ಗುರುವಾರ, 26 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು–32: ಪವಿತ್ರ ಪ್ರೇಮ

Published : 26 ಸೆಪ್ಟೆಂಬರ್ 2024, 20:41 IST
Last Updated : 26 ಸೆಪ್ಟೆಂಬರ್ 2024, 20:41 IST
ಫಾಲೋ ಮಾಡಿ
Comments

ಸಂಬಂಧಗಳು ಯಾಕೆ ಕೆಡತಾವ? ಈ ಪ್ರಶ್ನೆಗೆ ಉತ್ತರ ಬೇಕು ಅಂದರ ಸಂಬಂಧಗಳು ಯಾಕೆ ಕೂಡೈತಿ ಅನ್ನೋದನ್ನ ಮೊದಲು ತಿಳಕೋಬೇಕು. ಉದ್ದೇಶ ಇಟಕೊಂಡು ಕೂಡೈತಿ, ಉದ್ದೇಶ ಈಡೇರಿಲ್ಲ ಅಂದರ ದೂರವಾಗತೈತಿ ಅಷ್ಟೆ. ವಸಂತ ಮಾಸ ಬಂದಾಗ
ಕೋಗಿಲೆ ಹಾಡತೈತಿ. ಕೋಗಿಲೆಯ ಹಾಡನ್ನು ಕೇಳಿ ಮಾವಿನ ಗಿಡ ತನ್ನ ಚಿಗುರನ್ನೇ ನೀಡತೈತಿ. ಚಿಗುರನ್ನು ನೀಡಿದ ಮರ, ‘ಎಲ್ಲಿ ಎರಡು ರೂಪಾಯಿ ತಾ’ ಎಂದು ಕೇಳಿಲ್ಲ. ನಾವು ಮನೆ ಕಟ್ಟಿಸಿದರೆ ಇದಕ್ಕಿಷ್ಟು ಬಾಡಿಗೆ ಕೊಡಿ ಅಂತೀವಿ. ಆದರೆ ನಿಸರ್ಗದಲ್ಲಿ
ಹಾಂಗಿಲ್ಲ. ಎಷ್ಟು ಪಕ್ಷಿಗಳು ಗಿಡಗಳ ಮೇಲೆ ಗೂಡು ಕಟ್ಯಾವ, ಯಾವುದಾದರೂ ಗಿಡ ಬಾಡಿಗೆ ಕೇಳೈತೇನು? ಅದು ಪವಿತ್ರ ಪ್ರೇಮ.

ಏಳನೇ ಶತಮಾನದಲ್ಲಿ ಅರಬ್ ದೇಶದಲ್ಲಿ ಲೈಲಾ ಮಜ್ನು ಅಂತ ಪ್ರೇಮಿಗಳಿದ್ದರು. ಲೈಲಾನ್ನ ಮಜ್ನು ಬಹಳ ಪ್ರೀತಿ ಮಾಡ್ತಿದ್ದ. ಆಕಿ ಮೇಲೆ ಕವನ ಬರೀತಿದ್ದ. ಕವನ ಬರೆದರೆ ಹೊಟ್ಟೆ ತುಂಬೋದಿಲ್ಲ ಅಂತ ಲೈಲಾನ ಅಪ್ಪ ಆಕಿಯನ್ನು ಬೇರೆ ಹುಡುಗನೊಂದಿಗೆ ಮದುವೆ ಮಾಡಿದ. ಮಜ್ನುಗೆ ಹುಚ್ಚುಹಿಡದಂಗೆ ಆತು. ಆ ದೇಶದ ದೊರೆ ಇವನ ಸ್ನೇಹಿತ. ಅವ ಮಜ್ನು ಕರೆದು ‘ನಾನು ನಿನ್ನ ಲೈಲಾನ್ನ ನೋಡೇನಿ, ಆಕಿ ಏನು ಅಷ್ಟು ಚಲೋ ಇಲ್ಲ. ಈ ದೇಶದ ಹತ್ತು ಸುಂದರಿಯರನ್ನು ಕರೆಸ್ತೀನಿ, ಅವರಲ್ಲಿ ಯಾರಿಗಾದರೂ ಮದುವ್ಯಾಗು’ ಎಂದ. ಅದಕ್ಕೆ ಮಜ್ನು ‘ನೋಡು, ಲೈಲಾ ಸುಂದರವಾಗಿ ಕಾಣಬೇಕಾದರೆ ಮಹಾರಾಜರ ಕಣ್ಣಿಂದ ನೋಡಬಾರದು, ಮಜ್ನು ಕಣ್ಣಿಂದಲೇ ನೋಡಬೇಕು’ ಎಂದು ಹೇಳಿದ. 

ಪ್ರೇಮ ಕುರುಡು ಅಂತಾರ. ಮೊದಲು ಮುಖಾಮುಖಿ, ನಂತರ ಚಂದ್ರಮುಖಿ, ಆ ಮೇಲೆ ಕಮಲಮುಖಿ, ಆ ನಂತರ ಸೂರ್ಯಮುಖಿ, ಕೊನೆಗೆ ಜ್ವಾಲಾಮುಖಿ ಇಷ್ಟ. ಪ್ರೇಮ ಕುರುಡು ಅಂತ ಯಾಕಂತಾರ ಅಂದರ ನಮ್ಮ ಕನಸುಗಳನ್ನು ಅದು ಮರೆಸುತ್ತದೆ. ತಂದೆ ತಾಯಿ ತಾವು ತಂಗಳು ಉಂಡು ನಮ್ಮನ್ನು ಓದಿಸ್ತಿದ್ದಾರೆ ಎನ್ನುವುದನ್ನು ಮರೆಸಿಬಿಡುತ್ತದೆ.

ಒಂದು ಸರೋವರ ಇತ್ತು. ಅದರಲ್ಲಿ ಒಂದು ಕಮಲ ಅರಳಿತ್ತು. ದುಂಬಿಯೊಂದು ಬಂದು ಕಮಲದ ಮಕರಂದ ಹೀರುತ್ತಿತ್ತು. ಮಕರಂದ ಹೀರುವಲ್ಲಿ ಅದು ಎಷ್ಟು ಮಗ್ನ ಆಗಿತ್ತೆಂದರೆ ಅದಕ್ಕೆ ಸೂರ್ಯಾಸ್ತವಾಗಿದ್ದೇ ಗೊತ್ತಾಗಲಿಲ್ಲ. ಸೂರ್ಯ ಮುಳುಗಿದಾಗ
ಕಮಲ ಮುದುಡಿತು. ಅವಾಗ ದುಂಬಿಗೆ ಎಚ್ಚರವಾಯಿತು. ‘ಅಯ್ಯೋ ಸಿಕ್ಕಿಬಿದ್ದೆನಲ್ಲ’ ಎಂದುಕೊಂಡಿತು. ತಕ್ಷಣವೇ ಸಾವರಿಸಿಕೊಂಡು ‘ಪರವಾಗಿಲ್ಲ ಒಂದು ರಾತ್ರಿ ತಾನೆ, ನಾಳೆ ಸೂರ್ಯೋದಯವಾದಾಗ ಕಮಲ ಮತ್ತೆ ಅರಳುತ್ತದೆ. ಆಗ ಹೋದರಾಯಿತು’ ಎಂದು ಸಮಾಧಾನಪಟ್ಟುಕೊಂಡಿತು. ಆದರ, ರಾತ್ರಿ ಚಂದ್ರನ ಬೆಳಕಲ್ಲಿ ಆನೆಗಳು ಸರೋವರಕ್ಕೆ ಬಂದು ನೀರಾಟವಾಡಿದವು. ಆನೆಯ ಕಾಲಿಗೆ ಸಿಲುಕಿದ ಕಮಲ ಚೂರಾಯಿತು. ಅದರೊಂದಿಗೆ ದುಂಬಿ ಕೂಡ ಕಾಲನ ಹೊಡೆತಕ್ಕೆ ಸಿಲುಕಿ ನಾಶವಾಯಿತು. ನಾವೂ ಕೂಡ ಹಾಂಗೆ, ‘ನಾಳೆ ನೋಡೋಣ, ನಾಳೆ ಮಾಡೋಣ’ ಎಂದುಕೊಳ್ತೀವಿ. ಆದರೆ ಕಾಲನೆಂಬ ಆನೆ ಬಹಳ ಸಮೀಪ ಐತಿ ಎನ್ನೋದನ್ನು ಮರೆತುಬಿಡುತ್ತೇವೆ.

ತುಂಬಾ ಜನ ಪ್ರೇಮದಲ್ಲಿ ಬಿದ್ದಿದ್ದೇನೆ ಎನ್ನುತ್ತಾರೆ. ಬಿದ್ದರೆ ಅದು ಪ್ರೇಮ ಅಲ್ಲ. ಪ್ರೇಮದೊಳಗೆ ಬೀಳಬಾರದು, ಏಳಬೇಕು. ಅದು ಪ್ರೇಮ. ಯಾವುದರಲ್ಲಿ ವ್ಯಾವಹಾರಿಕ ಲಾಭದ ದೃಷ್ಟಿ ಇಲ್ಲವೋ, ವಿಷಯಗಳ ಆಕರ್ಷಣೆ ಇಲ್ಲವೋ ಅದು ಪವಿತ್ರ ಪ್ರೇಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT