿ ಮಹಿಳೆಯರ ಪ್ರಾತಿನಿಧ್ಯದ ವಿಚಾರದಲ್ಲಿ ಬೇರೆ ಹಲವು ದೇಶಗಳು ಭಾರತಕ್ಕಿಂತ ಮುಂದೆ ಇವೆ. ದಕ್ಷಿಣ ಆಫ್ರಿಕಾದಲ್ಲಿ ಶೇ 46ರಷ್ಟು ಸಂಸದರು, ಬ್ರಿಟನ್ನಿನಲ್ಲಿ ಶೇ 35ರಷ್ಟು, ಅಮೆರಿಕದಲ್ಲಿ ಶೇ 29ರಷ್ಟು ಸಂಸದರು ಮಹಿಳೆಯರು. ಶಾಸನಸಭೆಗಳಲ್ಲಿ ಹಾಗೂ ರಾಜಕೀಯ ಅಧಿಕಾರದ ಸ್ಥಾನಗಳಲ್ಲಿ ಮಹಿಳೆಯರಿಗೆ ಸರಿಯಾದ ಪ್ರಾತಿನಿಧ್ಯ ಸಿಕ್ಕಾಗ ಮಾತ್ರ ಮಹಿಳೆಯ ಸಬಲೀಕರಣವು ನಿಜ ಅರ್ಥದಲ್ಲಿ ಸಾಕಾರಗೊಂಡಂತೆ ಆಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.