‘ನನ್ನ ಆತ್ಮ ಇರುವುದು ಕಾಸರಗೋಡಿನಲ್ಲಿ. ಕಾಸರಗೋಡಿನ ಆತ್ಮ ಕರ್ನಾಟಕದ ಪರಮಾತ್ಮನಲ್ಲಿ ಸೇರುವ ಹಾಗೆ ಮಾಡಿ. ಆಗ ನನಗೆ ಶಾಶ್ವತ ನೆಮ್ಮದಿ, ಸಂತಸ ಸಿಗ್ತದೆ. ಪ್ರಚಾರ, ಬಹುಮಾನ ಧಾರಾಳ ಸಿಕ್ಕಿದೆ. ಆದರೆ ಕಾಸರಗೋಡಿಗೆ ಮನ್ನಣೆ ಸಿಗಬೇಕು. ಅದೇ ನನ್ನ ಹಂಬಲ...’ ಅಚಲವಾದ ದುಡಿಮೆ. ಆಜಾನುಬಾಹು ದೇಹ, ಗತ್ತಿನ ಕುರ್ಚಿ, ವಾಗ್ಝರಿ, ಸದಾ ಒಂದಲ್ಲ ಒಂದು ಕಾಯಕದಲ್ಲಿ ತೊಡಗಿರುವುದು... ಇವು ಹಿರಿಯ ಕವಿ, ಸಾಹಿತಿ ಕಯ್ಯಾರ ಕಿಞ್ಞಣ್ಣ ರೈ ಅವರ ಮೆಲುನೋಟ.

ಆದರೆ ಇಂದು ಅವರು ಹೆಚ್ಚು ಓಡಾಡುವ ಸ್ಥಿತಿಯಲ್ಲಿ ಇಲ್ಲ. ನೆನಪಿನ ಶಕ್ತಿಯೂ ಅಷ್ಟೇ. ಆದರೂ ಮೊನ್ನೆ ಮೊನ್ನೆ ಅವರು ತಮ್ಮ ನೂರರ ಸಂಭ್ರಮವನ್ನು ಆಚರಿಸಿಕೊಂಡರು. ಮನೆ ತುಂಬ ಅತಿಥಿ, ಗಣ್ಯರ ದಂಡಿತ್ತು. ಮನೆ ಹೊರಗೆ ವಿಶಾಲವಾದ ಪೆಂಡಾಲ್ ಹಾಕಿ ಅವರ ನೂರರ ಸಂಭ್ರಮವನ್ನು ಆಚರಿಸಲಾಯಿತು. ಅದರ ಆಯಾಸದಿಂದ ಅವರಿನ್ನೂ ಚೇತರಿಸಿಕೊಂಡ ಹಾಗಿಲ್ಲ.

ಹಳ್ಳಿಯ ವಾತಾವರಣವೇ ಆರೋಗ್ಯಕ್ಕೆ ಅನುಕೂಲ ಆಯ್ತು. ಇಲ್ಲೇ ಬೆಳೆದದ್ದು ಎಂದು ಕಲ್ಲರ್ಯದ ನಂಟನ್ನು ಬಿಚ್ಚಿಟ್ಟರು. ಕಯ್ಯಾರದಿಂದ ಕಲ್ಲರ್ಯ (ಬದಿಯಡ್ಕ ಸಮೀಪದ ಹಳ್ಳಿ) ನಂಟನ್ನು ಕಯ್ಯಾರರು ಆತುಕೊಂಡಿದ್ದಾರೆ. ‘ಕಾಸರಗೋಡಿನ ವಿಷಯ ಇತ್ಯರ್ಥ ಆದರೆ ಮಹಾಕಾವ್ಯ ಬರೆಯುವ ಮಹತ್ವಾಕಾಂಕ್ಷೆ ನನ್ನದು.

ಕಾಸರಗೋಡು ಕರ್ನಾಟಕ ಸೇರಿದ ಮರುದಿನವೇ ಮಹಾತ್ಮ ಗಾಂಧಿ ಅವರ ಜೀವನದ ಬಗ್ಗೆ ಬರೆಯುವ ಆಸೆ ಇದೆ. ಪ್ರಾಯದ ಸಮಸ್ಯೆ ಏನೂ ಇಲ್ಲ...’ ಹೀಗೆ ಹೇಳಿದವರು ಕಯ್ಯಾರ ಕಿಞ್ಞಣ್ಣ ರೈ ಅವರು. ಇದು ಇಂದು ನಿನ್ನೆ ಹೇಳಿದ ಮಾತಲ್ಲ. 2001ರಲ್ಲಿ ಇದು ಕಯ್ಯಾರರು ಹೇಳಿದ ಮಾತು. ಅವರ ಜತೆ ‘ಪ್ರಜಾವಾಣಿ’ ಅಂದು ನಡೆಸಿದ ಸಂದರ್ಶನದ ಸಾರ ಇದು.

*ಹಳ್ಳಿಯ ವಾತಾವರಣ ಹೇಗೆ ಅನಿಸ್ತಿದೆ?
ಹಳ್ಳಿಯ ವಾತಾವರಣ ನೆಮ್ಮದಿ ಕೊಡುತ್ತದೆ. ಇದೇ ನನ್ನ ಜೀವನದ ರಹಸ್ಯ. ಸಾಹಿತ್ಯದಷ್ಟೇ ಕೃಷಿಯಲ್ಲೂ ಆಸಕ್ತಿ ಹೊಂದಿದ್ದೇನೆ. ಪೆರಡಾಲ ಪಂಚಾಯಿತಿ ಅಧ್ಯಕ್ಷನಾಗಿಯೂ ಸುದೀರ್ಘ ಸೇವೆ ಸಲ್ಲಿಸಿದ್ದೇನೆ. ಕುವೆಂಪು ಮತ್ತು ಗೋವಿಂದ ಪೈ ಇಬ್ಬರೂ ‘ರಾಜಕೀಯ ಬಿಟ್ಟುಬಿಡಿ. ಸಾಹಿತ್ಯದಲ್ಲೇ ಮುಂದುವರಿಯಿರಿ’ ಎಂದು ಹುರಿದುಂಬಿಸಿದ್ದನ್ನು ಸ್ಮರಿಸಿಕೊಳ್ಳುತ್ತಿದ್ದೇನೆ.

ಆದರೂ ಬಿಡಲಾಗಲಿಲ್ಲ. 15 ವರ್ಷ ಕಾಲ ಅಧ್ಯಕ್ಷನಾಗಿದ್ದೆ. ಅತ್ಯುತ್ತಮ ಪಂಚಾಯಿತಿ ಪ್ರಶಸ್ತಿ ಕೂಡ ಬಂತು. ಈ ಅವಧಿಯಲ್ಲಿ ಎರಡು ಶಾಲೆಗಳನ್ನೂ ಪ್ರಾರಂಭಿಸಿದ್ದೇನೆ. ಕವಿಗೋಷ್ಠಿ, ವಿಚಾರಗೋಷ್ಠಿಗಳನ್ನು ಬೇಕಾದಷ್ಟು ಸಂಘಟಿಸಿದ್ದೇನೆ.

*ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯನ್ನೂ ಹೊತ್ತಿದ್ದೀರಿ?
ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಎಂದರೆ ‘ಏಕ್ ದಿನ್ ಕಾ ಸುಲ್ತಾನ್’. ಏನಾದರೂ ಮಾಡಿ ತೋರಿಸಬೇಕು ಎಂಬ ಹಂಬಲ ಮಾತ್ರ ಇನ್ನೂ ಇದೆ.

*ಕನ್ನಡ ಹೋರಾಟಗಾರನಾಗಿ ಈಗ ಏನನ್ನಿಸುತ್ತದೆ?
ಚುನಾವಣೆ ಆಯ್ತು, ಗೆದ್ದಾಯಿತು, ಎಲ್ಲ ತೀರ್ಪುಗಳೂ ನಮ್ಮ ಪರವಾಗಿವೆ. ನಮಗೆ ಬರಬೇಕಾದುದನ್ನು ಕೊಡಿ ಎಂದು ಕರ್ನಾಟಕ ಸರ್ಕಾರ ಕೇಳಬೇಕು. ಸತ್ಯಾಗ್ರಹ ಮಾಡಿದೆವು, ಜೈಲಿಗೆ ಹೋದೆವು. ಆದರೇನು ಪ್ರಯೋಜನ? ಕಾಸರಗೋಡಿನ ಕನ್ನಡಿಗರ ಸ್ಥಿತಿಯನ್ನು ಕಂಡು ಮರುಕ ಹುಟ್ಟುತ್ತಿದೆ. ಇಲ್ಲಿನ ಸಂಸ್ಕೃತಿ ಬಗ್ಗೆಯೇ ಕನ್ನಡಗರಿಗೆ ತಿಳಿದಿಲ್ಲ. ಇದು ಬೇಸರದ ಸಂಗತಿ.

*ಹೋರಾಟದ ದಿನಗಳನ್ನು ನೆನಪಿಸಿಕೊಂಡಾಗ ಏನನ್ನಿಸುತ್ತದೆ?
ದಕ್ಷಿಣ ಕನ್ನಡ ಜಿಲ್ಲಾ ಮ್ಯಾನುವಲ್ ಸೇರಿದಂತೆ ದಾಖಲೆಗಳ ಪಟ್ಟಿಯನ್ನೇ ಮಂಡಿಸುತ್ತಾ. ‘ಬಾರ್ಡರ್ ಡಿಸ್‌ಪ್ಯೂಟ್ಸ್ ದಿ ಟ್ರೂ ಸ್ಟೋರಿ’ ಎಂಬ ಪುಸ್ತಕವನ್ನೂ ತೋರಿಸುತ್ತಾ ... ಡಾ. ಎ.ಬಿ.ಸಾಲೆತ್ತೂರು ಅವರು ಬರೆದಿದ್ದಾರೆ– ಈ ಪ್ರದೇಶವೂ ತುಳುನಾಡೇ. ಇಂಥ ಪ್ರಾಚೀನ ದಾಖಲೆಗಳು ಸಾಕಷ್ಟಿವೆ. ಶಾಸಕರಾಗಿದ್ದ ಎಂ.ಎಸ್. ಮೊಗ್ರಾಲ್ ಅವರಂಥವರೂ ಇದನ್ನು ಬೆಂಬಲಿಸಿದ್ದರು. ಇಲ್ಲಿ ಮಲಯಾಳಂ ಇದ್ದರೂ ಅದು ಶುದ್ಧವಾದ ಮಲಯಾಳಂ ಅಲ್ಲ, ಅಪಭ್ರಂಶವಾದ್ದು.

*ಮಹಾಜನ್ ವರದಿ ಜಾರಿ ಈಗ ಸಾಧ್ಯವೇ?
ಇಲ್ಲಿ ಮೂರು ಸಾರಿ ಎಂ.ಪಿ. ಆಗಿದ್ದ ಎಂ.ರಾಮಣ್ಣ ರೈ ಅವರು ಕಾಸರಗೋಡು ಸಮಸ್ಯೆಯನ್ನು ಮುಂದಿಟ್ಟುಕೊಂಡು ಮೊದಲು ಜೈಲಿಗೆ ಹೋದ್ರು. ಅನೇಕ ಹಿರಿಯರೂ ಇದೇ ಮಾರ್ಗವನ್ನು ಅನುಸರಿಸಿದರು. ಮಹಾಜನ್ ವರದಿ ಜಾರಿ ಸೂಕ್ತ. ಸಾವಿರಾರು ಮುಸ್ಲಿಮರೂ ಇದೇ ಅಭಿಪ್ರಾಯ ತಾಳಿದ್ದಾರೆ.

ಕರ್ನಾಟಕ ಸರ್ಕಾರ ಕೂಡ ಗಂಭೀರವಾಗಿ ಒತ್ತಡ ಹೇರಬೇಕು. ಕೇಂದ್ರ ಸರ್ಕಾರ ಇದನ್ನು ಜಾರಿಗೆ ತರಬೇಕು. ಪಾರ್ತಿಸುಬ್ಬ ಕನ್ನಡಿಗ. ಮಂಜೇಶ್ವರ ಗೋವಿಂದ ಪೈ ಕನ್ನಡಿಗರು. ನಿರಂಜನ್ ನೀಲೇಶ್ವರದಲ್ಲಿ ಕನ್ನಡ ಕಲಿತವರು. ಬಿ. ವಿಠಲದಾಸ ಶೆಟ್ಟಿ ಅವರೂ ನೀಲೇಶ್ವರದವರು. ನಾನು ಕೂಡ ಕನ್ನಡದ ಕವಿ.

*ನಿಮ್ಮ ಖಾದಿಯ ಗುಟ್ಟೇನು?
ಸ್ವಾತಂತ್ರ್ಯ ಸಿಕ್ಕಿತು. ಆ ನಂತರ ಕಾಂಗ್ರೆಸ್ ಬಿಟ್ಟೆ. ಯಾವುದೇ ಪಕ್ಷ ಸೇರಿಲ್ಲ. ಪಂಚಾಯಿತಿ ಅಧ್ಯಕ್ಷನಾಗಿದ್ದೂ ಪಕ್ಷೇತರನಾಗಿ. ಆದರೆ ಖಾದಿ ಮಾತ್ರ ಬಿಟ್ಟಿಲ್ಲ. ಗ್ರಾಮದ ಬದುಕು ಆತುಕೊಂಡೆ. ಕನ್ನಡ, ಸಂಸ್ಕೃತ, ಇಂಗ್ಲಿಷ್‌ನಲ್ಲಿ ಪದವಿ ಪಡೆದಿದ್ದರೂ ಪ್ರಾಂಶುಪಾಲರಾಗಿ ಕರೆದರೂ ಹೋಗಿಲ್ಲ. ಈಗ ಇದೊಂದೇ ಗಮನ– ಕಾಸರಗೋಡನ್ನು ಕರ್ನಾಟಕಕ್ಕೆ ವಿಲೀನವಾಗಿಸಬೇಕು ಎಂಬುದೊಂದೇ ನನ್ನ ಆಸೆ, ಆಕಾಂಕ್ಷೆ. ಇದೊಂದೇ ಗುರಿ.

*ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸುವ ಬಗ್ಗೆ ಸಾಹಿತ್ಯ ಸಮ್ಮೇಳನದಲ್ಲೇ ನಿರ್ಣಯ ಕೈಗೊಂಡಿದ್ದೀರಲ್ಲಾ?
ಸಾಹಿತ್ಯ ಸಮ್ಮೇಳನದಲ್ಲೇ ನಿರ್ಣಯ ಕೈಗೊಂಡರೂ ಪ್ರಯೋಜನಕ್ಕೆ ಬರಲಿಲ್ಲ. ಕಾಸರಗೋಡನ್ನು ಕನ್ನಡ ನಾಡಿನೊಂದಿಗೆ ಸೇರಿಸುವ ಬಗ್ಗೆ ನಿರ್ಣಯ ಕೈಗೊಂಡಿದ್ದೆವು. ಖಾರವಾಗಿ ಒತ್ತಾಯಿಸಿದ್ದೆವು. ಆದರೂ ಪ್ರಯೋಜನಕ್ಕೆ ಬರಲಿಲ್ಲ.

1957ರಲ್ಲಿ ಧಾರವಾಡದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೇ ಕುವೆಂಪು ಅಧ್ಯಕ್ಷತೆಯಲ್ಲಿ ಗಡಿನಾಡ ಕಿಡಿ ಹೊತ್ತಿಸಿದ್ದೆವು. ‘ಬೆಂಕಿ ಬಿದ್ದಿದೆ ಮನೆಗೆ..’ ಎಂದು ಬೊಬ್ಬಿಟ್ಟಿದ್ದೆವು. ಹೆತ್ತ ತಾಯಿ ದೊಡ್ಡವಳು. ಹೊತ್ತ ಭೂಮಿ ದೊಡ್ಡದು ಎಂದು ಸಾರಿ ಹೇಳಿಕೊಂಡಿದ್ದೆವು. ಆದರೆ ಇಂದಿಗೂ ನಮ್ಮ ಬೇಡಿಕೆ ಈಡೇರಿಲ್ಲ.

*ಇನ್ನೂ ಇಂಥ ನಿರ್ಣಯ ಸಾಧ್ಯವೇ?
ಸ್ವಾತಂತ್ರ್ಯ ಬಂದು ಆರು ದಶಕಗಳೇ ಕಳೆದಿವೆ. ಇಂಥ ಫಲವತ್ತಾದ ಭೂಮಿಯನ್ನು ಇನ್ನು ಬಿಟ್ಟುಕೊಡುತ್ತಾರೆಯೇ? ಆದರೆ ದಾಖಲೆ ಇದೆ, ಕಾನೂನಿದೆ. ಹಕ್ಕೊತ್ತಾಯ ಮಾಡಲೇಬೇಕು. ಸುಮ್ಮನೇ ಕೂರಲಾಗದು. ಪ್ರಾಯದ ಸಮಸ್ಯೆ ಏನೂ ಇಲ್ಲ. ಧೈರ್ಯ ಇದೆ.

*ದೇಶದ ಭವಿಷ್ಯದ ಬಗ್ಗೆ ಏನನ್ನಿಸುತ್ತದೆ?
ಒಳ್ಳೆಯದಾಗಬೇಕು. ಜ್ಞಾನ ಬರಬೇಕು. ಸ್ವಾತಂತ್ರ್ಯ ಹೋರಾಟದ ಕೆಚ್ಚು ಇನ್ನೂ ಉಳಿದಿದೆ. ಸ್ವಾತಂತ್ರ್ಯ ಯುದ್ಧದಿಂದ ಬಂದಿಲ್ಲ. ಇನ್ನಾದರೂ ಸ್ವಾರ್ಥ ಹೋಗಬೇಕು. ಉತ್ತಮ ನಾಯಕತ್ವ ಬೇಕು. ಆದರ್ಶ ಇರಬೇಕು. ನಮ್ಮ ಸಂಸ್ಕೃತಿ ತುಂಬಾ ಒಳ್ಳೆಯದಿದೆ. ನಾವಿನ್ನೂ ಅರಿತಿಲ್ಲ ಅಷ್ಟೇ...

ಮನೆ ಅಂಗಳದಲ್ಲಿ 100ನೇ ವರ್ಷಾಚರಣೆ

ಕಯ್ಯಾರರ ಸಾಧನೆಗೆ ಸಾಹಿತ್ಯವೇ ಶಕ್ತಿ. ಸಾಹಿತ್ಯದ ಕೃಷಿಗೆ ಕಯ್ಯಾರರ ಕೊಡುಗೆ ಅಪಾರ. ಅದೇ ರೀತಿ ಸ್ವತಃ ಕೃಷಿಕರಾಗಿ ಕಯ್ಯಾರರು ಮಾಡಿದ ಸಾಧನೆ ಅಮೋಘ. ಶಿಕ್ಷಕರಾಗಿಯೂ ಅವರು ಅಮೋಘ ಸಾಧನೆ ತೋರಿದ್ದಾರೆ. ಮೊನ್ನೆ ಮೊನ್ನೆ ಅಂದರೆ ಜೂನ್ 8ರಂದು ಅವರ 100ನೇ ವರ್ಷಾಚರಣೆ ಮನೆ ಅಂಗಳದಲ್ಲಿ ಜೋರಾಗಿ ನಡೆಯಿತು. ಕವಿತಾ ಕುಟೀರದ ಪಕ್ಕದಲ್ಲೇ ಅವರ ಮಗನಾದ ಕೃಷ್ಣಪ್ರದೀಪ್ ಕಟ್ಟಿರುವ ಹೊಸ ಮನೆಗೆ ‘ಉಂಞಕ್ಕ’ ಎಂದು ಹೆಸರಿಡಲಾಗಿದೆ.

ಇದು ಕಯ್ಯಾರರ ಪತ್ನಿಯ ಹೆಸರು. ಅವರು 2006ರಲ್ಲೇ ಇಹಲೋಕ ತ್ಯಜಿಸಿದ್ದಾರೆ. ಅವರ ಹೆಸರಿನಲ್ಲಿ ಇರುವ ಹೊಸ ಮನೆಯಲ್ಲಿ ಕವಿ ಕಯ್ಯಾರರು ಈಗ ವಾಸ ಇದ್ದಾರೆ. ಕವಿತಾ ಕುಟೀರ ಪಕ್ಕದಲ್ಲೇ ಇದೆ. ಕೃಷ್ಣ ಪ್ರದೀಪ್ ಅವರ ಪತ್ನಿ ಆರತಿ ಅವರು ಈಗ ಕಯ್ಯಾರರ ಆಗುಹೋಗುಗಳನ್ನು ನೋಡಿಕೊಳ್ಳುತ್ತಿದ್ದಾರೆ.

ಅವರ ಮಗಳು ಪ್ರಕೃತಿ ಕೂಡ ಜತೆಯಲ್ಲಿ ಅಜ್ಜನ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಣ್ಣ ಮಗನಾದ ರವಿರಾಜ್ ಮತ್ತು ಸುಷ್ಮಾ ಹಾಗೂ ಮಕ್ಕಳಾದ ಸೃಷ್ಟಿ ಮತ್ತು ಸಾನ್ವಿ ಅವರೂ ಇದ್ದಾರೆ. ಒಟ್ಟು 6 ಜನ ಗಂಡು ಮಕ್ಕಳಿದ್ದಾರೆ. ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಎಲ್ಲರನ್ನೂ ಸುಶಿಕ್ಷಿತರನ್ನಾಗಿ ಹಾಗೂ ಸಂಪನ್ನರಾಗಿಸಿದ್ದಾರೆ.

ಕಯ್ಯಾರ ಎಂಬುದು ಕವಿ ಕಿಞ್ಞಣ್ಣ ರೈ ಅವರ ತಾಯಿ ಮನೆಯ ಊರಿನ ಹೆಸರು. ಅದು ಉಪ್ಪಳ– ಪೈವಳಿಕೆ ಸಮೀಪದಲ್ಲಿ ಇದೆ. ತಾಯಿ ಮನೆಯ ಹೆಸರನ್ನೇ ಉಳಿಸಿಕೊಂಡಿರುವ ಕವಿ ಕಯ್ಯಾರರು ಇಂದಿಗೂ ಬದಿಯಡ್ಕ ಸಮೀಪದ ಕಲ್ಲರ್ಯದಲ್ಲಿ ತಂದೆ ಮನೆಯಲ್ಲೇ ವಾಸ ಇದ್ದಾರೆ. ಇಲ್ಲೂ ಒಂದು ಅಪರೂಪದ ಬಾಂಧವ್ಯವನ್ನು ಅವರು ತೋರಿದ್ದಾರೆ.

ಇತ್ತೀಚೆಗೆ ಮನೆಗೆ ಭೇಟಿ ನೀಡುವ ಗಣ್ಯರ ಸಂಖ್ಯೆ ಹೆಚ್ಚಾಗಿದೆ. ಮನೆಗೆ ಬಂದವರನ್ನು ಕಯ್ಯಾರರ ಸೊಸೆ ಆರತಿ ಅವರು ನೋಡಿಕೊಳ್ಳುತ್ತಿದ್ದಾರೆ. ಮನೆ ಪಕ್ಕದಲ್ಲಿ ಹಾಕಿದ್ದ ಪೆಂಡಾಲನ್ನು ತೋರಿಸಿ ‘ಇಲ್ಲೇ ಸಮಾರಂಭ ನಡೆದದ್ದು’ ಎಂದು ವಿವರಿಸಿದರು. ಅವರ ಮನೆಗೆ ಹೋಗುವಷ್ಟರಲ್ಲಿ ಸಂಸದ ನಳಿನ್‌ಕುಮಾರ್ ಕಟೀಲು ಹಾಗೂ ಇತರ ಗಣ್ಯರ ದೊಡ್ಡ ಪಡೆಯೇ ಭೇಟಿ ನೀಡಿತ್ತು.

ಆದರೂ ವ್ಯವಧಾನದಿಂದಲೇ ಬಂದವರನ್ನೆಲ್ಲ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತು ಅವರೇ ನಿಭಾಯಿಸುತ್ತಿದ್ದರು. ಕಯ್ಯಾರರು ಮಧ್ಯಾಹ್ನದ ವೇಳೆಗೆ ಮಲಗಿದ್ದರು. ಅವರು ಏಳುವಷ್ಟರವರೆಗೂ ಆರತಿ ಅವರೇ ನಮ್ಮನ್ನು ನೋಡಿಕೊಂಡರು. ಮನೆ ವಿಚಾರಗಳನ್ನೆಲ್ಲ ಹಂಚಿಕೊಂಡರು. ನೂರರ ಸಂಭ್ರಮದಲ್ಲಿರುವ ಕಯ್ಯಾರರ ಮನೆಗೆ ಅತಿಥಿಗಳ ಸಂಖ್ಯೆ ಹೆಚ್ಚಾಗಿದ್ದುದರಿಂದಲೋ ಏನೋ ಅವರು ಸುಸ್ತಾಗಿದ್ದರು.

‘ನನ್ನನ್ನು ಏನೂ ಕೇಳಬೇಡಿ. ಸುಸ್ತಾಗಿದೆ. ಏನೂ ಶಕ್ತಿ ಇಲ್ಲ. ಇಲ್ಲಾಂದ್ರೆ ನಾನೇ ಎದ್ದು ಮಾತನಾಡಿಸುತ್ತಿದ್ದೆ’ ಎಂದು ಮಲಗಿದ್ದಲ್ಲೇ ಪ್ರತಿಕ್ರಿಯೆ ನೀಡಿದರು. ‘ನಾನು ಯಾರನ್ನೂ ದೂರಿಲ್ಲ’ ಎನ್ನುತ್ತಲೇ ತಮ್ಮ ಮೇರು ವ್ಯಕ್ತಿತ್ವವನ್ನು ಸಾರಿದರು. ನನ್ನ ಬಳಿ ಇದ್ದ ಪುಸ್ತಕವನ್ನು ಹಿಡಿದುಕೊಂಡು ತಡಕಾಡಿದರು. ಅವರು ಮಲಗಿದ್ದ ಕೋಣೆಯಲ್ಲಿರುವ ನೂರಾರು ಫಲಕಗಳು ಹಾಗೂ ಸ್ಮರಣಿಕೆಗಳು ಮಿನುಗುತ್ತಿದ್ದವು.

ಪಂಪ ಪ್ರಶಸ್ತಿ ಪುರಸ್ಕೃತ ಸಾಹಿತಿ, ಕನ್ನಡದ ಕಟ್ಟಾಳು ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಅವರ ಮನೆಯಲ್ಲಿ ಅಕ್ಷರಶಃ ಸಂಭ್ರಮ ಮನೆ ಮಾಡಿತ್ತು. ಕಯ್ಯಾರರ ಶತಪೂರ್ತಿ ಸಂಭ್ರಮಕ್ಕೆ ಗಣ್ಯರು, ಸಾಹಿತಿಗಳು, ಚಿಣ್ಣರ ದಂಡೇ ಸೇರಿತ್ತು. ಸ್ವಾತಂತ್ರ್ಯ ಹೋರಾಟಗಾರ, ಕನ್ನಡದ ಹೋರಾಟಗಾರ, ಕೃಷಿಕ ಕಿಞ್ಞಣ್ಣ ರೈ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.