ಕಳೆದ ಕೆಲವು ದಿನಗಳಿಂದ ಟಿಪ್ಪು ಜಯಂತಿ ಆಚರಣೆ ಕುರಿತಾದ ವಿವಾದ ಭುಗಿಲೆದ್ದಿದೆ. ಒಂದು ಗುಂಪು ಟಿಪ್ಪು ಸುಲ್ತಾನ್ ಒಬ್ಬ ಅಪ್ರತಿಮ ದೇಶಭಕ್ತ ಹಾಗೂ ಪ್ರಜಾಪರ ದೊರೆಯಾಗಿದ್ದ ಎಂದು ವಾದಿಸಿದರೆ, ಮತ್ತೊಂದು ಗುಂಪು ಟಿಪ್ಪು ಕೋಮುವಾದಿ ಹಾಗೂ ಕನ್ನಡ ವಿರೋಧಿ ಎಂದು ವಾದಿಸುತ್ತದೆ. ಎರಡೂ ಗುಂಪಿನವರು ತಂತಮ್ಮ ವಾದ ಸಮರ್ಥನೆಗೆ ಅನೇಕ ಸಾಕ್ಷ್ಯಗಳನ್ನು ಮುಂದಿಡುತ್ತಾರೆ. ಅವು ಸುಳ್ಳೋ, ನಿಜವೋ; ಟಿಪ್ಪು ಸುಲ್ತಾನನ ನಿಜವಾದ ವ್ಯಕ್ತಿತ್ವ ಏನು ಎಂಬುದನ್ನು ಪೂರ್ವಗ್ರಹಗಳಿಂದ ಮುಕ್ತರಾದ ಚರಿತ್ರಕಾರರು ನಿರ್ಧರಿಸಬೇಕೇ ಹೊರತು ಹರಕು ಬಾಯಿಯ ರಾಜಕಾರಣಿಗಳಲ್ಲ.

ಈ ವಿವಾದವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ, ಜಯಂತಿಗಳ ಆಚರಣೆ ಸರ್ಕಾರದ ಕೆಲಸವೇ ಎಂಬ ಮೂಲಭೂತ ಪ್ರಶ್ನೆ ಮೂಡುತ್ತದೆ. ಪ್ರಜಾತಂತ್ರ ವ್ಯವಸ್ಥೆಯಡಿ ಚುನಾಯಿತಗೊಂಡ ಸರ್ಕಾರವೊಂದು ಸಮಾಜದಲ್ಲಿ ಶಾಶ್ವತ ಬದಲಾವಣೆ ತರುವಂತಹ ಕೆಲಸಗಳನ್ನು ಮಾಡಬೇಕೇ ಹೊರತು, ತಮ್ಮ ಪಕ್ಷಕ್ಕೆ ತಕ್ಷಣದ ಪ್ರಯೋಜನ ನೀಡುವಂತಹ ರಾಜಕೀಯ ಪ್ರೇರಿತ ಕೆಲಸಗಳನ್ನಲ್ಲ. ಮುಂದಿನ ಅವಧಿಗೆ, ಮತ್ಯಾವುದೋ ಪಕ್ಷ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿ ಆಚರಿಸುವುದಿರಲಿ, ಆತನ ಹೆಸರೆತ್ತುವುದನ್ನೂ ನಿರ್ಬಂಧಿಸಬಹುದು! ಹೀಗೆ ರಾಜಕೀಯ ದಾಳಕ್ಕೆ ಸಿಲುಕಿದ ಇಂಥ ಆಚರಣೆಗಳು ಸಾಮಾನ್ಯ ಜನರ ಜೀವನಕ್ಕೆ ಯಾವ ರೀತಿಯಲ್ಲೂ ಸಂಬಂಧಪಡದ, ಉನ್ಮಾದಗಳನ್ನು ಕೆರಳಿಸುವ, ತನ್ಮೂಲಕ ರಾಜಕೀಯ ಲಾಭ ಗಳಿಸುವ ಸಾಧನಗಳಾಗಿ ಬಳಕೆಯಾಗುತ್ತವೆ ಅಷ್ಟೆ.

ಐತಿಹಾಸಿಕ ಅಥವಾ ಪೌರಾಣಿಕ ವ್ಯಕ್ತಿಗಳ ಜಯಂತಿಗಳನ್ನು ಅವರ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಘ-ಸಂಸ್ಥೆಗಳು ಆಚರಿಸಬಹುದು. ಆಯಾ ವ್ಯಕ್ತಿ ಕುರಿತು ತಮ್ಮ ಅರಿವಿಗೆ ನಿಲುಕಿದ ವಿಚಾರಗಳನ್ನು ಪ್ರಚುರಪಡಿಸಿ ಜಾಗೃತಿ ಉಂಟುಮಾಡಬಹುದು. ಪೂರ್ವಗ್ರಹ ಪೀಡಿತರಾಗದೆ, ಮುಕ್ತ ಮನಸ್ಸಿನಿಂದ ಇಂತಹ ಕೆಲಸಗಳನ್ನು ಮಾಡುತ್ತಿರುವ ಅನೇಕ ಸಂಸ್ಥೆ , ವ್ಯಕ್ತಿಗಳನ್ನು ನಾವು ಕಾಣಬಹುದು. ರಾಜಕೀಯದ ವಾಸನೆ ಸುಳಿಯದೆ, ದ್ವೇಷವನ್ನು ಹರಡದೆ ಖಾಸಗಿಯಾಗಿ ಆಚರಿಸುವುದು ಅಪಾಯಕಾರಿಯಲ್ಲ. ಏಕೆಂದರೆ ಇಲ್ಲಿ ಅಭಿಪ್ರಾಯಗಳನ್ನು ಹೇರುವ ಕಾರ್ಯಸೂಚಿ ಅಥವಾ ರಾಜಕೀಯ ಲಾಭದ ಉದ್ದೇಶ ಇರುವ ಸಾಧ್ಯತೆ ಬಹಳ ಕಡಿಮೆ.

ಆದರೆ ಯಾವಾಗ ಜಯಂತಿಯಂಥ ಕಾರ್ಯಕ್ರಮಗಳ ವಕ್ತಾರಿಕೆಯನ್ನು ರಾಜಕೀಯ ಪಕ್ಷಗಳು ವಹಿಸಿಕೊಳ್ಳುತ್ತವೆಯೋ, ಆಗ ಸತ್ಯಾನ್ವೇಷಣೆಗಿಂತ ಮಿಗಿಲಾಗಿ ಪರಸ್ಪರ ಕೆಸರೆರಚಾಟ ಹಾಗೂ ಮನಸ್ಸುಗಳನ್ನು ಒಡೆಯುವ ಕೆಲಸ ಸಾಂಗವಾಗಿ ನಡೆಯುತ್ತದೆ. ಈ ಬಗೆಯ ಸ್ವಾರ್ಥ ರಾಜಕಾರಣ ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಾಗಿಲ್ಲ ಎಂಬುದನ್ನು ಅರಿತುಕೊಳ್ಳಬೇಕು.

ನಮ್ಮ ಅನೇಕ ರಾಜಕಾರಣಿಗಳಿಗೆ ಸಮಕಾಲೀನ ಸಮಸ್ಯೆಗಳ ಕುರಿತು ಮಾತನಾಡಲು ಪುರುಸೊತ್ತಿಲ್ಲ ಅಥವಾ ಆಸಕ್ತಿಯಿಲ್ಲ. ಇಂಥವರು ಟಿಪ್ಪುವಿನ ಗುಣಾವಗುಣಗಳ ಕುರಿತು ಬೀಸುಹೇಳಿಕೆಗಳನ್ನು ನೀಡುತ್ತಾರೆ. ಉದಾಹರಣೆಗೆ, ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಪಠ್ಯಕ್ರಮವಿರುವ ಅನೇಕ ಶಾಲೆಗಳಲ್ಲಿ ಕನ್ನಡವನ್ನು ಅಪಮೌಲ್ಯಗೊಳಿಸುವ ಕೆಲಸ ನಿರಾತಂಕವಾಗಿ ಸಾಗುತ್ತಿದೆ. ಫ್ರೆಂಚ್ ಭಾಷೆ ಕಲಿಸಲು ತೋರಿಸುವ ಆಸಕ್ತಿಯ ಅರ್ಧ ಪಾಲನ್ನೂ ಕನ್ನಡವನ್ನು ಕಲಿಸಲು ಇಂತಹ ಶಾಲೆಗಳು ತೋರುತ್ತಿಲ್ಲ. ಕಾಟಾಚಾರಕ್ಕೆಂಬಂತೆ, ಕನ್ನಡ ಸಾಹಿತ್ಯದ ಯಾವುದೇ ಆಯಾಮವನ್ನೂ ಮಕ್ಕಳಿಗೆ ಪರಿಚಯಿಸದ ಪಠ್ಯಪುಸ್ತಕಗಳನ್ನು ಇಟ್ಟು, ಮಕ್ಕಳು ಹಾಗೂ ಪೋಷಕರಿಗೆ ಕನ್ನಡವೆಂದರೆ ನಿರ್ಲಕ್ಷ್ಯದ ವಸ್ತುವನ್ನಾಗಿ ಮಾಡಲಾಗುತ್ತಿದೆ. ಕುವೆಂಪು ಪದ್ಯದ ಪರಿಚಯವೇ ಇಲ್ಲದೆ ಶಾಲಾ ಹಂತ ಮುಗಿಸಿ, ಕಾಲೇಜಿಗೆ ಕಾಲಿಡುವ ಮಕ್ಕಳನ್ನು ಕಂಡಿದ್ದೇನೆ. ರಾಜ್ಯೋತ್ಸವ ತಿಂಗಳ ಈ ಹೊತ್ತಿನಲ್ಲಿ ನಮ್ಮದೇ ನೆಲದಲ್ಲಿ ಕನ್ನಡಕ್ಕೆ ಒದಗಿರುವ ಈ ಗತಿಯನ್ನು ಆಡಳಿತ ಅಥವಾ ವಿರೋಧ ಪಕ್ಷದ ಯಾವ ರಾಜಕಾರಣಿಯೂ ಪ್ರಶ್ನಿಸುವುದಿಲ್ಲ. ರಾಜಕಾರಣಕ್ಕೂ, ಸೂಕ್ಷ್ಮ ಸಂವೇದನೆಗೂ ಎಣ್ಣೆ, ಸೀಗೆಕಾಯಿ ಸಂಬಂಧವೇನೊ!

ಬಹುತೇಕ ಎಲ್ಲ ಇಲಾಖೆಗಳಲ್ಲೂ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ಹೆಚ್ಚುವರಿ ಕೆಲಸ ನೀಡುವ ಜಯಂತಿಗಳಂಥ ಸರ್ಕಾರಿ ಕಾರ್ಯಕ್ರಮಗಳಿಂದ ಖೊಟ್ಟಿ ಬಿಲ್ಲುಗಳನ್ನು ಸೃಷ್ಟಿಸಿ ದುಡ್ಡು ಹೊಡೆಯುವವರಿಗೆ ಸುವರ್ಣಾವಕಾಶ ದೊರೆಯುತ್ತದೆ. ಕತ್ತೆಯಂತೆ ದುಡಿಯುವ ಕೆಲ ಬಡಪಾಯಿ ಗುಮಾಸ್ತರಿಗೆ ಮತ್ತಷ್ಟು ಕೆಲಸ ಬೀಳುತ್ತದೆ ಅಷ್ಟೆ. ನೂರೆಂಟು ಯೋಜನೆಗಳನ್ನು ಜಾರಿಗೆ ತರುವ ಸರ್ಕಾರಗಳು, ಅದಕ್ಕೆ ತಕ್ಕಂತೆ ಸಿಬ್ಬಂದಿ ನೇಮಕ ಮಾಡಿಕೊಳ್ಳುವಲ್ಲಿ ನಿರ್ಲಕ್ಷ್ಯ ತೋರುತ್ತಿವೆ. ಹತ್ತು ಹಲವು ಸಮಸ್ಯೆಗಳ ಕುರಿತು ಶಾಶ್ವತ ಪರಿಹಾರಗಳನ್ನು ಶೋಧಿಸಬೇಕಾದ ಸರ್ಕಾರಗಳು ಆಯ್ಕೆ ಮಾಡಿಕೊಳ್ಳುವುದು ಮಾತ್ರ ತಂತಮ್ಮ ಪಕ್ಷಗಳಿಗೆ ಮತ ಗಿಟ್ಟಿಸುವ ವಿಚಾರಗಳನ್ನೆ!

ವಿರೋಧ ಪಕ್ಷಗಳ ಕಡು ವಿರೋಧದ ನಡುವೆಯೂ ಟಿಪ್ಪು ಜಯಂತಿ ಆಚರಿಸಿಬಿಟ್ಟೆವೆಂಬ ಹುಸಿ ಹೆಮ್ಮೆ ಆಡಳಿತ ಪಕ್ಷಕ್ಕೆ ದೊರೆಯಬಹುದು. ಅಥವಾ ಒಂದು ವೇಳೆ, ಮುಂದೊಂದು ದಿನ ಟಿಪ್ಪು ಜಯಂತಿ ರದ್ದಾದರೆ ಆಡಳಿತ ಪಕ್ಷವನ್ನೇ ಬಗ್ಗಿಸಿದೆವೆಂದು ವಿರೋಧ ಪಕ್ಷ ಬೀಗಬಹುದು. ಈ ಎರಡು ಸಂದರ್ಭಗಳಲ್ಲೂ ರಾಜಕೀಯ ಪಕ್ಷಗಳು ತಂತಮ್ಮ ಬೇಳೆ ಬೇಯಿಸಿಕೊಳ್ಳಬಹುದೇ ಹೊರತು ರೈತ, ಕಾರ್ಮಿಕ ಹಾಗೂ ಶ್ರಮಜೀವಿಗಳಿಗೆ ಕಿಂಚಿತ್ ಪ್ರಯೋಜನವೂ ಇಲ್ಲ. ಸಾರ್ವಜನಿಕ ವಲಯದ ಸೇವೆಗಳನ್ನು ಒಂದೊಂದಾಗಿ ಖಾಸಗೀಕರಣಗೊಳಿಸಿ ತನ್ನ ಜವಾಬ್ದಾರಿಗಳಿಂದ ನುಣುಚಿಕೊಳ್ಳುತ್ತಿರುವ ಸರ್ಕಾರಗಳು, ಬೇಡದ ವಿಷಯಗಳಲ್ಲಿ ತಮ್ಮ ಇರುವಿಕೆ ಪ್ರದರ್ಶಿಸಲು ಪ್ರಯತ್ನಿಸುತ್ತವೆ. ಜಯಂತಿಗಳಂಥ ಆಚರಣೆಗಳು ಕೂಡ ಇಂಥ ಪ್ರದರ್ಶನದ ಭಾಗವಾಗಿರುತ್ತವೆ.

ರಾಜಕೀಯ ಪಕ್ಷಗಳು ಧಾರ್ಮಿಕ ಹಾಗೂ ಐತಿಹಾಸಿಕ ವಿಷಯಗಳಲ್ಲಿ ನಿರ್ಲಿಪ್ತ ಧೋರಣೆ ಅನುಸರಿಸುವುದು ಒಳ್ಳೆಯದು. ಧಾರ್ಮಿಕತೆಯನ್ನು ಮುಂದು ಮಾಡಿಕೊಂಡು ರಾಜಕೀಯ ಮಾಡಲು ಹೊರಟ ಪರಿಣಾಮವಾಗಿ ಉಂಟಾದ ದುರಂತವನ್ನು ಸ್ವತಂತ್ರ ಭಾರತದ ಇತಿಹಾಸದಲ್ಲಿ ಕಾಣಬಹುದು. ಅಲ್ಲದೆ ಪ್ರತೀ ಪಕ್ಷವೂ ತನಗೆ ಅಧಿಕಾರ ದೊರೆತಾಗ ವಿಶ್ವವಿದ್ಯಾಲಯ ಸೇರಿದಂತೆ ಹಲವಾರು ಆಯಕಟ್ಟಿನ ಸ್ಥಾನಗಳಿಗೆ ತಮ್ಮ ಅಜೆಂಡಾಗೆ ಹೊಂದುವಂತಹ ವ್ಯಕ್ತಿಗಳನ್ನು ನೇಮಕ ಮಾಡುತ್ತವೆ. ಇದರ ನೇರ ಪರಿಣಾಮ ಆಗುವುದು ಇತಿಹಾಸದ ವ್ಯಾಖ್ಯಾನದ ಮೇಲೆ. ಇದು ಇತಿಹಾಸದ ಪಠ್ಯಪುಸ್ತಕಗಳ ಪರಿಷ್ಕರಣೆಗಳಿಂದ ಹಿಡಿದು ಜಯಂತಿಯಂಥ ಸರ್ಕಾರಿ ಕಾರ್ಯಕ್ರಮದವರೆಗೂ ವ್ಯಾಪಿಸಬಹುದು.

ಧಾರ್ಮಿಕ, ಐತಿಹಾಸಿಕ ಸೇರಿದಂತೆ ಹಲವು ವಿಷಯಗಳನ್ನು ಪಾಂಡಿತ್ಯಪೂರ್ಣವಾಗಿ ವಿಶ್ಲೇಷಿಸಬಲ್ಲವರಾಗಿದ್ದ ಅಂಬೇಡ್ಕರ್, ಲೋಹಿಯಾರಂಥ ಸಹೃದಯಿ ಹಾಗೂ ಮೇಧಾವಿ ರಾಜಕಾರಣಿಗಳ ಕೊರತೆಯಿರುವ ಇಂದಿನ ಕಾಲಘಟ್ಟದಲ್ಲಿ, ರಾಜಕೀಯ ಪಕ್ಷಗಳು ಇಂಥ ವಿಷಯಗಳ ಉಸಾಬರಿಯಿಂದ ದೂರವುಳಿದು ಜನಪರ ಕೆಲಸಮಾಡುವುದರ ಕಡೆ ಗಮನ ಹರಿಸುವುದು ಒಳ್ಳೆಯದು. ಹೀಗೊಂದು ಆಶಯ ಇಟ್ಟುಕೊಳ್ಳುವುದು ಕೂಡ ಪ್ರಸ್ತುತ ಸಂದರ್ಭದಲ್ಲಿ ನಗೆಪಾಟಲೇನೊ! ಏನೇ ಇರಲಿ, ಇಂದಿನ ಪ್ರಚಾರಪ್ರಿಯ ಹಾಗೂ ಸ್ವಾರ್ಥ ರಾಜಕೀಯದ ಜಡತ್ವ ನೀಗಿ ಹೊಸ ಪರಿಭಾಷೆ ಮೂಡಲು, ಸಾಮಾಜಿಕ ಕಳಕಳಿ, ಮನುಷ್ಯತ್ವದ ಬಗ್ಗೆ ಅದಮ್ಯ ಪ್ರೀತಿಯುಳ್ಳ ಯುವ ಪೀಳಿಗೆ ರಾಜಕೀಯಕ್ಕೆ ಧುಮುಕುವುದು ಅನಿವಾರ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.