ಮನುಷ್ಯ ಆಧಾರ್ ಕಾರ್ಡ್ ಇಲ್ಲದೆ ಯಾವವ್ಯವಹಾರವನ್ನೂ ಮಾಡುವಂತಿಲ್ಲ ಎಂಬ ಸ್ಥಿತಿ ಭಾರತದಲ್ಲಿ ನಿರ್ಮಾಣವಾಗಿದೆ. ವಿರೋಧ ಪಕ್ಷವಾಗಿ ಕುಳಿತಿದ್ದಾಗ, ಆಗಿನ ಸರ್ಕಾರ ಜಾರಿಗೆ ತರಲು ಹೊರಟ ಯೋಜನೆಯನ್ನು ಕಟುವಾಗಿ ಟೀಕಿಸಿದವರು, ಅಧಿಕಾರ ಹಿಡಿದ ಮೇಲೆ ಖುದ್ದು ನಿಂತು ಅದು ಬೇಕೇ ಬೇಕು ಅನ್ನುತ್ತಿದ್ದಾರೆ. ತಪ್ಪೇನಿಲ್ಲ, ನಕಲು ಮಾಡಲಾಗದಂತಹ ಸ್ಥಿರವಾದ ಈ ಗುರುತಿನ ಚೀಟಿಯು ಸೌಲಭ್ಯಗಳ ಗಳಿಕೆಯಲ್ಲೂ ಮೋಸವಾಗದಂತೆ ಕಾವಲುಬೇಲಿ ಮಾದರಿಯಲ್ಲಿ ಕೆಲಸ ಮಾಡುತ್ತದೆ.

ಇದಾದ ಬಳಿಕ ಭಾರತೀಯರ ಬದುಕು ಕಾರ್ಡುಗಳನ್ನೇ ಅವಲಂಬಿಸಿ ನಿಲ್ಲುವಂತಾಗಿದೆ. ಪಡಿತರ ಕಾರ್ಡ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಆರೋಗ್ಯ ಕಾರ್ಡ್, ಅಡುಗೆ ಅನಿಲದ ಕಾರ್ಡ್, ಹಿರಿಯ ನಾಗರಿಕರ ಕಾರ್ಡ್... ಹೀಗೆ ಬದುಕೆಂಬುದು ಕಾರ್ಡುಗಳ ರಾಶಿಯಲ್ಲಿ ಮುಳುಗಿಹೋಗಿದೆ. ಈ ಸಾಲಿಗೆ ಸೇರಿದ್ದು ಪ್ಯಾನ್ ಕಾರ್ಡ್. ಆದಾಯ ತೆರಿಗೆ ವಂಚಿಸದೆ ಜನಸಾಮಾನ್ಯರಾದರೂ ಪ್ರಾಮಾಣಿಕರಾಗಿರಲಿ ಎಂಬ ಉದ್ದೇಶದಿಂದ ಪ್ರತಿಯೊಬ್ಬನಿಗೂ ಅದನ್ನು ಪಡೆಯುವುದನ್ನು ನೇರವಾಗಿ ಅಲ್ಲದಿದ್ದರೂ ಕಡ್ಡಾಯಗೊಳಿಸಲಾಯಿತು. ವಾರ್ಷಿಕ ವರಮಾನವೇ ಇಲ್ಲದೆ ಸರ್ಕಾರದ ಮಾಸಾಶನಕ್ಕೆ ಕೈಯೊಡ್ಡುವ ಹಿರಿಯ ಜೀವಗಳನ್ನೂ ಅದು ಬಿಟ್ಟಿಲ್ಲ. ಪ್ಯಾನ್ ಕಾರ್ಡ್ ಮಾಡಿಸಿ ಬ್ಯಾಂಕ್ ಖಾತೆಗೆ ಜೋಡಿಸದವರಿಗೆ ಮಾಸಿಕ ಅನ್ನದ ಸೌಲಭ್ಯಕ್ಕೇ ಗುನ್ನಾ ನೀಡುವಂತಹ ನಡೆಗಳನ್ನು ಆಳುವವರು ಇರಿಸಿದರು.

