ಎಪ್ಪತ್ತು ವರ್ಷಗಳಿಂದ ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ಸಾವು ಪಿತೂರಿಗಳ ನಿಗೂಢ ಸಂಗತಿಯಾಗಿಯೇ ಭಾರತದ ಇತಿಹಾಸದಲ್ಲಿ ಉಳಿದುಕೊಂಡು ಬಂದಿದೆ. ಎಂದೋ ಒಂದು ದಿನ ನೇತಾಜಿ ಬಂದೇ ಬರುತ್ತಾರೆ ಎಂಬ ಬಲವಾದ ನಂಬಿಕೆ ಭಾರತದ್ದು.

ನೇತಾಜಿ ನಾಪತ್ತೆಯಾದ ಕುರಿತು ಮೂರು ಕಥೆಗಳಿವೆ:

ಒಂದು– 1945ರ ಆಗಸ್ಟ್ 18ರಂದು ವಿಮಾನ ಅಪಘಾತದಲ್ಲಿ ಅವರು ಮೃತಪಟ್ಟರು. ಎರಡು– ಅನಾಮಧೇಯ ಸನ್ಯಾಸಿಯಾಗಿ ಫೈಜಾಬಾದ್ನಲ್ಲಿ ಅವರು 1985ರವರೆಗೆ ಬದುಕಿದ್ದರು. ಮೂರು– ಸೈಬೀರಿಯಾ ಹಾಗೂ ರಷ್ಯಾದಲ್ಲಿ ಅವರಿಗೆ ಚಿತ್ರಹಿಂಸೆ ನೀಡಲಾಯಿತು.

ನಮ್ಮ ಪಠ್ಯಪುಸ್ತಕಗಳಲ್ಲಿ ಸುಭಾಷ್ಚಂದ್ರ ಬೋಸ್ ಅವರ ಕುರಿತು ಕೆಲವೇ ಸಾಲುಗಳಿದ್ದು, ತೈವಾನ್ನ ತೈಹೋಕುವಿನಲ್ಲಿ ವಿಮಾನ ಅಪಘಾತದಲ್ಲಿ ಅವರು ಮೃತಪಟ್ಟರು ಎನ್ನುವುದನ್ನೇ ಹೇಳಿಕೊಂಡು ಬಂದಿವೆ. ತಲೆಮಾರುಗಳಿಂದ ನಾವು ಇದನ್ನೇ ನಂಬಿಕೊಂಡು ಬಂದಿದ್ದೇವೆ.

ನೇತಾಜಿ ನಾಪತ್ತೆಯ ತನಿಖೆ ನಡೆಸಿ, ಈ ನಂಬಿಕೆಗೆ ಅಂತ್ಯಹಾಡಲು 1999ರಲ್ಲಿ ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಂ.ಕೆ.ಮುಖರ್ಜಿ ಏಕಸದಸ್ಯ ಆಯೋಗವನ್ನು ರಚಿಸಲಾಯಿತು. 2005ರಲ್ಲಿ ಆಯೋಗ ನೀಡಿದ ಮೂರು ಸಂಪುಟಗಳ ವರದಿಯು ‘ಈಗ ಹೇಳುತ್ತಿರುವಂತೆ ಬೋಸ್ ವಿಮಾನ ಅಪಘಾತದಲ್ಲಿ ಮೃತಪಟ್ಟಿಲ್ಲ. ಜಪಾನಿನ ದೇವಸ್ಥಾನದಲ್ಲಿ ಇರುವ ಅಸ್ಥಿಯು ನೇತಾಜಿ ಅವರದ್ದಲ್ಲ’ ಎಂದು ಸ್ಪಷ್ಟಪಡಿಸಿತು.

ನೇತಾಜಿ ಸಾವಿನ ಬಗೆಗಿನ ವಿವಾದ ಪ್ರಾರಂಭವಾದದ್ದು 1945ರ ಆಗಸ್ಟ್ 23ರಂದು ಟೋಕಿಯೊದಲ್ಲಿ ಹೊರಬಂದ ಪ್ರಕಟಣೆಯಿಂದ. ಅದೇ ವರ್ಷ ಆಗಸ್ಟ್ 18ರಂದು ನೇತಾಜಿ ವಿಮಾನ ಅಪಘಾತವೊಂದರಲ್ಲಿ ಮೃತಪಟ್ಟರು ಎಂದು ಜಪಾನಿನ ಸುದ್ದಿಸಂಸ್ಥೆ ‘ಡೊಮೀ’ ವಿಶ್ವದಾದ್ಯಂತ ಪ್ರಕಟಿಸಿತು. ಟೋಕಿಯೊ ಹಾಗೂ ತೈಹೋಕುವಿನಿಂದ ಪ್ರಕಟಗೊಂಡ ಕೆಲವು ಪತ್ರಿಕಾ ವರದಿಗಳು ಪರಸ್ಪರ ವ್ಯತಿರಿಕ್ತ ಅಂಶಗಳನ್ನು ಒಳಗೊಂಡಿದ್ದವು.

‘ಎರಡನೇ ವಿಶ್ವಯುದ್ಧದಲ್ಲಿ ಜಪಾನ್ ಸೋತಮೇಲೆ, 1945ರ ಆಗಸ್ಟ್ 18ರಂದು ತೈವಾನ್ನಿಂದ ವಿಮಾನದಲ್ಲಿ ನೇತಾಜಿ ಹೊರಟರು. ಟೇಕಾಫ್ ಆಗುವ ಸಂದರ್ಭದಲ್ಲಿ ವಿಮಾನ ಅಪಘಾತಕ್ಕೆ ಈಡಾಗಿ, ಅವರಿಗೆ ಗಂಭೀರ ಸ್ವರೂಪದ ಸುಟ್ಟಗಾಯಗಳಾದವು. ಕೆಲವು ಗಂಟೆಗಳ ನಂತರ ಸ್ಥಳೀಯ ಆಸ್ಪತ್ರೆಯಲ್ಲಿ ಅವರು ಮೃತಪಟ್ಟರು ಹಾಗೂ ಅವರ ಪಾರ್ಥಿವ ಶರೀರವನ್ನು ಎರಡು ದಿನಗಳೊಳಗೆ ಸುಡಲಾಯಿತು. ಅವರ ಅಸ್ಥಿಯನ್ನು ಟೋಕಿಯೊಗೆ ತೆಗೆದುಕೊಂಡು ಹೋಗಿ, ರೆಂಕೋಜಿ ದೇವಸ್ಥಾನಕ್ಕೆ ಕೊಡಲಾಗಿದ್ದು, ಅದು ಇಲ್ಲಿಯವರೆಗೆ ಅಲ್ಲಿ ಇದೆ’ ಎಂದು ಒಂದು ವರದಿ ಹೇಳಿತು.

ನೇತಾಜಿ ಕುಟುಂಬವರ್ಗ, ಅವರ ಸ್ನೇಹಿತರು ಹಾಗೂ ಅನುಯಾಯಿಗಳು ಈ ವರದಿಯನ್ನು ಅಲ್ಲಗಳೆದರು. ಅಭೂತಪೂರ್ವ ಎನ್ನಬಹುದಾದ ಬೆಳವಣಿಗೆಯಲ್ಲಿ ಪಶ್ಚಿಮ ಬಂಗಾಳ ಸರ್ಕಾರವು ಶುಕ್ರವಾರ (ಸೆ. 18) ನೇತಾಜಿ ನಾಪತ್ತೆ ಕುರಿತ 64 ವರ್ಗೀಕೃತ ಕಡತಗಳನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಿತು. ಇದರಿಂದ ಸತ್ಯಾನ್ವೇಷಣೆಗೆ ಹಾದಿ ಮುಕ್ತಗೊಳಿಸಿದಂತಾಗಿದೆ. ನೇತಾಜಿ ಕುಟುಂಬಕ್ಕೆ ಸಂಬಂಧಿಸಿದ ತನಿಖೆಯ ವಿವರಗಳನ್ನು ಬಹುತೇಕ ಕಡತಗಳು ಒಳಗೊಂಡಿದ್ದು, ಕೆಲವು ಮಹತ್ವದ ಪತ್ರಗಳ ಪ್ರತಿಗಳನ್ನೂ ಒಳಗೊಂಡಿವೆ. ಆದರೂ ಸತ್ಯದ ಶೋಧನೆ ಮುಂದುವರಿದಿದೆ.

‘ಈಗ ಬಿಡುಗಡೆ ಮಾಡಿರುವ 64 ಕಡತಗಳ ಪೈಕಿ ಒಂದರಲ್ಲಿ ಇನ್ನೊಂದು ಕಡತದ ಉಲ್ಲೇಖವಿದ್ದು, ಆ ಕಡತದ ಮೊದಲ ಪುಟ ಹಾಗೂ ಕಡತದ ಸಂಖ್ಯೆ ಮಾತ್ರ ಇದೆ. ಅದರ ಉಳಿದ ಪುಟಗಳನ್ನು 1972ರಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಆಗಿದ್ದ ಸಿದ್ಧಾರ್ಥ್ ಶಂಕರ್ ರೇ ನಾಶಪಡಿಸಿದ್ದಾರೆ ಎನ್ನಲಾಗುತ್ತಿದೆ’ ಎಂದು ನೇತಾಜಿ ಸುಭಾಷ್ಚಂದ್ರ ಬೋಸರ ಅಣ್ಣನ ಮೊಮ್ಮಗ ಚಂದ್ರ ಬೋಸ್ ಪ್ರತಿಕ್ರಿಯಿಸಿದ್ದಾರೆ.

