ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: 18 ಸೆಪ್ಟೆಂಬರ್ 2024

Published : 17 ಸೆಪ್ಟೆಂಬರ್ 2024, 22:39 IST
Last Updated : 17 ಸೆಪ್ಟೆಂಬರ್ 2024, 22:39 IST
ಫಾಲೋ ಮಾಡಿ
Comments

ಸದ್ದು ಮಾಡಿ ಹೊದ್ದು ಮಲಗುವ ಜೈಲು ವ್ಯವಸ್ಥೆ?!

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರು ಇತ್ತೀಚೆಗೆ ದಿಢೀರ್ ದಾಳಿ ನಡೆಸಿದಾಗ ಹಲವಾರು ನಿಷೇಧಿತ ವಸ್ತುಗಳು ಪತ್ತೆಯಾಗಿರುವುದು ದುರದೃಷ್ಟಕರ. ಈ ವಸ್ತುಗಳು ಹಾಗೂ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಿಗೆ ಅಲ್ಲಿ ವಿಶೇಷ ಆತಿಥ್ಯ ನೀಡುತ್ತಿದ್ದುದು ಜೈಲು ನಿರ್ವಹಣಾ ವ್ಯವಸ್ಥೆಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿವೆ. ಸೆರೆವಾಸ ಅನುಭವಿಸುತ್ತಿರುವ ಹಣವಂತರು, ಕೊಲೆಪಾತಕ ಬಲಾಢ್ಯ ರೌಡಿಗಳಿಗೆ ಕಾರಾಗೃಹ ಈಗ ಶಿಕ್ಷೆ ಅನುಭವಿಸುವ ತಾಣವಾಗಿ ಉಳಿದಿಲ್ಲ. ಬದಲಾಗಿ, ಜೈಲು ಸಿಬ್ಬಂದಿಯ ಕೈ-ಬಾಯಿ ಬಿಸಿ ಮಾಡುವ ಮೂಲಕ ಅದನ್ನು ಭುವಿಯ ಮೇಲಿನ ಸ್ವರ್ಗವನ್ನಾಗಿ ಮಾಡಿಕೊಳ್ಳಬಹುದಾದ ತಾಣವಾಗಿ ಬದಲಾಗಿದೆ. ಸಕಲ ಸೌಲಭ್ಯಗಳು ಜೈಲಿನಲ್ಲೇ ದೊರೆಯುವುದಾದರೆ, ಜೈಲು ಶಿಕ್ಷೆ ಎಂಬುದಕ್ಕೆ ಏನು ಅರ್ಥವಿದೆ?

ಆಮಿಷಕ್ಕೊಳಗಾಗಿ ವಿಲಾಸಿ ಜೀವನ ನಡೆಸಲು ಜೈಲುವಾಸಿಗಳಿಗೆ ನೆರವಾಗುವ ಜೈಲು ಸಿಬ್ಬಂದಿಯನ್ನು ಬಂಧಿಸುವ ಕಠಿಣ ನಿಯಮ ಇಲ್ಲದಿದ್ದರೆ, ಇದು ಹೀಗೇ ಮುಂದುವರಿಯುತ್ತದೆ. ಯಾವಾಗಲಾದರೊಮ್ಮೆ ‘ಸದ್ದು ಮಾಡಿ’ ಹೊದ್ದು ಮಲಗುತ್ತದೆ.

– ತಿಪ್ಪೂರು ಪುಟ್ಟೇಗೌಡ, ಬೆಂಗಳೂರು

ಲಿಂಕ್‌ ಒತ್ತುವ ಮುನ್ನ ಇರಲಿ ಎಚ್ಚರ

ಸೈಬರ್ ಅಪರಾಧ ಈಗ ಸಾಂಕ್ರಾಮಿಕ ರೋಗದಂತೆ ಹಬ್ಬುತ್ತಿದೆ. ವಿದ್ಯಾವಂತರನ್ನು ಒಳಗೊಂಡು ಉನ್ನತ ಹುದ್ದೆಯಲ್ಲಿ ಇರುವವರೂ ಈ ಜಾಲಕ್ಕೆ ಬಲಿಪಶುಗಳಾಗುತ್ತಿದ್ದಾರೆ. ಒಂದು ಲಿಂಕ್ ಕಳುಹಿಸಿ ‘ನಮ್ಮ ಅಭಿಯಾನಕ್ಕೆ ಕೈ ಜೋಡಿಸಿ’ ಎಂದು ಕರೆ ಕೊಡಲಾಗುತ್ತದೆ. ಕೆಲವರು ತಮ್ಮ ನೆಚ್ಚಿನ ಪಕ್ಷಕ್ಕೆ ಒತ್ತಾಸೆಯಾಗಿ ‘ಲಿಂಕ್‌’ಗಳನ್ನು ಒತ್ತುತ್ತಾರೆ. ಇನ್ನು ಕೆಲವು ಲಿಂಕ್‌ಗಳು ವಂಚಕರ ಜಾಲಕ್ಕೆ ಸೇರಿದವಾಗಿದ್ದು, ಅವನ್ನು ಒತ್ತುವ ಮೂಲಕ, ಗೋಪ್ಯವಾಗಿ ಇರಬೇಕಾದ ತಮ್ಮ ಬ್ಯಾಂಕ್ ಮಾಹಿತಿಯನ್ನು ನೀಡಿ ಹಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಎಲ್ಲ ವೆಬ್‌ಸೈಟ್‌ಗಳು, ಲಿಂಕ್‌ಗಳು ವಂಚನೆಯ ಉದ್ದೇಶವನ್ನೇ ಹೊಂದಿರುತ್ತವೆ ಎಂದು ಹೇಳಲಾಗದಿದ್ದರೂ ವಂಚಕರು ಹೊಸ ಹೊಸ ಮಾದರಿಯಲ್ಲಿ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಇಂತಹ ಅಪರಾಧಗಳ ಬಗ್ಗೆ ಪೊಲೀಸ್‌ ಇಲಾಖೆ ಮೂಡಿಸುತ್ತಿರುವ ಜಾಗೃತಿ ಇನ್ನಷ್ಟು ಪರಿಣಾಮಕಾರಿ ಆಗಬೇಕಾಗಿದೆ. ಜೊತೆಗೆ ಜನ ಸಹ ಲಿಂಕ್‌ಗಳನ್ನು ಒತ್ತುವ ಮುನ್ನ ಬಹಳ ಎಚ್ಚರಿಕೆ ವಹಿಸಬೇಕಾಗಿದೆ.

– ಎಚ್.ವಿ.ಶ್ರೀಧರ್, ಬೆಂಗಳೂರು

ಗಣೇಶೋತ್ಸವ: ಮೂಲ ಅಸ್ಮಿತೆ ಕಣ್ಮರೆ

ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯವರ ಒಡೆದು ಆಳುವ ನೀತಿ ಹಾಗೂ ಇತರ ಸಾರ್ವಜನಿಕ ನಿರ್ಬಂಧಗಳ ವಿರುದ್ಧ ಭಾರತೀಯರನ್ನೆಲ್ಲಾ ಒಗ್ಗೂಡಿಸುವ ದಿಸೆಯಲ್ಲಿ ಬಾಲಗಂಗಾಧರ ತಿಲಕರು ಆರಂಭಿಸಿದ ಸಾರ್ವಜನಿಕ ಗಣೇಶೋತ್ಸವ ಇಂದು ತನ್ನ ಮೂಲ ಅಸ್ಮಿತೆಯನ್ನು ಕಳೆದುಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ. ತಿಲಕರು ಈ ಆಚರಣೆಯಲ್ಲಿ ಹಿಂದೂ, ಮುಸ್ಲಿಂ ಎಲ್ಲರನ್ನೂ ಒಗ್ಗೂಡಿಸಿ ನಾವೆಲ್ಲಾ ‘ಭಾರತೀಯರು’ ಎಂಬ ಮನೋಭಾವವನ್ನು ಹುಟ್ಟುಹಾಕಿದ್ದರು. ಗಣೇಶ ಹಬ್ಬ ಹಾಗೂ ಮೊಹರಂ ಒಟ್ಟಿಗೆ ಬಂದಾಗ ಎಲ್ಲರೂ ಸೇರಿ ಆಚರಿಸಿದ ನಿದರ್ಶನಗಳಿವೆ. ಆದರೆ ಇದೀಗ ನಾವು ನಾವೇ ಕಿತ್ತಾಡಿಕೊಂಡು ಕಲ್ಲು ಹೊಡೆಯುತ್ತಾ, ಬೀದಿರಂಪ ಮಾಡಿಕೊಂಡು, ಪ್ರಚೋದನಕಾರಿ ಹೇಳಿಕೆ ನೀಡಿ ಕೋಮುಗಲಭೆಗೆ ದಾರಿ ಮಾಡಿಕೊಡುತ್ತಿರುವುದು ದುರದೃಷ್ಟಕರ ಬೆಳವಣಿಗೆಯೇ ಸರಿ.

