ಇವತ್ತು ಟಿ.ವಿ. ಎಂಬುದು ಕ್ರೌರ್ಯ ಪ್ರದರ್ಶನದ,ಕ್ರೌರ್ಯೋತ್ತೇಜಕವಾದ ಸಾಧನವಾಗಿರುವುದು ಹೌದೇ– ಅಲ್ಲವೇ ಎಂದು ಬಲ್ಲವರು ಹೇಳಬೇಕು. ಹೌದಾದರೆ, ದೃಶ್ಯ ಮಾಧ್ಯಮವೂ ಶ್ರವಣ ಮಾಧ್ಯಮವೂ ಆಗಿರುವ ಟಿ.ವಿ.ಯನ್ನು ಸ್ವಚ್ಛವಾಗಿಸಲು ಸಮಾಜ ಏನಾದರೂ ಮಾಡಲೇ ಬೇಕು.

ಈ ಕ್ರೌರ್ಯ ಪ್ರದರ್ಶನ ಸಮಾಜಕ್ಕೆ ಯಾಕೆ ಬೇಕು? ಸಮಾಜಕ್ಕೆ ಇದರಿಂದ ಏನು ಸಕಾರಾತ್ಮಕವಾದುದು ಸಿಗುತ್ತದೆ? ಅಮಾನವೀಯ ಸಂದೇಶ ನೀಡುವ ನೂರಾರು ಸಿನಿಮಾಗಳು, ಸೀರಿಯಲ್‍ಗಳು ಸಮಾಜದಲ್ಲಿ ಮನುಷ್ಯರಂತೆ ಬದುಕುವ ಯಾವುದೇ ಗಂಡಿಗೆ, ಹೆಣ್ಣಿಗೆ ಅಗತ್ಯ ಇವೆಯೆ? ಸೀರಿಯಲ್ ಮತ್ತು ಸಿನಿಮಾಗಳು ಸಾರುವ ದುರ್ನಡತೆಯ, ದ್ವೇಷ ಪ್ರದರ್ಶನದ, ಕೆಟ್ಟ ಭಾಷೆಯ ರೋಷಾವೇಶದ ದೃಶ್ಯಗಳಿಂದ ಎಳೆ ಹರೆಯದ ಹುಡುಗ ಹುಡುಗಿಯರು ಏನು ತಿಳಿದುಕೊಳ್ಳುತ್ತಾರೆ?

‘ಯಾವುದೋ ಸಿನಿಮಾದಿಂದ ಪ್ರಭಾವಿತನಾಗಿ ಈಕೊಲೆ ಮಾಡಿದೆ’ ಎನ್ನುವ ಹಂತಕರು ಈಗಲೂ ಇದ್ದಾರೆ. ಒಂದು ತಮಾಷೆಯ ಕೆಲಸ ಎಂಬಂತೆ ಇವತ್ತು ಕೊಲೆಗಳು ನಡೆಯುತ್ತವೆ. ಕೊಲ್ಲಲು ಕತ್ತಿ, ಕೋವಿ ಬೇಕೆಂದಿಲ್ಲ. ಮನುಷ್ಯನ ಕೈಯಲ್ಲಿ ಏನಿರುತ್ತದೆಯೋ ಅದೇ, ಕ್ಷಣಮಾತ್ರದಲ್ಲಿ ಹೆಂಡತಿಯನ್ನೋ ಗಂಡನನ್ನೋ ಮಗಳನ್ನೋ ಮಗನನ್ನೋ ಸ್ನೇಹಿನನ್ನೋ ಕೊಂದೆಸೆಯುವ ಸಾಧನವಾಗುತ್ತದೆ. ಕೊಲ್ಲುವುದು ವಾಸ್ತವದಲ್ಲಿ ಮನಸ್ಸೇ; ಕತ್ತಿ ಕಲ್ಲು ದೊಣ್ಣೆಗಳು ಇರುವುದು ಕೊಲ್ಲಲಿಕ್ಕಾಗಿ ಅಲ್ಲವಲ್ಲ?

