ಅಮೆರಿಕದ ಭಾಷಾಶಾಸ್ತ್ರಜ್ಞ ನೋಮ್ ಚೋಮ್‌ಸ್ಕಿ ಅವರಿಗೆ ಈಗ 91 ವರ್ಷ. ಸಾರ್ವಜನಿಕ ಜೀವನದಲ್ಲಿ ಈಗಲೂ ಅವರು ಸಕ್ರಿಯರಾಗಿದ್ದಾರೆ. ಮಾತ್ರವಲ್ಲ, ಸಾಮಾನ್ಯವಾಗಿ ವೃದ್ಧರಲ್ಲಿ ಕಾಣಿಸುವ ದೈಹಿಕ ಅಥವಾ ಮಾನಸಿಕ ಲಕ್ಷಣಗಳನ್ನು ಆವರಿಸಿಕೊಳ್ಳದಷ್ಟು ಸ್ಥೈರ್ಯವನ್ನು ಕಾಪಾಡಿಕೊಂಡಿದ್ದಾರೆ. ಮುಖ್ಯವಾಗಿ, ತಮ್ಮ ಮಾತು ಮತ್ತು ಬರವಣಿಗೆಯಲ್ಲಿ ಅದೇ ಸ್ಪಷ್ಟತೆ, ನಿಖರತೆ, ಗುಣಮಟ್ಟ, ದೃಷ್ಟಿಕೋನವನ್ನು ಉಳಿಸಿಕೊಂಡಿದ್ದಾರೆ.

ಬೆರಗು ಹುಟ್ಟಿಸುವ ಇಂತಹ ಅಪ್ರತಿಮ ಪ್ರೇರಣಾಶಕ್ತಿ ಕೊಡುವ ಜೀವನದೃಷ್ಟಿಯೇನು? ಮುಖ್ಯವಾಗಿ, ನಾವೇಕೆ ಸ್ವಲ್ಪವೂ ವಿಮರ್ಶಿಸದೆ, ನಿವೃತ್ತಿಯ ನಂತರ ದೇಹ ಮತ್ತು ಮನಸ್ಸಿಗೆ ವಿಶ್ರಾಂತಿಯ ಅಗತ್ಯವಿದೆಯೆಂದು ಗ್ರಹಿಸುತ್ತೇವೆ? ನಿವೃತ್ತರ ಪರಿಪಕ್ವ ಜ್ಞಾನ ಮತ್ತು ಸೇವೆಯನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ಯಾಕೆ ಎಡವಿದ್ದೇವೆ?

ಮೊದಲನೆಯದಾಗಿ ನಾವಿಲ್ಲಿ ಚರ್ಚಿಸಬೇಕಾದುದು, ನಿವೃತ್ತಿಯ ಪರಿಕಲ್ಪನೆ ಹೇಗೆ ಹುಟ್ಟಿಕೊಂಡಿತು? ನಿವೃತ್ತಿಯು ದೇಹಕ್ಕೋ, ಮನಸ್ಸಿಗೋ? ಆಧುನಿಕ ಪರಿಕರಗಳು ನಮ್ಮ ಜೀವನವನ್ನು ಸುಗಮಗೊಳಿಸಿರುವ, ಉನ್ನತ ವೈದ್ಯಕೀಯ ಸೇವೆ ಲಭ್ಯವಿರುವ ಮತ್ತು ಜೀವಿತಾವಧಿ ಹೆಚ್ಚಾಗಿರುವ ಈ ಆಧುನಿಕ ಕಾಲಘಟ್ಟದಲ್ಲಿ, ನಿಜವಾಗಿಯೂ ನಿವೃತ್ತಿಯ ಅಗತ್ಯವಿದೆಯೇ ಎಂಬುದನ್ನು. ಸಂಘ- ಸಂಸ್ಥೆಗಳು ಮತ್ತು ಯುವಜನರ ದೃಷ್ಟಿಯಿಂದ ಕಾಲಕಾಲಕ್ಕೆ ಉದ್ಯೋಗದಿಂದ ನಿವೃತ್ತಿ ಅನಿವಾರ್ಯವಿರಬಹುದು. ಆದರೆ, ನಿವೃತ್ತರ ದೃಷ್ಟಿಕೋನದಿಂದ ಯೋಚಿಸಿದರೆ, ಅವರ ದೈಹಿಕ ಹಾಗೂ ಮಾನಸಿಕ ಚಟುವಟಿಕೆಗಳಿಗೆ ಸಮಾಜವು ಹೆಚ್ಚಿನ ಅವಕಾಶ ಕಲ್ಪಿಸಬೇಕೆನಿಸುತ್ತದೆ.

