ಕಾರ್ಯಾಂಗ ಹಾಗೂ ಶಾಸಕಾಂಗ ಪರಸ್ಪರ ಕೈಜೋಡಿಸಿ ಕೆಲಸ ಮಾಡಬೇಕೆಂಬುದು ಸಂವಿಧಾನದ ಅಪೇಕ್ಷೆ, ಜನರ ನಿರೀಕ್ಷೆ. ಆದರೆ, ನಮ್ಮಲ್ಲಿ ಈಗ ಆಗುತ್ತಿರುವುದಾದರೂ ಏನು? ರಾಜ್ಯದ ಅನೇಕ ಕಡೆ ಅದರಲ್ಲೂ, ಬೃಹತ್ ಬೆಂಗಳೂರು ಮಹಾನಗರಪಾಲಿಕೆಯಲ್ಲಿ ಆಡಳಿತ ಎಂಬುದು ಇದೆಯೇ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ಆಡಳಿತದಲ್ಲಿ ಯಾವುದಾದರೂ ಲೋಪದೋಷ ಅಥವಾ ಅನ್ಯಾಯ ಉಂಟಾದಲ್ಲಿ ಜನರು ಅನಿವಾರ್ಯವಾಗಿ ನ್ಯಾಯಾಂಗದ ಮೊರೆ ಹೋಗಬೇಕಾಗುತ್ತದೆ. ಆದರೆ ಆಡಳಿತದ ದೈನಂದಿನ ಲೋಪಕ್ಕೂ ಹೈಕೋರ್ಟ್ ಮೊರೆಹೋಗಬೇಕಾದಂಥ ಶೋಚನೀಯ ಪರಿಸ್ಥಿತಿ ಈಗ ಉಂಟಾಗಿದೆ.

ಬೆಂಗಳೂರನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ನಗರದ ಅಂದವನ್ನು ಕೆಡಿಸುತ್ತಿದ್ದ ಮತ್ತು ಸಂಚಾರಕ್ಕೆ ತೊಂದರೆ ಉಂಟುಮಾಡುತ್ತಿದ್ದ ಫ್ಲೆಕ್ಸ್‌ಗಳನ್ನು ತೆಗೆಸಬೇಕಾದರೆ, ಪ್ರಾಣಕ್ಕೆ ಕುತ್ತಾಗುತ್ತಿದ್ದ ರಸ್ತೆ ಗುಂಡಿಗಳನ್ನು ಮುಚ್ಚಿಸಬೇಕಾದರೆ ಹೈಕೋರ್ಟ್ ಮಧ್ಯಪ್ರವೇಶ ಮಾಡಿ ಚಾಟಿ ಬೀಸಬೇಕಾಯಿತು.

ಕೋರ್ಟ್ ಆದೇಶದ ನಂತರ ಪಾಲಿಕೆಯವರು ಎಚ್ಚೆತ್ತುಕೊಂಡು, ರಸ್ತೆ ಗುಂಡಿಗಳಿಗೆ ತೇಪೆ ಹಾಕುವ ಕೆಲಸ ಮಾಡಿದರು. ಆದರೆ, ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಆದಿ ಅಂತ್ಯವಿಲ್ಲದ್ದು. ನಗರದಲ್ಲಿ ಮಳೆ ಬರಲಿ– ಬಿಡಲಿ, ರಸ್ತೆ ಗುಂಡಿಗಳಂತೂ ಉದ್ಭವಿಸುತ್ತಲೇ ಇರುತ್ತವೆ. ಆಡಳಿತವು ಯಾವುದನ್ನು ತನ್ನ ಕರ್ತವ್ಯವೆಂದು ತಿಳಿದು ಮಾಡಲೇಬೇಕಾಗಿತ್ತೋ ಆ ಕೆಲಸವನ್ನು ಮಾಡಿಸಲು ಸಹ ಕೋರ್ಟ್ ಮಧ್ಯಪ್ರವೇಶ ಮಾಡಬೇಕಾಗಿ ಬಂದದ್ದು ದುರಂತವಲ್ಲವೇ?

ಇದಿಷ್ಟೇ ಅಲ್ಲ, ಕಸ ನಿರ್ವಹಣೆ, ಕಾಮಗಾರಿಗಳ ವಿಳಂಬ, ಪೌರ ಕಾರ್ಮಿಕರ ವೇತನ ಪಾವತಿ ಇತ್ಯಾದಿ ಅನೇಕ ಜ್ವಲಂತ ಸಮಸ್ಯೆಗಳಿವೆ. ಎಲ್ಲಕ್ಕೂ ನ್ಯಾಯಾಂಗವೊಂದೇ ಪರಿಹಾರವೇ? ಕಸ ನಿರ್ವಹಣೆ ವಿಚಾರದಲ್ಲಂತೂ, ಪಾಲಿಕೆಗೆ ಯಾರು ಏನೇ ಹೇಳಿದರೂ ವ್ಯರ್ಥಪ್ರಯತ್ನವಾಗುತ್ತದೆ. ಅದಕ್ಕೆ ಗುತ್ತಿಗೆದಾರರು ಮತ್ತು ಪಾಲಿಕೆಯ ಸದಸ್ಯರ ನಡುವಿನ ‘ಅಪವಿತ್ರ ಮೈತ್ರಿ’ಯೇ ಕಾರಣ ಎಂಬ ಆರೋಪವೂ ಇದೆ. ಈ ಸಮಸ್ಯೆ ಪರಿಹಾರಕ್ಕೂ ನ್ಯಾಯಾಲಯವೇ ಚಾಟಿ ಬೀಸಬೇಕಾಗಿದೆ.

ಬೆಂಗಳೂರು ಒಂದೇ ಅಲ್ಲ, ರಾಜ್ಯದ ಎಲ್ಲ ನಗರ ಮತ್ತು ಪಟ್ಟಣಗಳಲ್ಲೂ ಈ ಸಮಸ್ಯೆ ಅಷ್ಟೇ ಗಂಭೀರವಾಗಿದೆ.

ತನ್ನ ಕರ್ತವ್ಯ, ಜವಾಬ್ದಾರಿಗಳನ್ನು ನಿಭಾಯಿಸಿದರೂ– ಬಿಟ್ಟರೂ ಏನೂ ವ್ಯತ್ಯಾಸ ಆಗುವುದಿಲ್ಲ ಎಂಬ ಮನಸ್ಥಿತಿ ಆಡಳಿತದಲ್ಲಿ ಮಡುಗಟ್ಟಿದೆ. ಹಾಗೆ ನೋಡಿದರೆ, ಕೊಡಗಿನಲ್ಲಿ ಈ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದಿಂದ ಉಂಟಾದ ಅನಾಹುತದ ಪರಿಹಾರ ಕಾರ್ಯವನ್ನು ಕ್ಷಿಪ್ರಗತಿಯಲ್ಲಿ ನಡೆಸಲಾಯಿತು. ಆದರೆ, ಪುನರ್ವಸತಿ ಕಾರ್ಯ ಹೇಗೆ ಸಾಗಿದೆ? ರಾಜಕೀಯದ ಮೇಲಾಟದಲ್ಲಿ ಸರ್ಕಾರವು ಕೊಡಗನ್ನು ಮರೆತಂತಿದೆ.

ದೇಣಿಗೆಯ ರೂಪದಲ್ಲಿ ಎಷ್ಟು ಹಣ ಸಂಗ್ರಹವಾಗಿದೆ? ಆ ಹಣ ಯಾವ ರೀತಿ ಖರ್ಚಾಗುತ್ತಿದೆ? ಕೇಂದ್ರ ಸರ್ಕಾರದಿಂದ ನಿರೀಕ್ಷಿತ ಪ್ರಮಾಣದಲ್ಲಿ ಹಣ ಬಂದಿಲ್ಲ ಎಂಬ ಮಂತ್ರ ಜಪಿಸುತ್ತಾ, ರಾಜ್ಯ ಸರ್ಕಾರ ಕಾಲಹರಣ ಮಾಡಬೇಕೇ? ಅಥವಾ ಪರಿಹಾರ ಕಾರ್ಯಕ್ಕಾಗಿ ಕೊಡಗಿನ ಜನರು ನ್ಯಾಯಾಲಯದ ಮೊರೆ ಹೋಗಬೇಕೇ?

ತಾವು ನೀಡುವ ತೆರಿಗೆಗೆ ತಕ್ಕಂತೆ ಉತ್ತಮ ಆಡಳಿತವನ್ನು ಪಡೆಯುವ ಹಕ್ಕು ಜನರಿಗಿದೆ. ಅದು ನಿರಾಕರಣೆಯಾದಾಗ, ನ್ಯಾಯಾಂಗದ ಮೊರೆ ಹೋಗುವ ಅನಿವಾರ್ಯವನ್ನು ಸರ್ಕಾರವೇ ಸೃಷ್ಟಿ ಮಾಡಿದಂತಾಗುತ್ತದೆ. ರೈತರ ಶೋಷಣೆಯಂತೂ ಮುಗಿಯದ ಕತೆಯಾಗುತ್ತಿದೆ. ಬೆಳೆಗಳಿಗೆ ಸೂಕ್ತ ಬೆಲೆ ದೊರೆಯದೇ ರೈತರ ಸಾಲದ ಪ್ರಮಾಣ ಏರುತ್ತಿದೆ. ಅವರ ಜೀವನ ದುರ್ಭರವಾಗುತ್ತಿದೆ. ಈಗ ಉಂಟಾಗಿರುವ ಕಬ್ಬು ಬೆಳೆಗಾರರ ಸಮಸ್ಯೆ ಅದಕ್ಕೆ ಒಂದು ಉದಾಹರಣೆ ಮಾತ್ರ.

ರೈತರು ಬೆಳೆದು ಕಾರ್ಖಾನೆಗಳಿಗೆ ಪೂರೈಸಿದ ಕಬ್ಬಿಗೆ ಸಕ್ಕರೆ ಕಾರ್ಖಾನೆಗಳ ಮಾಲೀಕರು ಸಕಾಲದಲ್ಲಿ ಹಣಪಾವತಿ ಮಾಡದೇ ಅವರನ್ನು ಸತಾಯಿಸುತ್ತಿರುವುದು ವಾಸ್ತವ. ಅದನ್ನು ನೋಡಿಯೂ ನೋಡದಂತೆ ಇರುವ ಸರ್ಕಾರದ ನಡವಳಿಕೆ ಖಂಡನೀಯ. ಕಬ್ಬು ಪೂರೈಕೆ ಸಮಯದಲ್ಲಿ ಸೂಕ್ತ ನಡಾವಳಿಯನ್ನು ಪಾಲಿಸದೇ, ಮುಚ್ಚಳಿಕೆ ಬರೆಸಿಕೊಳ್ಳದೇ ಇರುವುದು ಅತ್ಯಂತ ದೊಡ್ಡ ಪ್ರಮಾದ. ಹಾಗೆ ಮಾಡಿದ್ದಲ್ಲಿ, ರೈತರಿಗೆ ನ್ಯಾಯಾಂಗದ ಮೊರೆ ಹೋಗಲು ಸಹಾಯವಾಗುತ್ತಿತ್ತು.

ಇಂಥ ಸಾಮಾಜಿಕ ಅನ್ಯಾಯಗಳ ವಿರುದ್ಧ ಹೋರಾಡುವ ವಕೀಲರು, ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕಾಗಿದೆ. ಅವರಲ್ಲದೇ, ಈ ವಿಷಯದಲ್ಲಿ ಮತ್ಯಾರು ತಾನೆ ಸಲಹೆ– ಸೂಚನೆ ನೀಡಲು ಸಾಧ್ಯ? ಒಟ್ಟಿನಲ್ಲಿ ಈ ವಿಷಯದಲ್ಲೂ ನ್ಯಾಯಾಂಗ ಮಧ್ಯಪ್ರವೇಶ ಅನಿವಾರ್ಯ ಎಂಬಂತಾಗಿದೆ.

ನ್ಯಾಯಾಂಗ ಹಾಗೂ ಕಾರ್ಯಾಂಗ ಒಂದುಗೂಡಿ ಕಾರ್ಯನಿರ್ವಹಿಸಬೇಕು ಎಂಬುದು ನಿರೀಕ್ಷೆಯಾದರೂ ಅದು ಈಡೇರದೆ ಈಗ ಕಾರ್ಯಾಂಗದ ಒಳಗೆ ನ್ಯಾಯಾಂಗವು ಅನಿವಾರ್ಯವಾಗಿ ಮೂಗು ತೂರಿಸಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ‘ಸಕಾಲ’ದಂತಹ ಸರ್ಕಾರಿ ಯೋಜನೆಯೂ ಹಳ್ಳ ಹಿಡಿದು, ಜನರು ಸರ್ಕಾರಿ ಕಚೇರಿಗಳಿಗೆ ತಿಂಗಳುಗಟ್ಟಲೆ ಅಲೆದಾಡಬೇಕಾದುದು ಅನಿವಾರ್ಯವಾಗಿದೆ.

ಲಾಭದಾಯಕ ಯೋಜನೆಗಳ ಬಗ್ಗೆ ಮಾತ್ರ ಸರ್ಕಾರ ಗಮನ ಹರಿಸದೆ, ಜನರ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ತಲೆಕೆಡಿಸಿಕೊಂಡಿದ್ದೇ ಆದರೆ, ನ್ಯಾಯಾಂಗದೊಂದಿಗೆ ಈಗ ಉಂಟಾಗುತ್ತಿರುವ ಸಂಘರ್ಷವನ್ನು ತಪ್ಪಿಸಬಹುದೇನೋ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.