ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ |2024 ಸೆ.17: ಮತ್ತೆ ಹಾಲಿನ ದರ ಏರಿಕೆ ಸಲ್ಲದು

Published : 16 ಸೆಪ್ಟೆಂಬರ್ 2024, 23:15 IST
Last Updated : 16 ಸೆಪ್ಟೆಂಬರ್ 2024, 23:15 IST
ಫಾಲೋ ಮಾಡಿ
Comments

ಮತ್ತೆ ಹಾಲಿನ ದರ ಏರಿಕೆ ಸಲ್ಲದು

ಹಾಲಿನ ದರವನ್ನು ಮತ್ತೆ ₹ 5 ಏರಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಇದು, ರೈತರನ್ನು ಮೆಚ್ಚಿಸಿ ಜನರ ಗಮನವನ್ನು ಬೇರೆಡೆ ಸೆಳೆಯುವ ತಂತ್ರದಂತೆ ಗೋಚರಿಸುತ್ತಿದೆ. ಹಾಲಿನ ದರ ಏರಿಸಿ ಇನ್ನೂ ಸರಿಯಾಗಿ 3 ತಿಂಗಳು ಕೂಡ ಆಗಿಲ್ಲ. ಆಗಲೇ ಮತ್ತೆ ದರ ಏರಿಸುವುದು ಎಂದರೇನು?

ರೈತರು ಕೇಳದಿದ್ದರೂ ಹಾಲು ಒಕ್ಕೂಟಗಳು ಹಾಲು ಖರೀದಿ ದರವನ್ನು ಬೇಕೆಂದೇ ತಾತ್ಕಾಲಿಕವಾಗಿ ಏರಿಸಿ, ರೈತರಿಗೆ ನೀಡಿದೆವೆಂದು ಸರ್ಕಾರದ ಮುಂದೆ ಬೆಲೆ ಏರಿಕೆಯ ಪ್ರಸ್ತಾಪ ಮಾಡುತ್ತವೆ. ಸರ್ಕಾರ ಬೆಲೆ ಹೆಚ್ಚಿಸುತ್ತದೆ. ನಂತರ ಹಾಲು ಉತ್ಪಾದನೆ ಹೆಚ್ಚಿದೆ ಎಂದೋ ಹಾಲು ಒಕ್ಕೂಟ ನಷ್ಟದಲ್ಲಿದೆ ಎಂದೋ ರೈತರಿಗೆ ನೀಡುತ್ತಿದ್ದ ಹಾಲಿನ ದರವನ್ನು ಕಡಿತ ಮಾಡಿ ಹೈನುಗಾರರನ್ನೂ ಸುಲಿಯಲಾಗುತ್ತದೆ. ಇದು ವಾಸ್ತವ ಚಿತ್ರಣ. ಕೆಎಂಎಫ್, ಒಕ್ಕೂಟಗಳಲ್ಲಿ ಇರುವ ಸಿಬ್ಬಂದಿ ಸಂಖ್ಯೆ ಅಗತ್ಯಕ್ಕೆ ತಕ್ಕಂತೆ ಇದೆಯೇ, ನೇಮಕಾತಿಗಳು ಸರ್ಕಾರದ ಅನುಮತಿ ಇಲ್ಲದೆ ನಡೆಯುತ್ತಿವೆಯೇ ಎಂಬ ಬಗ್ಗೆ ಗಮನಹರಿಸಿ, ಅನಗತ್ಯ ವೆಚ್ಚವನ್ನು ಕಡಿಮೆ ಮಾಡಬೇಕು. ಒಕ್ಕೂಟಗಳ ಆಡಳಿತ ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಒಂದು ವೇಳೆ ಹೈನುಗಾರರಿಗೆ ಲೀಟರ್‌ಗೆ ಹೆಚ್ಚುವರಿಯಾಗಿ ಇನ್ನೂ ₹ 5 ಕೊಡುವ ಪ್ರಸ್ತಾಪವಿದ್ದರೆ, ಸರ್ಕಾರದ ವತಿಯಿಂದಲೇ ಕೊಡುವಂತಾಗಲಿ.

–ಮುಳ್ಳೂರು ಪ್ರಕಾಶ್, ಮೈಸೂರು

ಒಂದೇ ಶಾಲೆಯಲ್ಲಿ ಕಲಿತವರೇ ಈ ಖ್ಯಾತನಾಮರು?!

ಜಾತಿನಿಂದನೆ ಆರೋಪದ ಮೇಲೆ ಬಂಧಿತರಾಗಿರುವ ಶಾಸಕ ಮುನಿರತ್ನ ಅವರು ನ್ಯಾಯಾಧೀಶರ ಎದುರು, ‘ನನಗೆ ಹೃದಯ ಸಂಬಂಧಿ ಕಾಯಿಲೆ ಹಾಗೂ ಹರ್ನಿಯಾ ಸಮಸ್ಯೆ ಇದೆ’ ಎಂದು ಅಳಲು ತೋಡಿಕೊಂಡಿರುವುದಾಗಿ ವರದಿಯಾಗಿದೆ. ಪ್ರಕರಣವೊಂದರಲ್ಲಿ ಬಂಧಿತರಾಗಿದ್ದ ಶಾಸಕ ಎಚ್‌.ಡಿ.ರೇವಣ್ಣ ಕೂಡ ಅನಾರೋಗ್ಯದ ಕಾರಣ ಹೇಳಿದ್ದರು. ಇವರಿಬ್ಬರಷ್ಟೇ ಅಲ್ಲ, ಬಂಧನಕ್ಕೆ ಒಳಗಾಗುವ ಅನೇಕ ಜನಪ್ರತಿನಿಧಿಗಳು, ಚಲನಚಿತ್ರ ನಟ–ನಟಿಯರು ಸೇರಿದಂತೆ ಅನೇಕ ಖ್ಯಾತನಾಮರು ಒಂದೇ ಶಾಲೆಯಲ್ಲಿ ಪಾಠ ಕಲಿತವರಂತೆ ಇದೇ ಬಗೆಯ ಹೇಳಿಕೆ ನೀಡುತ್ತಾರೆ.

ಇಷ್ಟು ಸಮಸ್ಯೆ ಇರುವ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಆರೋಗ್ಯದ ಕಡೆ ಗಮನಹರಿಸಬೇಕಿತ್ತು. ಅದುಬಿಟ್ಟು, ಜನಸೇವೆಗೆ ಕಟಿಬದ್ಧರಾಗಿ ನಿಂತಿರುವುದು ಜಗತ್ತಿನ ಎಂಟನೆಯ ಅದ್ಭುತವೇ ಹೌದು. ಜನಸಾಮಾನ್ಯರಾದರೆ ಒಂದೆರಡು ತಿಂಗಳು ರಜೆ ಹಾಕಿ ಚಿಕಿತ್ಸೆ ಪಡೆಯುತ್ತಿದ್ದರು. ಅದೂ ಸರಿ ಹೋಗದಿದ್ದರೆ ಸ್ವಯಂ ನಿವೃತ್ತಿಯನ್ನೇ ಪಡೆದು ಆರೋಗ್ಯವೇ ಭಾಗ್ಯ ಎಂದು ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದರು. ಆದರೆ ಪಾಪ, ನಮ್ಮ ಜನನಾಯಕರು ಜನಸೇವೆ ಮಾಡುವ ವಿಷಯದಲ್ಲಿ ತಮ್ಮ ಆರೋಗ್ಯವನ್ನೂ ಲೆಕ್ಕಿಸುವುದಿಲ್ಲ. ಇಂತಹ ಜನನಾಯಕರನ್ನು ಪಡೆದ ನಾವೇ ಧನ್ಯರು!

– ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಜನಸಾಮಾನ್ಯರಿಗೆ ಅವಕಾಶ ದೊರಕಿಸಿಕೊಡಬೇಕು

‘ಬಲಗೊಳ್ಳಲಿ ಪ್ರಜೆಗಳ ಪ್ರಭುತ್ವ’ ಎಂಬ ಕಿರಣ್‌ ಎಂ. ಗಾಜನೂರು ಅವರ ಲೇಖನ (ಪ್ರ.ವಾ., ಸೆ. 14) ಪ್ರಸ್ತುತ ದಿನಮಾನಗಳ ಹಲವು ವೈರುಧ್ಯಗಳಿಗೆ ಕನ್ನಡಿ ಹಿಡಿದಿದೆ. ನಾವು ಇತಿಹಾಸವನ್ನು ಅವಲೋಕಿಸಿದಾಗ, ರಾಜರ ಮಕ್ಕಳೇ ರಾಜರಾಗಿ ಇರುತ್ತಿದ್ದುದು ತಿಳಿಯುತ್ತದೆ. ಆಗ ಜನಸಾಮಾನ್ಯನಿಗೆ ರಾಜನಾಗುವ ಅವಕಾಶ ಇರಲಿಲ್ಲ. ಇಂದು ಕೂಡ ರಾಜಕಾರಣಿಯ ಮಗನೇ ರಾಜಕಾರಣಿಯಾಗುತ್ತಿದ್ದಾನೆ. ಸಾಮಾನ್ಯ ವ್ಯಕ್ತಿಗೂ ಚುನಾವಣೆಯಲ್ಲಿ ಸ್ಪರ್ಧಿಸಲು, ಪಕ್ಷದ ಕಾರ್ಯಕರ್ತನಾಗಿ ದುಡಿಯಲು ಅವಕಾಶ ಇದೆಯಾದರೂ ಗೆಲ್ಲಲು ಮತ್ತು ಮೇಲಕ್ಕೆ ಏರಲು ಅವರಿಗೆ ಇರುವಷ್ಟು ಅನುಕೂಲಗಳು ಜನಸಾಮಾನ್ಯರಿಗೆ ಇರುವುದಿಲ್ಲ. ರಾಜಕೀಯ ಪಕ್ಷಗಳ ವೇದಿಕೆಗಳಲ್ಲಿ ಸ್ವತಂತ್ರ ಆಲೋಚನೆಗಳಿಗೂ ಮನ್ನಣೆ ಸಿಗುತ್ತಿಲ್ಲ. ರಾಜಕೀಯ ವಂಶಪರಂಪರೆ ಮುಂದುವರಿದರೆ ಪ್ರಜೆಗಳ ಅಭಿವೃದ್ಧಿ, ಸಾಮಾಜಿಕ ಸಮಾನತೆಯನ್ನು ಕಾಣಲು ಸಾಧ್ಯವೇ? ಮೀಸಲು ಕ್ಷೇತ್ರಗಳು ಕೂಡ ಕೆಲವು ಕುಟುಂಬಗಳ ಹಿಡಿತದಲ್ಲೇ ಉಳಿದಿವೆ. ಆಯ್ಕೆಯಾದವರೇ ಮತ್ತೆ ಮತ್ತೆ ಆಯ್ಕೆಯಾಗುತ್ತಾರೆ. ಇದಕ್ಕೆ ಮಿತಿ ಹೇರುವ ಕುರಿತು ಚಿಂತಿಸಬೇಕಾದ ಸಂದರ್ಭ ಬಂದಿದೆ. ಅಂತೆಯೇ ಜನಪ್ರತಿನಿಧಿಗಳಿಗೂ ನಿವೃತ್ತಿ ವಯಸ್ಸನ್ನು ನಿಗದಿಪಡಿಸಬೇಕು.

– ಕೆ.ರಾಜೇಂದ್ರಕುಮಾರ್ ಡಿ. ಮುದ್ನಾಳ್, ಯಾದಗಿರಿ

ಎರಡೂ ಪಕ್ಷಗಳು ಹಮ್ಮು ಬಿಮ್ಮು ತೊರೆದಿದ್ದರೆ...

‌ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಎರಡೂ ಸುಗಮ ಪ್ರಜಾಪ್ರಭುತ್ವ ವ್ಯವಸ್ಥೆಯ ಕಣ್ಣುಗಳಿದ್ದಂತೆ. ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಇದೇ 15ರಂದು ರಾಜ್ಯ ಸರ್ಕಾರ ಹಮ್ಮಿಕೊಂಡಿದ್ದ ಮಾನವ ಸರಪಳಿಯಲ್ಲಿ ಬಿಜೆಪಿಯೂ ಕೈಗೂಡಿಸಬಹುದಿತ್ತು. ಕಾಂಗ್ರೆಸ್ ಕೂಡ ವಿರೋಧ ಪಕ್ಷವನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕಿತ್ತು. ಎರಡೂ ಪಕ್ಷಗಳು ತಮ್ಮ ಹಮ್ಮು ಬಿಮ್ಮು ತೊರೆದು ಭಾಗವಹಿಸಿದ್ದರೆ, ಕರ್ನಾಟಕ ಹೊಸದೊಂದು ಪ್ರಜಾಸತ್ತಾತ್ಮಕ ಆದರ್ಶದ ಸಂದೇಶವನ್ನು ರವಾನಿಸಿದಂತೆ ಆಗುತ್ತಿತ್ತು.

– ಪ್ರೊ. ಶಿವರಾಮಯ್ಯ, ಬೆಂಗಳೂರು

ಮಡಕಶಿರಾ: ಮೂಲಸೌಕರ್ಯ ಅಭಿವೃದ್ಧಿಯಾಗಲಿ

ಆಂಧ್ರಪ್ರದೇಶದ ಮಡಕಶಿರಾದಲ್ಲಿ ಕೈಗಾರಿಕೆ ಸ್ಥಾಪನೆ ಮಾಡಬೇಕು ಎಂದು ಮಡಕಶಿರಾ ಶಾಸಕ ಎಂ.ಎಸ್.ರಾಜು ಮತ್ತು ಪಾವಗಡದ ಶಾಸಕರಾಗಿದ್ದ ಕೆ.ಎಂ.ತಿಮ್ಮರಾಯಪ್ಪ ಅವರು ಮಾಡಿದ ಮನವಿಗೆ ಸ್ಪಂದಿಸಿದ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ, ಉದ್ದಿಮೆದಾರರೊಂದಿಗೆ ಚರ್ಚಿಸುವುದಾಗಿ ಭರವಸೆ ಕೊಟ್ಟಿದ್ದಾರೆ (ಪ್ರ.ವಾ., ಸೆ. 15). ಆದರೆ, ಮೂಲಸೌಕರ್ಯ ಅಲ್ಲಿ ಇನ್ನೂ ಅಭಿವೃದ್ಧಿಯಾಗಿಲ್ಲ. ಕೈಗಾರಿಕೆಗಳ ಸ್ಥಾಪನೆಗೆ ಇದು ತೊಡರಾಗಬಹುದು.

ತಮಿಳುನಾಡು ಸರ್ಕಾರ ಹೊಸೂರಿನಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ಮಾಡುತ್ತಿದೆ. ಇದರಿಂದ ಬೆಂಗಳೂರಿಗೂ ಅನುಕೂಲವಾಗುತ್ತದೆ ಅಲ್ಲವೇ? ಬೆಂಗಳೂರು ವ್ಯಾಪ್ತಿಯಲ್ಲಿ ಮತ್ತೊಂದು ವಿಮಾನ ನಿಲ್ದಾಣ ಸ್ಥಾಪನೆ ಮಾಡಬೇಕೆಂದು ಹಟಕ್ಕೆ ಬೀಳದೆ, ಆಂಧ್ರಪ್ರದೇಶ ಹಾಗೂ ಕರ್ನಾಟಕ ಎರಡೂ ಸರ್ಕಾರಗಳು ಜೊತೆಗೂಡಿ ಮಡಕಶಿರಾದಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಲು ಚಿಂತನೆ ಮಾಡಬೇಕು. ಪಾವಗಡದಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ವಿಪುಲವಾಗಿದೆ. ಇನ್ನುಳಿದಂತೆ ಕೈಗಾರಿಕೆಗಳಿಗೆ ಬೇಕಾದ ನೀರು, ರಸ್ತೆ, ರೈಲು ಸಂಪರ್ಕ, ವಸತಿಯಂತಹ ಮೂಲ ಸೌಕರ್ಯಗಳನ್ನು ಒದಗಿಸುವುದಕ್ಕೆ ಆದ್ಯತೆ ನೀಡಿದರೆ ಪಾವಗಡ ಅಥವಾ ಮಡಕಶಿರಾಗೆ ಉದ್ದಿಮೆದಾರರನ್ನು ಆಕರ್ಷಿಸುವುದು ಸುಲಭವಾಗುತ್ತದೆ. ಇದರಿಂದ ಮಡಕಶಿರಾ, ಪಾವಗಡ, ಶಿರಾ, ಹಿರಿಯೂರಿನಂತಹ ಊರುಗಳ ಸಾವಿರಾರು ಮಂದಿ ಉದ್ಯೋಗಕ್ಕಾಗಿ ಬೆಂಗಳೂರು ನಗರಕ್ಕೆ ಬರುವುದು ತಪ್ಪುತ್ತದೆ. ಇದು ಅಭಿವೃದ್ಧಿಯ ವಿಕೇಂದ್ರೀಕರಣಕ್ಕೆ ನಾಂದಿಯಾಗುತ್ತದೆ.

–ಜಿ.ಬೈರೇಗೌಡ, ಕೊಡಿಗೇಹಳ್ಳಿ, ನೆಲಮಂಗಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT