ಕಾನೂನು ಸಮರದಲ್ಲಿ ‘ಪೆಟ್ಟು’ ತಿಂದಿದ್ದಲ್ಲದೆ, ಜನಸಮುದಾಯಗಳು ಬೀದಿಗಿಳಿದು ನಡೆಸಿದ ಭಾರಿ ಹೋರಾಟದಿಂದಲೂ ಕಂಗೆಟ್ಟಿದ್ದ ಹಿಂದಿನ ಕಾಂಗ್ರೆಸ್ ಸರ್ಕಾರ, ಬೇರೆ ದಾರಿ ಕಾಣದೆ 2016ರಲ್ಲಿ ಕೈಬಿಟ್ಟಿದ್ದ ಬೆಂಗಳೂರು ಉಕ್ಕಿನ ಮೇಲ್ಸೇತುವೆ ಯೋಜನೆಗೆ ಈಗಿನ ಜೆಡಿಎಸ್– ಕಾಂಗ್ರೆಸ್ ಸರ್ಕಾರ ಮರುಜೀವ ನೀಡಿದೆ. ‘ಸುಮ್ಮನಿರಲಾರದೆ ಇರುವೆಯನ್ನು ಮೈಮೇಲೆ ಬಿಟ್ಟುಕೊಂಡರು’ ಎನ್ನುವ ಗಾದೆಯಂತೆ, ಬೆಂಗಳೂರು ಅಭಿವೃದ್ಧಿಯ ಹೊಣೆಯನ್ನೂ ಹೊತ್ತಿರುವ ಉಪಮುಖ್ಯಮಂತ್ರಿ ಜಿ. ಪರಮೇಶ್ವರ, ಬೇಡವಾಗಿದ್ದ ವಿವಾದವನ್ನು ಮೈಮೇಲೆ ಎಳೆದುಕೊಳ್ಳಲು ಹೊರಟಿರುವಂತಿದೆ.

‘ಶತಾಯ– ಗತಾಯ ಈ ಯೋಜನೆಯನ್ನು ಅನುಷ್ಠಾನಗೊಳಿಸಿಯೇ ಸಿದ್ಧ’ ಎಂದು ತಮ್ಮದೇ ಪಕ್ಷದ ಹಿಂದಿನ ಸರ್ಕಾರದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ದವರು ಉತ್ಸಾಹ ತೋರಿಸಿದ್ದರೂ ಜನರ ಬಿಗಿಪಟ್ಟಿನ ಹೋರಾಟದ ಮುಂದೆ ಮುಗ್ಗರಿಸಿದ್ದು ಪರಮೇಶ್ವರ ಅವರಿಗೆ ಯಾವುದೇ ಪಾಠ ಕಲಿಸಿದಂತಿಲ್ಲ. ವಿಮಾನ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೆ ₹ 1,800 ಕೋಟಿ ವೆಚ್ಚದಲ್ಲಿ ಅನುಷ್ಠಾನಕ್ಕೆ ತರಲು ಹೊರಟಿದ್ದ ಈ ಉಕ್ಕಿನ ಮೇಲ್ಸೇತುವೆ ಯೋಜನೆಯಲ್ಲಿ ಭ್ರಷ್ಟಾಚಾರದ ವಾಸನೆಯನ್ನು ಕಂಡವರಲ್ಲಿ ಈಗಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕೂಡ ಒಬ್ಬರು. ಅಷ್ಟೇ ಏಕೆ, ‘ಪರಿಸರಕ್ಕೆ ಮಾರಕವಾಗುವ ಈ ಯೋಜನೆಗೆ ವೈಯಕ್ತಿಕವಾಗಿ ನನ್ನ ಸಹಮತವಿಲ್ಲ’ ಎಂದು ಈ ಹಿಂದೆ ಸ್ವತಃ ಪರಮೇಶ್ವರ ಹೇಳಿದ್ದರಲ್ಲ? ಆಡಳಿತದ ಹೊಣೆ ಹೊತ್ತಿರುವ ಈ ಇಬ್ಬರೂ ಪ್ರಮುಖರು ಯೋಜನೆಯ ವಿರುದ್ಧ ಹಿಂದೆ ಅಷ್ಟೊಂದು ಸ್ಪಷ್ಟ ನಿಲುವು ತಳೆದವರು. ಅವರನ್ನೇ ಈ ಯೋಜನೆ ಅಯಸ್ಕಾಂತದ ರೀತಿಯಲ್ಲಿ ಈಗ ಸೆಳೆದಿದೆ ಎಂದರೆ ಅದರ ಹಿಂದಿನ ಮಾಂತ್ರಿಕ ಶಕ್ತಿಯಾದರೂ ಯಾವುದಿದ್ದೀತು!?

ಕಾಲ ಉರುಳಿದಂತೆ ಜನ ಎಲ್ಲವನ್ನೂ ಮರೆತುಬಿಡುತ್ತಾರೆ ಎಂದು ರಾಜಕಾರಣಿಗಳು ಭಾವಿಸುವುದುಂಟು. ಆದರೆ, ಎಲ್ಲ ವಿಷಯಗಳಿಗೂ ಇದನ್ನು ಅನ್ವಯಿಸಲಾಗದು ಎಂಬುದು ಆಳುವವರಿಗೆ ಗೊತ್ತಿರಬೇಕು. ಸಂಚಾರ ದಟ್ಟಣೆ ಸಮಸ್ಯೆಯನ್ನು ನೀಗಿಸುವಲ್ಲಿ ಹೆಚ್ಚಿನ ಪ್ರಯೋಜನವಾಗದ, ನಗರದ ಪರಿಸರಕ್ಕೆ ತುಂಬಾ ಮಾರಕವಾದ ಈ ಯೋಜನೆಯ ವಿರುದ್ಧ ಸಮರ ಸಾರಿರುವ ನಾಗರಿಕರು ‘ನಮ್ಮ ನೆನಪಿನಶಕ್ತಿ ಕಡಿಮೆ ಆಗಿಲ್ಲ’ ಎಂದು ಹೇಳಿರುವುದು ಎಚ್ಚರಿಕೆಯ ಗಂಟೆ. ಮುಂದಿನ ಪೀಳಿಗೆಯ ಭವಿಷ್ಯದೊಂದಿಗೆ ಸರಸ ಆಡುವುದನ್ನು ಅವರು ಈಗ ಮೂಕಪ್ರೇಕ್ಷಕರಾಗಿ ಸಹಿಸಲು ಸಿದ್ಧರಿಲ್ಲ.

ಲೋಕಸಭೆ ಚುನಾವಣೆ ಹತ್ತಿರವಾದ ಸಂದರ್ಭದಲ್ಲಿ ಈ ಯೋಜನೆ ಪುಟಿದೇಳಲು ‘ಕಿಕ್ಬ್ಯಾಕ್’ ವ್ಯವಹಾರವೂ ಕಾರಣವಾಗಿರಬಹುದೇ ಎನ್ನುವ ಸಂಶಯ ಕೂಡ ಹೋರಾಟಗಾರರಲ್ಲಿ ಮೂಡಿದೆ. ಈ ಹಿಂದೆ ಯೋಜನಾ ವೆಚ್ಚ ಏಕಾಏಕಿ ₹ 500 ಕೋಟಿಯಷ್ಟು ಹೆಚ್ಚಾಗಿದ್ದು ಅವರ ಮನದಲ್ಲಿ ಇನ್ನೂ ಹಸಿರಾಗಿದೆ. ಉಕ್ಕಿನ ಮೇಲ್ಸೇತುವೆ, ವೈಟ್ ಟಾಪಿಂಗ್ನಂತಹ ಸಾವಿರಾರು ಕೋಟಿ ರೂಪಾಯಿ ವೆಚ್ಚದ ಯೋಜನೆಗಳೇ ಆಡಳಿತಗಾರರಿಗೆ ಅಪ್ಯಾಯಮಾನ ಆಗಿರುವುದರ ಹಿಂದಿನ ಒಳಮರ್ಮದ ಕುರಿತು ಸಂಶಯಗಳು ನಿವಾರಣೆ ಆಗಬೇಕಾದರೆ, ‘ಜನರಿಗೆ ಬೇಡವಾದ ದುಂದುವೆಚ್ಚದ ಈ ಯೋಜನೆ ಸರ್ಕಾರಕ್ಕೂ ಬೇಡ’ ಎಂದು ಮುಖ್ಯಮಂತ್ರಿಯವರೇ ಘೋಷಿಸಬೇಕು.

ನಗರ ಯೋಜನಾ ತಜ್ಞರನ್ನೂ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಪ್ರತಿನಿಧಿಗಳನ್ನೂ ಒಟ್ಟಾಗಿ ಕರೆದು, ನಗರದ ಸುಸ್ಥಿರ ಅಭಿವೃದ್ಧಿಗೆ ಎಂತಹ ಯೋಜನೆ ಹಾಕಿಕೊಳ್ಳಬೇಕು ಎನ್ನುವುದನ್ನು ಅರಿಯಬೇಕು. ಸಮೂಹ ಸಾರಿಗೆ ಸೌಲಭ್ಯ ಹೆಚ್ಚಿಸುವ, ಉಪನಗರ ರೈಲು ಸೇವೆ ಆರಂಭಿಸುವ, ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸುವ ಜನೋಪಯೋಗಿ ಯೋಜನೆಗಳತ್ತ ಗಮನಹರಿಸಬೇಕು. ಜನರ ಈ ಬೇಡಿಕೆಯನ್ನು ಆಡಳಿತದ ಹೊಣೆ ಹೊತ್ತವರು ತಿರಸ್ಕರಿಸಿದರೆ, ಅಂಥವರನ್ನು ಚುನಾವಣೆ ವೇಳೆ ತಿರಸ್ಕರಿಸಿ ಮನೆಗೆ ಕಳುಹಿಸುವ ಹಕ್ಕು ಅವರಿಗೆ ಇದ್ದೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.