ಪುಸ್ತಕಗಳಿಲ್ಲದ ಕೊಠಡಿಯನ್ನು ಆತ್ಮವಿಲ್ಲದ ಶರೀರಕ್ಕೆ ಹೋಲಿಸುವುದಿದೆ. ಪುಸ್ತಕದ ನೋಟವೇ ಜ್ಞಾನ, ನೆನಪುಗಳನ್ನು ಪುಟಿಸುವುದು. ‘ಪುಸ್ತಕಂ ಹಸ್ತ ಭೂಷಣಂ’ ಎನ್ನುವುದು ಚೆನ್ನುಡಿ. ಅಮೆರಿಕದ ಕಾದಂಬರಿಕಾರ ಜಾರ್ಜ್ ಆರ್.ಆರ್. ಮಾರ್ಟಿನ್ ‘ಒಬ್ಬ ಓದುಗ ಸಾಯುವ ಮುನ್ನ ಸಾವಿರ ಬಾರಿ ಜೀವಿಸುತ್ತಾನೆ. ಓದದವ ಒಮ್ಮೆ ಮಾತ್ರ ಜೀವಿಸುತ್ತಾನೆ’ ಎನ್ನುತ್ತಾರೆ. ಪುಸ್ತಕವನ್ನು ಓದದೇ ಇಡುವುದು ಅದನ್ನು ಸುಡುವು
ದಕ್ಕಿಂತಲೂ ಹೀನ ಕೃತ್ಯವೆಂಬ ನಿಷ್ಠುರ ನುಡಿಯಲ್ಲಿ ಓದುವ ಪ್ರಾಮುಖ್ಯವನ್ನು ಗುರುತಿಸಬೇಕು.

ಫೋನಿನಲ್ಲಿ ನಾವು ನಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುವುದೇ ಹೆಚ್ಚು. ಇದರ ಫಲವಾಗಿ ಸಲ್ಲದ ಕೀಳರಿಮೆ. ಆದರೆ ಒಂದು ಒಳ್ಳೆಯ ಕೃತಿಯನ್ನು ಓದಿದಾಗ ನಮ್ಮ ಬಗ್ಗೆ ನಮಗೆ ಹೆಮ್ಮೆ ಎನ್ನಿಸುವುದು. ನಾವು ಸಂಪನ್ನರ ಮೂಲಕ ಜಗತ್ತನ್ನು ಕಾಣುವುದೇ ಇದಕ್ಕೆ ಕಾರಣ. ಮನಸ್ಸುಗಳು ಸಮೂಹ ಮಾಧ್ಯಮದಲ್ಲಿ ಎಗ್ಗಿಲ್ಲದೇ ಮುಳುಗಿಹೋಗಿವೆ. ‘ಡಿಜಿಟಲ್ ಡಿಸ್ಟ್ರ್ಯಾಕ್‌ಷನ್’ ಅಥವಾ ಅಂಕೀಯ ವ್ಯಾಕುಲ ನಮ್ಮನ್ನು ಅತಿಕ್ರಮಿಸದಂತೆ ಮಾಡುವ ಶಕ್ತಿ ಒಂದು ಪುಸ್ತಕಕ್ಕಿದೆ. ವಾಟ್ಸ್‌ಆ್ಯಪ್‌ನಲ್ಲಿ ಇಷ್ಟೊಂದು ಹರಟಿದೆನಲ್ಲ ಎಂಬ ಪ್ರಮಾದಪ್ರಜ್ಞೆ ಕಾಡಬಹುದು. ಆದರೆ ಎಂತಹ ಪುಸ್ತಕವಾಗಲಿ, ಓದಿದೆನಲ್ಲ ಎನ್ನುವ ಅಪರಾಧ ಭಾವಕ್ಕೆ ಅವಕಾಶವಿರದು. ಓದು ನಮ್ಮ ದಿನಚರಿಯ ಪ್ರತ್ಯೇಕಿಸಲಾಗದ ಭಾಗವಾಗಬೇಕಿದೆ.

ಗ್ರಂಥಗಳು ಅರಿವಿನೊಂದಿಗೆ ಮನ ಬೆಳಗಿಸುತ್ತವೆ ಹಾಗೂ ಕೊನೆಯಿರದ ಸಾಹಸಗಳನ್ನು ಹೊತ್ತ ಕಲ್ಪನೆಗಳ ಕಿಡಿ ಹೊತ್ತಿಸುತ್ತವೆ. ರೋಚಕ ರಹಸ್ಯವೊ, ಪ್ರಣಯವೊ ಅಥವಾ ಇತಿಹಾಸದಲ್ಲಿ ಸಂದ ಘಟನೆಗಳತ್ತ ಜಿಗಿತವೊ, ಗ್ರಂಥಗಳು ಸಾದರಕ್ಕೆ ತೆರೆದುಕೊಳ್ಳುತ್ತವೆ. ವಾಸ್ತವವಾಗಿ ಗ್ರಂಥಾಲಯವೆಂದರೆ, ಗ್ರಂಥಗಳನ್ನು ಒಪ್ಪ ಓರಣವಾಗಿ ಇರಿಸಿದ ಕಪಾಟುಗಳ ಸಾಲುಗಳಲ್ಲ. ಅಲ್ಲಿ ಒಂದೊಂದು ಕೃತಿಯೂ ನಮ್ಮೊಂದಿಗೆ ಮಾತನಾಡುತ್ತದೆ. ಓದು ಕಲಿಕೆಯ ಹೆಬ್ಬಾಗಿಲು. ಅದು ಅನಿವಾರ್ಯ ಕೌಶಲ. ಈಗಂತೂ ಆನ್‌ಲೈನ್ ಪುಸ್ತಕಗಳು, ಇ-ಬುಕ್‌ಗಳು ಓದನ್ನು ಬಹು ಸರಾಗಗೊಳಿಸಿವೆ. ಹಾಗಾಗಿ ಎಲ್ಲರೂ ದಿನಕ್ಕೆ ಕನಿಷ್ಠ 30 ನಿಮಿಷ
ಗಳನ್ನಾದರೂ ಓದಿಗೆ ಮೀಸಲಿಡಬೇಕು. ಓದು ಎಲ್ಲರ ಹವ್ಯಾಸವಾದರೆ ಬಹುತೇಕ ಸಾಮಾಜಿಕ ಸಮಸ್ಯೆಗಳು ಶಮನಗೊಂಡಾವು. ವಿಶೇಷವಾಗಿ ಯುವಪೀಳಿಗೆಯನ್ನು ಬಾಧಿಸುವ ನಾನಾ ವ್ಯಸನ, ದುಶ್ಚಟ, ದುರಭ್ಯಾಸಗಳಿಗೆ ಓದುವ ಹವ್ಯಾಸವೇ ಸಂಜೀವಿನಿ.

ಮನೆ ನಿರ್ಮಾಣದ ನೀಲನಕ್ಷೆಯಲ್ಲಿ ಪಾದರಕ್ಷೆಗಳನ್ನಿಡಲು ಒಂದು ಗೂಡು ಇದ್ದೇ ಇರುತ್ತದೆ. ಆದರೆ ಪುಸ್ತಕಗಳನ್ನಿಡಲು ಒಂದು ಗೂಡು ಕಲ್ಪಿಸಬೇಕಲ್ಲವೆ? ಮರೆತರೆ ಎಂತಹ ವಿಪರ್ಯಾಸ? ಬೀಚಿಯವರು ಪುಸ್ತಕದ ಮೌಲ್ಯವನ್ನು ಮೊನಚಾಗಿಯೇ ಬಿಂಬಿಸಿದರು. ಒಮ್ಮೆ ತಿಂಮ ಮಾಸ್ತರರ ಮನೆಗೆ ಹೋಗಿ ನಿಘಂಟು ಕೇಳುತ್ತಾನೆ. ಇಲ್ಲೇ ನೋಡಬೇಕು, ಹೊರಗೊಯ್ಯುಬಾರದೆಂಬುದು ಗುರುಗಳ ಕರಾರು. ಮುಂದೊಂದು ದಿನ ಗುರುಗಳಿಗೆ ಪೊರಕೆ ತುರ್ತು ಅಗತ್ಯವಾಗುತ್ತದೆ. ತಿಂಮನ ಮನೆಗೆ ಬಂದು ಕೇಳಿದಾಗ ಅವರು ಅದೇ ಉತ್ತರ ಎದುರಿಸಬೇಕಾಗುತ್ತದೆ!

ಪ್ರತಿವರ್ಷ ಆಗಸ್ಟ್ 9, ‘ರಾಷ್ಟ್ರೀಯ ಪುಸ್ತಕ ಪ್ರೇಮಿಗಳ ದಿನ’. ಓದಲು ತಕ್ಕ ತಾಣವು ಉತ್ತಮ ಗ್ರಂಥದ ಆಯ್ಕೆಗೆ ಪ್ರೇರೇಪಿಸುತ್ತದೆ. ಗ್ರಂಥಕರ್ತರನ್ನು ಮೆಚ್ಚಲು, ನೆನೆಯಲು ಮತ್ತು ಕಥೆ ಹೇಳುವ, ಕೇಳುವ ಕಲೆಯನ್ನು ಉತ್ತೇಜಿಸಲು ಈ ಸಂದರ್ಭ ಸೂಕ್ತವಾಗಿದೆ. ಗ್ರಂಥಗಳ ಮತ್ತು ನಮ್ಮೊಳಗಿನ ಓದುಗನ ಶಕ್ತಿಯನ್ನು ಗುರುತಿಸುವ ದಿನವಿದು. ಪುಸ್ತಕಗಳು ನಮ್ಮ ಸುತ್ತಮುತ್ತಲಿನ ಜಗತ್ತಿನ ಬಗ್ಗೆ ನಮ್ಮ ಕಲ್ಪನೆ ಮತ್ತು ತಿಳಿವಳಿಕೆಯನ್ನು ವಿಸ್ತರಿಸುತ್ತವೆ. ಮಣ್ಣಿನ ಬಿಲ್ಲೆ, ಚರ್ಮದ ಸುರುಳಿ, ಕೆತ್ತನೆಗಳ ಮೂಲಕ ಸಾಗಿ ಕಾಗದಕ್ಕೆ ಸಂದ ಸಾಹಿತ್ಯವು ಇಂದಿನತನಕ ಸಂಸ್ಕೃತಿಗಳ ರಕ್ಷಣೆ ಹಾಗೂ ಜನಶಿಕ್ಷಣದಲ್ಲಿ ಅನನ್ಯ ಪಾತ್ರ ವಹಿಸಿದೆ.

ಪುಸ್ತಕಗಳ ಕುರಿತು ಸಂಭಾಷಿಸುವುದು, ಗ್ರಹಿಸಿದ್ದನ್ನು ವಿನಿಮಯ ಮಾಡಿಕೊಳ್ಳುವುದು ಓದಿನಷ್ಟೇ ಮಹತ್ವದ್ದು. ಪುಸ್ತಕವು ಪ್ರಶ್ನಾತೀತವಾದ ಆಜೀವ ಆಪ್ತಮಿತ್ರ. ಯಾರಾದರೂ ದಿನಪತ್ರಿಕೆಯಲ್ಲಿ
ಮುಳುಗಿದ್ದರೆನ್ನಿ. ನಡು ಪುಟ ಕೊಡಿ ಎಂದು ಅವರನ್ನು ಗೋಗರೆದರೆ ಮೇಲ್ನೋಟಕ್ಕೆ ಪ್ರಮಾದವಿಲ್ಲ ಎನ್ನಿಸಬಹುದು. ಆದರೆ ಇಲ್ಲಿ ಆಗಿರುವುದು ಎರಡು ತಪ್ಪುಗಳು. ಮೊದಲನೆಯದು, ಅವರ ಏಕಾಗ್ರತೆಯನ್ನು ಕಲಕಿದ್ದು. ಎರಡನೆಯದು, ಎಲ್ಲರೂ ಹೀಗೆ ಉಚಿತ ಮಾರ್ಗ ಹಿಡಿದರೆ ಪತ್ರಿಕಾ ಸಂಸ್ಥೆಯ ಮುದ್ರಣ, ಪ್ರಕಟಣಾ ವೆಚ್ಚ ನಿಭಾಯಿಸುವ ಹೊಣೆ ಹೇಗೆಂದು ಚಿಂತಿಸದಿರುವುದು. ಎಂದಮೇಲೆ, ಉಚಿತ ಓದು ಅನುಚಿತ.

ಗ್ರಂಥಾಲಯದ ಯಶೋಗಾಥೆಯು ಓದುಗರ ಶಿಸ್ತು, ಸಹಕಾರದಲ್ಲಿದೆ. ನೀರವ ಮೌನ, ಎಂಜಿಲುಮುಕ್ತ ಪುಟಗಳು, ಬೌಂಡು ಸಡಿಲಗೊಳ್ಳದ ಹೊತ್ತಿಗೆಗಳು, ಎರವಲು ಪಡೆದ ಪುಸ್ತಕಗಳ ಸಕಾಲ ವಾಪಸಾತಿ...ಇವೆಲ್ಲ ಸುಸ್ಥಿರ ಗ್ರಂಥಭಂಡಾರ ಕಟ್ಟಿಕೊಡುವ ಸಾಮಾನ್ಯ ಪ್ರಜ್ಞೆಯ ಕುಡಿಗಳು.

ಓದುವುದೆಂದರೆ ಆಲೋಚಿಸುವುದು. ಓದು ಮನಸ್ಸಿಗೆ, ವ್ಯಾಯಾಮ ದೇಹಕ್ಕೆ. ಭೂಮಿಯ ಇನ್ನೊಂದು ಭಾಗಕ್ಕೆ ವಿಮಾನದ ಟಿಕೆಟ್ ಖರೀದಿಸುವುದು ಬೇಡ. ಒಂದು ಶ್ರೇಷ್ಠ ಗ್ರಂಥವೇ ನಮ್ಮನ್ನು ಅಲ್ಲಿಗೆ ತಲುಪಿಸುತ್ತದೆ. ಇತಿಹಾಸದಲ್ಲಿ ಶ್ರೇಷ್ಠರ ಕೃತಿಗಳನ್ನು ಓದಿ ಶ್ರೇಷ್ಠರಾದವರು ಹಲವರಿದ್ದಾರೆ. ಮನುಷ್ಯ ಮಾತ್ರವೇ ಪೀಳಿಗೆಯಿಂದ ಪೀಳಿಗೆಗೆ ಗ್ರಂಥಗಳ ಮೂಲಕ ಅನುಭವ, ಅರಿವನ್ನು ಹಸ್ತಾಂತರಿಸ
ಬಲ್ಲ. ಬಾಲ್ಯದಿಂದಲೇ ಓದುವ ಪ್ರವೃತ್ತಿ ಸ್ವಕಲಿಕೆಗೆ ಅನುಕೂಲಕರ ವೇದಿಕೆ ನಿರ್ಮಿಸಿಕೊಡುವುದು. ಪುಸ್ತಕ ಸರ್ವರ ಪಾಲಿಗೂ ಅಧಿಕಾರಯುತ ಜ್ಞಾನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.