ಉನ್ನತ ಶಿಕ್ಷಣ ಕ್ಷೇತ್ರದ ಪದವಿ, ಸ್ನಾತಕೋತ್ತರ ಪದವಿ ಮುಂತಾದ ಪರೀಕ್ಷೆಗಳು ಹಾಗೂ ಶೈಕ್ಷಣಿಕ ವರ್ಷಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗೆ ಪ್ರಕಟಿಸಲಾದ ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಮಾರ್ಗಸೂಚಿಗಳನ್ನು ಗಮನಿಸಿದಾಗ ಆತಂಕವಾಗುತ್ತದೆ. ಆತುರದಲ್ಲಿ ತಪ್ಪು ನಿರ್ಧಾರಗಳಾದರೆ ಅದರ ಪರಿಣಾಮ ಅನುಭವಿಸುವವರು ನಮ್ಮ ವಿದ್ಯಾರ್ಥಿಗಳು.

ಈ ಮಾರ್ಗಸೂಚಿಗಳನ್ನು ಸಮಗ್ರವಾಗಿ ಓದಿದಾಗ, ಕೊರೊನಾ ಸಂಕಷ್ಟದ ಈ ಸಮಯದಲ್ಲಿ ಯಾವ ಸ್ಪಷ್ಟತೆ, ಸರಳತೆ, ಭರವಸೆ ಇರಬೇಕಿತ್ತೋ ಅದ್ಯಾವುದೂ ಕಾಣಿಸುವುದಿಲ್ಲ. ಉದಾಹರಣೆಗೆ, ಎಷ್ಟೋ ವಿಶ್ವವಿದ್ಯಾಲಯಗಳಲ್ಲಿ ಆನ್ಲೈನ್ ತರಗತಿಗಳನ್ನು ನಡೆಸಲು ಸಾಧ್ಯವಾಗಿಲ್ಲ ಎಂದು ಆಯೋಗ ಹೇಳಿದೆ. ಹೈದರಾಬಾದ್ ವಿಶ್ವವಿದ್ಯಾಲಯವು ಆನ್ಲೈನ್ ತರಗತಿಗಳ ಬಗ್ಗೆ ನಡೆಸಿದ ಸಮೀಕ್ಷೆಯಲ್ಲಿ ಅನೇಕ ವಿಚಾರಗಳು ವ್ಯಕ್ತವಾಗಿವೆ. ಬಹುತೇಕ ವಿದ್ಯಾರ್ಥಿಗಳಲ್ಲಿ ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ ಇಲ್ಲ. ಇಂಟರ್ನೆಟ್ ಸೌಲಭ್ಯ ಇಲ್ಲ. ಗ್ರಾಮೀಣ ಪ್ರದೇಶಗಳಲ್ಲಿಹಗಲು ಹೊತ್ತಿನಲ್ಲಿ ವಿದ್ಯುತ್ ಇರದು. ಶಿಕ್ಷಕರು- ವಿದ್ಯಾರ್ಥಿಗಳ ಮಧ್ಯೆ ಸಂವಾದ, ವಿಚಾರ ವಿನಿಮಯ ಸಾಧ್ಯವಾಗಿಲ್ಲ ಎಂದು ಆಯೋಗ ಅಭಿಪ್ರಾಯಪಟ್ಟಿದೆ.

ಆದರೆ ಅದೇ ಇನ್ನೊಂದೆಡೆ, ಲಭ್ಯವಿರುವ ಎಲ್ಲ ಆನ್ಲೈನ್ ತಂತ್ರಜ್ಞಾನವನ್ನೂ ಬಳಸಿ ಪಠ್ಯ ಪ್ರವಚನ ಮುಗಿಸಬೇಕು ಎಂದು ಹೇಳುತ್ತಿದೆ. ಪರೀಕ್ಷೆ ಬಗ್ಗೆಯೂ ಇದೇ ಕತೆ. ತೆರೆದ ಪುಸ್ತಕ, ಎಂಸಿಕ್ಯು ಹೀಗೆ ಮತ್ತೊಂದು ದೊಡ್ಡ ಪಟ್ಟಿ. ವಿದ್ಯಾರ್ಥಿಗಳಿಗೆ ಕಾಲೇಜಿಗೆ ಬರಲು ಸಾಧ್ಯವಾದರೆ, ಯಾವ ರೀತಿ ಪರೀಕ್ಷೆ ನಡೆಸಬೇಕು ಎನ್ನುವುದನ್ನು ಇವರು ಏಕೆ ಹೇಳಬೇಕು? ಎಲ್ಲ ವಿಶ್ವವಿದ್ಯಾಲಯಗಳಲ್ಲಿಯೂ ಪರೀಕ್ಷೆ ನಡೆಸುವ ಬಗ್ಗೆ ಸ್ಪಷ್ಟವಾದ ವ್ಯವಸ್ಥೆಗಳಿವೆ. ಮತ್ತೊಂದೆಡೆ, ಪರೀಕ್ಷೆ ನಡೆಸಲು ಸಾಧ್ಯವಾಗದಿದ್ದಲ್ಲಿ ಆಂತರಿಕ ಪರೀಕ್ಷೆಗಳ ಆಧಾರದ (ಎಷ್ಟು ಆಂತರಿಕ ಪರೀಕ್ಷೆಗಳು ಸಂಸ್ಥೆಯ ಮಟ್ಟದಲ್ಲಿ ನಡೆದಿವೆ ಎನ್ನುವುದು ಯಕ್ಷಪ್ರಶ್ನೆ) ಮೇಲೆ ಫಲಿತಾಂಶ ಘೋಷಿಸಬಹುದು, ತೃಪ್ತಿಯಾಗದ ವಿದ್ಯಾರ್ಥಿಗಳಿಗೆ ಮುಂದಿನ ಸೆಮಿಸ್ಟರ್ನಲ್ಲಿ ವಿಶೇಷ ಪರೀಕ್ಷೆ ನಡೆಸಬಹುದು ಎಂದು ಹೇಳಿದೆ. ಸ್ಕೈಪ್ನಂತಹ ತಂತ್ರಜ್ಞಾನ ಉಪಯೋಗಿಸಿ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಬಹುದು ಎಂದು ಮತ್ತೊಂದು ಅಸಂಬದ್ಧ ಸಲಹೆಯನ್ನು ನೀಡಿದೆ. ವಿದ್ಯಾರ್ಥಿಗಳು ಇದಕ್ಕೆ ಕಾಲೇಜಿಗೆ ಬರಲೇಬೇಕು ಎನ್ನುವುದು ಸಾಮಾನ್ಯ ಜ್ಞಾನ. ಎಲ್ಲವನ್ನೂ ಗಮನಿಸಿ ವಿಶ್ವವಿದ್ಯಾಲಯದ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಬಹುದು ಎಂದು ಹೇಳುವುದಾದರೆ, ಇಂತಹ ಮಾರ್ಗಸೂಚಿಗಳನ್ನು ನೀಡಿ ಗೊಂದಲ ಸೃಷ್ಟಿಸುವ ಅವಶ್ಯಕತೆ ಇತ್ತೇ?

ಸಾಮಾನ್ಯವಾಗಿ ವಿದ್ಯಾರ್ಥಿಗಳು ತರಗತಿಗಳಲ್ಲಿ ಹೆಚ್ಚು ಕಲಿಯುವುದಿಲ್ಲ. ಪರೀಕ್ಷೆ ಬಂದಾಗ ಅನೇಕ ‘ಶಸ್ತ್ರಾಭ್ಯಾಸ’ಗಳ ಮೂಲಕ ಕಲಿಯುತ್ತಾರೆ. ನಾವು ಮಾಡಿದ್ದೂ ಅದನ್ನೇ. ಪರೀಕ್ಷೆ ಸಮಯದಲ್ಲಿ ಹೆಚ್ಚು ಓದಿದ್ದು, ಟೀ ಕುಡಿದರೆ ನಿದ್ದೆ ಬರುವುದಿಲ್ಲ ಎಂದು ಭ್ರಮಿಸಿದ್ದು. ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡದೆ, ಅಗತ್ಯವಿರುವ ಮೂಲ ಸೌಲಭ್ಯಗಳಿಲ್ಲದೆ, ಸರಿಯಾದ ಮಾಹಿತಿಯಿಲ್ಲದೆ, ಹೊಸ ವಿಧಾನದ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಯೋಚಿಸುವುದು ಸರಿಯಲ್ಲ.

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಶೇ 80ರಷ್ಟು ಪಠ್ಯ ಪ್ರವಚನಗಳು ನಡೆದಿವೆ ಎಂದು ಕೆಲವು ಕುಲಪತಿಗಳು ಹೇಳುತ್ತಾರೆ. ಅದು ಹೇಗೆ ಎಂದು ಅರ್ಥವಾಗದು. ಉದಾಹರಣೆಗೆ, ಬೆಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿಗಳು ಜನವರಿಯಿಂದ ಪ್ರಾರಂಭವಾದವು. ಕೆಲವು ಸ್ನಾತಕೋತ್ತರ ತರಗತಿಗಳು ಮಾರ್ಚ್ನಲ್ಲಿ ಪ್ರಾರಂಭವಾಗಿವೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ತರಗತಿಗಳು ಫೆಬ್ರುವರಿಯಲ್ಲಿ ಪ್ರಾರಂಭವಾಗಿವೆ. ಉಳಿದ ವಿಶ್ವವಿದ್ಯಾಲಯಗಳಲ್ಲಿ ಎರಡು-ಎರಡೂವರೆ ತಿಂಗಳಿನಷ್ಟು ಪಾಠ ಆಗಿರಬಹುದು. ಒಂದು ಸೆಮಿಸ್ಟರ್ನಲ್ಲಿ 90 ಕಾರ್ಯನಿರತ (16 ವಾರಗಳು) ದಿವಸಗಳ ಕಾಲ ಪಠ್ಯ, ಪ್ರವಚನ ನಡೆಯಬೇಕು. ಸೆಮಿಸ್ಟರ್ ಪದ್ಧತಿಯಲ್ಲಿ ಪ್ರತೀ ತರಗತಿಯೂ ಮುಖ್ಯವಾಗಿರುತ್ತದೆ.

