ಇತ್ತೀಚೆಗೆ ನಮ್ಮ ಸಂಬಂಧಿಯೊಬ್ಬರ ಮದುವೆಯನ್ನು ನಿಶ್ಚಯ ಮಾಡುತ್ತಿದ್ದರು. ಒಳ್ಳೆಯ ಮುಹೂರ್ತದ ದಿನವನ್ನು ಹುಡುಕುತ್ತಿದ್ದರು. ಒಳ್ಳೆಯ ಮುಹೂರ್ತ ಸಿಕ್ಕರೂ ಮದುವೆ ದಿನ ನಿಗದಿಪಡಿಸಲಾಗದ ಕಾರಣ ಅದು ತುಂಬಿದ ಕುಟುಂಬ. ಮದುವೆಯಾಗುವ ಹೆಣ್ಣು ಮಗಳ ತಂಗಿ ತಮ್ಮಂದಿರ ಪರೀಕ್ಷಾ ಸಮಯ. ತಂಗಿಗೆ ದ್ವಿತೀಯ ಪಿಯುಸಿ ಪರೀಕ್ಷೆ. ತಮ್ಮನಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ, ಚಿಕ್ಕಪ್ಪನ ಮಗಳಿಗೆ ಪದವಿ ಪರೀಕ್ಷೆ. ಇವರೆಲ್ಲರ ಪರೀಕ್ಷೆಯ ದಿನ ಬಿಟ್ಟು ಬೇರೆ ಮುಹೂರ್ತ ಹುಡುಕಬೇಕೆಂದರೆ, ಮೊದಲೇ ಮದುವೆ ಸೀಜನ್‌ನಲ್ಲಿ ಕಲ್ಯಾಣ ಮಂಟಪಗಳ ಕೊರತೆ. ಆ ಸಮಯ ಬಿಟ್ಟರೆ ತಿಂಗಳ ನಂತರ ಮಳೆಗಾಲ ಪ್ರಾರಂಭ!

ದೊಡ್ಡ ಮದುವೆ ಆ ಮಳೆಗಾಲದಲ್ಲಿ ಮಾಡುವುದು ಕಷ್ಟ. ಆ ಮಳೆಗಾಲವನ್ನೂ ಬಿಟ್ಟರೆ ಮುಂದೆ ಮುಹೂರ್ತಕ್ಕಾಗಿ ಆರು ತಿಂಗಳು ಕಾಯಬೇಕು. ಮದುವೆ ನಿಶ್ಚಯವಾದ ವಧುವರರು ಆರು ತಿಂಗಳವರೆಗೂ ಕಾಯಬೇಕಲ್ಲ? ಈ ಎಲ್ಲ ಗೊಂದಲಗಳ ಮಧ್ಯೆ ಮನೆಯವರೆಲ್ಲ ಮಕ್ಕಳ ಪರೀಕ್ಷೆಯನ್ನೇ ಅಲಕ್ಷಿಸಿ ಮುಹೂರ್ತ ನಿಗದಿಪಡಿಸಿದರು.

ವಿಚಿತ್ರವೆಂದರೆ, ಮನೆಯವರೆಲ್ಲರೂ ವಿದ್ಯಾವಂತರಾಗಿದ್ದು ಸಾಕಷ್ಟು ತಿಳಿದವರೂ, ಓದಿಕೊಂಡವರಾದರೂ ಮನೆ ಮಕ್ಕಳ ಭವಿಷ್ಯ ನುಡಿಯುವ ಪರೀಕ್ಷೆಗಳಿಗೆ ಬೆಲೆ ಕೊಡದೆ ಒಳ್ಳೆಯ ಮುಹೂರ್ತದ ಬೆನ್ನುಹತ್ತಿ ಆ ಮಕ್ಕಳ ಪರೀಕ್ಷಾ ದಿನವೇ ಮದುವೆ ಇಟ್ಟುಕೊಂಡರು. ಪಾಪ ಆ ಮಕ್ಕಳು ಅಕ್ಕನ ಮದುವೆ ಮಾಡುವುದಾ ಅಥವಾ ಪರೀಕ್ಷೆ ನೋಡಿಕೊಳ್ಳುವುದಾ?

ಒಂದು ಒಳ್ಳೆಯ ಕೆಲಸವನ್ನು ಮಾಡುವ ಸಮಯವೇ ಒಳ್ಳೆಯ ಮುಹೂರ್ತ. ಅದರಲ್ಲಿಯೂ ಎಲ್ಲರಿಗೂ ಅನುಕೂಲವಾದ ಸಮಯ ಎಲ್ಲಕ್ಕಿಂತ ಒಳ್ಳೆಯ ಮುಹೂರ್ತ. ಹಾಗೆಂದೇ ನಮ್ಮ ರಸಋಷಿ ಕುವೆಂಪು ಇಂತಹ ಮುಹೂರ್ತ–ಮಂತ್ರ ಮೌಢ್ಯತೆಗಳನ್ನು ದೂರವಿಟ್ಟು ರಾತ್ರಿ ಹನ್ನೆರಡು ಗಂಟೆಗೆ ಯಾವ ಹತ್ತು ಹನ್ನೆರಡು ಶಾಸ್ತ್ರಗಳ ಎಗ್ಗಿಲ್ಲದೆ ಸರಳವಾಗಿ ಮದುವೆಯಾಗಿ ಜೀವನದುದ್ದಕ್ಕೂ ಸುಖೀ ದಾಂಪತ್ಯವನ್ನು ಹೊಂದಿದರು.

ಇತ್ತೀಚೆಗೆ ನಮ್ಮ ದೃಶ್ಯ ಮಾಧ್ಯಮಗಳು ಮುಂಜಾನೆಯೇ ಮುಹೂರ್ತ ಮಂತ್ರ ಇತ್ಯಾದಿ ಅಂಧಶ್ರದ್ಧೆಗೆ ಸಂಬಂಧಿಸಿದಂತೆ ಭವಿಷ್ಯರಾಶಿ, ಭವಿಷ್ಯವಾಣಿ, ಅಕ್ಷತತ್ವ, ವೈಜ್ಞಾನಿಕ ದಾರಿಯಲ್ಲಿ ವಾಸ್ತು ಜೋತಿಷ, ಸಂಖ್ಯಾ ಭವಿಷ್ಯ, ಮಹರ್ಷಿ ಜೋತಿಷ, ಕಲ್ಯಾಣ ಮಸ್ತು, ರಾಶಿಫಲ ಎಂಬಿತ್ಯಾದಿ ಕಾರ್ಯಕ್ರಮ ಪ್ರಸಾರ ಮಾಡುತ್ತಿವೆ. ಆರೋಗ್ಯ ಹಾಗೂ ವೈಯಕ್ತಿಕ ಸಮಸ್ಯೆಗಳಿಗೆ ಶೀಘ್ರ ಪರಿಹಾರ, ಅದೃಷ್ಟ ಭಾಗ್ಯ ಪಡೆಯುವ ರಹದಾರಿ, ಯಾವ ರಾಶಿಯವರು ಯಾವ ದೇವರನ್ನು ಆರಾಧಿಸಬೇಕು, ಅದೃಷ್ಟ ಪಡೆಯುವುದು ಹೇಗೆ ಎಂದೆಲ್ಲ ಗುಟ್ಟನ್ನು ಬಿಡಿಸಿ ಹೇಳುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ ಜನರಲ್ಲಿ ಮತ್ತಷ್ಟು ಮೌಢ್ಯತೆ ಬೆಳೆಯುವಂತೆ ಮಾಡುವುದರೊಂದಿಗೆ ವೀಕ್ಷಕರ ಹಣ ಮತ್ತು ಸಮಯವನ್ನು ವ್ಯರ್ಥ ಮಾಡುತ್ತಿವೆ.

ಇಂತಹ ಒಂದು ಕಾರ್ಯಕ್ರಮವಂತೂ ದಂಗುಬಡಿಸುವಂತಹದು. ಈ ಕಾರ್ಯಕ್ರಮದಲ್ಲಿ ಮಹಾಧನಲಕ್ಷ್ಮಿ ಮಹಾಯಂತ್ರವನ್ನು ಮಾರುತ್ತಾರೆ. ಅವರ ಹೇಳಿಕೆಯ ಪ್ರಕಾರ ಋಷಿಮುನಿಗಳು ತಯಾರಿಸಿದ ಯಂತ್ರವನ್ನು ಧರಿಸಿದಲ್ಲಿ ಮೂರೇ ಮೂರು ತಿಂಗಳಿನಲ್ಲಿ ದಾರಿದ್ರ್ಯ ನಾಶವಾಗಿ ಸಂಪೂರ್ಣ ಶ್ರೀಮಂತಿಕೆ ಬರುತ್ತದೆ. ಮುಂದೆಂದೂ ಹಣದ ಕೊರತೆ ಕಾಣಿಸಿಕೊಳ್ಳುವುದಿಲ್ಲ. ಅವರ ಹೇಳಿಕೆಯಂತೆ ಆ ಯಂತ್ರವನ್ನು ಪಡೆದವರು ಧನವಂತರಾಗುತ್ತಾರೋ ಬಿಡುತ್ತಾರೋ ಆದರೆ ಇಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಚಾನೆಲ್‌ಗಳ ವ್ಯವಸ್ಥಾಪಕರು ಹಾಗೂ ಯಂತ್ರ ಮಾರುವವರು ಖಂಡಿತವಾಗಿ ಧನವಂತರಾಗಿ ಧನ್ಯರಾಗುತ್ತಾರೆ.

ಈ ಗ್ರಹಗಳ ರಾಶಿಗಳ ಬಗ್ಗೆ ಭವಿಷ್ಯ ನುಡಿಯುವ ಬದಲು ನಿಜವಾದ ಗ್ರಹಗಳ ಅಥವಾ ಸೌರಮಂಡಲದ ಬಗ್ಗೆ ಮಾಹಿತಿಯನ್ನು ನೀಡುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದ್ದಲ್ಲಿ ಸಾಮಾನ್ಯ ಜನರೂ ಖಗೋಳ ಶಾಸ್ತ್ರವನ್ನು ಅರಿಯುವಂತಾಗುತ್ತಿತ್ತು.

ಖಗೋಳದಂತಹ ವಿಷಯ ದೊಡ್ಡದೆನ್ನಿಸಿದರೆ, ಸಾಮಾನ್ಯ ವಿಜ್ಞಾನದಂತಹ ವಿಷಯಗಳನ್ನು ತೋರಿಸಬಹುದಿತ್ತು. ಅದೂ ಹೋಗಲಿ ಮನೆ, ಮಠ, ಊರು ಕೇರಿಯ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಮಷ್ಟಿ ಪ್ರಜ್ಞೆಯನ್ನಿಟ್ಟುಕೊಂಡು ಸಮಾಜಕ್ಕೆ ಒಳ್ಳೆಯದಾಗುವಂತಹ, ದೇಶದ ಪ್ರಗತಿಗೆ ಸಹಕಾರಿ ಆಗುವಂತಹ, ಜನರಲ್ಲಿ ದುಡಿಯುವ, ಬೆಳೆಯುವ, ಉತ್ಪಾದಿಸುವ, ಏನನ್ನಾದರೂ ಅಗಾಧವಾದುದನ್ನು ಸಾಧಿಸುವ ಮನೋಭಾವವನ್ನು ಬೆಳೆಸುವಂತಹ ಕಾರ್ಯಕ್ರಮಗಳನ್ನು ನೀಡಿ, ಆರ್ಥಿಕ ವೈಚಾರಿಕತೆಯ ಪ್ರವರ್ತಕರಾಗಬೇಕಿದ್ದ ನಮ್ಮ ಟಿವಿ ಚಾನೆಲ್‌ಗಳು, ‘ಆ ರಾಶಿಯವರಿಗೆ ಅಪಾಯ ತಪ್ಪಿದ್ದಲ್ಲ, ಈ ರಾಶಿಯವರು ಇಂತಹ ಸಮಯದಲ್ಲಿ ಹೊರಗೆ ಹೋಗಬಾರದು, ಪ್ರಯಾಣಿಸಬಾರದು’ ಎಂಬಂತಹ ಅರ್ಥಹೀನ ಭವಿಷ್ಯ ನುಡಿಯುತ್ತ ತಮ್ಮ ಸ್ವಂತ ಲಾಭಕ್ಕೋಸ್ಕರ ಬೆಳ್ಳಂಬೆಳಿಗ್ಗೆ ಜನರ ಮನಸ್ಸು ಕಲಕಿ ಅವರಲ್ಲಿ ಸಂಶಯವನ್ನು ಮೂಢನಂಬಿಕೆಗಳನ್ನು ಬಿತ್ತಿಬೆಳೆಯುವ ಕೆಲಸದಲ್ಲಿ ಭಾಗಿಯಾಗುತ್ತಿರುವುದು ಸದ್ಯದ ಸಾಮಾಜಿಕ ಸಂದರ್ಭದ ದುರ್ದೈವವಾಗಿದೆ.

ಟಿಆರ್‌ಪಿಗಾಗಿ ಹಂಬಲಿಸುವ ಟಿವಿ ಚಾನೆಲ್‌ಗಳು ಇಂತಹ ಕಾರ್ಯಕ್ರಮಗಳ ಮೂಲಕ ಅಜ್ಞಾನಯುತ ವಿಚಾರಗಳನ್ನು ಜನರಲ್ಲಿ ತುಂಬಿ ಬೌದ್ಧಿಕ ದಾರಿದ್ರ್ಯವನ್ನು ಹುಟ್ಟುಹಾಕುತ್ತಿವೆ. ಇಂತಹ ಕಾರ್ಯಕ್ರಮಗಳ ನಿಯಂತ್ರಣಕ್ಕೆ ಪರಿಹಾರ ಹುಡುಕುವುದು ಅಗತ್ಯ. ಅತಿಯಾದ ಮೂಢನಂಬಿಕೆಗಳನ್ನು ಬಿತ್ತರಿಸಲು ಅವಕಾಶ ಇರಬಾರದು. ಜನರ ದುಡಿಯುವ ಪ್ರವೃತ್ತಿಗೆ ಭಂಗ ತರುವಂತಿರಬಾರದು ಎಂದೆಲ್ಲ ನಿಯಮಗಳನ್ನು ಹೇರುವ ಅಗತ್ಯವಿದೆ. ಇಲ್ಲದಿದ್ದರೆ ಜನರೇ ಜಾಗೃತಗೊಂಡು ಇಂತಹ ಮೌಢ್ಯತೆಗಳ ಮುಸುಕಿನಿಂದ ಹೊರಬರಬೇಕಿದೆ.

ದೇವರು, ಧರ್ಮದ ಹೆಸರಿನಲ್ಲಿ ಯಾವುದೇ ನಂಬಿಕೆಯನ್ನು ಹುಟ್ಟಿಸಿದರೂ ಅದನ್ನು ವಿದ್ಯಾವಂತರೂ ನಂಬುತ್ತಾರೆ. ಹಿಂದೆ ಪೋಸ್ಟ್ ಕಾರ್ಡಿನಲ್ಲಿ ದೇವರ ಹೆಸರಿನಲ್ಲಿ ಯಾವುದೋ ಒಂದು ಮಂತ್ರ ಬರೆದು ಇದನ್ನು ನೀವೂ ಹೀಗೇ ಬರೆದು ಹತ್ತು ಜನರಿಗೆ ಕಳುಹಿಸಬೇಕು. ಕಳುಹಿಸಿದರೆ ನಿಮ್ಮ ಇಷ್ಟಾರ್ಥಗಳು ಸಿದ್ಧಿಯಾಗುವವು. ಇಲ್ಲದಿದ್ದರೆ ಖಂಡಿತವಾಗಿ ನಿಮಗೆ ಕೆಡುಕಾಗುವುದು ಎಂಬ ಒಕ್ಕಣೆ ಹೊತ್ತ ಪತ್ರಗಳು ಬರುತ್ತಿದ್ದವು. ಅಂತಹ ಒಕ್ಕಣೆಗೆ ಹೆದರಿದ ಜನರು ಮತ್ತೆ ಹತ್ತು ಜನರಿಗೆ ಈ ಬಗೆಯ ಕಾರ್ಡುಗಳನ್ನು ಕಳುಹಿಸುತ್ತಿದ್ದರು. ನಿನ್ನೆ ಮೊನ್ನೆಯಷ್ಟೆ ಇದೇ ತರಹದ ಒಕ್ಕಣೆಯನ್ನು ವಾಟ್ಸ್‌ಆ್ಯಪ್‌ನಲ್ಲಿ ಕಂಡು ದಂಗಾಗಿ ಹೋದೆ. ಅದೇ ರಾಗ ತಾಳ ಮಾತ್ರ ಬೇರೆ ಎಂಬಂತೆ ಅಂದು ಕಾರ್ಡಿನಲ್ಲಿ ಇಂದು ವಾಟ್ಸ್‌ಆ್ಯಪ್‌ನಲ್ಲಿ ಇಂತಹ ಅರ್ಥಹೀನ ವಿಷಯಗಳು ಓಡಾಡುತ್ತಿವೆ.

ಇದರರ್ಥ ವಿಜ್ಞಾನ ಸಾಕಷ್ಟು ಬೆಳೆದರೂ ಮೌಢ್ಯತೆ ಮಾತ್ರ ಇನ್ನೂ ಹಾಗೇ ಮನೆಮಾಡಿದೆ. ಇದನ್ನು ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆಯಿಂದ ಮಾತ್ರ ತೊಲಗಿಸಲು ಸಾಧ್ಯ. ಜನರಲ್ಲಿ ಈ ಮನೋಭಾವವನ್ನು ಬೆಳೆಸುವುದು ಮಾಧ್ಯಮಗಳ ಕರ್ತವ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.