–ಸುರೇಂದ್ರ ಪೈ, ಭಟ್ಕಳ

ಜನಪ್ರತಿನಿಧಿಗೇಕೆ ಪ್ರತ್ಯೇಕ ವಿಚಾರಣೆ?

ಎಲ್ಲರಿಗೂ ತಿಳಿದಿರುವ ಸಾಮಾನ್ಯ ಜ್ಞಾನದ ಪ್ರಕಾರ, ಉನ್ನತ ಸ್ಥಾನದಲ್ಲಿರುವ ಒಬ್ಬ ಅಧಿಕಾರಿ, ಜನನಾಯಕ ಅಥವಾ ಜನಸಾಮಾನ್ಯ ಎಲ್ಲರಿಗೂ ಒಂದೇ ನ್ಯಾಯ. ಹೀಗಿರುವಾಗ, ‘ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ’ ಸ್ಥಾಪಿಸಿ, ಆರೋಪ ಎದುರಿಸುತ್ತಿರುವ ಜನಪ್ರತಿನಿಧಿಗಳನ್ನು ಅಲ್ಲಿ ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸುವ ಅವಶ್ಯಕತೆಯಾದರೂ ಏನು?

ಜನಪ್ರತಿನಿಧಿಗಳ ದರ್ಪ, ಒಣಪ್ರತಿಷ್ಠೆ ಹಾಗೂ ಮೇಲರಿಮೆಯಿಂದ ನಡೆಯುವ ನಾನಾ ರೀತಿಯ ದೌರ್ಜನ್ಯಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಬೇರೆಯೇ ಆದ ಒಂದು ನ್ಯಾಯಾಲಯದಲ್ಲಿ ಬಗೆಹರಿಸಲು ಮುಂದಾಗುವ ಕ್ರಮವೇ ನ್ಯಾಯದಾನದಲ್ಲಿನ ತಾರತಮ್ಯ ನಡೆಯಂತೆ ಮೇಲ್ನೋಟಕ್ಕೆ ಗೋಚರಿಸುತ್ತದೆ.

– ರವಿಕಿರಣ್ ಶೇಖರ್, ಬೆಂಗಳೂರು

ಎನ್‌ಇಪಿ– ಎಸ್‌ಇಪಿ: ಭಿನ್ನ ನಿಲುವು

ಇತ್ತೀಚೆಗೆ ನಡೆದ ಬೆಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಎನ್‌ಇಪಿ ಹಾಗೂ ಎಸ್‌ಇಪಿ ಬಗ್ಗೆ ಎರಡು ಭಿನ್ನ ನಿಲುವುಗಳು ವ್ಯಕ್ತವಾದವು. ರಾಷ್ಟ್ರೀಯ ಶಿಕ್ಷಣ ನೀತಿಯ ಬಗೆಗೆ ಮೆಚ್ಚುಗೆ ವ್ಯಕ್ತವಾದುದಕ್ಕೆ ಪ್ರತಿಕ್ರಿಯೆಯೋ ಎಂಬಂತೆ ರಾಜ್ಯ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ‘ಎನ್ಇಪಿಯು ಖಾಸಗಿ‌ ಶಿಕ್ಷಣ ಸಂಸ್ಥೆ, ವಿಶ್ವವಿದ್ಯಾಲಯಗಳಿಗಷ್ಟೇ ಹೇಳಿ ಮಾಡಿಸಿದಂತಿದ್ದು, ಅಲ್ಲಿ ಎಲ್ಲ ವಿಭಾಗಗಳೂ ಒಂದೇ ಸೂರಿನಡಿ ಇರುತ್ತವೆ. ಸರ್ಕಾರಿ ಶಿಕ್ಷಣ ವ್ಯವಸ್ಥೆಯಲ್ಲಿ ವಿವಿಧ ವಿಷಯಗಳು ವಿವಿಧೆಡೆ ಹಂಚಿಹೋಗಿವೆ. ಜತೆಗೆ ಶಿಕ್ಷಕರ ಕೊರತೆಯೂ ಗಂಭೀರವಾಗಿದೆ’ ಎಂದಿದ್ದಾರೆ. ರಾಜ್ಯದ ಎಸ್‌ಇಪಿ ಆಯೋಗವು ಮಧ್ಯಂತರ ವರದಿಯನ್ನಷ್ಟೇ ನೀಡಿದೆ, ಅಂತಿಮ‌ ವರದಿ ಶೀಘ್ರದಲ್ಲೇ ಬರಲಿದೆ ಎಂದ ಸಚಿವರು ನಿರ್ದಿಷ್ಟ ತಿಂಗಳನ್ನಾದರೂ ಸೂಚಿಸಿಲ್ಲ.

ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗ ಎನ್‌ಇಪಿಯನ್ನು ಹಾಡಿ ಹೊಗಳಿ ‘ನಮ್ಮ ರಾಜ್ಯದಲ್ಲೇ ಮೊದಲು ಜಾರಿಗೆ ತರುತ್ತಿದ್ದೇವೆ’ ಎಂದು ಹೇಳಿಕೊಂಡರೂ ಜಾರಿಗೆ ಅಗತ್ಯ ತಯಾರಿ ಮಾಡಿಕೊಳ್ಳಲಿಲ್ಲ. ಕೆಲವು ಪುಸ್ತಕ ಮಳಿಗೆಗಳಲ್ಲಿ ಹಳೆಯ ಪದ್ಧತಿ, ಎನ್ಇಪಿ ಎಂಬ ಪ್ರತ್ಯೇಕ ರ್‍ಯಾಕ್‌ಗಳು ಕಾಣಿಸಿದವು. ಇದರಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಯಿತು. ಈಗಲೂ ಪರಿಸ್ಥಿತಿ ಸ್ಫುಟವಾಗಿಲ್ಲ. ಉದಾಹರಣೆಗೆ, ಬ್ಯಾಂಕಿಂಗ್‌ನಂತಹ ವಿಷಯವನ್ನು ಉಪಯುಕ್ತವಾಗಿ ಬೋಧಿಸಲು ಪುಸ್ತಕಗಳು, ಶಿಕ್ಷಕರು ಇಲ್ಲ. ಮಧ್ಯಂತರ ವರದಿಯನ್ನು ಆಧರಿಸಿ ಮಾಡಿಕೊಂಡಿರುವ ಬದಲಾವಣೆಗಳಿಂದಾದ ಪರಿಣಾಮಗಳ ಬಗೆಗೆ ಮಾಹಿತಿ ಪಡೆದುಕೊಂಡು, ಆಯೋಗ ಬೇಗ ಅಂತಿಮ ವರದಿ ಸಲ್ಲಿಸಲು ಮುಖ್ಯಮಂತ್ರಿ ಕ್ರಮ ಕೈಗೊಳ್ಳಬೇಕು.

– ಎಚ್.ಎಸ್.ಮಂಜುನಾಥ, ಗೌರಿಬಿದನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT