ಸೋಮವಾರ, 23 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು-29: ತಾಯಿಯೇ ದೇವರು!

Published : 23 ಸೆಪ್ಟೆಂಬರ್ 2024, 21:08 IST
Last Updated : 23 ಸೆಪ್ಟೆಂಬರ್ 2024, 21:08 IST
ಫಾಲೋ ಮಾಡಿ
Comments

ತಾಯಿಗಿಂತ ದೇವರಿಲ್ಲ ಅಂತ ಯಾಕೆ ಹೇಳ್ತಾರೆ? ಯಾಕೆ ಅವಳಿಗೆ ಅಷ್ಟು ದೊಡ್ಡ ಸ್ಥಾನ? ನೀವು ಪಂಚತಾರಾ ಹೊಟೇಲ್‌ಗೆ ಹೋಗ್ತೀರಿ. ವೇಟರ್ ಬಂದು ಮೆನು ಕೊಡ್ತಾನ. ಅಲ್ಲಿ ನಮಗೆ ಬೇಕಾದ್ದು ಬೇಡಾದ್ದು ಎಲ್ಲಾ ಇರ್ತದ. ಸಾವಿರಾರು ರೂಪಾಯಿ ಖರ್ಚು ಮಾಡಿ ಊಟ ಮಾಡಿದರೂ ತೃಪ್ತಿ ಸಿಗೋದಿಲ್ಲ. ಮನೆಯಲ್ಲಿ ತಾಯಿ ಕಟಿ ರೊಟ್ಟಿ ಚಟ್ನಿ ಹಾಕಿ ಉಣಿಸ್ತಾಳಲ್ಲ ಅದು ಹೆಚ್ಚು ರುಚಿ. ಯಾಕಂದರೆ ಹೊಟೇಲ್‌ನವನ ಕಣ್ಣು ನಿಮ್ಮ ಪಾಕೇಟ್ ಮೇಲಿತ್ತು. ಅಮ್ಮನ ದೃಷ್ಟಿ ಮಗ ಉಂಡು ದೊಡ್ಡವನಾಗಬೇಕು ಅಂತಿತ್ತು ಅದಕ್ಕ. ರೊಟ್ಟಿ ಕಠಿಣ ಇತ್ತು. ಆದರೆ ಅಮ್ಮನ ಹೃದಯ ಮೃದುವಾಗಿತ್ತು. ಪ್ರೇಮದ ಹೃದಯ ಇತ್ತು. ನೀವು ದುಡಿದು ಮನೆಗೆ ಬಂದರೆ ಮಗ ‘ನನಗೆ ಏನ್ ತಂದಿ’ ಅಂತ ಕೇಳ್ತಾನ. ಹೆಂಡತಿ ’ಎಷ್ಟು ಗಳಿಸೀರಿ ಇವತ್ತು ಹೇಳಿ’ ಅಂತಾಳೆ. ಆದರೆ ತಾಯಿ ಮಾತ್ರ ‘ಮಗ ಇವತ್ತು ಏನ್ ಉಂಡಿ’ ಅಂತ ಕೇಳ್ತಾಳೆ. ಹಾಗೆ ಕೇಳುವವಳು ತಾಯಿ ಮಾತ್ರ.

ಒಂದು ಕಾಡಿತ್ತು. ಅಲ್ಲೊಂದು ಸಂಗೀತ ಆಶ್ರಮ. ಅದರ ಬದಿಯಲ್ಲಿ ಜುಳುಜುಳು ಹರಿಯುವ ನದಿ. ದಡದ ಮೇಲೆ ತಬಲ, ಪಿಯಾನೋ, ವಯಲಿನ್, ಮೃದಂಗ ಕಲಿಯೋರು ಇದ್ದರು. ಆ ಕಾಡಿಗೆ ಒಂದಿಷ್ಟು ಹುಡುಗರು ಕುರಿ ಮೇಯಿಸಲು ಬರುತ್ತಿದ್ದರು. ಆಶ್ರಮದ ಹುಡುಗರು ಒಂದೊಂದು ಗಿಡದ ಕೆಳಗೆ ಕುಳಿತು ಸಂಗೀತ ಅಭ್ಯಾಸ ಮಾಡುತ್ತಿದ್ದರು. ಆ ಕುರಿ ಮೇಯಿಸೋರೂ ಅಲ್ಲಿಗೇ ಬರುತ್ತಿದ್ದರು. ಒಬ್ಬ ಹುಡುಗ ಮೃದಂಗ ಬಾರಿಸುತ್ತಿದ್ದ. ಕುರಿ ಹಿಂಡಿನಲ್ಲಿದ್ದ ಮರಿ ಕುರಿಯೊಂದು ಓಡೋಡಿ ಇವನ ಹತ್ತಿರ ಬರುತ್ತಿತ್ತಂತೆ. ಮೃದಂಗದ ಶಬ್ದಕ್ಕೆ ಗೋಣು ಅಲ್ಲಾಡಿಸುತ್ತಿತ್ತಂತೆ. ಹುಡುಗ ಅಭ್ಯಾಸ ಮುಗಿಸಿ ಒಳಗೆ ಹೋದರೆ ಕುರಿಮರಿ ಹಿಂಡಿನ ಕಡೆಗೆ ಹೋಗುತ್ತಿತ್ತು. ಹೀಗೆ ಪ್ರತಿ ದಿನ ನಡೀತಿತ್ತು. ಒಂದಿನ ಹುಡುಗ ಕುರಿ ಮರಿಗೆ ಯಾಕೆ ಹೀಂಗೆ ಮಾಡ್ತಿ ಅಂತ ಕೇಳಿದ. ಅದಕ್ಕೆ
ಕುರಿಮರಿ ‘ನೀನು ಮೃದಂಗ ಬಾರಿಸಿದ ಶಬ್ದ ನನ್ನ ಕಿವಿಯ ಮೇಲೆ ಬಿದ್ದಾಗ ನನ್ನ ಹೃದಯದಲ್ಲಿ ಪ್ರೇಮದ ತರಂಗಗಳು ಏಳಲು ಶುರುವಾಗ್ತವ’ ಎಂದು ಹೇಳಿತು.

‘ನಾನು ಮೃದಂಗ ಬಾರಿಸುವುದಕ್ಕೂ ನಿನ್ನ ಹೃದಯದಲ್ಲಿ ಪ್ರೇಮದ ತರಂಗ ಏಳುವುದಕ್ಕೂ ಏನು ಸಂಬಂಧ’ ಎಂದು ಕೇಳಿದ ಹುಡುಗ. ‘ನನ್ನ ಹೃದಯದಲ್ಲಿ ಪ್ರೇಮದ ತರಂಗ ಯಾಕೆ ಏಳ್ತಾವ ಅಂದರ ನಿನ್ನ ಮೃದಂಗ ತಯಾರಾಗಿದ್ದು ನನ್ನ ತಾಯಿಯ ಚರ್ಮದಿಂದ. ಅದಕ್ಕೆ ಹಾಂಗ. ತಾಯಿ ಇರಲಿಕ್ಕಿಲ್ಲ. ಆದರೆ ಆಕಿ ಪ್ರೇಮ ಬಿಟ್ಟು ಹೋಗ್ಯಾಳ’ ಅಂತು ಕುರಿಮರಿ. ಜಗತ್ತಿನಲ್ಲಿ ಪ್ರೇಮ ದೊಡ್ಡದು. ತಾಯಿಯ ಪ್ರೇಮ ಇನ್ನೂ ದೊಡ್ಡದು. ವಚನಗಳಲ್ಲಿ ಸರ್ವಾಂಗ ಲಿಂಗಿ ಎಂಬ ಶಬ್ದ ಬರ್ತದ. ಸರ್ವಾಂಗ ಲಿಂಗಿ ಅಂದರ ಒಂದೊಂದು ಅಂಗಕ್ಕೂ ಸಂಬಂಧ ಏರ್ಪಡಿಸೋದು. ಅಡುಗೆ ಮಾಡುತ್ತಿದ್ದಾಗ ಅಂಗಳದಲ್ಲಿ ಮಗು ಬಿದ್ದು ಅವ್ವಾ ಎಂದರೆ ಎಲ್ಲ ಕೆಲಸ ಬಿಟ್ಟು ಓಡಿ ಬಂದು ಮಗುವನ್ನು ಎದೆಗೆ ಒತ್ತಿಕೊಂಡು ಉಪಚರಿಸ್ತಾಳಲ್ಲ ತಾಯಿ. ತಾಯಿಯ ಯಾವ ಅಂಗದಲ್ಲಿ ಪ್ರೇಮ ಹರಿದಿಲ್ಲ ಹೇಳಿ? ತಾಯಿಯ ಪ್ರೇಮ ಸರ್ವಾಂಗ ಲಿಂಗಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT