ಸಭಾಂಗಣದಲ್ಲಿ ಕುಳಿತು ‘ಕಾಣದ’ ಕ್ರಿಕೆಟ್ ನೋಡಿದರು!

1974ರಲ್ಲಿ ಹೆಬ್ಬಾಳದ ಕೃಷಿ ಕಾಲೇಜಿನ ಕೃಷಿ ಪದವಿಯ ಮೊದಲ ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದೆ. ಆಗ ಬೆಂಗಳೂರಿನಲ್ಲಿ ಪ್ರಥಮ ಕ್ರಿಕೆಟ್ ಟೆಸ್ಟ್ ಪಂದ್ಯ ಆಯೋಜನೆಯಾಗಿತ್ತು (50 ವರ್ಷಗಳ ಹಿಂದೆ; ಪ್ರ.ವಾ., ನ. 22). ಇಡೀ ಕಾಲೇಜಿನಲ್ಲಿ ಎಲ್ಲರೂ ಸಂಭ್ರಮಪಡುತ್ತಿದ್ದರು. ಆಗ ನಮ್ಮ ವಿದ್ಯಾರ್ಥಿ ಕಲ್ಯಾಣ ನಿರ್ದೇಶಕರಾಗಿದ್ದ ಸುಬ್ಬಯ್ಯನವರು ನಮ್ಮ ಕಾಲೇಜಿನ ದೊಡ್ಡ ಆಡಿಟೋರಿಯಂನ ವೇದಿಕೆಯ ಮೇಲೆ ಒಂದು ಟೇಬಲ್ ಇಟ್ಟು, ಅದರ ಮೇಲೆ ಒಂದು ಕಪ್ಪು ಬಿಳುಪು ಟಿ.ವಿಯನ್ನು ಇರಿಸುವ ವ್ಯವಸ್ಥೆ ಮಾಡಿದ್ದರು.

ಅದರಲ್ಲಿ ಏನೂ ಕಾಣದಿದ್ದರೂ ಸಭಾಂಗಣದ ತುಂಬಾ ಹುಡುಗರು ಕ್ರಿಕೆಟ್ ನೋಡಲು ಕುಳಿತಿದ್ದನ್ನು ನೆನೆಸಿಕೊಂಡರೆ ಒಂದು ರೀತಿ ತಮಾಷೆ ಅನಿಸುತ್ತದೆ. ಕೆಲ ಸಹಪಾಠಿಗಳು ಹೇಗೋ ಟಿಕೆಟ್ ಗಿಟ್ಟಿಸಿಕೊಂಡು ಬಂದು, ಸರದಿಯಂತೆ ಪ್ರತಿದಿನ ಒಬ್ಬೊಬ್ಬರು ಟೆಸ್ಟ್ ಪಂದ್ಯ ನೋಡಿದ್ದು ನೆನಪು. ನಮ್ಮನ್ನು 50 ವರ್ಷಗಳ ಹಿಂದೆ ಕರೆದುಕೊಂಡು ಹೋದ ಪತ್ರಿಕೆಗೆ ಧನ್ಯವಾದ.

–ಟಿ.ವಿ.ಬಿ. ರಾಜನ್, ಬೆಂಗಳೂರು

–ಲೋಕಾಯುಕ್ತ ದಾಳಿ: ಮುಜುಗರ ತಪ್ಪಿಸಿ

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳ ಮನೆ ಮತ್ತು ಇತರ ಸ್ವತ್ತುಗಳ ಶೋಧ ನಡೆಸಿರುವ ಲೋಕಾಯುಕ್ತ ಪೊಲೀಸರು, ಘೋಷಿತ ಆದಾಯಕ್ಕಿಂತ ಹೆಚ್ಚುವರಿ ಸ್ವತ್ತುಗಳನ್ನು ಪತ್ತೆ ಮಾಡಿರುವುದಾಗಿ ವರದಿಯಾಗಿದೆ (ಪ್ರ.ವಾ., ನ. 21). ಹೀಗೆ ಲೋಕಾಯುಕ್ತ ದಾಳಿ ನಡೆದ ಸಂದರ್ಭದಲ್ಲಿ ಪತ್ತೆಯಾದ ಚರ, ಸ್ಥಿರಾಸ್ತಿಗಳ ವಿವರಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಇಂತಹ ದಾಳಿಗಳ ಬಗ್ಗೆ ಲೋಕಾಯುಕ್ತವು ಮಾಧ್ಯಮಗಳಿಗೆ ಮಾಹಿತಿ ನೀಡುವಾಗ, ಆಸ್ತಿಗಳ ಸ್ವಾಧೀನದ ಪ್ರಕಾರಗಳನ್ನು ವಿವರಿಸಿ ಹೇಳಬೇಕು. ಪಿತ್ರಾರ್ಜಿತ ಮತ್ತು ಸ್ವಯಾರ್ಜಿತ ಆಸ್ತಿಗಳನ್ನು ವಿಭಾಗಿಸಿ ಹೇಳಿದರೆ, ಅಧಿಕಾರಿಯ ಅಕ್ರಮ ಆಸ್ತಿ ಎಷ್ಟು ಎಂಬುದು ಸಾರ್ವಜನಿಕರಿಗೆ ತಿಳಿಯುತ್ತದೆ.

ಕೆಲವರಿಗೆ ವಿಭಾಗದ ಮೂಲಕ ಮತ್ತು ರಕ್ತಸಂಬಂಧಿಗಳಿಂದ ದಾನದ ಮೂಲಕವೂ ಸ್ಥಿರಾಸ್ತಿಗಳು ವರ್ಗಾವಣೆಆಗಿರುತ್ತವೆ. ಇವು ಅಕ್ರಮವಾಗಿರುವುದಿಲ್ಲ. ಬಹುತೇಕರು ರೈತ ಕುಟುಂಬದ ಹಿನ್ನೆಲೆಯ ಅಧಿಕಾರಿಗಳಾಗಿದ್ದು, ಪಿತ್ರಾರ್ಜಿತ ಆಸ್ತಿ ಉಳ್ಳವರೇ ಆಗಿರುತ್ತಾರೆ. ಈ ಎಲ್ಲವುಗಳ ಬಗ್ಗೆಯೂ ನ್ಯಾಯಾಲಯದಲ್ಲಿ ವಿಚಾರಣೆಯಾಗುತ್ತದೆ. ಪಿತ್ರಾರ್ಜಿತ ಭೂಮಿ ಬಗ್ಗೆ ಮಾಧ್ಯಮಗಳಲ್ಲಿ ವಿವರ ಬಹಿರಂಗವಾದರೆ, ಅದೂ ಅಕ್ರಮ ಎಂದೇ ಬಿಂಬಿತವಾಗುವುದು ತಪ್ಪುತ್ತದೆ. ಇದರಿಂದ, ದಾಳಿಗೊಳಗಾದ ಅಧಿಕಾರಿಗಳಿಗೆ ಆಗಬಹುದಾದ ಮುಜುಗರವಾದರೂ ತಪ್ಪುತ್ತದೆ.

–ಲಕ್ಷ್ಮೀಕಾಂತರಾಜು ಎಂ.ಜಿ., ಮಠಗ್ರಾಮ, ಗುಬ್ಬಿ

ಸಮ್ಮೇಳನ ನೋಂದಣಿ: ಅವಕಾಶ ಮುಕ್ತವಾಗಲಿ

ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನೋಂದಾಯಿಸಲು ಕನ್ನಡ ಸಾಹಿತ್ಯ ಪರಿಷತ್ತಿನ ಜಾಲತಾಣದಲ್ಲಿ ಈಗಾಗಲೇ ಅವಕಾಶ ಕಲ್ಪಿಸಲಾಗಿದೆ. ಆದರೆ ಈ ನೋಂದಣಿ ಪ್ರಕ್ರಿಯೆಯಲ್ಲಿ ಒಂದು ಲೋಪವಿದೆ. ಸಮ್ಮೇಳನಕ್ಕೆ ಹೋಗಲು ಇಚ್ಛಿಸುವವರು ಸಾಹಿತ್ಯ ಪರಿಷತ್ತಿನ ಸದಸ್ಯರಾಗಿ ನೋಂದಾಯಿಸಿಕೊಳ್ಳಲೇ
ಬೇಕಾಗಿದೆ. ಬರೀ ಆಸಕ್ತಿಯಿಂದ ಪ್ರತಿನಿಧಿಗಳಾಗಿ ಭಾಗವಹಿಸಲು ಅವಕಾಶ ಕೊಡಲಾಗಿಲ್ಲ. ಈ ಲೋಪವನ್ನು ಸರಿಪಡಿಸಿ, ಸಮ್ಮೇಳನಕ್ಕೆ ಹೋಗಲು ಇಚ್ಛಿಸುವ ಎಲ್ಲ ಕನ್ನಡಿಗರಿಗೂ ಪ್ರತಿನಿಧಿಗಳಾಗುವ ಅವಕಾಶ ಮಾಡಿಕೊಡಬೇಕು.

ಸದಸ್ಯರಾಗಿರಲೇಬೇಕು ಎಂಬ ನಿರ್ಬಂಧವನ್ನು ಹೇರಬಾರದು. ಅಲ್ಲದೆ ಈಗಾಗಲೇ ಸದಸ್ಯರಾಗಿರುವ ಹಲವರ ಮೊಬೈಲ್ ಸಂಖ್ಯೆಗಳು ಸಾಹಿತ್ಯ ಪರಿಷತ್ತಿನ ದತ್ತಾಂಶದಲ್ಲಿ ದಾಖಲಾಗಿಲ್ಲ. ದಾಖಲಿಸುವ ಪ್ರಯತ್ನ ಮಾಡಿದರೆ, ‘ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಲು ದಯವಿಟ್ಟು ನಮ್ಮ ಕಚೇರಿಯನ್ನು ಸಂಪರ್ಕಿಸಿ’ ಎಂಬ ಸಂದೇಶ ಕೇಳಿಬರುತ್ತದೆ. ವೆಬ್ಸೈಟ್ ಮೂಲಕವೇ ದಾಖಲಿಸಲು ಅವಕಾಶ ಮಾಡಿಕೊಡುವುದು ಒಳಿತು.

–ಸಾದಿಕ್ಉಲ್ಲಾ ಎಂ.ಎ., ಭರಮಸಾಗರ, ಚಿತ್ರದುರ್ಗ

ಶರಣಾಗತ ನಕ್ಸಲರಿಗೆ ಪರಿಹಾರ ವಿಳಂಬ ಸಲ್ಲ

‘ಸಶಸ್ತ್ರ ಹೋರಾಟ ಬಿಟ್ಟು ಮುಖ್ಯವಾಹಿನಿಗೆ ಮರಳಿದ ಹಲವಾರು ಮಾಜಿ ನಕ್ಸಲರ ಜೀವನ ದಯನೀಯ ಸ್ಥಿತಿಯಲ್ಲಿ ಇರುವುದನ್ನು (ಪ್ರ.ವಾ., ನ. 22) ತಿಳಿದು ದುಃಖವಾಯಿತು. ಯುವಜನ ಯಾವ ಪುರುಷಾರ್ಥಕ್ಕಾಗಿ ಹೀಗೆ ಹೋರಾಡಬೇಕು? ಇದು ತಂತ್ರಜ್ಞಾನದ ಯುಗ. ಕಾಡಿನ ಗರ್ಭದಲ್ಲಿದ್ದರೂ ಹಿಡಿದು ಕೊಲ್ಲುವ ಶಸ್ತ್ರಾಸ್ತ್ರಗಳು ಪ್ರಭುತ್ವದ ಕೈಯಲ್ಲಿವೆ. ಆದಾಗ್ಯೂ ಸಾಮಾಜಿಕ ಅನ್ಯಾಯದ ವಿರುದ್ಧ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದವರ ಪರ ಇವರು ಭಾವುಕರಾಗಿ ಸಶಸ್ತ್ರ ಹೋರಾಟ ಕೈಗೊಂಡರು, ತಲೆ ಕೊಟ್ಟರು, ತಲೆ ತೆಗೆದರು ಸಹ. ಇದು ಸಂವಿಧಾನ ವಿರೋಧಿ ಕೆಲಸ. ತಮ್ಮ ತಪ್ಪು ಅರಿವಾಗಿ ಮುಖ್ಯವಾಹಿನಿಗೆ ಮರಳಿದ್ದಾರೆ. ಆದರೆ ವಾರವಿಡೀ ಕೋರ್ಟಿಗೆ ಅಲೆದಾಟ, ವಕೀಲರಿಗೆ ಶುಲ್ಕ ಕೊಡಲು ಪರದಾಟ, ಜೀವನಕ್ಕೆ ಆಧಾರವಿಲ್ಲ. ಹೀಗಾದರೆ ಅವರು ಬದುಕು ಕಟ್ಟಿಕೊಳ್ಳುವುದಾದರೂ ಹೇಗೆ? ಸರ್ಕಾರವು ಮಾನವೀಯತೆ ದೃಷ್ಟಿಯಿಂದ ಮಾಜಿ ನಕ್ಸಲರ ಜೀವನೋಪಾಯಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು.

–ಪ್ರೊ. ಶಿವರಾಮಯ್ಯ, ಬೆಂಗಳೂರು

ನಿವೃತ್ತಿ ವಯಸ್ಸು: ಸುಳ್ಳು ಸುದ್ದಿಯ ಮೂಲ ಪತ್ತೆಹಚ್ಚಿ

ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60ರಿಂದ 62 ವರ್ಷಕ್ಕೆ ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದೆ ಎಂಬ ಸುದ್ದಿ ಇತ್ತೀಚೆಗೆ ಕೆಲವು ಮಾಧ್ಯಮಗಳಲ್ಲಿ ಪ್ರಕಟಗೊಂಡಿದೆ. ಈ ಬಗ್ಗೆ ಇದುವರೆಗೂ ಕೇಂದ್ರ ಹಣಕಾಸು ಸಚಿವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವಾಟ್ಸ್ಆ್ಯಪ್ನಲ್ಲೂ ಈ ಸುದ್ದಿ ಹರಿದಾಡುತ್ತಿದ್ದು, ಯುವ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ನಿರುದ್ಯೋಗದ ಸಮಸ್ಯೆಯಿಂದ ತತ್ತರಿಸಿರುವ ಯುವಜನ ಈ ಸುದ್ದಿ ಕೇಳಿ ಆತಂಕಗೊಂಡಿ ದ್ದಾರೆ. ಐದಾರು ವರ್ಷಗಳಿಂದಲೂ ಕೇಂದ್ರ ಸರ್ಕಾರದ ಬಜೆಟ್ನ ಮೂರ್ನಾಲ್ಕು ತಿಂಗಳ ಮೊದಲು ಇಂತಹದ್ದೊಂದು ಸುದ್ದಿ ಎಲ್ಲೆಡೆ ಹರಿದಾಡುತ್ತದೆ. ನಂತರ ಹಣಕಾಸು ಸಚಿವರು, ಅಂತಹ ಯಾವುದೇ ಪ್ರಸ್ತಾವ ಕೇಂದ್ರದ ಮುಂದಿಲ್ಲ ಎಂದು ಹೇಳಿಕೆ ನೀಡುತ್ತಾರೆ. ಆಗ ಯುವಜನ ಸ್ವಲ್ಪಮಟ್ಟಿಗೆ ನಿಟ್ಟುಸಿರುಬಿಡುತ್ತಾರೆ.

ಹಾಗಿದ್ದರೆ ಇಂತಹ ಸುಳ್ಳು ಸುದ್ದಿಗಳ ಮೂಲ ಯಾವುದು, ಯುವಜನರನ್ನು ಹೀಗೆ ದಾರಿ ತಪ್ಪಿಸುವುದರ ಉದ್ದೇಶವಾದರೂ ಏನು ಎಂಬುದು ಅರ್ಥವಾಗುವುದಿಲ್ಲ. ಇಂತಹ ಪ್ರಕರಣಗಳಲ್ಲಿ ಕಾನೂನು ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಲಿ.

–ಬೂಕನಕೆರೆ ವಿಜೇಂದ್ರ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.