ಬೆಂಗಳೂರು: ‘ನಾನು ಸಿವಿಲ್ ಎಂಜಿನಿಯರ್. ನಿವೃತ್ತಿಯಾಗಿ ವರ್ಷ ದೊಳಗೆ ಹೆಂಡತಿ ತೀರಿಕೊಂಡಳು. ಮಗ–ಸೊಸೆ ಇಬ್ಬರೂ ಉದ್ಯೋಗಸ್ಥರು. ಚೆನ್ನಾಗಿ ನೋಡಿಕೊಳ್ತಾರೆ ಅಂತ ಜತೆಯಲ್ಲೇ ಇದ್ದೆ. ನನ್ನ ಉಳಿತಾಯದ ದುಡ್ಡನ್ನು ಬ್ಯಾಂಕಿ ನಲ್ಲಿಡುತ್ತೇನೆಂದು ತೆಗೆದುಕೊಂಡ ಮಗ, ಈಗ ನೋಡಿದ್ರೆ ವೃದ್ಧಾಶ್ರಮಕ್ಕೆ ಬಿಟ್ಟಿದ್ದಾನೆ. ನಮ್ಮಂಥವರಿಗೆ ಇಲ್ಲಿ ಇರಲಾಗದು, ಹಾಗಂತ ಅಲ್ಲಿಗೆ (ದೇವರ ಬಳಿ) ಹೋಗಲೂ ಆಗದು. ಸಾವು ಬರುವ ತನಕ ಕಾಯಬೇಕಷ್ಟೇ...’ ಎಂದು ಭಾವುಕರಾದರು ಆ ಹಿರಿಯ ವ್ಯಕ್ತಿ.

‘ನಾನಿದ್ರೆ ಅವರ ಪ್ರೈವೆಸಿಗೆ ಅಡ್ಡಿ ಯಾಗುತ್ತೆ ಅಂತೆ. ಈ ವಯಸ್ಸಿನಲ್ಲಿ ನನಗೆ ಇಂಥ ಗತಿ ಬರುತ್ತೆ ಅಂತ ಅಂದುಕೊಂಡಿರಲಿಲ್ಲ. ಖಾಸಗಿ ನೌಕರಿ ಯಲ್ಲಿದ್ದ ನನಗೆ ಪಿಂಚಣಿಯೂ ಇಲ್ಲ. ವಯಸ್ಸಿದ್ದಾಗ ಮಗನ ಭವಿಷ್ಯಕ್ಕೇ ಹಣ ಖರ್ಚು ಮಾಡಿದೆ. ಕನಿಷ್ಠ ಆರೋಗ್ಯ ವಿಮೆಯನ್ನೂ ಮಾಡಿಸಿಕೊಳ್ಳಲಿಲ್ಲ. ನಮ್ಮಂಥವರು ವಯಸ್ಸಾಗುವ ಮೊದಲೇ ಕಣ್ಮುಚ್ಚಬೇಕು’ ಎಂದು ಕಣ್ಣೀರಾದರು.

–ಇದು ಹಿರಿಯ ನಾಗರಿಕರೊಬ್ಬರ ಕಥೆಯಾದರೆ, ವಿಧವೆ ಸುಮಿತ್ರಮ್ಮ ಅವರ ಕಥೆ ಮತ್ತೊಂದು ರೀತಿಯದ್ದು. ಸರ್ಕಾರಿ ನೌಕರಿಯಲ್ಲಿದ್ದ ಅವರಿಗೆ ಎರಡು ಗಂಡು, ಒಂದು ಹೆಣ್ಣು. ಗಂಡ ಅಕಾಲಿಕ ಸಾವಿಗೀಡಾದರೂ ಛಲ ದಿಂದಲೇ ಮೂವರು ಮಕ್ಕಳನ್ನು ವಿದ್ಯಾವಂತರನ್ನಾಗಿಸಿದ ಸುಮಿತ್ರಮ್ಮ

ನವರಿಗೆ ಸದಾ ಮಕ್ಕಳದ್ದೇ ಚಿಂತೆ. ಆದರೆ, ಸಾಯುವ ಕಾಲದಲ್ಲಿ ಕನಿಷ್ಠ ಆಸ್ಪತ್ರೆಗೂ ದಾಖಲಿಸದ ಸ್ಥಿತಿ ತಂದಿಟ್ಟಿದ್ದರು ಮಕ್ಕಳು. ಬರುವ ಪಿಂಚಣಿ ಹಣವನ್ನೆಲ್ಲ ಸ್ವಂತ ಖರ್ಚಿಗೆ ಬಳಸಿಕೊಳ್ಳುತ್ತಿದ್ದ ಮಕ್ಕಳು, ತಾಯಿಯನ್ನು ಮೂಲೆಯಲ್ಲಿಟ್ಟಿದ್ದರು.

ಇನ್ನು ಸೆಕ್ಯೂರಿಟಿ ಗಾರ್ಡ್ ಆಗಿದ್ದ ಕೆಂಚಪ್ಪನವರ ಕಥೆಯೂ ಇದಕ್ಕಿಂತ ಭಿನ್ನವೇನಿಲ್ಲ.

ಅತ್ತ ಮನೆಯವರನ್ನೂ ಬಿಟ್ಟುಕೊಡಲಾರದೇ ಇತ್ತ ತಮ್ಮ ದಯನೀಯ ಸ್ಥಿತಿಯನ್ನೂ ಸರಿಯಾಗಿ ಹೇಳಿ
ಕೊಳ್ಳಲಾಗದ ಅವರು, ಕಣ್ಣಂಚಿನಲ್ಲಿ ಬರುತ್ತಿದ್ದ ನೀರನ್ನು ತಡೆಯುತ್ತಲೇ ತಮ್ಮ ಸ್ಥಿತಿ ಬಿಚ್ಚಿಟ್ಟಿದ್ದು ಹೀಗೆ...

‘ದುಡಿಯುತ್ತಿದ್ದಾಗ ಮನೆಯಲ್ಲಿ ಹೆಂಡತಿ, ಮಕ್ಕಳು ಗೌರವ ಕೊಡುತ್ತಿದ್ದರು. ಸೆಕ್ಯೂರಿಟಿ ಗಾರ್ಡ್ ಸೇರಿದಂತೆ ಇತರ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದೆ. ವಯಸ್ಸಾಯಿತು ಅಂತ ಮನೇಲಿದ್ದೇನೆ. ಮಕ್ಕಳು ದುಡಿಯೋದು ಅವರ ಜೀವನಕ್ಕಾದರೆ ಸಾಕು ಅನ್ನುವಂತಿದೆ. ಸೊಸೆಯಂದಿರ ದೃಷ್ಟಿಯಲ್ಲಿ ನಾನು ಕೆಲಸಕ್ಕೆ ಬಾರದವನು. ಕೊರೊನಾಕ್ಕಿಂತ ಮುಂಚೆ ಬಿಬಿಎಂಪಿಯವರು ಬಿಸಿಯೂಟ ಕೊಡ್ತಾ ಇದ್ರು. ಅದನ್ನು ತಿನ್ಕೊಂಡು ಹೊಟ್ಟೆ ತುಂಬಿಸಿಕೊಳ್ತಾ ಇದ್ದೆ. ಈಗ ಅದೂ ಇಲ್ಲ. ಸರ್ಕಾರದ ಪೆನ್ಷನ್ ಔಷಧಿಗೂ ಸಾಲಲ್ಲ. ಮಕ್ಕಳೆದುರು ಕೈಚಾಚಲು ಸ್ವಾಭಿಮಾನ ಅಡ್ಡಿಯಾಗುತ್ತೆ’ ಎಂದು ಭಾವುಕರಾದರು ಕೆಂಚಪ್ಪ.

ಕೆಲವು ದಶಕಗಳ ಹಿಂದೆ ಭಾರತದಲ್ಲಿ ಹಿರಿಯರನ್ನು ನೋಡಿಕೊಳ್ಳುವುದು ಸಮಸ್ಯೆಯಾಗಿರಲಿಲ್ಲ. ಅವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚಾಗಿದ್ದ ಕಾರಣ ಹಿರಿಯರ ಆರೈಕೆ ಮನೆಯಲ್ಲೇ ಯಾರಾದರೂ ಮಾಡುತ್ತಿದ್ದರು. ವಯಸ್ಸಾದಂತೆ ದೇಹದಲ್ಲಿ ಕಾರ್ಯಕ್ಷಮತೆ ಕುಗ್ಗಿ, ರಕ್ತದೊತ್ತಡ, ಮಧುಮೇಹ, ಮಂಡಿನೋವಿನಂಥ ಸಾಮಾನ್ಯ ಸಮಸ್ಯೆಗಳಿಂದ ಹಿಡಿದು ಗಂಭೀರ ಕಾಯಿಲೆ ಪೀಡಿತರಾಗುತ್ತಿದ್ದ ಹಿರಿಯರ ಸೇವೆ ಮಾಡುವುದು ಪುಣ್ಯದ ಕೆಲಸವೆಂದೇ ಭಾವಿಸಲಾಗುತ್ತಿತ್ತು. ಆದರೆ, ಇತ್ತೀಚಿನ ಜಾಗತೀಕರಣ, ಉದ್ಯೋಗ, ವಲಸೆ, ಸರ್ಕಾರ ಗಳ ನೀತಿ ಮತ್ತು ನೀಡುವ ಸೌಲಭ್ಯಗಳು ಪರೋಕ್ಷವಾಗಿ ಹಿರಿಯರ ಆರೈಕೆಯ ಮೇಲೂ ಪರಿಣಾಮ ಬೀರುತ್ತಿವೆ.

ಇದಕ್ಕೆ ಇಂಬುಗೊಂಡುವಂತಿವೆ ಈಚೆಗಷ್ಟೇ ವೃದ್ಧಾಪ್ಯದ ಕುರಿತು ಬಿಡುಗಡೆಯಾಗಿರುವ ಕೇಂದ್ರ ನೀತಿ ಆಯೋಗ ಹಾಗೂ ಯುಎನ್‌ಎಫ್‌ಎ ವರದಿಗಳು. ಈ ಎರಡೂ ವರದಿಗಳ ಪ್ರಕಾರ, ದೇಶದಲ್ಲಿ ಪ್ರಸ್ತುತ ಹಿರಿಯ ನಾಗರಿಕರ ಪ್ರಮಾಣವು ಒಟ್ಟು ಜನಸಂಖ್ಯೆಯಲ್ಲಿ ಶೇ 8.6ರಷ್ಟು ಇದೆ. ಇದು, 2030ರೊಳಗೆ ಶೇ 13ಕ್ಕೆ, 2050ರೊಳಗೆ ಶೇ 20ಕ್ಕೆ ಏರಿಕೆ ಆಗಲಿದೆ ಎಂದೂ ಅಂದಾಜಿಸಲಾಗಿದೆ. ಭಾರತದಲ್ಲಿ ಈ ಏರಿಕೆಗೆ ಅನುಗುಣವಾಗಿ ಹಿರಿಯರ ಆರೈಕೆಗೆ ತ್ವರಿತವಾಗಿ ನೀತಿ–ನಿಯಮಗಳನ್ನು ರೂಪಿಸಿ, ತುರ್ತು ಜಾರಿಗೆ ತರುವ ಅಗತ್ಯವನ್ನೂ ವರದಿಗಳೂ ಪ್ರತಿಪಾದಿಸಿವೆ.

ದೇಶದಲ್ಲಿ ಶೇ 70ರಷ್ಟು ಹಿರಿಯರು ಗ್ರಾಮೀಣ ಭಾಗದಲ್ಲಿದ್ದರೆ, ಶೇ 30ರಷ್ಟು ಹಿರಿಯರು ನಗರ ಪ್ರದೇಶಗಳಲ್ಲಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ, ಶುದ್ಧ ಕುಡಿಯುವ ನೀರು, ಆರೋಗ್ಯ ಸೌಕರ್ಯದಂಥ ಮೂಲ ಸೌಕರ್ಯಗಳ ಸಮಸ್ಯೆ ಇರುವುದರಿಂದ ಇಲ್ಲಿ ವಾಸಿಸುವ ಹಿರಿಯರಿಗೆ ಉತ್ತಮ ಆಹಾರ, ಆರೋಗ್ಯ ದಂಥ ಅಗತ್ಯ ಮೂಲಸೇವೆಗಳು ದೊರೆಯುತ್ತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಶೇ 18ರಷ್ಟು ಮಂದಿಗೆ ಮಾತ್ರ ಆರೋಗ್ಯ ವಿಮೆಯ ಸೌಲಭ್ಯ ಇದೆ. ಹಿರಿಯರಲ್ಲಿ ಬಹುತೇಕರು ಆರ್ಥಿಕ ಅಭದ್ರತೆಯಲ್ಲಿದ್ದಾರೆ. ಸಾಮಾಜಿಕ ಭದ್ರತಾ ಸೌಲಭ್ಯಗಳು ಸಾಕಾಗುತ್ತಿಲ್ಲ. ಹಿರಿಯ ನಾಗರಿಕರ ಪೈಕಿ ಮಹಿಳೆ ಯರಲ್ಲಿ ಶೇ 54ರಷ್ಟು ಮಂದಿ ವಿಧವೆಯರು, ಇವರಲ್ಲಿ ಶೇ 9ರಷ್ಟು ಮಂದಿ ಒಂಟಿಯಾಗಿ ವಾಸಿಸುತ್ತಿದ್ದಾರೆ.

ಸ್ವೀಡನ್ ಮಾದರಿ

ಭಾರತಕ್ಕೆ ಹೋಲಿಸಿದರೆ ವೃದ್ಧರ ಆರೈಕೆಯಲ್ಲಿ ಸ್ವೀಡನ್ ದೇಶ ಮಾದರಿಯಾಗಿದೆ. ಅಲ್ಲಿನ ಜನರ ಜೀವಿತಾವಧಿ ಅತಿ ಹೆಚ್ಚು. ಅಲ್ಲಿ ಪುರುಷರ ಜೀವಿತಾವಧಿ 81 ವರ್ಷವಿದ್ದರೆ, ಮಹಿಳೆಯರದ್ದು 84 ವರ್ಷ. ಹಾಗಾಗಿ, ಅಲ್ಲಿ 60 ವರ್ಷದ ನಂತರವೂ ದುಡಿಯಲು ಅವಕಾಶವಿದೆ. ವೃದ್ಧರ ಆರೋಗ್ಯ– ಸಾಮಾಜಿಕ ರಕ್ಷಣೆ ಸ್ವೀಡನ್ ಜನಕಲ್ಯಾಣ ನೀತಿಯ ಪ್ರಮುಖ ಭಾಗವಾಗಿದೆ. ಹಿರಿಯ ಸಾಮಾಜಿಕ ಭದ್ರತಾ ಕಾಯ್ದೆಯು ಅಲ್ಲಿನ ಹಿರಿಯರಿಗೆ ಬೇಕಾದ ಮೂಲಭೂತ ಹಕ್ಕುಗಳನ್ನು ಖಾತ್ರಿ ಪಡಿಸುತ್ತದೆ. ಹಾಗಾಗಿ, ಸ್ವೀಡನ್ ದೇಶದ ವೃದ್ಧಾಪ್ಯ ಆರೈಕೆಯನ್ನು ಅಂತರರಾಷ್ಟ್ರೀಯ ಮಾದರಿಯನ್ನಾಗಿ ಪರಿಗಣಿಸಲಾಗಿದೆ. ಹಿರಿಯ ನಾಗರಿಕರ ಯೋಜನೆಗಳಿಗೆ ಸ್ಥಳೀಯ ಸಂಸ್ಥೆಗಳ ತೆರಿಗೆ ಹಾಗೂ ಸರ್ಕಾರದ ಧನ ಸಹಾಯವನ್ನು ಬಳಸಲಾಗುತ್ತದೆ. ಮನೆಯಲ್ಲಿ ವೈಯಕ್ತಿಕ ಆರೈಕೆ, ವಿಶೇಷ ವಸತಿ ಆರೈಕೆ ಹಾಗೂ ನರ್ಸಿಂಗ್ ಹೋಂ– ಆಸ್ಪತ್ರೆಗಳಲ್ಲಿ ಆರೈಕೆ ಹೀಗೆ ಮೂರು ಮಾದರಿಯ ಆರೈಕೆ ಸೌಲಭ್ಯ ಸ್ವೀಡನ್‌ನಲ್ಲಿದೆ. ಸ್ವಂತ ಕೆಲಸಗಳನ್ನು ನಿರ್ವಹಿಸಿಕೊಳ್ಳಲಾಗದ, ಸಾರಿಗೆ ಅಗತ್ಯವಿರುವ ಹಿರಿಯರು ಸ್ಥಳೀಯ ಸಂಸ್ಥೆಗಳಿಗೆ ಅರ್ಜಿ ಸಲ್ಲಿಸಿದರೆ, ಊಟ, ವಸತಿ, ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇದನ್ನು ತೆರಿಗೆ ಹಣದಿಂದಲೇ ನೀಡುವುದು ವಿಶೇಷ.

ಇನ್ನು ಒಮಾನ್‌ನಲ್ಲಿ ಹಿರಿಯ ನಾಗರಿಕರಿಗೆ ವೃದ್ಧಾಪ್ಯ ಎನ್ನುವುದು ಕೊರಗಲ್ಲ. ಸರ್ಕಾರಿ ಉದ್ಯೋಗಿಯಾಗಿದ್ದರೆ ಜೀವತಾವಧಿಯಲ್ಲಿ ಪಿಂಚಣಿ ಸಿಗುತ್ತದೆ. ದೇಶದ ಪ್ರಜೆಯಾಗಿದ್ದರೆ
(ಹಸಿರು ಕಾರ್ಡ್ ಹೊಂದಿದವರು) ಅವರಿಗೆ ಯಾವುದೇ ರೀತಿಯ ಕಾಯಿಲೆಗೂ ಚಿಕಿತ್ಸೆ ಉಚಿತವಾಗಿ ಸಿಗುತ್ತದೆ. ಹೀಗಾಗಿ, ಆರೋಗ್ಯ ವೆಚ್ಚದ ಹೊರೆ ಅವರನ್ನು ಕಾಡುವುದಿಲ್ಲ. ಅಲ್ಲದೆ, ಇಲ್ಲಿ ವಸತಿರಹಿತ ವೃದ್ಧರಿಗೆ ಸರ್ಕಾರವೇ ಜಾಗ, ಮನೆ ಒದಗಿಸುತ್ತದೆ ಎನ್ನುತ್ತಾರೆ ಒಮಾನ್‌ನಲ್ಲಿ ಮೂರು ದಶಕವಿದ್ದು, ಪ್ರಸ್ತುತ ಮಂಗಳೂರಿನಲ್ಲಿರುವ ಸೈಯ್ಯದ್ ಅಕ್ಬರ್. ಮುಸ್ಲಿಂ ಧರ್ಮದಲ್ಲಿ ಮಗನು ತಂದೆ–ತಾಯಿಯನ್ನು ನೋಡಿಕೊಳ್ಳುವುದು ಆತನ ಕರ್ತವ್ಯ. ಹೀಗಾಗಿ, ಪಾಲಕರನ್ನು ನಿರ್ಲಕ್ಷಿಸುವ, ಅವರು ವೃದ್ಧಾಶ್ರಮಕ್ಕೆ ಸೇರುವ ಪರಿಕಲ್ಪನೆಯೇ ಇಲ್ಲ ಎನ್ನುತ್ತಾರೆ ಅವರು.

‘ಯುನೈಟೆಡ್ ಅರಬ್ ಎಮಿರೈಟ್ಸ್‌ನಲ್ಲಿ ಹಿರಿಯ ನಾಗರಿಕರಿಗೆ ಅವರ ಅಗತ್ಯಕ್ಕೆ ತಕ್ಕಂತೆ ಸಾಮಾಜಿಕ ಬೆಂಬಲ, ಆರೋಗ್ಯ ಮತ್ತು ವಸತಿ ಸೌಲಭ್ಯಗಳಿವೆ. ಸರ್ಕಾರದ ಪಿಂಚಣಿ, ಆರೋಗ್ಯ ಸೇವೆಗಳು ದೊರೆ ಯುತ್ತವೆ. ಹಿರಿಯ ನಾಗರಿಕರು ಉತ್ತಮ ಆರೋಗ್ಯಕ್ಕಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಕೊಳ್ಳು ತ್ತಾರೆ’ ಎನ್ನುತ್ತಾರೆ ಯುಎಇಯಲ್ಲಿ ಎಂಜಿನಿಯರ್ ಆಗಿರುವ ಮಲ್ಪೆಯ ಸುಜಯ್ ದೀಶನ್ ಜತ್ತನ್.

ಅಮೆರಿಕ, ಜಪಾನ್ ಸ್ವಾವಲಂಬನೆಗೆ ಆದ್ಯತೆ

ಅಮೆರಿಕ, ಜಪಾನ್‌ನಲ್ಲಿ ಹಿರಿಯ ನಾಗರಿಕರು ಇರುವ ಸ್ಥಳಗಳಿಗೇ ಹೋಗಿ ಸ್ವಯಂಸೇವಕರು ಅವರ ಯೋಗಕ್ಷೇಮದ ಬಗ್ಗೆ ವಿಚಾರಿಸುತ್ತಾರೆ. ಅಷ್ಟೇ ಅಲ್ಲ, ಹಿರಿಯರನ್ನು ಸಮುದಾಯ ಕೇಂದ್ರಗಳಲ್ಲಿ ಕರೆದೊಯ್ದು, ಸಂಜೆ ವಾಪಸ್ ಮನೆಗೆ ಬಿಡುವ ವ್ಯವಸ್ಥೆ ಇದೆ. ಈ ಕೇಂದ್ರಗಳಲ್ಲಿ ಹಿರಿಯರಿಗೆ ಆಹಾರ, ಮನ ರಂಜನೆ, ಓದು, ಯೋಗ, ಆಟೋಟ ಇತ್ಯಾದಿ ಸೌಕರ್ಯಗಳಿರುತ್ತವೆ.

ಅಮೆರಿಕ, ಜಪಾನ್‌ನಲ್ಲಿ ಮಕ್ಕಳು ಹದಿಹರೆಯಕ್ಕೆ ಬರುತ್ತಿದ್ದಂತೆಯೇ ತಂದೆ–ತಾಯಂದಿರಿಂದ ದೂರವಾಗಿ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳುತ್ತಾರೆ. ಪೋಷ ಕರೂ ಮುಪ್ಪಿನಲ್ಲಿ ಮಕ್ಕಳ ಮೇಲೆ ಅವಲಂಬಿತರಾಗದೇ, ಜತೆಗಾರರು ಇಲ್ಲವೇ ಒಂಟಿಯಾಗಿ ಜೀವನ ಎದುರಿಸಲು ಮಾನಸಿಕವಾಗಿ ಸಿದ್ಧವಾಗುತ್ತಾರೆ. ಆದರೆ, ಭಾರತದಲ್ಲಿ ಮಕ್ಕಳು ವಯಸ್ಕರಾಗುವವರೆಗೆ ಪೋಷಕರೊಂದಿಗೆ ಇರುವುದು ಹಾಗೂ ಮುಪ್ಪಿನಲ್ಲಿ ತಂದೆತಾಯಂದಿರ ಜವಾಬ್ದಾರಿ ಮಕ್ಕಳ ಮೇಲೆ ಇರುತ್ತದೆ’ ಎನ್ನುತ್ತಾರೆ ಟೋಕಿಯೊದಲ್ಲಿರುವ ಕನ್ನಡತಿ ಶಿಲ್ಪಾ.

ಜಪಾನ್‌ನಲ್ಲಿ ಹಿರಿಯರನ್ನು ರಾಷ್ಟ್ರದ ಸಂಪತ್ತು ಎಂದೇ ಪರಿಗಣಿಸುತ್ತಾರೆ. ಅಲ್ಲಿನ ರೈಲ್ವೆ ನಿಲ್ದಾಣ, ಮಾಲ್ ಇತ್ಯಾದಿ ಸ್ಥಳಗಳಲ್ಲಿ 60 ವರ್ಷಕ್ಕೆ ಮೀರಿದ ಹಿರಿಯರೂ ಕೆಲಸ ಮಾಡುತ್ತಾರೆ. ಅಲ್ಲಿನ ಜನರು ಶ್ರಮಜೀವಿಗಳು. ವಯಸ್ಸು ಅವರಿಗೆ ಮುಖ್ಯವೇ ಅಲ್ಲ ಎನ್ನುತ್ತಾರೆ ಅವರು.

‘ಅಮೆರಿಕದ ಸಾಮಾಜಿಕ ವ್ಯವಸ್ಥೆಯಲ್ಲಿ ಹಿರಿಯರನ್ನು ತುಂಬಾ ಗೌರವದಿಂದ ಕಾಣಲಾಗುತ್ತದೆ. ಸರ್ಕಾರಿ ಕಚೇರಿಗಳಿಂದ ಹಿಡಿದು ಖಾಸಗಿ ಆಸ್ಪತ್ರೆಗಳವರೆಗೆ ಹಿರಿಯರನ್ನು ಗಮನದಲ್ಲಿಟ್ಟುಕೊಂಡೇ ವ್ಯವಸ್ಥೆಯನ್ನು ರೂಪಿಸಲಾಗುತ್ತದೆ. ಉದಾಹರಣೆಗೆ ಹಿರಿಯರೊಬ್ಬರು ಗಾಲಿಕುರ್ಚಿ ಬಳಸುವವರಾಗಿದ್ದರೆ ಅಂಥವರಿಗೆ ಮೆಟ್ಟಿಲುಗಳ ಬದಲು ಇಳಿಜಾರಿನ ವ್ಯವಸ್ಥೆ ಇರುತ್ತದೆ. ಇಂಥ ವ್ಯವಸ್ಥೆ ಎಲ್ಲೆಡೆಯೂ ಇರುತ್ತದೆ. ಹೋಟೆಲ್, ಆಸ್ಪತ್ರೆ, ಮನರಂಜನಾ ಕೇಂದ್ರ ಹೀಗೆ ಹಿರಿಯರಿಗೆ ಅನುಕೂಲಕರವಾದ ವ್ಯವಸ್ಥೆ ಇರುತ್ತದೆ. ಭಾರತದಲ್ಲೂ ಇಂಥ ವ್ಯವಸ್ಥೆ ಬೇಕು’ ಎನ್ನುತ್ತಾರೆ ಅಮೆರಿಕದಲ್ಲಿರುವ ಕನ್ನಡಿಗ ಡಾ. ಗಿರೀಶ್ ಮೂಡ್.

‘ಭಾರತದಲ್ಲಿ ಜನಪ್ರತಿನಿಧಿಗಳದ್ದು ತಾವು ಕೊಟ್ಟಿದ್ದೇ ತಗೋಬೇಕು ಅನ್ನೋ ಭಾವನೆ ಇದೆ. ಬಡತನ ರೇಖೆಗಿಂತ ಕೆಳಗಿರುವ ಹಿರಿಯ ನಾಗರಿಕರ ಸ್ಥಿತಿ ದಯನೀಯವಾಗಿದೆ. ಬಡತನದ ಕಾರಣಕ್ಕಾಗಿಯೇ ಇವರು 10–12ನೇ ವರ್ಷದಿಂದಲೇ ಅಪಾಯಕಾರಿ ಕೆಲಸಗಳಲ್ಲಿ ಬಾಲಕಾರ್ಮಿಕರಾಗಿರುತ್ತಾರೆ. ತಮ್ಮ ಜೀವನದ 40ರಿಂದ 50ವರ್ಷಗಳ ಕಾಲ ನಗರ/ಪಟ್ಟ ಣಗಳು, ದೇಶದ ಅಭಿವೃದ್ಧಿಗೆ ಪರೋಕ್ಷವಾಗಿ ದುಡಿದ ಇವರಿಗೆ ಕನಿಷ್ಠ ವೇತನದ ಅರ್ಧ ಸಂಬಳವಾದರೂ ಪಿಂಚಣಿಯಾಗಿ ನೀಡುವುದು ನ್ಯಾಯವಲ್ಲವೇ? ಕೆಳ ಮಧ್ಯಮವರ್ಗದ ಬಹುತೇಕ ಹಿರಿಯರು ಸಾಯುವ ತನಕವೂ ಸಣ್ಣ ಕೆಲಸವನ್ನಾದರೂ ಮಾಡುತ್ತಿರು
ತ್ತಾರೆ. ಬೀದಿಬದಿ ವ್ಯಾಪಾರವೋ, ದೇವಸ್ಥಾನಗಳಲ್ಲಿ ಚಪ್ಪಲಿ ಕಾಯುವವರೂ ಇದ್ದಾರೆ. ಹಿರಿಯರ ಹಿನ್ನೆಲೆ ನೋಡದೇ ಎಲ್ಲರಿಗೂ ಆಹಾರ, ಆರೋಗ್ಯದ ಸೌಲಭ್ಯ ಖಾತ್ರಿಯಾಗಬೇಕು’ ಎಂದು ಪ್ರತಿಪಾದಿಸುತ್ತಾರೆ ಫೆಡಿನಾ ಸಂಸ್ಥೆಯ ಟ್ರಸ್ಟಿ ಸೆಬಾಸ್ಟಿಯನ್ ದೇವರಾಜ್.

ಯಾರಿಗೆ ಸಾಲುತ್ತೆ ಪಿಂಚಣಿ?

ಭಾರತದ ಸಂವಿಧಾನದ 41ನೇ ವಿಧಿಯ ಅಡಿಯಲ್ಲಿ ನಾಗರಿಕರ ಯೋಗಕ್ಷೇಮವನ್ನು ಕಡ್ಡಾಯಗೊಳಿಸಲಾಗಿದೆ.ಅಂತೆಯೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿರಿಯರಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿವೆ. ಆದರೆ, ಬಹುತೇಕರಿಗೆ ಈ ಯೋಜನೆಗಳ ಅರಿವಿಲ್ಲ. ಈ ಯೋಜನೆಗಳಿಗೆ ಅನುದಾನದ ಮೊತ್ತವೂ ಕಡಿಮೆ ಹಾಗೂ ಅನುಷ್ಠಾನವೂ ಸಮರ್ಪಕವಾಗಿಲ್ಲ.

ಬಡತನ ರೇಖೆಗಿಂತ ಕೆಳಗಿರುವವರಿಗೆ ಕೇಂದ್ರ ಸರ್ಕಾರ ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ ಹಾಗೂ ರಾಜ್ಯ ಸರ್ಕಾರ ಸಂಧ್ಯಾ ಸುರಕ್ಷಾ ಯೋಜನೆಯನ್ನು ಜಾರಿಗೊಳಿಸಿವೆ. ಇವುಗಳಲ್ಲಿ ಸಿಗುವ ಪಿಂಚಣಿ ಮೊತ್ತ ₹ 1,200. ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುವ ಅಲ್ಪಮೊತ್ತ ಈಗಿನ ‘ದುಬಾರಿ’ಯ ದಿನದಲ್ಲಿ ಯಾವುದಕ್ಕೂ ಸಾಲದು. ‘ಉತ್ತಮ ಉದ್ಯೋಗದಲ್ಲಿದ್ದು, ಹಣ ಉಳಿಸಿ ಕೊಂಡು ಜತೆಗೆ ನಿವೃತ್ತಿ ವೇತನವೂ ಬರುತ್ತಿದ್ದರೆ ಪರವಾಗಿಲ್ಲ. ಆದರೆ, ಕೇವಲ ಸರ್ಕಾರ ನೀಡುವ ಪಿಂಚಣಿಯಲ್ಲೇ ಜೀವನ ಸಾಗಿಸೋದು ಕಷ್ಟ’ ಎನ್ನುತ್ತಾರೆ ಹಿರಿಯ ನಾಗರಿಕರು.

ಪಿಂಚಣಿಯಲ್ಲಿ ಹಿರಿಯರು ಬಹುಪಾಲನ್ನು ಆಹಾರಕ್ಕಾಗಿ, ಕೆಲ ಭಾಗವನ್ನು ಔಷಧಿಗಾಗಿ ಖರ್ಚು ಮಾಡುತ್ತಾರೆ. ಪಿಂಚಣಿ ಮೊತ್ತವು ಅಲ್ಪವಾಗಿದ್ದರೂ, ಶೇ 30ರಷ್ಟು ಫಲಾನುಭವಿಗಳು ಅದನ್ನು ತಮ್ಮ ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳುತ್ತಾರೆ. ಮಾಸಿಕ ಪಿಂಚಣಿ ಮೊತ್ತವನ್ನು ಎರಡು ವರ್ಷಕ್ಕೊಮ್ಮೆ ಹಣದುಬ್ಬರಕ್ಕೆ ಹೋಲಿಸಬೇಕು ಮತ್ತು ಪ್ರತಿ ಎರಡು ಮೂರು ವರ್ಷಗಳಿಗೊಮ್ಮೆ ಪರಿಷ್ಕರಿಸಬೇಕು ಎನ್ನುತ್ತದೆ ಕರ್ನಾಟಕದ ಹಿರಿಯ ನಾಗರಿಕರ ವಸ್ತುಸ್ಥಿತಿ ಅಧ್ಯಯನದ ಮೌಲ್ಯಮಾಪನದ ವರದಿ.

ಹಿರಿಯರ ಪಿಂಚಣಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ನಿಗದಿಪಡಿಸಿರುವ ವಾರ್ಷಿಕ ಆದಾಯ
₹ 32 ಸಾವಿರ ಇದೆ. ಬಿಪಿಎಲ್ ಕಾರ್ಡ್‌ನ ವಾರ್ಷಿಕ ಮಿತಿ ₹ 1.20 ಲಕ್ಷ ಇದೆ. ಅಲ್ಲದೇ, ರಾಜ್ಯದಲ್ಲಿ ಈಗಿನ ಸರ್ಕಾರ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯಡಿ ಹಿರಿಯರಿಗೆ ಸಿಗುವ ಆದಾಯದ ಮೊತ್ತವೇ ವಾರ್ಷಿಕ ₹ 33 ಸಾವಿರ ಆಗುತ್ತದೆ. ಇದರಿಂದ ಅರ್ಹರಿಗೆ ಪಿಂಚಣಿ ದೊರೆ ಯದಂತೆ ಆಗುತ್ತದೆ. ಹಾಗಾಗಿ, ಸರ್ಕಾರ ಪಿಂಚಣಿಗೆ ನಿಗದಿ ಪಡಿಸಿರುವ ವಾರ್ಷಿಕ ಆದಾಯ ಮಿತಿ ಪರಿಷ್ಕರಿಸಬೇಕು’ ಎಂದು ಒತ್ತಾಯಿಸುತ್ತಾರೆ ಹಿರಿಯ ನಾಗರಿಕರು.

‘ಕರ್ನಾಟಕದಲ್ಲಿ ಸುಮಾರು 80 ಲಕ್ಷ ಹಿರಿಯ ನಾಗರಿಕರಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಹಿರಿಯ ನಾಗರಿಕರಿಗೆ ಮಾಸಿಕ ₹ 10 ಸಾವಿರ ಪಿಂಚಣಿ ನೀಡಬೇಕು. ಇದಕ್ಕಾಗಿ ಮಹಾರಾಷ್ಟ್ರದ ಲಾತೂರಿನ ಅರ್ಥಕ್ರಾಂತಿ ಟ್ರಸ್ಟ್ ಯೋಜನೆಯನ್ನೂ ರೂಪಿಸಿದೆ. ಈ ಪ್ರಕಾರ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗದಂತೆ ಪಿಂಚಣಿ ನೀಡಲು ಸಾಧ್ಯವಿದೆ’ ಎನ್ನುತ್ತಾರೆ ಹುಬ್ಬಳ್ಳಿಯ ಹಿರಿಯ ನಾಗರಿಕರ ಅಸೋಸಿಯೇಷನ್ ರಾಜ್ಯ ಘಟಕದ ಅಧ್ಯಕ್ಷ ಎ.ಆರ್. ಪಾಟೀಲ್.

ವೃದ್ಧಾಪ್ಯಕ್ಕೆ ಸಿದ್ಧತೆಯ ಕೊರತೆ

‘ವಯಸ್ಸಾದ ಮೇಲೆ ಆದಾಯಕ್ಕೇನು ಮಾಡಬೇಕು? ಸಾಮಾಜಿಕವಾಗಿ ಬದುಕು ಹೇಗಿರಬೇಕು? ವೃದ್ಧಾಪ್ಯಕ್ಕೆ ತಾವು ಹೇಗೆ ಸಿದ್ಧರಾಗಿರಬೇಕು ಎಂಬ ಅರಿವೇ ಬಹುತೇಕರಿಗೆ ಇರುವುದಿಲ್ಲ. ವರ್ಷಗಟ್ಟಲೇ ಕಷ್ಟಪಟ್ಟು ದುಡೀತಾರೆ. ಆದರೆ, ನಿವೃತ್ತಿಯ ಜೀವನ ಹೇಗಿರಬೇಕೆಂಬ ಯೋಚನೆಯನ್ನೂ ಮಾಡಿರುವುದಿಲ್ಲ’ ಎನ್ನುತ್ತಾರೆ ಆಪ್ತ ಸಲಹೆಗಾರ್ತಿ ಶಾಂತಾ ನಾಗರಾಜ್.

ವೃದ್ದಾಪ್ಯಕ್ಕೆ ವ್ಯಕ್ತಿಯೊಬ್ಬ ತನ್ನ 50ನೇ ವರ್ಷದಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ಮಾನಸಿಕ– ದೈಹಿಕ ಮತ್ತು ಆರ್ಥಿಕ ಸಿದ್ಧತೆ ಅದಾಗಿರಬೇಕು. ವೃದ್ಧಾಪ್ಯದಲ್ಲಿ ಆರೋಗ್ಯ ತುಂಬಾ ಮುಖ್ಯ. ಅದನ್ನು ಕಾಪಾಡಿಕೊಳ್ಳಲು ಆರೋಗ್ಯ ವಿಮೆ ಕಡ್ಡಾಯವಾಗಿ ಮಾಡಿಸಿ ಕೊಳ್ಳಬೇಕು. 50ರಿಂದಲೇ ಪ್ಲಾನ್ ಮಾಡಿದರೆ 60ರ ನಂತರ ವೃದ್ಧಾಪ್ಯವನ್ನು ನೆಮ್ಮದಿಯಿಂದ ಬರಮಾಡಿಕೊಳ್ಳಬಹುದು ಎನ್ನುತ್ತಾರೆ ಅವರು.

ಕರ್ನಾಟಕ ಸರ್ಕಾರವು ಹಿರಿಯರ ಜೀವನ, ಆರೋಗ್ಯ ರಕ್ಷಣೆಗಾಗಿ ವೃದ್ಧಾಶ್ರಮ ಗಳನ್ನು ಸ್ಥಾಪಿಸಲು ಎನ್‌ಜಿಒಗಳಿಗೆ ಹಣಕಾಸಿನ ನೆರವು ನೀಡುತ್ತಿದೆ. ಹಿರಿಯರಿಗೆ ಸಹಾಯವಾಣಿ, ಡೇ ಕೇರ್ ಸೆಂಟರ್ ಕೂಡಾ ರೂಪಿಸಿದೆ. ಆದರೆ, ಇವು ಎಲ್ಲಿವೆ ಎನ್ನುವ ಮಾಹಿತಿಯೂ ಸರಿಯಾಗಿಲ್ಲ. ಮತ್ತೊಂದೆಡೆ ರಾಜ್ಯದ ಎಲ್ಲ ಕಡೆಗಳಲ್ಲೂ ಡೇ ಕೇರ್ ಕೇಂದ್ರಗಳು ನಡೆಯುತ್ತಿಲ್ಲ. ಮತ್ತೆ ಕೆಲವೆಡೆ ವೃದ್ಧಾಶ್ರಮಗಳಲ್ಲಿ ಮೂಲಸೌಕರ್ಯದ ಕೊರತೆ ಇದೆ. ಕೆಲ ಖಾಸಗಿ ವೃದ್ಧಾಶ್ರಮಗಳು ಚೆನ್ನಾಗಿವೆ. ಅದಕ್ಕೆ ತಕ್ಕಂತೆ ಹೆಚ್ಚು ಮೊತ್ತದ ಹಣವನ್ನೂ ಪಾವತಿಸಬೇಕು. ಹಾಗಾಗಿ, ಬಡ, ಮಧ್ಯಮವರ್ಗದವರ ಕೈಗೆಟುಕುವುದಿಲ್ಲ ಎನ್ನುತ್ತಾರೆ ಹಿರಿಯರೊಬ್ಬರು.

ಹಿರಿಯರಿಗೆ ಗುಣಮಟ್ಟದ ಆರೋಗ್ಯ ಸೌಲಭ್ಯ ಉಚಿತವಾಗಿ ಸಿಗುವಂತಾಗಬೇಕು. ಅದಕ್ಕೆ ತಕ್ಕಂತೆ ತಜ್ಞ ವೈದ್ಯರ ಕೊರತೆ ನೀಗಿಸಬೇಕಿದೆ. ಹಿರಿಯರ ಕಾಳಜಿ ವಹಿಸುವ ಪಶ್ಚಿಮ ದೇಶಗಳಲ್ಲಿ ಒಳ್ಳೆಯ ಯೋಜನೆಗಳನ್ನು ನಮ್ಮ ಸರ್ಕಾರಗಳು ಅಳವಡಿಸಿಕೊಳ್ಳಬೇಕು. ಹಿರಿಯರಿಗೆ ಗುಣಮಟ್ಟದ ಆಹಾರ ಸೌಲಭ್ಯ, ಸಾಮಾಜಿಕ ಭದ್ರತೆ ಒದಗಿಸಬೇಕಿದೆ. ಸಕಾಲಕ್ಕೆ ಪಿಂಚಣಿ ಹಣವನ್ನು ಬಿಡುಗಡೆ ಮಾಡಬೇಕು ಎಂಬುದು ಹಿರಿಯ ನಾಗರಿಕರ ಬೇಡಿಕೆ.

ರಾಜ್ಯದಲ್ಲಿ ಏನಿದೆ ಸೌಲಭ್ಯ?

ಹಿರಿಯರ ಹಗಲು ಯೋಗಕ್ಷೇಮ ಕೇಂದ್ರ (ಡೇ ಕೇರ್ ಸೆಂಟರ್)

ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಗಳು

ಜಿಲ್ಲೆಗಳಲ್ಲಿ ವೃದ್ಧಾಶ್ರಮ ನಡೆಸಲು ಎನ್‌ಜಿಒಗಳಿಗೆ ಅನುದಾನ

65, ಅದಕ್ಕಿಂತ ಮೇಲ್ಪಟ್ಟವರಲ್ಲಿ ಬಸ್‌ಗಳಲ್ಲಿ ರಿಯಾಯಿತಿ

60 ವರ್ಷ ಮೇಲ್ಪಟ್ಟವರಿಗೆ ಪಿಂಚಣಿ

ಬಿಪಿಎಲ್ ಕಾರ್ಡ್‌ದಾರರಿಗೆ ಅನ್ನಭಾಗ್ಯ

ಜಿರಿಯಾಟ್ರಿಕ್ ತಜ್ಞರ ಕೊರತೆ

ರಾಜ್ಯದಲ್ಲಿ ಹಿರಿಯರ ಆರೋಗ್ಯದ ಕಾಳಜಿ ಮಾಡುವಂಥ ಜಿರಿಯಾಟ್ರಿಕ್ ತಜ್ಞರ ಕೊರತೆ ಇದೆ ಎನ್ನುತ್ತಾರೆ ವಿಜಯಪುರದ ಬಿ.ಎಂ. ಪಾಟೀಲ್ ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯ ಜಿರಿಯಾಟ್ರಿಕ್ ವಿಭಾಗದ ಮುಖ್ಯಸ್ಥ ಡಾ. ಆನಂದ ಅಂಬಲಿ.

ಕೆಲ ಪಿಎಚ್‌ಸಿ, ಸಮುದಾಯ ಆರೋಗ್ಯ ಕೇಂದ್ರಗಳ ಸಿಬ್ಬಂದಿಗೆ ಜಿರಿಯಾಟ್ರಿಕ್ ತರಬೇತಿ ಆಗಿಲ್ಲ. ಬೆಂಗಳೂರಿನ ಬಿಎಂಸಿಯಲ್ಲಿ ವೃದ್ಧರಿಗಾಗಿ ಪ್ರತ್ಯೇಕ ವಿಭಾಗವಿದೆ ಎಂದು ಮಾಹಿತಿ ನೀಡುತ್ತಾರೆ ಅವರು.

ಹಿರಿಯರನ್ನೂ ಬಿಟ್ಟಿಲ್ಲ ವಂಚನೆ

ಕೊನೆಗಾಲದಲ್ಲಿ ಆಸರೆಗಾಗಿ ವೃದ್ಧರು ಕೂಡಿಟ್ಟಿರುವ ಚಿನ್ನಾಭರಣ, ಹಣದ ಮೇಲೆಯೂ ವಂಚಕರ ಕಣ್ಣುಗಳು ಬೀಳುತ್ತಿವೆ. ರಾಜ್ಯದಲ್ಲಿ ಇಂತಹ ಪ್ರಕರಣಗಳಲ್ಲಿ ಲಕ್ಷಾಂತರ ರೂಪಾಯಿ ವಂಚನೆ ನಡೆಯುತ್ತಿದೆ. ಎಟಿಎಂ ಕೇಂದ್ರಗಳಲ್ಲಿ ಹಣ ಡ್ರಾ ಮಾಡಿಕೊಡುವ ನೆಪದಲ್ಲೂ ವೃದ್ಧರಿಂದ ಸುಲಿಗೆ ನಡೆಸಲಾಗುತ್ತಿದೆ.

‘ಧರ್ಮಕ್ಕೆ ನೋಡಿಕೊಳ್ಳಬೇಕಾಗಿಲ್ಲ’

‘ಬಾಳಿನ ಮುಸ್ಸಂಜೆಯಲ್ಲಿ ಪಯಣಿಸುವ ಅಪ್ಪ ಮತ್ತು ಅಮ್ಮನನ್ನು ಮಕ್ಕಳು ಧರ್ಮಕ್ಕೆ ನೋಡಿಕೊಳ್ಳಬೇಕಾಗಿಲ್ಲ. ಅದು ಅವರ ಕಾನೂನು ಬಾಧ್ಯತೆ, ಮಾತ್ರವಲ್ಲ ನೈತಿಕತೆಯ ಆದ್ಯ ಕರ್ತವ್ಯವೂ ಹೌದು‘ ಎಂದು ಹೈಕೋರ್ಟ್ 2023ರ ನವೆಂಬರ್ ಎರಡನೇ ವಾರದಲ್ಲಿ ಪ್ರಕರಣವೊಂದರಲ್ಲಿ ಕಟುವಾಗಿ ನುಡಿದಿತ್ತು.

ಪ್ರಕರಣವೊಂದರಲ್ಲಿ ಮಗಳು ಮತ್ತು ಅಳಿಯ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿದ್ದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ, ‘ಹಿರಿಯ ತಂದೆ–ತಾಯಿ ಪೋಷಣೆಗೆ ಸಂಬಂಧಿಸಿದಂತೆ ಮಕ್ಕಳು ಅಸಡ್ಡೆ ತೋರಿದ ಪ್ರಕರಣಗಳಲ್ಲಿ ನ್ಯಾಯಾಲಯಗಳು, ಪ್ರಾಧಿಕಾರಗಳು ಹೆಚ್ಚು ಸಂವೇದನಾಶೀಲತೆ ಹೊಂದಿರಬೇಕು’ ಎಂಬ ಕಾಳಜಿ ವ್ಯಕ್ತಪಡಿಸಿತ್ತು.

‘ತಂದೆ–ತಾಯಿ ಮತ್ತು ಹಿರಿಯ ನಾಗರಿಕರ ಪಾಲನೆ ಪೋಷಣೆ ಮತ್ತು ಕಲ್ಯಾಣ ಅಧಿನಿಯಮ-2007’ ಪರಿಣಾಮಕಾರಿ ಕಾಯ್ದೆಯಾಗಿ ರೂಪುಗೊಂಡಿದೆ. ಆದರೆ, ದೂರು ಸಲ್ಲಿಸುವಾಗ ಕೆಲವು ಹೊರತಾದ ಅಂಶಗಳನ್ನೂ ಗಮನಿಸಬೇಕಾದ್ದು ಅವಶ್ಯ. ಜೀವನ ನಿರ್ವಹಣೆಯ ಮೊತ್ತ ಅಥವಾ ಮಂಜೂರಾದ ಚರಾಸ್ತಿಗಳನ್ನು ದಾನಪತ್ರ ಮಾಡಿಕೊಟ್ಟಿದ್ದರೆ ಅಂತಹ ಪ್ರಕರಣಗಳಲ್ಲಿ ದೂರು ನೀಡಲು ಸಾಧ್ಯವಿಲ್ಲ. ಸಾಧ್ಯವಿರುವ ಪ್ರಕರಣಗಳಲ್ಲಿ ದೂರು ನೀಡಲು ಇರುವ ಕಾನೂನುಬದ್ಧ ವಾಯಿದೆ ಮೂರು ವರ್ಷಗಳವರೆಗೆ ಮಾತ್ರ’.

‘ಈ ಸಂಬಂಧ ಸ್ಥಳೀಯವಾಗಿ ಉಪವಿಭಾಗಾಧಿಕಾರಿಗೆ ದೂರು ಸಲ್ಲಿಸಬಹುದು. ದೂರಿನ ಫಲಿತಾಂಶ ಅವರಿಗೆ ವಿರುದ್ಧವಾಗಿದ್ದರೆ ಅದನ್ನು ಪ್ರಶ್ನಿಸಿ ಆಯಾ ಜಿಲ್ಲಾಧಿಕಾರಿಗೆ ಮೇಲ್ಮನವಿ ಸಲ್ಲಿಸಬಹುದು. ದಾನಪತ್ರವನ್ನು ಅನೂರ್ಜಿತಗೊಳಿಸುವಂತೆಯೂ ಕೋರಬಹುದು. ಅಂತೆಯೇ ಉಪವಿಭಾಗಾಧಿಕಾರಿಯಾಗಲೀ ಅಥವಾ ಜಿಲ್ಲಾಧಿಕಾರಿಯಾಗಲೀ ಈ ಬಗ್ಗೆ ₹ 2 ಲಕ್ಷದವರೆಗೆ ದಂಡ ವಿಧಿಸಿ ಅದನ್ನು ಪರಿಹಾರ ರೂಪದಲ್ಲಿ ಅರ್ಜಿದಾರರಿಗೆ ನೀಡಬಹುದು. ಈ ಎರಡೂ ಅರೆನ್ಯಾಯಿಕ ಕೋರ್ಟ್‌ಗಳಲ್ಲಿ ಪರಿಹಾರ ಸಿಗಲಿಲ್ಲ ಎಂದಾಗ ಅದನ್ನು ಮೂಲಭೂತ ಹಕ್ಕಿನ ಉಲ್ಲಂಘನೆ ಅಡಿಯಲ್ಲಿ ಹೈಕೋರ್ಟ್ ಮೆಟ್ಟಿಲೇರಿ ಪರಿಹಾರ ಪಡೆಯಬಹುದು’ ಎನ್ನುತ್ತಾರೆ ಹೈಕೋರ್ಟ್ ವಕೀಲ ಜಿ. ಲಕ್ಷ್ಮಿಕಾಂತ್. ಇದಕ್ಕೆ ನಿದರ್ಶನವೆಂಬಂತೆ ಹಾವೇರಿ ಜಿಲ್ಲೆಯಲ್ಲಿ ನಡೆದ ಘಟನೆಯಲ್ಲಿ ವೃದ್ಧೆಯೊಬ್ಬರಿಗೆ ಸವಣೂರು ಉಪವಿಭಾಗಾಧಿಕಾರಿಗಳ ನ್ಯಾಯಾಲಯ ಆಸ್ತಿ ಮರಳಿಸಿದೆ.

ಹಿರಿಯ ನಾಗರಿಕರಿಗಿಲ್ಲ ಪ್ರತ್ಯೇಕ ಆರೋಗ್ಯ ವಿಮೆ

ರಾಜ್ಯದಲ್ಲಿ ಹಿರಿಯ ನಾಗರಿಕರಿಗೆ ಪ್ರತ್ಯೇಕ ಆರೋಗ್ಯ ವಿಮೆ ಸೌಲಭ್ಯವಿಲ್ಲ. ಆದ್ದರಿಂದ ರಾಜ್ಯದಲ್ಲಿ ಸದ್ಯ ಜಾರಿಯಲ್ಲಿರುವ ‘ಆಯುಷ್ಮಾನ್ ಭಾರತ–ಆರೋಗ್ಯ ಕರ್ನಾಟಕ’ ಮತ್ತು ‘ಯಶಸ್ವಿನಿ’ ಯೋಜನೆಯಡಿಯೇ ವೈದ್ಯಕೀಯ ಸೇವೆ ಪಡೆದುಕೊಳ್ಳಬೇಕಿದೆ. ಯೋಜನೆಯಡಿ ಬಿಪಿಎಲ್ ಕುಟುಂಬದವರಿಗೆ ವರ್ಷಕ್ಕೆ ₹ 5 ಲಕ್ಷದವರೆಗೆ ಆರೋಗ್ಯ ವಿಮೆಗೆ ಅವಕಾಶವಿದೆ. ಎಪಿಎಲ್ ಕುಟುಂಬದ ಸದಸ್ಯರಿಗೆ ಗರಿಷ್ಠ ₹ 1.50 ಲಕ್ಷ ಚಿಕಿತ್ಸಾ ವೆಚ್ಚ ನಿಗದಿ ಮಾಡಿದೆ. ಈ ವಿಮಾ ಮೊತ್ತ ಇಡೀ ಕುಟುಂಬಕ್ಕೆ ಒಳಪಡಲಿದೆ. ಕುಟುಂಬದ ವ್ಯಕ್ತಿಯೊಬ್ಬರ ಚಿಕಿತ್ಸಾ ವೆಚ್ಚ ನಿಗದಿತ ಮೊತ್ತ ತಲುಪಿದಲ್ಲಿ, ಯೋಜನೆಯಡಿ ಕುಟುಂಬದ ಇನ್ನೊಬ್ಬ ಸದಸ್ಯ ಚಿಕಿತ್ಸೆ ಪಡೆಯಲಾಗದು. ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಸಂಬಂಧಿಸಿದಂತೆಯೂ ಹಿರಿಯ ನಾಗರಿಕರಿಗೆ ಪ್ರತ್ಯೇಕ ವಾರ್ಡ್ ಅಥವಾ ಬೆಡ್ ಮೀಸಲಿಡುವ ವ್ಯವಸ್ಥೆ ರಾಜ್ಯದಲ್ಲಿ ಇಲ್ಲ.

ದುಬಾರಿ ಖಾಸಗಿ ವಿಮೆ: ವಯಸ್ಸಾದಂತೆ ಕಾಯಿಲೆಗಳು ಹೆಚ್ಚು. ಹಾಗಾಗಿ, ಹಿರಿಯರಿ ಗೆಂದೇ ಇರುವ ಖಾಸಗಿ ವಿಮೆಗಳಿಗೆ ಕಟ್ಟ ಬೇಕಾದ ಮೊತ್ತವೂ ಹೆಚ್ಚು ಎನ್ನುತ್ತಾರೆ ಖಾಸಗಿ ವಿಮಾ ಕಂಪನಿಯೊಂದರ ಪ್ರತಿನಿಧಿ.

ಖಾಸಗಿ ವಿಮೆಗಳಲ್ಲಿ ಆಯ್ಕೆ ಮಾಡಿಕೊಳ್ಳುವ ಯೋಜನೆ ಆಧಾರದಲ್ಲಿ ಒಟ್ಟು ವಿಮೆ ಮೊತ್ತದ ಆಧಾರದ ಮೇಲೆ ಪ್ರತಿ ವರ್ಷ ಇಂತಿಷ್ಟು ಹಣ ಕಟ್ಟಬೇಕಾಗುತ್ತದೆ. ವಾರ್ಷಿಕ ಪ್ರೀಮಿಯಂ ಮೊತ್ತ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತದೆ. ಕೆಲ ಖಾಸಗಿ ವಿಮೆಗಳು ಕಟ್ಟಿಸಿಕೊಂಡ ಮೊತ್ತಕ್ಕೆ ತಕ್ಕಂತೆ ಸೇವೆ ಕೊಡುವಲ್ಲಿ ವಿಫಲವಾಗುತ್ತಿವೆ. ಇದರಿಂದ ವಿಮೆಯ ಹಣ ಸದ್ವಿನಿಯೋಗ ಆಗುತ್ತಿಲ್ಲ. ದುಬಾರಿ ಮೊತ್ತ ಪಾವತಿಸಿಯೂ ಆಸ್ಪತ್ರೆಗಳಲ್ಲಿ ಬಿಲ್ ಮರುಪಾವತಿಯಾಗದ ಉದಾಹರಣೆಗಳೂ ಇವೆ. ಉಳ್ಳವರು, ಹೆಚ್ಚು ಮೊತ್ತದ ಪಿಂಚಣಿ ಪಡೆ ಯುವವರಿಗೆ ಖಾಸಗಿ ವಿಮೆಗಳು ವರವಾಗಬಲ್ಲವೇ ಹೊರತು ಸಾಮಾನ್ಯರಿಗಲ್ಲ ಎಂಬುದು ಕೆಲ ಹಿರಿಯರ ಅನುಭವದ ಮಾತು.

(ಪೂರಕ ಮಾಹಿತಿ: ಬಿ.ಎಸ್. ಷಣ್ಮುಖಪ್ಪ, ಸಂಧ್ಯಾ ಹೆಗಡೆ, ಆದಿತ್ಯ ಕೆ.ಎ., ಅನಿತಾ ಎಚ್., ವರುಣ ಹೆಗಡೆ, ಕರ್ನಾಟಕದ ಹಿರಿಯ ನಾಗರಿಕರ ವಸ್ತುಸ್ಥಿತಿ ಅಧ್ಯಯನದ ಮೌಲ್ಯಮಾಪನ ವರದಿ 2021, ಯುಎನ್ಎಫ್‌ಎ ಹಾಗೂ ನೀತಿ ಆಯೋಗದ ವರದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.