ಡಾ. ಲಕ್ಷ್ಮಣ ವಿ ಎ.

ಬೆಂಗಳೂರಿನ ಹೊರವಲಯದ, ಐ.ಟಿ. ಕಂಪನಿಗಳಿರುವ ಪ್ರದೇಶದಲ್ಲಿ ವೈದ್ಯನಾಗಿರುವ ನನ್ನ ಬಳಿ ಬರುವವರಲ್ಲಿ, ವೈರಲ್ಪೀಡಿತ ಜ್ವರ, ಕೆಮ್ಮು, ನೆಗಡಿಗಿಂತ ಹೆಚ್ಚಾಗಿ ಸುಸ್ತು, ಆಯಾಸ, ದಾಹ, ಏದುಸಿರು ಮತ್ತು ಋತುಸ್ರಾವದಲ್ಲಿ ಏರುಪೇರಿನಂತಹ ತೊಂದರೆಗಳಿಂದ ನರಳುವವರೇ ಹೆಚ್ಚು ಮಂದಿ. ಇದಕ್ಕೆಲ್ಲಾ ಕಾರಣ ಅವರ ಆಹಾರಶೈಲಿ, ಕೆಟ್ಟ ಅಭ್ಯಾಸಗಳು, ಬಡತನ ಮತ್ತು ಇದರ ಫಲಿತಾಂಶವಾಗಿ ಬಂದೆರಗುವ ರಕ್ತಹೀನತೆ.

ಸಾಧಾರಣ ರಕ್ತಹೀನತೆಯನ್ನು ಆಹಾರಶೈಲಿಯಿಂದ ಗುಣಪಡಿಸಬಹುದು. ಮಧ್ಯಮ ಮಟ್ಟದ ರಕ್ತಹೀನತೆಯನ್ನು ಮಾತ್ರೆ, ಸಿರಪ್ಪು, ಚುಚ್ಚುಮದ್ದಿನಿಂದ ವಾಸಿ ಮಾಡಬಹುದು. ಆದರೆ ತೀವ್ರತರವಾದ ರಕ್ತಹೀನತೆಯನ್ನು ರಕ್ತಪೂರಣದಿಂದಲೇ ವಾಸಿ ಮಾಡಬೇಕು. ಇಂತಹ ರಕ್ತವನ್ನು ಕೃತಕವಾಗಿ ತಯಾರಿಸಲು ಅಸಾಧ್ಯವಾದ್ದರಿಂದ, ಬೇರೊಂದು ಜೀವಿಯ ದೇಹದಿಂದಲೇ ರಕ್ತ ಪಡೆಯಬೇಕು. ಅದಕ್ಕಾಗಿಯೇ ರಕ್ತದಾನ ಎಂಬುದು ಜೀವದಾನದಷ್ಟೇ ಶ್ರೇಷ್ಠ.

ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ರಾಜ್ಯದ ಪ್ರಭಾವಿ ನಾಯಕರೊಬ್ಬರು ಚುನಾವಣಾ ಭಾಷಣ ಮಾಡುತ್ತಾ, ಎದುರಾಳಿ ನಾಯಕನನ್ನು ಸೋಲಿಸಿಯೇ ತೀರುತ್ತೇನೆ, ಇದನ್ನು ರಕ್ತದಲ್ಲಿ ಬೇಕಾದರೂ ಬರೆದುಕೊಡುತ್ತೇನೆ ಎಂದು ಹೇಳಿದರು. ಅವರ ಸೋಲು ಖಚಿತ ಎಂಬ ಅತಿ ಆತ್ಮವಿಶ್ವಾಸದಲ್ಲಿ ಈ ಮಾತು ಹೇಳಿದ್ದಾರೆಂದು ತಿಳಿದು ಸುಮ್ಮನಾಗಬಹುದಿತ್ತು. ಆದರೆ ಅದೇ ಎದುರಾಳಿಯ ಪ್ರಚಂಡ ಅಭಿಮಾನಿಯೊಬ್ಬರು ಅದೇ ದಿನ ತಮ್ಮ ರಕ್ತವನ್ನು ಬಸಿದು ಬರೆದಿದ್ದ, ‘ನಮ್ಮ ನಾಯಕ ಗೆದ್ದೇ ಗೆಲ್ಲುತ್ತಾನೆ’ ಎಂಬ ಪತ್ರವನ್ನು ಪ್ರದರ್ಶಿಸಿದಾಗ ಅತೀವ ಆತಂಕವಾಯಿತು. ಕರ್ನಾಟಕ ಈಗ ಚುನಾವಣಾ ಪ್ರಚಾರದ ಉತ್ತುಂಗದ ಬಿಸಿಯಲ್ಲಿರುವ ಈ ಹೊತ್ತಿನಲ್ಲಿ, ಹೀಗೆ ಪ್ರತಿಯೊಬ್ಬ ನಾಯಕರೂ ರಕ್ತಪಾತದ ಬಗ್ಗೆ ಮಾತನಾಡುತ್ತಾ ಹೋದರೆ, ಕ್ರಿಯೆಗೆ ಪ್ರತಿಕ್ರಿಯೆ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂಬ ಯೋಚನೆ ದಿಗಿಲು ಮೂಡಿಸುವಂತಹದ್ದು.

ಇದು ಬರೀ ರಕ್ತದ ವಿಚಾರವಲ್ಲ. ಒಬ್ಬ ನಾಯಕ ಆಡುವ ಅಶ್ಲೀಲ ನುಡಿಗಳು, ಅಸಾಂವಿಧಾನಿಕ ಪದಗಳು, ಹಿಂಸೆಯನ್ನು ಪ್ರಚೋದಿಸುವ ಮಾತುಗಳು ಅವರ ಅನುಯಾಯಿಗಳ ಮೇಲೆ ಎಷ್ಟೆಲ್ಲಾ ರೀತಿಯಲ್ಲಿ ಪರಿಣಾಮ ಬೀರುತ್ತವೆ ಎನ್ನುವುದಕ್ಕೆ ಈ ಪ್ರಕರಣ ನಿದರ್ಶನವಾಗಿದೆ.

ಮನುಷ್ಯನ ದೇಹದ ರಸ, ರಕ್ತ, ಮಾಂಸ, ಮೇದ, ಅಸ್ಥಿ, ಮಜ್ಜಾ, ಶುಕ್ರ ಎಂಬ ಸಪ್ತಧಾತುಗಳಲ್ಲಿ ರಕ್ತಕ್ಕೆ ಅದರದ್ದೇ ಆದ ಶ್ರೇಷ್ಠತೆ ಇದೆ. ರಕ್ತವೆಂದರೆ ಜೀವ, ರಕ್ತವೆಂದರೆ ತೇಜಸ್ಸು, ರಕ್ತವೆಂದರೆ ನಮ್ಮ ದೇಹದ ಕಲ್ಮಶಗಳನ್ನು ವಿಸರ್ಜಿಸುವಲ್ಲಿ ಸಹಕಾರಿಯಾಗುವ ಸಂಜೀವಿನಿ. ಇಂತಹ ಅಮೂಲ್ಯವಾದ ರಕ್ತದ ಹನಿಯ ಬಿಂದುಗಳು ಚುನಾವಣಾ ಕರಪತ್ರಗಳ ಮೇಲೆ ಮೂಡಿ ವ್ಯರ್ಥವಾಗುವುದು ಸಮಾಜದ ಮೇಲೆ ಸಹಜವಾಗಿ ನಕಾರಾತ್ಮಕ ಪ್ರಭಾವ ಬೀರುತ್ತದೆ.

ಇದು ಹೇಗೆಂದರೆ, ಸೆಲೆಬ್ರಿಟಿಯೊಬ್ಬ ಗುಟ್ಕಾ, ಧೂಮಪಾನ, ಮದ್ಯಪಾನ ಸೇವಿಸುತ್ತಿರುವ ಚಿತ್ರವು ಆತನ ಹಿಂಬಾಲಕನೂ ತನ್ನ ನಾಯಕನಂತೆ ಕೆಟ್ಟ ಚಟಗಳಿಗೆ ದಾಸನಾಗಲು ಪ್ರೇರೇಪಿಸಿದಂತೆ. ಪ್ರಪಂಚದ ಇತಿಹಾಸವನ್ನು ಓದುವಾಗ, ರಕ್ತಕ್ರಾಂತಿ ಮತ್ತು ರಕ್ತರಹಿತ ಕ್ರಾಂತಿ ಎಂಬ ಎರಡು ಪ್ರಮುಖ ವಿಭಾಗಗಳಿದ್ದುದು ತಿಳಿಯುತ್ತದೆ. ರಕ್ತಪಾತವನ್ನು ಯಾವ ದೇಶವೂ ತನ್ನ ಹೆಮ್ಮೆಯ ಗುರುತೆಂದು ಬಿಂಬಿಸಿಕೊಂಡಿಲ್ಲ. ಬದಲಾಗಿ ರಕ್ತಪಾತಕ್ಕೆ ತೀವ್ರ ವಿಷಾದವನ್ನೇ ವ್ಯಕ್ತಪಡಿಸಿದ್ದು ಗಮನಿಸಬೇಕಾದ ಅಂಶ. ಭಾರತವು ಸ್ವಾತಂತ್ರ್ಯ ಸಂಪಾದಿಸಿದ್ದು ಅಹಿಂಸೆಯಿಂದ ಎಂದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಯಿಂದ ಹೇಳಿಕೊಳ್ಳಬಲ್ಲ.

ನೇತಾಜಿ ಸುಭಾಸ್ಚಂದ್ರ ಬೋಸ್ ಅವರ, ‘ನನಗೆ ಒಂದು ಹನಿ ರಕ್ತ ಕೊಡಿ, ನಿಮಗೆ ಸ್ವಾತಂತ್ರ್ಯ ತಂದುಕೊಡುತ್ತೇನೆ’ ಎಂಬ ಹೇಳಿಕೆ ಪ್ರಸಿದ್ಧವಾಗಿದ್ದರೂ ಅವರು ಕೇಳಿದ್ದು ನಿಜ ಅರ್ಥದ ರಕ್ತವನ್ನಲ್ಲ, ಸ್ವಾತಂತ್ರ್ಯ ಪಡೆಯುವ ಸಲುವಾಗಿ ಪ್ರತಿಯೊಬ್ಬ ಭಾರತೀಯನೂ ತೆರಬೇಕಾಗಿದ್ದ ಅತ್ಯುನ್ನತ ಬೆಲೆಯ ಸಮಯ, ತ್ಯಾಗ, ದೇಶನಿಷ್ಠೆ ಮತ್ತು ತೊಡಗಿಸಿಕೊಳ್ಳುವಿಕೆಯನ್ನು.

ಕನ್ನಡದ ಕವಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಕಯ್ಯಾರ ಕಿಞ್ಞಣ್ಣ ರೈ ತಮ್ಮ ಒಂದು ಕವಿತೆಯಲ್ಲಿ ಹೀಗೆ ಹೇಳಿದ್ದಾರೆ: ಎನ್ನೆದೆಯ ಬಿಸಿ ರಕ್ತ ಕುದಿ ಕುದಿಸಿ ಮಸಿ ಮಾಡಿ, ನಾ ಬರೆಯಬಲ್ಲೆನೇ ನಾನು
ಕವಿಯು, ವಿಶ್ವ ಜನನಿಯ ಗರ್ಭ ಮಾತೃಭೂಮಿಯ ಬಸಿರು, ತಾನ್ ತಪಿಸುತಿರೆ ಹೇಳಲಾವ ಪರಿಯು.

ದೇಶ ಗಂಡಾಂತರದಲ್ಲಿದ್ದಾಗ, ಪರಕೀಯರ ದಾಸ್ಯದಲ್ಲಿದ್ದಾಗ ಈ ಕವಿತೆ ಬರೆದ ಕವಿ, ತಾನು ಲೇಖನಿಯನ್ನೇ ಖಡ್ಗವಾಗಿಸಿ ಮಸಿಯ ರಕ್ತದಲ್ಲಿ ಕವಿತೆ ಬರೆದು, ಸ್ವಾತಂತ್ರ್ಯಕ್ಕಾಗಿ ಬಲಿಯಾದ ಬಂಧುಗಳನ್ನು ನೆನೆಯಬಲ್ಲೆ ಎಂದು ಹೇಳುವಲ್ಲಿಗೆ, ಅವರ ದೇಶಪ್ರೇಮದ ಕಿಚ್ಚು, ಉತ್ಕಟತೆ ಗೋಚರವಾಗುತ್ತದೆ. ರಕ್ತವೆಂಬ ರೂಪಕವು ತ್ಯಾಗ, ಬಲಿದಾನದ ಸಂಕೇತವಾಗಿ ದೇಹದಲ್ಲಿ ಹುರುಪು ತುಂಬಬೇಕೆ ವಿನಾ ಅದು ಬೀದಿಯಲ್ಲಿ ಬಿದ್ದು ರಕ್ತಪಾತವಾಗಬಾರದು ಎಂಬ ಕವಿಯ ಆಶಯವೂ ಇಲ್ಲಿದೆ.

ರಕ್ತದ ಮಹತ್ವವನ್ನು ಸಾರಲು, ‘ರಕ್ತದಾನ ಮಹಾದಾನ’ವೆಂದು ಹೇಳುತ್ತೇವೆ. ಆದರೆ ಇಂದಿಗೂ ಸಕಾಲದಲ್ಲಿ ರಕ್ತ ಸಿಗದೆ ಎಷ್ಟೋ ಪ್ರಾಣಗಳು ಬಲಿಯಾಗುತ್ತವೆ. ಭಾರತದ ಜನಸಂಖ್ಯೆಯಲ್ಲಿ ಶೇಕಡ ಐವತ್ತರಷ್ಟು ಜನರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಈ ಪ್ರಮಾಣ ಪುರುಷರಿಗಿಂತ ಮಹಿಳೆಯರಲ್ಲೇ ಅತಿ ಹೆಚ್ಚು. ಪ್ರಸವದ ಸಂದರ್ಭದಲ್ಲಿ ನಡೆಯುವ ಗರ್ಭಿಣಿಯರ ಸಾವಿಗೆ ರಕ್ತಹೀನತೆಯೂ ಒಂದು ಪ್ರಮುಖ ಕಾರಣವಾಗಿರುತ್ತದೆ. ಆಸ್ಪತ್ರೆಗೆ ದಾಖಲಾದ ಪ್ರತೀ ಏಳು ರೋಗಿಗಳಲ್ಲಿ ಒಬ್ಬರಿಗೆ ತೀವ್ರ ರಕ್ತಪೂರೈಕೆಯ ಅವಶ್ಯಕತೆ ಇರುತ್ತದೆ.

ಭಾರತದಲ್ಲಿ ಪ್ರತಿವರ್ಷ ಐದು ಕೋಟಿ ಯುನಿಟ್ನಷ್ಟು ರಕ್ತಕ್ಕೆ ಬೇಡಿಕೆ ಇದೆ, ಆದರೆ ಪೂರೈಕೆ ಮಾತ್ರ ಎರಡೂವರೆ ಕೋಟಿ ಮಾತ್ರ. ವಿಜ್ಞಾನ ಎಷ್ಟೆಲ್ಲಾ ಮುಂದುವರಿದರೂ ರಕ್ತವನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಾಗಿಲ್ಲ.

