ನಾಡಿನೆಲ್ಲೆಡೆ ದಸರೆಯ ಸಂಭ್ರಮ ಎದ್ದು ಕಾಣುತ್ತಿದೆ. ಇತಿಹಾಸ ಪ್ರಸಿದ್ಧ ಮೈಸೂರಿನ ಜಂಬೂ ಸವಾರಿಯನ್ನೇ ಹೋಲುವ ಮೆರವಣಿಗೆಯನ್ನು ತಮ್ಮೂರಿನಲ್ಲೂ ಏರ್ಪಡಿಸಿ, ಮೈಸೂರಿನ ಸಂಭ್ರಮವನ್ನು ಕಣ್ತುಂಬಿ ಕೊಳ್ಳಲಾಗದ ಜನರ ಸಂತೋಷಕ್ಕೆ ಕಾರಣರಾಗುತ್ತಾರೆ ಆಯೋಜಕರು. ಇಂಥ ಮೆರವಣಿಗೆಗಳಲ್ಲಿ ಸಾವಿರಾರು ಮಂದಿ ಭಾಗಿಯಾಗಿ ಸಂಭ್ರಮಿಸುತ್ತಾರೆ. ಹಾಗೆಯೇ ಸರ್ಕಾರದ ವತಿಯಿಂದ ಪ್ರತಿವರ್ಷವೂ ದಸರಾ, ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವದಂತಹ ಸಂದರ್ಭಗಳಲ್ಲಿ ಸಾರ್ವಜನಿಕರಿಗೆಂದೇ ಹಲವಾರು ಸ್ಪರ್ಧೆ ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಾರಗಟ್ಟಲೆ ಆಯೋಜಿಸಲಾಗುತ್ತದೆ.

ಇಂತಹ ಕಾರ್ಯಕ್ರಮಗಳು ಎಷ್ಟರಮಟ್ಟಿಗೆ ಜನರನ್ನು ತಲುಪುತ್ತವೆ ಹಾಗೂ ಸಾರ್ವಜನಿಕರು ಅವುಗಳಲ್ಲಿ ಎಷ್ಟರಮಟ್ಟಿಗೆ ಪಾಲ್ಗೊಳ್ಳುತ್ತಾರೆ ಎಂಬುದು ಯೋಚಿಸಬೇಕಾದ ಪ್ರಶ್ನೆ.

ಸರ್ಕಾರದ ವತಿಯಿಂದ ಸಾರ್ವಜನಿಕರಿಗಾಗಿ ಏರ್ಪಡಿಸುವ ಕ್ರೀಡಾ ಸ್ಪರ್ಧೆಗಳು, ನೃತ್ಯ, ನಾಟಕ, ಹಾಡು, ರಂಗೋಲಿ, ಅಡುಗೆ ಸ್ಪರ್ಧೆಯಂತಹ ಕಾರ್ಯ ಕ್ರಮಗಳ ಕುರಿತಾಗಿ ಸಂಬಂಧಪಟ್ಟ ಇಲಾಖೆಯ ಕೆಲವು ಅಧಿಕಾರಿಗಳು ಸಮರ್ಪಕವಾಗಿ ಪ್ರಚಾರ ಮಾಡುವಲ್ಲಿ ಉದಾಸೀನ ತೋರುತ್ತಾರೆ. ಕಾರ್ಯಕ್ರಮಗಳೆಲ್ಲ ನಡೆದು, ಅವುಗಳ ಸಮಾರೋಪ ಸಮಾರಂಭದ ಕುರಿತು ಪತ್ರಿಕೆಗಳಲ್ಲಿ ವರದಿ ಬಂದಾಗಲೇ ಹೀಗೊಂದು ಕಾರ್ಯಕ್ರಮ ತಮ್ಮೂರಲ್ಲಿ ನಡೆದಿತ್ತು ಎಂಬ ಮಾಹಿತಿ ಜನರಿಗೆ ದೊರೆಯುತ್ತದೆ. ಕಾರ್ಯಕ್ರಮದ ಕುರಿತು ತಮಗೆ ಮೊದಲೇ ತಿಳಿದಿದ್ದರೆ ತಾವೂ ಅದರಲ್ಲಿ ಭಾಗಿಯಾಗಬಹುದಿತ್ತು ಎಂಬ ಭಾವನೆ ಜನರಲ್ಲಿ ಮೂಡುವುದು ಸಹಜ.

ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಕೆಲವೊಮ್ಮೆ ಅವರ ಅರಿವಿಗೇ ಬಾರದಂತೆ ನಡೆದುಹೋಗುತ್ತವೆ. ಸಮರ್ಪಕವಾಗಿ ಪ್ರಚಾರ ಮಾಡದಿರುವುದು ಇದಕ್ಕೆ ಕಾರಣ. ಸಾರ್ವಜನಿಕರೂ ಈ ಕೊರತೆಯ ಕುರಿತು ಧ್ವನಿ ಎತ್ತದೆ ಸುಮ್ಮನೆ ಉಳಿದುಬಿಡುತ್ತಾರೆ. ಸರ್ಕಾರಿ ಕಾರ್ಯಕ್ರಮಗಳೇ ಹೀಗೆ ಎಂದು ಉದಾಸೀನ ಮನೋಭಾವವನ್ನು ತಾಳುತ್ತಾರೆ.

ಅಧಿಕಾರಿಗಳು ತಾವು ಪ್ರತಿನಿಧಿಸುವ ಇಲಾಖೆ ಆಯೋಜಿಸುವ ಕಾರ್ಯಕ್ರಮದ ಕುರಿತು ಈಗಾಗಲೇ ಗುರುತಿಸಿಕೊಂಡಿರುವ ಕೆಲ ಕಲಾವಿದರ ಸಂಘದ ಪದಾಧಿಕಾರಿಗಳು ಹಾಗೂ ಕಲಾವಿದರನ್ನು ಸೇರಿಸಿ ಚರ್ಚಿಸುತ್ತಾರೆ. ಕಾರ್ಯಕ್ರಮದ ರೂಪುರೇಷೆಯನ್ನು ತಯಾರಿಸುತ್ತಾರೆ. ಕೆಲ ಕಲಾವಿದರು ಸಾಮಾಜಿಕ ಜಾಲತಾಣಗಳ ಗುಂಪುಗಳಲ್ಲಿ ಕಾರ್ಯಕ್ರಮದ ಕುರಿತು ಮಾಹಿತಿ ಹಂಚಿಕೊಳ್ಳುತ್ತಾರೆ. ಆ ಮಾಹಿತಿ ಕೆಲವೇ ನಿಗದಿತ ಜನರನ್ನು ತಲುಪುತ್ತದೆ. ಆದರೆ, ಬಹುಪಾಲು ಜನರನ್ನು ತಲುಪುವಲ್ಲಿ ವಿಫಲವಾಗುತ್ತದೆ.

ಸರ್ಕಾರದಿಂದ ಆಯೋಜನೆಗೊಳ್ಳುವ ಕಾರ್ಯಕ್ರಮಗಳು ಹಾಗೂ ಅವುಗಳ ಮಾಹಿತಿಯು ಎಲ್ಲ ಸಾರ್ವಜನಿಕ
ರನ್ನೂ ತಲುಪುವಂತೆ ನೋಡಿಕೊಳ್ಳಬೇಕಾದುದು ಅಗತ್ಯ. ಅಂದಾಗ ಮಾತ್ರ ಲಕ್ಷಾಂತರ ಹಣವನ್ನು ವ್ಯಯಿಸಿ ಆಯೋಜಿಸುವ ಕಾರ್ಯಕ್ರಮಗಳು ಸಾರ್ಥಕ್ಯವನ್ನು ಪಡೆಯುತ್ತವೆ. ಇಲ್ಲವಾದಲ್ಲಿ ಅವು ಬರೀ ಕಾಟಾಚಾರದ ಕಾರ್ಯಕ್ರಮಗಳಾಗುತ್ತವೆ. ಪ್ರತಿವರ್ಷ ಭಾಗವಹಿಸುವ ಕಲಾವಿದರೇ ಇಂಥ ಕಾರ್ಯಕ್ರಮಗಳಲ್ಲಿಪುನರಾವರ್ತಿತರಾಗುತ್ತಿದ್ದಲ್ಲಿ ಉಳಿದವರು ಅವಕಾಶ ವಂಚಿತರಾಗುತ್ತಾರೆ. ಕಲಾಭಿವ್ಯಕ್ತಿಗೆ ಎಲ್ಲರಿಗೂ ಸಮಾನ ಅವಕಾಶ ಸಿಗುವಂತಾದಾಗ ಆ ಸಮಾಜವು ಸಾಂಸ್ಕೃತಿಕವಾಗಿ ಶ್ರೀಮಂತವಾಗಲು ಸಾಧ್ಯ.

ಯಾವುದೇ ಕಾರ್ಯಕ್ರಮ ಅಥವಾ ಸ್ಪರ್ಧೆ ನಡೆಯುವಾಗ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿದರೆ, ಪಾಲ್ಗೊಂಡ ಸ್ಪರ್ಧಿಗಳಿಗೆ ಒಂದು ರೀತಿಯ ಹುಮ್ಮಸ್ಸು ಬರುತ್ತದೆ. ಪ್ರಚಾರದ ಕೊರತೆಯಿಂದ ಕೆಲವೊಮ್ಮೆ ಬೆರಳೆಣಿಕೆಯಷ್ಟು ಪ್ರೇಕ್ಷಕರು ಮಾತ್ರ ಕಾರ್ಯಕ್ರಮಗಳಲ್ಲಿ ಕಾಣಸಿಗುತ್ತಾರೆ. ಕಲಾವಿದರನ್ನು ಹುರಿದುಂಬಿಸಲು ಚಪ್ಪಾಳೆ ತಟ್ಟುವವರ ಅಗತ್ಯವೂ ಅಷ್ಟೇ ಅವಶ್ಯವಾಗಿರುತ್ತದೆ. ಅಧಿಕಾರಿಗಳು ಕೆಲವೊಮ್ಮೆ ಈ ಕೊರತೆಯನ್ನು ನೀಗಿಸಲು ಶಾಲಾ ಕಾಲೇಜು
ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತಾರೆ.

ಯಾವುದೇ ಸ್ಪರ್ಧೆ ಅಥವಾ ಕಾರ್ಯಕ್ರಮವನ್ನು ಏರ್ಪಡಿಸಿದಾಗ ಅದಕ್ಕೊಂದು ಪೂರ್ವತಯಾರಿ ಬೇಕಾಗುತ್ತದೆ. ಅದರಲ್ಲಿ ಎಲ್ಲರೂ ಒಳಗೊಳ್ಳಬೇಕು. ಕಾರ್ಯಕ್ರಮದ ವೇಳಾಪಟ್ಟಿ ಸೇರಿದಂತೆ ಸಂಪೂರ್ಣ ವಿವರಗಳು ಜನಸಮೂಹಕ್ಕೆ ತಲುಪಬೇಕು. ಸಾರ್ವಜನಿಕರು ಕಾರ್ಯಕ್ರಮ ದಲ್ಲಿ ಭಾಗಿಯಾಗಲು ನೋಂದಾಯಿಸಿಕೊಳ್ಳುವ ಬಗೆ, ದಿನಾಂಕ, ಕಾರ್ಯಕ್ರಮ ನಡೆಯುವ ಸ್ಥಳ, ಪಾಲಿಸಬೇಕಾದ ನಿಯಮಗಳು ಹೀಗೆ ಪ್ರತಿಯೊಂದೂ ಸಾರ್ವಜನಿಕರ ಗಮನಕ್ಕೆ ಬರುವಂತೆ ಮಾಹಿತಿಯನ್ನು ಪ್ರಚುರಪಡಿಸಬೇಕು.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ. ಹಿರಿಕಿರಿಯರೆನ್ನದೇ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದಾರೆ. ಅವುಗಳ ಮೂಲಕವೂ ಕಾರ್ಯಕ್ರಮದ ಕುರಿತಾದ ವಿವರಗಳನ್ನು ಸಾರ್ವಜನಿಕರಿಗೆ ತಲುಪಿಸಬಹುದು. ಅಂದಾಗ ಮಾತ್ರ ಒಂದು ಕಾರ್ಯಕ್ರಮ ಸಂಪೂರ್ಣವಾಗಿ ಯಶಸ್ವಿಯಾಗಲು ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.