ಮಾನವೀಯವಾದ ಮತ್ತು ಸಾಂಸ್ಕೃತಿಕವಾದ ನೆಲೆಗಟ್ಟು ಇಲ್ಲದ ಬದುಕಿನಲ್ಲಿ ಆನಂದಾನುಭೂತಿಯನ್ನು ನೀಡುವ ಕ್ರಿಯೆಗಳಿಗೆ ಅವಕಾಶವೆಲ್ಲಿ? ಮನಸನ್ನು ಸ್ವಚ್ಛವಾಗಿ, ಉಲ್ಲಾಸಭರಿತವಾಗಿ ಇರಿಸಿಕೊಳ್ಳುವ ಮನರಂಜನೆಗೆ ಎಡೆಯೆಲ್ಲಿ? ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವುದರಲ್ಲಿ ಎಷ್ಟು ಸಾಂಸ್ಕೃತಿಕವಾದ, ಮಾನವೀಯ ಗುಣಗಳಿಗೆ ಪೂರಕವಾದ ಕಾರ್ಯಕ್ರಮಗಳು ಇವೆ ಎಂದು ನಾವು ಯೋಚಿಸಬೇಕಾದ್ದು ಅಗತ್ಯ.

‘ಸುದ್ದಿದೃಶ್ಯ’ ವೀಕ್ಷಣೆಯಿಂದ ನಾವು ಏನು ಪಡೆಯುತ್ತೇವೆ? ಸುದ್ದಿ ವೀಕ್ಷಣೆಯ ಮೂಲಕ ನಮ್ಮಲ್ಲಿ ಜ್ಞಾನಾಭಿವೃದ್ಧಿಯಾಗುತ್ತದೆಯೇ? ಒಂದು ಕೊಲೆಯ ಸುದ್ದಿದೃಶ್ಯವನ್ನು ಮರಳಿ ಮರಳಿ ತೋರಿಸಬೇಕಾದ ಅಗತ್ಯ ಟಿ.ವಿ.ಗೇನಿದೆ? ಆ ಮೂಲಕ ಅದು ಸಮಾಜಕ್ಕೆ ಏನು ಕೊಡುತ್ತದೆ? ಇದು ಎಂಥ ಸಾಧನೆ ಎಂದು ನಿರ್ಮಾಪಕರು, ನಿರ್ದೇಶಕರು, ಪ್ರದರ್ಶಕರು ನಟ–ನಟಿಯರು ಯೋಚಿಸಬೇಕಾದ್ದು ಅನಗತ್ಯವೇ? ಎಲ್ಲರೂ ಎಲ್ಲವನ್ನೂ ಕೇವಲ ಹಣಕ್ಕಾಗಿ ಮಾಡುವುದೆಂದಾದರೆ, ಅದು ಮಾತ್ರವೇ ಬದುಕಿನ ಮೌಲ್ಯ ಎಂದಾದರೆ, ಸಮಾಜ ಪ್ರಪಾತದ ಕಡೆಗೆ ಸಾಗುತ್ತಿದೆ ಎಂದೆನಿಸುವುದಿಲ್ಲವೇ?

ಸುದ್ದಿಯೆಂದರೇನು? ನಾಲ್ಕೈದು ಮಂದಿ ಜೊತೆಯಾಗಿ ಒಬ್ಬನ ಮೇಲೆ ಬಿದ್ದು ಕೊಲ್ಲುವುದು, ಒಂದು ದೊಡ್ಡ ಮೊತ್ತದ ಹಣವನ್ನು ತೆಗೆದುಕೊಂಡು ಸಂಚು ಹೂಡಿ ಒಬ್ಬನನ್ನು ಕೊಂದದ್ದು ಸುದ್ದಿ. ಮನೆಯೊಳಗೆ ನುಗ್ಗಿ ದರೋಡೆ ನಡೆಸಿದ್ದು, ರಸ್ತೆಯಲ್ಲಿ ಮಹಿಳೆಯ ಕತ್ತಿನ ಸರ ಕಸಿದು ಓಡಿದ್ದು ಸುದ್ದಿ. ಕಳ್ಳನನ್ನು ಪತ್ತೆ ಹಚ್ಚಿದ್ದು, ಅವನಿಗೆ ಶಿಕ್ಷೆಯಾದದ್ದು ಇವೆಲ್ಲ ಸುದ್ದಿಗಳು ಹೌದು. ಹುಡುಗಿಯ ಮೇಲೆ ಕೈ ಮಾಡಿದವನನ್ನು ಜನ ಹಿಡಿದು ಹೊಡೆದದ್ದು ಕೂಡ ಸುದ್ದಿ ಹೌದು. ಊರಲ್ಲಿ ಒಬ್ಬ ಒಳ್ಳೆಯ ಮನುಷ್ಯ ಅಥವಾ ಕೆಟ್ಟ ಮನುಷ್ಯ ಸತ್ತದ್ದು ಸುದ್ದಿ. ಯಾರೋ ಬಾವಿಗೆ ಬಿದ್ದದ್ದು ಸುದ್ದಿ, ಮರದಿಂದ ಬಿದ್ದು ಕೈಕಾಲು ಮುರಿದದ್ದು ಸುದ್ದಿ. ಅದು ಯಾವುದೇ ಸುದ್ದಿ ಮಾಧ್ಯಮದ ಮೂಲಕ ನಾಲಗೆಯ ಮೂಲಕ ಹರಡಿದ್ದು ಸುದ್ದಿ. ದೃಶ್ಯ ಮಾಧ್ಯಮ ಇಂಥ ಸುದ್ದಿಗಳಿಗೆ ಮಹತ್ವ ನೀಡುವುದಿಲ್ಲ, ಅದರ ಅಗತ್ಯವೂ ಅದಕ್ಕಿಲ್ಲ, ಯಾರಿಗೂ ಇಲ್ಲ.

