ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ: ಸನಾತನ– ಸಕಾರಾತ್ಮಕ ಅಂಶ ನಗಣ್ಯವಾಯಿತೇಕೆ?

ಹೆಸರು ಸನಾತನವೆಂದಾದರೂ ಬದಲಾವಣೆ ನಿಧಾನವಾಗಿಯೇ ಆದರೂ ‘ಸನಾತನ’ ಬದಲಾವಣೆಗೆ ತೆರೆದುಕೊಂಡಷ್ಟು ಬೇರೆ ಧರ್ಮಗಳು ತೆರೆದುಕೊಂಡಿವೆಯೇ ಎಂಬುದನ್ನು ನಾವು ಪರಿಗಣಿಸಬೇಕಾಗುತ್ತದೆ
Published : 19 ಸೆಪ್ಟೆಂಬರ್ 2023, 19:59 IST
Last Updated : 19 ಸೆಪ್ಟೆಂಬರ್ 2023, 19:59 IST
ಫಾಲೋ ಮಾಡಿ
Comments

–ಡಾ. ಆರ್.ಲಕ್ಷ್ಮೀನಾರಾಯಣ

‘ಧರ್ಮ ಎಂಬುದು ಮನುಷ್ಯರ ಅಫೀಮು’ ಎಂದು ಸಾರಿದ ಮಾರ್ಕ್ಸ್‌ ವಾದವನ್ನು ಪ್ರತಿಪಾದಿಸುವ ಜಿ.ರಾಮಕೃಷ್ಣ ಅವರನ್ನು ಕೇಳಿದರೆ, ಸನಾತನವೇ ಏಕೆ, ಸಕಲ ಧರ್ಮಗಳೂ ವರ್ಜ್ಯ ಎಂದೇ ಹೇಳಿಯಾರು. ಸದ್ಯಕ್ಕೆ ಸನಾತನ ಧರ್ಮದ ಬಗ್ಗೆ ಬರೀ ನಕಾರಾತ್ಮಕ ಅಂಶಗಳನ್ನೇ ಅವರು ತಮ್ಮ ಲೇಖನದಲ್ಲಿ (ಪ್ರ.ವಾ., ಸೆ. 16) ಎತ್ತಿ ಹೇಳಿದ್ದಾರೆ. ಅದರಲ್ಲಿರುವ ಸಕಾರಾತ್ಮಕ ಅಂಶಗಳ ಬಗ್ಗೆ ಕೂಡ ಅವರಿಗೆ ತಿಳಿದಿರುವ ಹಾಗೆ ಬೇರೆಯವರಿಗೆ ತಿಳಿದಿಲ್ಲವೆಂದು ನನ್ನ ಭಾವನೆ. ಆದರೆ ಅದನ್ನು ಅವರು ಹೇಳಲೊಲ್ಲರು.

ಈ ದೇಶದ ಬಹುಸಂಖ್ಯಾತ ಜನರು ಅನುಸರಿಸುತ್ತಿರುವ ಒಂದು ಧರ್ಮವಾದ ಹಿಂದೂ ಎಂಬುದು ಒಂದು ಧರ್ಮವೇ ಅಲ್ಲ ಅಥವಾ ಅಂಥ ಧರ್ಮವೇ ಇಲ್ಲ ಎಂದು ಅನೇಕರು ಹೇಳುತ್ತಿರುವ ಹಿನ್ನೆಲೆಯಲ್ಲಿ, ಜನ ಹೆಚ್ಚು ಕಡಿಮೆ ಮರೆತೇಬಿಟ್ಟಿದ್ದ ‘ಸನಾತನ’ ಎಂಬ ಶಬ್ದವನ್ನು ತಮಿಳುನಾಡಿನ ರಾಜಕಾರಣಿಯೊಬ್ಬರು ಸಮಾಧಿಯಿಂದ ಹೊರತೆಗೆದು ಬಳಸಿದ ಮೇಲೆ ಇದಕ್ಕೆ ಮತ್ತೆ ಜೀವ ಬಂದಿತೆಂದು ಅನಿಸುತ್ತದೆ. ಈಗ ಅದನ್ನಿಟ್ಟುಕೊಂಡು ಅದರ ಅರ್ಥ, ವ್ಯುತ್ಪತ್ತಿ ಎಲ್ಲ ಹೇಳುತ್ತ ಹೋಗುವಾಗ, ಸಾವಿರಾರು ವರ್ಷಗಳಲ್ಲಿ ನಾವು ಎಷ್ಟು ದೂರ ಸಾಗಿ ಬಂದಿದ್ದೇವೆ ಎಂಬುದನ್ನು ಮರೆತೇಬಿಟ್ಟರೆ ಹೇಗೆ? ಎಷ್ಟೇ ಬೇಡವೆಂದರೂ ಧರ್ಮ ಇರುತ್ತದೆ. ಅದು ಇರುತ್ತದೆಂದ ಮೇಲೆ ಅದರಲ್ಲಿ ಕೊಳಚೆ, ಕಸ ಅದು ಯಾವ ಧರ್ಮವಾದರೂ ಕಾಲಾಂತರದಲ್ಲಿ ಸೇರಿಕೊಳ್ಳುತ್ತಲೇ ಹೋಗುತ್ತದೆ.

ಸನಾತನ ಎಂಬುದು ಹುಟ್ಟಿದ ಕಾಲದಲ್ಲಿ ಈಗಿರುವಂತೆ ಇರಲಿಲ್ಲ ಎಂಬುದು ಪ್ರಾಜ್ಞರಾದ ಡಾ. ಜಿ.ರಾಮಕೃಷ್ಣ ಅವರಿಗಿಂತ ಚೆನ್ನಾಗಿ ಬೇರೆ ಯಾರು ತಾನೆ ಬಲ್ಲರು? ಅದಕ್ಕೆ ವ್ಯಾಸ, ವಾಲ್ಮೀಕಿ, ವಿಶ್ವಾಮಿತ್ರರಂತಹ ಋಷಿಗಳೇ ಸಾಕ್ಷಿ. ವಿಂಗಡಣೆಗಳು, ಅಸಮಾನತೆಗಳು, ಮೌಢ್ಯಗಳು ಎಲ್ಲ ಧರ್ಮಗಳಲ್ಲೂ ಇವೆ. ಕ್ರಿಶ್ಚಿಯನ್ನರಲ್ಲಿ, ಮುಸಲ್ಮಾನರಲ್ಲಿ, ಸಿಖ್ಖರಲ್ಲಿ ಇರುವ ಪಂಗಡಗಳು, ಒಳ ಪಂಗಡಗಳಲ್ಲಿ ಅಸಮಾನತೆಗಳು, ಘರ್ಷಣೆಗಳು ಇಲ್ಲವೇ? ಬಹುಶಃ ಕಾಲಾಂತರದಲ್ಲಿ ಇಂಥವನ್ನು ಮಾಡಿಕೊಳ್ಳುತ್ತಾ ಹೋಗುವುದೇ ಮನುಷ್ಯನ ಸ್ವಭಾವವಿರಬಹುದು. ಆದರೆ ಈ ಪ್ರಶ್ನೆ ಬಂದಿರುವುದು ಯಾವ ಸಂದರ್ಭದಲ್ಲಿ ಎಂಬುದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಮತ್ತು ಅದು ಶುದ್ಧಾಂಗವಾಗಿ ರಾಜಕೀಯದ್ದು ಎಂಬುದನ್ನು ಪರಿಗಣಿಸದೆ, ಸನಾತನದಲ್ಲಿ ಇರುವ ಬಹಳಷ್ಟು ಉದಾತ್ತವೂ ಉದಾರವೂ ಆದ ಸಕಾರಾತ್ಮಕ ಅಂಶಗಳನ್ನೆಲ್ಲಾ ನಗಣ್ಯವೆನಿಸುವಂತೆ ಮಾಡುವ ಅಗತ್ಯವಿದೆಯೇ?

