ಕೆ.ಬಿ.ಕೆ.ಸ್ವಾಮಿ

ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯಲ್ಲಿನ ಅಪಾರ್ಟ್ಮೆಂಟ್ವೊಂದರಲ್ಲಿ ಎಂಟು ವರ್ಷದ ಬಾಲಕಿಯೊಬ್ಬಳು ತನ್ನನ್ನು ಫುಡ್ ಡೆಲಿವರಿ ಬಾಯ್ ಅಪಹರಿಸಲು ಪ್ರಯತ್ನಿಸಿದನೆಂದು ಹೇಳಿದ್ದನ್ನು ನಿಜವೆಂದು ನಂಬಿದ ನಿವಾಸಿಗಳು, ಆ ಯುವಕನ ಮೇಲೆ ಹಲ್ಲೆ ನಡೆಸಿದ್ದು, ಉದ್ರಿಕ್ತ ಗುಂಪಿನ ನಡುವೆ ಸಿಕ್ಕಿಬಿದ್ದಿದ್ದ ಯುವಕನನ್ನು ಪೊಲೀಸರು ಕಾಪಾಡಿದ್ದು ವರದಿಯಾಯಿತು. ಕಟ್ಟಡದಲ್ಲಿನ ಸಿ.ಸಿ. ಟಿ.ವಿ. ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಬಾಲಕಿಯ ಹೇಳಿಕೆ ಸಂಪೂರ್ಣವಾಗಿ ಸುಳ್ಳೆಂಬ ವಿಚಾರ ಹೊರಬಿತ್ತು.

ಬಹುತೇಕರು ಇದನ್ನು ಸಾಮಾನ್ಯ ವಿಚಾರ ಎಂದು ಭಾವಿಸಿ ಅಲಕ್ಷಿಸಿರಬಹುದು. ವಾಸ್ತವದಲ್ಲಿ ಇದು ಅತ್ಯಂತ ಗಂಭೀರವಾದ ಸಂಗತಿಯಾಗಿದೆ. ಹಲವಾರು ಸೂಕ್ಷ್ಮ ವಿಚಾರಗಳ ಕುರಿತು ನಮ್ಮ ವ್ಯವಸ್ಥೆ ಹೊಂದಿರುವ ನಿಲುವನ್ನು ಪ್ರಶ್ನಿಸುವಂತಿದೆ. ಮಕ್ಕಳು ದೈವ ಸಮಾನ, ಅವರು ಹುಸಿಯಾಡುವುದಿಲ್ಲ ಎಂಬ ಭಾವನೆಯ ಬಗ್ಗೆ ನಾವೆಷ್ಟು ಪೂರ್ವಗ್ರಹಪೀಡಿತರಾಗಿದ್ದೇವೆ ಎಂಬುದನ್ನು ಸಹ ಇದು ಸಾಬೀತು ಮಾಡಿದೆ.

ಸಾಮಾನ್ಯವಾಗಿ ಮಕ್ಕಳು ತಮಗೆ ಬಂದೊದಗಿದ ತುರ್ತು ಸಮಸ್ಯೆಯಿಂದ ಹೊರಬರಲು ಪರ್ಯಾಯ ಮಾರ್ಗವನ್ನು ಕಂಡುಕೊಳ್ಳುವ ತರಾತುರಿಯಲ್ಲಿ ಸುಳ್ಳಾಡುತ್ತಾರೆ. ಹಾಗೆಯೇ ಹೊಸತನದ ಹುಡುಕಾಟದಲ್ಲಿರುವ ಮಕ್ಕಳು, ದಿಢೀರನೆ ಎದುರಾಗುವ ಸವಾಲುಗಳನ್ನು ತೊಡೆದುಹಾಕಲು ಸುಳ್ಳಿನ ಮೊರೆ ಹೋಗುತ್ತಾರೆ ಎಂಬ ಅಂಶವನ್ನು ಮನಃಶಾಸ್ತ್ರಜ್ಞರು ಅಧ್ಯಯನದಿಂದ ಕಂಡುಕೊಂಡಿದ್ದಾರೆ.

ಹೀಗಾಗಿ, ಬಾಲ ಸಾಕ್ಷ್ಯದ ಕುರಿತಾಗಿ ಜನಸಾಮಾನ್ಯರು ತಳೆದಿರುವ ಅಭಿಪ್ರಾಯ ಮತ್ತು ನ್ಯಾಯ ವಿತರಣಾ ವ್ಯವಸ್ಥೆಯು ಹೊಂದಿರುವ ನಿಲುವನ್ನು ಒರೆಗೆ ಹಚ್ಚಿ ನೋಡಬೇಕಾದ ಅನಿವಾರ್ಯ ಇರುವುದನ್ನು ಸಹ ಈ ಅಧ್ಯಯನಗಳು ರುಜುವಾತುಪಡಿಸಿವೆ.