ಆದರೆ ಗಂಡ ಹೆಂಡತಿಯನ್ನು ಕೊಂದದ್ದು, ತಾಯಿಯೋ ತಂದೆಯೋ ತಮ್ಮ ಮಗುವನ್ನು ಕೊಂದುಹಾಕಿದ ರಕ್ತಸಿಕ್ತ ದೃಶ್ಯ ಸುದ್ದಿ ಹೇಗಾದೀತು? ಆ ಸುದ್ದಿ
ಯನ್ನು ಮರಳಿ ಮರಳಿ ತೋರಿಸುವುದು ಸುದ್ದಿಯಲ್ಲ. ಅದು ಯಾವುದೋ ಉದ್ದೇಶಕ್ಕಾಗಿ ನಡೆಯುವ ದೃಶ್ಯಪ್ರದರ್ಶನ. ಟಿ.ವಿ.ಯಲ್ಲಿ ಅಂಥ ಸುದ್ದಿದೃಶ್ಯ ನೋಡುವವರು ಯಾಕೆ ನೋಡುತ್ತಾರೆ, ನೋಡದವರು ಯಾಕೆ ನೋಡುವುದಿಲ್ಲ ಪತ್ರಿಕೆಗಳನ್ನು ಓದುವವರು ಯಾಕೆ ಓದುತ್ತಾರೆ, ಓದದವರು ಯಾಕೆ ಓದುವುದಿಲ್ಲ, ಸಿನಿಮಾ,ಸೀರಿಯಲ್‌ಗಳನ್ನು ನೋಡುವವರು ಅದರಿಂದ ಏನು ಪಡೆಯುತ್ತಾರೆ, ನೋಡದವರು ಯಾಕೆ ನೋಡುವುದಿಲ್ಲ ಎಂಬಿತ್ಯಾದಿ ಪ್ರಶ್ನೆಗಳ ಮೂಲಕ ಒಂದು ಸಾಮಾಜಿಕ ಸಮೀಕ್ಷೆ ನಡೆಸಬೇಕಾದ ಅಗತ್ಯವಿದೆ.

ಕ್ರೈಮ್ ಸುದ್ದಿ ಪತ್ರಿಕೆಗಳು, ಕ್ರೈಮ್ ವಾಹಿನಿಗಳು ಬಹುತೇಕ ಅದೃಶ್ಯವಾಗಿರುವುದು ನಿಜಕ್ಕೂ ಒಂದು ಒಳ್ಳೆಯ ಸಾಮಾಜಿಕ ಬೆಳವಣಿಗೆ. ಆದರೆ ದುರ್ನಡತೆ ಮತ್ತು ದುರ್ನುಡಿಯ ಮಸಾಲೆಯನ್ನು ಬಂಡವಾಳವಾಗಿಸಿಕೊಂಡಿರುವ ಸೀರಿಯಲ್‌ಗಳಿಂದ, ಕ್ರೌರ್ಯ ದೃಶ್ಯಗಳನ್ನು ಬಂಡವಾಳವಾಗಿಸಿಕೊಂಡಿರುವ ಸಿನಿಮಾಗಳಿಂದ ಸಮಾಜಕ್ಕೆ ಏನು ಶಿಕ್ಷಣ ಅಥವಾ ನೀತಿಬೋಧೆಯಾಗುತ್ತಿದೆ? ಮನಸ್ಸುಗಳನ್ನು ಅವಿಚಾರದ, ಅಸಹ್ಯ ಮಾತುಗಳ ತಿಪ್ಪೆಗುಂಡಿಯಾಗಿಸುವುದರಿಂದ ಸಿನಿಮಾ ಸೀರಿಯಲ್ ತಯಾರಿಸುವುದರಲ್ಲಿ ಇವುಗಳ ನಿರ್ಮಾಪಕರದ್ದು ಎಂಥ ಸಾಧನೆ? ಅದರಲ್ಲಿ ಅವರಿಗೆ ಲಭಿಸುವ ಸಾರ್ಥಕ್ಯ, ಸಂತೋಷವಾದರೂ ಏನು? ಜನಮನಕ್ಕೆ ಸಮಾಜಕ್ಕೆ ಏನೋ ಒಳ್ಳೆಯದು ಮಾಡುತ್ತಿದ್ದೇವೆ ಎಂಬ ಭಾವನೆ ಅವರಿಗೆ ಇರಲು ಸಾಧ್ಯವೇ?

ಬಾಳೆಹಣ್ಣು ತಿಂದು ಸಿಪ್ಪೆಯನ್ನು ಎಸೆಯುವಂತೆ ಹೆಣ್ಣನ್ನು ತಿಂದು ಎಸೆಯುವ, ಕೈಗೆ ಸಿಕ್ಕ ಮಕ್ಕಳನ್ನು ತಿಂದು ಚಾಕಲೇಟು ಸಿಪ್ಪೆಯಂತೆ ಎಸೆಯುವ ಕಾಮಪಾತಕಿಗಳು ಭವ್ಯ ಸಂಸ್ಕೃತಿಯ ನೆಲವಾದ, ಅಧ್ಯಾತ್ಮದ ತವರಾದ ಈ ಪುಣ್ಯಭೂಮಿಯಲ್ಲಿ ಎಲ್ಲಿ ಉದ್ಭವಿಸಿದರು?

ದೇಹ ಮನಸ್ಸು ಮಿದುಳಿನ ವಿಕಾಸದಲ್ಲಿ ಕೊನೆಯ ಹಂತವನ್ನು ಎಂದೋ ತಲುಪಿರುವ ಮನುಷ್ಯ ಹೇಗೆ ಈಗಲೂ ಕ್ರೋಧದ ದಾಸನಾಗಿಯೇ ಉಳಿದಿದ್ದಾನೆ? ಅವನ ಚಿಂತನಾಶೀಲತೆ ಯಾಕೆ ಇನ್ನೂ ಸಮಗ್ರವಾಗಿ ಅರಳಿಲ್ಲ? ಹೇಗೆ ಒಂದು ಕ್ಷಣದಲ್ಲಿ ದ್ರವ್ಯ ಪಿಪಾಸೆಯಿಂದ, ಕಾಮಪಿಪಾಸೆಯಿಂದ ತನ್ನಂತೆಯೇ ಇರುವ ಇನ್ನೊಂದು ಜೀವವನ್ನು ಹೊಸಕಿ ಎಸೆಯುತ್ತಿದ್ದಾನೆ?

ಇಂಥ ಹತ್ತಾರು ಪ್ರಶ್ನೆಗಳನ್ನು ಉತ್ತರಿಸಲು ಚಿಂತಕರ, ಸಮಾಜವಿಜ್ಞಾನಿಗಳ, ಸೀರಿಯಲ್ ಸಿನಿಮಾ ತಯಾರಕರ, ದೃಶ್ಯ ಮಾಧ್ಯಮದ ಕಲಾವಿದರ ಜೊತೆ ಸಂದರ್ಶನ ನಡೆಸಬೇಕು. ಸಕಲ ಪ್ರಜ್ಞಾವಂತರನ್ನು ಯೋಚನೆಗೆ ಹಚ್ಚಬೇಕು. ಸಾಮಾಜಿಕ ಮನಸ್ಸುಗಳನ್ನು ಸಕಾರಾತ್ಮಕ ಚಿಂತನೆ ಮತ್ತು ಕ್ರಿಯೆಯ ಕಡೆಗೆ ನಡೆಸಬೇಕಾದ ಅಗತ್ಯ ಇವತ್ತು ತುಂಬಾ ಇದೆ. ಈ ಕೆಲಸವನ್ನು ಪತ್ರಕರ್ತರು, ಪತ್ರಿಕೆಗಳು ಟಿ.ವಿ. ಮಾಧ್ಯಮಗಳು ಮಾಡಬಾರದೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.