–ಪ. ರಾಮಕೃಷ್ಣ ಶಾಸ್ತ್ರಿ

ವಿಧಾನಸೌಧದಲ್ಲಿ ಕುಳಿತವರು ಒಂದು ಸಲ ಹಳ್ಳಿಗಳಿಗೆ ಹೋಗಿ ನೋಡುವುದು ಒಳ್ಳೆಯದು. ಅಲ್ಲಿ ವೃದ್ಧರನ್ನು, ದೀನ ದುರ್ಬಲರನ್ನು ಕಾಡುತ್ತಿದೆ ‘ಲಿಂಕ್’ ಎಂಬ ಸಮಸ್ಯೆ. ಅನಕ್ಷರಸ್ಥರು, ಕಚೇರಿಗಳಿಂದ ದೂರದ ಬೆಂಗಾಡಿನಲ್ಲಿ ನೆಲೆಸಿದವರು ನೆಲೆಗಾಣದ ಇದರ ಪರಿಹಾರಕ್ಕೆ ನಿತ್ಯವೂ ಒದ್ದಾಡುವಂತಾಗಿದೆ.

ಇದೇನೂ ಸಾಂಕ್ರಾಮಿಕ ರೋಗವಲ್ಲ, ಯಾವುದೋ ದೇಶದಿಂದ ಬಂದ ಪ್ರಳಯಕಾರಿ ವೈರಸ್ ಅಲ್ಲವೇ ಅಲ್ಲ. ಸರ್ಕಾರೀಕೃತ ಶೋಷಣೆಯ ಒಂದು ಮುಖವಾಗಿ ಗ್ರಾಮೀಣ ಜನರನ್ನು ಬಾಧಿಸುತ್ತಿರುವ ಆಧಾರ್ ಚೀಟಿಯ ಜೋಡಣೆ ಸಮಸ್ಯೆ. ನಿಮ್ಮ ಫೋನ್ ನಂಬರ್ ಜೋಡಿಸಿ, ಪ್ಯಾನ್‌ಕಾರ್ಡ್ ಜೋಡಿಸಿ, ಇದೆರಡನ್ನೂ ಬ್ಯಾಂಕ್ ಖಾತೆಗೆ ಜೋಡಿಸಿ, ಪಹಣಿ ಪತ್ರಕ್ಕೆ ಜೋಡಿಸಿ... ಹೀಗೆ ಪ್ರತಿದಿನ ಒಂದೊಂದಾಗಿ ಸಮಸ್ಯೆಗಳು ಹುಡುಕಿಕೊಂಡು ಬರುತ್ತಿವೆ. ಪ್ಯಾನ್‌ಕಾರ್ಡ್ ಮತ್ತು ಆಧಾರ್ ಜೋಡಣೆ ಮಾಡದವರಿಗೆ ಯಾವುದೇ ಸರ್ಕಾರಿ ಸೌಲಭ್ಯವೂ ಸಿಗುವುದಿಲ್ಲ, ಹತ್ತು ಸಾವಿರ ರೂಪಾಯಿ ದಂಡ ವಿಧಿಸುತ್ತೇವೆ ಎನ್ನುವ ಎಚ್ಚರಿಕೆ.

ಗುರುತಿನ ಚೀಟಿಯ ಬಳಕೆ ಅನುಚಿತವಲ್ಲ. ಆದರೆ ಅದನ್ನು ಮಾಡಿಕೊಡುವಾಗಲೇ ದೂರವಾಣಿ ಸಂಖ್ಯೆಯನ್ನೂ ಕಡ್ಡಾಯವಾಗಿ ಸೇರಿಸಿಕೊಳ್ಳಬೇಕಿತ್ತಲ್ಲವೆ? ಈಗ ಹತ್ತು ಸಲ ಬ್ಯಾಂಕಿಗೆ ಹೋಗಿ ಗುರುತಿನ ಪತ್ರದ ನೆರಳಚ್ಚು ಪ್ರತಿ ಕೊಟ್ಟುಬಂದವರಿಗೂ ಅಂಚೆ ಕಚೇರಿಗೆ ಹೋಗಿ ತಮ್ಮ ಬ್ಯಾಂಕ್ ಖಾತೆಯಿಂದ ಹಣ ತೆಗೆಯಲು ಯತ್ನಿಸಿದರೆ ನಿರಾಕರಣೆ. ‘ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ನಂಬರ್ ಲಿಂಕ್ ಆಗಿಲ್ಲ’ ಎಂಬ ಸೂಚನೆ.

