ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಉಳಿತಾಯವೇ ಅಭದ್ರತೆ ಸೃಷ್ಟಿಸಿದರೆ?!

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬ್ಯಾಂಕ್‌ ಠೇವಣಿದಾರರ ಹಿತ ಕಾಯಬೇಕಿದೆ
Published 17 ನವೆಂಬರ್ 2023, 19:42 IST
Last Updated 17 ನವೆಂಬರ್ 2023, 19:42 IST
ಅಕ್ಷರ ಗಾತ್ರ

‘ಅಲ್ಲಿಟ್ಟಿದ್ವಿ ಮಣ್ಣು ಮುಕ್ಕಿದ್ವಿ... ಈಗ ಇಲ್ಲಿಟ್ಟಿದ್ದಾಯ್ತು ಮಣ್ಣು ಮುಕ್ಕೋಕೆ’ ಅಂತ ಎಂಬತ್ತರ ಇಳಿವಯಸ್ಸಿನ ದಂಪತಿ ಅಳಲು ತೋಡಿಕೊಂಡಿದ್ದರು. ಟಿ.ವಿ. ಪರದೆ ಮೇಲಿನ ಆ ದೃಶ್ಯ ಕರುಣಾಜನಕವಾಗಿತ್ತು. ಆ ಕಟ್ಟಡದ ಮುಂದೆ ಜಮಾಯಿಸಿದ್ದ ಜನ ಕಂಗಾಲಾಗಿದ್ದರು. ಅವರಲ್ಲಿ ಬಹುತೇಕರು ವೃದ್ಧರು. ಅಸಹಾಯಕತೆ ಅಲ್ಲಿ ಮಡುಗಟ್ಟಿತ್ತು. ಅವರು ಜೀರ್ಣಿಸಿಕೊಳ್ಳಲಾಗದಂತಹ ಷರತ್ತನ್ನು ಭಾರತೀಯ ರಿಸರ್ವ್ ಬ್ಯಾಂಕ್ ವಿಧಿಸಿತ್ತು. ಅಲ್ಲಿ ಸೇರಿದ್ದವರು ಬ್ಯಾಂಕ್ ಗ್ರಾಹಕರು.

ಹಲವು ಸಹಕಾರಿ ಬ್ಯಾಂಕುಗಳು, ಪತ್ತಿನ ಸಹಕಾರಿ ಸಂಘಗಳು ಗ್ರಾಹಕರಿಗೆ ಸಮರ್ಥವಾಗಿಯೇ ಸೇವೆ ಸಲ್ಲಿಸುತ್ತಿವೆ. ಠೇವಣಿಗಳ ಮೇಲೆ ಅಲ್ಪಸ್ವಲ್ಪ ಹೆಚ್ಚಿನ ಮೊತ್ತದ ಬಡ್ಡಿಯನ್ನೂ ನೀಡುತ್ತವೆ. ಸೇಫ್ ಡಿಪಾಸಿಟ್ ಸೌಲಭ್ಯಗಳೂ ಉಂಟು. ಆದರೆ ಅತಿ ಔದಾರ್ಯವೋ ಅವ್ಯವಹಾರವೋ ನಿರ್ಲಕ್ಷ್ಯವೋ ಸಾಲ ಮರುಪಾವತಿ ಆಗದೆ ಆರ್ಥಿಕವಾಗಿ ಹಿನ್ನಡೆ ಅನುಭವಿಸುತ್ತವೆ. ಎನ್.ಪಿ.ಎ. (ವಸೂಲಾಗದ ಸಾಲ) ಶಾಪದಿಂದ ಸೊರಗಿ ಇನ್ನು ಚೇತರಿಸಿಕೊಳ್ಳುವುದೇ ಕನಸೆಂದು ತಳಮಳಿಸುತ್ತವೆ.

ವಾಸ್ತವವಾಗಿ ಈ ಭಾರ ಬೀಳುವುದು ಗ್ರಾಹಕರ ಮೇಲೆಯೇ. ರಿಸರ್ವ್ ಬ್ಯಾಂಕ್ ನಿರ್ಬಂಧಗಳು ಬಹು ಕಠಿಣವಾಗಿರುತ್ತವೆ. ಗ್ರಾಹಕರು ಬ್ಯಾಂಕಿನೊಂದಿಗೆ ವ್ಯವಹಾರ ನಡೆಸುವಂತಿಲ್ಲ, ಸಾಮಾನ್ಯವಾಗಿ ಆರು ತಿಂಗಳವರೆಗೆ ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚು ಡ್ರಾ ಮಾಡುವಂತಿಲ್ಲ, ಚೆಕ್ ನಗದಾಗಿಸುವಂತಿಲ್ಲ... ಇಂತಹ ಸ್ಥಿತಿಯಲ್ಲಿ, ಠೇವಣಿ ಇರಿಸಿದ ಸಂಘ– ಸಂಸ್ಥೆಗಳ ಪಾಡು ಹೇಳತೀರದು.

ಬ್ಯಾಂಕಿಂಗ್ ವ್ಯವಸ್ಥೆಗೆ ಎರಡು ಸಾವಿರ ವರ್ಷಗಳ ಚರಿತ್ರೆ ಇದೆ. ಮನುಷ್ಯ ಮನುಷ್ಯರ ನಡುವಿನ ಭರವಸೆಯೇ ಅದರ ಬಂಡವಾಳ. ಮೆಸಪಟೋಮಿಯಾದಲ್ಲಿ 2000ನೇ ವರ್ಷದ ಸುಮಾರಿನಲ್ಲಿ ದೇಗುಲಗಳಲ್ಲಿ ಹಣ ಠೇವಣಿ, ಸಾಲ ನೀಡಿಕೆಯಿತ್ತು ಎನ್ನಲಾಗಿದೆ. ದವಸ ಧಾನ್ಯ, ಆಭರಣ, ಜಮೀನು ರೂಪದಲ್ಲಿ ಬ್ಯಾಂಕ್‍ಗಳು ವ್ಯವಹರಿಸುತ್ತಿದ್ದವು. ಪಡೆದ ಉದ್ರಿಯನ್ನು ಯುಕ್ತ ಕಾಲದಲ್ಲಿ ಮರಳಿಸದಿದ್ದರೆ ‘ದೈವ ಶಾಪ’ ಖಾತರಿ ಎನ್ನುವ ನಂಬಿಕೆಯೇ ಆತ್ಮಸಾಕ್ಷಿಯಾಗಿತ್ತು ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ.

ಬದುಕಿನ ಸಂಧ್ಯಾಕಾಲದಲ್ಲಿ ಮಕ್ಕಳಿಗೆ ಹೊರೆಯಾಗುವುದು ಬೇಡ, ಏನಿದ್ದರೂ ಅವರಿಗೆ ಸಹಾಯ ಮಾಡೋಣ ಎಂದೆಲ್ಲ ಕನಸು ಕಟ್ಟಿಕೊಂಡವರಿಗೆ ಜಿ.ಪಿ.ಎ. (ಜನರಲ್‌ ಪವರ್‌ ಆಫ್‌ ಅಟಾರ್ನಿ) ಎಂಬ ಕಾರ್ಮೋಡ ಧುತ್ತನೆ ಆವರಿಸಿರುತ್ತದೆ. ತಮ್ಮ ನಿವೃತ್ತಿ ಸೌಲಭ್ಯದಿಂದ, ಸಣ್ಣಪುಟ್ಟ ವಿಮಾ ಯೋಜನೆಗಳಿಂದ, ಚೂರುಪಾರು ಆಸ್ತಿ ಮಾರಿ ಬಂದ ಹಣವೆಲ್ಲ ಒಂದೆಡೆ ಇರಲಿ ಎಂದು ಇಟ್ಟ ಇಡುಗಂಟು ಇಕ್ಕಟ್ಟಿನ ಗಂಟಾದರೆ ಎಂತಹ ದುರ್ಗತಿ? ಸರಿ, ಇಟ್ಟ ಠೇವಣಿ ಎಷ್ಟೇ ಇರಲಿ ‘ಡಿಪಾಸಿಟ್ ಇನ್‍ಶೂರೆನ್ಸ್ ಸ್ಕೀಂ’ ವತಿಯಿಂದ ₹ 5 ಲಕ್ಷದತನಕ ಅದೂ ಎರಡು ತಿಂಗಳ ಬಳಿಕ ಬರುವ ಹಣವೊಂದೇ ಸದ್ಯದ ರಕ್ಷೆ. ತದನಂತರ ಉಳಿದ ಮೊತ್ತಕ್ಕಾಗಿ ಬ್ಯಾಂಕಿಗೆ ಅಲೆದಾಟ. ಹೇಗೂ ಗ್ರಾಹಕರು ವಿಮಾ ಹಣ ಪಡೆದಿದ್ದಾರಲ್ಲ ಎನ್ನುವ ತಾತ್ಸಾರ ಬ್ಯಾಂಕಿನ ಅಧಿಕಾರಿ ವರ್ಗಕ್ಕೆ.

ಅಂದಹಾಗೆ ಸಹಕಾರ ಸಂಘಗಳಲ್ಲಿ ಹಣವಿಟ್ಟ ಗ್ರಾಹಕರಿಗೆ ಈ ಸೌಲಭ್ಯ ಸಹ ಇಲ್ಲ. ‘ನಾವೇನು ಮಾಡುವುದು? ನಿಮ್ಮ ಹಣವನ್ನು ನಾವು ಕಬ್ಬಿಣದ ಪೆಟ್ಟಿಗೆಯಲ್ಲಿ ಇಡಲಾದೀತೆ ಹೇಳಿ. ಅದನ್ನು ಸಾಲ ನೀಡಲೇಬೇಕು. ಬರುವ ಬಡ್ಡಿಯಿಂದ ತಾನೆ ಎಲ್ಲ. ಅವರು ಕೈಚೆಲ್ಲಿದರೆ ನಾವು ನಿಮಗೂ ಕೈಚೆಲ್ಲದೆ ಏನಿದೆ ದಾರಿ?’ ಎನ್ನುವ ಉತ್ತರ! ಒಂದೆಡೆ, ಸಮರ್ಪಕವಾದ ಜಾಮೀನು, ಭದ್ರತೆಯಿಲ್ಲದೆ ಸಾಲ ಮಂಜೂರಾತಿಯಲ್ಲಿ ಅವರ ಬೇಜವಾಬ್ದಾರಿ ನಡೆ, ಇನ್ನೊಂದೆಡೆ, ಸಾಲಗಾರರಲ್ಲಿ ಸಕಾಲಕ್ಕೆ ಸಾಲ ತೀರಿಸಬೇಕೆಂಬ ಅಂತಃಸಾಕ್ಷಿಯ ಕೊರತೆ ಗ್ರಾಹಕರನ್ನು ಹೈರಾಣಾಗಿಸುತ್ತವೆ. ಆಗ ಗರಿಗರಿ ನೋಟು ತಂದವರು ಈಗ ಔಷಧಿಗೂ ಕಾಸಿಲ್ಲದೆ ತತ್ತರಿಸುತ್ತಾರೆ.

ಮಗಳ ಮದುವೆಗೆಂದು ಇಟ್ಟ ಹಣ, ವಿದ್ಯಾಭ್ಯಾಸಕ್ಕಾಗಿ ಕೂಡಿಸಿದ ಹಣ ನಿಶ್ಚಿತ ಠೇವಣಿಯಲ್ಲಿತ್ತು, ಇದೋ ಈಗ ಅನಿಶ್ಚಿತ. ಅಯ್ಯೋ, ಮೊನ್ನೆ ತಾನೆ ಅಸಲನ್ನು ಬಡ್ಡಿಸಮೇತ ನವೀಕರಿಸಿದ್ದೆ, ಎಂತಹ ದುರ್ವಿಧಿ ಎಂಬ ಚಡಪಡಿಕೆ, ಪ್ರಲಾಪ. ತೊಂಬತ್ತು ದಾಟಿದವರಿಗೂ ‘ನಿಮ್ಮ ನಿಶ್ಚಿತ ಠೇವಣಿಯ ಅವಧಿ ಮುಂದಿನ ವಾರ ಮುಗಿಯುತ್ತದೆ. ನವೀಕರಿಸಿ ಮತ್ತೂ ಉತ್ತಮ ಉಳಿತಾಯ ಯೋಜನೆ ಸೇರಿ’ ಎಂಬ ಸಂದೇಶ ಬಂದಿರುತ್ತದೆ!

ಗ್ರಾಹಕನಲ್ಲಿ ಮನುಷ್ಯನನ್ನು ಕಾಣದೆ ಮನುಷ್ಯನಲ್ಲಿ ಗ್ರಾಹಕನನ್ನು ಕಾಣುವುದು ಎಂತಹ ವಿಪರ್ಯಾಸ? ನಂಬಿಕೆ, ವಿಶ್ವಾಸದಿಂದ ಹಣವಿಟ್ಟ ಗ್ರಾಹಕರ ಅನ್ನ ತನ್ನ ತಟ್ಟೆಯಲ್ಲಿ ಇರಬಾರದೆಂಬ ಪ್ರಜ್ಞೆ ಸಾಲಗಾರರಲ್ಲಿ ಇದ್ದರೆ ಖಂಡಿತ ಎನ್.ಪಿ.ಎ. ಶಮನವಾಗುತ್ತದೆ. ಗ್ರಾಹಕರಿಗೆ ಹಣ ಮರಳಿಸಲಾಗದಿದ್ದರೆ ಕೆಲವು ಖಾಸಗಿ ಹಣಕಾಸು ಸಂಸ್ಥೆಗಳು ಮತ್ತೊಂದು ಉಪಾಯ ಕಂಡುಕೊಳ್ಳುತ್ತವೆ. ರಿಯಲ್ ಎಸ್ಟೇಟ್ ಮಾಲೀಕರೊಂದಿಗೆ ಒಡಂಬಡಿಕೆ ಮಾಡಿಕೊಂಡು ‘ಠೇವಣಿ ಬದಲಿಗೆ ಸೈಟ್ ಕೊಳ್ಳಿ’ ಎನ್ನುತ್ತವೆ. ಸದ್ಯ, ಏನೋ ಒಂದು ವಾಪಸಾಗುತ್ತಿದೆಯಲ್ಲ ಎಂದು ಗ್ರಾಹಕರು ಖುಷಿಪಡುತ್ತಾರೆ. ಆದರೆ ಅಂತಹ ಉತ್ಸಾಹವೇ ಮೇಲಾಗಿ ನಿವೇಶನಕ್ಕೆ ಸೂಕ್ತ ದಾಖಲೆಗಳುಂಟೇ ಎಂದು ಪರಿಶೀಲಿಸಲು ಬಿಡವು. ಹಾಗಾಗಿ, ಗ್ರಾಹಕ ಬಾಣಲೆಯಿಂದ ಬೆಂಕಿಗೆ ಎನ್ನುವಂಥ ಸ್ಥಿತಿಗೆ ಬರುತ್ತಾನೆ!

ಬ್ಯಾಂಕಿನಲ್ಲಿ ಗ್ರಾಹಕ ಇಟ್ಟ ಹಣವನ್ನು ವಾಯಿದೆಯ ದಿನ ಹಿಂಪಡೆಯಬಯಸುವುದು ಆತನ ಹಕ್ಕು. ಇನ್ನೊಂದು ಬ್ಯಾಂಕಿಗೆ ಈ ಬ್ಯಾಂಕನ್ನು ಸೇರಿಸುತ್ತಾರಂತೆ ಎನ್ನುವ ಪುಕಾರುಗಳು ಹರಿದಾಡುತ್ತವೆ. ಆ ವೇಳೆಗೆ ಅದೆಷ್ಟು ಮಂದಿ ಗ್ರಾಹಕರು ಲೋಕದಿಂದಲೇ ಮುಕ್ತರಾಗಿರುತ್ತಾರೊ? ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಠೇವಣಿದಾರರ ಹಿತ ಕಾಯಬೇಕಿದೆ. ಠೇವಣಿದಾರರು ತೆರಿಗೆಯನ್ನು ನಿಯತ್ತಾಗಿ ಪಾವತಿಸುತ್ತಾ ದೇಶದ ಆರ್ಥಿಕ ಸ್ಥಿರತೆಯಲ್ಲಿ ತೊಡಗಿಕೊಂಡವರು ಎಂಬುದನ್ನು ಮರೆಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT