ಬಹುಶಃ ನಿಮಗೆ ಈ ಕಥೆ ಗೊತ್ತಿರಬಹುದು. ಒಬ್ಬ ವ್ಯಕ್ತಿಯು ಸತ್ತುಹೋದ ತನ್ನ ತಂದೆಯ ದೇಹವನ್ನು ಪೆಟ್ಟಿಗೆಯಲ್ಲಿ ತುಂಬಿಸಿಕೊಂಡು, ಎಸೆಯಲು ಹೋಗುತ್ತಿರುತ್ತಾನೆ. ಅದನ್ನು ನೋಡಿದ ಆತನ ಪುಟ್ಟ ಮಗ ತಂದೆಗೆ ‘ಅಪ್ಪಾ, ವಾಪಸ್ ಬರುವಾಗ ಆ ಪೆಟ್ಟಿಗೆಯನ್ನು ತಪ್ಪದೇ ಕಾಳಜಿಯಿಂದ ತನ್ನಿ’ ಎಂದು ತಣ್ಣಗೆ ಉಸುರುತ್ತಾನೆ. ಯಾಕೆ ಎಂಬಂತೆ ಆ ವ್ಯಕ್ತಿ ಆಶ್ಚರ್ಯಕರವಾಗಿ ಮಗನತ್ತ ನೋಡುತ್ತಾನೆ. ಮಗ ಮುಗ್ಧವಾಗಿ ಉತ್ತರಿಸುತ್ತಾನೆ, ‘ನಾಳೆ ನೀವು ಸತ್ತಾಗ ನಿಮ್ಮ ದೇಹವನ್ನು ತುಂಬಿ ಎಸೆಯಲು ನನಗೆ ಆ ಪೆಟ್ಟಿಗೆ ಬೇಡವೇ?’

ಶಾಲೆಯೊಂದರಲ್ಲಿ ಚೆನ್ನಾಗಿ ಓದುವ ಒಬ್ಬ ಬುದ್ಧಿವಂತ ಹುಡುಗನಿದ್ದಾನೆ. ಆದರೆ ಅವನ ವರ್ತನೆ ಮಾತ್ರ ಸರಿಯಿಲ್ಲ. ಅವನ ಬಗ್ಗೆ ಸಹಪಾಠಿಗಳಿಂದ ಪದೇ ಪದೇ ದೂರುಗಳು ಕೇಳಿಬರುತ್ತವೆ. ನೂರಕ್ಕೆ 98 ಅಂಕ ತೆಗೆಯುವವರೆಲ್ಲ ಒಳ್ಳೆಯವರಾಗಿ ಇರಬೇಕೆಂದೇನೂ ಇಲ್ಲ. ಶಿಕ್ಷಕ ವೃಂದ ಅವನ ಪೋಷಕರನ್ನು ಕರೆದು ಮಾತನಾಡಿದಾಗ, ಅವರು ತಮ್ಮ ಮಗುವಿನ ವರ್ತನೆಯನ್ನು ಸಮರ್ಥಿಸಿಕೊಂಡರು.

ಒಳ್ಳೆಯ ಅಂಕಗಳು ಉತ್ತಮ ನಡತೆಯ ಮಾನದಂಡ ಅಂದುಕೊಂಡರೋ ಏನೊ. ಎಷ್ಟೋ ಪೋಷಕರಿಗೆ ಮಕ್ಕಳು ತೆಗೆಯುವ ಒಳ್ಳೆಯ ಅಂಕಗಳ ಮುಂದೆ ಅವರ ಸಲ್ಲದ ವರ್ತನೆ ಕಾಣಿಸುವುದೇ ಇಲ್ಲ. ಹಾಗೆಯೇ ನಾಳೆ ಹಣದ ಮುಂದೆ ಮಗನಿಗೆ ಹೆತ್ತವರು ಕಾಣಿಸುವುದಿಲ್ಲ. ಪೋಷಕರು ಮಾಡಿದ್ದನ್ನು ಮಕ್ಕಳು ಮುಂದುವರಿಸಲಾರರೇ?

ಅನಾಥಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿದೆ, ಹಳ್ಳಿಗಳು ಒಬ್ಬಂಟಿ ವೃದ್ಧರ ವಸತಿಕೇಂದ್ರಗಳಾಗಿವೆ, ಈಗಿನ ಯುವಕರು ಹೆತ್ತವರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬೆಲ್ಲ ದೂರುಗಳು ಕೇಳಿಬರುತ್ತವೆ. ಅವು ಬರೀ ದೂರುಗಳಲ್ಲ, ಸತ್ಯಸಂಗತಿಗಳು. ಹೆತ್ತವರನ್ನು ನೋಡಿಕೊಳ್ಳಬೇಕಾದದ್ದು ಮಕ್ಕಳ ಕರ್ತವ್ಯ ಎಂದು ನ್ಯಾಯಾಲಯ ಕೂಡ ಆದೇಶ ನೀಡುತ್ತದೆಯೆಂದರೆ, ಈ ವಿಷಯ ಎಷ್ಟೊಂದು ಗಂಭೀರ ಸ್ವರೂಪಕ್ಕೆ ಹೋಗಿರಬಹುದು? ಹೆತ್ತವರನ್ನು ಪೋಷಿಸುವುದು ಕರ್ತವ್ಯವೊ, ಪ್ರೀತಿಯೊ? ಅವರನ್ನು ಪೋಷಿಸುವಂತೆ ನ್ಯಾಯಾಲಯ ಗದರುವ ಹಂತಕ್ಕೆ ಇದು ಬಂದುಹೋಯಿತೇ?

ಮಕ್ಕಳು ನಿರ್ಭಾವುಕರಾಗುತ್ತಿದ್ದಾರೆ. ಅವರಲ್ಲಿ ಸಂವೇದನೆ ಕಡಿಮೆಯಾಗುತ್ತಿದೆ. ‘ಇವರು ನನ್ನ ಹೆತ್ತವರು, ಇವರಿಗೆ ನಾನಲ್ಲದೆ ಇನ್ಯಾರು’ ಎನ್ನುವ ಅಂತಃಕರಣವೊಂದು ಮಿಡಿಯುತ್ತಿಲ್ಲ. ಮಕ್ಕಳೇನು ಹುಟ್ಟಿನಿಂದ ಇಂತಹ ಲಕ್ಷಣ ಪಡೆದು ಬಂದವರಲ್ಲ. ಅವರನ್ನು ಸಮಾಜ ಹಾಗೆ ತಯಾರು ಮಾಡುತ್ತಿದೆ. ಪ್ರತಿ ಪೋಷಕರೂ ಅದರಲ್ಲಿ ಪಾಲುದಾರರು. ಮಕ್ಕಳನ್ನು ಬೆಳೆಸುವಲ್ಲಿ ನಾವು ಎಲ್ಲೋ ಆಯ ತಪ್ಪುತ್ತಿದ್ದೇವೆ.

‘ಕೆರೆಯಂ ಕಟ್ಟಿಸು, ಬಾವಿಯಂ ಸವೆಸು, ದೇವಾಗಾರಮಂ ಮಾಡಿಸ/ ಜ್ಜರೆಯೊಳ್ ಸಿಲ್ಕಿದನಾಥರಂ ಬಿಡಿಸು...’ ಎಂದು ಒಬ್ಬ ತಾಯಿ ತನ್ನ ಮಗುವಿಗೆ ಹಾಲೂಡಿಸುವಾಗ ಹೇಳುತ್ತಿದ್ದಳು ಎಂದು ವಿಜಯನಗರ ಕಾಲದ ಲಕ್ಷ್ಮೀಧರಮಾತ್ಯನ ಶಾಸನ ಹೇಳುತ್ತದೆ. ‘ಆಚಾರಕ್ಕೆ ಅರಸನಾಗು, ನೀತಿಗೆ ಪ್ರಭುವಾಗು, ಮಾತಿಗೆ ಚೂಡಾಮಣಿಯಾಗು, ಜಗಕ್ಕೆ ಜ್ಯೋತಿಯೇ ಆಗು’ ಎನ್ನುತ್ತದೆ ನಮ್ಮ ಜನಪದ. ನಾವು ನಮ್ಮ ಮಕ್ಕಳಿಗೆ ಏನು ಹೇಳುತ್ತಿದ್ದೇವೆ? ಇಂಗ್ಲಿಷ್ ಮಾಧ್ಯಮದಲ್ಲಿ ಓದು, ನೂರಕ್ಕೆ ನೂರು ಅಂಕ ಪಡಿ, ಕೆಲಸ ಹಿಡಿ, ದುಡ್ಡು ಮಾಡು... ಇಂತಹ ನೂರೆಂಟು ಉದ್ದೇಶಗಳನ್ನು ಮಕ್ಕಳ ಮುಂದೆ ಇಡುತ್ತಿದ್ದೇವೆ. ಹಣ ಮುಖ್ಯವೆಂದು ತಿಳಿಸುತ್ತಾ ಹೋಗುತ್ತಿದ್ದೇವೆ. ಹಣ ಬೇಕಾದರೆ ಹೆಚ್ಚು ಅಂಕ ಪಡೆಯಬೇಕು ಅನ್ನುತ್ತಿದ್ದೇವೆ. ಹಣವೇ ಒಂದು ಗೆಲುವು, ಅಧಿಕಾರ ಹಿಡಿಯುವುದೇ ಯಶಸ್ಸು ಅಂದಮೇಲೆ ನಾಳೆ ಮಕ್ಕಳು ದೊಡ್ಡವರಾದ ನಂತರ ಅವರಿಗೆ ಹಣವೇ ಮುಖ್ಯವಾಗುತ್ತದೆ ವಿನಾ ಸಂಬಂಧಗಳಲ್ಲ, ಹೆತ್ತವರೂ ಅಲ್ಲ. ಅದನ್ನು ಅವರಿಗೆ ನಾವೇ ಹೇಳಿಕೊಟ್ಟದ್ದು. ಬೇವು ಬಿತ್ತಿ ಮಾವು ಬಯಸಿದರೆ ಹೇಗೆ?

ನಾವು ನಮ್ಮ ಮಕ್ಕಳ ಪಕ್ಕ ಕೂತು ಎಂದು ಆತ್ಮೀಯವಾಗಿ ಮಾತನಾಡಿದ್ದೇವೆ? ನಮ್ಮ ಎಷ್ಟು ಸಮಯವನ್ನು ಅವರಿಗಾಗಿ ಕೊಟ್ಟಿದ್ದೇವೆ? ಅವರಿಗೆ ಎಂತಹ ಕಥೆಗಳನ್ನು ಹೇಳಿದ್ದೇವೆ? ಎಷ್ಟು ಬುದ್ಧಿವಾದ ಹೇಳಿದ್ದೇವೆ? ಹೇಗೆ ತಿದ್ದಿದ್ದೇವೆ? ಅವರಿಗೆ ನಾವೇ ಒಂದು ಮಾದರಿಯಾಗಿ ಯಾವಾಗ ನಿಂತಿದ್ದೇವೆ? ಉತ್ತರ ಹುಡುಕಿಕೊಂಡು ಹೊರಟರೆ ಈಗಿನ ಸ್ಥಿತಿಗೆ ಬಂದು ತಲುಪುತ್ತೇವೆ. ಅದೇ ಉತ್ತರ. ಬಾಲ್ಯದಲ್ಲಿ ಕಲಿಸಿದ್ದು ಬದುಕಿನುದ್ದಕ್ಕೂ ಇರುವುದರಿಂದ, ಮಕ್ಕಳಿಗೆ ಈ ಮಣ್ಣಿನ ಸಂಸ್ಕಾರ ಕಲಿಸಬೇಕಾಗುತ್ತದೆ.

ಈಗಿನ ಪೀಳಿಗೆಯ ಈ ನಡೆಗೆ ಹೆತ್ತವರೇ ಪೂರ್ಣ ಕಾರಣರಲ್ಲದಿದ್ದರೂ ಹೆತ್ತವರ ಕಾರಣವೂ ಹೆಚ್ಚಿದೆ. ನೂರಾರು ಭಾವನೆಗಳನ್ನು ಭಾಷೆಯಲ್ಲಿ ಬಂಧಿಸಿ, ಯಶಸ್ಸನ್ನು ದುಡ್ಡು ಎಂದು ವ್ಯಾಖ್ಯಾನಿಸಿ, ಪ್ರಸಿದ್ಧಿಯನ್ನು ಗೆಲುವು ಎಂದು ಬಣ್ಣಿಸಿ, ತೊರೆದು ಬದುಕುವುದೇ ನೆಮ್ಮದಿಯೆಂದು ವರ್ಣಿಸಿ, ಬಂಧವನ್ನು ಬರೀ ಮೊಬೈಲ್ ನಂಬರ್ನಲ್ಲಿ ಬಂಧಿಸಿ ಕುಳಿತಿರುವ ನಮಗೆ, ಕರುಳಬಂಧದ ಅಸಲಿ ಭಾವ ಹೇಗೆ ಮೂಡೀತು? ಜೀವಿಸುವುದೆಂದರೆ ತಿನ್ನುವುದು, ಉಸಿರಾಡುವುದು ಅಷ್ಟೇ ಅಲ್ಲ, ನಾವು ನಮ್ಮವರೊಂದಿಗೆ ಹೆಣೆದುಕೊಂಡು, ಬಂಧಿಸಿಕೊಂಡು ನಗುವುದು.

ಹೆತ್ತವರು ಅನಾಥರಂತೆ ಬದುಕುವುದನ್ನು ಯಾವ ಸಮಾಜವೂ ಯಾವ ಸಂಸ್ಕೃತಿಯೂ ಮನ್ನಿಸುವುದಿಲ್ಲ. ಅದೆಂದೂ ಕ್ಷಮೆ ಇರದ ಅಪರಾಧ. ಇದು ಕಾನೂನಿನ ಮಾತಲ್ಲ, ಮಾನವೀಯತೆಯ ಮಾತು. ಹೆತ್ತವರೂ ಬದಲಾಗಬೇಕು, ಮಕ್ಕಳೂ ಬದಲಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.