ಹಾಗಾದರೆ ಈಗ ನಾವೇನು ಮಾಡಬಹುದು? ಲಾಕ್ಡೌನ್ ನಿರ್ಬಂಧ ಸಡಿಲಿಕೆಯಲ್ಲಿ ಕೇಂದ್ರ ಸರ್ಕಾರ ಸ್ಪಷ್ಟ ಸೂಚನೆಗಳನ್ನು ಕೊಡುತ್ತಿದೆ. ರಾಜ್ಯ ಸರ್ಕಾರಗಳು ಅನುಸರಿಸುತ್ತಿವೆ. ಅದೇ ರೀತಿ ಪರೀಕ್ಷೆಗಳ ಬಗ್ಗೆಯೂ ಉನ್ನತ ಸಚಿವರ ಸಮಿತಿಯಲ್ಲಿ ಕೇಂದ್ರ ಮಟ್ಟದಲ್ಲಿ ವಿಚಾರ ವಿನಿಮಯ ನಡೆಸಿ, ರಾಜ್ಯ ಸರ್ಕಾರಗಳೊಡನೆ ಚರ್ಚಿಸಿ ನಿರ್ದಿಷ್ಟ ಸೂಚನೆಗಳನ್ನು ನೀಡಬೇಕು. ಬರೀ ಸಲಹೆಗಳಿಂದ ಉಪಯೋಗವಿಲ್ಲ.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿವಿಧ ರಾಜ್ಯಗಳ ವಿದ್ಯಾರ್ಥಿಗಳಿರುತ್ತಾರೆ. ಇದು ಕೇವಲ ಒಂದು ರಾಜ್ಯಕ್ಕೆ ಸಂಬಂಧಪಟ್ಟಿದ್ದಲ್ಲ. ವಿಶ್ವವಿದ್ಯಾಲಯ ಮಟ್ಟದಲ್ಲಿ ನಿರ್ಧಾರಗಳಾಗಬಾರದು. ಯುಜಿಸಿಯಂತಹ ಯಾವುದೇ ಸ್ವಾಯತ್ತ ಸಂಸ್ಥೆಯು ನೇರವಾಗಿ ಸೂಚನೆ ನೀಡಬಾರದು. ಕೇಂದ್ರ ಮಾನವ ಸಂಪನ್ಮೂಲ ಸಚಿವರು ಹೆಚ್ಚು ಕ್ರಿಯಾಶೀಲರಾಗಬೇಕು.

ವಿಶ್ವವೇ ಅಲ್ಲೋಲ ಕಲ್ಲೋಲವಾಗಿರುವಾಗ ಶೈಕ್ಷಣಿಕ ವರ್ಷ 3-4 ತಿಂಗಳು ಮುಂದೆಹೋದರೆ ತೊಂದರೆ ಏನು? ಕೊರೊನಾ ಸೋಂಕು ನಿರ್ಬಂಧದಲ್ಲಿ ಮೇ ತಿಂಗಳು ನಿರ್ಣಾಯಕ ಎಂದು ವೈದ್ಯಕೀಯ ಕ್ಷೇತ್ರದ ತಜ್ಞರು ಎಚ್ಚರಿಸಿದ್ದಾರೆ. ಪರಿಸ್ಥಿತಿ ಸುಧಾರಿಸುವ ಆಶಯ ಇದೆ. ಕನಿಷ್ಠ ಜೂನ್ ತಿಂಗಳಿನವರೆಗೆ ಕಾಯೋಣ. ಪರಿಸ್ಥಿತಿ ಗಂಭೀರವಾದರಷ್ಟೇ ಪರ್ಯಾಯ ಮಾರ್ಗಗಳ ಬಗ್ಗೆ ಯೋಚಿಸಬಹುದು.

ಲೇಖಕ: ನಿವೃತ್ತ ರಿಜಿಸ್ಟ್ರಾರ್, ಸೇಂಟ್ ಅಲೋಷಿಯಸ್ ಕಾಲೇಜು, ಮಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.