ಅಸ್ಸಾಂ ರಾಜ್ಯದ ಸರ್ಕಾರಿ ನೌಕರರಿಗೆ ಈ ವರ್ಷದ ನವೆಂಬರ್ 6 ಮತ್ತು 8ರಂದು ಎರಡು ದಿನ ವಿಶೇಷ ರಜೆ ಸಿಗಲಿದೆ. 7ರಂದು ಛತ್ ಪೂಜಾ ಹಬ್ಬ ಹಾಗೂ 9ರಂದು ಎರಡನೇ ಶನಿವಾರದ ಪ್ರಯುಕ್ತ ರಜೆ. 10ನೇ ತಾರೀಖು ಭಾನುವಾರ. ಒಟ್ಟು ಐದು ದಿನಗಳ ರಜೆ. ಈ ವಿಶೇಷ ರಜೆ ವೈಯಕ್ತಿಕ ಸಂತೋಷಕ್ಕಾಗಿ ಅಲ್ಲ. ನೌಕರ ತನ್ನ ಪೋಷಕರು ಅಥವಾ ಅತ್ತೆ–ಮಾವನ ಜೊತೆ ಸಮಯ ಕಳೆಯಲೆಂದು ರಜೆ ನೀಡಲಾಗಿದೆ. ಅಪ್ಪ–ಅಮ್ಮ ಅಥವಾ ಅತ್ತೆ–ಮಾವ ಇಲ್ಲದ ನೌಕರರಿಗೆ ಈ ರಜೆ ಅನ್ವಯವಾಗದು ಎಂದು ಸರ್ಕಾರ ಆದೇಶ ಹೊರಡಿಸಿದೆ.

ಬಹುಶಃ ಈ ಆದೇಶ ಕೆಲವರಿಗೆ ವಿಚಿತ್ರ ಅನ್ನಿಸಬಹುದು. ನಮ್ಮೂರಿನ ಒಂದು ಪ್ರಕರಣ ಹೀಗಿದೆ. ಬೆಂಗಳೂರಿನಲ್ಲಿ ನೌಕರಿಯಲ್ಲಿರುವ ಮಗ ಊರಿನ ಮನೆಗೆ ಬಂದು ಎರಡು ವರ್ಷದ ಮೇಲಾಗಿದೆ. ಒಬ್ಬನೇ ಮಗ. ಅವನು ಇಂದು ಬರಬಹುದು, ನಾಳೆ ಬರಬಹುದು ಎಂದು ಪೋಷಕರು ಕಾದಿದ್ದಾರೆ. ತಿಂಗಳಿಗೆ ಸರಿಯಾಗಿ ಅಪ್ಪ, ಅಮ್ಮನ ಖಾತೆಗೆ ಹಣ ಹಾಕುತ್ತಾನೆ. ಅವನು ರಜೆ ದಿನಗಳಲ್ಲಿ ಎಲ್ಲೆಲ್ಲೋ ಸುತ್ತಾಡಿದ ಫೋಟೊಗಳನ್ನು ಜಾಲತಾಣದಲ್ಲಿ ಹಂಚಿಕೊಳ್ಳುತ್ತಾನೆ. ಆದರೆ ತನ್ನೂರಿಗೆ ಮಾತ್ರ ಬಂದಿಲ್ಲ. ಇತ್ತೀಚೆಗೆ ಆ ಪೋಷಕರು ಅವನ ಹಣವನ್ನೂ ಬಳಸುತ್ತಿಲ್ಲ. ಇದು, ಈ ಒಂದು ಕುಟುಂಬದ ಸಂಕಟ ಮಾತ್ರವಲ್ಲ. ಇಂತಹ ಅನೇಕ ನಿದರ್ಶನಗಳು ನಮಗೆ ಕಾಣಸಿಗುತ್ತವೆ.

ಕೆಲವು ನೌಕರರು ಸದಾ ಕ್ಯಾಲೆಂಡರ್ ಹಿಡಿದು ಕೂತಿರುತ್ತಾರೆ. ಒಂದೆರಡು ದಿನ ರಜೆ ಸಿಕ್ಕಿದ್ದೇ ತಡ, ಫಾಲ್ಸು, ಕಾಡು, ಹೋಂ ಸ್ಟೇ ಎಂದು ಹುಡುಕಿಕೊಂಡು ಹೊರಟುಬಿಡುತ್ತಾರೆ. ಅಲೆದು, ತಿಂದು, ಕುಣಿದು... ಏನನ್ನೋ ಪಡೆದುಕೊಂಡೆವು ಅಂದುಕೊಂಡು ಹಿಂದಿರುಗುತ್ತಾರೆ (ಮತ್ತೆಲ್ಲೋ ಇನ್ನೇನನ್ನೋ ಕಳೆದುಕೊಂಡಿರುವುದು ಅವರ ಅರಿವಿಗೇ ಬಂದಿರುವುದಿಲ್ಲ). ಊರಿನಲ್ಲಿ ಮಗ ನಾಳೆ ಬರಬಹುದು, ಮುಂದಿನ ವಾರ ಬರಬಹುದು ಎಂದು ದಾರಿ ಕಾಯುತ್ತಾ ಕುಳಿತ ಪೋಷಕರ ಕಣ್ಣುಗಳು ಮಬ್ಬಾಗುತ್ತವೆ. ಆದರೆ ಅವರು ಬರುವುದು ಹಬ್ಬಕ್ಕೆ ಮಾತ್ರ. ತಮ್ಮ ಮನೆಗೆ ತಾವೇ ನೆಂಟರಂತೆ ಬಂದು ಹೋಗುವಂತಹ ದುರ್ದೈವದ ಸಂಗತಿ ಮತ್ತೊಂದಿಲ್ಲ.

ನಾಲ್ಕು ದಿನಗಳಾದರೂ ಮಕ್ಕಳು ಹೆತ್ತವರ ಜೊತೆ ಇರಲಿ ಎಂದು ತಾಕೀತು ಮಾಡಿರುವ ಅಸ್ಸಾಂ ಸರ್ಕಾರದ ಈ ನಡೆ ಮೆಚ್ಚುವಂತಹದ್ದು. ಕುಟುಂಬದೊಂದಿಗೆ ಕಾಲ ಕಳೆಯುವುದರಿಂದ ಕುಟುಂಬಕ್ಕೆ ತಾನೇನೋ ಕೊಟ್ಟುಬಿಡುತ್ತೇನೆ ಎಂದು ನಾವು ಭಾವಿಸಬಾರದು. ಅದರಿಂದ ನಾವು ಕುಟುಂಬಕ್ಕೆ ಕೊಡುವುದಕ್ಕಿಂತ ಪಡೆಯುವುದೇ ಹೆಚ್ಚು. ನಿರೂಪಕಿ ಓಪ್ರಾ ವಿನ್ಫ್ರೇ ‘ನನ್ನ ಸಾಧನೆ ಮತ್ತಷ್ಟು ಚುರುಕಾಗುತ್ತಿರುವುದು ನನ್ನ ಮನೆಯಿಂದ, ನನ್ನ ಅಜ್ಜಿಯಿಂದ. ನಾನು ಬಿಡುವುದಾಗಲೆಲ್ಲಾ ಅಲ್ಲಿರುತ್ತೇನೆ ಮತ್ತು ಅಲ್ಲಿಂದ ಹೊಸತಾಗಿ ಎದ್ದು ಬರುತ್ತೇನೆ’ ಎಂದಿದ್ದಾರೆ.

ಹೋಂ ಸ್ಟೇನಲ್ಲಿ ಉಳಿದು ತಿಂದು, ಬೆಟ್ಟದಲ್ಲಿ ಸುತ್ತಾಡಿ, ನದಿಯಲ್ಲಿ ಈಜಿ, ಕಡಲಿನಲ್ಲಿ ಮುಳುಗಿ ಬಂದಾಗ ನಮಗೆ ದತ್ತಕವಾಗುವ ಹೊಸತನಕ್ಕಿಂತ ನೂರು ಪಟ್ಟು ಹೆಚ್ಚು ಹೊಸತನ ಹೆತ್ತವರ ಸಖ್ಯದಿಂದ ಸಿಗುತ್ತದೆ. ನಾವು ಅವರನ್ನು ಕಾಳಜಿ ಮಾಡಿ ಹೊರಡುವಾಗ ಅವರ ಕಣ್ಣುಗಳಲ್ಲಿ ಕಾಣುವ ಬೆಳಕು ನಮ್ಮನ್ನು ಮತ್ತೆ ಮತ್ತೆ ಹೊಸತಾಗಿಸುತ್ತದೆ. ಸದಾ ನಮ್ಮನ್ನು ಪೊರೆಯುತ್ತದೆ.

ಎರಡು ಸಾವಿರ ರೂಪಾಯಿ ಗೃಹಲಕ್ಷ್ಮಿ ಹಣ, ವೃದ್ಧಾಪ್ಯ ವೇತನ, ಉಚಿತ ಅಕ್ಕಿ, ಗೋಧಿ ಸಿಗುತ್ತದೆ. ಇಳಿವಯಸ್ಸಿನಲ್ಲಿ ಬದುಕುವುದಕ್ಕೆ ಇಷ್ಟು ಸಾಕು. ಆದರೆ ತನ್ನ ಮಗನನ್ನು ತಾನು ನೋಡಲು ಮತ್ತು ಅವನು ತನ್ನನ್ನು ನೋಡಲು ಸರ್ಕಾರದ ಅಂತಹದ್ದೊಂದು ಸ್ಕೀಮಿಗೆ ಕಾಯಬೇಕೋ ಏನೋ ಎನ್ನುವ ಅರ್ಥ ಬರುವಂತೆ ಮೊನ್ನೆ ಅಜ್ಜಿಯೊಬ್ಬರು ಮಾತನಾಡುತ್ತಿದ್ದರು.

ಇಳಿವಯಸ್ಸಿನಲ್ಲಿ ಹೆತ್ತವರಿಗೆ ಮಕ್ಕಳ ಅವಶ್ಯಕತೆ ಹೆಚ್ಚಾಗಿರುತ್ತದೆ. ಅವರು ಹಣ ಕೊಡಲಿ ಎಂದಲ್ಲ. ಬೇಕಾದದ್ದು ತಂದು ಸುರಿಯಲಿ ಎಂದಲ್ಲ. ತಮ್ಮನ್ನು ಮಹಲಿನಲ್ಲಿ ಇಡಲಿ ಎಂದಲ್ಲ. ಮಕ್ಕಳು ಮಾತಿಗೆ ಬೇಕು, ಮೌನಕ್ಕೂ ಬೇಕು. ಅವರೊಂದಿಗೆ ಕೂತು ನಾಲ್ಕು ತುತ್ತು ಉಣ್ಣಲು ಬೇಕು. ‘ಔಷಧಿ ತಗೊಂಡ್ರಾ’ ಎಂದು ಕೇಳಲು ಬೇಕು. ಮೊಮ್ಮಕ್ಕಳು ತೊಡೆಯ ಮೇಲೆ ಆಡಲು ಬೇಕು.

ಕುಟುಂಬ, ಹೆತ್ತವರ ಒಡನಾಟ ನಮ್ಮಲ್ಲಿ ಒಂದು ಮದ್ದಿನಂತೆ ಕೆಲಸ ಮಾಡುತ್ತದೆ. ಅದು ಎಲ್ಲಾ ದುಗುಡಗಳನ್ನು ಕಳಚಿ ಎಸೆಯುತ್ತದೆ. ಅದೊಂದು ಭದ್ರತಾ ಭಾವ. ಅಲ್ಲಿ ನಾವು ನಮ್ಮನ್ನು ಕಂಡುಕೊಳ್ಳುತ್ತೇವೆ. ಮನುಷ್ಯ ಮತ್ತೆ ಮತ್ತೆ ಮನುಷ್ಯನಾಗುವ ಪರಿ ಅದು. ಮನುಷ್ಯನ ಇಂದಿನ ಕೆಲವು ಅಪಸವ್ಯ ಮತ್ತು ವಿಚಿತ್ರ ವರ್ತನೆಗಳಿಗೆ ಅವನು ಕುಟುಂಬದೊಂದಿಗೆ ದೂರ ಇರುವುದೇ ಕಾರಣವೇನೊ ಅನಿಸುತ್ತದೆ.

ಮನುಷ್ಯ ದುಡಿಯಬೇಕು ನಿಜ. ಸತತವಾಗಿ ದುಡಿಯಬೇಕು ಎನ್ನುವುದೂ ಸರಿ. ಆದರೆ ನಮ್ಮವರನ್ನೇ ನಾವು ಮರೆಯುವಷ್ಟಲ್ಲ. ಬದುಕು ಎಂಬುದು ಒಂದು ಬಂಧ. ಅದು ಎಲ್ಲರೊಳಗೂ ಹೆಣೆದುಕೊಂಡಿದೆ. ಒಂದು ನೂಲು ಹರಿದರೂ ದೊಗಳೆ ದೊಗಳೆ. ಯಾವ ಹಣದ ತೇಪೆಯೂ ಅದಕ್ಕೆ ಹೊಂದುವುದಿಲ್ಲ.

ಹೆತ್ತವರನ್ನು ನೋಡಿಕೊಳ್ಳದ ಸರ್ಕಾರಿ ನೌಕರನ ವೇತನವನ್ನು ಕಡಿತಗೊಳಿಸಿ, ಆ ಹಣವನ್ನು ಹೆತ್ತವರಿಗೆ ನೀಡಬೇಕಾಗುತ್ತದೆ ಎಂದು ಹಿಂದೊಮ್ಮೆ ನಮ್ಮ ರಾಜ್ಯದಲ್ಲೂ ಆದೇಶವಾಗಿದೆ. ಹೆತ್ತವರನ್ನು ನೋಡಿಕೊಳ್ಳಲು ಸಹ ಸರ್ಕಾರಿ ಆದೇಶಗಳು ಬರುವಂತೆ ಆಗಬೇಕೆ?!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.