ಶುದ್ಧ ಕನ್ನಡ ಮಾತನಾಡಿದರೆ, ಕನ್ನಡದಲ್ಲಿರುವ ಪದಗಳನ್ನೇ ಸಹಜವಾಗಿ ಬಳಸಿದರೆ ‘ನೀವು ಶುದ್ಧ ಕನ್ನಡ ಮಾತಾಡುತ್ತೀರಿ, ಆ ಸಾಹಿತ್ಯಕ ಪದಗಳೆಲ್ಲ ನಮಗೆ ಅರ್ಥವಾಗೋದು ಕಷ್ಟ ಸರ್, ಸ್ವಲ್ಪ ಬಿಡಿಸಿ ಹೇಳಿ’ ಎಂದು ಈಗಿನ ವಿದ್ಯಾರ್ಥಿಗಳು ಹೇಳಿದಾಗ ಗಾಬರಿಯಾಗುತ್ತದೆ. ಅಷ್ಟಕ್ಕೂ ನಾನು ಬಳಸಿದ ಧನ್ಯತೆ, ಬಿಸಿಲುಕೋಲು, ಸಾರ್ಥಕತೆಯಂತಹ ಪದಗಳೆಲ್ಲಾ ತೀರಾ ಕಷ್ಟವಾದ, ಸುಲಭಕ್ಕೆ ಅರ್ಥಮಾಡಿಕೊಳ್ಳಲು, ಜೀರ್ಣಿಸಿಕೊಳ್ಳಲು ಆಗದ ಪದಗಳೇ ಎಂದು ಯೋಚಿಸುವಂತೆ ಆಗುತ್ತದೆ.

ಹಾಗಿದ್ದರೆ, ಮುಂದೆ ವಿದ್ಯಾರ್ಥಿಗಳ ಜೊತೆ ಇನ್ನೆಷ್ಟು ಸರಳವಾಗಿ ಮಾತನಾಡಬೇಕು ಎಂದು ಯೋಚಿಸುವಾಗ, ಕನ್ನಡ ಮೇಷ್ಟ್ರರೊಬ್ಬರ ಅನುಭವದ ಮಾತು ಇನ್ನಷ್ಟು ವಾಸ್ತವವನ್ನು ಮುಂದಿರಿಸುತ್ತದೆ. ‘ಈಗಿನ ವಿದ್ಯಾರ್ಥಿಗಳು ಹಾಗೇ ಸರ್. ಪದವಿ ಓದುತ್ತಿದ್ದರೂ ಅವರಿಗೆ ಕನ್ನಡದ ಎಷ್ಟೋ ಸಹಜ ಪದಗಳೇ ಗೊತ್ತಿಲ್ಲ. ದಿನನಿತ್ಯ ನಾವು ಕಾಣುವ ಕೆಲವೊಂದು ವಸ್ತುಗಳಿಗೆ ಏನೆನ್ನುತ್ತಾರೆ, ನಮ್ಮ ಕೆಲವು ಅನುಭವಗಳನ್ನು ಯಾವ ಪದಗಳಿಂದ ಹೇಳಿಕೊಳ್ಳುವುದು ಎಂದೆಲ್ಲಾ ಗೊಂದಲಕ್ಕೆ ಬೀಳುತ್ತಾರೆ. ಭಾಷೆ, ಶಬ್ದ, ಅರ್ಥ, ಅವುಗಳ ಜೊತೆಗೆ ಬೆಸೆದುಕೊಂಡಿರುವ ಭಾವಗಳನ್ನು ಅವರು ಅರ್ಥಮಾಡಿಕೊಳ್ಳುತ್ತಿಲ್ಲ ಅಥವಾ ಅವರಿಗೆ ಅರ್ಥವಾಗುತ್ತಿಲ್ಲ. ಪಠ್ಯದಲ್ಲಿರುವ ಸರಳವಾದ ತೇಜಸ್ವಿಯವರ ಬರಹ, ಕೆ.ಎಸ್.ನರಸಿಂಹಸ್ವಾಮಿ ಅವರ ಸರಳ ಪದ್ಯ, ಸಾಮಾನ್ಯ ಕನ್ನಡದಲ್ಲಿರುವ ಲೇಖನಗಳು, ಸಣ್ಣಪುಟ್ಟ ಹೋಲಿಕೆಗಳನ್ನು ನಾವು ಎಷ್ಟೇ ಸರಳ, ಸುಂದರ ಭಾಷೆಯಲ್ಲಿ, ಶಬ್ದಗಳಲ್ಲಿ ಹೇಳಿದರೂ ಅದು ಅವರಿಗೆ ಸರಳ ಎಂದು ಅನ್ನಿಸುವುದೇ ಇಲ್ಲ. ಅದ್ಯಾವುದೋ ಆಳದಿಂದ ಪಾತಾಳಗರಡಿ ಹಾಕಿ ಎತ್ತಿಕೊಂಡು ತಂದಂತಹ ಅನುಭವವಾಗುತ್ತದೆ ಅವರಿಗೆ’ ಎಂದು ಅವರು ಹೇಳಿದಾಗ, ಈ ಕಾಲದ ವಿದ್ಯಾರ್ಥಿಗಳಿಗೆ ಭಾಷೆಯ ಕುರಿತಾಗಿ ಇರುವ ಅತೀವ ನಿರಾಸಕ್ತಿ ಸ್ಪಷ್ಟವಾಯಿತು.

ಸಹಜವೇ ಅಸಹಜವಾಗಿ ಕಾಣಿಸುತ್ತಿರುವ ಹೊತ್ತಿದು. ನಾವು ಸಹಜವಾಗಿ ಮಾತನಾಡಿದ್ದು, ಸಹಜವಾಗಿ ಬದುಕುವುದೇ ಕೆಲವರಿಗೆ ಅಸಹಜವಾಗಿ ಕಾಣಿಸುತ್ತದೆ. ಶುದ್ಧವಾಗಿ ಕನ್ನಡ ಮಾತನಾಡಲು ಶುರು ಮಾಡಿದರೆ, ಪರಿಸರಕ್ಕೆ ಏನಾದರೂ ಕೊಡುಗೆ ಕೊಡಬೇಕು ಎಂಬ ಕಾರಣದಿಂದ ಪ್ಲಾಸ್ಟಿಕ್ ಬಳಸದೇ ಇರಲು ನಿರ್ಧರಿಸಿದರೆ, ಜೀವನಪದ್ಧತಿಯನ್ನು ಸರಳಗೊಳಿಸಿ ಸಹಜವಾಗಿ ಬದುಕಿದರೆ, ನಮ್ಮನ್ನು ಹೊಗಳುವವರಿದ್ದರೂವಿಕ್ಷಿಪ್ತ ಜೀವಿಗಳಂತೆ, ನಾವು ತೀರಾ ಅಸಹಜವಾಗಿ ಬದುಕುತ್ತಿದ್ದೇವೆ ಎಂದುಕೊಳ್ಳುವವರೇ ಹೆಚ್ಚು ಮಂದಿ.

ನಮ್ಮ ಕನ್ನಡ ಸಾಹಿತ್ಯದ ಕತೆಯೂ ಹೀಗೇ ಆಗಿದೆ. ಶುದ್ಧವಾಗಿ ಕನ್ನಡವನ್ನು ಧ್ಯಾನಿಸುವುದು, ಶುದ್ಧವಾಗಿ ಬರೆಯುವುದನ್ನು ಕೂಡ ವಿಕ್ಷಿಪ್ತ ಕಣ್ಣುಗಳಿಂದ ನೋಡುವವರಿದ್ದಾರೆ. ಭಾಷೆ ಎನ್ನುವುದು ಪುಳಕ ನೀಡುವ, ಒಂದು ಆಹ್ಲಾದಕರ ಅನುಭವವಾಗಿ ಈ ಕಾಲದ ಹುಡುಗ, ಹುಡುಗಿಯರನ್ನು ಕಾಡುವುದಿಲ್ಲವೇಕೆ ಎಂದು ಯೋಚನೆಯಾಗುತ್ತದೆ. ಕನ್ನಡ ಎನ್ನುವುದು ಕಾಲೇಜು ಹಂತದ ವಿದ್ಯಾರ್ಥಿಗಳಿಗೆ ಬರೀ ಪರೀಕ್ಷೆ ಬರೆಯುವ ಒಂದು ಭಾಷೆಯಾಗಿ ಉಳಿದಿದೆ ಬಿಟ್ಟರೆ ಹೃದಯದ ಭಾವನೆಯಾಗಿ ಉಳಿದಿಲ್ಲ ಎನ್ನುವುದು, ಸೂಕ್ಷ್ಮವಾಗಿ ಗಮನಿಸಿದರೆ ಗೊತ್ತಾಗುತ್ತದೆ.

ಪದವಿ ಪೂರೈಸಿ ಕೆಲಸದಲ್ಲಿರುವ ಒಬ್ಬ ಯುವಕನಿಗೆ ‘ಯಾವ ಯಾವ ಕನ್ನಡ ಕೃತಿಗಳನ್ನು ಓದಿದ್ದೀರಿ?’ ಎಂದು ಕೇಳಿದೆ. ‘ಅಯ್ಯೋ ಯಾಕೆ ಓದಬೇಕು ಗೊತ್ತಾಗುತ್ತಿಲ್ಲ. ಓದುವುದರಿಂದ ಏನು ಸಿಗುತ್ತದೆ? ನಾನು ಇದುವರೆಗೆ ಏನೂ ಓದದೇ ಬದುಕಿಲ್ಲವಾ? ಆದ್ರೆ ಒಂದು ನಿಜ ನೋಡಿ, ಸಾಹಿತ್ಯವನ್ನು ಯಾಕೆ ಓದಬೇಕು ಎಂದು ನಮಗೆ ಪಿಯುಸಿಯಿಂದ ಡಿಗ್ರಿಯವರೆಗೂ ಯಾವ ಮೇಷ್ಟ್ರೂ ಹೇಳಿಕೊಟ್ಟಿಲ್ಲ, ಹಾಗಾಗಿ ಓದಿಲ್ಲವೇನೋ’ ಎಂದು ಆ ಹುಡುಗ ನಸುನಕ್ಕ.

‘ಓದುವುದರಿಂದ ನಮ್ಮೊಳಗೆ ಸಕಾರಾತ್ಮಕತೆ ಬೆಳೆಯುತ್ತದೆ, ಮನಃಸ್ಥಿತಿ ಗಟ್ಟಿಯಾಗುತ್ತದೆ, ತಾಳ್ಮೆ ಜಾಸ್ತಿಯಾಗುತ್ತದೆ, ಹೊಸತೇನನ್ನೋ ಕಂಡುಕೊಳ್ಳುವಿಕೆ, ಕುತೂಹಲ ರಂಗೇಳುತ್ತದೆ, ಎಲ್ಲಕ್ಕಿಂತಲೂ ಜಾಸ್ತಿ ಆತ್ಮಸಂತೃಪ್ತಿ ಸಿಗುತ್ತದೆ. ಹಿರಿಯರ ಕೃತಿಗಳು, ಅವರು ಬದುಕಿದ ರೀತಿ, ಒಂದು ಕಾಲದ ಜೀವನ ವಿಧಾನವನ್ನು ಧುತ್ತೆಂದು ಕಣ್ಣ ಮುಂದೆಯೇ ಮೂಡಿಸಿ ಜೀವನೋತ್ಸಾಹ ಕೊಡುತ್ತವೆ. ಹಾಗಾಗಿ, ಒಂದಷ್ಟು ಓದಲು ಪ್ರಯತ್ನಿಸು’ ಅಂತ ನನ್ನದೇ ಸರಳ ಭಾಷೆಯಲ್ಲಿ ಹೇಳಿದೆ. ನನ್ನ ಇಂಗಿತ, ಭಾವನೆ ಅವನಿಗೆ ಅರ್ಥವಾಯಿತೋ ಅಥವಾ ಇವೆಲ್ಲ ಯೋಚನೆಗಳೇ ಅಪ್ರಸ್ತುತ ಎಂದು ಅನ್ನಿಸಿತೋ ಗೊತ್ತಿಲ್ಲ. ಇದು ಆ ಹುಡುಗನೊಬ್ಬನ ಮಾತಲ್ಲ. ಕನ್ನಡ ಭಾಷೆ, ಸಾಹಿತ್ಯದ ಬಗ್ಗೆ ಈ ಕಾಲದ ವಿದ್ಯಾರ್ಥಿಗಳಿಗೊಂದು ಸಕಾರಾತ್ಮಕ ದೃಷ್ಟಿಯೇ ಇಲ್ಲವೇನೋ ಅನ್ನಿಸುತ್ತದೆ.

ಕನ್ನಡ ನಾಡಲ್ಲಿ ಇರುವ ಬಹುತೇಕ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯ ಆಳ ಗೊತ್ತಿರಬೇಕಿಲ್ಲ, ಆ ಭಾಷೆಯ ಒಂದು ಕೃತಿಯನ್ನೂ ಓದಬೇಕೆಂದಿಲ್ಲ, ಕನ್ನಡ ಎಷ್ಟು ಗಹನವಾಗಿದೆ ಎಂದು ತಿಳಿಯಲು ನಾಡಿನ ಯಾವ ಸಾಂಸ್ಕೃತಿಕ, ಸಾಹಿತ್ಯಕ ಚಟುವಟಿಕೆಯೂ ಬೇಕಿಲ್ಲ ಎನ್ನುವಂತಹ ವಾತಾವರಣ ಸೃಷ್ಟಿಯಾಗಿರುವುದು ಆತಂಕಪಡುವಂತಹ ಸಂಗತಿ.

ಒಂದು ಪರಂಪರೆ ಮುಂದುವರಿಯಬೇಕಾದದ್ದು ಯುವಜನರಿಂದಲೇ ಅಲ್ಲವೆ? ಕಾಲೇಜಿನಲ್ಲಿ ಕಲಿಯುತ್ತಿರುವ ಈ ಯುವಜನರೇ ಕನ್ನಡವನ್ನು ಭವಿಷ್ಯ ದಲ್ಲಿಯೂ ಅಪ್ಪಿ ಹಿಡಿಯದೇ ಇದ್ದರೆ? ಇವರಿಗಿಷ್ಟು ಸಾಕು ಎಂದು ಬರೀ ಅಂಕಕ್ಕೆ, ಬೋಧನೆಗೆ ಕನ್ನಡವನ್ನು ಸೀಮಿತಗೊಳಿಸುತ್ತ, ಬದುಕಿಡೀ ಜೀವನೋತ್ಸಾಹ ತುಂಬುವ ಸಾಹಿತ್ಯ, ಓದಿನ ಕುರಿತು ಉಪನ್ಯಾಸಕರೇ ತಿಳಿಹೇಳದಿದ್ದರೆ ಪರಂಪರೆ ಬೆಳೆಯುವುದೇ? ಕನ್ನಡವು ಒಂದು ನದಿಯಾಗಿ ಹರಿಯುವುದೇ?

ಲೇಖಕ: ಉಪನ್ಯಾಸಕ, ಕಾರ್ಕಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.