ನಮ್ಮ ಕಾಡುಗಳಲ್ಲಿ ಹುಲಿ ಮತ್ತು ಚಿರತೆಗಳ ಸಂಖ್ಯೆ ಹೆಚ್ಚಾಗಿದೆ ಎಂಬ ಸಿಹಿಸುದ್ದಿಯನ್ನು ಇತ್ತೀಚೆಗಷ್ಟೇ ನೀಡಿದ್ದ ಕೇಂದ್ರ ಪರಿಸರ ಇಲಾಖೆಯು ಈಗ, ಅಳಿವಿನಂಚಿನಲ್ಲಿರುವ ರಣಹದ್ದುಗಳ ಸಂರಕ್ಷಣೆಗೆ ಪಣ ತೊಟ್ಟಿದೆ. ಕಳೆದ ಮೂರು ದಶಕಗಳಲ್ಲಿ ಜಾನುವಾರುಗಳ ಶುಶ್ರೂಷೆಯಲ್ಲಿ ಬಳಸಲಾಗುತ್ತಿದ್ದ ವಂಡರ್ ಡ್ರಗ್ ಡೈಕ್ಲೊಫಿನಾಕ್‌ನಿಂದ ಶೇ 96ರಷ್ಟು ರಣಹದ್ದುಗಳನ್ನು ಕಳೆದುಕೊಂಡು ಬಹುದೊಡ್ಡ ಪಾರಿಸರಿಕ ಅಸಮತೋಲನಕ್ಕೆ ಸಾಕ್ಷಿಯಾಗುತ್ತಿರುವ ವೇಳೆಯಲ್ಲಿ, ಅವುಗಳ ಸಂರಕ್ಷಣೆ ಮತ್ತು ಸಂತತಿ ವೃದ್ಧಿಗಾಗಿ ಐದು ವರ್ಷಗಳ ಯೋಜನೆ ರೂಪಿಸಿರುವ ಇಲಾಖೆ, ಹಲವು ಕಠಿಣ ಕ್ರಮಗಳಿಗೆ ಮುಂದಾಗಿದೆ.

ಅಂಕಿ-ಅಂಶಗಳ ಪ್ರಕಾರ, 80ರ ದಶಕದಲ್ಲಿ 40 ಲಕ್ಷದಷ್ಟಿದ್ದ ರಣಹದ್ದುಗಳ ಸಂಖ್ಯೆ 1990ರ ವೇಳೆಗೆ ಕೆಲವು ಸಾವಿರಕ್ಕೆ ಇಳಿದಿತ್ತು. ‘ನ್ಯಾಚುರಲ್ ಸ್ಕ್ಯಾವೆಂಜರ್ಸ್’ ಎಂಬ ಖ್ಯಾತಿಯ, ಭಾರತದಲ್ಲಿ ಕಂಡುಬರುವ ಒಂಬತ್ತಕ್ಕೂ ಹೆಚ್ಚು ಬಗೆಯ ಹದ್ದುಗಳು ಜಾನುವಾರುಗಳ ಉರಿಯೂತವನ್ನು ತಗ್ಗಿಸಲು ಬಳಸಲಾಗುತ್ತಿದ್ದ ಡೈಕ್ಲೊಫಿನಾಕ್ ಎಂಬ ರಾಸಾಯನಿಕದಿಂದ ಅಧಿಕ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದುದು 2004ರಲ್ಲಿ ಪ್ರಥಮ ಬಾರಿಗೆ ಪತ್ತೆಯಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಡುತ್ತಿದ್ದ ಜಾನುವಾರುಗಳ ದೇಹದಲ್ಲಿನ ಡೈಕ್ಲೊಫಿನಾಕ್ ಅಂಶವನ್ನು ಸೇವಿಸುತ್ತಿದ್ದ ರಣಹದ್ದುಗಳು ಸಂಧಿವಾತ ಮತ್ತು ಮೂತ್ರಕೋಶ ವೈಫಲ್ಯದಿಂದ ದಿಢೀರ್ ಸಾವನ್ನಪ್ಪುತ್ತಿದ್ದುದು ಸಂರಕ್ಷಣಾ ತಜ್ಞರ ನಿದ್ದೆಗೆಡಿಸಿತ್ತು.

2006ರ ‘ಹದ್ದುಗಳ ಪ್ರಥಮ ಸಂರಕ್ಷಣಾ ಯೋಜನೆ’ಯ ಶಿಫಾರಸಿನಂತೆ, ಹದ್ದುಗಳ ಸಾವನ್ನು ಗಂಭೀರವಾಗಿ ಪರಿಗಣಿಸಿದ ಭಾರತೀಯ ಔಷಧ ಮಹಾನಿಯಂತ್ರಕರು (ಡಿಸಿಜಿಐ), ಜಾನುವಾರು ಶುಶ್ರೂಷೆಯಲ್ಲಿ ಡೈಕ್ಲೊಫಿನಾಕ್ ಬಳಕೆಯನ್ನು ನಿಷೇಧಿಸಿದರು. ಮನುಷ್ಯನಿಗೆ ನೀಡುವ ಡೈಕ್ಲೊಫಿನಾಕ್ ಇಂಜೆಕ್ಷನ್ ಅನ್ನು ಶೆಡ್ಯೂಲ್ ‘ಎಚ್’ಗೆ ಸೇರಿಸಿ ಪ್ರಮಾಣವನ್ನು 3 ಎಂ.ಎಲ್‍ಗೆ ಇಳಿಸಿ, ವೈದ್ಯರ ನಿರ್ದೇಶನವಿಲ್ಲದ ಮಾರಾಟ ತಡೆಗೆ ಪ್ರಯತ್ನಿಸಿದರು. ಇದನ್ನು ಲೆಕ್ಕಿಸದ ಪಶು ಶುಶ್ರೂಷಕರು ದನಗಳ ಜ್ವರ, ನೋವು ನಿವಾರಿಸಲು ಎಗ್ಗಿಲ್ಲದೆ ಡೈಕ್ಲೊಫಿನಾಕ್ ಬಳಸಿದ್ದರಿಂದ ರಣಹದ್ದುಗಳ ಸಂಖ್ಯೆ ಕುಸಿಯುತ್ತಲೇ ಹೋಯಿತು.

ಜಾನುವಾರುಗಳ ದೇಹದ ದ್ರವಪದಾರ್ಥದಲ್ಲಿ ಔಷಧಿಯ ಅಂಶ ಶೇ 10ಕ್ಕಿಂತ ಹೆಚ್ಚಿದ್ದಾಗ ಹದ್ದುಗಳು ತ್ವರಿತವಾಗಿ ಸಾಯುತ್ತಿದ್ದುದು ಪತ್ತೆಯಾಗಿತ್ತು. 2006ರ ಸಂರಕ್ಷಣಾ ಯೋಜನೆಯ ಅನುಷ್ಠಾನದ ನಂತರ 2013ರ ವೇಳೆಗೆ ಅದರ ಪ್ರಮಾಣ ಶೇ 2ರಷ್ಟಾಗಿ ಹದ್ದುಗಳ ಸಾವಿನ ಪ್ರಮಾಣವೂ ಇಳಿದಿತ್ತು. ಪ್ರಮಾಣ ಶೇ 1ಕ್ಕಿಂತ ಕಡಿಮೆ ಇದ್ದರೆ ಹದ್ದುಗಳಿಗೆ ಯಾವ ಅಪಾಯವೂ ಇಲ್ಲ ಎಂಬುದು ಈಗ ಪತ್ತೆಯಾಗಿದೆ. ಇನ್ನೂ ಕಠಿಣ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರವು ಔಷಧಿಯನ್ನು ಶೆಡ್ಯೂಲ್ ‘ಎಕ್ಸ್’ಗೆ ಸೇರಿಸಿ, ಮಾರಾಟ ಮಾಡುವ ಅಂಗಡಿಗಳು ವೈದ್ಯರ ಚೀಟಿಯನ್ನು ಕಾಯ್ದಿಡಲೇಬೇಕು ಎಂದು ತಾಕೀತು ಮಾಡಿದೆ.

ರಣಹದ್ದುಗಳ ಸಂರಕ್ಷಣೆಯಲ್ಲಿ ತೊಡಗಿರುವ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಪ್ರಧಾನ ವಿಜ್ಞಾನಿ ವಿಭು ಪ್ರಕಾಶ್, ‘ಸರ್ಕಾರವು ಔಷಧ ನಿಯಂತ್ರಣದಲ್ಲಿ ಸಂಪೂರ್ಣ ಸೋತಿದೆ. ಹೆಚ್ಚಿನ ಸಂಖ್ಯೆಯ ಪಶು ಶುಶ್ರೂಷಕರಿಗೆ ಎಷ್ಟು ಡೋಸ್ ಔಷಧ ನೀಡಬೇಕೆಂಬುದು ಗೊತ್ತಿಲ್ಲ ಮತ್ತು ಡೈಕ್ಲೊಫಿನಾಕ್‌ನಷ್ಟೇ ಅಪಾಯಕಾರಿಯಾದ ಮತ್ತು ಸುಲಭವಾಗಿ ಸಿಗುವ ಇತರ ಔಷಧಗಳ ಬಳಕೆ ಅವ್ಯಾಹತವಾಗಿ ಮುಂದುವರಿದಿದೆ’ ಎನ್ನುತ್ತಾರೆ. ‘ಇವುಗಳ ಬದಲಾಗಿ ಮೆಲೋಕ್ಸಿಕ್ಯಾಂ ಮತ್ತು ಟೊಲ್‍ಫೆನಾಮಿಕ್ ಆ್ಯಸಿಡ್‍ಗಳನ್ನು ಬಳಸಿದರೆ ಜಾನುವಾರುಗಳ ಜೊತೆ ಹದ್ದುಗಳನ್ನೂ ರಕ್ಷಿಸಬಹುದು. ಜಾನುವಾರುಗಳ ಮೃತದೇಹವನ್ನು ಬಯಲಲ್ಲಿ ಎಸೆಯದೆ ಸುಡುವ ವ್ಯವಸ್ಥೆ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

ಈಗ ದೇಶದಲ್ಲಿ ಉದ್ದ ಕತ್ತಿನ 12,000, ಕಪ್ಪು ಬೆನ್ನಿನ 6,000, ನೀಳ ಕೊಕ್ಕಿನ 1,000 ರಣಹದ್ದುಗಳ ಜೊತೆಗೆ ಕೆಲವೇ ನೂರು ಕೆಂಪು ತಲೆಯ, ಗಡ್ಡದ, ಈಜಿಪ್ಟಿಯನ್ ಹಾಗೂ ಹಿಮಾಲಯನ್ ವಲ್ಚರ್‌ಗಳಿವೆ.

2012ರಲ್ಲಿ ಆದೇಶ ಹೊರಡಿಸಿದ್ದ ಕೇಂದ್ರ ಸರ್ಕಾರ, ಎಲ್ಲ ರಾಜ್ಯಗಳೂ ರಣಹದ್ದುಗಳ ಕಾಲೊನಿಯನ್ನು ಗುರುತಿಸಿ ಸುತ್ತಮುತ್ತಲಿನ 100 ಕಿ.ಮೀ ಫಾಸಲೆಯೊಳಗೆ ಡೈಕ್ಲೊಫಿನಾಕ್‍ನ ಬಳಕೆಯನ್ನು ನಿಷೇಧಿಸುವಂತೆ ನಿರ್ದೇಶಿಸಿತ್ತು. ಇದುವರೆಗೆ ಮಧ್ಯಪ್ರದೇಶ, ಜಾರ್ಖಂಡ್, ಉತ್ತರಪ್ರದೇಶ, ಅಸ್ಸಾಂ ಮತ್ತು ತಮಿಳುನಾಡು ಮಾತ್ರ ಆದೇಶ ಪಾಲಿಸಿ ಹದ್ದುಗಳ ಸುರಕ್ಷಿತ ವಲಯ ಸೃಷ್ಟಿಸಿವೆ. ಕರ್ನಾಟಕವು ಬನ್ನೇರುಘಟ್ಟದ ಬಳಿ ₹ 2 ಕೋಟಿ ವೆಚ್ಚದ ಬ್ರೀಡಿಂಗ್ ಕೇಂದ್ರಕ್ಕೆ ಚಾಲನೆ ನೀಡಿದೆ.

ಇಡೀ ದೇಶದಲ್ಲಿ ಕೇವಲ 9 ಸಂತಾನೋತ್ಪತ್ತಿ ಅಭಿವೃದ್ಧಿ ಕೇಂದ್ರಗಳಿವೆ, ಇತರ ಹಕ್ಕಿಗಳಿಗೆ ಹೋಲಿಸಿದರೆ ಹದ್ದುಗಳ ಸಂತಾನೋತ್ಪತ್ತಿ ಪ್ರಮಾಣ ತೀರಾ ಕಡಿಮೆಯಾದ್ದರಿಂದ ದೇಶದಾದ್ಯಂತ ಸಂತಾನೋತ್ಪತ್ತಿ ಕೇಂದ್ರಗಳನ್ನು ಸ್ಥಾಪಿಸಬೇಕೆಂಬ ಒತ್ತಾಯ ತಜ್ಞರಿಂದ ವ್ಯಕ್ತವಾಗಿದೆ. ಪಶುಸಂಗೋಪನೆ ಮತ್ತು ಅರಣ್ಯ ಇಲಾಖೆಗಳ ₹ 200 ಕೋಟಿ ಅಂದಾಜು ವೆಚ್ಚದ ಜಂಟಿ ಯೋಜನೆಯಂತೆ 2025ರ ವೇಳೆಗೆ ಇನ್ನೂ ಎಂಟು ಕೇಂದ್ರಗಳು ಸ್ಥಾಪನೆಯಾಗಲಿವೆ. ಅಸ್ತಿತ್ವದಲ್ಲಿರುವ ಕೇಂದ್ರಗಳಲ್ಲಿ ಕೇವಲ ಮೂರು ಬಗೆಯ ಹದ್ದುಗಳ ಸಂತತಿ ಹೆಚ್ಚಿಸಲು ಒತ್ತು ನೀಡಲಾಗುತ್ತಿದೆ. ಇನ್ನು ಮುಂದೆ ಎಲ್ಲ ಬಗೆಯ ಹದ್ದುಗಳ ಸಂತತಿ ವೃದ್ಧಿಗೆ ಎಲ್ಲಾ ಕೇಂದ್ರಗಳಲ್ಲೂ ಒತ್ತು ನೀಡಲಾಗುವುದು ಎಂದಿರುವ ಸರ್ಕಾರವು ಪಕ್ಷಿತಜ್ಞರು ಮತ್ತು ಸೇವಾ ಮನೋಭಾವದ ಸಂಸ್ಥೆಗಳು ಕೈಜೋಡಿಸಬೇಕು ಎಂದು ಕರೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.