‘ಮಹತ್ತರವಾದ ಸಂಶೋಧನೆಗಳು ನಡೆಯುವುದು ಪ್ರಯೋಗಾಲಯಗಳಲ್ಲಲ್ಲ, ಬಡ ವಿಜ್ಞಾನಿಯೊಬ್ಬನ ಮನೆಯಲ್ಲಿ’. ಈ ಮಾತನ್ನು ನಿರೂಪಿಸಿದ್ದಾರೆ ಇಲ್ಲಿನ ವಿದ್ಯಾರ್ಥಿಗಳು. ಮಧ್ಯಮ ವರ್ಗದ ಕುಟುಂಬದಿಂದ ಬಂದು ಮೆಕ್ಯಾನಿಕಲ್ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಇವರು, ಸಮಾಜಕ್ಕೆ ಉಪಯುಕ್ತವಾಗುವ ತಂತ್ರಜ್ಞಾನಗಳ ಹುಡುಕಾಟದಲ್ಲಿದ್ದಾರೆ.

ಮೈಸೂರಿನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳಿವರು. ಒಂದು ಸಾಧಾರಣ ಸರ್ಕ್ಯೂಟ್ ಬಳಸಿಕೊಂಡು ವಾಹನವೊಂದನ್ನು ನಗರಸ್ನೇಹಿ ಮಾಡುವ ತಂತ್ರಜ್ಞಾನ, ಡಿಕ್ಕಿ ಹೊಡೆಯದ ರೋಬೊ, ಗುಂಡಿ ಮುಚ್ಚಿ, ಡುಬ್ಬ ಕತ್ತರಿಸುವ ಯಂತ್ರ ಇವೆಲ್ಲವೂ ಅವರ ಹುಡುಕಾಟದ ಪ್ರತಿಫಲಗಳು.

ಬುದ್ಧಿವಂತ ಸಂಚಾರ ತಂತ್ರಜ್ಞಾನ
ವಾಹನ ಚಾಲನೆ ಈಗ ಅನಿವಾರ್ಯ. ಸ್ವಂತ ವಾಹನ ಇರದೇ ಇದ್ದರೂ ಸಾರ್ವಜನಿಕ ಸಾರಿಗೆಯಲ್ಲಾದರೂ ಸಂಚರಿಸುತ್ತೇವೆ ಅಲ್ಲವೇ. ವಾಹನ ಚಾಲನೆ ಎಂದ ಮೇಲೆ ಚಾಲಕ ಎಷ್ಟೇ ನಿಷ್ಣಾತನಾದರೂ ಮಾನವ ಸಹಜವಾಗಿ ಕೆಲವೊಮ್ಮೆ ನಿರ್ಲಕ್ಷ್ಯ ಅಥವಾ ಮಾನವಮಿತಿಯಿಂದಾಗುವ ತಪ್ಪುಗಳಿಂದ ಅಪಘಾತಗಳು ಆಗಿಯೇ ಬಿಡುತ್ತವೆ. ವಾಹನಗಳ ನಡುವೆ ಅಪಘಾತಗಳು ಆದರೆ, ಅಲ್ಲಿ ಸಾವು- ನೋವು ಸಂಭವಿಸುವುದು ಆ ವಾಹನಗಳ ಮಧ್ಯೆ ಮಾತ್ರ.

ಆದರೆ, ನೀವು ಕೆಲವು ಸುದ್ದಿಗಳಲ್ಲಿ ಓದಿರಬಹುದು; ನಿಯಂತ್ರಣ ಕಳೆದುಕೊಂಡ ಬಸ್ ಸಾರ್ವಜನಿಕರ ಮೇಲೆ ಹರಿದಿರುತ್ತದೆ. ಇಲ್ಲವೇ ಕಾರೊಂದು ಫುಟ್‌ಪಾತ್ ಹತ್ತಿ ಜನರು ಸತ್ತಿರುತ್ತಾರೆ. ಇದನ್ನು ನಿಯಂತ್ರಿಸುವುದು ಹೇಗೆ ಸಾಧ್ಯ? ಮಾನವಮಿತಿಯನ್ನು ಮೀರಿ, ಅದಕ್ಕೊಂದು ಸ್ವಯಂ ಚಾಲಿತ ಬುದ್ಧಿಮತ್ತೆಯನ್ನು ಕೊಟ್ಟಾಗ ಮಾತ್ರ.

ಈ ರೀತಿಯ ಪ್ರಯೋಗವನ್ನು ವಿದ್ಯಾರ್ಥಿಗಳು ಮಾಡಿದ್ದಾರೆ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಾದ ಬಿ. ಪ್ರಶಾಂತ್, ಎಸ್. ಕಾರ್ತಿಕ್ ಗಾಯಕ್‌ವಾಡ್, ಎಂ. ವರಲಕ್ಷ್ಮೀ, ಬಿ. ವರ್ಷಾ ಸ್ವಯಂ ಚಾಲಿತ ಸಂಚಾರ ನಿಯಮ ಉಲ್ಲಂಘನೆ ನಿಯಂತ್ರಣ ಸಾಧನವನ್ನು ಕಂಡುಹಿಡಿದಿದ್ದಾರೆ. ಇವರಿಗೆ ವಿಭಾಗದ ಮುಖ್ಯಸ್ಥರಾದ ಡಾ.ಕೆ.ಬಿ. ಕೃಷ್ಣಪ್ಪ ಮಾರ್ಗದರ್ಶನ ನೀಡಿದ್ದಾರೆ.

ಈ ತಂತ್ರಜ್ಞಾನವು ಕೊಂಚ ಕ್ಲಿಷ್ಟ ಎನ್ನಬಹುದಾದ ತಂತ್ರಜ್ಞಾನವನ್ನೇ ಹೊಂದಿದೆ. ವಾಹನವೊಂದರ ಇಗ್ನಿಷನ್, ಥ್ರಾಟಲ್ ಹಾಗೂ ಪಿಸ್ಟನ್‌ಗಳಿಗೆ ಇದು ಸಂಪರ್ಕ ಸಾಧಿಸುತ್ತದೆ. ಅಂದರೆ ಎಂಜಿನ್ ಅನ್ನು ಜೀವಂತಗೊಳಿಸುವ ವಾಹನದ ಎಲೆಕ್ಟ್ರಾನಿಕ್ ವ್ಯವಸ್ಥೆ, ವಾಹನದ ವೇಗ ನಿಯಂತ್ರಕ ಹಾಗೂ ವಾಹನಕ್ಕೆ ಚಾಲನೆ ನೀಡುವ ಯಾಂತ್ರಿಕ ಭಾಗ. ಇವಕ್ಕೆ ಈ ತಂತ್ರಜ್ಞಾನ ಸಂಪರ್ಕ ಸಾಧಿಸಿ, ವಾಹನವನ್ನು ಸದಾಕಾಲ ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿರುತ್ತದೆ.

ಆದರೆ, ಇಲ್ಲೊಂದು ದೊಡ್ಡ ಅಗತ್ಯವೊಂದಿದೆ. ಅದೆಂದರೆ, ವಾಹನದಲ್ಲಿ ಅಳವಡಿಸಿರುವ ತಂತ್ರಜ್ಞಾನವು ರೇಡಿಯೊ ಅಲೆಗಳನ್ನು ಆಧರಿಸಿ ಕೆಲಸ ಮಾಡುವಂಥದ್ದು. ಅಂದರೆ, ವಾಹನದಲ್ಲಿ ಒಂದು ಸಣ್ಣ ರೇಡಿಯೊ ಟ್ರಾನ್ಸ್‌ಮಿಟರ್ ಇರುತ್ತದೆ. ರಸ್ತೆಗಳಲ್ಲಿ ವಿವಿಧ ಆಯಕಟ್ಟುಗಳಲ್ಲಿ ಮತ್ತೊಂದು ಟ್ರಾನ್ಸ್‌ಮಿಟರ್ ಅಳವಡಿಸಿರಲಾಗುತ್ತದೆ. ಅವರೆಡಕ್ಕೂ ಸಂಪರ್ಕ ಸಿಕ್ಕಾಗ, ವಾಹನದ ಒಳಗೆ ಇರುವ ಸಾಧನ ಜಾಗೃತವಾಗುತ್ತದೆ.

ಕಾರ್ಯವಿಧಾನ ಹೀಗೆ
ಈ ತಂತ್ರಜ್ಞಾನವನ್ನು ಹಲವು ಹಂತಗಳಲ್ಲಿ ಬಳಸಿಕೊಳ್ಳಬಹುದು. ಅಂದರೆ, ಉದಾಹರಣೆಗೆ ನೀವು ಶಾಲೆಯೊಂದರ ಬಳಿ ಹೋಗುತ್ತಿರುತ್ತೀರ ಅಂದುಕೊಳ್ಳಿ. ಇಡೀ ಶಾಲಾ ವಲಯಕ್ಕೆ ಅನ್ವಯವಾಗುವಂತೆ ಒಂದು ಟ್ರಾನ್ಸ್‌ಮಿಟರ್ ಅನ್ನು ಶಾಲೆಯ ಬಳಿ ಅಳವಡಿಸಿರಲಾಗುತ್ತದೆ. ವಾಹನವು ಶಾಲೆಯ ಬಳಿ ಹೋಗುತ್ತಿದ್ದಂತೆ ವೇಗ ಥಟ್ಟನೆ ಗರಿಷ್ಠ 30 ಕಿಲೋಮೀಟರ್‌ಗೆ ಇಳಿದುಬಿಡುತ್ತದೆ.

ನೀವು ಏನು ಮಾಡಿದರೂ ವೇಗ ಹೆಚ್ಚಿಸಲು ಆಗುವುದಿಲ್ಲ. ನೀವು ಮುಂಚೆ 100 ಕಿಲೋಮೀಟರ್ ವೇಗದಲ್ಲಿ ಹೋಗುತ್ತಿದ್ದರೂ ಈ ವಲಯಕ್ಕೆ ಬಂದ ತಕ್ಷಣವೇ ವೇಗ ಇಳಿದುಹೋಗುತ್ತದೆ. ವಾಹನದೊಳಗಿನ ಟ್ರಾನ್ಸ್‌ಮಿಟರ್, ಹೊರಗಿನ ಟ್ರಾನ್ಸ್‌ಮಿಟರ್‌ನ ಸಂದೇಶವನ್ನು ಸ್ವೀಕರಿಸಿ, ವಾಹನದ ವೇಗ ಇಳಿದುಹೋಗುವಂತೆ ಮಾಡುತ್ತದೆ.

ಅಂತೆಯೇ, ನೀವು ಆಸ್ಪತ್ರೆ ವಲಯದಲ್ಲಿ ಹೋಗುತ್ತಿರುತ್ತೀರ ಎಂದುಕೊಳ್ಳಿ. ಅಲ್ಲಿ ಹಾರ್ನ್ ಮಾಡಬಾರದು ಎಂಬ ನಿಯಮವಿರುತ್ತದೆ. ಈ ತಂತ್ರಜ್ಞಾನ ಅಳವಡಿಸಿರುವ ವಾಹನದಲ್ಲಿ ಏನು ಮಾಡಿದರೂ ಹಾರ್ನ್ ಮಾಡಲಾಗದು. ಹಾರ್ನ್‌ಗೂ ಬ್ಯಾಟರಿಗೂ ಇರುವ ಸಂಪರ್ಕವೇ ಕಡಿದುಹೋಗಿರುತ್ತದೆ. ಆಸ್ಪತ್ರೆ ವಲಯ ಮುಗಿದ ನಂತರ ಮತ್ತೆ ಹಾರ್ನ್ ಮರುಚಾಲನೆಗೊಳ್ಳುತ್ತದೆ. ಟ್ರಾನ್ಸ್‌ಮಿಟರ್‌ಗಳು ಈ ರೀತಿ ಕೈಚಳಕ ತೋರಿಸಿಬಿಡುತ್ತವೆ.

ಇವೆರಡೇ ಉದಾಹರಣೆಯಲ್ಲ. ಏಕಮುಖ ಸಂಚಾರ ಇರುವ ರಸ್ತೆಯಲ್ಲಿ ಹೋಗಲು ಪ್ರಯತ್ನಿಸಿದರೆ ವಾಹನವೇ ನಿಂತುಹೋಗುವಂತೆ, ಅತಿ ವೇಗದಲ್ಲಿ ಚಲಿಸಿದರೆ ಎಂಜಿನ್ ಬಂದ್ ಆಗುವಂತೆಯೂ ಈ ತಂತ್ರಜ್ಞಾನದಲ್ಲಿ ಪ್ರೋಗ್ರಾಮಿಂಗ್ ಮಾಡಲಾಗಿದೆ. ಅಲ್ಲದೇ ಇದು, ಓಪನ್ ಎಂಡ್ ಪ್ರೋಗ್ರಾಂ. ಅಂದರೆ, ಇದನ್ನು ಯಾರು ಬೇಕಾದರೂ ಬಳಸಬಹುದು, ಹೇಗೆ ಬೇಕಾದರೂ ಬದಲಿಸಬಹುದು. ಈ ತಂತ್ರಜ್ಞಾನದ ಸಂಶೋಧನೆಗೆ ಇವರಿಗೆ ತಗಲಿದ ಖರ್ಚು 30 ಸಾವಿರ ರೂಪಾಯಿಗಳು. ಆದರೆ, ದೊಡ್ಡ ಪ್ರಮಾಣದಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಿದರೆ ಗರಿಷ್ಠ 5 ಸಾವಿರ ರೂಪಾಯಿ ಆಗಬಹುದು ಎನ್ನುತ್ತಾರೆ ಈ ವಿದ್ಯಾರ್ಥಿಗಳು.

ಡಿಕ್ಕಿ ಹೊಡೆಯದ ರೋಬೊ
ನಾಸಾ ಸಂಸ್ಥೆಯು ಚಂದ್ರ ಹಾಗೂ ಮಂಗಳ ಗ್ರಹಕ್ಕೆ ಬಿಟ್ಟಿರುವ ರಾಕೆಟ್‌ಗಳು ಅಲ್ಲಿನ ನೆಲದ ಮೇಲೆ ಇಳಿದು, ಸಣ್ಣ ರೋಬೊ ಕಾರ್‌ಗಳನ್ನು ಬಿಟ್ಟಿರುವುದು ನಮಗೆಲ್ಲಾ ಗೊತ್ತೇ ಇದೆ. ಅವು ಅಲ್ಲಿನ ನೆಲದ ಮೇಲೆ ಓಡಾಡುತ್ತಾ, ಮಾಹಿತಿ ಸಂಗ್ರಹಿಸಿ ಭೂಮಿಗೆ ರವಾನಿಸುತ್ತಲೇ ಇರುತ್ತವೆ.

ಭೂಮಿಯಿಂದ ಲಕ್ಷಾಂತರ ಕಿಲೋಮೀಟರ್ ದೂರದ ಓರೆಕೋರೆ, ಅಂಕುಡೊಂಕು ನೆಲದಲ್ಲಿ ಅಷ್ಟು ಕರಾರುವಕ್ಕಾಗಿ ಅವು ಹೇಗೆ ಓಡಾಡುತ್ತವೆ? ಅವಕ್ಕೆ ಹೀಗೇ ಓಡಾಡಿ ಎಂದು ಭೂಮಿಯಿಂದ ನಿಯಂತ್ರಣವೂ ಇರುವುದಿಲ್ಲ. ಆದರೂ, ಅವು ಸಮರ್ಥವಾಗಿ ಚಲಿಸುತ್ತಲೇ ಇರುತ್ತವೆ.