ರಕ್ತ ಮತ್ತು ಕಣ್ಣೀರು ಪ್ರತಿ ಚುನಾವಣೆಯಲ್ಲಿ ಮಾರಾಟವಾಗುವ ಜನಪ್ರಿಯ ಸರಕುಗಳು. ರಕ್ತಪಾತದ ಮಾತುಗಳು ರೋಷ ಉಕ್ಕಿಸಿದರೆ, ಕಣ್ಣೀರಿನ ಮಾತುಗಳು ಭಾವುಕತೆಯನ್ನು ಸೃಷ್ಟಿಸುತ್ತವೆ. ಮನುಷ್ಯನು ರೋಷದಲ್ಲೂ ಭಾವುಕತೆಯಲ್ಲೂ ತನ್ನ ವಿವೇಕ ಕಳೆದುಕೊಳ್ಳುತ್ತಾನೆ. ಹೆಚ್ಚು ಹೆಚ್ಚು ರಕ್ತಪಾತದ ದೃಶ್ಯಗಳಿರುವ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಗೆದ್ದಿರುತ್ತವೆ. ಕಣ್ಣೀರ ಕೋಡಿ ಹರಿಸುವ ಧಾರಾವಾಹಿಗಳು ಅತಿ ಹೆಚ್ಚು ಜನಪ್ರಿಯತೆಯನ್ನು ಹೊಂದಿರುತ್ತವೆ. ಚುನಾವಣೆಯ ಇಂತಹ ಸೂಕ್ಷ್ಮ ಸಂದರ್ಭಗಳಲ್ಲಿ ನಾಯಕರು ಇದರ ಲಾಭ ಪಡೆಯಲು ಗರಿಷ್ಠ ಪ್ರಯತ್ನ ಪಡುತ್ತಿರುತ್ತಾರೆ. ವಿವೇಕ ಕಳೆದುಕೊಂಡ ಮತದಾರ ಅವಿವೇಕಿಯನ್ನು ಆಯ್ಕೆ ಮಾಡುತ್ತಾನೆ.

ಕಣ್ಣೀರಿಗೊಂದು ಭಾವನಾತ್ಮಕ ಬೆಸುಗೆ ಇದೆ. ಇದು ಪ್ರೀತಿ ಇದ್ದರಷ್ಟೇ ಹೊರಬರುವ ಒಳಸೆಲೆ. ಇಲ್ಲಿ ಮತದಾರ ನಿಜದ ಕಣ್ಣೀರು ಯಾವುದು ಮತ್ತು ಮೊಸಳೆ ಕಣ್ಣೀರು ಯಾವುದು ಎಂಬುದನ್ನು ಅಳೆಯುವಷ್ಟು ಪ್ರಬುದ್ಧನಾದರೆ ಸಾಕು.

ಬುಲೆಟ್ಟುಗಳಿಂದ, ರಕ್ತಪಾತದಿಂದ ಮಾಡಲಾಗದ ಕ್ರಾಂತಿಗಳನ್ನು ಚುನಾವಣಾ ಬ್ಯಾಲೆಟ್ಟಿನಿಂದ ಮಾಡಲು ಸಾಧ್ಯ. ಹೀಗಾಗಿ, ಮತದಾರರಿಗೆ ತಮ್ಮ ಅಮೂಲ್ಯ ಮತವನ್ನು ರಕ್ತ ಮತ್ತು ಕಣ್ಣೀರಿನ ಪ್ರಭಾವಕ್ಕೆ ಒಳಗಾಗದಂತೆ ನೋಡಿಕೊಂಡು, ನಿಜದ ಪ್ರಭುತ್ವವನ್ನು ಆರಿಸುವ ದೊಡ್ಡ ಜವಾಬ್ದಾರಿ ಕೂಡ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.