ಭಾರತೀಯ ವಿಶ್ವವಿದ್ಯಾಲಯಗಳಿಂದ, ಇತ್ತೀಚಿನ ವರ್ಷಗಳಲ್ಲಿ ಡಾಕ್ಟರೇಟ್ ಪದವೀಧರರು ಹೆಚ್ಚಿನ ಸಂಖ್ಯೆಯಲ್ಲಿ ಹೊರಬರುತ್ತಿದ್ದಾರೆ. ಒಂದು ಅಂಕಿ ಅಂಶದ ಪ್ರಕಾರ, 2011ರಲ್ಲಿ 81,430 ಹಾಗೂ 2017ರಲ್ಲಿ 1,61,412ಮಹಾಪ್ರಬಂಧಗಳಿಗೆ ಪಿಎಚ್.ಡಿ ಪದವಿ ನೀಡಲಾಗಿದೆ. ಹೀಗೆ ದಿಢೀರನೆ ಮಹಾಪ್ರಬಂಧಗಳ ಮಹಾಪೂರ ಹರಿದು ಬಂದಿರುವುದಕ್ಕೋ ಏನೋ ಯುಜಿಸಿ, ಈ ಹಿಂದಿನ ಹತ್ತು ವರ್ಷಗಳಲ್ಲಿ ಅಂಗೀಕರಣಗೊಂಡ ಪಿಎಚ್.ಡಿ ಮಹಾಪ್ರಬಂಧಗಳ ಮರುಮೌಲ್ಯಮಾಪನಕ್ಕೆ ಮುಂದಾಗಿದೆ. ಅದೇನೇ ಇರಲಿ, ಪಿಎಚ್.ಡಿ ಮಹಾಪ್ರಬಂಧಗಳು ಮತ್ತು ಅವುಗಳಿಗೆ ಸಂಬಂಧಪಟ್ಟ ಡಾಕ್ಟರಲ್ ಶಿಕ್ಷಣವನ್ನು ಇಂದು ನಾವು ಪರಾಮರ್ಶಿಸಬೇಕಾದ ಅಗತ್ಯವಂತೂ ಇದೆ.

ಭಾರತೀಯ ಪಿಎಚ್.ಡಿ ಪ್ರಬಂಧಗಳು ಗುಣಮಟ್ಟದ ಕೊರತೆಯ ಜೊತೆಗೆ ಎದುರಿಸುತ್ತಿರುವ ಇತರ ಪ್ರಮುಖ ಆರೋಪಗಳೆಂದರೆ, ಕಾಪಿ-ಪೇಸ್ಟ್ ಮಾಡಿ ಕೃತಿಚೌರ್ಯದಿಂದ ಪರೀಕ್ಷೆಯಲ್ಲಿ ಪಾಸಾಗಿ ಪದವಿ ಗಿಟ್ಟಿಸುವುದು; ಬೇರೆಯವರಿಂದ ಮಹಾಪ್ರಬಂಧಗಳನ್ನು ಬರೆಸುವುದು; ಈ ಸಂಶೋಧನಾ ಪ್ರಬಂಧಗಳು ಸಮಾಜಕ್ಕೆ ಅನುಪಯುಕ್ತವಾಗಿರುವುದು ಇತ್ಯಾದಿ. ಈ ಎಲ್ಲ ಬೆಳವಣಿಗೆಗಳನ್ನು ಇತ್ತೀಚೆಗೆ ‘ವ್ಯಾಪಾರೀಕರಣ’ಗೊಂಡ ನಮ್ಮ ಶೈಕ್ಷಣಿಕ ವಾತಾವರಣ ಹಾಗೂ ಮುಂಬಡ್ತಿ ಮುಂತಾದ ಸೌಲಭ್ಯಗಳಿಗೆ ಸಂಶೋಧನೆಯನ್ನು ಕಡ್ಡಾಯ ಮಾಡಿದ ವ್ಯವಸ್ಥೆಯ ಭಾಗವಾಗಿಯೇ ನೋಡಬೇಕು. ಆದರೆ ನಿಜವಾದ ಸಮಸ್ಯೆ ಇರುವುದು ಈ ಸಂಗತಿಗಳಲ್ಲಿ ಅಲ್ಲ. ಪ್ರಾಮಾಣಿಕವಾಗಿ ಸಂಶೋಧನೆ ಕೈಗೊಂಡ ಮಹಾಪ್ರಬಂಧಗಳೂ ಅಂತರರಾಷ್ಟ್ರೀಯ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಸೋಲುತ್ತಿರುವುದು ಚಿಂತಿಸಬೇಕಾದ ಸಂಗತಿ. ಆದರೆ ಇದಕ್ಕೆ ಅನೇಕರು, ಇಲ್ಲಿಯ ಮೂಲ ಸೌಕರ್ಯಗಳ ಕೊರತೆ, ಧನಸಹಾಯದ ಯೋಜನೆಗಳ ಅಭಾವ, ಸ್ವಜನಪಕ್ಷಪಾತ, ಅಧಿಕಾರಶಾಹಿಯಿಂದ ಆಗುವ ಅಡೆತಡೆ ಮುಂತಾದವನ್ನು ಉದಾಹರಿಸುತ್ತಾರೆ. ಆದರೆ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿದರೂ ನಾವು ಉತ್ತಮ ಮಹಾಪ್ರಬಂಧಗಳನ್ನು ರಚಿಸುವುದು ಕಷ್ಟದ ಸಂಗತಿಯೇ. ಏಕೆಂದರೆ ಪಿಎಚ್.ಡಿ ಶಿಕ್ಷಣವನ್ನೂ ಒಳಗೊಂಡಂತೆ, ಭಾರತೀಯ ವಿಶ್ವವಿದ್ಯಾಲಯಗಳ ಒಟ್ಟಾರೆ ಬಿಕ್ಕಟ್ಟು ಇರುವುದು ಗ್ರಹಿಕೆಗೆ ಸಂಬಂಧಪಟ್ಟ ‘ಜ್ಞಾತಿಯ’ ಸಮಸ್ಯೆಯಲ್ಲಿ. ಅಂದರೆ ಒಂದು ಕಸುಬಿನ ಹಿನ್ನೆಲೆ, ಅದರ ಮರ್ಮ ಗೊತ್ತಿಲ್ಲದೇ ಮಾಡಿದಾಗ ಉಂಟಾಗುವ ಎಡವಟ್ಟುಗಳು ಈ ಕ್ಷೇತ್ರದಲ್ಲಿ ಆಗುತ್ತಿವೆ.

ಪಿಎಚ್.ಡಿ ಪದವಿಗೆ ತನ್ನದೇ ಆದ ಇತಿಹಾಸ ಇದೆ. ‘ಡಾಕ್ಟರ್ ಆಫ್ ಫಿಲಾಸಫಿ’ಯಲ್ಲಿ, ಡಾಕ್ಟರೇಟ್ ಅಂದರೆ ಉನ್ನತ ಶಿಕ್ಷಣದಲ್ಲಿ ಪಾಠ ಮಾಡಲು ಕೊಡುತ್ತಿದ್ದ ಒಂದು ಬಗೆಯ ಪರವಾನಗಿ. ಐತಿಹಾಸಿಕ ಅರ್ಥದಲ್ಲಿ ‘ಡಾಕ್ಟರ್’ ಎಂದರೆ ಒಂದು ವಿಷಯದಲ್ಲಿ ಪರಿಣತಿ ಸಾಧಿಸಿದ ವಿದ್ವಾಂಸ. ಇಲ್ಲಿ ‘ಫಿಲಾಸಫಿ’ ಎನ್ನುವುದು ಒಂದು ಜ್ಞಾನಶಾಖೆಯನ್ನು ಸೂಚಿಸುವುದಿಲ್ಲ. ಬದಲಾಗಿ ಜ್ಞಾನದ ಹಂಬಲ, ಸ್ವಂತ ಆಲೋಚನೆ ಮಾಡುವುದು ಎನ್ನುವ ಅರ್ಥವನ್ನು ಹೊಂದಿದೆ.

ನಮ್ಮ ತಿಳಿವಳಿಕೆಯೇ ತಪ್ಪಾದರೆ ನಾವು ಕೈಗೊಳ್ಳುವ ಕೆಲಸದಲ್ಲೂ ಲೋಪದೋಷಗಳು ಉಂಟಾಗುತ್ತವೆ. ಅಂತೆಯೇ ಸಂಶೋಧನೆಗೆ ಸಂಬಂಧಪಟ್ಟಂತೆ ಸರಿಯಾದ ತಿಳಿವಳಿಕೆಯ ಕೊರತೆಯಿಂದ ಅಸಂಬದ್ಧ ಮಹಾಪ್ರಬಂಧಗಳು ರಚನೆಯಾಗುವುದನ್ನು ಕಾಣುತ್ತಿದ್ದೇವೆ. ಸಂಶೋಧನೆಯ ವಿಧಿ-ವಿಧಾನ-ವೈಧಾನಿಕತೆ ನಮ್ಮ ವಿದ್ಯಾರ್ಥಿಗಳಿಗೆ ಇನ್ನೂ ಮನನವಾಗೇ ಇಲ್ಲ. ಉದಾಹರಣೆಗೆ, ಮಹಾಪ್ರಬಂಧಗಳನ್ನು ಬರೆಯುವಾಗ ಈಗಾಗಲೇ ನಡೆದಿರುವ ಅಧ್ಯಯನಗಳ ಸಮೀಕ್ಷೆ ಮಾಡುವುದು ಎಂದರೇನು? ಅದನ್ನು ಏಕೆ, ಹೇಗೆ ಮತ್ತು ಎಲ್ಲಿ ಬರೆಯಬೇಕು? ಈಗಾಗಲೇ ಕೈಗೊಂಡ ಅಧ್ಯಯನಗಳನ್ನು ಮರುಮೌಲ್ಯಮಾಪನ ಮಾಡಿ, ಅಲ್ಲಿರುವ ಸಮಸ್ಯೆ ಮತ್ತು ಆ ‘ಅಧ್ಯಯನಗಳ ಮಿತಿ’ಯನ್ನು ಹೇಗೆ ಗುರುತಿಸಬೇಕು? ಸಂಶೋಧನೆಯ ಸಮಸ್ಯೆಯನ್ನು ಒಂದು ಪ್ರಶ್ನೆಯನ್ನಾಗಿ ಹೇಗೆ ರೂಪಿಸಿ ಬೆಳೆಸಬೇಕು ಇತ್ಯಾದಿಗಳನ್ನು ಗಹನವಾದ ತಿಳಿವಳಿಕೆಯಿಂದ ಕೈಗೊಂಡಿದ್ದು ಎನ್ನಿಸುವುದಿಲ್ಲ.