ಈಗ ಶ್ರೀಸಾಮಾನ್ಯನ ಉಸಿರನ್ನು ಬಿಗಿ ಹಿಡಿಯುವಂತೆ ಮಾಡಿದ್ದು ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಜೋಡಣೆ. ಅದಕ್ಕಾಗಿ ಮಾರ್ಚ್ ಕಡೆಯ ದಿನಾಂಕವನ್ನು ನಿಗದಿಪಡಿಸಿದ್ದರೂ ಸರ್ಕಾರ ಈಗ ಮತ್ತೆ ಮೂರು ತಿಂಗಳವರೆಗೆ ಆಯುಷ್ಯ ವರ್ಧಿಸಿದೆ. ಈ ಜೋಡಣೆ ಮಾಡಬೇಕಿದ್ದರೆ ಒಂದು ಸಾವಿರ ರೂಪಾಯಿ ದಂಡಶುಲ್ಕ ನಿಗದಿಪಡಿಸಲಾಗಿದೆ. ಇದನ್ನು ಮಾಡಲು ಸೈಬರ್ ಕೇಂದ್ರಗಳಿಗೆ ಹೋದರೆ, ಆ ಕೆಲಸದ ಶುಲ್ಕವಾಗಿ ಇನ್ನೂರು ರೂಪಾಯಿ ಪ್ರತ್ಯೇಕ ತೆರಬೇಕಾಗುತ್ತದೆ.

ಅದೆಷ್ಟೋ ಮಂದಿಗೆ ಈ ಜೋಡಣೆ ಮಾಡಬೇಕೆಂಬುದೇ ಗೊತ್ತಿಲ್ಲ. ಮಾಡದೇ ಹೋದರೆ ಹತ್ತು ಸಾವಿರದ ತನಕ ಜುಲ್ಮಾನೆ ವಿಧಿಸುವುದಾಗಿ ಕೆಲವು ವರದಿಗಳು ಬೆದರಿಸುತ್ತಿವೆ. ಆದರೆ ಸುಲಭವಾಗಿ ಈ ಜೋಡಣೆ ಮಾಡಲು ಆಯಾ ಗ್ರಾಮದಲ್ಲಿ ಒಂದು ಕೇಂದ್ರದ ವ್ಯವಸ್ಥೆ ಮಾಡದೆ ಜನರ ಮೇಲೆ ಕಾನೂನು ಕಟ್ಟಲೆ ಹೇರಲು ಮುಂದಾಗುವುದು
ಸರಿಯೆನಿಸುತ್ತದೆಯೇ?

ಆಫ್ರಿಕಾದ ರಾಷ್ಟ್ರವೊಂದರಲ್ಲಿ ಕರೆನ್ಸಿ ಚಲಾವಣೆ ಬಹಳಷ್ಟು ಕಡಿಮೆಯಾಗಿದೆ. ಪ್ರತಿಯೊಬ್ಬರೂ ಮೊಬೈಲಿನ ಮೂಲಕವೇ ಹಣ ಕೊಡುತ್ತಾರೆ, ಖರೀದಿಸುತ್ತಾರೆ. ತಾವೂ ಹಾಗೆಯೇ ಪಡೆಯುತ್ತಾರೆ. ಈ ಸಾಧನೆ ಮಾಡುವ ಮೊದಲು ಸರ್ಕಾರ ಪ್ರತಿಯೊಂದು ಬೆಟ್ಟದ ಮೇಲೂ ಅಲ್ಲಿನ ಜನರಿಗೆ ಮೊಬೈಲ್ ಸಿಗ್ನಲ್ ಸುಲಭವಾಗಿ ಸಿಗುವ ಶಕ್ತಿಯುತವಾದ ಗೋಪುರಗಳನ್ನು ಸ್ಥಾಪಿಸಿತು. ಎಲ್ಲ ಪ್ರಜೆಗಳಿಗೂ ಮೊಬೈಲ್ ಅನ್ನು ಉಚಿತವಾಗಿ ನೀಡಿತು.

ಭಾರತದ ಮೊಬೈಲ್ ಸಿಗ್ನಲ್ ನಗರಗಳನ್ನೇ ಗುರಿಯಿಟ್ಟುಕೊಂಡಂತಿದೆ. ಗ್ರಾಮೀಣವಾಸಿಗಳ ಪಾಲಿಗೆ ಅದು ಎಷ್ಟು ದುರ್ಬಲ ಎಂದರೆ, ಕೆಲವೊಮ್ಮೆ ಅದರ ಟವರ್ ಕೆಳಗೆ ನಿಂತರೂ ಸಿಗ್ನಲ್ ಸಿಗುವುದಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಡಿಜಿಟಲ್ ವ್ಯವಹಾರ ಅಳವಡಿಸಿರುವ ಹೆಗ್ಗಳಿಕೆಯಿದೆ ಎಂದು ಹೇಳಬಹುದು. ಆದರೆ ಬಹುತೇಕ ದಿನಗಳಲ್ಲಿ ಸರ್ವರ್ ಸರಿಯಿಲ್ಲ ಎಂಬ ಕಾರಣಕ್ಕೆ ಯಾವ ವ್ಯವಹಾರವೂ ನಡೆಯದೆ, ದೂರದ ಹಳ್ಳಿಯ ಜನ ಕಷ್ಟ, ನಷ್ಟ ಅನುಭವಿಸಿ ಮನೆಗೆ ಮರಳಬೇಕಾಗಿದೆ.

ಆಧಾರ್ ಕಾರ್ಡಿಗೆ ಪ್ಯಾನ್ ಕಾರ್ಡ್ ಜೋಡಣೆ ಮಾಡುವ ಆಜ್ಞೆ ಅನೇಕರ ಪಾಲಿಗೆ ಶೋಷಣೆಯ ಇನ್ನೊಂದು ಮುಖವಾಗುತ್ತದೆ. ಈ ಕೆಲಸ ಮಾಡದಿದ್ದರೆ ಮುಂದೆ ಬ್ಯಾಂಕ್ ಖಾತೆಯ ಹಣವೂ ಸಿಗುವುದಿಲ್ಲ ಎಂದು ಕೆಲವರು ಭೀತಿ ಹುಟ್ಟಿಸುತ್ತಿದ್ದಾರೆ. ಅದನ್ನು ಹೇಗೆ ಮಾಡುವುದೆಂಬುದೇ ಗೊತ್ತಿಲ್ಲದಂಥವರ ಮನೆಗಳಿಗೆ ಮಾಡಬಲ್ಲಂಥವರನ್ನು ಕಳುಹಿಸಿಕೊಟ್ಟು ಸರ್ಕಾರ ಕೆಲಸವನ್ನು ಸರಳಗೊಳಿಸಬೇಡವೆ? ಸೈಬರ್ ಕೇಂದ್ರಗಳಲ್ಲಿ ‘ಸಿಕ್ಕಿದಾಗ ಬಾಚಿಕೋ’ ಎಂಬ ತತ್ವದಲ್ಲಿ ಅಮಾಯಕರಿಂದ ಮನಬಂದಂತೆ ಹಣಸುಲಿಯಲಾಗುತ್ತಿದೆ.

ತೆರಿಗೆ ವಂಚನೆಯನ್ನು ತಡೆಯುವಲ್ಲಿ ಇಂತಹ ವಿಕ್ರಮವನ್ನು ಸಾಧಿಸಲು ಹೊರಟವರು ಅಮಾಯಕ ಜನರಿಗೆ ಅದನ್ನು ಮಾಡಿಸಲು ದಂಡದ ಬೆದರಿಕೆ ಒಡ್ಡುವುದು ಔಚಿತ್ಯಪೂರ್ಣವಾದುದಲ್ಲ. ತಿಂಗಳಿಗೆ ಒಂದು ಸಾವಿರ ಮಾಸಾಶನ ಪಡೆಯುವ ವೃದ್ಧರಿಗೆ ಅದೆಲ್ಲವನ್ನೂ ಈ ಜೋಡಣೆಯ ದಕ್ಷಿಣೆಯಾಗಿ ಕೊಡಬೇಕಿದ್ದರೆ ಅವರ ತಿಂಗಳ ಅನ್ನಕ್ಕೇನು ದಾರಿಯಿದೆ?

ತಡವಾಗಿಯಾದರೂ ಸರ್ಕಾರ ಈ ವಿಚಾರವಾಗಿ ಎಚ್ಚೆತ್ತುಕೊಳ್ಳುವ ಅಗತ್ಯವಿದೆ. ಇನ್ನೂ ಈ ಜೋಡಣೆ ಮಾಡಿಸದೆ ಉಳಿದುಕೊಂಡವರು ಬಹುಮಂದಿ ರೈತರು, ನಿರಕ್ಷರಿಗಳು, ಗ್ರಾಮೀಣ ಭಾಗದ ನಿವಾಸಿಗಳು. ಸರ್ಕಾರದ ಗಡುವು ದಾಟಿದರೂ ಈ ಕರ್ತವ್ಯದಅರಿವು ಅವರಿಗೆ ಇನ್ನೂ ಮೂಡುವುದಿಲ್ಲ ಎಂಬುದು ಖಂಡಿತ. ವಿದ್ಯಾವಂತರಾದ ಯುವಕರ ನೆರವು ಪಡೆದು, ಮನೆ ಭೇಟಿಗೆ ಕಳುಹಿಸಿ ಸುಲಭವಾಗಿ ಈ ಕೆಲಸ ಮಾಡಿಸಿದರೆ ಜನರಿಗೂ ನಿರುಮ್ಮಳ, ಸರ್ಕಾರಕ್ಕೂ ಒಳ್ಳೆಯ ಹೆಸರು ಬರಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.