ಇದು ಹೇಗೆ ಸಾಧ್ಯ ಎಂದರೆ, ಅವುಗಳಿಗೆ ಕೃತಕ ಬುದ್ಧಿಮತ್ತೆ ಇರುವುದು (Artificial Intelligence). ಆ ರೋಬೊಗಳಿಗೆ ಯಾವ ರೀತಿಯ ಮಾದರಿಯನ್ನು ಸಂಗ್ರಹಿಸಬೇಕು, ಹೇಗೆ ಸಂಗ್ರಹಿಸಬೇಕು, ಯಾವ ರೀತಿಯ ಛಾಯಾಚಿತ್ರಗಳನ್ನು ಸಂಗ್ರಹಿಸಬೇಕು, ಹೇಗೆ ಛಾಯಾಚಿತ್ರ ಸೆರೆಹಿಡಿಯಬೇಕು ಎಂಬೆಲ್ಲಾ ಮಾಹಿತಿಗಳನ್ನು ಮುಂಚೆಯೇ ಅವುಗಳ ಕೃತಕ ಮಿದುಳಿನಲ್ಲಿ ಸೇರಿಸಲಾಗಿರುತ್ತದೆ. ಅಂತೆಯೇ, ಅದರ ಚಲನ-ವಲನಗಳ ಬಗ್ಗೆಯೂ ಮಾಹಿತಿ ನೀಡಲಾಗಿರುತ್ತದೆ.

ಅಂದರೆ, ಹೇಗೆ ಓಡಾಡಬೇಕು, ಹಳ್ಳ- ಕೊಳ್ಳ ಬಂದರೆ ಹೇಗೆ ಸಂಚರಿಸಬೇಕು, ಎದುರೊಂದು ಎತ್ತರದ ಗೋಡೆಯ ರೀತಿಯ ರಚನೆ ಬಂದರೆ ಹೇಗೆ ಅದಕ್ಕೆ ಡಿಕ್ಕಿ ಹೊಡೆಯದಂತೆ ತಪ್ಪಿಸಿಕೊಳ್ಳಬೇಕು ಎಂಬುದೆಲ್ಲ ಅದರ ಕೃತಕ ಬುದ್ಧಿಮತ್ತೆಯಲ್ಲಿ ಅಡಕವಾಗಿರುತ್ತದೆ. ಬರೀ ಬುದ್ಧಿಮತ್ತೆಯನ್ನು ನೀಡಿದರೆ ಸಾಕಾಗುವುದಿಲ್ಲ. ಬದಲಿಗೆ, ಅವುಗಳಿಗೆ ಕೆಲವು ಇಂದ್ರಿಯಗಳನ್ನು ನೀಡಬೇಕು.

ನಾವು ಓಡಾಡಲು ಕೈಕಾಲುಗಳು ಇದ್ದರೆ ಸಾಲದು, ನೋಡಲು ಕಣ್ಣು, ಕೇಳಲು ಕಿವಿ, ಸ್ಪರ್ಶಕ್ಕೆ ಚರ್ಮ ಇರಲೇಬೇಕು. ಅಂತೆಯೇ ಈ ರೋಬೊಗಳಿಗೂ ಅಷ್ಟೇ. ಅವಕ್ಕೂ ಇಂದ್ರಿಯಗಳಿರಬೇಕು. ಆ ಕೆಲಸವನ್ನು ಮಾಡುವುದು ಕ್ಯಾಮೆರಾ, ಇನ್ಫ್ರಾರೆಡ್ (ಅವಗೆಂಪು) ಸಂವೇದಕಗಳು. ಇವು ಸದಾಕಾಲ ಇಂದ್ರಿಯಗಳಂತೆ ಕೆಲಸ ಮಾಡುತ್ತಾ, ರೋಬೊಗೆ ಸಹಾಯಹಸ್ತ ನೀಡುತ್ತಲೇ ಇರುತ್ತವೆ. ಅದಕ್ಕೇ, ಈ ರೋಬೊಗಳು ಯಾರ ಸಹಾಯ, ಸೂಚನೆಗಳೂ ಇಲ್ಲದೇ, ತಮ್ಮಷ್ಟಕ್ಕೆ ತಾವೇ ದೂರದ ಗ್ರಹಗಳಲ್ಲಿ ಸಮರ್ಥವಾಗಿ ಸಂಚರಿಸುವುದು.

ಇಂತಹ ಕ್ಲಿಷ್ಟ ತಂತ್ರಜ್ಞಾನವುಳ್ಳ ರೋಬೊಗಳನ್ನು ನಾಸಾ ಸಂಸ್ಥೆಯೇನೋ ತಯಾರಿಸುತ್ತದೆ ನಿಜ. ಆದರೆ, ಇಂಥದ್ದೊಂದು ರೋಬೊ ಮೈಸೂರಿನಲ್ಲಿ ಕಾಣಿಸಿಕೊಳ್ಳುತ್ತದೆ ಎಂದರೆ ಅಚ್ಚರಿಯಾಗುವುದಿಲ್ಲವೇ? ಹೌದು, ಮೈಸೂರಿನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಈ ಅಚ್ಚರಿಯ ರೋಬೊ ಅನ್ನು ತಯಾರಿಸಿದ್ದಾರೆ.

ವಿಭಾಗದ ವಿದ್ಯಾರ್ಥಿಗಳಾದ ಶ್ರೇಯಸ್ ಕೌಶಿಕ್, ಎನ್. ನಂದಿನಿ, ಕೆ.ಎಸ್. ಉಷಾ ಈ ರೋಬೊ ಅನ್ನು ತಯಾರಿಸಿದ್ದಾರೆ. ಈ ರೋಬೊ ತಂತಾನೆ ಎಲ್ಲಿ ಬೇಕಾದರೂ ಚಲಿಸುತ್ತದೆ. ಏನಕ್ಕೂ ಡಿಕ್ಕಿ ಹೊಡೆಯುವುದಿಲ್ಲ. ತನ್ನಲ್ಲಿರುವ ಬ್ಯಾಟರಿ ಶಕ್ತಿಯನ್ನು ಬಳಸಿಕೊಂಡು ಮುಂದುವರಿಯುತ್ತಲೇ ಇರುತ್ತದೆ. ಇದಕ್ಕೆ ಇವರು ಅಡೆತಡೆ ನಿವಾರಿಸಿಕೊಳ್ಳುವ ರೋಬೊ ಎಂದು ಹೆಸರಿಟ್ಟಿದ್ದಾರೆ.

ಈ ರೋಬೊನಲ್ಲಿ ಮುಂಭಾಗ ಹಾಗೂ ಹಿಂಭಾಗದಲ್ಲಿ ಮೂರು ಇನ್ಫ್ರಾರೆಡ್ ಸಂವೇದಕಗಳನ್ನು ಇರಿಸಿದ್ದಾರೆ. ಇವು ಸದಾಕಾಲ ಇನ್ಫ್ರಾರೆಡ್ ಕಿರಣಗಳನ್ನು ಸೂಸುತ್ತಲೇ ಇರುತ್ತವೆ. ಈ ಕಿರಣಗಳ ಹಾದಿಯಲ್ಲಿ ಏನೇ ಅಡ್ಡ ಬಂದರೂ ತನ್ನ ಕೃತಕ ಮಿದುಳಿಗೆ ಸಂದೇಶ ಕಳುಹಿಸಿ, ಡಿಕ್ಕಿ ಹೊಡೆಯದಂತೆ ಸೂಚನೆ ಕೊಡುತ್ತವೆ.

ಇದಕ್ಕೆ ಪೂರಕವಾಗಿ ರೋಬೊಗೆ ನಾಲ್ಕು ಚಕ್ರಗಳನ್ನು ಇರಿಸಿದ್ದಾರೆ. ಇವು 2 ಮೋಟಾರ್‌ಗಳಿಗೆ ಜೋಡಿತಗೊಂಡಿವೆ. ಮುಂದಕ್ಕೆ ಅಥವಾ ಹಿಂದಕ್ಕೆ ಚಲಿಸುವ ಸಾಮರ್ಥ್ಯ ಹೊಂದಿವೆ. ರೋಬೊನ ನಾಲ್ಕೂ ಮೂಲೆಗಳಲ್ಲೂ ಒಂದೊಂದು ಸಂವೇದಕ ಇರುವುದರಿಂದ ಎಡ ಬಲಕ್ಕೂ ಚಲಿಸಬಲ್ಲದ್ದಾಗಿದೆ.

ಈ ರೋಬೊನ ಶಕ್ತಿ ಕೇಂದ್ರವಾಗಿ ಇವರು ಒಂದು ‘ಲೀಥಿಯಂ ಅಯಾನ್’ ಬ್ಯಾಟರಿಯನ್ನು ಇರಿಸಿದ್ದಾರೆ. ಇದರ ಶಕ್ತಿ ಕಡಿಮೆಯಾದರೆ ಮತ್ತೆ ಚಾರ್ಜ್ ಮಾಡಿಕೊಳ್ಳಬಹುದು. ಇದೇ ರೀತಿಯ ತಂತ್ರಜ್ಞಾನವನ್ನು ಬಳಸಿಕೊಂಡು ಬಾಹ್ಯಾಕಾಶ ಸಂಶೋಧನೆ ಇತ್ಯಾದಿ ಕ್ಷೇತ್ರಗಳಲ್ಲಿ ರೋಬೊಗಳನ್ನು ತಯಾರಿಸಲಾಗುತ್ತಿದೆ ಎನ್ನುತ್ತಾರೆ ಈ ವಿದ್ಯಾರ್ಥಿಗಳು. ಈ ರೋಬೊ ತಯಾರಿಗೆ ಇವರು ಖರ್ಚು ಮಾಡಿರುವುದು ಕೇವಲ 5 ಸಾವಿರ ರೂಪಾಯಿ. ಇದನ್ನು ಮತ್ತಷ್ಟು ಅಭಿವೃದ್ಧಿಪಡಿಸಿ, ಬಹೂಪಯೋಗಿ ಆಗುವಂತೆ ಮಾಡುತ್ತಾರಂತೆ.

ಗುಂಡಿ ಮುಚ್ಚಿ ಡುಬ್ಬ ತೆಗೆಯಿರಿ
ಈ ತಂತ್ರಜ್ಞಾನದಲ್ಲಿ ಹೊಸದಾಗಿ ರಸ್ತೆಯನ್ನೇನು ಮಾಡುವುದಿಲ್ಲ. ಬದಲಿಗೆ ಇರುವ ರಸ್ತೆಯೇ ಹಾಳಾಗಿರುವಾಗ ಅದನ್ನು ಸರಿಪಡಿಸುವುದು ಉದ್ದೇಶ. ನಗರ ಬೆಳೆದಂತೆ ರಸ್ತೆಗಳು ನಾನಾ ಕಾರಣಕ್ಕೆ ಹಾಳಾಗುತ್ತವೆ. ಹೊಸ ಮನೆಯೊಂದನ್ನು ಕಟ್ಟಿದ ಕೂಡಲೇ ಅದಕ್ಕೆ ನೀರಿನ ಸಂಪರ್ಕ, ವಿದ್ಯುತ್ ಸಂಪರ್ಕ ನೀಡಲು ಅನಿವಾರ್ಯವಾಗಿ ರಸ್ತೆಯನ್ನು ಅಗೆಯಬೇಕಾಗುತ್ತದೆ.

ದೂರವಾಣಿ ಇಲಾಖೆ, ಟಿ.ವಿ ಕೇಬಲ್, ವಿವಿಧ ಕಾಮಗಾರಿಗೆ ರಸ್ತೆಯನ್ನು ಅಗೆದು ಹಾಳುಮಾಡಬೇಕಾಗುತ್ತದೆ. ಇನ್ನು ಕೆಲವೊಮ್ಮೆ ಅನಗತ್ಯವಾದ ರಸ್ತೆ ಡುಬ್ಬಗಳನ್ನು ಹಾಕಿರುತ್ತಾರೆ. ಆಗ ಅದರಿಂದ ವಾಹನ ಚಾಲಕರಿಗೆ ಅನಗತ್ಯ ಕಿರಿಕಿರಿ. ಇದನ್ನು ಸರಿಪಡಿಸಿ, ರಸ್ತೆಯನ್ನು ಮತ್ತೆ ಜನಬಳಕೆ ಮಾಡುವುದು ಈ ತಂತ್ರಜ್ಞಾನದ ಉದ್ದೇಶ. ವಿದ್ಯಾರ್ಥಿಗಳಾದ ಎಂ.ಅರುಣ್‌ಕುಮಾರ್, ಎಸ್. ಶರತ್, ಸುಧನ್ವ ದೀಕ್ಷಿತ್, ಕೆ.ಎಸ್. ಉತ್ತಪ್ಪ ಒಂದು ಯಂತ್ರವನ್ನು ಕಂಡುಹಿಡಿದಿದ್ದಾರೆ.

ಇವರಿಗೆ ವಿಭಾಗದ ಪ್ರಾಧ್ಯಾಪಕ ಅರುಣ್ ಸಿ. ದೀಕ್ಷಿತ್ ಮಾರ್ಗದರ್ಶನ ಮಾಡಿದ್ದಾರೆ. ಈ ಯಂತ್ರವನ್ನು ಹಾಳಾದ ರಸ್ತೆಯ ಮೇಲೆ ಇಟ್ಟರಾಯಿತು. ಅದು ತಂತಾನೆ ಚಲಿಸುತ್ತ, ರಸ್ತೆಯಲ್ಲಿನ ಡುಬ್ಬಗಳನ್ನು ಅಗೆದು ಸಮ ಮಾಡುತ್ತಾ, ಹಳ್ಳಗಳನ್ನು ಮುಚ್ಚುತ್ತಾ ಹೋಗುತ್ತದೆ. ತನ್ನ ಸಂಚಾರ ಮುಗಿದ ಕೂಡಲೇ ರಸ್ತೆ ಸಂಚಾರಕ್ಕೆ ಯೋಗ್ಯವಾಗಿರುತ್ತದೆ.

ಯಂತ್ರದಲ್ಲಿ ಒಂದು ವಿದ್ಯುತ್ ಅಥವಾ ಡೀಸೆಲ್ ಮೋಟಾರ್ ಇರುತ್ತದೆ. ಈ ಮೋಟಾರ್ ತನ್ನಲ್ಲಿರುವ ಕತ್ತಿಯಂತಹ ಸಾಧನದಿಂದ ಡುಬ್ಬಗಳನ್ನು ಅಗೆಯುತ್ತದೆ. ನೆಲಮಟ್ಟಕ್ಕೆ ಡುಬ್ಬವನ್ನು ಇಳಿಸುತ್ತದೆ. ಇನ್ನು ಹಳ್ಳಗಳ ಕತೆ. ಯಂತ್ರದಲ್ಲಿರುವ ಬುಟ್ಟಿಯಂತಹ ಸಾಧನದಲ್ಲಿ ರಸ್ತೆ ನಿರ್ಮಾಣಕ್ಕೆ ಬೇಕಾದ ಟಾರ್, ಜಲ್ಲಿಕಲ್ಲು ಮಿಶ್ರಣವಿರುತ್ತದೆ. ಇದನ್ನು ಹಳ್ಳಗಳಿಗೆ ತುಂಬುವುದು ಒಂದು ಕೆಲಸವಾದರೆ, ಸುತ್ತಿಗೆಯಂತಹ ವಸ್ತುವೊಂದು ಕುಟ್ಟಿ ನೆಲಸಮ ಮಾಡುತ್ತದೆ.

ಟಾರ್ ಮತ್ತು ಜಲ್ಲಿ ಗಟ್ಟಿಯಾಗಿ ಕೂರುತ್ತದೆ. ಕೆಲವೊಮ್ಮೆ ತಾಂತ್ರಿಕ ಜ್ಞಾನದ ಕೊರತೆಯಿಂದಲೂ ಕೆಲವರು ರಸ್ತೆಯನ್ನು ಹಾಳುಮಾಡಿರುತ್ತಾರೆ. ಅಗೆಯಬೇಕಾದ ಕಡೆ ಅಗೆಯದೆ ರಸ್ತೆಯನ್ನು ಮತ್ತಷ್ಟು ಹಾಳು ಮಾಡಿರುತ್ತಾರೆ. ವೇಗವಾಗಿ ಬೆಳೆಯುವ ನಗರಗಳಲ್ಲಿ ಇದನ್ನು ನಿಯಂತ್ರಿಸುವುದೂ ಅಸಾಧ್ಯ. ಹೀಗಿರುವಾಗ ಈ ರೀತಿಯ ಸಾಧನಗಳು ಸಹಾಯಕ್ಕೆ ಬರುತ್ತವೆ ಎನ್ನುವುದು ಈ ವಿದ್ಯಾರ್ಥಿಗಳ ಸಮರ್ಥನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.