ಸೂಕ್ಷ್ಮವಾಗಿ ಗಮನಿಸಿದರೆ, ನಮ್ಮ ಸುತ್ತಲಿನ ಜಗತ್ತಿನಲ್ಲಿ ನಿವೃತ್ತಿಯೆನ್ನುವುದು ಬರೀ ಮನುಷ್ಯ ಸೀಮಿತ ವಿಶೇಷ ಸವಲತ್ತು. ಅನ್ಯ ಜೀವರಾಶಿಗಳಲ್ಲಿ ನಿವೃತ್ತ ಜೀವನದ ಪರಿಕಲ್ಪನೆಯಿಲ್ಲ. ಬದಲಾಗಿ, ಅವುಗಳಿಗೆ ತಮ್ಮ ಕೊನೆಯ ಉಸಿರಿನವರೆಗೂ ಆಹಾರ
ವನ್ನು ತಾವೇ ಹುಡುಕಿಕೊಳ್ಳುವ ಸ್ವಾವಲಂಬಿ ಬದುಕು ಅನಿವಾರ್ಯ. ಇನ್ನೊಂದು ವಿಶೇಷವೆಂದರೆ, ಪ್ರಾಣಿಗಳು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಕ್ಕಳಲ್ಲಿ ಸ್ವಾವಲಂಬನೆಯನ್ನು ಬೆಳೆಸಿ, ತಾವೂ ಸ್ವಾವಲಂಬಿಗಳಾಗಿಯೇ ಬದುಕುತ್ತವೆ. ವಿಸ್ಮಯವೆಂದರೆ, ಎಲ್ಲ ತತ್ವಜ್ಞಾನ, ಬುದ್ಧಿಶಕ್ತಿ, ಅರಿವಿನ ಹೊರತಾಗಿಯೂ ಮನುಷ್ಯನಿಗೆ ಇನ್ನೂ ಇಂತಹ ನಿರೀಕ್ಷಾರಹಿತ ಜೀವನದೃಷ್ಟಿ ಬೆಳೆಸಿಕೊಳ್ಳಲು ಸಾಧ್ಯವಾಗಿಲ್ಲ.

ಪ್ರಾಣಿಗಳ ಪರಿಕಲ್ಪನೆಯ ಬದುಕು ವರ್ತಮಾನದ್ದು. ಹಾಗಾಗಿ, ಕಾಣದ ನಾಳಿನ ಬದುಕಿನ ಭದ್ರತೆಗಾಗಿ ಇಂದು ಡಬಲ್ ಡ್ಯೂಟಿ ಮಾಡುವ, ಅಗತ್ಯಕ್ಕಿಂತ ಹೆಚ್ಚು ಕೂಡಿಡುವ ಪ್ರವೃತ್ತಿ ಬೆಳೆಸಿಕೊಂಡಿಲ್ಲ. ಮೂಲತಃ ಮನುಷ್ಯನ ಪ್ರವೃತ್ತಿ ಪ್ರಾಣಿಗಳಂತೆಯೇ ಇದ್ದಿರಬೇಕಲ್ಲವೇ?

ಕೂಡು ಕುಟುಂಬದ ಭಾರತೀಯ ಜೀವನ ಪರಂಪರೆಯನ್ನು ವಿಶ್ಲೇಷಿಸುವುದಾದರೆ, ವೃದ್ಧಾಪ್ಯವು ಮನೆಯ ಹಿರಿತನ ಹಾಗೂ ಸಂಪೂರ್ಣ ವಿಶ್ರಾಂತಿ ನಿರೀಕ್ಷಿಸಬಹುದಾದ ವಯೋಮಾನ. ಆದರೆ, ಕುಟುಂಬ ವ್ಯವಸ್ಥೆ ಬದಲಾದ ವರ್ತಮಾನದ ಕಾಲಘಟ್ಟದಲ್ಲಿ, ವೃದ್ಧಾಪ್ಯವೆನ್ನುವುದು ಹೆಚ್ಚಾಗಿ ನಿಸ್ಸಹಾಯಕ ಒಂಟಿ ಬದುಕು. ಈ ಸಾಮಾಜಿಕ ಬದಲಾವಣೆಯಿಂದಾಗಿ, ನಾವೀಗ ನಿವೃತ್ತ ಜೀವನವನ್ನು ಪುನರ್‌ವ್ಯಾಖ್ಯಾನ ಮಾಡಬೇಕಾಗಿದೆ.

ನಿವೃತ್ತಿಯ ಗಡಿ ದಾಟಿದ ಮೇಲೆ ಉದ್ಯೋಗ ಜಗತ್ತಿಗೂ ಮನೆಮಂದಿಗೂ ನಿಷ್ಪ್ರಯೋಜಕರಂತೆ ಕಾಣತೊಡಗಿದಾಗಲೇ ನಮ್ಮಲ್ಲಿನ ಸ್ವಅರಿವು ಜಾಗೃತವಾಗುವುದು. ಅಕಸ್ಮಾತ್, ಆರ್ಥಿಕವಾಗಿ ಸ್ವನಿರ್ವಹಣೆ ಕಷ್ಟವಾದಲ್ಲಿ, ಇಳಿವಯಸ್ಸಿನಿಂದಾಗಿ ಕೆಲಸ ಸಿಗುವುದೂ ಕಷ್ಟ. ಅದಲ್ಲದೆ, ಸಾಂಗತ್ಯದ ಅಗತ್ಯವಿರುವ ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಒಂಟಿಯಾಗಿ ಬಿಟ್ಟರೆ, ಪುನಃ ಸಂಗಾತಿಯನ್ನು ಹುಡುಕಿಕೊಳ್ಳಲು ಮುಜುಗರ. ಇವುಗಳೊಂದಿಗೆ, ವಯಸ್ಸಿಗನುಗುಣವಾದ ದೈಹಿಕ ಸಮಸ್ಯೆಗಳಿಂದ ಮಾನಸಿಕ ಖಿನ್ನತೆ ಹಾಗೂ ಸಮವಯಸ್ಕರು ಕಣ್ಮರೆಯಾಗುವುದನ್ನು ನೋಡುತ್ತಾ ಕಾಡುವ ಸಾವಿನ ಭಯ.

ಇದನ್ನೆಲ್ಲಾ ಗಮನಿಸಿದರೆ, ವೃದ್ಧಾಪ್ಯವನ್ನು ಆನಂದದಾಯಕ ಹಾಗೂ ಸ್ಮರಣೀಯ ಕೊನೆಯ ಇನಿಂಗ್ಸ್ ಆಗಿ ಮಾರ್ಪಡಿಸಲು ನಾವಿನ್ನೂ ಸಾಮಾಜಿಕವಾಗಿ ವಿಫಲರಾಗಿದ್ದೇವೆ ಎನ್ನಬಹುದು. ಮೊದಲನೆಯದಾಗಿ, ನಮ್ಮ ಸಾಮಾನ್ಯ ಭ್ರಮೆಯೇನೆಂದರೆ, ನಿವೃತ್ತರು ಜೀವನವನ್ನೆಲ್ಲಾ ಪೂರ್ತಿಯಾಗಿ ಅನುಭವಿಸಿದ ಸಂತೃಪ್ತರು, ಅವರಿಗಿನ್ನೇನೂ ಆಸೆಗಳಿಲ್ಲ ಅಂದುಕೊಳ್ಳುತ್ತೇವೆ. ಹೆಚ್ಚಿನ ಸಂದರ್ಭಗಳಲ್ಲಿ ಅವರು ತಮ್ಮ ಸ್ವಹಿತಗಳನ್ನೆಲ್ಲಾ ಅದುಮಿಟ್ಟುಕೊಂಡೇ ಈ ಹಂತಕ್ಕೆ ತಲುಪಿರುತ್ತಾರೆ. ಹಾಗಾಗಿ ಅವರ ಸ್ವಆಕಾಂಕ್ಷೆಗಳು ಅಥವಾ ಹವ್ಯಾಸಗಳನ್ನು ಈಡೇರಿಸಿಕೊಳ್ಳಲು ಅವಕಾಶ ಕಲ್ಪಿಸುವ ವ್ಯವಸ್ಥೆ ಅಗತ್ಯ.

ಎರಡನೆಯದಾಗಿ, ವೃತ್ತಿರಂಗದಲ್ಲಿ ಅಗಾಧ ಅನುಭವ ಹೊಂದಿದ ನಿವೃತ್ತರನ್ನು ಸಂಘ– ಸಂಸ್ಥೆಗಳು ಸೇವೆಯಲ್ಲಿ ತೊಡಗಿಸಿಕೊಂಡು ಮಾರ್ಗದರ್ಶನ ಪಡೆಯುವುದು ಒಳ್ಳೆಯದು. ಹೀಗಾದಲ್ಲಿ, ವಯಸ್ಸಿನ ನೆಪದಲ್ಲಿ ಶ್ರೇಷ್ಠ ಜ್ಞಾನಿಗಳು ಮೂಲೆಗುಂಪಾಗುವುದನ್ನು ತಡೆಗಟ್ಟಬಹುದು.

ಈ ಎಲ್ಲ ಅರೆಕೊರೆಗಳ ನಡುವೆಯೂ ನಿವೃತ್ತರು ಸಾಧ್ಯವಾದಷ್ಟು ಮಾನಸಿಕ ಮತ್ತು ದೈಹಿಕ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಜೀವನದ ಕೊನೆಯ ಕ್ಷಣಗಳನ್ನು ಖುಷಿಯಿಂದ ಅನುಭವಿಸುವುದನ್ನು ಕಲಿಯುವುದು ಸ್ವಕ್ಷೇಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.