ರಾಜಕಾರಣಿಗಳು ಜನರ ಅನಾದರಕ್ಕೆ ಗುರಿಯಾಗಿರುವ ಈ ಹೊತ್ತಿನಲ್ಲಿ, ನಿಮ್ಮ ಪುಸ್ತಕ ನೀಡುವ ಪ್ರಮುಖ ಸಂದೇಶ ಏನು?

ರಾಜಕಾರಣಿಯಾಗಿ ನನ್ನದು ಸಿಹಿಕಹಿಯ ಮಿಶ್ರ ಅನುಭವ. ರಾಜಕೀಯದ ಗಂಧಗಾಳಿಯೇ ಇರದಿದ್ದ ನನ್ನನ್ನು ಸಬ್ ರಿಜಿಸ್ಟ್ರಾರ್ ಕೆಲಸದಿಂದ ಬಿಡಿಸಿ ಒತ್ತಾಯಪೂರ್ವಕವಾಗಿ ರಾಜಕೀಯಕ್ಕೆ ಕರೆತಂದವರು ಡಿ.ಬಿ.ಚಂದ್ರೇಗೌಡರು. ಅದಾದ ಕೆಲವೇ ವರ್ಷಗಳಲ್ಲಿ ಅವರು ದೇವರಾಜ ಅರಸು ಅವರೊಂದಿಗೆ ಗುರುತಿಸಿಕೊಂಡು ಕಾಂಗ್ರೆಸ್ (ಐ) ಪಕ್ಷವನ್ನೇ ತೊರೆದರು. ನಾನು ಇಂದಿರಾ ಕಾಂಗ್ರೆಸ್ನಲ್ಲಿಯೇ ಉಳಿದೆ. ಹೀಗಾಗಿ ರಾಜಕೀಯ ಮಾರ್ಗದರ್ಶಕರೇ ಇಲ್ಲದೆ ‘ನಾಯಿ ಹಡೆದು ನಾಡ ಮೇಲೆ ಬಿಸಾಡಿದಂತೆ’ ದಿಕ್ಕೇ ತೋಚದಂತಾಯಿತು ನನ್ನ ಸ್ಥಿತಿ. ಆದರೂ ಎದೆಗುಂದದೆ ಜನಪರ ಕಾರ್ಯಗಳನ್ನೇ ನೆಚ್ಚಿ ರಾಜಕೀಯ ಗರಡಿಯಲ್ಲಿ ಸೆಣಸಿದೆ. ಅಂತಹ ಅನುಭವಗಳ ಮೂಸೆಯಿಂದ ಬಂದಿರುವ ನನ್ನ ಆತ್ಮಕಥನ ಮುಂದಿನ ಪೀಳಿಗೆಯ ರಾಜಕಾರಣಿಗಳಿಗೆ, ಅದರಲ್ಲೂ ಮಹಿಳಾ ರಾಜಕಾರಣಿಗಳಿಗೆ ಒಂದು ಗೈಡ್ ಆಗಬೇಕು. ಅದನ್ನು ಓದಿದ ಮತದಾರರಿಗೂ ರಾಜಕಾರಣದ ವಸ್ತುಸ್ಥಿತಿ ಮನವರಿಕೆ ಆಗಬೇಕು.

ಇಲ್ಲಿ ನಾನು ಯಾವುದನ್ನೂ ಮುಚ್ಚಿಟ್ಟಿಲ್ಲ. ನಾನು ಮನೆ ಕಟ್ಟಿದ್ದು ಎಸ್.ಎಂ.ಕೃಷ್ಣ ಅವರ ಸಹಾಯದಿಂದ ಎಂಬುದನ್ನೂ ನೇರವಾಗಿ ಹೇಳಿದ್ದೇನೆ. ಆಗಿನ ರಾಜಕೀಯಕ್ಕೂ ಈಗಿನ ರಾಜಕೀಯಕ್ಕೂ ಅಜಗಜಾಂತರ ಇದೆ ಎನ್ನುವುದು ಸಹ ಎಲ್ಲರಿಗೂ ತಿಳಿಯಬೇಕು. ನನ್ನ ಹೋರಾಟದ ಬದುಕನ್ನು ಹತ್ತಿರದಿಂದ ಕಂಡ ಹಿ.ಶಿ.ರಾಮಚಂದ್ರೇಗೌಡ ಅವರಂತಹ ಹಿತೈಷಿಗಳು ಈ ಬರವಣಿಗೆಗೆ ಒತ್ತಾಸೆಯಾಗಿ ನಿಂತರು.

ಪಕ್ಷದೊಳಗಿನ ಭಿನ್ನಮತ ಶಮನಕ್ಕೆ ಮುಖಂಡರ ನಡುವೆ ಸಂವಾದ ಏರ್ಪಡಿಸುವಂತೆ 2002ರಲ್ಲಿ ಸಿಡಬ್ಲ್ಯುಸಿ ಸದಸ್ಯೆಯಾಗಿದ್ದಾಗಲೇ ಸೋನಿಯಾ ಗಾಂಧಿ ಅವರಿಗೆ ಸಲಹೆ ಕೊಟ್ಟಿದ್ದಾಗಿ ಪುಸ್ತಕದಲ್ಲಿ ಪ್ರಸ್ತಾಪಿಸಿದ್ದೀರಿ. ಆದರೆ ಈವರೆಗೂ ಅಂಥದ್ದೊಂದು ಪ್ರಯತ್ನ ನಡೆದಂತಿಲ್ಲ?

ಪರಸ್ಪರ ಕಾಲೆಳೆಯುವ ಗುಣ ನಮ್ಮಲ್ಲಿ ಮೊದಲಿನಿಂದಲೂ ಇದ್ದದ್ದೇ. ಪುಸ್ತಕ ಬಿಡುಗಡೆಯ ಆಹ್ವಾನಪತ್ರಿಕೆ ಕೊಡಲು ಮೊನ್ನೆ ಪರಿಚಿತರೊಬ್ಬರ ಮನೆಗೆ ಹೋಗಿದ್ದೆ. ‘ಮೋಟಮ್ಮನವರೇ ಎಲ್ಲ ಸರಿ ಕಣ್ರಿ, ಕಾಂಗ್ರೆಸ್ನಲ್ಲೇ ಎಲ್ಲಾ ಸರಿ ಇಲ್ಲವಲ್ಲಾ’ ಎಂದರು. ಈಗಿನ ಮುಖಂಡರು ಹುಚ್ಚುಚ್ಚಾಗಿ ಹೇಳಿಕೆ ಕೊಡುತ್ತಿರುವುದರಲ್ಲಿ ಏನಾದರೂ ಅರ್ಥವಿದೆಯೇ? ಹಿಂದೆಯೂ ಗುಂಪುಗಾರಿಕೆ ಇತ್ತು. ದೇವರಾಜ ಅರಸು ಮತ್ತು ಕೆಲವರು ಒಂದು ಗುಂಪಾದರೆ, ಅಜೀಜ್ ಸೇಠ್, ಕೆ.ಎಚ್ ಪಾಟೀಲ, ಬಸವಲಿಂಗಪ್ಪ ಅವರೆಲ್ಲಾ ಒಂದು ಗುಂಪಾಗಿದ್ದರಂತೆ. ಆದರೆ ಅದೆಲ್ಲಾ ಹೊರಗಿನವರಿಗೆ ಗೊತ್ತೇ ಆಗುತ್ತಿರಲಿಲ್ಲ. ಈಗ ಬಹಿರಂಗವಾಗಿಯೇ ಕಾಣಿಸಿಕೊಳ್ಳುತ್ತಿದೆ. ಇಂಥ ಸ್ಥಿತಿ ಬಿಜೆಪಿಯಲ್ಲೂ ಇದೆ. ಮೊನ್ನೆ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಶಿಬಿರದಲ್ಲಿ ಎಲ್ಲರೂ ಒಟ್ಟಾಗಿ, ಸಾಮೂಹಿಕ ನಾಯಕತ್ವದಡಿ ಚುನಾವಣೆ ಎದುರಿಸುವ ಡಿಕ್ಲರೇಷನ್ ಮಾಡಿರುವುದು ಒಳ್ಳೆಯ ಬೆಳವಣಿಗೆ.

ಇಂದಿರಾ ಗಾಂಧಿ ನಿಮ್ಮ ಮದುವೆಯಲ್ಲಿ ಪಾಲ್ಗೊಂಡಿದ್ದ ವಿವರಣೆಗೆ ಒಂದು ಅಧ್ಯಾಯವನ್ನೇ ಮೀಸಲಿಟ್ಟಿದ್ದೀರಿ...

ಹೌದು, ಅದೊಂದು ದಾಖಲೆ ಸಹ. ಬೆಂಗಳೂರಿಗೆ ಬಂದಿದ್ದ ಅವರನ್ನು ಖುದ್ದಾಗಿ ಮದುವೆಗೆ ಆಮಂತ್ರಿಸಿದೆ. ‘ಲೆಟ್ ಮಿ ಸೀ ಮೋಟಮ್ಮಾಜಿ, ಐ ಹ್ಯಾವ್ ಲಾಟ್ ಆಫ್ ವರ್ಕ್ ಇನ್ ಡೆಲ್ಲಿ’ ಅಂದರು. ‘ಓನ್ಲಿ ಪೂರ್ ಪೀಪಲ್ ವಿಲ್ ಕಮ್ ಟು ಮೈ ಮ್ಯಾರೇಜ್. ನೊ ಕಾರ್ ಓನಿಂಗ್ ಪೀಪಲ್ ವಿಲ್ ಕಮ್. ದೆ ಆಲ್ ಆರ್ ಯುವರ್ ಆರ್ಡೆಂಟ್ ಫ್ಯಾನ್ಸ್. ಆಲ್ ಆಫ್ ದೆಮ್ ವಿಲ್ ಗೆಟ್ ಎ ಚಾನ್ಸ್ ಟು ಸೀ ಯು ಮೇಡಂ’ ಅಂದೆ. ‘ಓಕೆ ಐ ವಿಲ್ ಟ್ರೈ’ ಅಂದು ಮುಗುಳ್ನಕ್ಕರು. ಅವರು ಮದುವೆಗೆ ಬರುತ್ತಿದ್ದಾರೆ ಎಂಬುದನ್ನು ಗುಂಡೂರಾಯರು ಖಚಿತಪಡಿಸಿದಾಗ ನನ್ನಲ್ಲಿ ಖುಷಿಗಿಂತ ಅವರನ್ನು ಯಾರು, ಹೇಗೆ ನೋಡಿಕೊಳ್ಳುವುದು ಎಂಬ ಆತಂಕವೇ ಹೆಚ್ಚಾಗಿತ್ತು. ಆದರೆ ಗುಂಡೂರಾಯರು ‘ನಾವೆಲ್ಲ ಇದ್ದೇವೆ’ ಎಂದು ಅಭಯ ನೀಡಿದರು. ಕೊನೆಗೂ ಮೇಡಂ ಮದುವೆಗೆ ಬಂದೇ ಬಂದರು. ಕಾಟನ್ ಖಾದಿ ಸೀರೆಯುಟ್ಟು ಎಷ್ಟೊಂದು ಸರಳವಾಗಿ ಬಂದಿದ್ದರು. ಬೆಳಿಗ್ಗೆ 11ರಿಂದ ಸಂಜೆ 4 ಗಂಟೆಯವರೆಗೂ ಮದುವೆ ಮಂಟಪದಲ್ಲೇ ಇದ್ದರು. ಎಲ್ಲರ ಜೊತೆ ಮರದ ಬೆಂಚಿನ ಮೇಲೆ ಕೂತು ಬಾಳೆಲೆಯಲ್ಲೇ ಉಂಡರು. ಮದುವೆ ಮುಗಿದು ನಾವೆಲ್ಲ ಗಂಡಿನ ಮನೆಗೆ ಹೊರಟು ನಿಂತಾಗ, ಮುಖ್ಯಮಂತ್ರಿ ದೇವರಾಜ ಅರಸು ಅವರು ಮದುವೆಗೆ ಬರುತ್ತಿದ್ದಾರೆ ಎಂಬ ಸುದ್ದಿ ಬಂತು. ಆಗ ದಿಢೀರೆಂದು ಗಡಬಡಿಸಿ ನಮ್ಮ ಆರತಕ್ಷತೆಗೆ ಸಿದ್ಧತೆ ನಡೆಸಲಾಯಿತು. ಆವರೆಗೂ ಈ ಇಬ್ಬರು ನಾಯಕರ ನಡುವೆ ಇದ್ದ ಮುಸುಕಿನ ಗುದ್ದಾಟ ನನ್ನ ಮದುವೆಯ ದಿನವಾದ 1979ರ ಜೂನ್ 4ರಂದು ಬಹಿರಂಗಗೊಂಡಿತೆಂದು ರಾಜಕೀಯವಾಗಿ ಉಲ್ಲೇಖಿಸಲಾಗುತ್ತದೆ.

ಒಬ್ಬ ದಲಿತ ನಾಯಕಿಯಾಗಿ ಸಮಾಜ ನಿಮ್ಮನ್ನು ಸ್ವೀಕರಿಸಿದ ಬಗೆ ಹೇಗೆ?

ದಲಿತರ ಮೇಲಿನ ದೌರ್ಜನ್ಯಕ್ಕೆ ಕೊನೆಯೇ ಇಲ್ಲದಂತಾಗಿದೆ. ಹುತ್ತದಿಂದ ಹಾವನ್ನು ಹೊರಗೆಳೆಯಬೇಕಾದರೆ ಹೊಗೆ ಅಥವಾ ನೀರು ಹಾಕಬೇಕು, ಆಗ ಉಸಿರುಗಟ್ಟಿದಂತಾಗಿ ಅದು ಹೊರಬರುತ್ತದೆ. ಅಂತಹ ಕಠಿಣ ಕಾಯ್ದೆಯನ್ನು ನಾವೆಲ್ಲಿ ತಂದಿದ್ದೇವೆ? ಕೆಲವು ಕಾಯ್ದೆಗಳು ಇವೆಯಾದರೂ ದೌರ್ಜನ್ಯ ಎಸಗಿದ ಎಷ್ಟು ಮಂದಿ ಶಿಕ್ಷೆಗೆ ಒಳಗಾಗಿದ್ದಾರೆ? ವೈಯಕ್ತಿಕವಾಗಿ ನನಗೆ ದೌರ್ಜನ್ಯದ ಅನುಭವ ಆಗಿಲ್ಲ. ನನ್ನ ಬೆಳವಣಿಗೆಯಲ್ಲಿ ಹೆಚ್ಚು ಒತ್ತಾಸೆಯಾಗಿ ನಿಂತವರು ಸವರ್ಣೀಯರು. ಅದರ ನಡುವೆ ಅಸ್ಪೃಶ್ಯತೆಯನ್ನೂ ಅನುಭವಿಸಿದ್ದೇನೆ. ರಾಜಕೀಯ ಪ್ರವೇಶಕ್ಕೆ ಮುನ್ನ ಬಿಡದಿ ಸಮೀಪದ ಶಾಲೆಯೊಂದಕ್ಕೆ ಶಿಕ್ಷಕಿಯಾಗಿ ಸೇರಿದಾಗ, ಬಾಡಿಗೆಗೆ ಮನೆ ಕೊಡಲು ಒಪ್ಪಿದ್ದವರು ನಾನು ದಲಿತೆ ಎಂದು ತಿಳಿದು ಕೊನೇ ಕ್ಷಣದಲ್ಲಿ ಕೊಡಲು ನಿರಾಕರಿಸಿದರು. ಆದರೆ ಇಷ್ಟು ವರ್ಷಗಳಾದರೂ ಪರಿಸ್ಥಿತಿ ಸುಧಾರಿಸಿಲ್ಲ ಎಂಬುದು ಇನ್ನಷ್ಟು ನೋವು ಕೊಡುವ ಸಂಗತಿ. ನನ್ನ ಮಗಳು ನಯನಾ ಇತ್ತೀಚೆಗೆ ಮೂಡಿಗೆರೆಯಲ್ಲಿ ಬಾಡಿಗೆ ಮನೆ ಮಾಡಲು ಮುಂದಾದಾಗ, ಆಮೇಲೆ ತಿಳಿಸುತ್ತೇವೆ ಅಂದವರು ಏನೇನೋ ಸಬೂಬು ಹೇಳಿ ಕೊನೆಗೂ ಕೊಡಲೇ ಇಲ್ಲ. ಅದಕ್ಕಾಗಿ ಹೋದ ವರ್ಷ ಅಲ್ಲಿ ಹೊಸ ಮನೆಯನ್ನೇ ಕಟ್ಟಬೇಕಾಯಿತು.

ರಾಜಕಾರಣವೆಂದರೆ ಹೂವಿನ ಹಾಸಿಗೆಯಲ್ಲ, ಅದರಲ್ಲೂ ಮಹಿಳಾ ರಾಜಕಾರಣಿಗೆ ಹೆಚ್ಚು ಕಷ್ಟ ಎಂದಿದ್ದೀರಿ. ಎಷ್ಟೆಲ್ಲ ಒಳ್ಳೆಯ ಸ್ಥಾನಮಾನಗಳನ್ನು ನಿರ್ವಹಿಸಿದ ಮೇಲೂ ಹೀಗೆ ಅನಿಸಿದ್ದೇಕೆ?

ಮಹಿಳೆಯರಿಗೆ ಎಂಥದ್ದೇ ಸ್ಥಾನಮಾನ ಸಿಕ್ಕಿದರೂ ಆಕೆಯನ್ನು ಎರಡನೇ ದರ್ಜೆಯವಳನ್ನಾಗಿಯೇ ನಮ್ಮ ಪುರುಷ ನಾಯಕರು ಕಾಣುತ್ತಾರೆ. ಎಲ್ಲೋ ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಅಂಥವರ ನಾಯಕತ್ವವಷ್ಟೇ ಫಸ್ಟ್ ಕ್ಯಾಟಗರಿಯಲ್ಲಿ ಬರುತ್ತದೆ. ಅದೇ ನಮ್ಮಂಥವರಿಗೆ ಲೀಡರ್ಶಿಪ್ ಕೊಟ್ಟು ಪಕ್ಷ ನಡೆಸು ಎಂದು ಹೇಳುವಂಥ ಮಹನೀಯರು ಯಾರೂ ಇರುವುದಿಲ್ಲ. ರಾಜಕಾರಣದ ಇಚ್ಛಾಶಕ್ತಿ ಇದ್ದರೂ ನಮಗೆ ನಮ್ಮದೇ ಆದ ಆರ್ಥಿಕ ಮೂಲ ಇರುವುದಿಲ್ಲ. ಗಂಡ ಅಥವಾ ಯಾರೋ ಹಿತೈಷಿಗಳನ್ನೇ ಅವಲಂಬಿಸಬೇಕು. ಯಾವ ಗಂಡ ತಾನೇ ಹೆಂಡತಿಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಾನೆ?

ಪಕ್ಷದ ಸಂಘಟನೆಯಲ್ಲೂ ಹೆಣ್ಣುಮಕ್ಕಳಿಗೆ ತುಂಬಾ ಕಷ್ಟವೆನಿಸುವ ವಾತಾವರಣವೇ ಇದೆ. ಕಾರ್ಯಕರ್ತನೊಬ್ಬ ಅಸಮಾಧಾನಗೊಂಡಿದ್ದರೆ ಪುರುಷ ರಾಜಕಾರಣಿ ‘ಏನಣ್ಣ’ ಎಂದು ಅವನ ಹೆಗಲ ಮೇಲೆ ಕೈ ಹಾಕಿ ಸಮಾಧಾನಪಡಿಸಿ, ಅವನಿಗೆ ಪೆಗ್ ಹಾಕಿಸಿ, ಊಟ ಕೊಡಿಸಿ ಕಳಿಸುತ್ತಾರೆ. ನಾವು ಹೀಗೆ ಯಾವುದರಲ್ಲಿ ಕಾಂಪ್ರಮೈಸ್ ಮಾಡಬೇಕು? ನಾವೇನಿದ್ದರೂ ನಮ್ಮ ಕಷ್ಟ ಸುಖಗಳನ್ನು ಹಾಸಿಗೆ, ದಿಂಬಿಗೇ ಹೇಳಿಕೊಳ್ಳಬೇಕಷ್ಟೆ. ದಿನವಿಡೀ ನಾವು ಜನರ ನಡುವೆ ಇರಬೇಕಾದವರು. ಎಷ್ಟೋ ಬಾರಿ ಗಂಡ, ಮಕ್ಕಳ ಬಗ್ಗೆ ಗಮನಹರಿಸಲು ಆಗುವುದಿಲ್ಲ. ಅದು ಒಳಗೊಳಗೇ ನಮ್ಮನ್ನು ಚುಚ್ಚುತ್ತಿರುತ್ತದೆ. ಅದೇ ಒಬ್ಬ ಪುರುಷ ರಾಜಕಾರಣಿಗೆ ಇಂತಹ ಚಿಂತೆಗಳೆಲ್ಲಾ ಇರುವುದಿಲ್ಲ. ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಮಹಿಳೆಯರಿಗೆ
ಶೇ 33 ಮೀಸಲಾತಿ ಕಡ್ಡಾಯವಾಗಿ ಬರದಿದ್ದರೆ ನಾವು ‘ಒಗ್ಗರಣೆಗೆ ಬಳಸಿ ಬಿಸಾಡುವ ಕರಿಬೇವಿನ ಸೊಪ್ಪಿನಂತೆ’ ಆಗುತ್ತೇವೆ ಅಷ್ಟೆ. ನಮ್ಮ 28 ಜನ ಸಂಸದರಲ್ಲಿ ಈಗ ಶೋಭಾ ಬಿಟ್ಟರೆ ಬೇರೆ ಮಹಿಳೆ ಯಾರಿದ್ದಾರೆ? ಹಿಂದೆಯೂ ಚಂದ್ರಪ್ರಭಾ ಅರಸು, ತಾರಾದೇವಿ ಸೇರಿದಂತೆ ಆಗೊಬ್ಬರು ಈಗೊಬ್ಬರು ಇರುತ್ತಿದ್ದರು ಅಷ್ಟೆ.

ಮತದಾರರ ಬಗ್ಗೆ ನೀವು ತೀವ್ರ ಹತಾಶೆಗೊಂಡಿರುವುದು ಬಹಳಷ್ಟು ಕಡೆ ವ್ಯಕ್ತವಾಗಿದೆ...

ಹಿಂದೆಲ್ಲ ಚುನಾವಣಾ ಪ್ರಚಾರಕ್ಕೆ ತೆರಳಿದಾಗ ಜನ ಸಾಮೂಹಿಕ ಬಳಕೆಯ ಸೌಲಭ್ಯಗಳಿಗೆ ಬೇಡಿಕೆ ಇಡುತ್ತಿದ್ದರು. ಈಗ ವೈಯಕ್ತಿಕ ಬೇಡಿಕೆಗಳಿಗೇ ಆದ್ಯತೆ. ಬಿಜೆಪಿಯವರು ಅಷ್ಟು ಕೊಟ್ರು, ಜೆಡಿಎಸ್ನವರು ಇಷ್ಟು ಕೊಟ್ರು, ನೀವೆಷ್ಟು ಕೊಡುತ್ತೀರಿ ಎಂದೆಲ್ಲ ನೇರವಾಗಿಯೇ ಕೇಳುತ್ತಾರೆ. ಹೀಗೆ ನಮ್ಮನ್ನು ಹರಾಜಿಗೆ ಇಟ್ಟಂತೆ ಕೇಳುವುದು ಯಾವ ಧರ್ಮ? ಮತದಾರರು ಮೊದಲು ಸರಿ ಹೋಗಬೇಕು. ದುಡ್ಡು ಕೊಟ್ಟಿದ್ದೀನಿ, ನೀವು ವೋಟು ಹಾಕಿದ್ದೀರಿ ಎಂಬ ಮನೋಭಾವ ಸಹಜವಾಗಿಯೇ ರಾಜಕಾರಣಿಗಳಲ್ಲಿ ಬರುತ್ತದೆ. ಚುನಾವಣಾ ಪ್ರಚಾರಕ್ಕೆ ಹೋದಾಗ ಕಾಸು ಕೊಡುತ್ತಾರೇನೋ ಎಂದು ಜನ ನಮ್ಮ ಕೈ ನೋಡುವುದು ಬಹಳ ಹಿಂಸೆ ಅನಿಸುತ್ತದೆ. ಹೀಗಾಗಿ ಎಷ್ಟೋ ಬಾರಿ ಚುನಾವಣಾ ರಾಜಕೀಯವೇ ಬೇಡ ಅನಿಸಿದ್ದಿದೆ. ಇಂಥ ಪರಿಸ್ಥಿತಿ ಸುಧಾರಿಸಬೇಕಾದರೆ ಚುನಾವಣೆಯನ್ನು ಸರ್ಕಾರವೇ ನಡೆಸಬೇಕು.

ಪುತ್ರಿಯನ್ನು ರಾಜಕಾರಣಕ್ಕೆ ತರಲು ಪ್ರಯತ್ನಿಸುತ್ತಿದ್ದೀರಿ. ಕುಟುಂಬ ರಾಜಕಾರಣಕ್ಕೆ ಒತ್ತು ಕೊಟ್ಟಂತೆ ಆಗಲಿಲ್ಲವೇ?

ಕುಟುಂಬ ರಾಜಕಾರಣ ಎಲ್ಲಿ ಇಲ್ಲ? ದೇವೇಗೌಡರ ಕುಟುಂಬದಲ್ಲಿ ಇಲ್ಲವೇ? ಜಗದೀಶ ಶೆಟ್ಟರ್, ಯಡಿಯೂರಪ್ಪ ಅವರ ಮಕ್ಕಳೆಲ್ಲ ಬಂದಿದ್ದಾರೆ. ಮೋದಿ ಅವರಿಗೆ ಕುಟುಂಬ ಇದ್ದಿದ್ದರೆ ಅವರ ಮಗನೋ ಮಗಳೋ ಬರುತ್ತಿರಲಿಲ್ಲವೇ? ಅಮಿತ್ ಶಾ ಅವರ ಮಗ ರಾಜಕಾರಣ ಮಾಡುತ್ತಿಲ್ಲವೇ? ನನ್ನ ಮೂವರು ಮಕ್ಕಳಲ್ಲಿ ಗಂಡು ಮಕ್ಕಳಿಗೆ ರಾಜಕಾರಣದಲ್ಲಿ ಹೆಚ್ಚು ಆಸಕ್ತಿ ಇಲ್ಲ. ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಕಾನೂನು ಪದವಿ ಪಡೆದಿರುವ ಮಗಳಿಗೆ ಆಸಕ್ತಿ ಇದೆ. ಮಹಿಳಾ ಕಾಂಗ್ರೆಸ್ ಸೆಕ್ರೆಟರಿಯಾಗಿ ಬದ್ಧತೆಯಿಂದ ರಾಜಕಾರಣದಲ್ಲಿ ತೊಡಗಿಕೊಂಡಿದ್ದಾಳೆ. ನಾವು ರಾಜಕಾರಣದಲ್ಲಿ ಸಕ್ರಿಯರಾಗುವಲ್ಲಿ ಮನೆಯವರ ತ್ಯಾಗವೂ ಇರುತ್ತದಲ್ಲವೇ? ಹಾಗಿದ್ದಮೇಲೆ ಅವರು ಯಾಕೆ ರಾಜಕಾರಣಕ್ಕೆ ಬರಬಾರದು?

(ಬಿದಿರು ನೀನ್ಯಾರಿಗಲ್ಲದವಳು ಕೃತಿಯನ್ನು ವಿಕಾಸ ಪ್ರಕಾಶನ ಪ್ರಕಟಿಸಿದೆ. ಸಂಪರ್ಕ: 9900095204)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.