ಮಲ್ಲಿಕಾರ್ಜುನ ಹೆಗ್ಗಳಗಿ

ಕೂಡಲಸಂಗಮದಲ್ಲಿ ಈಚೆಗೆ ನಡೆದ ಮಹಿಳಾ ಕೃಷಿ ಕಾರ್ಮಿಕರ ಸಮಾವೇಶಕ್ಕೆ ಹೋಗಿದ್ದೆ. ಗ್ರಾಮೀಣ ಪ್ರದೇಶದಿಂದ ಬಂದ ಮಹಿಳೆಯರು ಅಲ್ಲಿ ಸೇರಿದ್ದರು. ಅವರ ಕೈಯಲ್ಲಿ ಬಣ್ಣ ಬಣ್ಣದ ಕರಪತ್ರಗಳಿದ್ದವು. ವಿಚಾರಿಸಿದಾಗ, ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯ ಸರ್ಕಾರ ಪ್ರತಿ ಮನೆಯ ಯಜಮಾನಿಗೆ ನೀಡಲಿರುವ 2,000 ರೂಪಾಯಿಯನ್ನು ಉಳಿತಾಯ ಯೋಜನೆಗಳಲ್ಲಿ ತೊಡಗಿಸುವಂತೆ ಆಕರ್ಷಿಸಲು ಖಾಸಗಿ ಮತ್ತು ಸಹಕಾರಿ ಹಣಕಾಸು ಸಂಸ್ಥೆಗಳು ಪ್ರಕಟಿಸಿದ ಕರಪತ್ರಗಳು ಎಂದು ಗೊತ್ತಾಯಿತು. ಇನ್ನು ಕೆಲವು ಕರಪತ್ರಗಳು ಮಾಸಿಕ ಕಂತು ಕಟ್ಟುವ ವ್ಯಾಪಾರಕ್ಕೆ ಸಂಬಂಧಿಸಿದವಾಗಿದ್ದವು.

ಕಂತುಗಳಲ್ಲಿ ಹಣ ಕಟ್ಟಿ ನಿಶ್ಚಿತ ಅವಧಿಯ ನಂತರ ಚಿನ್ನದ ಒಡವೆ, ಫ್ರಿಜ್, ದ್ವಿಚಕ್ರ ವಾಹನ ಪಡೆಯುವ ಬಗ್ಗೆ ಈ ಕರಪತ್ರಗಳಲ್ಲಿ ವಿವರಿಸಲಾಗಿತ್ತು. ಮಹಿಳೆಯರ ನಿತ್ಯದ ಬದುಕಿನ ಅವಶ್ಯಕತೆಗಳಿಗೆ ನೆರವಾಗಿ, ಅವರ ಕಷ್ಟ ದೂರ ಮಾಡುವ ಆಶಯದಿಂದ ಸರ್ಕಾರ ‘ಗೃಹಲಕ್ಷ್ಮಿ’ ಯೋಜನೆ ರೂಪಿಸಿದೆ. ಇದು ಮಹಿಳಾ ಸಬಲೀಕರಣ ಪ್ರಕ್ರಿಯೆಯ ಮಹತ್ವದ ಹೆಜ್ಜೆಯಾಗಿದೆ. ಆದರೆ ಈ ನಗದು ಕೊಡುಗೆಯನ್ನು ‘ಉಳಿತಾಯ ಮಾಡಿ ಶ್ರೀಮಂತರಾಗಿ’ ಎಂಬ ಆಕರ್ಷಕ ಘೋಷಣೆಯೊಂದಿಗೆ ಕಿತ್ತುಕೊಳ್ಳಲು ಸೌಹಾರ್ದ ಸಂಸ್ಥೆಗಳು, ಸಹಕಾರಿ ಸಂಘಗಳು ಮತ್ತು ಖಾಸಗಿ ಹಣಕಾಸು ಸಂಸ್ಥೆಗಳು ಬಲೆ ಬೀಸುತ್ತಿರುವುದು ಹಾಗೂ ಕೆಲವು ಖಾಸಗಿ ಸಂಸ್ಥೆಗಳು ಕಂತು ವ್ಯಾಪಾರಕ್ಕೆ ನಿಂತಿರುವುದು ಯೋಜನೆಯ ಮೂಲ ಉದ್ದೇಶಕ್ಕೆ ಕೊಡಲಿ ಪೆಟ್ಟು ಹಾಕುತ್ತಿರುವಂತೆ ಕಾಣುತ್ತದೆ.

ಕರಪತ್ರಗಳನ್ನು ಪರಿಶೀಲಿಸಿದಾಗ, ಒಂದು ವರ್ಷದಿಂದ 10 ವರ್ಷಗಳ ದೀರ್ಘ ಅವಧಿಗೆ ಮಾಸಿಕ ಕಂತುಗಳ ಮೂಲಕ ಹಣ ಉಳಿತಾಯ ಮಾಡುವ ವಿವರಗಳಿದ್ದವು. ಅವಧಿ ಮುಗಿದ ನಂತರ ಪಡೆಯುವ ದೊಡ್ಡ ಮೊತ್ತದ ಅಂಕಿಗಳು ದಪ್ಪ ಅಕ್ಷರಗಳಲ್ಲಿ ಮಿನುಗುತ್ತಿದ್ದವು. ಹೆಚ್ಚಿನ ಬಡ್ಡಿ, ಕೆಲವು ವಿಶೇಷ ಗಿಫ್ಟ್ ಕೊಡುವ ಬಗ್ಗೆ ಕರಪತ್ರಗಳಲ್ಲಿ ದಾಖಲಿಸಲಾಗಿತ್ತು.

ಹಣ ಉಳಿತಾಯ ಮಾಡುವುದು ಭಾರತೀಯರಿಗೆ ಪ್ರಿಯವಾದ ಮನೋಭಾವ. ಮಕ್ಕಳಿಗೆ ಆಟಿಕೆ, ಬಟ್ಟೆ, ಅಗತ್ಯವಿರುವವರಿಗೆ ಅವಶ್ಯ ಔಷಧವನ್ನೂ ಕೊಡಿಸದೆ, ಹೊಟ್ಟೆಬಟ್ಟೆ ಕಟ್ಟಿ ಉಳಿತಾಯ ಮಾಡಲು ಹಂಬಲಿಸುವವರ ಸಂಖ್ಯೆ ದೊಡ್ಡದಿದೆ. ಪುರುಷರಿಗಿಂತ ಮಹಿಳೆಯರು ಹಣ ಉಳಿತಾಯ ಮಾಡುವ ಬಗ್ಗೆ ಹೆಚ್ಚು ಒಲವು ಹೊಂದಿರುತ್ತಾರೆ ಎಂದು ಮನೋತಜ್ಞರು ಹೇಳುತ್ತಾರೆ. ಇದರಿಂದ ಸಹಜವಾಗಿ ಉಳಿತಾಯದ ಹೆಸರಿನಲ್ಲಿ ಹಣ ಕಿತ್ತುಕೊಳ್ಳುವವರಿಗೆ ಅನುಕೂಲವಾಗುತ್ತದೆ.

ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಎಂದರೆ, ಕೆಲವು ಖಾಸಗಿ ಹಣಕಾಸು ಸಂಸ್ಥೆಗಳ ಬದ್ಧತೆ, ವಿಶ್ವಾಸಾರ್ಹತೆ ಕಡಿಮೆ. ಗುಳುಂ ಮಾಡುವ ಸಂಭವ ಇರುತ್ತದೆ. ಈ ದಿಸೆಯಲ್ಲಿಯೂ ಎಚ್ಚರ ವಹಿಸುವುದು ಅವಶ್ಯ.

ನಮಗೆ ಹಾಲು ಪೂರೈಸುವ ಅಜ್ಜಿಯದು ಕರುಣಾಜನಕ ಕಥೆ. ಕಂತುಗಳಲ್ಲಿ ಹಣ ಕಟ್ಟಿ ಐದು ವರ್ಷಗಳ ನಂತರ ಚಿನ್ನದ ಎರಡು ಬಳೆಗಳನ್ನು ಪಡೆದುಕೊಳ್ಳುವ ಯೋಜನೆಯ ಸದಸ್ಯರಾಗಿದ್ದರು ಈ ಅಜ್ಜಿ. ಕಷ್ಟಪಟ್ಟು ಹೈನುಗಾರಿಕೆ ಮಾಡಿ, ಬಂದ ಹಣವನ್ನೆಲ್ಲ ಈ ಯೋಜನೆಯಲ್ಲಿ ಹೂಡಿದ್ದರು. ಅವಧಿ ಮುಗಿಯುವ ಮುನ್ನವೇ ಯೋಜನೆಯ ರೂವಾರಿ ತಲೆಮರೆಸಿಕೊಂಡು ಹೋದ. ಹಣ ಕಳೆದುಕೊಂಡ ಕೊರಗಿನಲ್ಲಿ ಅಜ್ಜಿ ಆರೋಗ್ಯವನ್ನು ಕಳೆದುಕೊಂಡಿದ್ದಾರೆ. ಅಜ್ಜಿಯ ಹಾಗೆ ನೂರಾರು ಮಹಿಳೆಯರು ಚಿನ್ನದ ಬಳೆಗಳ ವಂಚನೆಗೆ ಒಳಗಾಗಿದ್ದು ತನಿಖೆಯ ನಂತರ ಬಹಿರಂಗಗೊಂಡಿತ್ತು.

ನಮ್ಮ ಹಣವನ್ನು ನಮ್ಮದಾಗಿ ಸದಾ ಎಚ್ಚರಿಕೆಯಿಂದ ಕಾಪಾಡಿಕೊಂಡಿರಬೇಕು. ನಮಗೆ ಬೇಕಾದಾಗ ಅದು ಸರಳವಾಗಿ ದೊರಕುವಂತಿರಬೇಕು. ಹಣದ ಬಗ್ಗೆ ಎರಡು ಎಚ್ಚರಿಕೆಯ ಮಾತುಗಳನ್ನು ಪಾಲಿಸಬೇಕು. ಎಚ್ಚರಿಕೆ 1. ಯಾರದೋ ಕೈಗೆ ಹಣ ಕೊಟ್ಟು ಕಳೆದುಕೊಳ್ಳಬೇಡಿ. ಎಚ್ಚರಿಕೆ 2. ಮೊದಲು ಹೇಳಿದ ಮಾತನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಿ. ಅಂತರರಾಷ್ಟ್ರೀಯ ಖ್ಯಾತಿಯ ಉದ್ಯಮಿ ವಾರನ್ ಬಫೆಟ್ ಅವರು ಕೊಟ್ಟಿರುವ ಈ ಸಲಹೆ ಸರ್ವಕಾಲಕ್ಕೂ ಅನುಕರಣೀಯ.

ಅನುಕೂಲ ಇದ್ದವರು ಉಳಿತಾಯ ಮಾಡುವುದು ತಪ್ಪಲ್ಲ. ಆದರೆ ಸಬಲೀಕರಣಕ್ಕೆಂದು ಕೈಗೆ ಬರುವ ಈ ಅಲ್ಪ ಹಣ, ಉಳಿತಾಯದ ಹೆಸರಿನಲ್ಲಿ, ಕಂತು ಖರೀದಿಯ ನೆಪದಲ್ಲಿ ಯಾರದೋ ಪಾಲಾಗಬಾರದು.

ಮಧ್ಯಪ್ರದೇಶದಲ್ಲಿ 2011ರಲ್ಲಿ ಯುನಿಸೆಫ್ ಸಹಯೋಗದೊಂದಿಗೆ 20 ಹಳ್ಳಿಗಳ ನಾಗರಿಕರಿಗೆ ಮೂಲ ಆದಾಯದ ರೂಪದಲ್ಲಿ ಹಣ (ಬೇಸಿಕ್ ಇನ್ಕಮ್) ಕೊಡುವ ವಿನೂತನ ಪ್ರಯೋಗ ಜಾರಿ ಮಾಡಲಾಯಿತು. ಎಲ್ಲ ನಾಗರಿಕರ ಬ್ಯಾಂಕ್ ಖಾತೆ ತೆರೆದು, ಪ್ರತಿಯೊಬ್ಬರ ಖಾತೆಗೂ ತಿಂಗಳಿಗೆ ₹ 2,000 ಜಮಾ ಮಾಡಲಾಯಿತು. ಬಡವ ಬಲ್ಲಿದ ಎಂಬ ಭೇದವಿಲ್ಲದೆ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಹಣ ಹಾಕಲಾಯಿತು. ಒಂದು ವರ್ಷ ನಡೆದ ಈ ಪ್ರಯೋಗದಲ್ಲಿ ಆ ಹಳ್ಳಿಗಳ ಜನರಲ್ಲಿ ದೊಡ್ಡ ಬದಲಾವಣೆ ಕಂಡುಬಂದಿತ್ತು. ಅವರ ಜೀವನಮಟ್ಟ ಸುಧಾರಿಸಿದ್ದಲ್ಲದೆ, ಗ್ರಾಮಸ್ಥರ ಆಹಾರ, ಆರೋಗ್ಯ ಮತ್ತು ಮಕ್ಕಳ ಶಿಕ್ಷಣದ ಬಗೆಗಿನ ಕಾಳಜಿ ಅಧಿಕಗೊಂಡಿತ್ತು. ಶೇಕಡ 68ರಷ್ಟು ಕುಟುಂಬಗಳ ಮಕ್ಕಳ ಶಿಕ್ಷಣ ನಿರಂತರ ಮುಂದುವರಿಯಿತು. ನಾಗರಿಕರ ಉತ್ಸಾಹ ಅಧಿಕಗೊಂಡು ಹೊಸ ಉದ್ಯೋಗ, ವ್ಯಾಪಾರ ಆರಂಭಿಸಿ, ಆದಾಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳತೊಡಗಿದರು.

ದೇಶದ ಕೆಲವು ಭಾಗಗಳಲ್ಲಿ ನಡೆಸಿದ ಇಂತಹ ಪ್ರಯೋಗಗಳು ಉತ್ತಮ ಫಲಿತಾಂಶ ನೀಡಿವೆ. ಬ್ರಿಟನ್, ನೆದರ್ಲ್ಯಾಂಡ್ಸ್, ಬ್ರೆಜಿಲ್ನಲ್ಲಿ ಮೂಲ ಆದಾಯ ಯೋಜನೆ ಬಹುದೊಡ್ಡ ಬದಲಾವಣೆಗೆ ಮುನ್ನುಡಿ ಬರೆದಿದೆ.

ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿಸುವ, ಅವರು ಇನ್ನೊಬ್ಬರ ಬಳಿ ಸಹಾಯ ಯಾಚಿಸುವ ಸಂದರ್ಭಗಳನ್ನು ಕಡಿಮೆ ಮಾಡುವ ಗೃಹಲಕ್ಷ್ಮಿಯ ಶಕ್ತಿಯು ಉಳಿತಾಯದ ಹೆಸರಿನಲ್ಲಿ, ಚಿನ್ನದ ಒಡವೆ ಪಡೆಯುವ ಆಮಿಷದಲ್ಲಿ ಕಳೆದುಹೋಗದಂತೆ ಎಲ್ಲರೂ ಎಚ್ಚರ ವಹಿಸುವುದು ಅವಶ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.