ಜಗತ್ತು ಕೈಬೆರಳುಗಳಿಗೆ ದಕ್ಕುತ್ತಿರುವಂತೆಯೇ ಜನರಲ್ಲಿ ವೈಜ್ಞಾನಿಕ ಪ್ರಜ್ಞೆ ಮೈದಳೆದು ಪಾರಂಪರಿಕ ಅಂಧಶ್ರದ್ಧೆ, ಅಪಾಯಕಾರಿ ಆಚರಣೆಗಳು ಕ್ರಮೇಣ ಮರೆಯಾಗುತ್ತವೆಂಬ ವಿಶ್ವಾಸವಿತ್ತು. ಆದರೇನು? ಈ ವಿದ್ಯುನ್ಮಾನ ದಿನಮಾನಗಳಲ್ಲೂ ಮಳೆ ಬರಲೆಂದು ಕಪ್ಪೆಗಳ ಮದುವೆ, ಕತ್ತೆಗಳ ಮೆರವಣಿಗೆ, ನೀರಿನಲ್ಲಿ ಒಂಟಿಕಾಲಿನ ಮೇಲೆ ನಿಲ್ಲುವಂತಹ ಅರ್ಥವಿಲ್ಲದ ಆಚರಣೆಗಳಿವೆ. ಸಂಖ್ಯೆ, ವಾರ, ಮಾಸ, ವರ್ಷ ನಮ್ಮ ಸರಾಗಕ್ಕೆ ನಮ್ಮದೇ ನಿರ್ಮಿತಿ. ಆದರೂ ಸಂಖ್ಯೆ 13 ಅನಿಷ್ಟವೆಂಬ ಭ್ರಮೆ ಕಾಡುತ್ತದೆ. ಇಂಥ ತಿಥಿ, ವಾರ ಅಥವಾ ಮಾಸ ಅಶುಭವಾಗುವುದಾದರೂ ಹೇಗೆ? ‘ಇಂದಿನ ದಿನವೇ ಶುಭ ದಿನ’ ಎಂದ ಪುರಂದರದಾಸರ ಹಿತನುಡಿ ಸಾರ್ವಕಾಲಿಕ.

ವಿಜ್ಞಾನದ ಫಲ ಬೇಕು, ವಿಜ್ಞಾನ ಬೇಡ ಎನ್ನುವ ಧೋರಣೆಯೇ ಬಹುತೇಕ ಮುಂದುವರಿದಿದೆ. ಮಕ್ಕಳಿಗೆ ಪಾಠ ಹೇಳಿದ ಹಿರಿಯ ಶಿಕ್ಷಕ
ರೊಬ್ಬರು ಪಿಂಚಣಿ ವಿಳಂಬವಾದ ಕಾರಣಕ್ಕೆ ವಿಷ ಸೇವಿಸಿ ಇತ್ತೀಚೆಗೆ ಸಾವಿಗೆ ಶರಣಾದರು. ಈ ಸಂಗತಿ ವಿಷಾದದೊಂದಿಗೆ ಬೇಸರ ಹುಟ್ಟಿಸುತ್ತದೆ. ಕಿಂಚಿತ್ ತರ್ಕ ಬಳಸಿದ್ದರೂ ಆತ ಹತಾಶೆಯನ್ನು ಗೆಲ್ಲಬಹುದಿತ್ತು. ನಿಸರ್ಗದ ಕೂಸಾದ ಮನುಷ್ಯ ನಿಸರ್ಗವನ್ನು
ನಿರ್ಲಕ್ಷಿಸುವುದೇ ಒಂದು ಮೌಢ್ಯವೆನ್ನೋಣ.

ನಮ್ಮ ಮಕ್ಕಳಿಗೆ ಉತ್ತಮ ವಿಜ್ಞಾನ ಶಿಕ್ಷಣವೇನೊ ದೊರೆಯುತ್ತಿದೆ. ನ್ಯೂನತೆಯೆಂದರೆ, ಅದು ತರಗತಿಗಷ್ಟೇ ಸೀಮಿತವಾಗಿಬಿಟ್ಟಿದೆ. ವೈಜ್ಞಾನಿಕ ಮನೋಧರ್ಮವು ಬೋಧನೆ ಮತ್ತು ಕಲಿಕೆಯ ಮುಖ್ಯ ಉತ್ಪನ್ನವಾದಾಗಲೇ ವಿಜ್ಞಾನ ಕಲಿಕೆಯ ಸಾರ್ಥಕ್ಯ. ಹಕ್ಕಿ ಹೇಗೆ ಹಾರುತ್ತದೆ? ಸಮುದ್ರದ ನೀರೇಕೆ ಉಪ್ಪು? ಆಕಾಶವೇಕೆ ನೀಲಿ? ಎಣ್ಣೆಯಲ್ಲಿ ಸಕ್ಕರೆ ಏಕೆ ಕರಗದು ಎಂಬಂಥ ಪ್ರಶ್ನೆಗಳು ಸ್ವಾಭಾವಿಕವಾದವು.

ಇತಿಹಾಸದಾದ್ಯಂತ ಮಹತ್ತರ ಆವಿಷ್ಕಾರಗಳು ಕೈಗೂಡಿರುವುದು ಬೌದ್ಧಿಕ ಕುತೂಹಲಗಳಿಂದಲೇ. ಕುತೂಹಲದ ಶಮನದಿಂದ ಸಮಾಧಾನ, ಹೊಸದೊಂದು ತಿಳಿವಿನ ಮಜಲಿಗೆ ಹೆಜ್ಜೆಯಿಡುವ ಲವಲವಿಕೆ. ಎಂದಮೇಲೆ ವ್ಯಕ್ತಿಯ ಬುಧ್ಯಂಕಕ್ಕಿಂತಲೂ (ಇಂಟಲಿಜೆನ್ಸ್ ಕೋಷಂಟ್) ಆತನ ಕೌತುಕಾಂಕ (ಕ್ಯೂರಿಯಾಸಿಟಿ ಕೋಷಂಟ್) ಹೆಚ್ಚು ಮಹತ್ವದ್ದು. ವಿದ್ಯಾರ್ಥಿಗಳು ಪಠ್ಯದಲ್ಲಿ ಇರುವುದನ್ನು ಪ್ರಶ್ನಿಸಿದರೆ, ‘ಪಠ್ಯದಲ್ಲಿ ಇರುವುದಕ್ಕಿಂತಲೂ ನಿನಗೆ ಹೆಚ್ಚು ಗೊತ್ತಿದೆಯೇ?’ ಎಂದು ಬೋಧಕರು ತರಾಟೆಗೆ ತೆಗೆದುಕೊಳ್ಳುವುದು ಸಸಿಯನ್ನು ಬೇರುಸಹಿತ ಕಿತ್ತಷ್ಟೇ ಪ್ರಮಾದ. ನಮ್ಮ ಯುವಜನ ಪ್ರಾಚೀನ ಗ್ರಂಥಗಳನ್ನು ಅಧ್ಯಯನ ಮಾಡಿದರಷ್ಟೇ ಅವುಗಳಲ್ಲಿನ ಸರಿ, ತಪ್ಪು ತೀರ್ಮಾನಿಸಲು ಸಾಧ್ಯ. ಇಲ್ಲದಿದ್ದರೆ ಅತಿಶಯೋಕ್ತಿ, ರೋಚಕತೆ ರಾರಾಜಿಸಿ ಮೌಢ್ಯವು ಸಮಾಜವನ್ನು ಆಳತೊಡಗುತ್ತದೆ. ತಾರಸಿಯ ಮೇಲೆ ಕೂತ ಕಾಗೆಯಲ್ಲಿ, ಒಡೆದ ಗಾಜಿನಲ್ಲಿ ಅಥವಾ ಆಲಿಕಲ್ಲು ಮಳೆಯಲ್ಲಿ ವಿಪತ್ತಿನ ಮುನ್ಸೂಚನೆಗಳನ್ನು ಕಾಣುವುದಿದೆ. ಇವಕ್ಕೆ ‘ಪರಿಹಾರೋಪಾಯ’ಗಳಾಗಿ ಕುಂಡದಲ್ಲಿ ಅಮೂಲ್ಯ ಆಹಾರ ದ್ರವ್ಯಗಳು ಸುಟ್ಟು ಹೊಗೆಯಾಡುತ್ತವೆ, ಶಿಲೆಯ ಮೇಲಿನಿಂದ ಹಾಲು, ಜೇನು ಧುಮ್ಮಿಕ್ಕಿ ಪೋಲಾಗುತ್ತವೆ, ಮೂಕಪ್ರಾಣಿಗಳು ಬಲಿಯಾಗುತ್ತವೆ. ಕಾರಣ ಅರಿಯುವ, ತರ್ಕಬದ್ಧವಾಗಿ ಆಲೋಚಿಸುವ, ಪ್ರಶ್ನಿಸುವ ಜಾಯಮಾನ ರೂಢಿಸಿಕೊಂಡರೆ ಇಂತಹ ಮೂಢಾಚರಣೆಗಳಿಗೆ ಆಸ್ಪದವಾಗದು.

ಸರ್ವರಲ್ಲೂ ಒಬ್ಬ ವಿಜ್ಞಾನೋಪಾಸಕ ಇರಬೇಕೆಂಬ ನಮ್ಮ ಸಾಂವಿಧಾನಿಕ ಆಶಯ ಸ್ತುತ್ಯರ್ಹ. ಧರ್ಮ ಮತ್ತು ವಿಜ್ಞಾನ ಎರಡರ ಉದ್ದೇಶವೂ ಒಂದೇ- ಸತ್ಯಾನ್ವೇಷಣೆ. ಧರ್ಮದ ಮಾರ್ಗ ಭಾವನಾ ಪ್ರಧಾನ, ವಿಜ್ಞಾನದ್ದು ಬುದ್ಧಿ ಪ್ರಧಾನ. ವಿಜ್ಞಾನಿ ಐನ್‍ಸ್ಟೀನ್ ‘ಧರ್ಮರಹಿತ ವಿಜ್ಞಾನ ಕುರುಡು, ವಿಜ್ಞಾನರಹಿತ ಧರ್ಮ ಕುಂಟು’ ಎಂದು ಧರ್ಮ ಮತ್ತು ವಿಜ್ಞಾನದ ನಡುವೆ ಇರಬೇಕಾದ ಅವಿನಾಭಾವವನ್ನು ಮನಮುಟ್ಟುವಂತೆ ಸ್ಫುಟವಾಗಿಸಿದ್ದಾರೆ.

ಭಾರತೀಯ ಭೌತಶಾಸ್ತ್ರಜ್ಞ ಸರ್ ಸಿ.ವಿ.ರಾಮನ್, ಒಂದು ಪಾರದರ್ಶಕ ಮಾಧ್ಯಮದ ಮೂಲಕ ಬೆಳಕು ಸಾಗಿದಾಗ ಅದರ ಮತ್ತು ಚದುರಿದ ಬೆಳಕಿನ ತರಂಗ ದೂರದಲ್ಲಾಗುವ ವ್ಯತ್ಯಯವನ್ನು ಪತ್ತೆಹಚ್ಚಿದರು. ಈ ಆವಿಷ್ಕಾರಕ್ಕೆ ಅವರಿಗೆ ನೊಬೆಲ್ ಪ್ರಶಸ್ತಿ ಸಂದಿತು. ಸಂಶೋಧನೆಯ ಯಶಸ್ಸು ಇರುವುದು ಸ್ವತಂತ್ರ ಚಿಂತನೆ, ಪರಿಶ್ರಮದಲ್ಲಿಯೇ ವಿನಾ ಪರಿಕರದಲ್ಲಲ್ಲ ಎನ್ನುವುದನ್ನು ಸ್ವತಃ ರಾಮನ್ ಸಾಬೀತುಪಡಿಸಿದರು. ಈ ‘ರಾಮನ್ ಪರಿಣಾಮ’ ಕಂಡುಹಿಡಿಯುವುದಕ್ಕೆ ಅವರು ವ್ಯಯಿಸಿದ್ದು ಕೇವಲ ₹ 200.

ಧ್ವನಿ ವಿಜ್ಞಾನದಲ್ಲೂ ರಾಮನ್ ಅಪ್ರತಿಮ ಸಂಶೋಧನೆ ನಡೆಸಿದರು. ಪ್ರತಿವರ್ಷ ಫೆಬ್ರುವರಿ 28ನೇ ತೇದಿಯನ್ನು ‘ರಾಷ್ಟ್ರೀಯ ವಿಜ್ಞಾನ ದಿನ’ ಎಂದು ಸಂಭ್ರಮಿಸಲಾಗುತ್ತಿದೆ. ಅಂದು ದೇಶದೆಲ್ಲೆಡೆ ವಿಜ್ಞಾನ ಚಿಂತನ, ಮಂಥನ, ಪ್ರಾತ್ಯಕ್ಷಿಕೆ, ಪರಿಕಲ್ಪನೆ, ಇತ್ತೀಚಿನ ಪ್ರಗತಿ ಕುರಿತು ಚರ್ಚೆ ಏರ್ಪಾಡಾಗುತ್ತವೆ. ಈ ಬಾರಿ ಕಳೆಗಟ್ಟಿಸುವ ಕಾರ್ಯಸೂಚಿ ‘ಜಾಗತಿಕ ಯೋಗಕ್ಷೇಮಕ್ಕೆ ಜಾಗತಿಕ ವಿಜ್ಞಾನ’.

ಜಗತ್ತಿನ ಎಲ್ಲ ಸಂಸ್ಕೃತಿಗಳೂ ಮೂಢನಂಬಿಕೆಗಳ ಶೃಂಖಲೆಯಿಂದ ಮುಕ್ತಗೊಳ್ಳಬೇಕು. ಇದೊಂದು ನಿದರ್ಶನ. ಸ್ಮಾರ್ಟ್‌ಫೋನ್ ವಿಜ್ಞಾನದ ಕೊಡುಗೆ, ನಮಗೆ ಹಾಗೂ ಇತರರಿಗೆ ತೊಂದರೆಯಾಗದಂತೆ ಅದರ ಬಳಕೆ ವೈಜ್ಞಾನಿಕ ಧರ್ಮ. ರಾಮನ್ ಅವರಿಗೆ ನಾವು ಸಲ್ಲಿಸಬಹುದಾದ ಗೌರವವೆಂದರೆ, ವಿಜ್ಞಾನದ ಫಲಗಳ ಅನುಭೋಗದೊಡನೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.