ಕೊಂಬೆಯಲ್ಲಿ ನೇತಾಡುವ ಪುಸ್ತಕಗಳಲ್ಲಿ ತಮಗೆ ಬೇಕಾದುದನ್ನು ಆಯ್ದುಕೊಳ್ಳುವ ಮಕ್ಕಳು, ಹಣ್ಣನ್ನು ತಿಂದು ಮುಗಿಸುವಂತೆ ಪುಸ್ತಕದ ಎಲ್ಲ ಪುಟಗಳನ್ನೂ ತನ್ಮಯದಿಂದ ಓದುತ್ತಾರೆ

ಮಹಾರಾಷ್ಟ್ರದ ಅತ್ಯಂತ ಹಿಂದುಳಿದ ಜಿಲ್ಲೆ ಎನಿಸಿರುವ ಗಡ್ಚಿರೋಲಿಯ ಭಮ್ರಗಡ ತಾಲ್ಲೂಕಿನ ಕೊಯಂಗುಡದ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಮರದಲ್ಲಿ ಹಣ್ಣುಗಳ ಬದಲಿಗೆ ಪುಸ್ತಕಗಳು ನೇತಾಡುತ್ತಿವೆ! ಬೇಸಿಗೆಯ ರಜೆ ಇದ್ದರೂ ಪ್ರತಿದಿನ ಮುಂಜಾನೆ ಶಾಲೆಗೆ ಓಡಿಬರುವ ಮಕ್ಕಳು, ಮರದ ರೆಂಬೆ– ಕೊಂಬೆಗಳಲ್ಲಿ ನೇತಾಡುವ ಬಣ್ಣಬಣ್ಣದ ಪುಸ್ತಕಗಳನ್ನು ಬಿಡಿಸಿಕೊಂಡು ತನ್ಮಯರಾಗಿ ಓದುತ್ತಾ ಕಾಲ ಕಳೆಯುತ್ತಿದ್ದಾರೆ.

ಜಿಲ್ಲಾ ಪಂಚಾಯಿತಿ ಸ್ಥಾಪಿಸಿರುವ ಈ ಶಾಲೆಯಲ್ಲಿ 175 ಮಕ್ಕಳಿದ್ದಾರೆ. ವಿಜ್ಞಾನ, ಜನಪದ, ಕೃಷಿ, ನೀತಿ ಕತೆ, ಕಾರ್ಟೂನ್, ಲಾವಣಿಪದ, ಗ್ರಾಮೀಣ ಆಟೋಟ, ನಕ್ಷತ್ರಯಾನ, ಬಾಹ್ಯಾಕಾಶ ಕೌತುಕ, ಚಾಲಕರಹಿತ ಕಾರು, ಸೈಬೋರ್ಗ್, ತ್ರೀಡಿ ಚಿತ್ರ... ಹೀಗೆ ಹತ್ತು ಹಲವು ಆಕರ್ಷಕ ವಿಷಯಗಳ ಕುರಿತ ಪುಸ್ತಕಗಳನ್ನು ಮರದಲ್ಲಿ ನೇತುಹಾಕಿ, ಮಕ್ಕಳನ್ನು ಪಠ್ಯಪುಸ್ತಕಗಳ ಓದಿನಿಂದ ಆಚೆಗೆ ತಂದು ಹೊರಗೊಂದು ವೈಶಿಷ್ಟ್ಯಪೂರ್ಣ ಜಗತ್ತಿದೆ, ಕಲಿಯಲು, ಆನಂದಿಸಲು ಅನೇಕ ವಿಷಯ ಗಳಿವೆ ಎಂದು ತೋರಿಸಿಕೊಡುತ್ತಿದ್ದಾರೆ ಶಾಲೆಯ ಶಿಕ್ಷಕ ವಿನೀತ್ ಪದ್ಮಾವರ್. ಮರಕ್ಕೆ ‘ಪುಸ್ತಕಾಂಛ ಜಾಡ್’ (ಪುಸ್ತಕದ ಮರ) ಎಂದು ಹೆಸರಿಟ್ಟಿದ್ದೇವೆ ಎಂದು ಅವರು ಉತ್ಸಾಹದಿಂದ ನುಡಿಯುತ್ತಾರೆ.

‘ಹಣ್ಣಿನ ಮರದಿಂದ ಹಣ್ಣು ಕಿತ್ತುಕೊಂಡು ತಿನ್ನುವುದಕ್ಕೂ ಮುಂಚೆ ಅದು ಸಿಹಿಯಾಗಿದೆಯೋ ಇಲ್ಲವೋ ಎಂಬ ಕುತೂಹಲವಿರುವಂತೆ, ಶಾಲೆಗೆ ಓಡೋಡಿ ಬರುವ ಮಕ್ಕಳು ತಾವು ಕೈಹಾಕಿ ಕೊಂಬೆ ಯಿಂದ ಬಿಡಿಸಿಕೊಂಡ ಪುಸ್ತಕ ಓದಲು ತೊಡಗಿದಾಗ ಖುಷಿ ನೀಡುತ್ತದೋ ಇಲ್ಲವೋ ಎಂಬ ಕುತೂಹಲ ಪ್ರದರ್ಶಿಸುವುದನ್ನು ಕಂಡಾಗ ನಮ್ಮ ಕೆಲಸ ಸಾರ್ಥಕ ವಾದಂತೆ ಭಾಸವಾಗುತ್ತದೆ’ ಎನ್ನುವ ವಿನೀತ್, ‘ಪ್ರತೀ ಮೂರು ದಿನಗಳಿಗೆ ಹೊಸ ಪುಸ್ತಕಗಳು ಕೊಂಬೆಯಲ್ಲಿ ನೇತಾಡುತ್ತಿರುತ್ತವೆ’ ಎಂಬ ಮಾಹಿತಿ ನೀಡುತ್ತಾರೆ.

ಬೇಕಾದ ಪುಸ್ತಕವನ್ನು ಆಯ್ಕೆ ಮಾಡಿಕೊಳ್ಳುವ ಮಕ್ಕಳು ಇಡೀ ಹಣ್ಣನ್ನು ತಿಂದು ಮುಗಿಸುವಂತೆ ಪುಸ್ತಕದ ಎಲ್ಲ ಪುಟಗಳನ್ನೂ ತನ್ಮಯದಿಂದ ಓದು ತ್ತಾರೆ. ಬೆಳೆಯುವ ಮಕ್ಕಳಲ್ಲಿ ಅಪಾರ ಕುತೂಹಲ ಇರುತ್ತದೆ. ಪ್ರಕೃತಿಯ ವಿಸ್ಮಯಗಳ ಬಗ್ಗೆ ಅನೇಕ ಪ್ರಶ್ನೆ, ಅನುಮಾನಗಳು ಇರುತ್ತವೆ. ಅವುಗಳಿಗೆಲ್ಲ ಒಬ್ಬರೇ ಶಿಕ್ಷಕರ ಬಳಿ ಉತ್ತರಗಳಿರುವುದಿಲ್ಲ. ಆಗ ಈ ಪುಸ್ತಕಗಳು ನೆರವಿಗೆ ಬರುತ್ತವೆ ಎನ್ನುವ ಶಾಲೆಯ ಶಿಕ್ಷಕರು, ಮಕ್ಕಳಿಗೆ ವಿಜ್ಞಾನ– ತಂತ್ರಜ್ಞಾನ ಕುರಿತಾದ ಪುಸ್ತಕಗಳು ಹೆಚ್ಚು ಹಿಡಿಸಿವೆ, ಆದರೆ ಅವೆಲ್ಲವೂ ಇಂಗ್ಲಿಷ್ನಲ್ಲಿವೆ, ಮಾತೃಭಾಷೆ ಮರಾಠಿಯಲ್ಲಿ ಇಲ್ಲ ಎಂಬ ನೋವು ತೋಡಿಕೊಳ್ಳುತ್ತಾರೆ.

ಮರದಲ್ಲೀಗ ತ್ರೀಡಿ ಪುಸ್ತಕಗಳ ಹೊಸ ಫಸಲು ಬಂದಿದ್ದು ಅವುಗಳಿಗೆ ಭಾರಿ ಬೇಡಿಕೆ ಉಂಟಾಗಿದೆ. ತ್ರೀಡಿ ಆಯಾಮದ ಕತೆ ಪುಸ್ತಕಗಳನ್ನು ಓದಲು ತ್ರೀಡಿ ಕನ್ನಡಕಗಳನ್ನೂ ನೀಡುತ್ತಿರುವ ಶಾಲೆಯ ಆಡಳಿತ ಮಂಡಳಿಯು ಮಕ್ಕಳಲ್ಲಿರುವ ಪುಸ್ತಕಾಸಕ್ತಿಯನ್ನು ಕಂಡು ದಂಗಾಗಿದೆ. ‘ನನಗೆ, ನನಗೆ ಎಂದು ಮಕ್ಕಳು ಪುಸ್ತಕಕ್ಕಾಗಿ ಕಿತ್ತಾಡಿಕೊಂಡದ್ದೂ ಇದೆ. ತ್ರೀಡಿ ಕನ್ನಡಕ ಧರಿಸಿ, ಪುಸ್ತಕ ಹಿಡಿದು ಕೂತರೆ ಮಧ್ಯಾಹ್ನದ ಊಟದ ಪರಿವೆಯೂ ಮಕ್ಕಳಿಗೆ ಇರುವುದಿಲ್ಲ’ ಎನ್ನುತ್ತಾರೆ ಮರಾಠಿ ಶಿಕ್ಷಕಿ ಶೀತಲ್ ಡೊಂಗ್ರೆ.

ಗಾಳಿ, ಮಳೆ, ದೂಳಿನಿಂದ ರಕ್ಷಿಸಲು ವಾರಾಂತ್ಯದಲ್ಲಿ ಪುಸ್ತಕಗಳನ್ನು ಶಾಲಾ ಕೊಠಡಿಯ ಕಪಾಟಿನಲ್ಲಿ ಇಡಲಾಗುತ್ತದೆ. ಸೋಮವಾರದಿಂದ ಶುಕ್ರವಾರದವರೆಗೆ ಮಕ್ಕಳು ಅಲ್ಲಿಗೇ ಬಂದು ಓದಿ, ಓದಿದ್ದು ಮುಗಿದ ನಂತರ ಹಿಂತಿರುಗಿ ಕೊಂಬೆಗೆ ನೇತು ಹಾಕಬೇಕು ಎಂಬ ನಿಯಮವಿದೆ. ಪುಸ್ತಕ ಓದಿ ಮುಗಿಸಿದ ಮಕ್ಕಳು ತಾವು ಓದಿದ ಪುಸ್ತಕದ ಹೆಸರು, ಕತೆಯ ಸಾರಾಂಶ ಮತ್ತು ತಮಗೇನನ್ನಿಸಿತು ಹಾಗೂ ಪ್ರಶ್ನೆಗಳೇನಿವೆ ಎಂಬುದನ್ನು ಶನಿವಾರದಂದು ಇತರ ಸಹಪಾಠಿಗಳೆದುರು ಹೇಳಬೇಕು. ಇದನ್ನು ಮಕ್ಕಳು ಅತ್ಯಂತ ಖುಷಿಯಿಂದ ಮಾಡುತ್ತಿದ್ದಾರೆ. ಸಾಮಾನ್ಯ ದಿನಗಳಲ್ಲಿ ಶಾಲೆ ತಪ್ಪಿಸಿಕೊಳ್ಳುತ್ತಿದ್ದ ಮಕ್ಕಳೂ ಈಗ ಪುಸ್ತಕದ ಮರಕ್ಕೆ ಆಕರ್ಷಿತರಾಗಿದ್ದಾರೆ ಎನ್ನುವ ಗ್ರಾಮ ಪಂಚಾಯಿತಿ ಸದಸ್ಯ ನರಸಿಂಗ ರಾವ್, ಪಂಚಾಯಿತಿ ವತಿಯಿಂದ ರಾತ್ರಿಯ ವೇಳೆಯೂ ಮಕ್ಕಳ ಓದಿಗೆ ವ್ಯವಸ್ಥೆ ಕಲ್ಪಿಸಲು ಪ್ರಯತ್ನ ನಡೆದಿದೆ ಎಂದಿದ್ದಾರೆ.

ತಮ್ಮ ಇಬ್ಬರು ಮಕ್ಕಳು ಮರಾಠಿ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳನ್ನು ಸಲೀಸಾಗಿ ಓದುವುದನ್ನು ರೂಢಿಸಿಕೊಳ್ಳುತ್ತಿದ್ದಾರೆ ಎನ್ನುವ ರಕ್ಷಕ್ ಮಾನೆ, ಶಾಲೆಯ ಪ್ರಯತ್ನವನ್ನು ಮನಸಾರೆ ಹೊಗಳುತ್ತಾರೆ. ನಾಲ್ಕು ಮತ್ತು ಐದನೇ ತರಗತಿಗಳಲ್ಲಿ ಓದುತ್ತಿರುವ ಶೀತಲ್ ಮತ್ತು ರಾಮಸ್ವರೂಪ್, ‘ನಮಗೆ ತ್ರೀಡಿ ಯಲ್ಲಿರುವ ಸೂಪರ್ಮ್ಯಾನ್, ಸ್ಪೈಡರ್ಮ್ಯಾನ್ ಕಾಮಿಕ್ಸ್ ತುಂಬಾ ಇಷ್ಟ. ಏಲಿಯನ್ಸ್ ಬಗೆಗಿನ ಪುಸ್ತಕ ಗಳು ನಮಗೆ ಬೇಕು’ ಎನ್ನುತ್ತಾರೆ. ಶಿಕ್ಷಕರು ಮಾಡಿದ ಪುಟ್ಟ ಪ್ರಯತ್ನ ಮಕ್ಕಳಲ್ಲಿ ಓದಿನ ಅಭಿರುಚಿ ಬೆಳೆಸುವಲ್ಲಿ ದೊಡ್ಡ ಪರಿಣಾಮವನ್ನೇ ಉಂಟುಮಾಡಿದೆ.

ಕೇವಲ 30 ಪುಸ್ತಕಗಳಿಂದ ಶುರುವಾದ ಪುಸ್ತಕದ ಮರದಲ್ಲೀಗ 300 ಪುಸ್ತಕಗಳಿವೆ. ಯುನಿಸೆಫ್ ಮತ್ತು ಖಾಸಗಿ ಸಹಭಾಗಿತ್ವದಿಂದಾಗಿ ಮಹಾರಾಷ್ಟ್ರದ ಅನೇಕ ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಶಾಲೆಗಳಲ್ಲಿ ಗ್ರಂಥಾಲಯಗಳಿವೆ. ಮಕ್ಕಳಲ್ಲಿ ಪುಸ್ತಕಪ್ರೀತಿ ಮತ್ತು ಓದಿನ ಅಭಿರುಚಿ ಬೆಳೆಸುವ ಕೊಯಂಗುಡ ಶಾಲೆಯ ಶಿಕ್ಷಕನ ವಿನೂತನ ಪ್ರಯತ್ನ ದೇಶದ ಇತರ ರಾಜ್ಯಗಳೂ ಅನುಕರಿಸಬಹುದಾದ ಸುಲಭ ಮಾದರಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.