ರಾಹುಲ್ ಗಾಂಧಿ ಅವರು ಕೈಗೊಂಡಿರುವ ‘ಭಾರತ್ ಜೋಡೊ’ ಪಾದಯಾತ್ರೆ ತಮಿಳುನಾಡು ಮತ್ತು ಕೇರಳವನ್ನು ದಾಟಿ ಇದೇ 30ರಂದು ಗುಂಡ್ಲುಪೇಟೆಯ ಮೂಲಕ ಕರ್ನಾಟಕವನ್ನು ಪ್ರವೇಶಿಸಲಿದೆ. ಯಾತ್ರೆ ಪ್ರವೇಶಿಸಿದ ಎರಡನೇ ದಿನವೆ ಗಾಂಧಿ ಜಯಂತಿ. ಕರ್ನಾಟಕದ ಪಾದಯಾತ್ರೆಯ ಸಂಘಟಕರು ಅಲ್ಲೇ ಹತ್ತಿರದಲ್ಲಿರುವ ಬದನವಾಳು ಗ್ರಾಮದ ಖಾದಿ ಕೇಂದ್ರದಲ್ಲಿ ರಾಹುಲ್ ಅವರೊಂದಿಗೆ ಗಾಂಧಿ ಜಯಂತಿಯನ್ನು ಆಚರಿಸಲು ಯೋಜಿಸಿದ್ದಾರೆ.

ಅನೇಕರಿಗೆ ತಿಳಿದಿರುವಂತೆ, ಬದನವಾಳು ಖಾದಿ ಕೇಂದ್ರ ಐತಿಹಾಸಿಕ ಮಹತ್ವವುಳ್ಳದ್ದು. ಮಹಾತ್ಮ ಗಾಂಧಿ 1927ರಲ್ಲಿ ಈ ಕೇಂದ್ರಕ್ಕೆ ಭೇಟಿ ನೀಡಿದ್ದರು ಎಂಬುದೇ ಹೆಗ್ಗಳಿಕೆ. ಒಂದು ಕಾಲಘಟ್ಟದಲ್ಲಿ ಬದನವಾಳು ಸುತ್ತ ಮುತ್ತಲಿನ ಸುಮಾರು 2,000 ಕುಶಲಕರ್ಮಿಗಳು ಈ ಕೇಂದ್ರದೊಂದಿಗೆ ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಜೀವನೋಪಾಯಕ್ಕಾಗಿ ಸಂಪರ್ಕ ಹೊಂದಿದ್ದರು.

ಈ ಕೇಂದ್ರದಲ್ಲಿ ಖಾದಿ ನೂಲುಗಾರಿಕೆ ಮತ್ತು ನೇಯ್ಗೆ, ಕೈ ಕಾಗದ, ಗಾಣ, ಬೆಂಕಿಪೊಟ್ಟಣ, ನಾರು ಉದ್ಯಮ ಹೀಗೆ ಹಲವಾರು ಗ್ರಾಮೋದ್ಯೋಗಗಳು ನಡೆಯುತ್ತಿದ್ದವು. ಇಲ್ಲಿ ತಯಾರಾಗುತ್ತಿದ್ದ ‘ಚಕಮಕಿ’ ಹೆಸರಿನ ಬೆಂಕಿಪೊಟ್ಟಣವು ನಂಜನಗೂಡು ಸುತ್ತಮುತ್ತ ಬಹಳ ಪ್ರಸಿದ್ಧವಾಗಿತ್ತು. ಸ್ಥಳೀಯ ವಸ್ತುಗಳನ್ನು ಬಳಸಿ ನಿರ್ಮಿಸಿದ್ದ ಸರಳವಾದ ಹೆಂಚಿನ ಕಟ್ಟಡಗಳು ಕೇಂದ್ರಕ್ಕೊಂದು ಸೌಮ್ಯವಾದ, ಸುಂದರ ವಾತಾವರಣವನ್ನು ಕಟ್ಟಿಕೊಟ್ಟಿದ್ದವು. 1975ರ ಹೊತ್ತಿಗೆ ಸರ್ಕಾರದ ನೀತಿಯಿಂದಾಗಿ ಈ ಕೇಂದ್ರಕ್ಕೆ ರೋಗ ಬಡಿಯಿತು. ಅದು ನಿಧಾನವಾಗಿ ಸಾಯತೊಡಗಿತು. ಇಂದು ಕೇಂದ್ರದಲ್ಲಿ ಸ್ಮಶಾನಸದೃಶ ವಾತಾವರಣ.

ಗ್ರಾಮೋದ್ಯೋಗಗಳು ನಿಂತು ಎಷ್ಟೋ ದಶಕಗಳು ಉರುಳಿಹೋದವು. ಕುಂಟುತ್ತಾ ನಡೆಯುತ್ತಿದ್ದ ಖಾದಿ ಚಟುವಟಿಕೆಯು ಆರು ತಿಂಗಳಿನಿಂದ ಈಚೆಗೆ ಹತ್ತಿಯ ಸರಬರಾಜು ಇಲ್ಲದೆ ನಿಂತುಹೋಗಿದೆ. ನಡೆಯುತ್ತಿರುವ ಒಂದೆರಡು ಮಗ್ಗಗಳ ಶಬ್ದವೂ ರೋಗಿಯ ಕೆಮ್ಮಿನ ಶಬ್ದದಂತೆ ಕೇಳಿಬರುತ್ತಿದ್ದು, ಯಾವಾಗ ಜೀವ ಹೋಗುವುದೋ ಎನಿಸುವಂತಿದೆ. ಇದು ಬದನವಾಳು ಕೇಂದ್ರದ ಪರಿಸ್ಥಿತಿ ಮಾತ್ರವಲ್ಲ, ಇಡೀ ದೇಶದ ಖಾದಿ ಸಂಸ್ಥೆಗಳ ಪರಿಸ್ಥಿತಿಯಾಗಿದೆ.

ಸ್ವಾತಂತ್ರ್ಯ ಬಂದ ಕೆಲವೇ ವರ್ಷಗಳಲ್ಲಿ ಖಾದಿ ಚಟುವಟಿಕೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಸರ್ಕಾರ ಯಾವಾಗ ಖಾದಿ ಆಯೋಗವನ್ನು ಸ್ಥಾಪಿಸಿತೋ ಆಗಲೇ ಖಾದಿಯ ಸಾವಿನ ದಿನಗಣನೆ ಪ್ರಾರಂಭವಾಯಿತು. ಜನರ ನಡುವೆ ಇರಬೇಕಾದ ಚಟುವಟಿಕೆಯೊಂದನ್ನು ಜನರಿಂದ ದೂರ ಮಾಡಿದ ಪರಿಣಾಮ ಇದು. ಈಗಂತೂ ಖಾದಿ ಎಂಬ ಹೆಸರಿನಲ್ಲಿ ದೇಶದಲ್ಲಿ ಶೇ 80ಕ್ಕಿಂತ ಹೆಚ್ಚು ನಕಲಿ ಖಾದಿ ಮಾರಾಟವಾಗುತ್ತಿದೆ. ಖಾದಿ ನೂಲುಗಾರಿಕೆ ಮತ್ತು ನೇಯ್ಗೆಯನ್ನೇ ನೆಚ್ಚಿಕೊಂಡು ದೇಶದ ಉದ್ದಗಲಕ್ಕೂ ಬದುಕಿದ್ದ ಸಾವಿರಾರು ಕುಶಲಕರ್ಮಿಗಳು ಮತ್ತು ಶ್ರಮಜೀವಿಗಳ ಬದುಕು ಮೂರಾಬಟ್ಟೆಯಾಗಿದೆ. ಗ್ರಾಮೀಣ ಭಾರತ ನಿಸ್ತೇಜವಾಗಿದೆ. ಗಾಂಧಿ ಕನಸಿನ ಭಾರತ ಎಲ್ಲೋ ಹಿಂದೆಯೇ ನಿಂತುಹೋಗಿದೆ.

ಇಂತಹ ದುರಂತಮಯ ಪರಿಸ್ಥಿತಿಯಲ್ಲಿ ರಾಹುಲ್ ಅವರು ಈ ಕೇಂದ್ರದಲ್ಲಿ ಗಾಂಧಿ ಜಯಂತಿಯನ್ನು ಆಚರಿಸಲು ಬರುತ್ತಿದ್ದಾರೆ. ಈ ತಲೆಮಾರಿನ ಬಹುತೇಕ ಕಾಂಗ್ರೆಸ್ಸಿಗರಿಗೆ ಗಾಂಧಿ ಅವರ ವಿಚಾರಗಳ ಬಗ್ಗೆ ಹೆಚ್ಚಿಗೆ ತಿಳಿದಿರಲಿಕ್ಕಿಲ್ಲ. ಖಾದಿಯ ಮಹತ್ವವೇನೆಂದು ತಿಳಿದಿಲ್ಲ. ನಮ್ಮೆಲ್ಲರ ಮನೆಗಳ ಗೋಡೆಯಲ್ಲಿ ನೇತಾಡುತ್ತಿರುವ, ನಮಗೇ ಹೆಸರು ಗೊತ್ತಿಲ್ಲದ ನಮ್ಮ ಮುತ್ತಜ್ಜನ ಫೋಟೊದಂತೆ ಕಾಂಗ್ರೆಸ್ಸಿನೊಂದಿಗೆ ಗಾಂಧೀಜಿಯ ಫೋಟೊ ನೇತುಹಾಕಿಕೊಂಡಿದೆ.

ಇಂದಿನ ಬದನವಾಳಿನ ಖಾದಿ ಕೇಂದ್ರದ ಸ್ಥಿತಿಗೂ ಕಾಂಗ್ರೆಸ್ಸಿನ ಸ್ಥಿತಿಗೂ ಬಹಳ ವ್ಯತ್ಯಾಸವಿದ್ದಂತೆ
ತೋರುತ್ತಿಲ್ಲ. ಎರಡೂ ಮುರಿದು ಬಿದ್ದ ಪರಿಸ್ಥಿತಿಯಲ್ಲಿವೆ. ಮಹಾತ್ಮ ಗಾಂಧಿಯವರನ್ನೂ ಖಾದಿಯನ್ನೂ ಮರೆತದ್ದೇ ದೇಶದ ಇಂದಿನ ಸ್ಥಿತಿಗೆ ಮತ್ತು ಕಾಂಗ್ರೆಸ್ನ ದುಃಸ್ಥಿತಿಗೆ ಕಾರಣ ಎಂಬುದನ್ನು ಮೊದಲು ಕಾಂಗ್ರೆಸ್ಸಿಗರು ಅರಿಯಬೇಕಿದೆ. ಮೊದಲಿಗೆ ಕಾಂಗ್ರೆಸ್ನ ಸದಸ್ಯರು ಇತಿಹಾಸವನ್ನೂ ಗಾಂಧಿಯವರನ್ನೂ ರಚನಾತ್ಮಕ ವಿಕೇಂದ್ರೀಕೃತ ಸಮಾಜದ ವಿಚಾರವನ್ನೂ ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಗಾಂಧಿ ಮತ್ತು ಇತರ ನಾಯಕರ ಪ್ರಾಮಾಣಿಕತೆಯನ್ನು ರೂಢಿಸಿಕೊಳ್ಳಬೇಕು.

ರಾಹುಲ್ ಅವರ ಭಾರತ್ ಜೋಡೊ ಯಾತ್ರೆಯು ಗಾಂಧಿಯವರು ಕಲಿಸಿದ ಪಾದಯಾತ್ರೆಯ ತಂತ್ರವನ್ನು ಬಳಸಿಕೊಂಡಿದೆ. ಆದರೆ ಇದು ಪಾದಯಾತ್ರೆಗಷ್ಟೇ ಸೀಮಿತಗೊಳ್ಳದೆ ಅವರ ಆದರ್ಶಗಳನ್ನೂ ಕಾಂಗ್ರೆಸ್ನಲ್ಲಿ ಮುನ್ನೆಲೆಗೆ ತರುವ ಪ್ರಯತ್ನವಾದರೆ ಈ ಪಾದಯಾತ್ರೆಗೆ ಒಂದು ಅರ್ಥವಿದೆ. ಆ ದಿಕ್ಕಿನಲ್ಲಿ ಹೋಗುವ ತೀರ್ಮಾನ ರಾಹುಲ್ ಅವರಿಗೆ, ಅವರ ಅನುಯಾಯಿಗಳಿಗೆ ಇದ್ದರೆ ಮಾತ್ರ ಬದನವಾಳಿಗೆ ಹೋಗಿ ಗಾಂಧಿ ಜಯಂತಿಯನ್ನು ಆಚರಿಸುವುದರಲ್ಲಿ ಅರ್ಥವಿದೆ. ಕಾಂಗ್ರೆಸ್ಗೆ ಹೊಸ ಚೈತನ್ಯ ಬರಲಿದೆ. ಯಾರೋ ಕುಣಿಯುತ್ತಿದ್ದಾರೆ ಎಂದು ತಾನು ಕುಣಿಯುವ ಕೆಲಸವನ್ನು ಕಾಂಗ್ರೆಸ್ ಮಾಡಬಾರದು. ತನ್ನ ನಿಜವಾದ ಸೌಂದರ್ಯದಿಂದ ಹೇಗೆ, ಎಲ್ಲಿ, ಏಕೆ ಕುಣಿಯಬೇಕೋ ಆಗ ಕುಣಿದರೆ ಅದರ ಕುಣಿತಕ್ಕೆ ಒಂದು ಮಹತ್ವ ಎಂಬುದನ್ನು ಅರಿಯಬೇಕು.

ಆದರ್ಶಕ್ಕೆ ಬೆಲೆಯಿಲ್ಲ. ಬಹಳ ದೂರ ಬಂದು ಬಿಟ್ಟಿದ್ದೇವೆ ಎಂಬ ಸುಳ್ಳು ಕಾರಣಕ್ಕೆ ಅರ್ಥವಿಲ್ಲ. ದಾರಿ ತಪ್ಪಿ ಹೋದಾಗ, ಸರಿ ದಾರಿ ಹಿಡಿಯಲು ಎಷ್ಟೇ ದೂರ ಹೋಗಿದ್ದರೂ ಹಿಂದಿರುಗಿ ಬರುವುದು ಅನಿವಾರ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.