ಸನಾತನ ಎಂದರೆ ಬರೀ ಬ್ರಾಹ್ಮಣ ಅಥವಾ ಬ್ರಾಹ್ಮಣ್ಯ ಎಂಬುದಕ್ಕೆ ಸಂವಾದಿಯಾಗಿ ಮಾಡಿ ಎಲ್ಲ ಮಾತುಗಳನ್ನೂ ಅವರು ಆಡಿದಂತಿದೆ. ಆದರೆ ಹಾಗೆ ಹೇಳುವ ಸನಾತನಿಗಳಲ್ಲೂ ಈಗ ಎಷ್ಟೆಲ್ಲ ಬದಲಾವಣೆಗಳು ಆಗಿವೆ ಎಂಬುದನ್ನು ಮರೆಯುವುದು ನಿಜಕ್ಕೂ ಅರ್ಥವಾಗದ ಸಂಗತಿ. ಇನ್ನು ಗೀತೆಯ ಬಗೆಗಂತೂ ತುಂಬಾ ವ್ಯಾಖ್ಯಾನಗಳು ಬಂದಿರುವಾಗ, ಅದರಲ್ಲೂ ಬೇಕಾದಷ್ಟು ಮೌಲ್ಯಯುತವಾದವು ಇರುವಾಗ, ತಮಗೆ ಸರಿಯೆನಿಸದ್ದನ್ನು ಮಾತ್ರವೇ ಅಥವಾ ಅದರಲ್ಲಿ ಕಡೆಗಣಿಸಬಹುದಂತಹವನ್ನು ಮಾತ್ರವೇ ಎತ್ತಿ ಹೇಳುತ್ತಾ ಜರಿಯುವುದು ಬೇಕಿತ್ತೆ? ಈಗಲೂ ಮನು ಅಥವಾ ಆಪಸ್ತಂಭ ಸೂತ್ರಗಳಲ್ಲಿ ಹೇಳಿರುವಂತೆಯೇ ನಡೆದುಕೊಳ್ಳಲಾಗುತ್ತಿದೆಯೇ? ಹೆಸರು ಸನಾತನವೆಂದಾದರೂ ಬದಲಾವಣೆ ನಿಧಾನವಾಗಿಯೇ ಆದರೂ ‘ಸನಾತನ’ ಬದಲಾವಣೆಗೆ ತೆರೆದುಕೊಂಡಷ್ಟು ಬೇರೆ ಧರ್ಮಗಳು ತೆರೆದುಕೊಂಡಿವೆಯೇ ಎಂಬುದನ್ನೂ ನಾವು ಪರಿಗಣಿಸಬೇಕಾಗುತ್ತದಲ್ಲವೇ? ಚಾರ್ವಾಕ ದರ್ಶನವೂ ಒಳಗೊಂಡಂತೆ ಎಲ್ಲವನ್ನೂ ಒಳಗೊಳ್ಳುತ್ತಾ ಹೋಗಿರುವುದೂ ಸನಾತನದ ವಿಶೇಷವಲ್ಲವೇ?

ಅವರೆಕಾಯಿ ತರಲಿಲ್ಲವೆಂದು ಮಂಕರಿಯಿಂದ ಹೊಡೆದ ಬ್ರಾಹ್ಮಣರಿದ್ದ ಹಾಗೆಯೇ ಅದೇ ಸಮುದಾಯದವರನ್ನು ಮನೆಯಲ್ಲಿ ತಂದಿಟ್ಟುಕೊಂಡು ಸಾಕಿ ಸಲಹಿದ ಗೋಪಾಲಸ್ವಾಮಿ ಅಯ್ಯರ್, ಕುದ್ಮುಲ್ ರಂಗರಾವ್ ಅವರಂತಹ ಬ್ರಾಹ್ಮಣರೂ ಇದ್ದರಲ್ಲವೇ? ಮನುಸ್ಮೃತಿಯನ್ನು ಸುಟ್ಟ ಡಾ. ಅಂಬೇಡ್ಕರರೂ ಹಾಗೆ ಸುಟ್ಟ ಮನುಸ್ಮೃತಿಯಲ್ಲೂ ಕೆಲವು ಒಳ್ಳೆಯ ಅಂಶಗಳಿವೆ, ಆದರೆ ಅದನ್ನು ಸುಟ್ಟಿದ್ದು ಒಂದು ಸಾಂಕೇತಿಕ ಪ್ರತಿಭಟನೆ ಎಂದು ಹೇಳುವಷ್ಟು ವಿವೇಕವನ್ನು ತೋರಿದ್ದಾರೆ.

ಸನಾತನದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು, ದಲಿತರನ್ನು ಅದು ಸಹಸ್ರಾರು ವರ್ಷಗಳಿಂದ ನಡೆಸಿಕೊಂಡದ್ದು ಮನುಷ್ಯತ್ವಕ್ಕೇ ಕಳಂಕ ತರುವಂಥದ್ದು ಎಂಬುದನ್ನು ಒಪ್ಪುತ್ತಲೇ ಅದರಷ್ಟು ಬದಲಾವಣೆಗೆ ತೆರೆದುಕೊಂಡ ಮತ್ತು ಈಗಲೂ ತೆರೆದುಕೊಳ್ಳುತ್ತಿರುವ ಹಾಗೂ ಅದರ ಹಾಗೆ ಎಲ್ಲವನ್ನೂ ಒಳಗೊಳ್ಳುವ ಉದಾತ್ತ ಮನೋಭಾವ ಹೊಂದಿರುವ ಧರ್ಮಗಳು ಬಹಳಷ್ಟಿಲ್ಲ ಎಂಬ ಕಾರಣಕ್ಕೇ ಅದು ಸನಾತನ ಅಷ್ಟೇ ಅಲ್ಲ ನವತ್ವವನ್ನು ನಿಧಾನವಾಗಿಯಾದರೂ ತಳೆಯುತ್ತಾ ಹೋಗುತ್ತಿರುವ ಧರ್ಮವೂ ಹೌದು ಎಂದು ಹೇಳಿದರೆ ಉತ್ಪ್ರೇಕ್ಷೆಯಾಗುವುದಿಲ್ಲ ಎಂದು ಭಾವಿಸುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT