‘ಬರೀ ಶಾಲಾ- ಕಾಲೇಜು ಹುಡುಗಿಯರಿಗಷ್ಟೇ ಅಲ್ಲ, ಪದವಿ ಓದುವ ಹೆಣ್ಣುಮಕ್ಕಳಿಗೂ ಈ ಯೋಜನೆಯ ಪ್ರಯೋಜನ ಸಿಗಲಿ ಎಂಬುದು ನಮ್ಮ ಮನವಿಯಾಗಿತ್ತು. ಅದು ಹಾಗಿರಲಿ, ಈಗ ಕೊರೊನಾ ಬಂದದ್ದೇ ನಿಂತ ಯೋಜನೆ ಇನ್ನೂ ಆರಂಭವಾಗಿಯೇ ಇಲ್ಲ. ತಿಂಗಳಿಗೆ ನಾಲ್ಕರಿಂದ ಐದು ದಿನ ಹೆಣ್ಣುಮಕ್ಕಳು ಅನಿವಾರ್ಯವಾಗಿ ಮನೆಯಲ್ಲೇ ಇರಲು ಇದು ಮುಖ್ಯ ಕಾರಣ. ಬರೀ ಓದಲ್ಲ ಆರೋಗ್ಯ ಕೂಡಾ ಇದರಿಂದ ಕೆಡುತ್ತಿದೆ. ದಯವಿಟ್ಟು ಗಮನಿಸಿ’ ಆರೋಗ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಲಾ ಶಿಕ್ಷಕಿಯರ ಒಕ್ಕೊರಲ ಅಭಿಪ್ರಾಯ ಇದು.

ಆರೋಗ್ಯ ಇಲಾಖೆಯು ‘ಶುಚಿ’ ಯೋಜನೆಯಡಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಹದಿಹರೆಯದ ವಿದ್ಯಾರ್ಥಿನಿಯರಿಗೆ ಮುಟ್ಟಿನ ಸಂದರ್ಭದಲ್ಲಿ ಬೇಕಾಗುವ ಸ್ಯಾನಿಟರಿ ಪ್ಯಾಡ್‍ಗಳನ್ನು ಪೂರೈಸುತ್ತಿತ್ತು. 2013-14ರಲ್ಲಿ ಕೇಂದ್ರ ಸರ್ಕಾರದ ಪ್ರಾಯೋಜನೆ ಅಡಿಯಲ್ಲಿ ಈ ಯೋಜನೆ ಆರಂಭವಾಯಿತು. ಆನಂತರ ಇದನ್ನು ಮುಂದುವರಿಸುವ ಹೊಣೆ ರಾಜ್ಯ ಸರ್ಕಾರಗಳ ಹೆಗಲಿಗೇರಿತು. ನಮ್ಮ ರಾಜ್ಯದಲ್ಲಿಯೂ ಇದು ಜಾರಿಗೆ ಬಂತು. ಆದರೆ, 2020ರಲ್ಲಿ ಜಗತ್ತನ್ನೇ ತಲ್ಲಣಗೊಳಿಸಿದ ಕರಾಳ ಕೊರೊನಾ ಅದಕ್ಕೆ ಕಲ್ಲು ಹಾಕಿತು. ಆಗ ಶಾಲೆ ಇರಲಿಲ್ಲ, ಹೊರಗೆ ಕಾಲಿಡುವ ಪ್ರಶ್ನೆಯೇ ಇರಲಿಲ್ಲ. ಈಗ ಲಸಿಕೆ ಬಂದಿದೆ, ಕೊರೊನಾ ತೀವ್ರತೆ ಕಡಿಮೆಯಾಗಿದೆ. ಶಾಲೆ ಶುರುವಾಗಿದೆ... ಪ್ಯಾಡ್ ಇನ್ನೂ ಸಿಗುತ್ತಿಲ್ಲ!

ಅಂಗಡಿಯಲ್ಲಿ ಕೊಂಡರೆ ಕನಿಷ್ಠ ಐದು ದಿನಗಳಿಗೆ ಹತ್ತು ಪ್ಯಾಡ್ ಆದರೂ ಬೇಕು. ಏನಿಲ್ಲ ಎಂದರೂ ನೂರು ರೂಪಾಯಿ. ತಿಂಗಳಿಗೆ ಮೂರು ಸಾವಿರ ರೂಪಾಯಿ ಆದಾಯವಿರುವ ಕುಟುಂಬಕ್ಕೆ ಈ ನೂರು ರೂಪಾಯಿ ಖರ್ಚು ಅನವಶ್ಯಕ ಎನಿಸುವುದು ಸಹಜವೇ. ಏನಿದ್ದರೂ ಹಳೆ ಬಟ್ಟೆಯ ಬಳಕೆಯೇ ಗತಿ. ಆದರೆ ಮುಟ್ಟು ಎಂದರೆ ಗುಟ್ಟು ಎನ್ನುವ ಸ್ಥಿತಿಯಲ್ಲಿ ಈ ಬಟ್ಟೆಯ ಶುಚಿತ್ವದ ಬಗ್ಗೆ ಗಮನಹರಿಸುವವರು ಯಾರು? ಅವಸರವಸರವಾಗಿ ತೊಳೆದು, ಎಲ್ಲೋ ಕತ್ತಲ ಮೂಲೆಯಲ್ಲಿ ಒಣಗಿಸಿ, ಅರ್ಧಂಬರ್ಧ ಒಣಗಿದ ಬಟ್ಟೆಯನ್ನು ದಿನವಿಡೀ ದೇಹದ ಒಳಭಾಗದಲ್ಲಿ ಇಟ್ಟುಕೊಂಡು ಶಾಲೆಗೆ ಹೋಗುವುದು ಹೆಣ್ಣುಮಕ್ಕಳಿಗೆ ಅನಿವಾರ್ಯ.

ಇಂಥ ಸ್ಥಿತಿಯಲ್ಲಿ ಪಾಠ ಕಲಿಯುವುದು ಹಾಗಿರಲಿ ಆರೋಗ್ಯದ ಗತಿ ಏನಾದೀತು? ತೊಡೆಯ ಸೂಕ್ಷ್ಮ ಚರ್ಮದಲ್ಲಿ ಕೆಂಪು ಗುಳ್ಳೆ, ತುರಿಕೆ, ಫಂಗಲ್ ಸೋಂಕು, ಮೂತ್ರನಾಳದ ಸಮಸ್ಯೆ ಹೀಗೆ ನಡೆದಾಡಲೇ ಕಷ್ಟ ವಾಗುವ ಪರಿಸ್ಥಿತಿ. ಪ್ರತೀ ತಿಂಗಳು ಅನುಭವಿಸ
ಬೇಕಾದ ಈ ಯಮಯಾತನೆ ಹೇಳಿಕೊಳ್ಳಲು ಸಂಕೋಚ. ಅರಿಸಿನ, ಎಣ್ಣೆಯ ಮನೆಮದ್ದು ಅಥವಾ ಸಿಕ್ಕ ಸಿಕ್ಕ ಕ್ರೀಂ ಬಳಿದುಕೊಂಡು ಅವನ್ನು ತಡೆಯುವ ಪ್ರಯತ್ನ. ಜತೆಗೇ ಶಾಲೆಗೆ ಹೋಗದೆ ಮನೆಯಲ್ಲೇ ಇದ್ದು ಮೌನವಾಗಿ ಅನುಭವಿಸುವುದು, ಕಲಿಕೆಯಲ್ಲಿ ಹಿಂದುಳಿಯುವುದು!

ಈ ಎಲ್ಲಾ ರೋದನೆಗೆ ಸಂಜೀವಿನಿಯಾಗಿ ಬಂದಿತ್ತು ಶುಚಿ ಯೋಜನೆ. ಹುಡುಗಿಯರ ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರ ಮುಖದಲ್ಲಿ ನಗು ಅರಳಿಸಿತ್ತು. ಈ ಯೋಜನೆ ಜಾರಿಯಾದ ನಂತರ ಆರೋಗ್ಯ ಮತ್ತು ಹಾಜರಾತಿಯಲ್ಲಿ ಗಮನೀಯ ಏರಿಕೆ ಕೂಡಾ ಕಂಡುಬಂದಿತ್ತು. 2021ರಲ್ಲಿ ಈ ಯೋಜನೆಗೆ ₹ 49 ಕೋಟಿ ಖರ್ಚು ಮಾಡಲು ರಾಜ್ಯ ಸಚಿವ ಸಂಪುಟದ ಅನುಮೋದನೆಯೂ ದೊರಕಿತ್ತು. ಆದರೆ ಅನುಷ್ಠಾನ ಮಾತ್ರ ಇನ್ನೂ ಆಗಿಲ್ಲ. ಈ ಬಗ್ಗೆ ವಿಚಾರಿಸಿದಾಗ, ಈ ಪ್ಯಾಡ್‍ಗಳ ವಿತರಣೆ ಮತ್ತು ಬಳಸುವ ವಿವರಣೆಯ ಹೊಣೆ ಕುರಿತು ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಎರಡೂ ಪರಸ್ಪರರನ್ನು ದೂರುತ್ತವೆ. ಸಾರಿಗೆ ವ್ಯವಸ್ಥೆ ಸೂಕ್ತವಾಗಿಲ್ಲ ಎಂಬ ಉತ್ತರವೂ ಸಿಗುತ್ತದೆ. ಅನೇಕ ಸರ್ಕಾರಿ ಶಾಲೆಗಳಲ್ಲಿ ಈ ಪ್ಯಾಡ್ ಸಿಗಲು ಸುಲಭವಾಗುವಂತೆ ಡಿಸ್‌ಪೆನ್ಸಿಂಗ್ ಮಶೀನ್ ಸ್ಥಾಪಿಸಲಾಗಿದೆ. ಆದರೆ ಅವುಗಳನ್ನು ಬಳಸುವ ಬಗ್ಗೆ ಮಾಹಿತಿ ಇಲ್ಲ. ಜತೆಗೆ ಉಪಯೋಗಿಸಲು ವಿದ್ಯುತ್ ವ್ಯವಸ್ಥೆಯ ಅನುಕೂಲವಿಲ್ಲ. ಹಾಗಾಗಿ ಇವು ನಿಂತಲ್ಲೇ ನಿಂತಿವೆ.

ಇದರೊಂದಿಗೆ ಸರ್ಕಾರವು ಹಾನಿಕಾರಕ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸುವ ದೃಷ್ಟಿಯಿಂದ ಎರಡು ಜಿಲ್ಲೆಗಳಲ್ಲಿ ಮೈತ್ರಿ ಪೀರಿಯಡ್ಸ್ ಕಪ್ ಯೋಜನೆಯನ್ನು ಪ್ರಾಯೋಗಿಕವಾಗಿ ಕೈಗೊಂಡಿದೆ. ವೈಯಕ್ತಿಕ ಸ್ವಚ್ಛತೆ ಮತ್ತು ಆರ್ಥಿಕ ದೃಷ್ಟಿಯಿಂದ ಇದು ಪರಿಣಾಮಕಾರಿ. ಆದರೆ ಈ ಕಪ್‍ಗಳನ್ನು ಉಪಯೋಗಿಸುವಾಗ ಸ್ವಲ್ಪ ಮಟ್ಟಿಗಿನ ಅನುಭವ ಅಗತ್ಯ. ಅದನ್ನು ಹೇಗೆ ದೇಹದೊಳಕ್ಕೆ ಹಾಕಬೇಕು, ಎಷ್ಟು ಬಾರಿ ಹೊರತೆಗೆದು ಸ್ವಚ್ಛಗೊಳಿಸಬೇಕು, ಚೊಕ್ಕವಾಗಿಸುವ ವಿಧಾನ ಇವುಗಳ ಬಗ್ಗೆ ಶಿಕ್ಷಕರಿಗೇ ಬಹಳಷ್ಟು ಅನುಮಾನಗಳಿವೆ. ಈಗೆಲ್ಲ ಕೆಲವು ಮಕ್ಕಳು ಆರು-ಏಳನೇ ತರಗತಿಗೇ ಮೈನೆರೆಯುವುದರಿಂದ ಆ ಮಕ್ಕಳಿಗೆ ಅರ್ಥ ಮಾಡಿಸುವುದೂ ಕಷ್ಟವೇ. ಹೀಗಾಗಿ ಇವು ಅತ್ಯುತ್ತಮ ವಿಧಾನವಾದರೂ ಅವುಗಳ ಸಾರ್ವತ್ರಿಕ ಬಳಕೆಗೆ ಮುನ್ನ ಶಿಕ್ಷಕಿಯರಿಗೆ ಸಂಪೂರ್ಣ ಮಾಹಿತಿ ಸಿಗಬೇಕು. ಒಟ್ಟಿನಲ್ಲಿ ಇದು ಯಶಸ್ವಿಯಾಗುವವರೆಗೆ ಶುಚಿ ಪ್ಯಾಡ್‍ಗಳು ಎಲ್ಲೆಡೆ ಜಾರಿಯಲ್ಲಿರಲಿ.

ಹೆಣ್ಣುಮಕ್ಕಳ ಆರೋಗ್ಯ- ಶಿಕ್ಷಣ ಎರಡನ್ನೂ ಗಮನದಲ್ಲಿ ಇಟ್ಟುಕೊಂಡು ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ಶುಚಿ ಯೋಜನೆಯನ್ನು ತಕ್ಷಣ ಆರಂಭಿಸಲಿ ಎನ್ನುವುದು ಎಲ್ಲರ ಬೇಡಿಕೆ ಮತ್ತು ಒತ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.