ಮಹಿಳೆಯರ ದುಡಿಮೆ ಸಹಭಾಗಿತ್ವದ ಬಗ್ಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಾ ಬಂದಿವೆ. ಕೆಲವು ಅಧ್ಯಯನಗಳು, ಅದರ ಪ್ರಮಾಣ ಹೆಚ್ಚುವುದರಿಂದ ಮಹಿಳೆಯರ ಬದುಕು ಉತ್ತಮವಾಗುತ್ತದೆ ಎಂದು ವಾದಿಸಿದರೆ, ಮತ್ತೆ ಕೆಲವು ಅಧ್ಯಯನಗಳು ಅದರಿಂದ ಅವರ ಮೇಲಿನ ಹೊರೆ ಹೆಚ್ಚಾಗುತ್ತದೆ ಎಂದು ವಾದಿಸುತ್ತವೆ. ದುಡಿಮೆ ಮಾರುಕಟ್ಟೆಯಲ್ಲಿ ಮಹಿಳೆಯರು ಹೆಚ್ಚು ಹೆಚ್ಚು ಪಾಲ್ಗೊಳ್ಳುವುದರಿಂದ ಅವರಿಗೆ ಬಿಡುಗಡೆ ಸಾಧ್ಯ ಎಂಬ ಉತ್ಸಾಹದ ಸಂಗತಿಯನ್ನು ಕೆಲವು ತಜ್ಞರು ಮಂಡಿಸುತ್ತಿದ್ದಾರೆ.

ಇತ್ತೀಚಿಗೆ ಭಾರತಕ್ಕೆ ಭೇಟಿ ನೀಡಿದ್ದ ಐಎಂಎಫ್ ಮುಖ್ಯಸ್ಥೆ ಕ್ರಿಸ್ಟೀನ್ ಲಗಾರ್ಡ್ ಅವರು ಭಾರತದಲ್ಲಿನ ಮಹಿಳೆಯರ ದುಡಿಮೆ ಸಹಭಾಗಿತ್ವ ಪ್ರಮಾಣವು ಕೆಳಮಟ್ಟದಲ್ಲಿರುವ ಸಂಗತಿಯ ಬಗ್ಗೆ ಮಾತನಾಡಿದ್ದಾರೆ. ನಮ್ಮ ರಾಜ್ಯದಲ್ಲಿ 2011ರಲ್ಲಿ ಪುರುಷರ ದುಡಿಮೆ ಪಾಲ್ಗೊಳ್ಳುವಿಕೆಯು ಶೇ 59ರಷ್ಟಿದ್ದರೆ ಮಹಿಳೆಯರ ಪ್ರಮಾಣ ಕೇವಲ ಶೇ 31.87ರಷ್ಟಿದೆ. ಈ ದುಡಿಮೆ ಸಹಭಾಗಿತ್ವದಲ್ಲಿನ ಭಿನ್ನತೆಯನ್ನು ಲಿಂಗ ಅಸಮಾನತೆಯ ಸೂಚಿಯನ್ನಾಗಿ ಪರಿಗಣಿಸಬಹುದು. ದುಡಿಮೆಯಲ್ಲಿ ಮಹಿಳೆಯರ ಸಹಭಾಗಿತ್ವವು ಹೆಚ್ಚುವುದರಿಂದ ಅವರ ಸ್ವಾತಂತ್ರ್ಯದ ವ್ಯಾಪ್ತಿಯು ಅಧಿಕವಾಗುತ್ತದೆ ಎಂದು ತಜ್ಞರು ವಾದಿಸುತ್ತಿದ್ದಾರೆ.

ಮನೆಯ ಹೊರಗೆ ದುಡಿಮೆಯಲ್ಲಿ ಭಾಗವಹಿಸುವುದರಿಂದ ಮಹಿಳೆಯರಿಗೆ ಹಣಕಾಸಿನ ಮೇಲೆ ನಿಯಂತ್ರಣ ಸಾಧ್ಯವಾಗುತ್ತದೆ. ಹೀಗೆ ಹಣಕಾಸಿನ ಮೇಲಿನ ನಿಯಂತ್ರಣದಿಂದ ಕುಟುಂಬಗಳಲ್ಲಿ ಅವರ ಬಗ್ಗೆ ಗೌರವ ಹೆಚ್ಚುತ್ತದೆ. ಮಹಿಳೆಯರಿಗೆ ತಮ್ಮ ಆರ್ಥಿಕ ಕೊಡುಗೆಯ ಬಗ್ಗೆ ಅರಿವು ಉಂಟಾಗುತ್ತದೆ. ದುಡಿಮೆಯ ಸ್ಥಳದಲ್ಲಿ ಸಹದ್ಯೋಗಿಗಳ ಸಹಯೋಗದಿಂದ ಅವರಿಗೆ ಅನೇಕ ಹೊಸ ವಿಷಯಗಳು ತಿಳಿಯುತ್ತವೆ. ವಿಚಾರ ವಿನಿಮಯದ ಅವಕಾಶ ಅಲ್ಲಿ ಮಹಿಳೆಯರಿಗೆ ದೊರೆಯುತ್ತದೆ.

ದುಡಿಮೆ ಮಾರುಕಟ್ಟೆಯನ್ನು ಹೆಚ್ಚು ಹೆಚ್ಚು ಮಹಿಳೆಯರು ಪ್ರವೇಶಿಸುವುದರಿಂದ ಅವರ ಕೂಲಿಗೆ ಸಂಬಂಧಿಸಿದ ಚೌಕಾಶಿ ಸಾಮರ್ಥ್ಯವು ಉತ್ತಮಗೊಳ್ಳುತ್ತದೆ ಎನ್ನಲಾಗಿದೆ. ಆದರೆ ಅವರು ಪ್ರವೇಶಿಸುವ ಮಾರುಕಟ್ಟೆಯಲ್ಲಿನ ದುಡಿಮೆಯ ಗುಣಮಟ್ಟ ಯಾವ ಬಗೆಯದು ಎಂಬುದು ಇಲ್ಲಿ ನಿರ್ಣಾಯಕವಾಗುತ್ತದೆ. ನಮ್ಮ ರಾಜ್ಯವನ್ನು ತೆಗೆದುಕೊಂಡರೆ ಅಭಿವೃದ್ಧಿಯಲ್ಲಿ ಉನ್ನತ ಸಾಧನೆಯನ್ನು ದಾಖಲಿಸಿರುವ ಹಾಸನ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು ಮುಂತಾದ ಜಿಲ್ಲೆಗಳಲ್ಲಿ ಮಹಿಳೆಯರ ದುಡಿಮೆ ಪಾಲ್ಗೊಳ್ಳುವಿಕೆ ಪ್ರಮಾಣ ಸರಾಸರಿ ಶೇ 36ಕ್ಕಿಂತ ಅಧಿಕವಿದೆ.

ಇದು ರಾಜ್ಯ ಮಟ್ಟದಲ್ಲಿರುವ ಪ್ರಮಾಣಕ್ಕಿಂತ (ಶೇ 31.87) ಅಧಿಕ. ಇದೇ ರೀತಿಯಲ್ಲಿ ರಾಜ್ಯದ ಹಿಂದುಳಿದ ಜಿಲ್ಲೆಗಳಾದ ರಾಯಚೂರು, ಕೊಪ್ಪಳ, ಕಲಬುರ್ಗಿ, ಯಾದಗಿರಿ, ಚಿತ್ರದುರ್ಗ ಮುಂತಾದ ಜಿಲ್ಲೆಗಳಲ್ಲಿಯೂ ಅದು ಶೇ 38ಕ್ಕಿಂತ ಅಧಿಕವಿದೆ. ಹಾಗಾದರೆ ಈ ಎರಡು ಗುಂಪುಗಳಲ್ಲಿಯೂ ಮಹಿಳೆಯರ ಸ್ಥಿತಿಗತಿಯು ಉತ್ತಮವಾಗಿರಬೇಕು ತಾನೆ? ಆದರೆ ಸ್ಥಿತಿಯು ಹಾಗಿಲ್ಲ. ಮಹಿಳೆಯರ ದುಡಿಮೆ ಪಾಲ್ಗೊಳ್ಳುವಿಕೆಯು ಹಿಂದುಳಿದ ಜಿಲ್ಲೆಗಳಲ್ಲಿ ಅಧಿಕ ಮಟ್ಟದಲ್ಲಿದ್ದರೂ ಮಹಿಳಾ ದುಡಿಮೆಗಾರರ ಬದುಕು ತೀವ್ರ ದುಃಸ್ಥಿತಿಯಿಂದ ಕೂಡಿದೆ.

ಆದರೆ ದುಡಿಮೆ ಸಹಭಾಗಿತ್ವ ಪ್ರಮಾಣ ಉತ್ತಮವಾಗಿರುವ ಮುಂದುವರಿದ ಜಿಲ್ಲೆಗಳಲ್ಲಿ ದುಡಿಮೆ ಮಾಡುವ ಮಹಿಳೆಯರ ಬದುಕು ಸಮೃದ್ಧವಾಗಿಲ್ಲದಿದ್ದರೂ ಉತ್ತಮವಾಗಿದೆ. ಇದಕ್ಕೆ ಕಾರಣ ಏನು? ಮಹಿಳೆಯರ ದುಡಿಮೆ ಸಹಭಾಗಿತ್ವವು ಉತ್ತಮಗೊಂಡುಬಿಟ್ಟರೆ ಮಹಿಳೆಯರ ಬದುಕು ಉತ್ತಮಗೊಳ್ಳುತ್ತದೆ ಎಂಬುದು ಅನೇಕ ಪೂರಕ ಸಂಗತಿಗಳನ್ನು ಅವಲಂಬಿಸಿದೆ. ಅವೆರಡರ ನಡುವೆ ಸಂಬಂಧ ನೇರವೂ ಅಲ್ಲ ಮತ್ತು ಅದು ತನ್ನಷ್ಟಕ್ಕೆ ಸಂಭವಿಸುವ ಸಂಗತಿಯೂ ಅಲ್ಲ.

ಮುಂದುವರಿದ ಜಿಲ್ಲೆಗಳಲ್ಲಿ ಮಹಿಳೆಯರು ಹೆಚ್ಚು ಹೆಚ್ಚು ಸಂಘಟಿತ ಮತ್ತು ಸೇವಾ ವಲಯದಲ್ಲಿ ದುಡಿಮೆ ಮಾಡುತ್ತಿದ್ದರೆ, ಹಿಂದುಳಿದ ಜಿಲ್ಲೆಗಳಲ್ಲಿ ಅವರು ಅಸಂಘಟಿತ ಮತ್ತು ಕೃಷಿಯಲ್ಲಿ ಹೆಚ್ಚು ಕಂಡುಬರುತ್ತಾರೆ. ಉದಾಹರಣೆಗೆ ಒಟ್ಟು ಮಹಿಳಾ ದುಡಿಮೆಗಾರರಲ್ಲಿ ಕೃಷಿಯಲ್ಲಿನ ಭೂರಹಿತ ದಿನಗೂಲಿ ಮಹಿಳಾ ದುಡಿಮೆಗಾರರ ಪ್ರಮಾಣ ಮುಂದುವರಿದ ಹಾಸನ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಕ್ರಮವಾಗಿ ಶೇ 30.01, ಶೇ 2.13, ಶೇ 6.54, ಶೇ 32.36 ಮತ್ತು ಶೇ 29.41 ಇದ್ದರೆ ಹಿಂದುಳಿದ ರಾಯಚೂರು, ಕೊಪ್ಪಳ, ಯಾದಗಿರಿ, ಚಿತ್ರದುರ್ಗ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ ಅದು ಕ್ರಮವಾಗಿ ಶೇ 60.85, ಶೇ 61.04, ಶೇ 64.34, ಶೇ 49.27 ಮತ್ತು ಶೇ 57.46ರಷ್ಟಿದೆ.

ರಾಜ್ಯಮಟ್ಟದಲ್ಲಿ ಅದು ಶೇ 40.33ರಷ್ಟಿದೆ. ಮೊದಲನೆಯ ಗುಂಪಿನಲ್ಲಿ ಮಹಿಳೆಯರ ಉದ್ಯೋಗವು ಕಾಯಮಾದುದಾಗಿದೆ ಮತ್ತು ಅದು ಉತ್ತಮ ವರಮಾನವನ್ನು ತರುತ್ತದೆ. ಆದರೆ ಎರಡನೆಯ ಗುಂಪಿನ ಜಿಲ್ಲೆಗಳಲ್ಲಿ ಉದ್ಯೋಗಳು ತಾತ್ಪೂರ್ತಿಕವಾಗಿರುತ್ತದೆ ಮತ್ತು ಅಲ್ಲಿ ಬರುವ ವರಮಾನವು ಕೆಳಮಟ್ಟದಲ್ಲಿರುತ್ತದೆ. ಐಎಂಎಫ್ ಮುಖ್ಯಸ್ಥೆ ಕ್ರಿಸ್ಟೀನ್ ಹೇಳುವಂತೆ ದುಡಿಮೆ ಮಾರುಕಟ್ಟೆಯನ್ನು ಮಹಿಳಾ ದುಡಿಮೆಗಾರರು ಹೆಚ್ಚು ಹೆಚ್ಚು ಪ್ರವೇಶಿಸಿದಂತೆ ಅವರ ಬದುಕು ಉತ್ತಮವಾಗುತ್ತದೆ ಎಂಬುದು ಪೂರ್ಣ ಸರಿಯಲ್ಲ.

ಹೀಗೆ ದುಡಿಮೆ ಮಾರುಕಟ್ಟೆ ಪ್ರವೇಶಿಸುತ್ತಿರುವ ಮಹಿಳಾ ದುಡಿಮೆಗಾರರು ಯಾವ ಬಗೆಯ ಉದ್ಯೋಗದಲ್ಲಿ ನಿರತರಾಗಿದ್ದಾರೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ದುಡಿಮೆ ಸಹಭಾಗಿತ್ವ ಉತ್ತಮವಾಗಿದ್ದರೂ ಹಿಂದುಳಿದ ಜಿಲ್ಲೆಗಳಲ್ಲಿ ಮಹಿಳೆಯರ ಬದುಕು ಉತ್ತಮವಾಗೇನಿಲ್ಲ. ಅಲ್ಲಿ ಮಹಿಳೆಯರ ಸಾಕ್ಷರತಾ ಪ್ರಮಾಣ ಅತ್ಯಂತ ಕೆಳಮಟ್ಟದಲ್ಲಿದೆ, ಇಲ್ಲಿ ಮಹಿಳೆಯರ ಮದುವೆ ವಯೋಮಾನ ಶಾಸನಾತ್ಮಕ ವಯಸ್ಸಿಗಿಂತ ಕೆಳಮಟ್ಟದಲ್ಲಿದೆ. ಅವರಲ್ಲಿ ಅನಿಮಿಯಾ ಎದುರಿಸುತ್ತಿರುವ ಮಹಿಳೆಯರ ಪ್ರಮಾಣ ಹೆಚ್ಚಿಗಿದೆ.

ದುಡಿಮೆಯಲ್ಲಿ ಮಹಿಳೆಯರು ಹೆಚ್ಚು ಭಾಗವಹಿಸುವುದು ಅಭಿವೃದ್ಧಿ ದೃಷ್ಟಿಯಿಂದ ಸ್ವಾಗತಾರ್ಹ. ಲಿಂಗ ಸಮಾನತೆಯನ್ನು ಸಾಧಿಸಿಕೊಳ್ಳುವ ಮಾರ್ಗದಲ್ಲಿ ಇದು ಅತ್ಯಂತ ಮಹತ್ವದ ಹೆಜ್ಜೆಯಾಗಿದೆ. ಯುಎನ್‌ಡಿಪಿಯು 1996ರಲ್ಲಿ ಪ್ರಕಟಿಸಿದ ಮಾನವ ಅಭಿವೃದ್ದಿ ವರದಿಯಲ್ಲಿ ಅಭಿವೃದ್ಧಿಯನ್ನು ಮಹಿಳೀಕರಿಸದಿದ್ದರೆ ಅದಕ್ಕೆ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚರಿಸಿದೆ. ವಿಶ್ವಬ್ಯಾಂಕು ತನ್ನ 2012ರ ವಿಶ್ವ ಅಭಿವೃದ್ಧಿ ವರದಿಯಲ್ಲಿ ಲಿಂಗ ಸಮಾನತೆಯನ್ನು ‘ಸ್ಮಾರ್ಟ್ ಎಕನಾಮಿಕ್ಸ್ ’ ಎಂದು ಕರೆದಿದೆ.

ಮಹಿಳೆಯರು ದುಡಿಮೆಯಲ್ಲಿ ಪಾಲ್ಗೊಳ್ಳುವುದಕ್ಕೆ ಸಂಬಂಧಿಸಿದ ಪ್ರಾದೇಶಿಕ ಆಯಾಮ ಕಡೆಗಣಿಸಬಾರದು. ಅಭಿವೃದ್ಧಿ ಮತ್ತು ದುಡಿಮೆಯಲ್ಲಿ ಸಹಭಾಗಿತ್ವಗಳ ನಡುವಿನ ಸಂಬಂಧವು ಪ್ರದೇಶ-ಪ್ರದೇಶಗಳ ನಡುವೆ ಮತ್ತು ಅಭಿವೃದ್ಧಿ ಮಟ್ಟಕ್ಕೆ ಸಂಬಂಧಿಸಿದಂತೆ ಭಿನ್ನಭಿನ್ನವಾಗಿರುತ್ತದೆ. ಈ ಸಂಬಂಧವನ್ನು ಸಾರಾಸಗಟಾಗಿ ಎಲ್ಲ ಪ್ರದೇಶಗಳಿಗೂ ಸಮಾನವಾಗಿ ಅನ್ವಯಿಸುವುದಕ್ಕೆ ಬರುವುದಿಲ್ಲ. ದುಡಿಮೆಯಲ್ಲಿ ಹೆಚ್ಚು ಭಾಗವಹಿಸುವಂತೆ ಮಾಡುವುದರ ಜತೆಗೆ ಉದ್ಯೋಗಗಳ ಗುಣಮಟ್ಟ ಉತ್ತಮಪಡಿಸುವ ಬಗ್ಗೆ ಗಮನ ನೀಡಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.