ಕಾರ್ಲ್ ಮಾರ್ಕ್ಸ್ (1853) ಸರಿಯಾಗಿ ನುಡಿದಿರುವಂತೆ ಭಾರತದಲ್ಲಿ ವಸಾಹತುಶಾಹಿಯು ಎರಡು ಬಗೆಯ ಕೆಲಸವನ್ನು ಮಾಡಿತು. ಮೊದಲನೆಯದು ವಿನಾಶಾತ್ಮಕವಾದುದಾಗಿದ್ದರೆ ಎರಡನೆಯದು ವಿಧಾಯಕ ಸ್ವರೂಪದ್ದಾಗಿತ್ತು.

ನಮ್ಮ ದೇಶದ ದಲಿತ ಮತ್ತು ಶೂದ್ರ ಜಾತಿ/ವರ್ಗಗಳ ವಿಮೋಚನೆಗೆ ಅನುವು ಮಾಡಿಕೊಟ್ಟಿದ್ದು ವಸಾಹತುಶಾಹಿಯ ಬಹು ದೊಡ್ಡ ವಿಧಾಯಕ ಕಾರ್ಯವಾಗಿದೆ. ಅತ್ಯಂತ ವ್ಯವಸ್ಥಿತವಾಗಿ ಅದರ ಈ ಕೊಡುಗೆಯನ್ನು ವಿಕೃತಗೊಳಿಸುವ - ಮತ್ತು ತಳ್ಳಿ ಹಾಕುವ ಒಂದು ಶೈಕ್ಷಣಿಕ ಪ್ರಯತ್ನ ಇಂದು ಭಾರತದಲ್ಲಿ ನಡೆಯುತ್ತಿದೆ.

ಅದರ ಒಂದು ಭಾಗವಾಗಿ ಡಂಕಿನ್ ಝಳಕಿ ಮತ್ತು ಎಸ್.ಎನ್.ಬಾಲಗಂಗಾಧರ ಅವರು ವಚನ ಸಂಸ್ಕೃತಿಯನ್ನು ಕುರಿತಂತೆ ನಡೆಸಿರುವ ಸಂಶೋಧನೆಯನ್ನು ಪರಿಭಾವಿಸಿಕೊಳ್ಳುವ ಅಗತ್ಯವಿದೆ. ಎಚ್.ಎಸ್. ಶಿವಪ್ರಕಾಶ ಅವರು ಗುರುತಿಸಿರುವಂತೆ (ಪ್ರಜಾವಾಣಿ,ಮಾ.15) ವಚನ ಸಂವಿಧಾನದಲ್ಲಿ ಮಂಡಿತವಾಗಿರುವ ಜಾತಿ ವಿರೋಧಿ ಪ್ರಣಾಳಿಕೆಯ ಬಗ್ಗೆ ಬೇರೆ ಬೇರೆ ರೀತಿಯಲ್ಲಿ ವಸಾಹತುಶಾಹಿ ಪೂರ್ವದಲ್ಲೂ ಚರ್ಚೆಗಳು ಕನ್ನಡದಲ್ಲಿ ನಡೆದಿವೆ. ವಚನ ಸಂಸ್ಕೃತಿಯ ಜಾತಿ ವಿರೋಧಿ ಪ್ರಣಾಳಿಕೆಯು ವಸಾಹತುಶಾಹಿಯು ಹುಟ್ಟು ಹಾಕಿರುವ ವಿಕಾರ ಎನ್ನುವ ಈ ಸಂಶೋಧಕರ ವಾದವನ್ನು ಒಪ್ಪುವುದು ಕಷ್ಟ.

ಈ ಸಂಶೋಧನೆಗೆ ಸಂಬಂಧಿಸಿದಂತೆ ಎರಡು ಸಮಸ್ಯೆಗಳಿವೆ. ಮೊದಲನೆಯದು ಅವರು ಅಳವಡಿಸಿಕೊಂಡಿರುವ ಅಧ್ಯಯನ ವಿಧಾನ. ಎರಡನೆಯದು ವಚನ ಸಂಸ್ಕೃತಿಯನ್ನು ಅವರು ಗ್ರಹಿಸಿರುವ ಬಗೆ. ಈ ಸಂಶೋಧನೆಯಲ್ಲಿ ಜಾತಿ ವಿರೋಧಿ ಧೋರಣೆಯು ವಚನಗಳಲ್ಲಿ ಎಷ್ಟು ಬಾರಿ ಮಂಡಿತವಾಗಿದೆ ಎಂಬುದನ್ನು ಸಂಖ್ಯೆಗಳ ಮೂಲಕ ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ. ಇದು ಸಮಾಜವಿಜ್ಞಾನಗಳಲ್ಲಿ ಪ್ರಚಲಿತದಲ್ಲಿರುವ `ಪಾಸಿಟಿವಿಸ್ಟ್ ಅಧ್ಯಯನ ವಿಧಾನ'ದ ಒಂದು ಮಾದರಿ. ಅಲ್ಲಿ ಪುರಾವೆಗಳಿಗೆ ಮನ್ನಣೆ ಇರುತ್ತದೆ ವಿನಾ ಅನುಭವವನ್ನು ಆಧಾರವನ್ನಾಗಿ ಬಳಸುವುದಿಲ್ಲ. ಅದನ್ನು ರಾಗದ್ವೇಷದಿಂದ ಕೂಡಿದ ಸಂಗತಿಯೆಂದು ತಳ್ಳಿಹಾಕಲಾಗುತ್ತದೆ.

ಅನುಭವನ್ನು ಆಧರಿಸಿದ ಅಧ್ಯಯನಗಳಲ್ಲಿ ವಸ್ತುನಿಷ್ಠತೆಯು ಸಾಧ್ಯವಿಲ್ಲ ಎಂಬುದು ಸದರಿ ವಿಧಾನದ ನಂಬಿಕೆ. ಈ ವಿಧಾನದ ಇತಿಮಿತಿಗಳ ಬಗ್ಗೆ ಕಳೆದ ಹತ್ತಾರು ದಶಕಗಳಿಂದ ಚರ್ಚೆಗಳು ನಡೆಯುತ್ತಿವೆ. ಈ ವಿಧಾನಕ್ಕೆ ಪ್ರತಿಯಾಗಿ ಅರ್ಥಗ್ರಹಣ ಪದ್ದತಿ, ಕ್ರಿಟಿಕಲ್ ಸಿದ್ಧಾಂತ, ಖಚಿತ ನಿಲುವಿನ ವಿಧಾನ ಮುಂತಾದವು ವ್ಯಾಪಕವಾಗಿ ಬಳಕೆಯಾಗುತ್ತಿವೆ. ಈ ಸಂಶೋಧಕರ ಪ್ರಕಾರ ವಚನಗಳಲ್ಲಿ `ಜಾತಿ ವಿರೋಧಿ' ನಿಲುವು ಖಚಿತವಾಗಿ ಮತ್ತು ಶೇಕಡವಾರು ಹೆಚ್ಚಾಗಿ ಪ್ರಟವಾಗಿಲ್ಲ ಎಂಬ ಪ್ರಮೇಯದ ಮೇಲೆ ತಮ್ಮ `ವಚನಗಳು ಜಾತಿ ವ್ಯವಸ್ಥೆಯ ವಿರುದ್ಧ ಮಾತನಾಡುವುದಿಲ್ಲ' ಎಂಬ ನಿರ್ಣಯವನ್ನು ಕಟ್ಟಿದ್ದಾರೆ. ಹಾಗಾದರೆ ವಚನಗಳಲ್ಲಿ ಎಷ್ಟು ಬಾರಿ ಜಾತಿ ಅನ್ನುವ ನುಡಿ ಬಂದಿದ್ದರೆ ಅದು ಜಾತಿ ವಿರೋಧಿ ಪ್ರಣಾಳಿಕೆಯಾಗುತ್ತಿತ್ತು?

ಒಂದು ಚಾರಿತ್ರಿಕ ದಾಖಲೆಯನ್ನು ಅಧ್ಯಯನಕ್ಕೆ ಅಳವಡಿಸಿಕೊಳ್ಳುವ ಕ್ರಮ ಇದಲ್ಲ. ಒಂದು ಕೃತಿ ಹುಟ್ಟಿಕೊಳ್ಳಲು ಚಾರಿತ್ರಿಕ ಸಂದರ್ಭ ಎನ್ನುವುದಿರುತ್ತದೆ. ಯಾವ ಬಗೆಯ ಸಾಮಾಜಿಕ ಸಂಬಂಧಗಳು ಅಲ್ಲಿದ್ದವು ಎಂಬುದು ಮುಖ್ಯವಾಗುತ್ತದೆ. ಅಲ್ಲಿ ಬಳಸಿರುವ ನುಡಿಗಳು ತೆರೆದ ರೀತಿಯಲ್ಲಿ ಹೇಳುತ್ತಿರುವುದಕ್ಕಿಂತ ಪ್ರಚ್ಛನ್ನವಾಗಿ ಹೇಳದಿರುವ, ಹೇಳುತ್ತಿರುವುದಕ್ಕಿಂತ ಮತ್ತೇನನ್ನೋ ಅವು ಸೂಚಿಸುತ್ತಿರುವ ಅನೇಕ ಸಂಗತಿಗಳಿರುತ್ತವೆ.

ವಚನಗಳಲ್ಲಿರುವ ಜಾತಿ ವಿರೋಧಿ ಪ್ರಣಾಳಿಕೆಯನ್ನು ಗುರುತಿಸಲು ಅವುಗಳಲ್ಲಿ ಜಾತಿ ಎಂಬ ನುಡಿ ಎಷ್ಟು ಸಾರಿ ಬಂದಿದೆ ಎಂಬುದನ್ನು ಆಧಾರವಾಗಿಟ್ಟುಕೊಳ್ಳುವುದು ಸೀಮಿತ ದೃಷ್ಟಿಕೋನವಾಗುತ್ತದೆ. ವಚನಗಳಲ್ಲಿ ಅನೇಕ ರೀತಿಯಲ್ಲಿ ಜಾತಿ ವ್ಯವಸ್ಥೆಯನ್ನು, ಅದು ಹುಟ್ಟು ಹಾಕಿದ್ದ ಅಸಮಾನತೆಗಳನ್ನು (ಅದು ಕೇವಲ ವರಮಾನದಲ್ಲಿನ ಅಸಮಾನತೆಯಲ್ಲ), ಅಂದು ದಲಿತರು ಮತ್ತು ಶೂದ್ರರು ಅನುಭವಿಸುತ್ತಿದ್ದ ಶೋಷಣೆಯ ಸ್ವರೂಪವನ್ನು ವಿವಿಧ ಬಗೆಗಳಲ್ಲಿ ಚರ್ಚಿಸಿದ್ದಾರೆ.

`ಕೂಡಲಸಂಗಮದೇವರು ಮಾದಾರ ಚನ್ನಯ್ಯನ ಮನೆಯಲುಂಡ ಕಾರಣ ವೇದ ನಡುನಡುಗಿತ್ತು' ಎಂಬ ಬಸವಣ್ಣನ ಮಾತಿನಲ್ಲಿ ಜಾತಿ ನುಡಿಯಿಲ್ಲ. ಆದರೆ ಇದು ಜಾತಿ ವಿರೋಧಿ ಪ್ರಸ್ಥಾನವಲ್ಲವೆಂದು ಹೇಗೆ ಹೇಳುವುದು? `ಬ್ರಾಹ್ಮಣ ಬಯಲು ಮತ್ತು ಹೊಲೆ ಬಯಲು'ಗಳ ನಡುವಿನ ಭಿನ್ನತೆಯು ಸಾಮಾಜಿಕವಾಗಿ ಕಟ್ಟಿಕೊಂಡಿದ್ದೇ ವಿನಾ ಅದು ಜೈವಿಕವಾದುದಲ್ಲ ಎಂಬ ಬೊಂತಾದೇವಿಯ ಸಿದ್ಧಾಂತವನ್ನು ಅಲ್ಲಿ `ಜಾತಿ'ಯ ಬಗ್ಗೆ ಉಲ್ಲೇಖವಿಲ್ಲವೆಂದು ತಿಳಿದು ಅದನ್ನು ತಳ್ಳಿಹಾಕಲು ಬರುತ್ತದೆಯೇ? `ಎನ್ನ ಕಷ್ಟಕುಲದಲ್ಲಿ ಹುಟ್ಟುಸಿದೆಯಯ್ಯೊ, ಎಲೆ ಲಿಂಗ ತಂದೆ, ಕೆಟ್ಟೆನಯ್ಯೊ, ನಿಮ್ಮ ಮುಟ್ಟಿಯೂ ಮುಟ್ಟದಿಹನೆಂದು, ಎನ್ನ ಕೈ ಮುಟ್ಟದಿರ್ದಡೆ ಮನ ಮುಟ್ಟಲಾಗದೆ' ಎನ್ನುವ ಡೋಹರ ಕಕ್ಕಯ್ಯನ ವಚನದಲ್ಲಿನ ಜಾತಿ ವ್ಯವಸ್ಥೆಯ ಬಗೆಗಿನ ಕಕ್ಕಯ್ಯ ಮೀಮಾಂಸೆಯನ್ನು ಜಾತಿ ವಿರೋಧವಲ್ಲವೆಂದು ಪರಿಭಾವಿಸಿಕೊಳ್ಳುವುದು ಸಾಧ್ಯವೇ?

ವಚನ ಸಂಸ್ಕೃತಿಯ ಬಗ್ಗೆ ವಸಾಹತುಶಾಹಿಯು ಕಟ್ಟಿದ್ದ ಮೀಮಾಂಸೆಯನ್ನು ನಮ್ಮ ವಿದ್ವಾಂಸರು ಮತ್ತು ಅಧ್ಯಯನಕಾರರು ಒಪ್ಪಿಕೊಂಡು ಕುರುಡು ಕುರುಡಾಗಿ ಅದನ್ನು ಅನುಸರಿಸುತ್ತಿದ್ದಾರೆಂಬ ಝಳಕಿ ಮತ್ತು ಬಾಲಗಂಗಾಧರ ಅವರ ಸಂಶೋಧನೆಯನ್ನು ಪೂರ್ವಗ್ರಹ ಪೀಡಿತವಾದುದೆಂದು ಹೇಳದೆ ವಿಧಿಯಿಲ್ಲ. ಏಕೆಂದರೆ ಈ ಸ್ಕೂಲಿನ ಮೂಲ ಪ್ರಣಾಳಿಕೆಯಾದ `ಜಾತಿ' ಎಂಬುದು ಭಾರತದಲ್ಲಿ ಇಲ್ಲ, ಅದು ವಸಾಹತುಶಾಹಿಯು ಕಟ್ಟಿರುವ ಒಂದು ಭ್ರಮಾಧೀನ ಪ್ರಮೇಯ. ಅದನ್ನು ಭಾರತದಲ್ಲಿ ವಿದ್ವಾಂಸರು ಒಪ್ಪಿಕೊಂಡು ಅನುಸರಿಸುತ್ತಿದ್ದಾರೆ ಎಂಬ ಸಂಗತಿಗಳನ್ನು ಸಾಧಿಸಲು ಹಮ್ಮಿಕೊಂಡಿರುವ ಬೃಹತ್ ಅಧ್ಯಯನ ಯೋಜನೆಯೊಂದರ ಭಾಗವಾಗಿ ಅವರು ವಚನ ಸಂಸ್ಕೃತಿಯನ್ನು ಕುರಿತ ತಮ್ಮ ಅಧ್ಯಯನವನ್ನು ಒಂದು ಸಾಧನವಾಗಿ ಬಳಸಿಕೊಳ್ಳುತ್ತಿದ್ದಾರೆ.

ವಸಾಹತುಶಾಹಿಯು ಭಾರತದ ತಳ ಸಮುದಾಯಗಳಿಗೆ ನೀಡಿದ ಬಿಡುಗಡೆಯ ಕೊಡುಗೆಯನ್ನು ಅಲ್ಲಗಳೆಯುವುದು ಪ್ರಸ್ತುತ ಸ್ಕೂಲಿನ ಅಜೆಂಡವಾಗಿದೆ. ಆ ಮೂಲಕ ಭಾರತೀಯ ಸಂಸ್ಕೃತಿಯ ಹಿರಿಮೆಯನ್ನು ಮರುಪ್ರತಿಷ್ಠಾಪಿಸುವ ಕಾರ್ಯದಲ್ಲಿ ಸದರಿ ಸ್ಕೂಲು ನಿರತವಾಗಿದೆ. ಅವರ ಈ ಬೃಹತ್ ಅಜೆಂಡದ ಭಾಗವಾಗಿ ವಚನ ಸಂಸ್ಕೃತಿಯ ಬಗೆಗಿನ ಅವರ ಟೀಕೆಯನ್ನು ನಾವು ಪರಿಶೀಲಿಸಬೇಕಾಗಿದೆ.

ವಸಾಹತುಶಾಹಿಯ ಹಿಡಿತಕ್ಕೆ ಭಾರತವು 17-18ನೆಯ ಶತಮಾನಗಳಲ್ಲಿ ಸಿಲುಕಿಕೊಳ್ಳದೇ ಹೋಗಿದ್ದರೆ, ಈ ನಾಡಿನ ದಲಿತರ ಮತ್ತು ಶೂದ್ರರ ಸಾಮಾಜಿಕ ವಿಮೋಚನೆಯು- ಅದೆಷ್ಟೇ ಸೀಮಿತವಾದುದಾಗಿರಲಿ- ದೊರೆಯದೆ ಹೋಗಿದ್ದರೆ ಅದು ಇನ್ನೂ ನೂರಾರು ವರ್ಷ ಮುಂದೆ ಹೋಗುತ್ತಿತ್ತು ಎಂಬುದನ್ನು ಈ ಸಂಶೋಧಕರು ತಿಳಿದುಕೊಳ್ಳಬೇಕು. ಈ ಸ್ಕೂಲಿನ ವಿದ್ವಾಂಸರು ಭಾರತದಲ್ಲಿನ ಬ್ರಾಹ್ಮಣೇತರ ಚಳವಳಿಗಳೆಲ್ಲವನ್ನೂ ಹೇಗೆ ಅಪಮೌಲ್ಯಗೊಳಿಸುತ್ತಾ ಹೋಗುತ್ತಿದ್ದಾರೆ ಎಂಬುದರ ಒಂದು ನಮೂನೆ ವಚನ ಸಂಸ್ಕೃತಿಯ ಬಗೆಗಿನ ಪ್ರಸ್ತುತ ಪೂರ್ವಗ್ರಹ ಪೀಡಿತ ಅಧ್ಯಯನ.

ಈ ಸ್ಕೂಲು ಉತ್ಪಾದಿಸುತ್ತಿರುವ ಅಧ್ಯಯನ ವರದಿಗಳನ್ನು, ಅದು ಮಂಡಿಸುತ್ತಿರುವ ಪ್ರಮೇಯಗಳನ್ನು, ಅದು ರೂಪಿಸುತ್ತಿರುವ ಸೈದ್ಧಾಂತಿಕ ನಿರ್ಣಯಗಳನ್ನು ಕರ್ನಾಟಕಸ್ಥರು ಗಂಭಿರವಾಗಿ ಪರಿಗಣಿಸುತ್ತಿಲ್ಲ. ಅವರ ಸಂಶೋಧನೆಗಳ ಕುರಿತಂತೆ ಅನುಸಂಧಾನವನ್ನು ನಾಡಿನ ಚಿಂತಕರು ನಡೆಸುತ್ತಿಲ್ಲ. ಇದರಿಂದ ಬೇಸತ್ತ ಪ್ರಸ್ತುತ ಸ್ಕೂಲಿನ ವಿದ್ವಾಂಸರು ಪ್ರಚೋದನಾತ್ಮಕ ಸಂಗತಿಗಳನ್ನು ಈಗ ಹುಟ್ಟು ಹಾಕುತ್ತಿದ್ದಾರೆ. ವಚನ ಸಂಸ್ಕೃತಿಯ ಬಗೆಗಿನ ಅವರ ಅಧ್ಯಯನವು ಅಂತಹ ಕ್ರಮದ ಒಂದು ಉದಾಹರಣೆಯಾಗಿದೆ. ಈ ಸ್ಕೂಲು ಯಾವುದನ್ನು ಭಾರತೀಯವೆಂದು ಪರಿಭಾವಿಸಿಕೊಳ್ಳುತ್ತಿದೆಯೋ ಅದರಲ್ಲಿ ಸ್ಥಳೀಯವಾದ ವೈಚಾರಿಕ ಧಾರೆಗಳಿಗೆ ಅವಕಾಶವಿಲ್ಲ. ಇದನ್ನು ಗಟ್ಟಿಗೊಳಿಸುವ ಕೆಲಸವನ್ನು ಇಲ್ಲಿ ಮಾಡಲಾಗುತ್ತಿದೆ.

ಅಕ್ಕಮಹಾದೇವಿಯು ಭಾರತೀಯ ಸಂಸ್ಕೃತಿಯು ಕಟ್ಟಿದ್ದ ಸೂತಕದ ಆಚರಣೆಯನ್ನು ತಿರಸ್ಕರಿಸುತ್ತಾ `ಎನ್ನ ದೇವ ಚನ್ನಮಲ್ಲಿಕಾರ್ಜುನನೆಂಬ ಗರುವಂಗೆ ಜಗವೆಲ್ಲ ಹೆಣ್ಣು ನೋಡಾ' ಎಂದರೆ ಸಿದ್ದರಾಮಣ್ಣನು `ಹೆಣ್ಣು ಹೆಣ್ಣಲ್ಲ, ಹೆಣ್ಣು ರಾಕ್ಷಸಿಯಲ್ಲ, ಹೆಣ್ಣು ಪ್ರತ್ಯಕ್ಷ ಕಪಿಲ ಸಿದ್ದಮಲ್ಲಿಕಾರ್ಜುನ ನೋಡಾ' ಎನ್ನುತ್ತಾನೆ. `ಹೆಣ್ಣು ರಾಕ್ಷಸಿ' ಎಂದು ಯಾವ ಸಂಸ್ಕೃತಿ ಪರಿಭಾವಿಸಿಕೊಂಡಿತ್ತು ಎಂಬುದನ್ನು ಇಲ್ಲಿ ವಿವರಿಸುವ ಅಗತ್ಯವಿಲ್ಲ. ಇಲ್ಲಿ ಜಾತಿಯ ಬಗ್ಗೆ ಯಾವುದೇ ಸೂಚನೆಯಿಲ್ಲ.

ಆದರೆ ವಚನಕಾರರು ಯಾವ ಸಂಸ್ಕೃತಿಯನ್ನು ವಿರೋಧಿಸುತ್ತಿದ್ದರೋ ಅದರ ಅವಿಭಾಜ್ಯ ಅಂಗವಾಗಿದ್ದ ಸೂತಕವನ್ನು ತಿರಸ್ಕರಿಸುತ್ತಾ ಇಬ್ಬರೂ ಹೆಣ್ಣನ್ನು ಜಗತ್ತಿಗೆ, ಮಲ್ಲಿಕಾರ್ಜುನನಿಗೆ ಸಂವಾದಿಯನ್ನಾಗಿ ಮಾಡಿ ಅಂತಹ ಆಚರಣೆಯನ್ನು ಅಪ್ರಸ್ತುತಗೊಳಿಸುತ್ತಿದ್ದಾರೆ. ಇದು ಜಾತಿ ವ್ಯವಸ್ಥೆಯ ಬಗೆಗಿನ ಕಾಮೆಂಟಲ್ಲದಿದ್ದರೆ ಮತ್ತಾವುದು?

ಈ ವೈಚಾರಿಕ ಪ್ರಣಾಳಿಕೆಯ ಬಹು ದೊಡ್ಡ ಸಮಸ್ಯೆಯೆಂದರೆ ಅವರು ನಮ್ಮ ದೇಶದಲ್ಲಿ ಕಳೆದ ನೂರಾರು ವರ್ಷಗಳಿಂದ `ಅಖಿಲ ಭಾರತೀಯ' ಎನ್ನಬಹುದಾದ ಸಂಸ್ಕೃತಿಗೆ ಧಕ್ಕೆಯುಂಟು ಮಾಡುವಂತೆ ನಾಡಿನ ಬೇರೆ ಬೇರೆ ಭಾಗಗಳಲ್ಲಿ ಹುಟ್ಟಿಕೊಂಡ ಸ್ಥಳೀಯ/ಪ್ರಾದೇಶಿಕ ಎನ್ನಬಹುದಾದ ಪ್ರತಿ ಸಂಸ್ಕೃತಿಯನ್ನು ಕಟ್ಟಲು ಪ್ರಯತ್ನಿಸಿದ ಕ್ರಮಗಳ ಬಗ್ಗೆ ಗೌರವವಿಲ್ಲದಿರುವುದು. ಈ ಸ್ಥಳೀಯ/ಪ್ರಾದೇಶಿಕ ಎನ್ನಬಹುದಾದ ಪ್ರತಿ ಸಂಸ್ಕೃತಿ ಚಳವಳಿಗಳು ವಸಾಹತುಶಾಹಿಯಿಂದ ಪ್ರೇರಣೆ ಮತ್ತು ಪ್ರೋತ್ಸಾಹ ಪಡೆದುಕೊಂಡವು.

ಏನಿ ಬಂದಿರಿ ಹದುಳವಿದ್ದಿರೆ ಎಂದಡೆ
ನಿಮ್ಮೈಸಿರಿ ಹಾರಿ ಹೋಹುದೆ?
ಕುಳ್ಳಿರೆಂದರೆ ನೆಲ ಕುಳಿ ಹೋಹುದೆ?
ಒಡನೆ ನುಡಿದರೆ ಸಿರ, ಹೊಟ್ಟೆಯೊಡೆವುದೆ?
ಕೊಡಲಿಲ್ಲದಿದ್ದಡೊಂದು, ಗುಣವಿಲ್ಲದಿದ್ದೊಡೆ
ಮೂಗ ಕೊಯ್ವುದ ಮಾಣ್ಬನೆ ಕೂಡಲಸಂಗಮದೇವಾ,
ಸಂಸಾರದಲ್ಲಿ ಹುಟ್ಟಿ ಮತ್ತೊಂದ ಬಯಸಲೇಕಯ್ಯ?
ನಗುವುದು, ನುಡಿವುದು ಶಿವಭಕ್ತರೊಡನೆ
ಸುಮ್ಮೋನ, ಹಮ್ಮು ಬಿಮ್ಮೋಗಿರಲೇಕಯ್ಯ?
ನಮ್ಮ ಕೂಡಲಸಂಗನ ಶರಣರೊಡನೆ ಮನದೆರೆದು ಮಾತನಾಡೂದಯ್ಯ

ಇವೆರಡೂ ವಚನಗಳಲ್ಲಿ ಬಸವಣ್ಣ ಎಲ್ಲರನ್ನೂ ಒಳಗೊಳ್ಳುವ ಕ್ರಮದ ಬಗ್ಗೆ ಮಾತನಾಡುತ್ತಿದ್ದಾನೆ. ಈ ಮಾತುಗಳನ್ನು ಆಡುವ ಪ್ರಮೇಯ ಬಸವಣ್ಣನಿಗೆ ಯಾಕೆ ಬಂತು? ಜನರನ್ನು ಯಾವ ಉಪಾಧಿಗಳಿಲ್ಲದೆ ಮಾತನಾಡಿಸುವುದು ಅಂದು ರೂಢಿಯಲ್ಲಿರಲಿಲ್ಲವೆ?

`ಹದುಳವಿದ್ದಿರೆ' ಎನ್ನಲು, `ಕುಳಿತುಕೊಳ್ಳಿರಿ' ಎನ್ನಲು ಇದ್ದ ಕಂಟಕಗಳಾದರೂ ಏನು? ಇಲ್ಲಿ ಜಾತಿಯ ಬಗ್ಗೆ ರವಷ್ಟೂ ಸೂಚನೆಯಿಲ್ಲ ಎಂದು ಭಾವಿಸಬಹುದು. ಆದರೆ ಸಂಸ್ಕೃತಿಯ ವಿದ್ಯಾರ್ಥಿಗಳಿಗೆ ಇಲ್ಲಿನ ವಚನಗಳಲ್ಲಿನ ಮಾತುಗಳು ಹೇಳದಿರುವ ಸಂಗತಿಗಳನ್ನು ಸಾಂದರ್ಭಿಕ ಚೌಕಟ್ಟಿನಲ್ಲಿ ಕಂಡುಕೊಳ್ಳುವುದು ಕಷ್ಟವಾಗಬಾರದು. ಮನುಷ್ಯರು-ಮನುಷ್ಯರುಗಳ ನಡುವೆ ಇದ್ದ ಅಂತರದ ಬಗ್ಗೆ, ಮುಟ್ಟಿಸಿಕೊಳ್ಳುವ - ಮುಟ್ಟಿಸಿಕೊಳ್ಳದಿರುವ ಸಂಗತಿಗಳ ಬಗ್ಗೆ ಇವು ಬೆಳಕು ಚೆಲ್ಲುತ್ತಿವೆ. ಇವೆಲ್ಲ ವಿಸ್ತೃತ ನೆಲೆಯಲ್ಲಿ ಜಾತಿಯ ಬಗೆಗಿನ ಟೀಕೆಗಳಾಗಿವೆ.

ವಸಾಹತುಶಾಹಿಯು ಭಾರತೀಯ ಸಮಾಜವನ್ನು `ಸಾಮಾಜಿಕ ಕೆಡುಕುಗಳ ಆಗರ' ಎನ್ನುವಂತೆ ಪರಿಭಾವಿಸಿಕೊಂಡಿತ್ತು ಎಂಬುದು ಇವರ ಮತ್ತೊಂದು ನಿಲವು. ಇದು ಭಾರತೀಯ ಸಂಸ್ಕೃತಿಯನ್ನು ಅಖಂಡವಾದುದು ಎಂದು ಭಾವಿಸಿರುವುದರ ಪರಿಣಾಮ. ವಸಾಹತುಶಾಹಿಯು ಸ್ಥಳೀಯ/ಪ್ರಾದೇಶಿಕ ಎನ್ನಬಹುದಾದ ಸಂಸ್ಕೃತಿಗಳ ಬಗ್ಗೆ ಗೌರವ ಇಟ್ಟುಕೊಂಡಿತ್ತು. ಅವುಗಳ ವಿಮೋಚನೆಗೆ ಅದು ಪ್ರಯತ್ನ ನಡೆಸಿತ್ತು ಎಂಬ ಸತ್ಯವೂ ನಮ್ಮ ಮುಂದಿದೆ. ಇದರ ಬಗ್ಗೆ ನಾವು ಕುರುಡಾಗಬಾರದು.

ಈ ಎಲ್ಲ ಚರ್ಚೆಯ ಹಿನ್ನೆಲೆಯಲ್ಲಿ ಝಳಕಿ ಮತ್ತು ಬಾಲಗಂಗಾಧರ ಅವರು ವಚನ ಸಂಸ್ಕೃತಿಯ ಬಗ್ಗೆ ಪ್ರತಿಪಾದಿಸುತ್ತಿರುವ ನಿರ್ಣಯಗಳನ್ನು ಒಪ್ಪಲು ಸಾಧ್ಯವಿಲ್ಲ ಮತ್ತು ಅವು ಪೂರ್ವಗ್ರಹ ಪೀಡಿತವಾಗಿವೆ ಹಾಗೂ ಅವರ ಬೃಹತ್ ಯೋಜನೆಯಾದ `ಜಾತಿಯು ಭಾರತೀಯ ಸಂಸ್ಕೃತಿಯ ವಿಶಿಷ್ಟ ಲಕ್ಷಣವಲ್ಲ' ಎಂಬ ಪ್ರಣಾಳಿಕೆಯನ್ನು ಗಟ್ಟಿಗೊಳಿಸಲು ವಚನ ಸಂಸ್ಕೃತಿಯ ಬಗ್ಗೆ ಅವರು ತಪ್ಪು ತಪ್ಪೇ ಮಾತನಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.