ಪತ್ರ ಅಂಚೆ ಡಬ್ಬಿಯಲ್ಲಿದೆ. ಎದೆಯ ಭಾವನೆಗಳೆಲ್ಲ ಆ ಪತ್ರಗಳಲ್ಲಿ ಅಕ್ಷರಗಳಾಗಿವೆ. ಆದರೆ, ಆ ಪತ್ರ ತಲುಪಬೇಕಾದವರಿಗೆ ಬಟವಾಡೆಯಾಗದೆ ಉಳಿದಿದೆ. ಸ್ವೀಕರಿಸಬೇಕಾದ ಹುಡುಗಿಗೆ ಪತ್ರ ಬಟವಾಡೆಯಾಗದೆ ಹೋಗಿ, ಕೆಂಪು ಡಬ್ಬಿಯಲ್ಲಿ ಲೇಖಕನ ಬದುಕು ಸಿಲುಕಿಕೊಂಡ ಭಾವ...

ತಮ್ಮ ’ಬಟವಾಡೆಯಾಗದ ರಸೀತಿ’ ಕವನ ಸಂಕಲನದ ಕವಿತೆಗಳು ರೂಪುಗೊಂಡ ಬಗೆಯನ್ನು ಲಕ್ಕೂರು ಆನಂದ ವಿವರಿಸುವುದು ಹೀಗೆ. ವೇದನೆಯ ಪಾಲೇ ಹೆಚ್ಚಾದ ರಮ್ಯ ದನಿಯಲ್ಲಿ ತಮ್ಮ ಕಾವ್ಯ ಕನ್ನಿಕೆಯ ಬಗ್ಗೆ ಅವರು ಮಾತನಾಡುತ್ತಿದ್ದರೆ– ‘ಅರೆರೆ, ಓರಗೆಯ ಕವಿಗಳು ಕವಿತೆಯನ್ನು ಖಡ್ಗದಂತೆ ಝಳಪಿಸುತ್ತಿರುವಾಗ, ಪ್ರೇಮದ ಬಗ್ಗೆ, ಪ್ರೇಮದ ಸಂತಸ ಸಂಕಟಗಳ ಬಗ್ಗೆ ಇಲ್ಲೊಬ್ಬ ಕವಿ ಮಾತನಾಡುತ್ತಿದ್ದಾನಲ್ಲ’ ಎಂದು ಸಹೃದಯರಿಗೆ ಅನ್ನಿಸಬೇಕು. ಹೌದು, ಆನಂದರ ’ಬಟವಾಡೆಯಾಗದ ರಸೀತಿ’ಯ ಕವಿತೆಯ ಹಿಂದೆ ಓರ್ವ ಯುವತಿಯಿದ್ದಾಳೆ. ಆ ಕನ್ನಿಕೆ, ಕಾವ್ಯವನ್ನು ತನ್ನ ಪ್ರೇಮಿಯ ಪಾಲಿಗೆ ಉಳಿಸಿ, ತಾನು ಬೇರೆ ದಾರಿ ತುಳಿದಿದ್ದಾಳೆ. ದಾರಿ ಬದಲಾದ ಆ ತಳಮಳ ಕವಿಯಲ್ಲಿ ಪದ್ಯವಾಗಿದೆ, ಹೃದ್ಯವಾಗಿದೆ.

ಆನಂದ ಕೋಲಾರದ ಮಾಲೂರು ತಾಲ್ಲೂಕಿನ ಲಕ್ಕೂರಿನವರು. ಭಾರತೀಯ ಸಮಾಜದ ಗುಣಲಕ್ಷಣಗಳನ್ನು ಪ್ರತಿನಿಧಿಸುವ ಊರುಕೇರಿಗಳ ಎಲ್ಲ ಚಹರೆಗಳನ್ನೂ ಒಳಗೊಂಡ ಲಕ್ಕೂರು ಈಗ ಆನಂದರ ಮೂಲಕವೇ ಕನ್ನಡದ ಓದುಗರಿಗೆ ಹತ್ತಿರ.

ತಾನು ತಲೆ ಎತ್ತಿ ನಡೆಯಲಿಕ್ಕೆ ಕವಿತೆಯೊಂದೇ ಆಸರೆ ಎನ್ನುವುದು ನಿಚ್ಚಳವಾದ ಕಾಲೇಜು ದಿನಗಳಿಂದಲೂ ಆನಂದ ಕವಿತೆ ಕಟ್ಟುತ್ತಾ ಬಂದಿದ್ದಾರೆ. ಅವರ ಭರವಸೆಯ ವ್ಯವಸಾಯಕ್ಕೀಗ– ‘ಬಟವಾಡೆಯಾಗದ ರಸೀತಿ’ ಸಂಕಲನದ ಮೂಲಕ– ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರದ ಗೌರವ.

‘ಬಟವಾಡೆಯಾಗದ ರಸೀತಿ’ ಆನಂದರ ಮೂರನೇ ಕವನ ಸಂಕಲನ. ‘ಊರಿಂದ ಊರಿಗೆ’, ‘ಇಪ್ಪತ್ತರ ಕಲ್ಲಿನ ಮೇಲೆ’ ಅವರ ಮೊದಲೆರಡು ಕವನ ಸಂಕಲನಗಳು. ರಸೀತಿಯ ನಂತರ ‘ಇತಿ ನಿನ್ನ ವಿಧೇಯನು’ ಹಾಗೂ ‘ಉರಿವ ಏಕಾಂತ ದೀಪ’ ಎನ್ನುವ ಸಂಕಲನಗಳನ್ನೂ ಅವರು ಪ್ರಕಟಿಸಿದ್ದಾರೆ. ಮೂವತ್ತಮೂರು ವರ್ಷಗಳ ಕವಿ (ಜನನ: ಜುಲೈ 14, 1980) ಐದು ಸಂಕಲನ ಪ್ರಕಟಿಸಿದ್ದಾರೆಂದರೆ, ಬೆಳಕು ಕಾಣಬೇಕಾದ ಕವಿತೆಗಳ ಕಟ್ಟು ಇನ್ನೂ ಸಾಕಷ್ಟಿವೆ ಎನ್ನುವುದನ್ನು ನೋಡಿದರೆ, ಕವಿತೆ ಬರೆಯುವುದನ್ನು ಬಿಟ್ಟರೆ ಆನಂದರಿಗೆ ಬೇರೆ ಉದ್ಯೋಗವೇನೂ ಇಲ್ಲ ಎಂದು ಯಾರಿಗಾದರೂ ಅನ್ನಿಸಿದರೆ ಆಶ್ಚರ್ಯವಿಲ್ಲ. ನಿಜ, ಕವಿತೆಯ ಸಖ್ಯಕ್ಕಿಂತ ಅವರಿಗೆ ಮಿಗಿಲಾದುದು ಯಾವುದೂ ಇಲ್ಲ.

ಬದುಕು ಕಟ್ಟಿಕೊಟ್ಟಿರುವುದೇ ಕವಿತೆ ಆಗಿರುವಾಗ ಈ ಸಂಖ್ಯೆ ದೊಡ್ಡದೇನೂ ಅಲ್ಲ. ಪ್ರಶಸ್ತಿಯ ಬೆಳಕಿನಲ್ಲಿ ಇರುವ ಆನಂದ ತಮ್ಮ ಓರಗೆಯ ಕವಿಗಳಿಗಿಂತ ಹೇಗೆ ಭಿನ್ನ? ಸಮಕಾಲೀನ ಕಾವ್ಯ ಸಂದರ್ಭದಲ್ಲಿ ಅವರ ಕಾವ್ಯದ ನೆಲೆಬೆಲೆ ಯಾವ ರೀತಿಯದು? ಇಂಥ ಪ್ರಶ್ನೆಗಳು ಕಾವ್ಯ ಪಾತಿವ್ರತ್ಯ ನಿಷ್ಠ ವಿಮರ್ಶಕರಿಗೆ ಹೆಚ್ಚು ಮುಖ್ಯವಾಗಬಹುದು. ಇದಕ್ಕಿಂತಲೂ ಕಾವ್ಯವನ್ನು ರೂಪಿಸಿದ ಕವಿಯ ಬದುಕೇ ಹೆಚ್ಚು ಕುತೂಹಲಕರವಾಗಿದೆ. ವ್ಯಕ್ತಿಯಾಗಿ ಆನಂದ ಅವರ ಬಗ್ಗೆ ಯಾವ ಅನುಮಾನವೂ ಇಲ್ಲದೆ ಹೇಳಬಹುದಾದ ಮಾತೆಂದರೆ, ಅವರಷ್ಟು ಸಂಪರ್ಕಗಳುಳ್ಳ ಯುವ ಕವಿ ಕನ್ನಡದಲ್ಲಿ ಮತ್ತೊಬ್ಬರಿಲ್ಲ. ಅದೊಂದು ಬಗೆಯ ಸಾಹಿತ್ಯ ಮತ್ತು ಮನುಷ್ಯ ಪ್ರೀತಿ ಒಟ್ಟಾದ ಸಂಪರ್ಕ. ಗಮನಸೆಳೆಯುವ ಕವಿತೆಯೋ ಕಥೆಯೋ ಎಲ್ಲಿಯಾದರೂ ಪ್ರಕಟವಾದಾಗ, ಆ ಬರಹವನ್ನು ಓದಿ ಆಸ್ವಾದಿಸುವವರು, ತಮ್ಮ ಸಂತೋಷವನ್ನು ಸಮಾನ ಮನಸ್ಕರೊಂದಿಗೆ ಹಂಚಿಕೊಳ್ಳುವವರು ಸಾಕಷ್ಟು ಮಂದಿ ಇದ್ದಾರೆ.

ಲೇಖಕರು ಪರಿಚಿತರಿದ್ದರೆ ಅವರಿಗೆ ಫೋನ್ ಮಾಡಿ ಶುಭಾಶಯ ಹೇಳುವವರೂ ಇದ್ದಾರೆ. ಆದರೆ, ಆನಂದರ ರೀತಿಯೇ ಬೇರೆ. ಇಷ್ಟವಾದ ಕವಿಗೆ ಪತ್ರ ಬರೆಯುವುದು ಹಾಗೂ ಫೋನ್ ಮಾಡುವುದಷ್ಟಕ್ಕೆ ಅವರಿಗೆ ತೃಪ್ತಿಯಿಲ್ಲ. ಬರಹಗಾರರನ್ನು ಹುಡುಕಿಕೊಂಡು ಹೋಗಿ ಪರಿಚಯ ಮಾಡಿಕೊಂಡಾಗಷ್ಟೇ ಸಮಾಧಾನ. ಕನ್ನಡದ ಹೊಸ ತಲೆಮಾರಿನ ಯಾವ ಬರಹಗಾರರನ್ನಾದರೂ ಮಾತನಾಡಿಸಿ– ಆನಂದರ ಕವಿತೆ ಓದಿಲ್ಲದೆ ಇರುವವರು ಸಿಗಬಹುದು, ಪರಿಚಯ ಇಲ್ಲದಿರುವವರು ಸಿಗುವುದು ಕಷ್ಟ.

‘ನಾನೂ ಅವರಂತಾದೇನು, ಅವರಂತೆ ಬರೆದೇನು ಎನ್ನುವ ಆಸೆಯಿಂದ ಬರಹಗಾರರನ್ನು ಹುಡುಕಿಕೊಂಡು ಹೋಗುತ್ತೇನೆ’ ಎನ್ನುವ ಆನಂದರಿಗೆ ಸಾಹಿತಿಗಳ ಒಡನಾಟ ತನ್ನ ಸಾಹಿತ್ಯದ ಬದುಕನ್ನು ಚೆಲುವಾಗಿಸಿಕೊಳ್ಳುವ ಒಂದು ದಾರಿ ಅನ್ನಿಸಿದೆ. ‘ನಕ್ಕಾಗ ನಕ್ಕವರ ತುಟಿಯ ಮೇಲೆ ನನ್ನ ಋಣವಿರುವಂತೆನಿಸುತ್ತದೆ’ ಎನ್ನುವುದು ‘ಉರಿವ ಏಕಾಂತ ದೀಪ’ ಕವನಸಂಕಲನದಲ್ಲಿನ ಕವಿಯ ಮಾತುಗಳ ಬರಹದ ಶೀರ್ಷಿಕೆ. ಈ ಮಾತು ಅವರ ಸಾಹಿತ್ಯ–ಸಾಹಿತಿಗಳ ಒಡನಾಟಗಳ ರೂಪಕದಂತಿದೆ.

ಲಕ್ಕೂರರ ಸಾಹಿತ್ಯ ಪ್ರೀತಿ ಹಾಗೂ ಅಲೆದಾಟವನ್ನು ನೋಡಿ ಅವರ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ ಎಂದು ಭಾವಿಸುವಂತಿಲ್ಲ. ಬಡತನ ಹಾಗೂ ಹಸಿವು ಮೊನ್ನೆ ಮೊನ್ನೆಯವರೆಗೂ ಅವರ ಒಡನಾಡಿಗಳಾಗಿದ್ದವು. ಈಚೆಗೆ ಪೂರ್ಣ ಪ್ರಮಾಣದ ಉಪನ್ಯಾಸ ವೃತ್ತಿಗೆ ಸೇರಿಕೊಂಡ ನಂತರ ಅವರ ಬದುಕು ಸುಧಾರಿಸಿದೆಯಷ್ಟೇ.

ಹಸಿವು ಹಾಗೂ ಜಾತಿಯ ಚೌಕಟ್ಟನ್ನು ಹೊರತುಪಡಿಸಿ ಆನಂದರ ಕುರಿತ ಮಾತು ಅಪೂರ್ಣ. ಅಪ್ಪ ಚಿನ್ನಪ್ಪ ಹಾಗೂ ಹಾಗೂ ತಾಯಿ ಮುನಿಯಮ್ಮ ಕೂಲಿ ಕೆಲಸಗಾರರು. ಅವರ ಮೂವರು ಮಕ್ಕಳಲ್ಲಿ ಆನಂದ ಮೊದಲನೆಯವರು. ತಮ್ಮ ಕುಟುಂಬದ ಹಸಿವು–ಅವಮಾನಗಳಿಗೆ ಮಕ್ಕಳ ಅಕ್ಷರ ಕಲಿಕೆಯೇ ಉತ್ತರವಾಗಬೇಕು ಎನ್ನುವ ಹಂಬಲ ಹೆತ್ತವರದು. ಆದರೆ, ಹಿಂದುಳಿದ ವರ್ಗದ, ಅದರಲ್ಲೂ ಬಡತನವನ್ನೇ ಹಾಸಿಹೊದ್ದ ಮನೆಯ ಮಕ್ಕಳ ಕಲಿಕೆಯ ಹಾದಿಯೇನು ಸುಲಭದ್ದೇ? ಶಾಲೆಯ ಕಾರಣದಿಂದಾಗಿ ಮಕ್ಕಳೊಂದಿಗೆ ಬೆರೆಯುವುದು ಸಾಧ್ಯವಾದರೂ, ಅವರ ಮನೆಗಳಿಗೆ ಹೋದಾಗ ಹೊರಗೇ ನಿಲ್ಲಬೇಕಾದ ಪರಿಸ್ಥಿತಿ. ಹೀಗೆ ಹೊರಗೆ ನಿಂತ ಹುಡುಗನಿಗೆ, ಬೀದಿಯಲ್ಲಿನ ನಾಯಿಗೂ ತನಗೂ ವ್ಯತ್ಯಾಸವಿಲ್ಲ ಎನ್ನಿಸಿದ್ದಿದೆ. ತನ್ನ ತಳಮಳಗಳಿಗೆಲ್ಲ ಓದು ಉತ್ತರ ಒದಗಿಸಬಲ್ಲದು ಅನ್ನಿಸಿದ್ದೇ ಅಕ್ಷರಗಳ ನಂಟು ಬಲವಾಗಿದೆ. ‘ಜಾತಿ ಮತ್ತು ಹಸಿವು ಇಲ್ಲದೇ ಹೋಗಿದ್ದರೆ ನಾನು ಕವಿ ಆಗುತ್ತಿರಲಿಲ್ಲ. ಕಾವ್ಯದ ಮಾತಿರಲಿ, ನಾನು ಓದುತ್ತಲೂ ಇರಲಿಲ್ಲ’ ಎಂದು ಆನಂದರಿಗೆ ಅನ್ನಿಸಿದೆ.

ಅಕ್ಷರ ತಿದ್ದುತ್ತಿದ್ದ ಮೊಮ್ಮಗನಲ್ಲಿ ಕಾವ್ಯದ ಬೀಜವನ್ನು ಊರಿದ್ದು– ಅಜ್ಜಿ. ಇರುಳುಗಳಲ್ಲಿ ಬೆಳದಿಂಗಳಿಗೆ ಸ್ಪರ್ಧೆಯೊಡ್ಡುವಂತೆ ಪದನಗಳನ್ನು ಹಾಡುತ್ತಿದ್ದ ಅಜ್ಜಮ್ಮನೇ ಒಂದು ಕಾವ್ಯ ಎಂದು ಮೊಮ್ಮಗನಿಗೆ ಅನ್ನಿಸುತ್ತಿತ್ತು. ಆಕೆ ಹೇಳುತ್ತಿದ್ದ ಕಥೆಗಳದೋ ಅಗಣಿತ ಚುಕ್ಕಿಗಳ ಲೆಕ್ಕ. ಇಂಥ ಅಜ್ಜಮ್ಮನ ಜೊತೆಗೆ ಲಕ್ಕೂರಿನ ತೆಲುಗು ಪರಿಸರದಲ್ಲಿ ಸಹಜವಾಗಿ ಕಿವಿಗೆ ಬೀಳುತ್ತಿದ್ದ ಕೈವಾರ ನಾರಾಣಪ್ಪ ಮತ್ತು ಪೋತುಲೂರಿ ವೀರಬ್ರಹ್ಮಯ್ಯ ಅವರ ತತ್ವಪದಗಳ ನಾದಲೀಲೆ ಗುಂಗುಹಿಡಿಸಿದವು. ಈ ಪದಗಳಲ್ಲಿನ ಜಾತಿಸೂಚಕ ಮಾತುಗಳು ಎದೆಗೆ ಬಿದ್ದವು.

ಊರಲ್ಲಿನ ಜಯ ಕರ್ನಾಟಕ ಟಾಕೀಸಿನ ಸಿನಿಮಾಗಳು ಕೂಡ ಹುಡುಗನೊಳಗಿನ ಕನಸುಗಳನ್ನು ಹಚ್ಚಗಿರಿಸಿದ್ದವು. ಊರಿನ ಒಂದಷ್ಟು ಜನರು ಗುಂಪು ಕಟ್ಟಿಕೊಂಡು ಪ್ರತಿ ವರ್ಷ ಪಂಡರಾಪುರಕ್ಕೆ ಹೋಗುತ್ತಿದ್ದರು. ಯಾತ್ರೆಗೆ ಹೋಗುವ ಮುನ್ನ ಮನೆಯಿಂದ ಮನೆಗೆ ಹಾಡುತ್ತಾ ಹೋಗಿ ಯಾತ್ರೆ ಖರ್ಚಿಗೆ ದುಡ್ಡು ಹೊಂಚಿಕೊಳ್ಳುವುದು ರೂಡಿ. ಗುಂಪಿನಲ್ಲಿ ಗೋವಿಂದ ಎನ್ನುವಂತೆ ಇರುತ್ತಿದ್ದ ಬಾಲಕ ಆನಂದನಿಗೂ ಒಂದಿಷ್ಟು ಚಿಲ್ಲರೆ ಕಾಸು ಸಿಗುತ್ತಿತ್ತು. ಹೀಗೆ ಕಾವ್ಯದ ಆಸಕ್ತಿ ಹಲವು ರೂಪಗಳಲ್ಲಿ ಅವರೊಳಗೆ ಮೊಳೆಯತೊಡಗಿತು. ಅವೆಲ್ಲವೂ ಕೊನೆಗೆ ಅಕ್ಷರ ರೂಪದಲ್ಲಿ ತನ್ನ ಜಾತಿ ಮತ್ತು ಹಸಿವನ್ನು ತಳಮಳಗಳಿಗೆ ಉತ್ತರದಂತೆ ಹುಡುಗನಿಗೆ ಕಾಣಿಸಿದವು.

ಆನಂದ್ ಮೊದಲ ಕವಿತೆ ಪ್ರಕಟವಾದುದು ಕಾಲೇಜು ದಿನಗಳಲ್ಲಿ. ಪತ್ರಿಕೆಗಳಿಗೆ ಬರೆಯುತ್ತಿದ್ದ ಕಾಲೇಜಿನ ಕೆಲವು ಮೇಷ್ಟ್ರುಗಳಿಗೆ ಸಂಭಾವನೆ ಬರುತ್ತಿದ್ದುದು ತಿಳಿದು ಇವರೂ ಪತ್ರಿಕೆಗಳಿಗೆ ಬರೆಯತೊಡಗಿದರು. ’ಸುಧಾ’ದಲ್ಲಿ ಮೊದಲ ಕವಿತೆ ಪ್ರಕಟವಾದಾಗ ಕೈಸೇರಿದ ಸಂಭಾವನೆ ದೊಡ್ಡ ಮೊತ್ತದಂತೆ ಅಚ್ಚರಿ–ದಿಗಿಲು ಹುಟ್ಟಿಸಿದ್ದು ಅವರಿಗಿನ್ನೂ ನೆನಪಿದೆ. ಊರ ಹೆಸರನ್ನು ಜೊತೆಗಂಟಿಸಿಕೊಂಡು ಓಡಾಡುತ್ತಿದ್ದ ಹುಡುಗನ ಕವಿತೆಗಳು ಪತ್ರಿಕೆಗಳಲ್ಲಿ ಪ್ರಕಟವಾಗತೊಡಗಿದಂತೆ, ಆತನನ್ನು ಊರಿನವರು ಬೆರಗಿನ ಜೊತೆಗೆ ಕೊಂಚ ಗೌರವದಿಂದಲೂ ನೋಡತೊಡಗಿದರು.

ಮಾಲೂರು ಕಾಲೇಜಿನಲ್ಲಿ ಆನಂದ್ ಡಿಗ್ರಿ ಪೂರೈಸಿದಾಗ ಮನೆಯಲ್ಲಿ ಹಬ್ಬದ ವಾತಾವರಣ. ಮನೆತನದಲ್ಲಿ ಪದವಿ ಪಡೆದ ಮೊದಲ ಹುಡುಗ ಇವರು. ಪದವಿಯ ನಂತರ ಊರಿನ ಅಂಗಡಿಯೊಂದರಲ್ಲಿ ಕೆಲವು ಕಾಲ ಕೆಲಸ ಮಾಡಿಕೊಂಡಿದ್ದ ಆನಂದ್, ನಂತರ ಕೋಲಾರದ ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಎಂ.ಎ ತರಗತಿಗೆ ಸೇರಿಕೊಂಡಿದ್ದರು. ಅಲ್ಲಿಂದ ಚಿನ್ನದ ಪದಕಗಳೊಂದಿಗೆ ಹೊರಬೀಳುವ ವೇಳೆಗಾಗಲೇ ಅವರ ಬದುಕು ಮತ್ತು ಕಾವ್ಯದ ದಾರಿ ನಿಚ್ಚಳವಾಗಿತ್ತು.

ತೆಲುಗು ಆನಂದ್ ಅವರ ಮಾತೃಭಾಷೆ. ಕನ್ನಡದಷ್ಟೇ ತೆಲುಗು ಲೇಖಕರ ಪರಿಚಯವೂ ಅವರಿಗಿದೆ. ತೆಲುಗಿನ ನಾಲ್ಕು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಊರಿನಲ್ಲಿ, ಮನೆಯಲ್ಲಿ ತೆಲುಗು ಮಾತಿದ್ದರೂ ಅಭಿವ್ಯಕ್ತಿಯ ವಿಷಯಕ್ಕೆ ಬಂದಾಗ ಮಾತ್ರ ಅವರನ್ನು ಕನ್ನಡವೇ ಕೈ ಹಿಡಿದು ನಡೆಸುವುದು.

ಕಾವ್ಯದ ದಾರಿಯಲ್ಲಿ ‘ಊರಿಂದ ಊರಿಗೆ’ ಸಾಗುತ್ತಿರುವ ಆನಂದ್ ಏನು ಮಾಡುತ್ತಿದ್ದಾರೆ, ಏನು ಬರೆಯುತ್ತಿದ್ದಾರೆ ಎನ್ನುವುದು ಅಪ್ಪಅಮ್ಮನಿಗೆ ಅಷ್ಟು ಸ್ಪಷ್ಟವಾಗಿಯೇನೂ ತಿಳಿಯದು. ಕಳೆದ ವಾರ ಮೊಮ್ಮಗನ ಫೋಟೊ ಪತ್ರಿಕೆಯಲ್ಲಿ ಬಂದಾಗ ಅಜ್ಜಮ್ಮ ಕೇಳಿದ್ದು– ‘ನಿನ್ನ ಫೋಟೊ ಯಾಕೆ ಪೇಪರ್ನಲ್ಲಿ ಬಂದಿದೆ’. ಮೊಮ್ಮಗ ಪ್ರಶಸ್ತಿಯ ವಿಷಯ ತಿಳಿಸಿದಾಗ ಎದುರಾದ ಉಪ ಪ್ರಶ್ನೆ– ‘ಇದು ಏನಕ್ಕೆ ಕೊಡ್ತಾರೆ?’. ಮುಗ್ಧತೆ ಕೂಡ ಕಾವ್ಯದ ಒಂದು ಶಕ್ತಿಯಲ್ಲವೇ?

ಕೆಳ ವರ್ಗದ ತರುಣನೊಬ್ಬ ತನ್ನ ಕೀಳರಿಮೆಗಳನ್ನು ಕಳೆದುಕೊಂಡು, ಬದುಕಿನ ದಾರಿಯನ್ನೂ ಕಂಡುಕೊಳ್ಳಲಿಕ್ಕೆ ಕಾವ್ಯ ಶಕ್ತಿಮದ್ದಿನ ರೂಪದಲ್ಲಿ ಪರಿಣಮಿಸಿದೆ. ಏಳು ವರ್ಷಗಳ ಹಿಂದೆ ಆನಂದ್ ಅವರ ಸಹೋದರಿ ಆಕಸ್ಮಿಕ ಸಾವಿಗೊಳಗಾದರು. ಆ ಸಮಯದಲ್ಲಿ ಖಿನ್ನತೆಗೊಳಗಾದ ಅವರನ್ನು ಮರಳಿ ಜೀವನದ ಹಳಿಗೆ ಕರೆತಂದದ್ದು ಕಾವ್ಯವೇ. ಇದೀಗ, ಪ್ರಶಸ್ತಿ ಬಂದಿರುವ ಸಂದರ್ಭದಲ್ಲಿ ಇತ್ತೀಚೆಗಷ್ಟೇ ಅಪ್ಪನ ನೆನಪು ಕಾಡುತ್ತಿದೆ. ಜಾತಿಯ ಕಾರಣದಿಂದಾಗಿ ತನ್ನಿಂದ ದೂರವಾದ ‘ಬಟವಾಡೆಯಾಗದ ರಸೀತಿ’ಯ ಕನ್ನಿಕೆ ಅವರ ಈ ಹೊತ್ತಿನ ನೆನಪುಗಳ ಭಾಗವಾಗಿದ್ದಾಳೆ. ಈ ಸಂಕಟ ಸಂಭ್ರಮಗಳ ನಡುವೆ ಅವರೊಳಗೆ– ‘ಪ್ರಶಸ್ತಿ ಬಂದಿರುವ ಈ ಸಂದರ್ಭದಲ್ಲಾದರೂ ನನ್ನನ್ನು ಮಾನಸಿಕವಾಗಿ ದೂರ ಇಟ್ಟವರಿಗೆ ನಾನು ಹತ್ತಿರವಾಗಬಹುದೇ?’ ಎನ್ನುವ ಆಸೆ.

ಚಿತ್ರಗಳು: ವಿಶ್ವನಾಥ ಸುವರ್ಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.