ರಾಜ್ಯದಲ್ಲಿ ಹಿಂದೆಂದೂ ಕಂಡು ಕೇಳರಿಯದ ಭೀಕರ ಜಲಕ್ಷಾಮದ ಅಪಾಯ ಈಗ ಬಂದೆರಗಿದೆ. 143 ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿತ ಕಂಡಿರುವುದು ಅದರ ಸ್ಪಷ್ಟ ಮುನ್ಸೂಚನೆ. ಹಲವು ನದಿಗಳ ಮೂಲವಾಗಿರುವ ಮಲೆನಾಡು ಹಾಗೂ ಅಧಿಕ ಮಳೆ ಬೀಳುವ ಕರಾವಳಿ ಪ್ರದೇಶಗಳಲ್ಲೂ ನೀರಿಗಾಗಿ ಹಾಹಾಕಾರ ಎದ್ದಿರುವುದು ಸದ್ಯದ ಚಿಂತಾಜನಕ ಸ್ಥಿತಿಗೆ ಹಿಡಿದ ಕೈಗನ್ನಡಿ.

ರಾಜ್ಯದ ಹಲವೆಡೆ ಬರಿದಾಗಿರುವ ಕೊಳವೆಬಾವಿಗಳು ನೀರಿಲ್ಲದೆ ಹೊರಡಿಸುತ್ತಿರುವ ಸದ್ದು ಸನಿಹದ ಭವಿಷ್ಯದಲ್ಲಿ ಎದುರಾಗಲಿರುವ ಗಂಡಾಂತರಕ್ಕೆ ಎಚ್ಚರಿಕೆ ಗಂಟೆ. ಇಂತಹ ಭೀಕರ ಸನ್ನಿವೇಶ ಸೃಷ್ಟಿಯಾಗಲು ಸರ್ಕಾರ ಹಾಗೂ ಸಮುದಾಯ ಎರಡೂ ಸರಿಸಮ ಅಪರಾಧಿಗಳು. ಸ್ವಯಂಕೃತ ಅಪರಾಧದಿಂದ ಮಾಡಿಕೊಂಡಿರುವ ಗಾಯಕ್ಕೆ ಸತತವಾಗಿ ಆವರಿಸಿದ ಬರಗಾಲ ಬರೆ ಎಳೆದಿದೆ.

‘ನನ್ನ ಅಗತ್ಯ ನೀಗಿದರೆ ಸಾಕು’ ಎಂಬ ಸಂಕುಚಿತ ಮನೋಭಾವದಿಂದ ಜನ ಪೈಪೋಟಿಗೆ ಬಿದ್ದು ಕೊಳವೆಬಾವಿಗಳನ್ನು ಕೊರೆಸಿ, ಮಿತಿಮೀರಿದ ಪ್ರಮಾಣದಲ್ಲಿ ನೀರಿನ ಬಳಕೆ ಮಾಡಿರುವುದು, ಜಲ ಮರುಪೂರಣಕ್ಕೆ ಯಾವುದೇ ಕ್ರಮ ಕೈಗೊಳ್ಳದಿರುವುದು, ಸಂಚಿತ ನಿಧಿಯಂತಿದ್ದ ಅಂತರ್ಜಲದ ಬಳಕೆ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ವಿಧಿಸದೇ ಇರುವುದು, ಕೆರೆ–ಕುಂಟೆಗಳ ಮಹತ್ವವನ್ನು ಗ್ರಹಿಸದಿರುವುದು, ಜಲಮೂಲಗಳಿಗೆ ನೀರುಣಿಸುತ್ತಿದ್ದ ಕಾಲುವೆಗಳನ್ನೇ ಆಪೋಶನ ಮಾಡಿರುವುದು– ಹೀಗೆ ಇಂದಿನ ದುಃಸ್ಥಿತಿಗೆ ಕಾರಣವಾದ ಪ್ರಮಾದಗಳಿಗಾಗಿ ಆಡಳಿತ ವ್ಯವಸ್ಥೆ ಹಾಗೂ ಸಮಾಜ ತನ್ನನ್ನು ತಾನೇ ದೂಷಿಸಿಕೊಳ್ಳಬೇಕು.

ಜಲಮೂಲಗಳನ್ನು ನಾವು ಹೇಗೆ ಇಟ್ಟುಕೊಂಡಿದ್ದೇವೆ ಎಂಬುದಕ್ಕೆ ಬೆಂಗಳೂರಿನ ಕೆರೆಗಳು ರೂಪಕದಂತಿವೆ. ಒತ್ತುವರಿಯಿಂದ ಕೆರೆಗಳ ಪಾತ್ರ ಕುಗ್ಗಿಸಿದ್ದಲ್ಲದೆ ಅವುಗಳಿಗೆ ಪರಿಶುದ್ಧ ನೀರು ತರುತ್ತಿದ್ದ ರಾಜಕಾಲುವೆಗಳನ್ನು ಸಮಾಧಿ ಮಾಡಲಾಗಿದೆ. ಮನೆ–ಮನೆಗಳಲ್ಲಿ ಬಳಸಿಬಿಟ್ಟ ಹೊಲಸು ನೀರು ಕೆರೆಗಳ ಒಡಲು ತುಂಬುತ್ತಿದೆ.

ದೇಹದ ಕೊಳೆತ ಭಾಗದಲ್ಲಿ ರಕ್ತದ ಬದಲು ಕೇವಲ ಕೀವು ತುಂಬಿಕೊಳ್ಳುವಂತೆ ಕೆರೆ ಅಂಗಳ ಕೂಡ ಕೊಳಚೆ ನೀರಿನ ಆಗರ ಆಗಿಬಿಟ್ಟಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಜಲಮೂಲಗಳ ಕತ್ತು ಹಿಸುಕಿರುವುದು ಕಲ್ಲು ಮತ್ತು ಮರಳು ಗಣಿಗಾರಿಕೆ. ಭೂಮಿಯ ಆಳಕ್ಕೆ ನೀರು ಕಳುಹಿಸುವ ಕೆರೆ–ಕುಂಟೆಗಳೇ ಇಲ್ಲವಾದ ಮೇಲೆ ಅಂತರ್ಜಲ ಮಟ್ಟ ಎಲ್ಲಿಂದ ಹೆಚ್ಚಾಗಬೇಕು?

ರಾಜ್ಯದ ಬಹುತೇಕ ಗ್ರಾಮ ಪಂಚಾಯಿತಿಗಳು ಕೊಳವೆಬಾವಿಗಳಿಂದ ನೀರೆತ್ತಿ ಪೂರೈಸಲು ವಿದ್ಯುತ್ ಬಿಲ್‌ಗಾಗಿ ತಮ್ಮ ವರಮಾನದ ಬಹುಪಾಲು ಮೊತ್ತ ಖರ್ಚು ಮಾಡುತ್ತವೆ. ಅದರ ಬದಲು ಕೆರೆಗಳ ಹೂಳು ಮೇಲೆತ್ತಿ, ಕಾಲುವೆಗಳನ್ನು ಸುಸ್ಥಿತಿಯಲ್ಲಿಟ್ಟು ನೀರನ್ನು ಸಂಗ್ರಹಿಸಬೇಕೆನ್ನುವ ತುರ್ತು ಯಾವ ಪಂಚಾಯಿತಿಯನ್ನೂ ಕಾಡಿಲ್ಲ.

ಜಲಾಶಯಗಳು ಭರ್ತಿಯಾಗಿದ್ದ ಸಂದರ್ಭದಲ್ಲಿ ಕೆರೆಗಳನ್ನು ತುಂಬಿಸುವತ್ತ ಸರ್ಕಾರ ಸಹ ಒಲವು ತೋರಿಲ್ಲ. ಹನಿ ನೀರಾವರಿಯಂತಹ ವೈಜ್ಞಾನಿಕ ವಿಧಾನಗಳು ಬಂದಿದ್ದರೂ ನಮ್ಮ ರೈತರು ಕೃಷಿ ಚಟುವಟಿಕೆ ಸಂದರ್ಭದಲ್ಲಿ ನೀರು ಪೋಲು ಮಾಡುವುದು ನಿಂತಿಲ್ಲ. ಸರ್ಕಾರದಿಂದ ಕೊರೆಸಿರುವ ಕೊಳವೆಬಾವಿಗಳಲ್ಲಿ ಮರುಪೂರಣ ಮಾಡುವ ವ್ಯವಸ್ಥೆ ಜಾರಿಗೆ ತಂದರೆ ದೊಡ್ಡ ಜಲಕ್ರಾಂತಿಯನ್ನೇ ಮಾಡಲು ಸಾಧ್ಯವಿದೆ.

ಆದರೆ, ಹೊಸ ಕೊಳವೆಬಾವಿಗಳನ್ನು ಕೊರೆಸಲು ಆಡಳಿತ ವ್ಯವಸ್ಥೆಗೆ ‘ತುರ್ತು’ ಸಂದರ್ಭಗಳು ಒದಗಿ ಬರುತ್ತವೆಯೇ ಹೊರತು, ಹಳೆಯವು ಏನಾದವು ಎಂಬುದನ್ನು ಪರಿಶೀಲಿಸಲು ಸಮಯವಿಲ್ಲ. ಮನೆಗಳಿಗೆ ಪೂರೈಕೆಯಾಗುವ ಶೇ 80ರಷ್ಟು ಪ್ರಮಾಣದ ನೀರು ಚರಂಡಿ ಪಾಲಾಗುತ್ತದೆ ಎಂಬ ಅಂದಾಜಿದೆ. ನಲ್ಲಿಗಳ ತೊಟ್ಟು ಈಗಿನ ಗಾತ್ರಕ್ಕಿಂತ ತುಸು ಚಿಕ್ಕದಾದರೂ ಭಾರಿ ಪ್ರಮಾಣದ ನೀರು ಉಳಿತಾಯ ಆಗುತ್ತದೆ.

ಚರಂಡಿಯಲ್ಲಿ ಹರಿಯುವ ನೀರನ್ನು ಸಂಸ್ಕರಿಸಿ ಉಪಯೋಗಿಸುವ ಅಗತ್ಯವಿದೆ. ನೀರಿನ ಮಿತಬಳಕೆ, ಮರುಬಳಕೆಗೆ ಗಮನಹರಿಸಿದರೆ ಅಂತರ್ಜಲವನ್ನು ಈಗಿನಂತೆ ಮಿತಿಮೀರಿ ಮೇಲೆತ್ತುವ ಅಗತ್ಯ ಬೀಳುವುದಿಲ್ಲ. ಪ್ರತೀ ಮನೆಯಲ್ಲೂ ಮಳೆ ನೀರಿನ ಸಂಗ್ರಹಕ್ಕೆ ಜನ ಪ್ರೀತಿಯಿಂದ ಮುಂದಾದರೆ ಜಲ ಸ್ವಾವಲಂಬನೆ ಸಾಧ್ಯ. ಪ್ರತೀ ಜಿಲ್ಲೆಯಲ್ಲಿ ಕೊಳವೆ ಬಾವಿ ಕೊರೆಯುವ ಏಜೆನ್ಸಿಗಳು ಇರುವುದೇ ಬೆರಳೆಣಿಕೆಯಷ್ಟು.

ಕೊಳವೆಬಾವಿ ಕೊರೆಯಲು ನಿರ್ಬಂಧದ ಆದೇಶ ಹೊರಡಿಸಿದಂತೆ ಸರ್ಕಾರ ನಾಟಕ ಆಡುವುದನ್ನು ಬಿಟ್ಟು ಆ ಏಜೆನ್ಸಿಗಳ ಜುಟ್ಟು ಹಿಡಿಯಬೇಕು. ಭವಿಷ್ಯದ ಗಂಡಾಂತರ ತಪ್ಪಿಸಲು ಜನರಲ್ಲಿ ಅರಿವು ಮೂಡಿಸುವ ಹಾಗೂ ಜಲ ಸಂರಕ್ಷಣೆಯಲ್ಲಿ ಅವರನ್ನು ತೊಡಗಿಸಿಕೊಳ್ಳುವ ಆಂದೋಲನ ನಡೆಸಬೇಕು. ಇಂತಹ ಕಾರ್ಯದಲ್ಲಿ ಕೈಜೋಡಿಸಿದರಷ್ಟೇ ತನಗೆ ಉಳಿಗಾಲವಿದೆ ಎಂಬುದನ್ನು ಜನಸಮುದಾಯವೂ ಅರಿಯಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.