ಕ್ರಿಮಿನಲ್ ಪ್ರಕರಣಗಳಲ್ಲಿ ತನಿಖಾ ಸಂಸ್ಥೆಗಳು ಜನಾಭಿಪ್ರಾಯಕ್ಕೆ ಹಾಗೂ ಮಾಧ್ಯಮಗಳು ತಳೆಯುವ ನಿಲುವಿಗೆ ಮನ್ನಣೆ ನೀಡುವ ಪರಿಪಾಟವಿದೆ. ಸಾಮಾನ್ಯವಾಗಿ ಮಕ್ಕಳು ಅಥವಾ ಯುವತಿಯರ ಅಪಹರಣ, ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಎಷ್ಟೋ ಬಾರಿ ಆರೋಪಿಯ ಪಾತ್ರ ಮೇಲ್ನೋಟಕ್ಕೆ ಕಾಣದೇ ಹೋದರೂ ಬರೀ ಮೌಖಿಕ ಹೇಳಿಕೆಯನ್ನು ಆಧರಿಸಿ ಆತನನ್ನು ಬಂಧಿಸಿ, ಸಾರ್ವಜನಿಕವಾಗಿ ಅವಮಾನಿಸುವುದು ಖಂಡನಾರ್ಹ ಸಂಗತಿ.

ಅಂತರ್ಜಾತಿ ಮದುವೆ, ಒಂಟಿ ಮಹಿಳೆ, ವಿಧವೆ, ವಿಚ್ಛೇದಿತ ಅಥವಾ ವಿವಾಹೇತರ ಒಪ್ಪಿತ ಲೈಂಗಿಕ ಸಂಪರ್ಕದ ವಿಚಾರಗಳಲ್ಲೂ ನೈತಿಕ ಗೂಂಡಾಗಿರಿ ನಡೆಸಿ, ಸಾರ್ವಜನಿಕವಾಗಿ ಅವಮಾನಿಸುವ ಹತ್ತಾರು ನಿದರ್ಶನಗಳಿವೆ.

ಮಗುವಿನ ಹೇಳಿಕೆಯನ್ನಷ್ಟೇ ನಂಬಿ, ಅಮಾಯಕನ ಮೇಲೆ ಹಲ್ಲೆ ನಡೆಸಿದ ಮೇಲಿನ ಪ್ರಕರಣದಲ್ಲಿ, ಅನೈತಿಕ ಪೊಲೀಸ್ಗಿರಿ ನಡೆಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳದೇ ಬಿಟ್ಟಿರುವ ಪೊಲೀಸರ ನಡೆಯು ಒದೆ ತಿಂದ ಅಮಾಯಕನಿಗೆ ಗಾಯದ ಮೇಲೆ ಉಪ್ಪು ಸವರಿದಂತಿದೆ. ಗುಂಪು ಹಲ್ಲೆ, ಅನೈತಿಕ ಪೊಲೀಸ್ಗಿರಿ, ದೊಂಬಿಯಂತಹ ಪ್ರಕರಣಗಳಲ್ಲಿ ಪೊಲೀಸ್ ವ್ಯವಸ್ಥೆಯು ನಿರ್ದಾಕ್ಷಿಣ್ಯವಾಗಿ ಹಲ್ಲೆಕೋರರನ್ನು ಕಾನೂನಿನ ಅಡಿಯಲ್ಲಿ ಶಿಕ್ಷಿಸಬೇಕೆಂದು ತೆಹಸಿನ್ ಪೂನಾವಾಲಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ. ನೂರು ಆರೋಪಿಗಳು ಕಾನೂನಿನ ಕಕ್ಷೆಯಿಂದ ತಪ್ಪಿಸಿಕೊಂಡರೂ ಪರವಾಗಿಲ್ಲ, ಆದರೆ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂಬುದು ಅಪರಾಧಶಾಸ್ತ್ರದ ಮೂಲ ತತ್ವ.

ಬಹುಶಃ ನಮ್ಮನ್ನು ಕಾಪಾಡಲು ಮೇಲೊಬ್ಬ ಇದ್ದಾನೆ ಎಂಬ ನಂಬಿಕೆಯನ್ನು ಜೀವಂತವಾಗಿ ಇರಿಸಿದ್ದು, ಎತ್ತರದಲ್ಲಿನ ಸಿ.ಸಿ. ಟಿ.ವಿ. ಕ್ಯಾಮೆರಾ ಮತ್ತು ಅದರಲ್ಲಿನ ದೃಶ್ಯಾವಳಿಗಳನ್ನು ಶೀಘ್ರವಾಗಿ ಪರಿಶೀಲಿಸಿದ ಪೊಲೀಸ್ ಸಿಬ್ಬಂದಿಯ ಸಮಯಪ್ರಜ್ಞೆ! ಹಲ್ಲೆಕೋರರಿಂದ ಬದುಕುಳಿದು, ಪೊಲೀಸರು, ಕೋರ್ಟ್ ಕೇಸ್ನಿಂದ ಪಾರಾದೆನೆಂದು ನಿಟ್ಟುಸಿರು ಬಿಟ್ಟದ್ದಷ್ಟೇ ಫುಡ್ ಡೆಲಿವರಿ ಬಾಯ್ ಪಾಲಿಗೆ ಸಿಕ್ಕ ನ್ಯಾಯ! ಉಳಿದಂತೆ ಸಂವಿಧಾನದ ವಿಧಿ 21ರಲ್ಲಿ ಹೇಳಲಾದ ‘ರೈಟ್ ಟು ಲಿವ್ ವಿತ್ ಹ್ಯೂಮನ್ ಡಿಗ್ನಿಟಿ’ ಎಂಬುದು ಈ ಪ್ರಕರಣದಲ್ಲಿ ಬರೀ ಉಪನ್ಯಾಸದ ಸರಕೆನಿಸಿದೆ. ಆದರೆ ವಸ್ತುನಿಷ್ಠ ಪ್ರಾಥಮಿಕ ತನಿಖೆ, ತಾಂತ್ರಿಕ ಸಾಕ್ಷ್ಯಗಳು ಹಾಗೂ ಬಾಯಿಮಾತಿನ ಹೇಳಿಕೆಯಿಂದ ಅಮಾಯಕನೊಬ್ಬನಿಗೆ ಒದಗಬಹುದಾಗಿದ್ದ ದೀರ್ಘಕಾಲದ ಕಾನೂನು ಪ್ರಕ್ರಿಯೆಯ ಸಂಕೋಲೆಯನ್ನು ಹಠಾತ್ತನೆ ತೊಡೆದುಹಾಕಿ, ಆತನ ಸ್ವಾತಂತ್ರ್ಯವನ್ನು ಕಾಪಾಡಿದ್ದು ದೊಡ್ಡ ಸಮಾಧಾನದ ಸಂಗತಿ.

ಆಧುನಿಕ ತಂತ್ರಜ್ಞಾನವು ನ್ಯಾಯ ವಿತರಣಾ ವ್ಯವಸ್ಥೆಯ ರೂಢಿಗತ ಪರಿಪಾಟಗಳನ್ನು ಬದಲಾಯಿಸಿದೆ. ಶಂಕಿತರು, ಬಾಧಿತರು ಮತ್ತು ಅವರ ಸಹವರ್ತಿಗಳ ಮೊಬೈಲ್ ಫೋನ್ ಕರೆಗಳು, ಸಿ.ಸಿ. ಟಿ.ವಿ. ಕ್ಯಾಮೆರಾ ದೃಶ್ಯಾವಳಿ, ಗೂಗಲ್ ಲೊಕೇಷನ್ ವಿವರಗಳ ಶೀಘ್ರ ಪರಿಶೀಲನೆಯು ಅಮಾಯಕರ ನೆರವಿಗೆ ಬಂದು, ಕೋರ್ಟ್ ಕಲಾಪಗಳ ಹೊರೆಯನ್ನು ಕೊಂಚ ಮಟ್ಟಿಗಾದರೂ ತಗ್ಗಿಸಿವೆ.

ನಾಗರಿಕರು ಕಾನೂನನ್ನು ಉಲ್ಲಂಘಿಸಿ ಶಂಕಿತರನ್ನು ಸಾರ್ವಜನಿಕವಾಗಿ ಅವಮಾನಿಸಿ, ಹಲ್ಲೆ ನಡೆಸುವ ಪ್ರಕರಣಗಳು ಅನಾಗರಿಕ ಸಮಾಜದ ಲಕ್ಷಣ. ಇದು ವಾಸ್ತವವಾಗಿ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ನಿಗಾ ಇಡುವ ಸರ್ಕಾರದ ಅಸ್ತಿತ್ವವನ್ನೇ ಪ್ರಶ್ನಿಸುವಂತಿದೆ.

ಕ್ರಿಮಿನಲ್ ಪ್ರಕರಣಗಳಲ್ಲಿ ಆತುರಾತುರವಾಗಿ ಆರೋಪಿಯ ಅಥವಾ ಬಾಧಿತರ ಪರವಾಗಿ ತೀಕ್ಷ್ಣ ಪ್ರತ್ರಿಕ್ರಿಯೆಗಳನ್ನು ನೀಡುವುದು, ಈ ಮೂಲಕ ಸಾರ್ವಜನಿಕ ಅಭಿಪ್ರಾಯ ರೂಪಿಸಿ ನ್ಯಾಯಾಲಯ ಮತ್ತು ತನಿಖಾ ಸಂಸ್ಥೆಗಳ ಮೇಲೆ ಒತ್ತಡ ಉಂಟಾಗುವಂತೆ ಮಾಡುವುದು ನಿಜಕ್ಕೂ ಆತಂಕಪಡುವ ವಿಚಾರ. ವಸ್ತುನಿಷ್ಠತೆ, ತಾರ್ಕಿಕ ಮನೋಭಾವ ಮತ್ತು ಪೂರ್ವ ನಿದರ್ಶನಗಳನ್ನು ಅಧ್ಯಯನ ಮಾಡಿ, ಸೂಕ್ತ ವಿಚಾರಣೆಯ ನಂತರ ನ್ಯಾಯಾಲಯ ನೀಡುವ ತೀರ್ಪಿಗಾಗಿ ಕಾಯದೇ ಹತಾಶೆಯಲ್ಲಿ, ಆತುರದಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವುದು ಮಹಾಪರಾಧ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.