ಕನ್ನಡದ ಸಾಮಾಜಿಕ ವ್ಯಕ್ತಿತ್ವಗಳನ್ನು ನೈತಿಕತೆಯ ನೆಲೆಯಲ್ಲಿ ಪರಿಣಾಮಕಾರಿಯಾಗಿ ಪ್ರಭಾವಿಸಿದ ವ್ಯಕ್ತಿತ್ವಗಳಲ್ಲಿ ಅಯ್ಯರ್ ಅವರು ಪ್ರಮುಖರು. ಜಾತಿಯ ಅಹಂಕಾರದ ಎಲ್ಲೆಯನ್ನು ಮೀರುತ್ತಲೇ ಮನುಷ್ಯತ್ವದ ನೆಲೆಯಲ್ಲಿ ಸಾರ್ವಕಾಲಿಕ ಸಾಮಾಜಿಕ ಮೌಲ್ಯವನ್ನು ಪ್ರತಿಪಾದಿಸಿದ್ದಾರೆ ಅಯ್ಯರ್.

ಸಾಮಾಜಿಕ ಪರಿವರ್ತನೆ ಎಂದರೆ, ಸಮಾಜದಲ್ಲಿರುವ ವ್ಯಕ್ತಿತ್ವಗಳ ಮಾನಸಿಕ ಪರಿವರ್ತನೆ ಎಂದರ್ಥ. ಯಾವುದೇ ಸಾಮಾಜಿಕ ವ್ಯವಸ್ಥೆ ಎಲ್ಲ ಬಗೆಯ ವ್ಯಕ್ತಿತ್ವಗಳನ್ನು ಪ್ರಭಾವಿಸುತ್ತದೆ. ಹಾಗೆ ನಿರ್ಮಾಣಗೊಂಡ ಕೆಲವು ಮಾದರಿ ವ್ಯಕ್ತಿತ್ವಗಳು ತನ್ನನ್ನು ರೂಪಿಸಿದ ಸಮಾಜದ ಪರಿವರ್ತನೆಗೂ ಕಾರಣವಾಗುತ್ತವೆ. ಅಂತಹ ವ್ಯಕ್ತಿತ್ವಗಳನ್ನು ‘ಸಮಾಜ ಪರಿವರ್ತನಕಾರರು’ ಎಂಬುದಾಗಿ ಸಮಾಜ ತನ್ನ ಚರಿತ್ರೆಯೊಳಗೆ ದಾಖಲಿಸಿಕೊಳ್ಳುತ್ತದೆ. ಮಾದರಿಯಾದ ಆದರ್ಶ ವ್ಯಕ್ತಿತ್ವಗಳು ತನ್ನ ಸಮಕಾಲೀನ ಹಾಗೂ ನಂತರದ ಸಾಮಾಜಿಕ ವ್ಯಕ್ತಿತ್ವಗಳನ್ನು ರೂಪಿಸಬಲ್ಲವು. ಅಂತಹ ಮೌಲ್ಯಾಧಾರಿತ ವ್ಯಕ್ತಿತ್ವಗಳು ತಮ್ಮ ನಡೆ, ನುಡಿ, ಚಿಂತನೆ, ಹೋರಾಟಗಳ ಮೂಲಕ ಇಡೀ ಸಮಾಜವನ್ನು ಪರಿಣಾಮಕಾರಿಯಾಗಿ ಪ್ರಭಾವಿಸಿ ನೈತಿಕ ಮೌಲ್ಯಗಳನ್ನು ನಿರ್ಮಿಸುತ್ತವೆ.

ಪ್ರಾಮಾಣಿಕ ವ್ಯಕ್ತಿತ್ವಗಳಲ್ಲಿ ಅಂತರಂಗ, ಬಹಿರಂಗಗಳು ಸಮೀಕರಣಗೊಂಡು ಏಕಸ್ವರೂಪದ್ದಾಗಿರುತ್ತವೆ. ನಡೆ, ನುಡಿಗಳು ವ್ಯಕ್ತಿತ್ವದ ಭಾಗವೇ ಆಗಿರುತ್ತವೆ. ಆ ಬಗೆಯ ಅನುಕರಣೀಯ ವ್ಯಕ್ತಿತ್ವಗಳಲ್ಲಿ ಆರ್. ಗೋಪಾಲಸ್ವಾಮಿ ಅಯ್ಯರ್ ಪ್ರಮುಖರು. ಅಂತರಂಗ, ಬಹಿರಂಗಗಳು ಭಿನ್ನವಾಗುತ್ತ ಮುಖವಾಡದ ವ್ಯಕ್ತಿತ್ವಗಳೇ ವಿಜೃಭಿಸುತ್ತಿರುವ ಈ ಹೊತ್ತಿನಲ್ಲಿ; ಬ್ರಾಹ್ಮಣ್ಯದ ವಿರುದ್ಧ ಬಂಡೆದ್ದು, ಶೋಷಿತರ ಬಿಡುಗಡೆಗಾಗಿ ಶ್ರಮಿಸಿದ ಸಮಾಜ ಪರಿವರ್ತನಕಾರರಲ್ಲಿ ಕುದ್ಮಲ್ ರಂಗರಾವ್, ಕಾಕಾ ಕಾರಖಾನೀಸ್, ಆರ್. ಗೋಪಾಲಸ್ವಾಮಿ ಅಯ್ಯರ್, ವರದರಾಜ್ ಅಯ್ಯಂಗಾರ್, ತಲಕಾಡು ರಂಗೇಗೌಡ, ವೆಂಕಟಲಕ್ಷ್ಮಮ್ಮ, ಜಿ. ವನಜಮ್ಮ ಮುಂತಾದ ವ್ಯಕ್ತಿತ್ವಗಳ ಓದು ನಮಗೆ ಪಾಠವಾಗಬೇಕಿದೆ. ಕನ್ನಡದ ಸಾಮಾಜಿಕ ವ್ಯಕ್ತಿತ್ವಗಳನ್ನು ನೈತಿಕತೆಯ ನೆಲೆಯಲ್ಲಿ ಪರಿಣಾಮಕಾರಿಯಾಗಿ ಪ್ರಭಾವಿಸಿದ ವ್ಯಕ್ತಿತ್ವಗಳಲ್ಲಿ ಅಯ್ಯರ್ ಅವರು ಪ್ರಮುಖರು. ಜಾತಿಯ ಅಹಂಕಾರದ ಎಲ್ಲೆಯನ್ನು ಮೀರುತ್ತಲೇ ಮನುಷ್ಯತ್ವದ ನೆಲೆಯಲ್ಲಿ ಸಾರ್ವಕಾಲಿಕ ಸಾಮಾಜಿಕ ಮೌಲ್ಯವನ್ನು ಪ್ರತಿಪಾದಿಸುವ ಅಯ್ಯರ್ ಅವರ ವ್ಯಕ್ತಿತ್ವವನ್ನು ಡಾ. ಜಿ. ಗೋಪಾಲ್ ಅವರು ತಮ್ಮ “ಆರ್. ಗೋಪಾಲಸ್ವಾಮಿ ಅಯ್ಯರ್”(ಸ್ನೇಹ ಪ್ರಿಂಟರ್ಸ್, ಬೆಂಗಳೂರು, ಎರಡನೆ ಮುದ್ರಣ, 2001) ಪುಸ್ತಕದಲ್ಲಿ ಅರ್ಥಪೂರ್ಣವಾಗಿ ದಾಖಲಿಸಿದ್ದಾರೆ.

ಮರೆಯಬಾರದ ಚರಿತ್ರೆಯ ಪಾಠಗಳು-ಮಾದರಿ ಮೈಸೂರು ಸಂಸ್ಥಾನ

ಗೋಪಾಲಸ್ವಾಮಿ ಅಯ್ಯರ್ ಅವರನ್ನು ಮತ್ತಷ್ಟು ಅರ್ಥೈಸಿಕೊಳ್ಳುವಲ್ಲಿ ಅವರ ಸಮಕಾಲೀನ ಚಾರಿತ್ರಿಕ ಸಂದರ್ಭದ ಅರಿವು ಬಹಳ ಮುಖ್ಯ. ಕರ್ನಾಟಕದ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕøತಿಕ ಪ್ರಗತಿಗೆ ಮೈಸೂರು ಸಂಸ್ಥಾನದ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್, ಕಂಠೀರವ ನರಸರಾಜ ಒಡೆಯರ್, ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್, ಆರ್. ಗೋಪಾಲಸ್ವಾಮಿ ಐಯ್ಯರ್ ಅವರ ಕೊಡುಗೆ ಅಪಾರವಾದದ್ದು. ಬಡವರ, ಶೋಷಿತರ, ಹಿಂದುಳಿದ ವರ್ಗಗಳ ಸಾಮಾಜಿಕ ಹಾಗೂ ಶೈಕ್ಷಣಿಕ ವಿಕಾಸದಲ್ಲಿ ಮೈಸೂರು ಅರಸರ ಪಾತ್ರ ಐತಿಹಾಸಿಕವಾಗಿ ಶ್ಲಾಘನೀಯವಾದದ್ದು. “ಮೈಸೂರು ಸಂಸ್ಥಾನದಲ್ಲಿ ಪ್ರಥಮವಾಗಿ ಬಿ.ಎ. ಪದವಿ ಪಡೆದ ಅಸ್ಪøಶ್ಯರೆಂದರೆ ಸೋಸಲೆ ಬಿ. ರಾಚಪ್ಪನವರು. ಹಾಗೇ ಪ್ರಥಮವಾಗಿ ಬಿ.ಎಸ್ಸಿ. ಪದವಿ ಪಡೆದವರು ಸೋಮನಾಥಪುರದ ಆರ್. ಭರಣಯ್ಯ ಹಾಗೂ ಸೋಸಲೆ ಎಸ್. ಎಂ. ಸಿದ್ಧಯ್ಯನವರು. ಪ್ರಥಮ ದಲಿತ ಕವಿ ಎನಿಸಿಕೊಂಡಿರುವವರು ಸೋಸಲೆ ಎಸ್. ಸಿದ್ಧಪ್ಪನವರು ಎನ್ನುವುದು ವಿಶೇಷವಾಗಿದೆ.”(ಕರ್ನಾಟಕದ ಸಮಗ್ರ ದಲಿತ ಚರಿತ್ರೆ –ಡಾ. ಎನ್. ಚಿನ್ನಸ್ವಾಮಿ ಸೋಸಲೆ, ನವಕರ್ನಾಟಕ, ಬೆಂಗಳೂರು, 2016, ಪು-28) ಸಮಾಜಮುಖಿಯಾಗಿ, ಶೋಷಿತರಪರವಾಗಿ ಕಾರ್ಯಪ್ರವೃತ್ತವಾಗುವ ನಿಟ್ಟಿನಲ್ಲಿ ಮೈಸೂರು ಸಂಸ್ಥಾನವನ್ನು ಪರಿಣಾಮಕಾರಿಯಾಗಿ ಪ್ರಭಾವಿಸಿದ ವ್ಯಕ್ತಿತ್ವಗಳಲ್ಲಿ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಸಯ್ಯಾಜಿರಾವ್ ಗಾಯಕವಾಡ, ಛತ್ರಪತಿ ಶಾಹುಮಹಾರಾಜ ಅವರು ಪ್ರಮುಖರು. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಾಮಾಜಿಕ ಬದ್ಧತೆಯನ್ನು ಮನಗಂಡ ಮೈಸೂರು ಅರಸರು, ಬೌದ್ಧ ಅಧ್ಯಯನ ಕೇಂದ್ರದ ಸ್ಥಾಪನೆಗಾಗಿ ಅಂಬೇಡ್ಕರ್ ಅವರಿಗೆ ಬೆಂಗಳೂರಿನಲ್ಲಿ ಐದು ಎಕರೆ ಭೂಮಿಯನ್ನು ಬಳುವಳಿಯಾಗಿ ನೀಡಿದರು. ಅರಸರ ಶೋಷಿತಪರ ಕಾಳಜಿಗೆ ಇದು ಅತ್ಯುತ್ತಮ ಉದಾಹರಣೆ. ಸದಾ ಶೋಷಿತರ ಅಭ್ಯುದಯಕ್ಕಾಗಿ ತುಡಿಯುತ್ತಿದ್ದ ಅಯ್ಯರ್ ಅವರನ್ನು ಪ್ರೋತ್ಸಾಹಿಸಿದ್ದು ಕೂಡ ಇದೇ ಮೈಸೂರು ಅರಸರು.

1881 ರಿಂದ 1894ರ ಅವಧಿಯಲ್ಲಿ ಮೈಸೂರು ಸಂಸ್ಥಾನದ ಅರಸರಾಗಿದ್ದ ಚಾಮರಾಜ ಒಡೆಯರ್ ಅವರು ಸ್ವಾಮಿ ವಿವೇಕಾನಂದರನ್ನು ತಮ್ಮ ಸಂಸ್ಥಾನಕ್ಕೆ ಆಹ್ವಾನಿಸಿ ಪತ್ರ ಬರೆಯುತ್ತಾರೆ. ಪತ್ರಕ್ಕೆ ಉತ್ತರಿಸಿದ ವಿವೇಕಾನಂದರು : ‘ನಿಮ್ಮ ಸಂಸ್ಥಾನವು ಅಂತ್ಯಜರ ಪರವಾದ ಪ್ರಗತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರೆ ಮಾತ್ರ ನಿಮ್ಮ ಆಹ್ವಾನವನ್ನು ಒಪ್ಪಿ ಬರಲು ಬಯಸುತ್ತೇನೆ’ ಎಂದು ಹೇಳುತ್ತಾರೆ. ವಿವೇಕಾನಂದರ ಈ ಮಾತು ಮೈಸೂರು ಅರಸರನ್ನು ಶೋಷಿತರ ಪರವಾಗಿ ಚಿಂತಿಸುವಂತೆ ಮಾಡಿತು. ಶೋಷಿತರ ಪರವಾಗಿ ಅರಸರಿಗೆ ಇರಬೇಕಾದ ಸಾಮಾಜಿಕ, ರಾಜಕೀಯ ಹೊಣೆಗಾರಿಕೆಯನ್ನು ವಿವೇಕಾನಂದರು ಜಾಗೃತಗೊಳಿಸಿದರು. ವಿವೇಕಾನಂದರ ಎಚ್ಚರಿಕೆಯ ಮಾತಿನ ಕಾರಣದಿಂದಾಗಿ ಮೈಸೂರು ಅರಸರು 1890ರಲ್ಲಿ ಆನೇಕಲ್ ತಾಲ್ಲೂಕಿನ ಹುಸ್ಕೂರು, ಮಾಲೂರ ತಾಲ್ಲೂಕಿನ ನರಸಾಪುರ, ಮಳವಳ್ಳಿ, ಚನ್ನಪಟ್ಟಣ, ಚಾಮರಾಜನಗರ, ಅರಸೀಕೆರೆ, ಬಂಗಾರುಪೇಟೆ ತಾಲ್ಲೂಕಿನ ನೂಲುಕುಂಟೆ ಹಾಗೂ ಮೈಸೂರಿನ ನಜರಾಬಾದ್, ಹಾಸನ, ಚಿಕ್ಕಮಗಳೂರಿನ ನರಸಿಂಹರಾಜಪುರಗಳಲ್ಲಿ ಅಸ್ಪೃಶ್ಯರಿಗಾಗಿ ‘ಪಂಚಮರ ಶಾಲೆ’ಗಳನ್ನು ತೆರೆದರು. 1893ರ ಸೆಪ್ಟಂಬರ್ನಲ್ಲಿ ಚಿಕಾಗೋನಲ್ಲಿ ನಡೆಯಲಿರುವ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗಹಿಸಲಿಕ್ಕೆ ವಿವೇಕಾನಂದರು ಹೋಗುವಾಗಿನ ಖರ್ಚುವೆಚ್ಚವನ್ನು ಭರಿಸುವ ಕಾರಣದಿಂದಾಗಿ ಹೂಗ್ಲಿ ರಾಮನಾಡಿನ ರಾಜರು ಹಾಗೂ ಮೈಸೂರು ದೊರೆಗಳು ಹಣ ಸಂಗ್ರಹಿಸತೊಡಗಿದರು. ಈ ವಿಚಾರವನ್ನು ತಿಳಿದ ವಿವೇಕಾನಂದರು : ‘ನೀವು ನನ್ನ ಪ್ರಯಾಣಕ್ಕೆ ಸಂಗ್ರಹಿಸಿದ್ದ ಹಣವನ್ನು ದೀನದಲಿತರಿಗೆ ಹಂಚಿಬಿಡಿ’ ಎಂದು ಹೇಳಿದಾಗ, ಅರಸರು ವಿವೇಕಾನಂದರ ಮಾತಿನಂತೆ ನಡೆದುಕೊಂಡರು.

ವಿವೇಕಾನಂದರು ಖೇತ್ರಿ ಮಹಾರಾಜರ ಜೊತೆ ಮೈಸೂರಿಗೆ ಬಂದ ಸಂದರ್ಭದಲ್ಲಿ ಅಂದಿನ ಅರಸರಿಗೆ ‘ಮಾದರಿ ಮೈಸೂರೆಂದು ಹೇಳಿಕೊಳ್ಳುತ್ತೀರಲ್ಲ ಅಂತ್ಯಜರಿಗೆ ಯಾವ ಉದ್ಧಾರ ಕಾರ್ಯ ಕೈಗೊಂಡಿದ್ದೀರಿ?’ ಎಂದು ಪ್ರಶ್ನಿಸಿದ್ದುಂಟು. ವಿವೇಕಾನಂದರು ಅಮೇರಿಕಾಗೆ ಹೋದ ನಂತರ ಅಳಸಿಂಗ ಪೆರುಮಾಳ್ ಅವರಿಗೆ ಪತ್ರ ಬರೆದು ‘ಪ್ರತಿದಿನವೂ ದೀನದಲಿತರು, ದರಿದ್ರರು, ಅಸ್ಪøಶ್ಯರು ಮೊದಲಾದವರನ್ನು ಸೇರಿಸಿ ಸಂಸ್ಥೆ ಕಟ್ಟಿರಿ. ಮೈಸೂರು ಒಂದಲ್ಲ ಒಂದು ದಿನ ಪ್ರಮುಖ ಕೇಂದ್ರವಾಗುವುದು’ ಎಂದು ಹೇಳುತ್ತಾರೆ. ದಲಿತರ ಜೊತೆಗೆ ವೇಶ್ಯೆಯರು, ಪೌರಕಾರ್ಮಿಕರು ಬಡತನ, ಅವಮಾನ, ದುಃಖದಿಂದ ಬಿಡುಗಡೆಗೊಳ್ಳಬೇಕು ಎಂಬುದಾಗಿ ಸ್ವಾಮಿ ವಿವೇಕಾನಂದರು ಚಡಪಡಿಸುತ್ತಿದ್ದರು. ಒಮ್ಮೆ ಕಲ್ಕತ್ತಾದಲ್ಲಿ ವ್ಯಕ್ತಿಯೊಬ್ಬ ಅನ್ನವಿಲ್ಲದೆ ಪ್ರಾಣ ಬಿಟ್ಟ ಎಂಬ ವಿಷಯ ತಿಳಿದು ಮಮ್ಮಲ ಮರುಗುತ್ತಾರೆ. ಅಷ್ಟರಮಟ್ಟಿಗೆ ವಿವೇಕಾನಂದರು ನಿರ್ಗತಿಕರು, ಅಸಹಾಯಕರು, ಬಡವರನ್ನು ಸಂಕಷ್ಟಗಳಿಂದ ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಸದಾ ಚಿಂತಿಸುತ್ತಿದ್ದರು. ವಿವೇಕಾನಂದರು ಚಾಮರಾಜ ಒಡೆಯರ್ ಅವರಿಗೆ ‘ವಂಶಗತವಾಗಿ ಶಿಕ್ಷಣ ಪಡೆದುಕೊಂಡು ಅಗ್ರಹಾರ ಮದರಸ ದೇವಾಲಯಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಬ್ರಾಹ್ಮಣ ಓದಬೇಕೆಂದರೆ ಅದಕ್ಕೆ ಹಣ ವ್ಯಯ ಮಾಡಬೇಡಿ. ಅದೇ ಹಣವನ್ನು ಹೊಲೆಯರ ಮಾದಿಗರ ಹಾಗೂ ಅಸ್ಪೃಶ್ಯರ ವಿದ್ಯೆಗಾಗಿ ವಿನಿಯೋಗಿಸಿ. ಐವತ್ತು ವರ್ಷ ಎಲ್ಲಾ ದೇವರುಗಳನ್ನೂ ಮರೆತು ಬಿಡಿ. ದರಿದ್ರ ದೇವರನ್ನು(ಅಸ್ಪೃಶ್ಯರನ್ನು) ಉದ್ಧಾರ ಮಾಡಿ’(ಕರ್ನಾಟಕದ ಸಮಗ್ರ ದಲಿತ ಚರಿತ್ರೆ, ಪು-34) ಎಂದು ಹೇಳುತ್ತಾರೆ. ಮೈಸೂರಿಗೆ ಬಂದ ಸಂದರ್ಭದಲ್ಲಿ, ಸುಬ್ಬರಾಯನಕೆರೆ ಹತ್ತಿರ ವೆಂಕಟಕೃಷ್ಣಯ್ಯನವರು ನಡೆಸುತ್ತಿದ್ದ ಅನಾಥಾಲಯಕ್ಕೆ(ಇದು ಇವತ್ತಿನ ಮೈಸೂರಿನ ಶಾಂತಲ ಚಿತ್ರಮಂದಿರದ ಹತ್ತಿರ ಇದೆ), ದಲಿತರು ವಾಸಿಸುತ್ತಿದ್ದ ದೊಡ್ಡ ಹೊಲಗೇರಿ(ಇಂದಿನ ಅಶೋಕಪುರಂ) ಮತ್ತು ಅಲ್ಲಿನ ದೊಡ್ಡ ಗರಡಿ, ಚಿಕ್ಕ ಗರಡಿ ಮನೆಗಳಿಗೆ, ಪೌರಕಾರ್ಮಿಕರು ವಾಸಿಸುತ್ತಿದ್ದ ಕೊಳಗೇರಿಗಳಿಗೆ ಭೇಟಿ ಕೊಟ್ಟು ಅಲ್ಲಿ ವಾಸಿಸುತ್ತಿದ್ದ ಜನರ ಕಷ್ಟಕಾರ್ಪಣ್ಯಗಳನ್ನು ಗಮನಿಸಿದರು. ಅರಮನೆಯ ಮಧುವನದಲ್ಲಿ ಮಾಲಿಯಾಗಿ ಕೆಲಸ ಮಾಡುತ್ತಿದ್ದ ಗರಡಿ ಮನೆಯ ಯಜಮಾನರಾದ ಬಂಡೆಲಿಂಗಯ್ಯನನ್ನು ಮಾತನಾಡಿಸಿ ಶೋಷಿತರ ಸ್ಥಿತಿಗತಿಗಳನ್ನು ತಿಳಿದುಕೊಂಡರು. ಇದು ವಿವೇಕಾನಂದರಿಗಿದ್ದ ದಲಿತಪರ ಕಾಳಜಿಯನ್ನು ತಿಳಿಸುತ್ತದೆ. ನಂತರ ನಾಲ್ವಡಿ ಕೃಷ್ಣರಾಜ ಒಡೆಯರ್, ನರಸಿಂಹರಾಜ ಒಡೆಯರ್, ವೆಂಕಟಕೃಷ್ಣಯ್ಯ, ಬಾಲಸುಬ್ರಹ್ಮಣ್ಯಂ ಅಯ್ಯರ್ ಅವರ ಜೊತೆ ಸಭೆ ಮಾಡಿದ ವಿವೇಕಾನಂದರು ಶೋಷಿತರ ಪ್ರಗತಿಗೆ ಕಾರ್ಯಯೋಜನೆಯನ್ನು ರೂಪಿಸಬೇಕೆಂದು ಆಜ್ಞಾಪಿಸುತ್ತಾರೆ. ವಿವೇಕಾನಂದರು 10ನೇ ಚಾಮರಾಜ ಒಡೆಯರ್ ಮತ್ತು ನರಸಿಂಹರಾಜ ಒಡೆಯರ್ ಅವರನ್ನು ‘ನನ್ನ ಅಪೇಕ್ಷೆ ದೀನದಲಿತರ ಉದ್ಧಾರ, ಅದಕ್ಕಾಗಿ ನೀವು ಏನು ಕಾರ್ಯಕ್ರಮ ಹಾಕಿಕೊಳ್ಳುವಿರಿ’ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಚಾಮರಾಜ ಒಡೆಯರ್ : “ಮನೆ ಮಠ, ವಸತಿ ಸೌಕರ್ಯ, ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದ ನೆರವಿನ ಕಾರ್ಯಭಾರವನ್ನು ನಾವೇ ವಹಿಸುತ್ತೇವೆ... ಈ ಜನಾಂಗ ವಿಜಯನಗರ ಸಾಮ್ರಾಜ್ಯದ ಅವನತಿಯ ನಂತರ ಶ್ರೀರಂಗಪಟ್ಟಣಕ್ಕೆ ವಲಸೆ ಬಂದರು ಮತ್ತು ಅರಮನೆಯ ಕಾವಲು ಕಾಯ್ದು ಮೈಸೂರಿನ ಸಿಂಹಾಸನ ರಕ್ಷಣೆ ಮಾಡಿದರು. ಆದಕಾರಣ ಈ ಕೆಲಸಗಳನ್ನು ಶ್ರದ್ಧೆಯಿಂದ ಮಾಡುತ್ತೇವೆ” (ಕರ್ನಾಟಕದ ಸಮಗ್ರ ದಲಿತ ಚರಿತ್ರೆ, ಪು-34) ಎಂದು ಹೇಳುತ್ತಾರೆ. ಚಿಕಾಗೋಗೆ ಹೋಗುವ ಸಂದರ್ಭದಲ್ಲಿ ಜಪಾನ್ ತಲುಪಿದ ವಿವೇಕಾನಂದರು ಚಾಮರಾಜ ಒಡೆಯರ್ ಅವರಿಗೆ ಪತ್ರ ಬರೆದು : “ಜಪಾನಿನ ಜನಾಂಗವನ್ನು ನೀವು ನೋಡಿ ತಲೆತಗ್ಗಿಸಬೇಕು. ನೀವು ಹೊರಗೆ ಬಂದರೆ ನಿಮ್ಮ ಜಾತಿ ಕೆಡುತ್ತದೆ... ಒಣ ಹರಟೆಯಲ್ಲಿ ಜೀವನವನ್ನೆಲ್ಲಾ ಕಳೆಯುತ್ತೀರಿ. ಭಗವಂತ ನೀಡಿರುವ ನಿಮ್ಮ ಅಧಿಕಾರವನ್ನು ಬಳಸಿಕೊಂಡು ಪಶುಗಳ ಮಟ್ಟದ ಹೀನ ಸ್ಥಿತಿಗೆ ಇಳಿದವರನ್ನು ಮತ್ತೆ ಮಾನವರನ್ನಾಗಿ ಮಾಡಿ”(ಕರ್ನಾಟಕದ ಸಮಗ್ರ ದಲಿತ ಚರಿತ್ರೆ, ಪು-33) ಎಂದು ಹೇಳುವ ಮೂಲಕ ಪ್ರಭುತ್ವಶಾಹಿಯನ್ನು ಜನಪರವಾಗಿ ಜಾಗೃತಗೊಳಿಸುವ ಕೆಲಸ ಮಾಡಿದ್ದಾರೆ. ವಿವೇಕಾನಂದರ ಒತ್ತಾಸೆ ಮೇರೆಗೆ ಮೈಸೂರು ಅರಸರು 1915ರಲ್ಲಿ ‘ಬೆಂಗಳೂರು ಸೋಷಿಯಲ್ ಸರ್ವೀಸ್ ಲೀಗ್’ ಸಂಸ್ಥೆಯನ್ನು(ಸರದಾರ್ ಕಾಂತರಾಜೇ ಅರಸ್ ಅಧ್ಯಕ್ಷರು, ರಾಮನಾಥನ್ ಕಾರ್ಯದರ್ಶಿ); 1916ರಲ್ಲಿ ‘ಮೈಸೂರು ಸಿವಿಲ್ ಅಂಡ್ ಸೋಷಿಯಲ್ ಪ್ರೋಗ್ರೆಸ್’ ಸಂಸ್ಥೆಯನ್ನು ಸ್ಥಾಪಿಸಿ ದಲಿತರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಈ ಸಂಸ್ಥೆಯ ಅಧ್ಯಕ್ಷರಾಗಿ ಕೆ. ವಿ. ಪುಟ್ಟಣ್ಣಚೆಟ್ಟಿ, ಸದಸ್ಯರಾಗಿ ವೆಂಕಟಕೃಷ್ಣಯ್ಯ, ಬಾಲಸುಬ್ರಹ್ಮಣ್ಯಂ ಅಯ್ಯರ್, ದೊಡ್ಡಹೊಲಗೇರಿಯ ಮರಿದಂಡಯ್ಯ, ಎಂ. ಚಂಗಯ್ಯಚೆಟ್ಟಿ, ವಿ. ಎನ್. ನರಸಿಂಹ ಅಯ್ಯಂಗರ್ ಅವರು ಕಾರ್ಯನಿರ್ವಹಿಸಿದ್ದಾರೆ. ಮೈಸೂರು ಸಂಸ್ಥಾನವು ಜನಪರ ಹಾಗೂ ದಲಿತಪರವಾದ ಆಡಳಿತ ವ್ಯವಸ್ಥೆಯಾಗಿ ನಿರ್ಮಾಣಗೊಳ್ಳುವಲ್ಲಿ ಸ್ವಾಮಿ ವಿವೇಕಾನಂದರ ಮಾರ್ಗದರ್ಶನ ಹಾಗೂ ಪ್ರಭಾವ ಅಗಾಧವಾದದ್ದು.

1910ರಲ್ಲಿ ಕಂಠೀರವ ನರಸಿಂಹರಾಜ ಒಡೆಯರ್ ಅವರು ತಮ್ಮ ಕಾರ್ಯದರ್ಶಿಯಾದ ಕೆ.ಎಚ್. ರಾಮಯ್ಯ ಅವರ ಜೊತೆಗೂಡಿ ಆಫ್ರಿಕಾ ದೇಶಕ್ಕೆ ಪ್ರವಾಸ ಹೋಗಿದ್ದರು. ಆ ಸಂದರ್ಭದಲ್ಲಿ ಅಲ್ಲಿನ ಕೊಳಗೇರಿಗಳಲ್ಲಿ ವಾಸಿಸುತ್ತಿದ್ದ ನೀಗ್ರೊ ಜನರ ಹಸಿವು, ಬಡತನ, ಬಿಳಿಯರ ದಬ್ಬಾಳಿಕೆಯನ್ನು ಕಣ್ಣಾರೆ ಕಂಡು ತುಂಬಾ ನೊಂದುಕೊಳ್ಳುತ್ತಾರೆ. ಆಫ್ರಿಕಾದ ಕಪ್ಪುಜನರ ಹಾಗೆ ತಮ್ಮ ಸಂಸ್ಥಾನದಲ್ಲಿರುವ ಅಸ್ಪೃಶ್ಯರ ಬಿಡುಗಡೆಗಾಗಿ ದುಡಿಯಬೇಕೆಂದು ಅಂದೇ ತೀರ್ಮಾನಿಸಿದರು. ಹಾಗೆಯೆ ನಡೆದುಕೊಂಡರು. ಇದೇ ರೀತಿಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು 1926ರಲ್ಲಿ ಮೊಟ್ಟಮೊದಲಿಗೆ ದಲಿತ ಪ್ರತಿನಿಧಿಗಳಿಗೆ ಅರಮನೆಯಲ್ಲಿ ನಡೆಯುತ್ತಿದ್ದ ದರ್ಬಾರಿಗೆ ಪ್ರವೇಶ ನೀಡಿ ಆದೇಶ ಹೊರಡಿಸಿದರು. ಮೈಸೂರು ಅರಸರ ಈ ಬಗೆಯ ವ್ಯಕ್ತಿತ್ವದ ಕಾರಣದಿಂದಾಗಿ ಭಾರತದ ಚರಿತ್ರೆಯಲ್ಲಿ ಮೈಸೂರು ಸಂಸ್ಥಾನವು ಒಂದು ಮಾದರಿ ಸಂಸ್ಥಾನವಾಗಿ ಉಳಿದುಕೊಳ್ಳಲಿಕ್ಕೆ ಸಾಧ್ಯವಾಯಿತು.

ಬ್ರಾಹ್ಮಣ್ಯ ಮೀರಿದ ಬ್ರಾಹ್ಮಣ ಆರ್. ಗೋಪಾಲಸ್ವಾಮಿ ಅಯ್ಯರ್

ಥಿಯಾಸಾಫಿಕಲ್ ಸೊಸೈಟಿಯ ಸದಸ್ಯರಾದ ಶ್ರೀಮತಿ ಅನಿಬೆಸೆಂಟ್, ಜೆ. ಕೃಷ್ಣಮೂರ್ತಿ, ಪುಟ್ಟಣ್ಣಚೆಟ್ಟಿ ಅವರು ಪಂಚಮರ ಅಭ್ಯುದಯಕ್ಕಾಗಿ ಪ್ರಾಮಾಣಿಕವಾಗಿ ದುಡಿಯಬಲ್ಲ ನಿಸ್ವಾರ್ಥ ಕಾರ್ಯಕರ್ತನಿಗಾಗಿ ಹುಡುಕಾಡುತ್ತಿದ್ದಾಗ ಅವರ ಗಮನಕ್ಕೆ ಬಂದ ವ್ಯಕ್ತಿತ್ವವೇ ಗೋಪಾಲಸ್ವಾಮಿ ಅಯ್ಯರ್. ಇವರೆಲ್ಲರ ಪ್ರೇರಣೆಯಿಂದಾಗಿ 1917ರಿಂದಲೇ ದಲಿತೋದ್ಧಾರದ ಚಟುವಟಿಕೆಗಳಲ್ಲಿ ತಮ್ಮನ್ನು ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡ ಅಯ್ಯರ್, ಮದ್ರಾಸ್ ಪ್ರಾಂತ್ಯದ ಕುಂಭಕೋಣಂ ಹತ್ತಿರದ ತಂಜಾವೂರು ಜಿಲ್ಲೆಯ ಗಣಪತಿ ಅಗ್ರಹಾರದಲ್ಲಿದ್ದ ರಾಮಸ್ವಾಮಿ ಅಯ್ಯರ್ ಅವರ ಮಗನಾಗಿ 22ನೇ ಜೂನ್ 1878ರಲ್ಲಿ ಜನಿಸಿದರು. ತಂದೆಯವರು ಮದ್ರಾಸ್ನಿಂದ ಮೈಸೂರಿಗೆ ವಲಸೆ ಬಂದು, ನಂತರ ಬೆಂಗಳೂರಿನ ಚಾಮರಾಜಪೇಟೆಯ ತಮ್ಮ ‘ಎಲಿಫೆಂಟ್ ಲಾಡ್ಜ್’ ನಿವಾಸದಲ್ಲಿ ನೆಲೆಸಿದ ಮೇಲೆ ಅಯ್ಯರ್ ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಎಫ್.ಎ.ವರೆಗೆ ವ್ಯಾಸಂಗ ಮಾಡಿದರು. ಅಯ್ಯರ್ ಅವರು ಆಗಾಗ ತಮಗೆ ಬರುತ್ತಿದ್ದ ಮೂರ್ಛೆ ರೋಗದ ಕಾರಣದಿಂದಾಗಿ ಮುಂದಿನ ತಮ್ಮ ವಿದ್ಯಾಭ್ಯಾಸಕ್ಕೆ ಅಂತ್ಯವಾಡಿದರು. 1908ರಲ್ಲಿ ಕುಮಾರಿ ತಂಗಮ್ಮ ಅವರನ್ನು ವಿವಾಹವಾಗಿದ್ದ ಅಯ್ಯರ್ ಶ್ರೀಮಂತ ಕುಟುಂಬದವರಾಗಿದ್ದರೂ ಸರಳತೆ, ವಿನಯ, ಸಜ್ಜನಿಕೆಯ ವ್ಯಕ್ತಿತ್ವದವರಾಗಿದ್ದರು. ಮನೆಗೆ ಪಂಚಮರ ಹುಡುಗರನ್ನು ಕರೆದುಕೊಂಡು ಬರುತ್ತಿದ್ದ ಅಯ್ಯರ್ ಅವರನ್ನು ವಿರೋಧಿಸುತ್ತಿದ್ದ ಪೋಷಕರು, ಇವರಿಗಾಗಿ ಮನೆಯ ಹೊರಗೆ ಪ್ರತ್ಯೇಕ ಕೊಠಡಿಯನ್ನೆ ಮೀಸಲಿರಿಸಿದ್ದರು. ಇವರಿಗಾಗಿ ಕಾಯದೆ ಅವರ ಕೊಠಡಿಯಲ್ಲಿ ಊಟ ಇಟ್ಟು ಬಾಗಿಲು ಹಾಕಿಕೊಳ್ಳುತ್ತಿದ್ದರು. ಅಯ್ಯರ್ ಅವರು ಈ ಬಗೆಯ ನೋವುಗಳನ್ನು ನುಂಗಿಕೊಂಡು ದಲಿತರ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡರು.

ಅಯ್ಯರ್ ಅವರ ಶೋಷಿತಪರವಾದ ಕೈಂಕರ್ಯವನ್ನು ಮನಗಂಡ ಮೈಸೂರು ಅರಸರು, ದಿವಾನ್ ಸರ್ ಮಿರ್ಜಾ ಎಂ. ಇಸ್ಮಾಯಿಲ್ ಅವರ ಶಿಫಾರಸ್ಸಿನ ಮೇರೆಗೆ ಅಯ್ಯರ್ ಅವರಿಗೆ ಉಚಿತ ರೈಲ್ವೆ ಪಾಸ್ ನೀಡಿ ಸಂಸ್ಥಾನದಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರು ಯಾವಾಗಬೇಕಾದರು ಪ್ರಯಾಣ ಮಾಡಲು ಮತ್ತು ರೈಲಿನಲ್ಲಿ ತಮ್ಮ ಸೈಕಲ್ ತೆಗೆದುಕೊಂಡು ಹೋಗಲು 1926ರಲ್ಲಿ ಮೈಸೂರು ಸಂಸ್ಥಾನದ ಮೂಲಕ ಪರವಾನಿಗೆಯ ಆಜ್ಞೆ ಹೊರಡಿಸಿದರು. ತಮ್ಮ ಸೈಕಲ್ ಮೇಲೆ ಅಪಾರವಾದ ವ್ಯಾಮೋಹ ಇಟ್ಟುಕೊಂಡಿದ್ದ ಅಯ್ಯರ್ “ನಾನು ಸಾಯುವುದಕ್ಕೆ ಮುಂಚೆ ಐದು ನಿಮಿಷ ಸಮಯ ಸಿಕ್ಕಿದರೆ ನಮ್ಮ ಮನೆಯಿಂದ ಸ್ಮಶಾನಕ್ಕೆ ಸೈಕಲ್ ಮೇಲೆ ಹೋಗಿ ಸಾಯುವ ಅಪೇಕ್ಷೆ ನನಗಿದೆ” ಎಂದು ಹೇಳುತ್ತಿದ್ದರು.

ನಾಲ್ವಡಿ ಅವರು ಸ್ಥಾಪಿಸಿದ ಪಂಚಮ ಶಾಲೆಗಳಲ್ಲಿ ಓದಿದ ದಲಿತ ಸಮುದಾಯದ ಕುಣಿಗಲ್ನ ಚಲುವಯ್ಯ, ಶಿರಾದ ವಿ. ಕದರಪ್ಪ, ಬೆಳ್ಳಾವಿಯ ಕೆಂಪಹನುಮಯ್ಯ, ಸೋಸಲೆಯ ಬಿ. ರಾಜಪ್ಪ ಮತ್ತು ಮಳವಳ್ಳಿಯ ಎಂ. ಲಿಂಗಯ್ಯ ಅವರು 1912-13ನೇ ಸಾಲಿನಲ್ಲಿ ಮೊಟ್ಟಮೊದಲಿಗೆ ಕನ್ನಡ ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು. ನಾಲ್ವಡಿ ಕೃಷ್ಣರಾಜ ಒಡೆಯರ ಆದೇಶದ ಮೇರೆಗೆ ನಂಜುಂಡರಾಜೇ ಅರಸ್ ಮತ್ತು ಅಂಬಳೇ ಅಣ್ಣಯ್ಯ ಪಂಡಿತರು 1914ರಲ್ಲಿ ಮೈಸೂರಿನ ನಜರ್ಬಾದ್ನಲ್ಲಿ ಐತಿಹಾಸಿಕವಾದ ‘ಪಂಚಮರ ಬೋರ್ಡಿಂಗ್ ಹೋಂ’ ಸ್ಥಾಪಿಸಿದರು. ನಂಜುಂಡರಾಜೇ ಅರಸ್, ಆಲಿಖಾನ್ಸಾಬ್ ಅವರು ಈ ವಸತಿ ಶಾಲೆಯ ಸದಸ್ಯರಾಗಿದ್ದರು. ಈ ಶಾಲೆಯ ಮಕ್ಕಳಿಗೆ ಮೇಲ್ಜಾತಿಯ ಉಪಾಧ್ಯಾಯರು ಪಾಠ ಮಾಡಲು ಒಪ್ಪದಿದ್ದಾಗ ವರದರಾಜ್ ಅಯ್ಯಂಗಾರ್(ಇಂಗ್ಲೀಷ್ ಶಿಕ್ಷಕ) ಹಾಗೂ ತಲಕಾಡು ರಂಗೇಗೌಡರು(ಕನ್ನಡ ಶಿಕ್ಷಕ) ಅಸ್ಪøಶ್ಯ ಮಕ್ಕಳಿಗೆ ನಾವು ಪಾಠ ಹೇಳಿಕೊಡುತ್ತೇವೆ ಎಂದು ಮುಂದೆ ಬಂದರು. ಇವರು ಮೈಸೂರು ಸಂಸ್ಥಾನದ ಪಂಚಮ ವಿದ್ಯಾರ್ಥಿಗಳಿಗೆ ಪಾಠ ಹೇಳಿದ ಮೊದಲ ಉಪಾಧ್ಯಾಯರು. ಗೋಪಾಲಸ್ವಾಮಿ ಅಯ್ಯರ್ ಅವರು ಸೈಕಲ್ನಲ್ಲಿ ಹಳ್ಳಿಹಳ್ಳಿಗಳನ್ನು ತಿರುಗಾಡಿ ಹೊಲಗದ್ದೆಗಳಲ್ಲಿ ದುಡಿಯುತ್ತಿದ್ದ, ಜೀತ ಮಾಡುತ್ತಿದ್ದ, ದನ-ಎಮ್ಮೆ-ಕುರಿ ಮೇಯಿಸುತ್ತಿದ್ದ ದಲಿತ ಮಕ್ಕಳನ್ನು ಕರೆದು ತಂದು ಪಂಚಮ ಶಾಲೆಗಳಿಗೆ ಸೇರಿಸುತ್ತಿದ್ದರು. ಇದನ್ನು ಸಹಿಸದ ಜಾತಿವಾದಿ ಸವರ್ಣೀಯರು ಅಯ್ಯರ್ ಅವರನ್ನು ‘ಪಂಚಮರ ಗೋಪಾಲಸ್ವಾಮಿ, ಹೊಲೆಯರ ಗೋಪಾಲಸ್ವಾಮಿ’ ಎಂದು ವ್ಯಂಗ್ಯವಾಗಿ ಕರೆಯುವ ಮೂಲಕ ಅವಮಾನಿಸುತ್ತಿದ್ದರು.

1923ರಲ್ಲಿ ಅಯ್ಯರ್ ಅವರ ಒತ್ತಾಸೆ ಮೇರೆಗೆ ಮೈಸೂರು ಅರಸರು ಬೆಂಗಳೂರಿನಲ್ಲಿ ‘ಪಂಚಮ ಬೋರ್ಡಿಂಗ್ ಹೋಂ’ ಸ್ಥಾಪಿಸಿದರು. 1927ರಲ್ಲಿ ಇದಕ್ಕೆ ‘ಶ್ರೀ ನರಸಿಂಹರಾಜ ಹಾಸ್ಟಲ್’ ಎಂದು ಮರುನಾಮಕರಣ ಮಾಡಲಾಯಿತು. ಈ ಹಾಸ್ಟಲ್ನಲ್ಲಿ ನೆಲಮಂಗಲದ ಕಡೆಯ ಇಬ್ಬರು ಒಕ್ಕಲಿಗರು ಹಾಸ್ಟಲ್ ಮಕ್ಕಳಿಗೆ ಅಡಿಗೆ ಮಾಡುತ್ತಿದ್ದರು. ಈ ವಿಚಾರ ಅವರ ಊರಿನ ತಮ್ಮ ಜಾತಿಯವರಿಗೆ ತಿಳಿದಾಗ ದಲಿತ ವಿದ್ಯಾರ್ಥಿ ನಿಲಯದಲ್ಲಿ ಅಡಿಗೆ ಮಾಡುತ್ತಿದ್ದ ತಮ್ಮದೇ ಜಾತಿಯ ಈ ಇಬ್ಬರನ್ನು ಜಾತಿಯಿಂದ ಬಹಿಷ್ಕರಿಸುತ್ತಾರೆ. ಇದರಿಂದ ಆ ಇಬ್ಬರು ಅಡಿಗೆ ಕೆಲಸವನ್ನು ಬಿಟ್ಟು ಹೋಗುತ್ತಾರೆ. ನಂತರ ಕೇರಳದ ಇಬ್ಬರು ನಾಯರ್ ಸಮುದಾಯದ ವ್ಯಕ್ತಿಗಳನ್ನು ಹಾಸ್ಟೆಲ್ ಅಡಿಗೆ ಕೆಲಸಕ್ಕೆ ನೇಮಿಸಲಾಯಿತು. 1935ರಲ್ಲಿ ತುಮಕೂರು, ಹಾಸನಗಳಲ್ಲಿಯೂ ಸಹ ‘ಶ್ರೀ ನರಸಿಂಹರಾಜ ಹಾಸ್ಟಲ್’ಗಳನ್ನು ತೆರೆಯಲಾಯಿತು. ಕಠಿಣವಾದ ಜಾತಿ ವ್ಯವಸ್ಥೆಯ ನಡುವೆಯೂ ಅಯ್ಯರ್ ಅವರು ಶೋಷಿತರ ಪರವಾಗಿ ದುಡಿಯುತ್ತಿದ್ದರು. ಕೆಲವು ಸಲ ಅಯ್ಯರ್ ಅವರು ಜಾತಿವಾದಿಗಳಿಂದ ದೈಹಿಕ ಹಲ್ಲೆ, ನಿಂದನೆಗೂ ಕೂಡ ಒಳಗಾಗಬೇಕಾಯಿತು. ಈ ಎಲ್ಲಾ ಸಂದಿಗ್ಧತೆಯ ನಡುವೆಯೂ ಅಯ್ಯರ್ ಅವರು, ಅಸ್ಪೃಶ್ಯತೆಯ ಅವಮಾನದಿಂದ ಕುಗ್ಗಿಹೋಗಿದ್ದ ದಲಿತ ವಿದ್ಯಾರ್ಥಿಗಳಿಗೆ : “ನೀವು ಅಸ್ಪೃಶ್ಯರೆಂದು ಡಂಗೂರ ಹಾಕಬೇಡಿ. ವಿದ್ಯಾವಂತರಾಗಿ ಧೈರ್ಯದಿಂದ ತಲೆಯೆತ್ತಿ ನಡೆಯಿರಿ. ಸರ್ಕಾರದಲ್ಲಿ ಅಧಿಕಾರ ಸಂಪಾದಿಸಿಕೊಳ್ಳಿ. ನೆರೆಹೊರೆಯವರಂತೆ ಬಾಳುವುದನ್ನು ಕಲಿಯಿರಿ. ಅಸ್ಪೃಶ್ಯತೆ ತಾನಾಗಿಯೇ ಮಾಯವಾಗುತ್ತದೆ” ಎಂದು ಮಾನಸಿಕವಾಗಿ ಧೈರ್ಯ ತುಂಬುತ್ತಿದ್ದರು. ಅಯ್ಯರ್ ಅವರಂತೆಯೇ ಅನೇಕ ಪ್ರಗತಿಪರ ಬ್ರಾಹ್ಮಣರು ಆ ಕಾಲಕ್ಕಾಗಲೇ ದಲಿತರ ಪರವಾಗಿ ಪ್ರಾಮಾಣಿಕವಾಗಿ ಚಿಂತಿಸುತ್ತಿದ್ದರು. ಒಮ್ಮೆ ಪಂಚಮ ಶಾಲೆಗಳಲ್ಲಿ ಪಾಠ ಮಾಡುತ್ತಿದ್ದ ಹದಿಮೂರು ಜನ ಉಪಾಧ್ಯಾಯರು ಶಾಲೆಗಳನ್ನು ಬಹಿಷ್ಕರಿಸಿದಾಗ, ಬ್ರಾಹ್ಮಣ ಸಮುದಾಯದ ಮಹಿಳೆಯರಾದ ಶ್ರೀಮತಿ ವೆಂಕಟಲಕ್ಷ್ಮಮ್ಮ, ಶ್ರೀಮತಿ ಜಿ. ವನಜಮ್ಮ ಅವರು ಪಂಚಮ ಶಾಲೆಯ ಮಕ್ಕಳಿಗೆ ನಾವು ಪಾಠ ಮಾಡುತ್ತೇವೆಂದು ಮುಂದೆ ಬರುತ್ತಾರೆ. ಎಲ್ಲಾ ಕಾಲಕ್ಕೂ, ಎಲ್ಲಾ ಜಾತಿ ಸಮುದಾಯಗಳಲ್ಲೂ ಸಹಾ ಇಂತಹ ಜಾತ್ಯತೀತ ವ್ಯಕ್ತಿತ್ವಗಳು ಕಾಣಸಿಗುತ್ತಾರೆ.

1919ರಲ್ಲಿ ‘ಮೈಸೂರು ಸಿವಿಕ್ ಅಂಡ್ ಸೋಷಿಯಲ್ ಪ್ರೋಗ್ರೆಸ್ ಅಸೋಸಿಯೇಷನ್’ ವತಿಯಿಂದ ಬೆಂಗಳೂರಿನಲ್ಲಿ ಪ್ರಥಮ ‘ಪಂಚಮ ಸಮ್ಮೇಳನ’ವನ್ನು ಏರ್ಪಡಿಸಲಾಗಿತ್ತು. ಮದ್ರಾಸಿನಿಂದ ದಲಿತ ನಾಯಕ ಎಂ.ಸಿ. ರಾಜ ಅವರನ್ನು ಆಹ್ವಾನಿಸಿ ಸನ್ಮಾನಿಸಲಾಯಿತು. ತಲಕಾಡು ಆರ್. ರಂಗೇಗೌಡ, ಮಳವಳ್ಳಿ ಕೆ. ಲಿಂಗಯ್ಯ, ಸೋಸಲೆ ಪಿ. ಮಲ್ಲಪ್ಪ, ವಿರುಪಾಕ್ಷಯ್ಯ, ವನಜಮ್ಮ, ನಾರಾಯಣಸ್ವಾಮಿ ಅಯ್ಯರ್ ಅವರುಗಳು ಈ ಸಮ್ಮೇಳನವನ್ನು ಆಯೋಜಿಸಿದ್ದರು. ಈ ಸಮ್ಮೇಳನದಲ್ಲಿಯೇ ‘ಪಂಚಮ’ ಎಂಬ ಹೆಸರಿಗೆ ಬದಲಾಗಿ ‘ಆದಿ ದ್ರಾವಿಡ’ ಎಂಬ ಹೆಸರನ್ನು ಚಾಲ್ತಿಗೆ ತರಲಾಯಿತು. ಮುಂದೆ ಎಲ್ಲರೂ ಪಂಚಮರನ್ನು ‘ಆದಿ ದ್ರಾವಿಡ’ ಎಂಬ ಹೆಸರಿನಿಂದ ಗುರುತಿಸಬೇಕೆಂದು ತೀರ್ಮಾನಿಸಲಾಯಿತು. ಆದಿ ದ್ರಾವಿಡ ಬೋರ್ಡಿಂಗ್ ಹೋಂನಿಂದ ‘ಆದಿ ದ್ರಾವಿಡ’ ಎಂಬ ಪತ್ರಿಕೆಯನ್ನು ಆರಂಭಿಸಿದರು. 1925ರ ಅಕ್ಟೋಬರ್ ತಿಂಗಳಲ್ಲಿ ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ‘ಪಂಚಮರ ಸಮ್ಮೇಳನ’ವನ್ನು ಆಯೋಜಿಸಲಾಯಿತು. ತುಮಕೂರಿನ ಜಿಲ್ಲಾಧಿಕಾರಿಗಳಾಗಿದ್ದ ಕೆ.ವಿ. ಅನಂತರಾಮನ್ ಅವರು ಈ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಈ ಸಮ್ಮೇಳನದಲ್ಲಿ ಭಾಗವಹಿಸಿದವರೆಲ್ಲರೂ, ಪಂಚಮರನ್ನು ಜಾತಿಯ ಹೆಸರಿನಿಂದ ಗುರುತಿಸದೆ ‘ಆದಿ ಕರ್ನಾಟಕ’ ಎಂಬ ಹೆಸರಿನಿಂದ ಕರೆಯಲು ಆದೇಶ ಹೊರಡಿಸಬೇಕು ಎಂಬುದಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಮನವಿ ಸಲ್ಲಿಸಿದರು. ಈ ಮನವಿಯ ಆಧಾರದ ಮೇಲೆ ನಾಲ್ವಡಿ ಅವರು 1925 ಅಕ್ಟೋಬರ್ 16ರಂದು, ದಲಿತರನ್ನು ‘ಆದಿಕರ್ನಾಟಕರು’ ಎಂದು ಕರೆಯಬೇಕೆಂದು ಸರ್ಕಾರಿ ಆದೇಶವನ್ನು ಅಧಿಕೃತವಾಗಿ ಪ್ರಕಟಿಸಿದರು.(ಕರ್ನಾಟಕದ ಸಮಗ್ರ ದಲಿತ ಚರಿತ್ರೆ, ಪು-64) ಗೋಪಾಲಸ್ವಾಮಿ ಅಯ್ಯರ್ ಅವರ ಪ್ರಯತ್ನದಿಂದಾಗಿ 1920ರಲ್ಲಿ ದಲಿತರಿಗಾಗಿ ಮರಗೆಲಸ, ನೇಯ್ಗೆ, ಹೊಲಿಗೆ, ತೋಟಗಾರಿಕೆ ಮುಂತಾದ ಉದ್ಯೋಗ ತರಬೇತಿ ಶಾಲೆಗಳನ್ನು ಮೈಸೂರಿನಲ್ಲಿ ಅರಸರು ಆರಂಭಿಸಿದರು. ಇದೇ ಸಂದರ್ಭದಲ್ಲಿ ನಂಜನಗೂಡಿನ ಬ್ರಾಹ್ಮಣ, ಲಿಂಗಾಯಿತರು ತಮ್ಮ ಕೇರಿಯಲ್ಲಿದ್ದ ಶಾಲೆಗೆ ಅಸ್ಪೃಶ್ಯರ ಹುಡುಗರನ್ನು ಸೇರಿಸಲು ನಿರಾಕರಿಸಿದರು. ಈ ವಿಷಯ ತಿಳಿದ ಅಯ್ಯರ್ ಅವರು ನಂಜನಗೂಡಿಗೆ ಹೋಗಿ ಸಮಸ್ಯೆಯನ್ನು ಬಗೆಹರಿಸಲು ಮುಂದಾದಾಗ ಇವರದೆ ಬ್ರಾಹ್ಮಣ ಜಾತಿಯ ಜಾತಿವಾದಿಗಳು ಇವರನ್ನು ಅವಮಾನಿಸಿ, ಇವರ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಾರೆ. ಮರುದಿನ ಅಯ್ಯರ್ ಅವರು ಸಿ. ಆರ್. ರೆಡ್ಡಿ ಅವರನ್ನು ಕರೆದುಕೊಂಡು ಹೋಗಿ ಸವರ್ಣೀಯರಿಗೆ ಎಷ್ಟು ಹೇಳಿದರು ಅವರ ಜಾತಿವಾದಿ ಮನಸ್ಸು ಬದಲಾಗಲಿಲ್ಲ. ಆಗ ಅನಿವಾರ್ಯವಾಗಿ ಶಾಲೆಯನ್ನು ದಲಿತರ ಕೇರಿಗೆ ವರ್ಗಾಯಿಸುತ್ತಾರೆ. ಈ ಘಟನೆಯಿಂದ ಮನನೊಂದ ಆಗಿನ ವಿದ್ಯಾ ಇಲಾಖೆಯ ಮುಖ್ಯಸ್ಥರಾಗಿದ್ದ ಕಟ್ಟೆಮಂಚಿ ರಾಮಲಿಂಗ ರೆಡ್ಡಿ(ಸಿ.ಆರ್.ರೆಡ್ಡಿ) ಅವರು “1919ರಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅಸ್ಪøಶ್ಯರಿಗೆ ಮುಕ್ತ ಪ್ರವೇಶಾವಕಾಶ ಕಲ್ಪಿಸುವ ರಾಜಾಜ್ಞೆಯನ್ನು ಹೊರಡಿಸಿದರು. ನಾಲ್ವಡಿ ಅವರ ಸಹಕಾರ ಪಡೆದು ಶಾಲಾ ಪ್ರವೇಶ ಎಲ್ಲರ ಹಕ್ಕು ಎಂದು ಆಜ್ಞೆ ಹೊರಡಿಸಿದರು.”(ಕರ್ನಾಟಕದ ಸಮಗ್ರ ದಲಿತ ಚರಿತ್ರೆ, ಪು-31) 15ನೇ ಜುಲೈ 1927ರಂದು ಬೆಂಗಳೂರಿನ ಶ್ರೀ ನರಸಿಂಹರಾಜ ಹಾಸ್ಟೆಲ್ಗೆ ಗಾಂಧೀಜಿಯವರನ್ನು ಕರೆತಂದ ಅಯ್ಯರ್ ಅವರು ಹಾಸ್ಟೆಲ್ನಲ್ಲಿ ಓದುತ್ತಿದ್ದ ಪ್ರತಿಭಾವಂತ ದಲಿತ ವಿದ್ಯಾರ್ಥಿಗಳಾದ ಕೆ.ಟಿ. ರಾಮಸ್ವಾಮಿ, ಆರ್. ಭರಣಯ್ಯ, ಮಂಟೇಲಿಂಗಯ್ಯ, ಯಾಲಕ್ಕಯ್ಯ, ತಿಮ್ಮಯ್ಯ ಅವರನ್ನು ಗಾಂಧೀಜಿ ಅವರಿಗೆ ಪರಿಚಯಿಸುತ್ತಾರೆ. 1934ರಲ್ಲಿ ಮತ್ತೆ ಆಗಮಿಸಿದ ಗಾಂಧೀಜಿಯವರಿಂದ ಬೆಂಗಳೂರಿನ ಮಾಗಡಿ ರಸ್ತೆಯ ಬಿನ್ನಿಮಿಲ್ಲಿನ ಪಕ್ಕದಲ್ಲಿ ‘ಅದಿಜಾಂಬವ ಹಾಸ್ಟೆಲ್’ಗೆ ಶಂಕುಸ್ಥಾಪನೆ ಮಾಡಿಸುತ್ತಾರೆ. ದಲಿತಪರವಾದ ಕಾಳಜಿಯುಳ್ಳ ಅಯ್ಯರ್ ಅವರ ಮೇಲಿನ ಗೌರವದಿಂದ ಜನರು ಮಾಗಡಿ ರಸ್ತೆಯಲ್ಲಿದ್ದ ಉಕ್ಕಡಪಾಳ್ಯ ಬಡವಾಣೆಗೆ ಅಯ್ಯರ್ ಅವರ ಗೌರವಾರ್ಥ ‘ಗೋಪಾಲಪುರ’ ಎಂದು ಮರುನಾಮಕರಣ ಮಾಡಿದ ವಿಷಯವನ್ನು ಕೇಳಿ ಗಾಂಧೀಜಿಯವರು ಹೆಮ್ಮೆಪಟ್ಟರು.

1922ರಲ್ಲಿ ‘ಮೈಸೂರು ಸಿವಿಕ್ ಅಂಡ್ ಸೋಷಿಯಲ್ ಪ್ರೋಗ್ರೆಸ್ ಅಸೋಸಿಯೇಷನ್’ ಅವರು ಮೈಸೂರಿನ ಶಾರದಾ ವಿಲಾಸ ಹೈಸ್ಕೂಲ್ನಲ್ಲಿ ಪಂಚಮರ ಸಮ್ಮೇಳನವನ್ನು ಆಯೋಜಿಸಿದ್ದರು. ಈ ಸಮ್ಮೇಳನದಲ್ಲಿ ಅದ್ಭುತವಾಗಿ ಭಾಷಣ ಮಾಡಿದ, ತುಮಕೂರಿನಲ್ಲಿ ಹೈಸ್ಕೂಲ್ ಓದುತ್ತಿದ್ದ ಕೊರಟಗೆರೆಯ ವಿದ್ಯಾರ್ಥಿ ಚಿಕ್ಕಹನುಮಂತಯ್ಯನನ್ನು ಆಲಂಗಿಸಿಕೊಂಡು ಅಭಿನಂದಿಸಿದ ಅಯ್ಯರ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ : “ಇವನು ಎಡಗೈನವನು(ಮಾದಿಗ) ಕಣ್ರಯ್ಯ. ಎಡಗೈ, ಬಲಗೈ(ಹೊಲೆಯ) ಎಲ್ಲಾ ಬಿಟ್ಟು ಎರಡು ಕೈಗಳೂ ಒಂದೇ ದೇಹಕ್ಕೆ ಸೇರಿದವೆಂದು ತಿಳಿದು ಒಟ್ಟಿಗೆ ವಿದ್ಯಾವಂತರಾಗಿ ಮುಂದುವರಿಯಬೇಕೆಂದು ತಿಳಿವಳಿಕೆ ಕೊಟ್ಟರು.” ನಂತರ ಸಮ್ಮೇಳನದಲ್ಲಿ ನೆರೆದಿದ್ದ ಗಣ್ಯರಿಗೆ ಚಿಕ್ಕಹನುಮಂತಯ್ಯ, ಸೋಸಲೆ ಬಿ. ರಾಚಯ್ಯನವರನ್ನು ಪರಿಚಯ ಮಾಡಿಕೊಡುತ್ತಾರೆ. ದಲಿತ ಸಮುದಾಯದಲ್ಲಿರುವ ಉಪಜಾತಿ, ಪಂಗಡಗಳ ಭಿನ್ನತೆಯನ್ನು ಮೀರಿ ಶೋಷಿತ ಸಮುದಾಯಗಳು ತಮ್ಮ ಏಳ್ಗೆಗಾಗಿ ಸಂಘಟಿತರಾಗಬೇಕೆಂಬ ಅಯ್ಯರ್ ಅವರ ಕಾಳಜಿಯನ್ನು ಇದು ನಿರೂಪಿಸುತ್ತದೆ. ಅಯ್ಯರ್ ಅವರು ಆ ಹೊತ್ತಿಗಾಗಲೇ ದಲಿತ ಸಮುದಾಯದಲ್ಲಿನ ಒಳ ಪಂಗಡಗಳ ಸಮಸ್ಯೆಯನ್ನು ಅರ್ಥಮಾಡಿಕೊಂಡು, ದಲಿತರು ಒಳ ಪಂಗಡಗಳ ಭಿನ್ನಬೇಧಗಳನ್ನು ಮರೆತು ಸಾಮುದಾಯಿಕವಾಗಿ ಒಗ್ಗಟ್ಟಾಗಿ ತಮ್ಮ ಸಮಸ್ಯೆಗಳ ವಿರುದ್ಧ ಹೋರಾಡಬೇಕೆಂಬ ವಿವೇಕವನ್ನು ಹೇಳುವ ಮೂಲಕ ದಲಿತರನ್ನು ಎಚ್ಚರಿಸುವ ಪ್ರಯತ್ನ ಮಾಡಿದ್ದಾರೆ. ಇಂದು ಎಡ-ಬಲವೆಂದು ವಿಘಟನೆಗೊಂಡು ಪರಸ್ಪರ ದ್ವೇಷ, ಅನುಮಾನ, ಅಸೂಯೆಯಿಂದ ಛಿದ್ರಗೊಳ್ಳುತ್ತಿರುವ ದಲಿತ ಸಮುದಾಯ ಐಯ್ಯರ್ ಅವರು ಅಂದು ಹೇಳಿದ ಮಾತನ್ನು ಗಂಭೀರವಾಗಿ ಆಲಿಸಬೇಕಿದೆ. ಆಮೂಲಕ ಸಾಮಾಜಿಕವಾಗಿ, ರಾಜಕೀಯವಾಗಿ, ಧಾರ್ಮಿಕವಾಗಿ ಸಂಘಟನೆಗೊಳ್ಳಬೇಕಿದೆ. ಮುಂದೆ ಇದೇ ರೀತಿಯಲ್ಲಿ ಪಂಚಮರ ಸಮ್ಮೇಳನವನ್ನು ಕೊರಟಗೆರೆಯಲ್ಲಿ 1925ರ ಮೇ ತಿಂಗಳಲ್ಲಿ, ಎಡತೊರೆಯಲ್ಲಿ 1938ರ ಮಾರ್ಚ್ ತಿಂಗಳಲ್ಲಿ ಆಯೋಜಿಸುವ ಮೂಲಕ ಶೋಷಿತ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಯಿತು. ಕಲೆ, ಕ್ರೀಡೆಯಲ್ಲಿ ಆಸಕ್ತಿಯಿದ್ದ ಅಯ್ಯರ್ ಅವರು ಹಾಸ್ಟೆಲ್ ವಿದ್ಯಾರ್ಥಿಗಳು ನಾಟಕ, ಸ್ಕೌಟ್, ವಾಲಿಬಾಲ್, ಫುಟ್ಬಾಲ್, ಬಾಸ್ಕೆಟ್ಬಾಲ್ ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುತ್ತಿದ್ದರು. 1930ರ ಸಂದರ್ಭದಲ್ಲಿ ಅಯ್ಯರ್ ಅವರ ನೇತೃತ್ವದಲ್ಲಿ ನರಸಿಂಹರಾಜ ಹಾಸ್ಟೆಲ್ನಲ್ಲಿ ವಿದ್ಯಾರ್ಥಿಗಳು “ಶ್ರೀ ಆರ್. ಗೋಪಾಲಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿ”ಯನ್ನು ಸ್ಥಾಪಿಸಿಕೊಂಡು ಅದರ ಮೂಲಕ ಕುರುಕ್ಷೇತ್ರ, ವಿರಾಟಪರ್ವ, ಸದಾರಮೆ, ಶ್ರೀಕೃಷ್ಣಲೀಲೆ ಮುಂತಾದ ನಾಟಕಗಳನ್ನು ಅಭಿನಯಿಸುತ್ತಿದ್ದರು. ಗುಬ್ಬಿ ತಾಲ್ಲೂಕಿನ ಪುಟ್ಟಪ್ಪ ನಾಟಕ ಕಲಿಸುತ್ತಿದ್ದರು. ಸೋಮನಾಥಪುರದ ಪುಟ್ಟರಂಗಯ್ಯ, ಹೊನ್ನೂರಿನ ಎಚ್. ಮಲ್ಲಯ್ಯ, ಗೂಳೂರಿನ ತಿಮ್ಮಯ್ಯ, ಮದ್ದೂರು ತಾಲ್ಲೂಕಿನ ರಾಸಟ್ಟಿಪುರದ ಶಂಕರಯ್ಯ, ಕೊರಟಗೆರೆ ಪುಟ್ಟರಾಮಯ್ಯ ಅವರು ನಾಟಕ ಮಂಡಲಿ ಸದಸ್ಯರಾಗಿದ್ದರು. ಹೀಗೆ ದಲಿತ ವಿದ್ಯಾರ್ಥಿಗಳು ಸಾಂಸ್ಕøತಿಕವಾಗಿಯೂ ಶ್ರೀಮಂತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕೆಂಬುದು ಅಯ್ಯರ್ ಅವರ ಆಶಯವಾಗಿತ್ತು.

ಬೆಂಗಳೂರಿನ ಪಬ್ಲಿಕ್ ಆಫೀಸ್ನ ಸಭಾಂಗಣದಲ್ಲಿ 23, 24ನೇ ಅಕ್ಟೋಬರ್ 1930ರಂದು ನಡೆದ ‘ಮೈಸೂರು ಸಂಸ್ಥಾನದ ಆರ್ಥಿಕ ಸಮ್ಮೇಳನ’ದಲ್ಲಿ ಅಯ್ಯರ್ ಅವರು ಭಾಗವಹಿಸಿದ್ದರು. ಈ ಸಮ್ಮೆಳನದಲ್ಲಿ ಭಾಗವಹಿಸಿದ್ದ ಕೆಲವರು ‘ದಲಿತ ವಿದ್ಯಾರ್ಥಿಗಳಿಗೆ ಈಗ ಕೊಡುತ್ತಿರುವ ವಿದ್ಯಾರ್ಥಿವೇತನವನ್ನು ಕಡಿಮೆ ಮಾಡಿದರೆ ಇನ್ನಷ್ಟು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಬಹುದು’ ಎಂದು ಸಲಹೆ ನೀಡಿದರು. ಇದನ್ನು ಖಂಡಿಸಿದ ಅಯ್ಯರ್ ಅವರು : “ಹಣವನ್ನು ಕಡಿಮೆ ಮಾಡಿದರೆ ವಿದ್ಯಾರ್ಥಿಗಳಲ್ಲಿ ಅತೃಪ್ತಿ ಉಂಟಾಗಿ ವಿದ್ಯಾಭ್ಯಾಸವು ಕುಂಠಿತಗೊಳ್ಳುತ್ತದೆ ಹಾಗೂ ಈ ಜನಾಂಗಗಳಲ್ಲಿ ತಮ್ಮದೇ ಆದ ಹಣ ಸಂಗ್ರಹಿಸುವಂತಹ ಯಾವುದೇ ಸಂಘ-ಸಂಸ್ಥೆಗಳ ಸಂಘಟನೆಯಾಗಿಲ್ಲ ಹಾಗೂ ನೋಟ್ಬುಕ್ಗಳ ಬೆಲೆ ಹೆಚ್ಚಳವಾಗಿರುವಾಗ ವಿದ್ಯಾರ್ಥಿವೇತನವನ್ನು ಹೆಚ್ಚಿಸಬೇಕೇ ವಿನಃ ಕಡಿಮೆ ಮಾಡಬಾರದು”(ಕರ್ನಾಟಕದ ಸಮಗ್ರ ದಲಿತ ಚರಿತ್ರೆ, ಪು-67) ಎಂದು ವಾದಿಸುತ್ತಾರೆ. ದಲಿತರ ಶೈಕ್ಷಣಿಕ ಉನ್ನತಿಗೆ ಸಂಬಂಧಿಸಿದ ಅಯ್ಯರ್ ಅವರ ಈ ಸಲಹೆಯ ಮೇರೆಗೆ ಕೆ. ವಿ. ಅನಂತರಾಮನ್ ಅವರು ಮಳವಳ್ಳಿ ಮತ್ತು ನಂಜನಗೂಡಿನಲ್ಲಿ ಆದಿಕರ್ನಾಟಕ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಿದರು; ತುಮಕೂರಿನ ಜಿಲ್ಲಾಧಿಕಾರಿಯಾಗಿದ್ದ ಜೆ. ಬೆ. ಹೆಬ್ಳಿಕರ್ ಅವರು ಮೈಸೂರು ಸಂಸ್ಥಾನದಲ್ಲಿ ದಲಿತರಿಗಾಗಿ 304 ಸಂಘ-ಸಂಸ್ಥೆಗಳನ್ನು ತೆರೆದರು; ಶಿವಮೊಗ್ಗದ ಜಿಲ್ಲಾಧಿಕಾರಿ ಜಿ. ರುದ್ರಪ್ಪನವರು 100 ಎಕರೆ ಸರ್ಕಾರಿ ಭೂಮಿಯನ್ನು ಮಂಜೂರು ಮಾಡಿ 30 ದಲಿತ ಕುಟುಂಬಗಳು ವ್ಯವಸಾಯ ಮಾಡಲು ಎಲ್ಲ ಬಗೆಯ ಸೌಲಭ್ಯವನ್ನು ಕಲ್ಪಿಸಿದರು; ಚಿತ್ರದುರ್ಗದ ಜಿಲ್ಲಾಧಿಕಾರಿ ಸಿ. ಎಸ್. ಕುಪ್ಪುಸ್ವಾಮಿ ಅವರು ದಲಿತರಿಗಾಗಿ ನೇಯ್ಗೆ ತರಬೇತಿ ಶಾಲೆಗಳನ್ನು, ಬಾವಿಗಳನ್ನು ಮಂಜೂರು ಮಾಡಿದರು.(ಕರ್ನಾಟಕದ ಸಮಗ್ರ ದಲಿತ ಚರಿತ್ರೆ, ಪು-67) ಈ ಎಲ್ಲ ಬಗೆಯ ದಲಿತಪರವಾದ ಪ್ರಗತಿಶೀಲ ಕಾರ್ಯಗಳ ಅನುಷ್ಠಾನಕ್ಕೆ ಅಯ್ಯರ್ ಅವರ ದಲಿತ ಪರವಾದ ಇಚ್ಛಾಸಕ್ತಿಯ ಪ್ರಭಾವವೇ ಕಾರಣ. ಹೀಗೆ ಅಯ್ಯರ್ ಅವರು ತಮ್ಮ ಚಿಂತನೆ ಹಾಗೂ ವ್ಯಕ್ತಿತ್ವದಿಂದ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಅವರೂ ಸಹಾ ದಲಿತರ ಪರವಾಗಿ ಕಾರ್ಯೋನ್ಮುಖರಾಗುವಂತೆ ಮಾಡುತ್ತಿದ್ದರು.

ಜಾತಿ ವ್ಯವಸ್ಥೆಯ ಒಳಗೆ ಅಸ್ಪೃಶ್ಯ ಸಮುದಾಯಗಳು ಅನುಭವಿಸುತ್ತಿದ್ದ ಸಾಮಾಜಿಕ ಬಹಿಷ್ಕಾರದಂತಹ ಅಮಾನವೀಯ ಶೋಷಣೆಗಳನ್ನು ಗೋಪಾಲಸ್ವಾಮಿ ಅಯ್ಯರ್ ಅವರು ಬಹಳವಾಗಿ ಖಂಡಿಸುತ್ತಿದ್ದರು. ಮಳವಳ್ಳಿಯ ಕುನ್ನೀರುಕಟ್ಟೆಯಲ್ಲಿ ದಲಿತರು ನೀರು ಮುಟ್ಟಿದ ಕಾರಣಕ್ಕಾಗಿ ಸವರ್ಣೀಯರು ದಲಿತರ ಮೇಲೆ ಹಲ್ಲೆ ಮಾಡಿ, ದಲಿತ ಹೆಣ್ಣು ಮಗಳು ದೊಡ್ಡಲಿಂಗಮ್ಮಳನ್ನು ಅವಮಾನಿಸುತ್ತಾರೆ. ಈ ವಿಚಾರವನ್ನು ತಿಳಿದ ಅಯ್ಯರ್ ಅವರು ಮಳವಳ್ಳಿಯ ಎಂ. ಮಾದಯ್ಯ ಅವರ ಮುಂದಾಳತ್ವದಲ್ಲಿ ನಡೆದ ಹೋರಾಟದಲ್ಲಿ ಭಾಗವಹಿಸಿ ತಪ್ಪಿತಸ್ಥರನ್ನು ನ್ಯಾಯಾಲಯದ ಶಿಕ್ಷೆಗೆ ಒಳಪಡಿಸುತ್ತಾರೆ. ದಲಿತರು ಮದ್ದೂರು ತಾಲ್ಲೂಕಿನ ಕೊಪ್ಪ ಹೋಬಳಿಯ ಕೊತ್ತನಹಳ್ಳಿ ಕೆರೆ ನೀರು ಮುಟ್ಟಿದ ಕಾರಣ ಒಕ್ಕಲಿಗ ಸಮುದಾಯದವರು ದಲಿತರ ಮೇಲೆ ಹಲ್ಲೆ ಮಾಡುತ್ತಾರೆ. ಈ ವಿಷಯ ತಿಳಿದ ಅಯ್ಯರ್ ಅವರು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸಭೆ ಮಾಡಿ ಒಕ್ಕಲಿಗರ ಮನಸ್ಸನ್ನು ಪರಿವರ್ತನೆ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಅಸ್ಪೃಶ್ಯತೆಯ ಅವಮಾನದ ಈ ಘಟನೆಯಿಂದ ಮನನೊಂದ ಆ ಗ್ರಾಮದ ದಲಿತರು ಇದೇ ಸಂದರ್ಭದಲ್ಲಿ ಹಿಂದೂ ಧರ್ಮ ತೊರೆದು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಲು ಯೋಚಿಸಿದ್ದರು. ಇದನ್ನು ಮನಗಂಡ ಅಯ್ಯರ್ ಅವರು ದಲಿತರನ್ನು ಉದ್ದೇಶಿಸಿ ಮಾತನಾಡುತ್ತ “ನಿಮಗೆಲ್ಲಾ ಸ್ವಾತಂತ್ರ್ಯ ಬರುತ್ತದೆ. ಆಗ ನೀವು ಓಟು ಹಾಕುವ ಹಕ್ಕನ್ನು ಪಡೆಯುತ್ತೀರಿ. ನಿಮ್ಮಲ್ಲಿ ಅನೇಕರು ಶಾಸಕರು, ಮಂತ್ರಿಗಳು ಆಗಬಹುದು. ಮತಾಂತರಗೊಂಡರೆ ಈ ಅವಕಾಶ ತಪ್ಪುತ್ತದೆ”(ಕರ್ನಾಟಕದ ಸಮಗ್ರ ದಲಿತ ಚರಿತ್ರೆ, ಪು-65) ಎಂದು ಹೇಳುವ ಮೂಲಕ ಮತಾಂತರ ಆಗುವುದನ್ನು ತಪ್ಪಿಸುತ್ತಾರೆ. ಅಯ್ಯರ್ ಅವರ ಗಾಂಧಿವಾದಿ ನಿಲುವನ್ನು ಇದು ತಿಳಿಸುತ್ತದೆ. ದಲಿತರು ಹಿಂದೂ ಸಮಾಜದ ಒಳಗೆ ಇದ್ದುಕೊಂಡು ಅಲ್ಲಿರುವ ಜಾತಿ, ಅಸ್ಪøಶ್ಯತೆ, ಅಸಮಾನತೆಗಳ ವಿರುದ್ಧ ಹೋರಾಡಿ ಅವುಗಳನ್ನು ಇಲ್ಲವಾಗಿಸಬೇಕು ಎಂಬುದು ಅಯ್ಯರ್ ಅವರ ಉದ್ದೇಶವಾಗಿತ್ತು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಇದೇ ಸಂದರ್ಭದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರು ಮಾಡುತ್ತಿದ್ದ ಸಾಮಾಜಿಕ ಚಳವಳಿಯ ವಿಚಾರ ಅಯ್ಯರ್ ಅವರ ಗಮನಕ್ಕೆ ಬಾರದಿರುವುದು ಆಶ್ಚರ್ಯದ ಸಂಗತಿ. ಅಂಬೇಡ್ಕರ್ ಅವರ ಸಂಪರ್ಕ ಹಾಗೂ ಅವರ ಚಿಂತನೆ, ಹೋರಾಟಗಳ ಪರಿಚಯವೇನಾದರು ಅಯ್ಯರ್ ಅವರಿಗೆ ದೊರಕಿದ್ದೆ ಆಗಿದ್ದರೆ ದಲಿತರ ಮತಾಂತರದ ವಿಚಾರದ ಬಗೆಗೆ ಅಯ್ಯರ್ ಅವರ ಅಭಿಪ್ರಾಯ ಬೇರೆಯದೆ ಆಗಿರುತ್ತಿತ್ತು ಎನಿಸುತ್ತದೆ. ಅಯ್ಯರ್ ಅವರಿಗೆ ಅಂಬೇಡ್ಕರ್ ಅವರ ಸಂಪರ್ಕ ದೊರಕಿದ್ದಿದ್ದರೆ ಅವರ ಸಮಾಜ ಪರಿವರ್ತನಾ ಚಳವಳಿ ಇನ್ನಷ್ಟು ತೀವ್ರ ಸ್ವರೂಪವನ್ನು ಪಡೆದುಕೊಳ್ಳುವ ಸಾಧ್ಯತೆ ಇತ್ತು.

ಮಂಡ್ಯದ ಕೊಮ್ಮೇರಳ್ಳಿಯಲ್ಲಿ ದಲಿತರು ಮತ್ತು ಒಕ್ಕಲಿಗರ ನಡುವೆ ಜಾತಿ ಗಲಭೆಯಾಗಿ ಎರಡು ಸಮುದಾಯದವರು ತುಂಬಾ ತೊಂದರೆ ಅನುಭವಿಸುತ್ತಿದ್ದ ಸಂದರ್ಭದಲ್ಲಿ ಅಯ್ಯರ್ ಅವರು ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಆ ಸಮುದಾಯಗಳ ನಡುವೆ ಸಾಮಾಜಿಕ ಸಾಮರಸ್ಯವನ್ನು ಮೂಡಿಸುವಲ್ಲಿ ಪ್ರಯತ್ನಿಸಿದರು. ‘ದಲಿತರ ಮಕ್ಕಳು ವಿದ್ಯಾವಂತರಾಗಬೇಕು, ಸರ್ಕಾರಿ ನೌಕರಿಗೆ ಸೇರಬೇಕು ಆಗ ಮಾತ್ರ ಅವರ ಅಭಿವೃದ್ಧಿ ಸಾಧ್ಯ’ ಎಂಬುದು ಅಯ್ಯರ್ ಅವರ ನಂಬಿಕೆಯಾಗಿತ್ತು. ಆ ನಿಟ್ಟಿನಲ್ಲಿ ಸೈಕಲ್ನಲ್ಲಿ ಹಳ್ಳಿ ಹಳ್ಳಿ ತಿರುಗಾಡಿ ಅಸ್ಪೃಶ್ಯರ ಮಕ್ಕಳನ್ನು ಶಾಲೆಗೆ ಸೇರಿಸುತ್ತಿದ್ದರು. ವಿದ್ಯಾವಂತ ಹುಡುಗರನ್ನು ಸರ್ಕಾರಿ ನೌಕರಿಗೆ ಸೇರಿಸಲು ಶಿಫಾರಸ್ಸು ಮಾಡುತ್ತಿದ್ದರು. ಯಾವಾಗಲು ತಮ್ಮ ಜೊತೆಯಲ್ಲಿರುತ್ತಿದ್ದ ಬಟ್ಟೆ ಚೀಲದಲ್ಲಿ ಪೋಸ್ಟ್ ಕಾರ್ಡ್ಗಳನ್ನು, ವಿದ್ಯಾರ್ಥಿಗಳ ಹೆಸರು, ವಯಸ್ಸು, ವಿದ್ಯಾಭ್ಯಾಸ, ತಂದೆ ತಾಯಿ ಹೆಸರು, ವಿಳಾಸ ಇರುವ ಪುಸ್ತಕವನ್ನು ಇಟ್ಟುಕೊಂಡಿರುತ್ತಿದ್ದರು. ಸಂದರ್ಭ ಬಂದಾಗ ಸ್ವತಃ ತಾವೇ ವಿದ್ಯಾರ್ಥಿಗಳಿಗೆ ಪತ್ರ ಬರೆದು ನೌಕರಿ ಹಾಗೂ ವಿದ್ಯಾಭ್ಯಾಸದ ವಿಷಯವನ್ನು ತಿಳಿಸುತ್ತಿದ್ದರು. ಮದ್ದೂರು ತಾಲ್ಲೂಕಿನ ಹೆಮ್ಮನಹಳ್ಳಿ, ನಿಡಗಟ್ಟ, ಸೋಮನಹಳ್ಳಿಯ ದಲಿತರಿಗೆ ಹೊಸ ಬಡಾವಣೆಗಾಗಿ ನಿವೇಶನವನ್ನು ಕಲ್ಪಿಸುವ ನಿಟ್ಟಿನಲ್ಲಿ ಅಯ್ಯರ್ ಅವರ ಹೋರಾಟ ಗಣನೀಯವಾದದ್ದು. ಕೆ. ಭೀಮಯ್ಯ(ಮುಖ್ಯ ನ್ಯಾಯಾಧೀಶರು), ಆರ್. ಭರಣಯ್ಯ, ಬಿ. ರಾಚಯ್ಯ, ಬಿ. ಬಸವಲಿಂಗಪ್ಪ, ಆರ್. ಬಿಳಿಗಿರಿರಂಗಯ್ಯ, ಅಶೋಕಪುರಂ ಜೆ. ಲಿಂಗಯ್ಯ, ಮರಿದಂಡಯ್ಯ, ರಾಮಕೃಷ್ಣಯ್ಯ, ಪಿ. ಜಿ. ಡಿ. ಸೌಜ, ಎಂ. ಬಿ. ಬೊಮ್ಮಯ್ಯ, ಕೆ. ಟಿ. ರಾಮಸ್ವಾಮಿ, ಡಿ. ನಂಜುಂಡಪ್ಪ, ಚಿಕ್ಕಹನುಮಂತಯ್ಯ, ಎಚ್. ಮಾದಯ್ಯ, ರಾಮಸಿಂಗಯ್ಯ(sಸೋಮನಹಳ್ಳಿಯ ದಲಿತರು ಸವರ್ಣೀಯರ ಬೀದಿಯಲ್ಲಿ ಚಪ್ಪಲಿ ಹಾಕಿಕೊಂಡು ನಡೆಯಬಾರದು ಎಂಬ ಕಟ್ಟುಪಾಡು ಇದ್ದ ಸಂದರ್ಭದಲ್ಲಿ ಅದನ್ನು ಧಿಕ್ಕರಿಸಿ ಧೈರ್ಯದಿಂದ ಚಪ್ಪಲಿ ಹಾಕಿಕೊಂಡು ಸವರ್ಣೀಯರ ಬೀದಿಯಲ್ಲಿ ನಡೆದು ಹೋದವರು ರಾಮಸಿಂಗಯ್ಯ.), ವರಗರಹಳ್ಳಿ ಡಿ. ವೆಂಕಟಯ್ಯ, ಜಿ. ವೆಂಕಟಯ್ಯ, ಕೆ. ಎಸ್. ಬೋರಯ್ಯ, ಮಳವಳ್ಳಿ ಎಂ. ಮಾದಯ್ಯ, ಬಿ. ಪುಟ್ಟಸ್ವಾಮಿ, ಆರ್. ಚೆನ್ನಿಗರಾಮಯ್ಯ, ಕೆ. ಕಾಳಯ್ಯ, ವೈ. ಸಿ. ಹೊಂಬಾಳಯ್ಯ(ಮೈಸೂರು ಸಂಸ್ಥಾನದಲ್ಲಿ ಎಲ್.ಎಲ್.ಬಿ. ಕಾನೂನು ಪದವಿ ಪಡೆದ ಮೊದಲ ದಲಿತ ವಿದ್ಯಾರ್ಥಿ. ಐಯ್ಯರ್ ಅವರ ಶಿಫಾರಸ್ಸಿನ ಮೇರೆಗೆ ಮೈಸೂರಿನ ದಿವಾನರಾಗಿದ್ದ ಎನ್. ಮಾಧವರಾವ್ ಅವರು ಇವರನ್ನು ಉಪ-ಆಯುಕ್ತರನ್ನಾಗಿ ನೇಮಕ ಮಾಡಿಕೊಂಡರು), ಆದಿಕರ್ನಾಟಕ ಸಮುದಾಯದ ಮೊದಲ ಸಬ್-ಇನ್ಸ್ಪೆಕ್ಟರ್ ಆದಿನಾರಾಯಣ್, ಡಿ. ನಂಜುಂಡಯ್ಯ ಮುಂತಾದ ಶೋಷಿತ ಸಮುದಾಯದ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸಿದವರು ಗೋಪಾಲಸ್ವಾಮಿ ಅಯ್ಯರ್. ಇವರೆಲ್ಲರೂ ಅಯ್ಯರ್ ಅವರ ಅಚ್ಚುಮೆಚ್ಚಿನ ಶಿಷ್ಯರಾಗಿದ್ದರು. ಕೆಂಗಲ್ ಹನುಮಂತಯ್ಯ ಅವರ ಮಂತ್ರಿಮಂಡಲದಲ್ಲಿ ಮಂತ್ರಿಯಾಗಿದ್ದ ಕೋಲಾರದ ಟಿ. ಚನ್ನಯ್ಯ ಅವರು ಸಹಾ ಅಯ್ಯರ್ ಅವರ ಅಚ್ಚುಮೆಚ್ಚಿನ ಶಿಷ್ಯರಲ್ಲಿ ಒಬ್ಬರಾಗಿದ್ದರು. ಅಯ್ಯರ್ ಅವರು ದಲಿತ ವಿದ್ಯಾರ್ಥಿಗಳಿಗೆ ಯಾವಾಗಲೂ “ನೀವೆಲ್ಲಾ ಬೂಕರ್ ಟಿ. ವಾಷಿಂಗಟನ್ ಓದಿ. ಅವರು ನೀಗ್ರೊ ಜನಾಂಗವನ್ನು ಮುಂದೆ ತಂದಂತೆ ನೀವೂ ಅಸ್ಪೃಶ್ಯರನ್ನು ಸಮಾಜದಲ್ಲಿ ಮೇಲೆತ್ತಲು ಪ್ರಯತ್ನ ಮಾಡಿ. ಸವರ್ಣೀಯರ ಮನೆಗಳಿಗೆ ಕರೆಯದೆಯೇ ಹೋಗಬೇಡಿ. ಕರೆದರೆ ಅಂಜದೆ ಧೈರ್ಯದಿಂದ ಒಳನುಗ್ಗಿ. ಒಳ್ಳೆ ಕೆಲಸ ಮಾಡಬೇಕಾಗಿ ಬಂದಾಗ ಏತಕ್ಕೆ ಮಾಡಬೇಕು? ಎನ್ನುವ ಬದಲು ಏಕೆ ಮಾಡಬಾರದು? ಎಂದು ತಿದ್ದುಕೊಳ್ಳಿ. ಸಮಾಜ ಸೇವಕನಾದವನು ಎಲ್ಲಾ ವಿಷಯಗಳನ್ನೂ ಸ್ವಲ್ಪವಾದರು ಅರಿತಿರಬೇಕು. ನಾವು ಕ್ಷಮಿಸುವುದನ್ನು, ಕೆಟ್ಟ ವಿಷಯಗಳನ್ನು ಮರೆತುಬಿಡುವುದನ್ನು ಕಲಿಯಬೇಕು. ಅರ್ಧಜ್ಞಾನ ಸದಾ ಅಪಾಯಕಾರಿ. ದೊಡ್ಡ ವ್ಯಕ್ತಿಗಳ ಬಗ್ಗೆ ಓದಿ ಇತರರಿಗೂ ತಿಳಿಸಿ ಅವರಂತೆ ನೀವೂ ಆಗಬೇಕೆಂಬ ಧ್ಯೇಯ ಸಂಪಾದಿಸಿ. ಫ್ರೆಂಚ್ ರೆವಲ್ಯೂಶನ್ ಬಗ್ಗೆ, ಲೆನಿನ್, ಕಾರ್ಲ್ಮಾರ್ಕ್ಸ್ಮುಂತಾದ ಕ್ರಾಂತಿಕಾರರ ಗ್ರಂಥಗಳನ್ನೋದಿರಿ. ಜೊತೆಗೆ ಭಗವದ್ಗೀತೆ, ಬೈಬಲ್ಗಳನ್ನೂ ಓದಿ ಅರ್ಥಮಾಡಿಕೊಳ್ಳಿ. ಆಗ ಮತಧರ್ಮಗಳ ಬಗ್ಗೆ, ನಿಮಗಾಗಿರುವ ಅನ್ಯಾಯ, ತುಳಿತದ ಬಗ್ಗೆ ಅಲ್ಲದೆ ಅಧರ್ಮ ಅರ್ಥವಾಗುತ್ತದೆ. ಧೈರ್ಯ ಬರುತ್ತದೆ. ಸಂಘಟನೆಯಾಗುತ್ತದೆ. ವಾಗ್ಮಿಗಳಾಗುತ್ತೀರಿ” ಎಂದು ಹೇಳುತ್ತಿದ್ದರು. ಬಸವನಗುಡಿ ಬಡಾವಣೆಯಲ್ಲಿದ್ದ ಗಣೇಶ ಮಂದಿರಕ್ಕೆ ತಮ್ಮ ಜೊತೆಯಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಅಯ್ಯರ್ ಅವರು ಅರ್ಚಕರಿಂದ ಅವರಿಗೆಲ್ಲಾ ಪ್ರಸಾದ ಕೊಡಿಸಿ “ಈ ಹುಡುಗರು ಯಾರು ಗೊತ್ತೆ? ಪಂಚಮರು, ಅಸ್ಪೃಶ್ಯರು. ಮುಂದೆ ಇವರೆಲ್ಲಾ ದೊಡ್ಡ ದೊಡ್ಡ ಅಧಿಕಾರಿಗಳಾಗುತ್ತಾರೆ” ಎಂದು ಅರ್ಚಕರಿಗೆ ಪರಿಚಯಿಸುತ್ತಿದ್ದರು. ಬೇಸಿಗೆ ರಜೆ ಬಂದಾಗ ಅಯ್ಯರ್ ಅವರು ಪ್ರಶ್ನಾವಳಿಯನ್ನು ತಯಾರು ಮಾಡಿ ವಿದ್ಯಾರ್ಥಿಗಳಿಗೆ ಕೊಟ್ಟು ಒಬ್ಬೊಬ್ಬ ವಿದ್ಯಾರ್ಥಿಗೆ ಮೂರು ಮೂರು ಹಳ್ಳಿಗಳನ್ನು ಆಯ್ಕೆಮಾಡಿ ಕಳುಹಿಸುತ್ತಿದ್ದರು. ಆ ವಿದ್ಯಾರ್ಥಿಗಳು ತಮಗೆ ನಿಯೋಜಿಸಿದ್ದ ಹಳ್ಳಿಗಳಿಗೆ ಹೋಗಿ ಅಲ್ಲಿನ ಅಸ್ಪೃಶ್ಯರ ಜನಸಂಖ್ಯೆ, ಅವರ ವೃತ್ತಿ, ಶಿಕ್ಷಣದ ಮಟ್ಟ, ಆರ್ಥಿಕ ಸ್ಥಿತಿಗತಿ, ಕುಡಿಯುವ ನೀರಿನ ಸೌಲಭ್ಯ, ಸಾರ್ವಜನಿಕ ಕೆರೆ ಬಾವಿಗಳಿಗೆ ಪ್ರವೇಶವಿದೆಯೆ? ಶಾಲೆಗಳಿವೆಯೆ? ಎಂಬೆಲ್ಲಾ ಮಾಹಿತಿಯನ್ನು ಸಂಗ್ರಹಿಸಿ ರಜೆ ಮುಗಿದ ಮೇಲೆ ಅಯ್ಯರ್ ಅವರಿಗೆ ತಂದು ಒಪ್ಪಿಸಬೇಕಿತ್ತು. ಅಯ್ಯರ್ ಅವರು ಅಸ್ಪೃಶ್ಯರಿಗೆ ಸಂಬಂಧಿಸಿದ ಈ ಎಲ್ಲ ವಿಷಯಗಳು ಹಾಗೂ ಅಸ್ಪೃಶ್ಯ ಕೂಲಿಕಾರರ, ನೇಯ್ಗೆಗಾರರ, ಜೀತಗಾರರ, ಚಪ್ಪಲಿ ಹೊಲಿಯುವವರ ಸಮಸ್ಯೆಗಳ ಬಗೆಗೆ ಮೈಸೂರು ಮಹಾರಾಜರಿಗೆ ಮಾಹಿತಿ ನೀಡಿ ಆಮೂಲಕ ಅಭಿವೃದ್ಧಿ ಕೆಲಸಗಳು ಆಗುವಂತೆ ನೋಡಿಕೊಳ್ಳುತ್ತಿದ್ದರು. ಮಹಾರಾಜರು ಸಹ ಅಯ್ಯರ್ ಅವರ ಈಬಗೆಯ ಮನವಿಗೆ ತಕ್ಷಣ ಸ್ಪಂದಿಸಿ ಕಾನೂನಾತ್ಮಕ, ಆಡಳಿತಾತ್ಮಕ ಆದೇಶವನ್ನು ಹೊರಡಿಸುತ್ತಿದ್ದರು.

ದಲಿತರ ಮಕ್ಕಳಿಗೆ ಪ್ರವೇಶ ನೀಡದ ಶಾಲೆಗಳನ್ನು ಮುಂಚುವಂತೆ ಆಜ್ಞೆ ಹೊರಡಿಸಿ ಅಂತಹ ಶಾಲೆಗಳಿಗೆ ಬೀಗ ಹಾಕಿಸುತ್ತಿದ್ದರು. ಆ ಶಾಲೆಯ ಮುಖ್ಯೋಪಾಧ್ಯಾಯರು ಬಂದು ಅಸ್ಪೃಶ್ಯ ಮಕ್ಕಳಿಗೆ ಪ್ರವೇಶ ನೀಡುತ್ತೇನೆ ಎಂದು ಹೇಳಿ ಕ್ಷಮಾಪಣೆ ಕೇಳಿದಾಗ ಮಾತ್ರ ಶಾಲೆಯನ್ನು ತೆರೆಯುತ್ತಿದ್ದರು. ಹೀಗೆ ಅಯ್ಯರ್ ಅವರ ಅಸ್ಪೃಶ್ಯರಿಗೆ ಸಂಬಂಧಿಸಿದ ಪ್ರಗತಿಪರವಾದ ಮನವಿಗೆ ಮಹಾರಾಜರು ಹೆಚ್ಚಿನ ಮನ್ನಣೆಯನ್ನು ಕೊಡುತ್ತಿದ್ದರು. ಅಯ್ಯರ್ ಅವರ ಎರಡನೆಯ ಹೆಂಡತಿ ಸಹಾ ಇವರ ದಲಿತಪರ ಸೇವೆಗೆ ಬೆಂಬಲವಾಗಿದ್ದರು. ಅಯ್ಯರ್ ಅವರು ನರಸಿಂಹರಾಜ ಒಡೆಯರ್ ಅವರಿಗೆ ಮನವಿ ಮಾಡಿಕೊಳ್ಳುವ ಮೂಲಕ ಅಸ್ಪೃಶ್ಯರಿಗೆ ಅರಮನೆ ಪ್ರವೇಶದ ಅವಕಾಶವನ್ನು ಕಲ್ಪಿಸಿಕೊಟ್ಟರು. ಒಮ್ಮೆ ಅಯ್ಯರ್ ಅವರು ಮೈಸೂರಿನಲ್ಲಿ ವಾಸವಾಗಿದ್ದ ಸಹೋದರ ಅನಂತ ಸುಬ್ರಹ್ಮಣ್ಯ ಅಯ್ಯರ್ ಮನೆಗೆ ಹೋಗಿದ್ದಾಗ ಒಡಹುಟ್ಟಿದ ಇವರ ತಮ್ಮ : ‘ನೀನು ಪರೆಯರ(ಹೊಲೆಯ)ನ್ನೆಲ್ಲಾ ಸೇರಿಸಿಕೊಳ್ಳುತ್ತೀಯ. ನಮ್ಮ ಮನೆಗೆ ಬರಬೇಡ’ ಎನ್ನುತ್ತಾರೆ. ಸಹೋದರನ ಈ ಮಾತುಗಳಿಂದ ಮನನೊಂದ ಅಯ್ಯರ್ ಅವರು “ಹಾಗೆಲ್ಲಾ ಅವರನ್ನು ತೆಗಳಬಾರದು. ನಿನಗೇನು ಆಸ್ತಿ ಬೇಕೆ? ನನ್ನ ಸರ್ವ ಆಸ್ತಿಯನ್ನೂ ನಿನಗೆ ಈಗಲೇ ಬರೆದುಕೊಡುತ್ತೇನೆ. ನೀನು ಕರೆದರೂ ನಿನ್ನ ಮನೆಗೆ ನಾನು ಬರಲಾರೆ” ಎಂದು ಹೇಳಿ ತಮ್ಮನ ಸಂಬಂಧದಿಂದ ದೂರ ಉಳಿಯುತ್ತಾರೆ.

ನೊಂದವರು, ಅಸ್ಪೃಶ್ಯರ ಬಗೆಗೆ ಅಗಾಧವಾದ ಪ್ರೀತಿ ಇಟ್ಟುಕೊಂಡಿದ್ದ ಅಯ್ಯರ್ “ಓ ದೇವರೆ ನಾನು ಇರುವ ಹಾಗೆ ನನ್ನನ್ನು ಕರೆದುಕೊ. ನಿನ್ನ ಅಭಿಲಾಷೆಯಂತೆ ನನ್ನನ್ನು ಉಪಯೋಗಿಸು. ಮುಂದೆ ಹೆಣ್ಣೊ, ಗಂಡೊ ಒಟ್ಟಿನಲ್ಲಿ ಮಾನವನನ್ನಾಗಿ ಮಾಡು. ಅವರ(ದಲಿತರ) ಸೇವೆಗಾಗಿ ನನ್ನನ್ನು ಮುಡುಪಾಗಿಡು” ಎಂದು ಕೇಳಿಕೊಳ್ಳುತ್ತಿದ್ದರು. ಅಯ್ಯರ್ ಅವರು ಶೋಷಿತ ಸಮುದಾಯಕ್ಕೆ ಮಾಡಿರುವ ಸೇವೆಯ ಋಣವನ್ನು ತೀರಿಸಬೇಕೆಂಬ ಕೃತಜ್ಞತೆಯ ಭಾವದಿಂದ ವರಗರಹಳ್ಳಿ ಡಿ. ವೆಂಕಟಯ್ಯನವರು ಬೆಂಗಳೂರಿನ ಶ್ರೀರಾಂಪುರದಲ್ಲಿ ವಸತಿ ಶಾಲೆಯನ್ನು ಕಟ್ಟಿಸಿ ಆ ಶಾಲೆಗೆ ಗೋಪಾಲಸ್ವಾಮಿ ಅಯ್ಯರ್ ಅವರ ಹೆಸರಿಡುವ ಮೂಲಕ ಗೌರವ ಸಲ್ಲಿಸುತ್ತಾರೆ.

ಗೋಪಾಲಸ್ವಾಮಿ ಅಯ್ಯರ್ ಅವರ ಹಾಗೆ ಸವರ್ಣೀಯ ಸಮುದಾಯದ ಎಚ್. ನಂಜುಂಡರಾಜೇ ಅರಸ್, ಅಂಬಳೆ ಸುಬ್ರಹ್ಮಣ್ಯಂ ಅಯ್ಯರ್, ಕೆ. ಎಸ್. ಚಂದ್ರಶೇಖರ್ ಅಯ್ಯರ್, ಪಾರ್ವತಮ್ಮ, ಜೆ. ಸ್ವಾಮಿದಾಸ್, ಸಿ.ಆರ್. ರೆಡ್ಡಿ, ನಾರಾಯಣಸ್ವಾಮಿ ಅಯ್ಯರ್, ಕೆ. ಶೇಷಾದ್ರಿ, ಸಾಹುಕಾರ ಚೆನ್ನಯ್ಯ, ಎಚ್.ಸಿ. ದಾಸಪ್ಪ, ಯಜ್ಞ ನಾರಾಯಣ್, ಜಾಹಿರುದ್ದೀನ್ ಮೆಕ್ಕಿ ಮುಂತಾದವರು ದಲಿತರ ಜಾಗೃತಿಗಾಗಿ ತಮ್ಮ ಜಾತಿಯ ಕಟ್ಟುಪಾಡುಗಳನ್ನು ಧಿಕ್ಕರಿಸಿ ಪ್ರಾಮಾಣಿಕವಾಗಿ ದುಡಿದಿದ್ದಾರೆ.

1940ರ ಸಂದರ್ಭದಲ್ಲಿ ಮೈಸೂರಿನ ಮಹಾರಾಜ ಕಾಲೇಜಿನ ಪ್ರಾಂಶುಪಾಲರಾಗಿದ್ದ ಪ್ರೊ.ಜೆ.ಸಿ. ರೊಲೊ, ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದ ಪ್ರೊ. ಈಗಲ್ಟನ್ ಅವರು ಅಸ್ಪೃಶ್ಯರ ಕೇರಿಗಳಿಗೆ ಹೋಗಿ ಅಲ್ಲಿನ ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸುತ್ತಿದ್ದರು. ಜಾತಿ ಮೀರಿದ ಜಾತ್ಯತೀತ ವ್ಯಕ್ತಿತ್ವಗಳು ಎಲ್ಲ ಜಾತಿ ಸಮುದಾಯಗಳಲ್ಲೂ ಇರುತ್ತವೆ ಎಂಬುದಕ್ಕೆ ಈ ಎಲ್ಲಾ ಮಹನೀಯರು ಸಂಕೇತವಾಗಿದ್ದಾರೆ. ಅಯ್ಯರ್ ಅವರು 12ನೇ ಅಕ್ಟೋಬರ್ 1926ರಲ್ಲಿ ಆಯೋಜಿಸಿದ್ದ ‘ಪ್ರಿವೆನ್ಷಿಯಲ್ ಕೋ-ಆಪರೇಟಿವ್ ಸೊಸೈಟಿ’ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿ. ವಿ. ರಾಮನಾಥನ್(ಮೈಸೂರಿನ ಜಿಲ್ಲಾಧಿಕಾರಿ) ಅವರು ಮಾತನಾಡುತ್ತ : “ಸರ್ಕಾರ ಅಸ್ಪೃಶ್ಯರಿಗೆ ತಕ್ಕಾವಿ ಜಮೀನು ನೀಡಿದೆ. ಆದರೆ ಅವರಲ್ಲಿ ಹಣದ ಕೊರತೆಯಿಂದಾಗಿ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಧನ ಸಹಾಯ ಮಾಡಲು ಸಂಘ-ಸಂಸ್ಥೆಗಳು ಮುಂದೆ ಬರಬೇಕು” ಎಂದು ಹೇಳುತ್ತಾರೆ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಿವಾನ್ ಸರ್ ಮಿರ್ಜಾ ಇಸ್ಲಾಯಿಲ್ ಅವರು ಅಧ್ಯಕ್ಷೀಯ ಭಾಷಣ ಮಾಡುತ್ತ : “ಅಸ್ಪೃಶ್ಯ ಜನಾಂಗ ಉತ್ತಮ ಸ್ಥಿತಿಗೆ ಬರಬೇಕಾದರೆ ಅಗತ್ಯವಾಗಿ ಆಗಬೇಕಾದ ಎಲ್ಲಾ ಕಾರ್ಯಗಳನ್ನು ಸಂಘ-ಸಂಸ್ಥೆಗಳು ಹಮ್ಮಿಕೊಳ್ಳಬೇಕು. ಇದರಿಂದ ಸಮಾಜದ ಅಥವಾ ನಾಡಿನ ಉದ್ಧಾರಕ್ಕೆ ಸಹಾಯಕವಾಗುತ್ತದೆ. ಅಸ್ಪೃಶ್ಯರ ಆರ್ಥಿಕ ವ್ಯವಸ್ಥೆ ಉತ್ತಮಗೊಂಡರೆ ಇಡೀ ಭಾರತದ ಆರ್ಥಿಕ ಸ್ಥಿತಿ ಭದ್ರವಾಗುತ್ತದೆ” ಎಂದು ಅಭಿಪ್ರಾಯಪಡುತ್ತಾರೆ.(ಕರ್ನಾಟಕದ ಸಮಗ್ರ ದಲಿತ ಚರಿತ್ರೆ, ಪು-65) ಇದು ದಲಿತರ ಬಗೆಗೆ ಅಧಿಕಾರಿಗಳಿಗೆ, ಪ್ರಜ್ಞಾವಂತ ದಲಿತೇತರರಿಗೆ ಇದ್ದ ಕಾಳಜಿಯನ್ನು ಸ್ಪಷ್ಟಪಡಿಸುತ್ತದೆ. ಇಂತಹ ವ್ಯಕ್ತಿತ್ವಗಳ ಧೋರಣೆಗಳ ಮೇಲೆ ಅಯ್ಯರ್ ಅವರ ದಟ್ಟ ಪ್ರಭಾವ ಇರುವುದನ್ನು ಗಮನಿಸಬಹುದು.

ಮೈಸೂರು ಸಂಸ್ಥಾನದಲ್ಲಿ 10ನೇ ಚಾಮರಾಜ ಒಡೆಯರ್ ಅವರು, ದಿವಾನರಾಗಿದ್ದ ಸಿ. ರಂಗಚಾರ್ಯ ಅವರ ಶಿಫಾರಸ್ಸಿನ ಮೇರೆಗೆ 1881ರಲ್ಲಿ ದೇಶದಲ್ಲಿಯೇ ಮೊಟ್ಟಮೊದಲ ‘ಪ್ರಜಾಪ್ರತಿನಿಧಿ ಸಭೆ’ಯನ್ನು ಸ್ಥಾಪಿಸುತ್ತಾರೆ. ಪ್ರಜೆಗಳ ಕುಂದುಕೊರತೆಗಳನ್ನು ಚರ್ಚಿಸಿ, ಪ್ರಜಾಸತ್ತಾತ್ಮಕವಾಗಿ ಪರಿಹಾರಗಳನ್ನು ಕಂಡುಕೊಳ್ಳುವುದು ಈ ಸಭೆಯ ಮುಖ್ಯ ಉದ್ದೇಶ. ಗೋಪಾಲಸ್ವಾಮಿ ಅಯ್ಯರ್ ಅವರ ಸಮಾಜ ಸೇವೆಯನ್ನು ಮನಗಂಡಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅಯ್ಯರ್ ಅವರನ್ನು 1918ರಲ್ಲಿ ಪ್ರಜಾಪ್ರತಿನಿಧಿ ಸಭೆಗೆ ನಾಮಕರಣ ಮಾಡುತ್ತಾರೆ. ಅಯ್ಯರ್ ಅವರು ನಿಜ ಅರ್ಥದಲ್ಲಿ ‘ದಲಿತರ ಪ್ರತಿನಿಧಿ’ಯಾಗಿ ಪ್ರಜಾಪ್ರತಿನಿಧಿ ಸಭೆಯಲ್ಲಿ ಕೆಲಸ ಮಾಡಿದರು ಎಂದರೆ ಅತಿಶಯೋಕ್ತಿಯಾಗಲಾರದು. ಪ್ರಜಾಪ್ರತಿನಿಧಿ ಸಭೆಯಲ್ಲಿ ಸದಾ ದಲಿತರ ಪರವಾಗಿ ಅವರ ಸಮಸ್ಯೆಗಳನ್ನು ಕುರಿತು ಮಾತನಾಡುತ್ತಿದ್ದ ಅಯ್ಯರ್ ಅವರು; ದಲಿತ ವಿರೋಧಿಯಾದ ಅಸ್ಪೃಶ್ಯತಾ ಆಚರಣೆ, ಬಿಟ್ಟಿ ಚಾಕರಿ ನಿಷೇಧ; ಭೂ ರಹಿತ ದಲಿತರಿಗೆ ಭೂಮಿ ಮಂಜೂರಾತಿ; ಕೃಷಿ ಕೂಲಿಕಾರರ ಸಮಸ್ಯೆ; ಸಾರ್ವಜನಿಕ ಧರ್ಮಶಾಲೆ, ರಸ್ತೆ, ಬಾವಿ, ಕೆರೆ, ಮುಜರಾಯ್ ದೇವಸ್ಥಾನಗಳಿಗೆ ದಲಿತರ ಪ್ರವೇಶ ಹಾಗೂ ದಲಿತರ ಶಿಕ್ಷಣವನ್ನು ಕರಿತು ಚರ್ಚಿಸಿದ್ದಾರೆ. ಅಯ್ಯರ್ ಅವರು ನರಸಿಂಹರಾಜ ಒಡೆಯರ್ ಅವರಲ್ಲಿ ವಿನಂತಿಸಿಕೊಳ್ಳುವ ಮೂಲಕ ದಲಿತ ಸಮುದಾಯದ ಚಲುವಯ್ಯ ಅವರನ್ನು ಹಾಗೂ ಮುರುಗೇಶ್ ಪಿಳ್ಳೆ ಅವರನ್ನು ಪ್ರಜಾಪ್ರತಿನಿಧಿ ಸಭೆಗೆ ಆಯ್ಕೆ ಮಾಡಿಸುತ್ತಾರೆ. ದಲಿತರು ರಾಜಕೀಯ ಅಧಿಕಾರ ಕೇಂದ್ರದಲ್ಲಿರಬೇಕು ಎಂಬುದು ಅಯ್ಯರ್ ಅವರ ಒತ್ತಾಸೆಯಾಗಿತ್ತು. 1930ರ ಅಕ್ಟೋಬರ್ 15ರಂದು ನಡೆದ ಪ್ರಜಾಪ್ರತಿನಿಧಿ ಸಭೆಯಲ್ಲಿ ಅಯ್ಯರ್ ಅವರು, ದಲಿತರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪ್ರಗತಿಯ ಸಲುವಾಗಿ ‘ಡಿಪ್ರೆಸ್ಡ್ಕ್ಲಾಸ್ ಅಭಿವೃದ್ಧಿ ಸಂಸ್ಥೆ’ಯನ್ನು ಸ್ಥಾಪಿಸಬೇಕೆಂದು ನಾಲ್ವಡಿ ಮಹಾರಾಜರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, “ಪ್ರಜಾಪ್ರತಿನಿಧಿ ಸಭೆಯ ಸದಸ್ಯರ ಸಂಖ್ಯೆಯನ್ನು 6 ರಿಂದ 10ಕ್ಕೇರಿಸಲು ಸಲಹೆ ನೀಡಿದರಲ್ಲದೆ ದಲಿತರ ಅಭಿವೃದ್ಧಿ ಸಂಸ್ಥೆಗೆ ಒಬ್ಬ ನಿಷ್ಠಾವಂತ ಅಧ್ಯಕ್ಷರನ್ನು ನೇಮಿಸಬೇಕೆಂದು ಮತ್ತು ಈ ಜನಾಂಗದ ಅಭಿವೃದ್ಧಿ ಕಾರ್ಯದಲ್ಲಿ ಸೇವಾ ಮನೋಭಾವವುಳ್ಳ ಕೆಲವು ಸ್ತ್ರೀಯರನ್ನು ನೇಮಿಸಬೇಕೆಂದು ಸಲಹೆ ನೀಡಿದರು.”(ಕರ್ನಾಟಕದ ಸಮಗ್ರ ದಲಿತ ಚರಿತ್ರೆ, ಪು-66) ಅಯ್ಯರ್ ಅವರ ಈ ಮನವಿಯ ಮೇರೆಗೆ ಬಿ. ಗೋಪಾಲ್ಚಾರ್ ಅವರು ನಾಲ್ವಡಿಯವರ ಒಪ್ಪಿಗೆ ಪಡೆದು ‘ದಲಿತರ ಅಭಿವೃದ್ಧಿ ಸಂಸ್ಥೆ’ಯ ಸ್ಥಾಪನೆಗೆ ಅನುಮೋದನೆ ನೀಡುತ್ತಾರೆ. ಒಮ್ಮೆ ಪ್ರಜಾಪ್ರತಿನಿಧಿ ಸಭೆಯ ಚರ್ಚೆಯಲ್ಲಿ ದಲಿತ ಪ್ರತಿನಿಧಿಯಾಗಿದ್ದ ಮುರುಗೇಶನ್ಪಿಳ್ಳೆ ಅವರು “ಹಳ್ಳಿಗಳ ಜನರ ಜೀವನ ಚಿಂತಾಜನಕವಾಗಿದೆ ಎಂದು ಹೇಳಿದಾಗ ಅಯ್ಯರ್ ಅವರು ‘ಹಳ್ಳಿಗಳಿಗಿಂತಲೂ ಊರ ಹೊರಗೆ ಓಣಿಯಲ್ಲಿ ವಾಸಿಸುವ ಆದಿಕರ್ನಾಟಕ ಜನರ ಜೀವನ ಚಿಂತಾಜನಕವಾಗಿದೆ. ಆದ್ದರಿಂದ ಸರ್ಕಾರ ಅವರ ಬದುಕನ್ನು ಹಸನುಗೊಳಿಸಲು ಮೊದಲು ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ನಂತರ ಉಳಿದ ಗ್ರಾಮಸ್ಥರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು’ ಎಂದು ಹೇಳಿದರು.”(ಕರ್ನಾಟಕದ ಸಮಗ್ರ ದಲಿತ ಚರಿತ್ರೆ, ಪು-64) 1934ರ ಸಂದರ್ಭಕ್ಕಾಗಲೇ ಸಾರ್ವಜನಿಕ ಶಾಲೆಗಳಿಗೆ ದಲಿತರ ಮುಕ್ತ ಪ್ರವೇಶ; ಕೊಳಗೇರಿ, ಪೌರಕಾರ್ಮಿಕರ ಬಡಾವಣೆಗಳಲ್ಲಿ ಶಾಲೆಗಳ ಸ್ಥಾಪನೆ; ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರದ ಮಂಡಹಳ್ಳಿ, ರಾಮನಗರ(ಕ್ಲೋಸ್ಪೇಟೆ)ಗಳಲ್ಲಿ ರಾತ್ರಿ ಶಾಲೆಗಳು, ವಿದ್ಯಾರ್ಥಿ ನಿಲಯಗಳು, ಉದ್ಯೋಗ ತರಬೇತಿ ಕೇಂದ್ರಗಳು ಪ್ರಾರಂಭವಾಗುವ ನಿಟ್ಟಿನಲ್ಲಿ ಹಾಗೂ ದಲಿತ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಅಯ್ಯರ್ ಅವರ ಕೊಡುಗೆ ಅಪಾರವಾದದ್ದು. 1934ರಲ್ಲಿ ಮಿಥಿಕ್ ಸೊಸೈಟಿಯು ಸ್ಥಾಪಿಸಿದ ‘ರಿಫಾರಂ ಕಮಿಟಿ’ಯ ಸದಸ್ಯರಾಗಿ ಅಯ್ಯರ್ ಮತ್ತು ಮಳವಳ್ಳಿಯ ಎಂ. ಮಾದಯ್ಯ ಅವರು ಹಲವಾರು ದಲಿತರ ಸಾಮಾಜಿಕ ಪ್ರಗತಿ ಕಾರ್ಯಗಳಿಗಾಗಿ ಶ್ರಮಿಸಿದ್ದಾರೆ. ಅಯ್ಯರ್ ಅವರ ವ್ಯಕ್ತಿತ್ವದಿಂದ ಪ್ರಭಾವಿತರಾಗಿ ಹೋರಾಟಗಾರರಾಗಿದ್ದ ಮಳವಳ್ಳಿ ಎಂ. ಮಾದಯ್ಯ ಅವರು ‘ಸ್ಟೇಟ್ ಆದಿ ಕರ್ನಾಟಕ ಸಂಘ’ವನ್ನು ಸ್ಥಾಪಿಸಿ ಅದರ ಅಧ್ಯಕ್ಷರಾಗಿ ಅನೇಕ ಹೋರಾಟಗಳನ್ನು ರೂಪಿಸುವ ಮೂಲಕ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಮಾದಯ್ಯ ಅವರ ಜೊತೆ ಅನೇಕ ಹೋರಾಟಗಳಲ್ಲಿ ಭಾಗವಹಿಸಿದ್ದ ಕೆ. ಟಿ. ರಾಮಸ್ವಾಮಿ, ರಂಗೇಗೌಡ, ಮಾಯೇಗೌಡ, ಗೋವಿಂದಶೆಟ್ಟಿ ಅವರು ಹರಿಕಥೆಯ ಮೂಲಕ ಅಸ್ಪೃಶ್ಯತಾ ನಿವಾರಣೆಯ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು.

ಗೋಪಾಲಸ್ವಾಮಿ ಅಯ್ಯರ್ ಅವರು 1922 ರಿಂದ 1938ರವರೆಗೆ ಮೆಂಟಲ್ ಆಸ್ಪತ್ರೆ, ಸೆಂಟ್ರಲ್ ಜೈಲ್, ಕುಷ್ಠ ರೋಗಿಗಳ ವಸತಿಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮೈಸೂರು ಸಂಸ್ಥಾನದ “ಆದಿಕರ್ನಾಟಕ ಅಭಿವೃದ್ಧಿ ಸಂಘ”ದವರು 22ನೇ ಜೂನ್ 1942ರಲ್ಲಿ ಅರವತ್ತನೆ ವಯಸ್ಸಿಗೆ ಕಾಲಿಟ್ಟ ಅಯ್ಯರ್ ಅವರಿಗೆ ಮೈಸೂರಿನ ರಂಗಾಚಾರ್ಲು ಮೆಮೋರಿಯಲ್ ಹಾಲ್ನಲ್ಲಿ ಅಭಿನಂದನ ಸಮಾರಂಭವನ್ನು ಏರ್ಪಡಿಸಿದ್ದರು. ಸುತ್ತಮುತ್ತಲ ಹಳ್ಳಿಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬಂದ ಅಯ್ಯರ್ ಅವರ ಅಭಿಮಾನಿಗಳು ಈ ಸಮಾರಂಭಕ್ಕೆ ಸಾಕ್ಷಿಯಾಗುತ್ತಾರೆ. ಅಯ್ಯರ್ ಅವರ ಇಡೀ ಶಿಷ್ಯ ಬಳಗವೇ ಅಲ್ಲಿ ನೆರೆದಿರುತ್ತದೆ. ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಅಯ್ಯರ್ ಅವರು : “ನನ್ನನ್ನು ಪಂಚಮರ ಗೋಪಾಲಸ್ವಾಮಿ ಅಂತ ಸವರ್ಣೀಯರು ಕರೆಯುತ್ತೀರಿ. ಆ ನಾಮಾಂಕಿತ ಶೇಕಡ ನೂರರಷ್ಟು ಅನ್ವರ್ಥ. ನನಗೆ ಮಕ್ಕಳಿಲ್ಲ ಎಂದು ಬುದ್ಧಿಯಿಲ್ಲದ ಜನರು ಹೇಳಿಕೊಳ್ಳುತ್ತಾರೆ. ನನಗೆ ಹದಿನಾಲ್ಕು ಸಾವಿರ ಮಕ್ಕಳಿದ್ದಾರೆ. ಅವರೇ ನನ್ನ ಅಸ್ಪೃಶ್ಯ ಜನಾಂಗ” ಎಂದು ಹೇಳುತ್ತಾರೆ. ಅಂದು ಅಯ್ಯರ್ ಅವರು ಆಡಿದ ಈ ಮಾತುಗಳನ್ನು ಕೇಳಿ ಜನ ಸಂತೋಷದಿಂದ ಕಂಬನಿ ಮಿಡಿಯುತ್ತ ಹರ್ಷೋದ್ಗಾರವನ್ನು ವ್ಯಕ್ತಪಡಿಸುತ್ತಾರೆ. ಅಯ್ಯರ್ ಅವರು ಪ್ಲೂರೆಸಿ ಖಾಯಿಲೆಗೆ ತುತ್ತಾಗಿ ವಿಕ್ಟೋರಿಯ ಆಸ್ಪತ್ರೆ ಸೇರಿದಾಗಲು ಸಹಾ ಅನೇಕ ದಲಿತ ವಿದ್ಯಾರ್ಥಿಗಳಿಗೆ ಶಿಫಾರಸ್ಸು ಮಾಡಿ ನೌಕರಿ ಕೊಡಿಸುವಲ್ಲಿ ನೆರವಾಗಿದ್ದಾರೆ. ಅದೇ ಸಂದರ್ಭದಲ್ಲಿ ಎಲ್.ಎಲ್.ಬಿ. ಪದವಿ ಪಡೆದ ವೈ. ಸಿ. ಹೊಂಬಾಳಯ್ಯ ಅವರು ಆಸ್ಪತ್ರೆಗೆ ಬಂದು ನೌಕರಿಗೆ ಶಿಫಾರಸ್ಸು ಮಾಡಬೇಕೆಂದು ಕೇಳಿಕೊಂಡಾಗ ಅಯ್ಯರ್ ಅವರು ದಿವಾನರಿಗೆ ಶಿಫಾರಸ್ಸು ಮಾಡಿ, ಹೊಂಬಾಳಯ್ಯ ಅವರನ್ನು ಅಸಿಸ್ಟೆಂಟ್ ಕಮೀಶನರ್ ಆಗಿ ಆಯ್ಕೆ ಮಾಡಿಸುತ್ತಾರೆ. ಸಾಯುವ ಕೊನೆ ದಿಗಳಲ್ಲಿಯೂ ಸಹಾ ಅಯ್ಯರ್ ಅವರು ಶೋಷಿತರ ಸೇವೆಗಾಗಿ ಹಂಬಲಿಸುತ್ತಿದ್ದರು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಅಸ್ಪೃಶ್ಯರ ಜಾಗೃತಿಗಾಗಿ ಅವಿಶ್ರಾಂತವಾಗಿ ದುಡಿದ ಆರ್. ಗೋಪಾಲಸ್ವಾಮಿ ಅಯ್ಯರ್ ಅವರು 19ನೇ ಮಾರ್ಚ್ 1943ರಂದು ಮರಣ ಹೊಂದಿದರು. ಇವರ ಕೃಪೆಯಿಂದ ಬೆಳೆದ ಅಸಂಖ್ಯಾತ ಶಿಷ್ಯ ಸಮೂಹ ಅಯ್ಯರ್ ಅವರ ಸಾವಿನ ಸುದ್ದಿ ಕೇಳಿ ಅನಾಥಪ್ರಜ್ಞೆಯಿಂದ ಮಮ್ಮಲ ಮರುಗಿತು. ಅಂದು ಅಯ್ಯರ್ ಅವರ ಶಿಷ್ಯರು, ‘ನಮ್ಮ ಏಳ್ಗೆಗಾಗಿ ದುಡಿದ ಐಯ್ಯರ್ ಅವರ ಶವಸಂಸ್ಕಾರ ಮಾಡುವುದು ದಲಿತರ ಕರ್ತವ್ಯ ಅದಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಹಠ ಹಿಡಿಯುತ್ತಾರೆ. ಹಿರಿಯರೆಲ್ಲರೂ ಸೇರಿ ಸಮಾಲೋಚಿಸಿ ‘ಅಸ್ಪೃಶ್ಯರ ಪದ್ಧತಿಯಂತೆ ಶವಕ್ಕೆ ಸ್ನಾನ, ಪೂಜೆ ಮಾಡಿ ಸ್ಮಶಾನದವರೆಗೆ ಮೆರವಣಿಗೆಯಲ್ಲಿ ಕೊಂಡೊಯ್ಯುವುದು ದಲಿತರ ಜವಾಬ್ದಾರಿ; ಶವಕ್ಕೆ ಬೆಂಕಿ ಹಚ್ಚುವುದು ಅಯ್ಯರ್ ಅವರ ಸಹೋದರರ ಜವಾಬ್ದಾರಿ’ ಎಂದು ತೀರ್ಮಾನಿಸುತ್ತಾರೆ. ಹಿರಿಯರ ತೀರ್ಮಾನಕ್ಕೆ ಒಪ್ಪಿದ ಶಿಷ್ಯರು ಅಯ್ಯರ್ ಅವರ ಶವವನ್ನು ಭವ್ಯ ಮೆರವಣಿಗೆಯ ಮೂಲಕ ಸ್ಮಶಾನಕ್ಕೆ ಕೊಂಡೊಯ್ಯುತ್ತಾರೆ. ಶವಸಂಸ್ಕಾರವಾದ ಮೇಲೆ ನೆರೆದಿದ್ದ ಶಿಷ್ಯರೆಲ್ಲ “ಆರ್. ಗೋಪಾಲಸ್ವಾಮಿ ಅಮರ, ಹರಿಜನೋದ್ಧಾರಕ ಅಮರ, ಪಂಚಮರ ಗೋಪಾಲಸ್ವಾಮಿ ಅಮರ” ಎಂದು ಘೋಷಣೆ ಕೂಗುತ್ತಾರೆ. ಐಯ್ಯರ್ ಅವರ ಅಗಲಿಕೆಯಿಂದ ಮನನೊಂದ ಡಿ. ಗೋವಿಂದದಾಸ್ ಅವರು :
“ಹರಿಜನ ಗುರುವರ ಹಾರಿದೆಯಾ
ಹರಿಪಾದವ ನೀ ಸೇರಿದೆಯ
ಮರೆಮಾಚುತೆ ಕಣ್ಮರೆಯಾದೆಯಾ
ನೆರೆಶೋಕಗೈವ ಪರಿಮಾಡಿದೆಯಾ
ಇನ್ನಾರೆಮ್ಮನು ಕರೆಯುವರು
ಬನ್ನಿರಿಲ್ಲೆಂದೊರಲುವರು”

-ಎಂಬುದಾಗಿ ತಮ್ಮ ಪದ್ಯದ ಮೂಲಕ ನುಡಿನಮನ ಸಲ್ಲಿಸುತ್ತಾರೆ. ಶ್ರೀರಂಗ(ಚನ್ನಗಿರಿ) ಅವರು ತಮ್ಮ ಪದ್ಯದ ಮೂಲಕ ಅಯ್ಯರ್ ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾ ಅಯ್ಯರ್ ಅವರ ವ್ಯಕ್ತಿತ್ವವನ್ನು ಹೀಗೆ ಕಟ್ಟಿಕೊಡುತ್ತಾರೆ :
“ಗೋಪಾಲಸ್ವಾಮಿ ಹರಿಜನ ಪ್ರೇಮಿ
ಶ್ರೀ ಪದಗಾಮಿ ಚಿರನಾಮೀ
ಲೋಪದೋಷ ಗುಣ ವ್ಯಾಪಿ ಜನಂಗಳ
ಶ್ರೀಪತಿಯಂದದಿ ಪೋಷಿಸಿದೆ
ಲೋಪವಳಿಸಿ ಗುಣ ರೂಪಿಸಿದೆ

ಉಚ್ಚಧರ್ಮ ಮೇಣುಚ್ಚವರ್ಗದಿಂ
ಉಚ್ಚವಂಶದೊಳು ಉದ್ಭವಿಸಿ
ತುಚ್ಛನೀಚ ಮೇಣಸ್ಪೃಶ್ಯತೆಗಳ
ಕಿಚ್ಚಿನೊಳಾಳ್ದವರ ಎಚ್ಚರಿಸಿ
ಮೆಚ್ಚಿನೊಳೆತ್ತಿದ ಸಚ್ಚರಿತ”

ಹೀಗೆ ಶ್ರೀರಂಗರು ತಮ್ಮ ಪದ್ಯದ ಮೂಲಕ ಅಯ್ಯರ್ ಅವರು ಶೋಷಿತ ಸಮುದಾಯಕ್ಕೆ ಮಾಡಿದ ನಿಸ್ವಾರ್ಥ ಸೇವೆ ಹಾಗೂ ಅವರ ತ್ಯಾಗ ಮನೋಭಾವವನ್ನು ವಿವರಿಸಿದ್ದಾರೆ.

ಲೋಕಸಭೆ ಮಾಜಿಸದಸ್ಯರಾದ ಸೋಸಲೆ ಎಸ್. ಎಂ. ಸಿದ್ಧಯ್ಯ ಹಾಗೂ ಎನ್. ಕೆ. ನಂಜಯ್ಯ ಅವರು ಹೇಳುವ ಹಾಗೆ : “ಪಂಚಮರ ಬೋರ್ಡಿಂಗ್ ಹೋಂ ಅಸ್ಪೃಶ್ಯರ ಬಾಳಿನಲ್ಲಿ ಬೆಳಕು ಚೆಲ್ಲಿದ ಹಣತೆಯಾಗಿ ಆರಿಹೋಗದಂತೆ, ಅಂಧಕಾರದಲ್ಲಿದ್ದವರಲ್ಲಿ ದೀಪ ಉರಿಯುವಂತೆ ಎಣ್ಣೆ ಎರೆದು ಬತ್ತಿ ಹಾಕಿದವರು ಆರ್. ಗೋಪಾಲಸ್ವಾಮಿ ಅಯ್ಯರ್ ಅವರು. ಈ ಹಣತೆಯನ್ನು ಹಿಡಿದು ಗಾಳಿಗೆ ಮರೆಮಾಡಿ, ಕಾಣದ ದಾರಿ ತೋರಿ ಮೂಲೆ ಮೂಲೆಯಲ್ಲೂ ಬೆಳಕನ್ನೆರಚಿ ಮುಗಿಯದ ಪಯಣಕ್ಕೆ ನಾಂದಿಯಾದರು. ಇವರನ್ನು ಬ್ರಾಹ್ಮಣೇತರರು ಹಾಗೂ ಅಸ್ಪೃಶ್ಯರು ಪಂಚಮರ ಗೋಪಾಲಸ್ವಾಮಿ, ಹೊಲೆಯರ ಗೋಪಾಲಸ್ವಾಮಿ ಎಂದು ಕರೆದರು. ಹರಿಜನೋದ್ಧಾರಕ, ದೀನ ದಲಿತೋದ್ಧಾರಕನೆಂದು ಅಸ್ಪೃಶ್ಯರಿಂದ ಹೊಗಳಿಸಿಕೊಂಡರು.”(ಕರ್ನಾಟಕದ ಸಮಗ್ರ ದಲಿತ ಚರಿತ್ರೆ, ಪು-38) ಒಟ್ಟಾರೆ ಆಜೀವಿಕರಾದ(ಆಜೀವಿಕರು ಎಂದರೆ, ಜೀವನ ಪರ್ಯಂತ ತಾವು ನಂಬಿದ ತತ್ವಾದರ್ಶಗಳಿಗೆ ಬದ್ಧರಾಗಿ ಬದುಕಿದವರು ಎಂದರ್ಥ) ಆರ್. ಗೋಪಾಲಸ್ವಾಮಿ ಅಯ್ಯರ್ ಅವರಂತಹ ಮಾದರಿ ವ್ಯಕ್ತಿತ್ವಗಳು ವೈಚಾರಿಕ ಸಮಾಜದ ನಿರ್ಮಾಣಕ್ಕೆ ದಿಕ್ಸೂಚಿಯಾಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.