ಸಂಶೋಧನೆಯ ಪರಿಭಾಷೆಗಳ ಉಪಯೋಗವನ್ನೇನೋ ಇವುಗಳಲ್ಲಿ ಕಾಣಬಹುದು. ಆದರೆ ಅವುಗಳ ಅರ್ಥಪೂರ್ಣ ಅನ್ವಯಗಳನ್ನು ಕಾಣುವುದು ಕಷ್ಟ. ಇದಕ್ಕೆ ಅಪವಾದಗಳಿರಬಹುದು. ಅದು ಬೇರೆ ವಿಷಯ! ಹಾಗಾಗಿ, ಡಾಕ್ಟರಲ್ ಸಂಶೋಧನೆಯ ಬಿಕ್ಕಟ್ಟನ್ನು ಹೋಗಲಾಡಿಸುವುದೆಂದರೆ, ಸಂಶೋಧನೆ ಎಂದರೇನು, ಅದನ್ನು ಕೈಗೊಳ್ಳುವುದು ಹೇಗೆ ಎಂಬಂತಹ ‘ತಿಳಿವಳಿಕೆ’ಗೆ ಸಂಬಂಧಪಟ್ಟ ಸಂಗತಿಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುವುದು. ಸಂಶೋಧನೆ ಎಂಬುದು ನಿರುಪಯುಕ್ತವಾದ ಬೌದ್ಧಿಕ ಶ್ರಮವಲ್ಲ, ಅದನ್ನು ಕೈಗೊಳ್ಳುವುದು ಕಠಿಣವಾದರೂ ಅದು ಅಮೂಲ್ಯ ಕಾರ್ಯ ಎನ್ನುವುದನ್ನು ಅವರಿಗೆ ತಿಳಿಸಬೇಕು.

ಸಂಶೋಧನೆಗೆ ಪದವಿ- ಪುರಸ್ಕಾರ ಸಿಗುವುದು ಅದರ ಬಾಹ್ಯ ಅಲಂಕಾರಗಳಾದರೆ, ಲೋಕಚಿಂತನೆ, ವಿಮರ್ಶಾತ್ಮಕವಾಗಿ ಆಲೋಚಿಸಿ ಜ್ಞಾನ ಸೃಷ್ಟಿಸುವುದು, ಸಮಸ್ಯೆಗಳನ್ನು ಬೌದ್ಧಿಕ ಹಂತದಲ್ಲಿ ಬಿಡಿಸುವುದು ಅದರ ಆಂತರಿಕ ಮೌಲ್ಯಗಳಾಗಿವೆ. ಅಲ್ಲದೆ ಪಿಎಚ್.ಡಿಗಾಗಿ ಸಂಶೋಧನೆ ಕೈಗೊಳ್ಳುವುದು ಸಂಶೋಧನೆಯ ಪ್ರಾರಂಭವಷ್ಟೆ; ಇದು ನಿರಂತರವಾಗಿ ನಡೆಯಬೇಕಾದ ಕೆಲಸ. ಏಕೆಂದರೆ ಸಂಶೋಧನೆ ಎಂಬುದು ಒಂದು ಜೀವನ ಕ್ರಮ.ಕೆಲಸ ಮಾಡುತ್ತ ಕಲಿಯುವುದು, ಅರಿತು ಕೆಲಸ ಮಾಡುವುದು ಹೆಚ್ಚು ಉಪಯುಕ್ತ. ಆದ್ದರಿಂದ ಪಿಎಚ್.ಡಿ ಹಂತದ ಸಂಶೋಧನೆಗಳ ಗುಣಮಟ್ಟ ಕಾಪಾಡಬೇಕಾದರೆ, ಗ್ರಹಿಕೆ ಹಾಗೂ ಕಲಿಕೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸ್ಪಂದಿಸುವುದು ಇವತ್ತಿನ ಜರೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.