ತೀರಾ ಬಡವರಿಗೆ ಮಾತ್ರ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ ಸರ್ಕಾರದಿಂದ ಬರುತ್ತದೆ. ವಾರ್ಷಿಕ ₹ 1.20 ಲಕ್ಷಕ್ಕಿಂತ ಹೆಚ್ಚು ಆದಾಯ ಇರುವವರಿಗೆ ಈ ಹಣ ಸಿಗುವುದಿಲ್ಲ. ನಮ್ಮಲ್ಲಿ ಹಿರಿಯ ನಾಗರಿಕರಿಗೆ ಏಳು ಲಕ್ಷದ ತನಕ ಆದಾಯ ತೆರಿಗೆ ವಿನಾಯಿತಿ ಇದೆ. ಆದರೂ ಅವರು ಪ್ಯಾನ್‌ಕಾರ್ಡ್ ಮಾಡಿಸದಿದ್ದರೆ ಅವರಿಗೆ ಇಂತಹ ಸೌಲಭ್ಯಗಳು ಸಿಗುವುದಿಲ್ಲ. ಹಳ್ಳಿಯ ವೃದ್ಧರಲ್ಲಿ ಅನಕ್ಷರಸ್ಥರ ಪ್ರಮಾಣ ಹೆಚ್ಚು. ಇದನ್ನೆಲ್ಲ ಎಲ್ಲಿ ಮಾಡಿಸಬೇಕೆಂದು ಅವರಿಗೆ ಗೊತ್ತಿಲ್ಲ. ಸೈಬರ್ ಕೇಂದ್ರಗಳಲ್ಲಿ ಅವರಿಂದ ದುಬಾರಿ ಶುಲ್ಕ ಕೀಳಲಾಗುತ್ತದೆ.

ಇಂತಹ ಲಿಂಕ್ ಕಡ್ಡಾಯವಾದಾಗ ಸರ್ಕಾರವು ಗ್ರಾಮದಲ್ಲಿ ಒಂದೆರಡು ಕಡೆಯಲ್ಲಾದರೂ ಉಚಿತವಾಗಿ ಸೇವೆ ಸಲ್ಲಿಸುವ ಕೇಂದ್ರಗಳನ್ನು ತೆರೆಯಬೇಕು. ಕಡ್ಡಾಯ ಮಾಡುವ ಮೊದಲು ಅಂತರ್ಜಾಲದ ಪೂರೈಕೆ ಸಮರ್ಪಕವಾಗಿದೆಯೇ ಎಂದು ಪರಿಶೀಲಿಸಬೇಕು. ಯಾಕೆಂದರೆ ಎಲ್ಲ ಕೇಂದ್ರಗಳಲ್ಲೂ ಇಂತಹ ಲಿಂಕ್ ಮಾಡಿಸಲು ಮೈಲುದ್ದದ ಸಾಲಿರುತ್ತದೆ. ‘ಸರ್ವರ್ ಎರರ್’ ಎಂಬ ದಾರುಣ ಸಮಸ್ಯೆಯ ಫಲವಾಗಿ ಸಂಜೆಯತನಕ ನಿಂತರೂ ಲಿಂಕ್ ಆಗದೆ ಜನ ನಿರಾಶರಾಗಿ ಮರಳುವಂತಾಗಿದೆ.

ಕಾಂಗ್ರೆಸ್ ಘೋಷಿಸಿದ ಪಂಚಭಾಗ್ಯಗಳನ್ನು ಪಡೆಯುವವರಿಗೂ ಇದೇ ಬೃಹತ್ ಸಮಸ್ಯೆಯಾಗಿದೆ. ದೂರವಾಣಿ ಸಂಖ್ಯೆ ಗುರುತಿನ ಚೀಟಿಗೆ ಲಿಂಕ್ ಆಗದವರ ಖಾತೆಗೆ ಅನ್ನಭಾಗ್ಯದ ಹಣ ಬರುವುದಿಲ್ಲ. ಗೃಹಲಕ್ಷ್ಮಿ ಒಲಿಯುವುದಿಲ್ಲ. ಫಲಾನುಭವಿಗಳಿಗೆ ದೊರಕುವ ಪ್ರಯೋಜನ ಪಾರದರ್ಶಕವಾಗಿ ಇರಬೇಕು, ಮೋಸವಾಗಬಾರದು ಎಂಬ ಕಾರಣಕ್ಕೆ ಇಂತಹ ಕ್ರಮಗಳನ್ನು ಕೈಗೊಳ್ಳುವುದು ಪ್ರಶ್ನಾತೀತವೇ ಆಗಿದ್ದರೂ ಹತ್ತಾರು ಚೀಟಿಗಳನ್ನು ಮಾಡಿಸುವುದರಲ್ಲೇ ಅಶಕ್ತ ಜನರ ಬದುಕು ಹೈರಾಣಾಗುವಂತೆ ಮಾಡುವುದು ಮಾತ್ರ ಕ್ಷಮಾರ್ಹವಲ್ಲ. ಎಲ್ಲವನ್ನೂ ಒಳಗೊಂಡ ಒಂದೇ ಒಂದು ಚೀಟಿ ದೊರಕುತ್ತಿದ್ದರೆ ಈ ದೇಶದ ಜನ ಧನ್ಯರಾಗುತ್ತಿದ್ದರು.

ಹಳ್ಳಿಯ ಜನರ ದೈನಂದಿನ ಜೀವನದಲ್ಲಿ ದಿನವಿಡೀ ಲಿಂಕ್ ಮಾಡಿಸಲು ತಿರುಗಾಡುವ ಅವಕಾಶವಿಲ್ಲ. ಅವರಿಗೆ ಬದುಕಿನ ಅನಿವಾರ್ಯಗಳಿವೆ. ಮಳೆಗಾಲದಲ್ಲಿ ಪಟ್ಟಣದ ಕಡೆಗೆ ಬರಲು ಸಾರಿಗೆ ವ್ಯವಸ್ಥೆಯಿಲ್ಲ. ಹಳ್ಳ, ಕೊಳ್ಳಗಳನ್ನು ದಾಟಲು ಸೇತುವೆಗಳು, ರಸ್ತೆಗಳಿಲ್ಲದ ಹಳ್ಳಿಗಳು ಇನ್ನೂ ಉಳಿದುಕೊಂಡಿವೆ. ಭಾಗ್ಯದ ಹೆಸರಿನಲ್ಲಿ ಕೊಡುವ ಹಣ ಅವರ ಪಾಲಿಗೆ ಅಲೆದಾಟದ ತೊಡಕು ತಂದೊಡ್ಡುತ್ತಿದೆ.

ಸೈಬರ್ ಕೇಂದ್ರಗಳ ಮುಂದೆ ಫಲಾನುಭವಿಗಳು ಕಾಯುವ ಬದಲು ಸೈಬರ್ ಸೇವೆಯೇ ಜನರ ಮನೆ ಬಾಗಿಲಿಗೆ ಬರುವಂತೆ ಸರ್ಕಾರ ಮಾಡಬೇಕಾಗಿದೆ. ಇದರಿಂದ ವಿದ್ಯಾವಂತ ನಿರುದ್ಯೋಗಿ ಯುವಜನರಿಗೆ ಅನುಕೂಲವೂ ಆಗುತ್ತದೆ. ದಿನವಿಡೀ ಕಾದು ನಿಂತರೂ ಕೆಲಸವಾಗದೇ ಹೋಗುತ್ತದೆ, ಹತ್ತಾರು ಮೈಲು ದೂರದಿಂದ ಬಂದಿದ್ದಾಗ, ಮರಳಿ ನಾಳೆಯೂ ಬರಬೇಕು ಎಂದಾಗ ಜನ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಡಿಜಿಟಲ್ ಯುಗದಲ್ಲಿ ಮಹಾಕ್ರಾಂತಿಯೇ ಆಗಿದೆ. 5ಜಿ ತರಂಗಾಂತರ ನೀಡುವ ಮೂಲಕ ಚೀನಾಕ್ಕೆ ಸಡ್ಡು ಹೊಡೆಯುತ್ತಿದ್ದೇವೆ ಎಂದು ದೇಶನಾಯಕರು ಬೀಗುತ್ತಿದ್ದಾರೆ. ಇಂಥವರು ಒಂದು ಸಲ ಭಾರತದ ಸಾವಿರಾರು ಹಳ್ಳಿಗಳಿಗೆ ಹೋಗಬೇಕು. ಮೊಬೈಲ್ ಟವರ್ ಕೆಳಗೆ ನಿಂತರೂ ಸಿಗ್ನಲ್ ಸಿಗದ ವಿಪರ್ಯಾಸವನ್ನು ಪರೀಕ್ಷಿಸಬೇಕು. ಆಗ ಆ ಲಿಂಕ್ ಈ ಲಿಂಕ್ ಎಂದು ತಾವು ಕೊಡುವ ಭಿಕ್ಷೆಗಾಗಿ ಜನರನ್ನು ಕಾಡುವ ಮನಃಸ್ಥಿತಿಯಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಜೊತೆಗೆ, ಜನರ ಜವಾಬ್ದಾರಿಗಿಂತಲೂ ತಮ್ಮ ಕರ್ತವ್ಯಲೋಪದ ಪಾಲು ದೊಡ್ಡದಿದೆ ಎಂಬುದನ್ನು ಅರಿತುಕೊಂಡು, ಲಿಂಕ್ ಎಂಬ ವಜ್ರಮುಷ್ಟಿಯಿಂದ ಜನಸಾಮಾನ್ಯರಿಗೆ ಬಿಡುಗಡೆಯ ಭಾಗ್ಯ ಕಲ್ಪಿಸಬಹುದೇನೊ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.