ಬೋಸ್ ಅವರ ಸಾವಿನ ಕುರಿತು ತನಿಖೆ ನಡೆಯಬೇಕೆಂಬ ಆಗ್ರಹ ಬಹಳ ಹಿಂದೆಯೇ ತೀವ್ರವಾಗಿತ್ತು. ಸಂಸತ್ನಲ್ಲಿ ಈ ಸಂಗತಿಯನ್ನು ಪದೇ ಪದೇ ಪ್ರಸ್ತಾಪಿಸಲಾಯಿತು. 1956ರಲ್ಲಿ ನೆಹರೂ ಸರ್ಕಾರ ಒಂದು ಸಮಿತಿಯನ್ನು ತನಿಖೆಗಾಗಿ ನೇಮಕ ಮಾಡಿತು. ಶಾ ನವಾಜ್ ಖಾನ್ ನೇತೃತ್ವದ ಸಮಿತಿಯು ಒಬ್ಬ ಸಂಸದ ಹಾಗೂ ನೇತಾಜಿ ಅವರ ಇಂಡಿಯನ್ ನ್ಯಾಷನಲ್ ಆರ್ಮಿಯ ಮಾಜಿ ಲೆಫ್ಟಿನೆಂಟ್ ಕರ್ನಲ್ ಅವರನ್ನು ಒಳಗೊಂಡಿತ್ತು. ಸುಭಾಷ್ಚಂದ್ರ ಬೋಸರ ಸಾವಿಗೆ ಕಾರಣವಾಗಿರುವ ಸತ್ಯಾಂಶವನ್ನು ಪತ್ತೆಮಾಡುವ ಕೆಲಸ ಸಮಿತಿಯದ್ದಾಗಿತ್ತು. ಐಸಿಎಸ್ (ಇಂಡಿಯನ್ ಸಿವಿಲ್ ಸರ್ವೀಸ್) ಅಧಿಕಾರಿ ಎಸ್.ಎನ್.ಮೈತ್ರಾ ಹಾಗೂ ಬೋಸ್ ಅವರ ಅಣ್ಣ ಸುರೇಶ್ಚಂದ್ರ ಬೋಸ್ ಅವರನ್ನು ಒಳಗೊಂಡಿದ್ದ ಸಮಿತಿಯು 1956ರ ಏಪ್ರಿಲ್ನಲ್ಲಿ ತನಿಖೆ ಪ್ರಾರಂಭಿಸಿ, ‘ನೇತಾಜಿ ತೈಹೋಕುವಿನಲ್ಲಿ 1945ರ ಆಗಸ್ಟ್ 18ರಂದು ವಿಮಾನ ಅಪಘಾತದಲ್ಲಿ ಮೃತಪಟ್ಟಿರುವುದು ನಿಜ’ ಎಂದು ನಾಲ್ಕು ತಿಂಗಳಲ್ಲಿಯೇ ವರದಿ ನೀಡಿತು. ಸರ್ಕಾರವು ಆ ವರದಿಯನ್ನು ಒಪ್ಪಿತಾದರೂ, ಸುರೇಶ್ಚಂದ್ರ ಬೋಸ್ ಆ ತೀರ್ಮಾನವನ್ನು ಒಪ್ಪಲಿಲ್ಲ.

ನೇತಾಜಿ ಅವರ ಒಡನಾಡಿಯೂ ಆಗಿದ್ದ ಹೆಸರಾಂತ ಶಿಕ್ಷಣ ತಜ್ಞ, ರಾಜಕಾರಣಿ ಸಮರ್ ಗುಹಾ ಏಪ್ರಿಲ್ 1967ರಲ್ಲಿ 350 ಸಂಸದರ ಬೆಂಬಲದೊಂದಿಗೆ ನೇತಾಜಿ ನಾಪತ್ತೆಯ ಕುರಿತು ಹೊಸದಾಗಿ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು. 1970ರಲ್ಲಿ ಇಂದಿರಾ ಗಾಂಧಿ ಸರ್ಕಾರವು, ಪಂಜಾಬ್ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಜಿ.ಡಿ.ಖೋಸ್ಲಾ ಅವರಿದ್ದ ಏಕಸದಸ್ಯ ಆಯೋಗವನ್ನು ತನಿಖೆ ಮಾಡಲು ನೇಮಿಸಿತು. ಈ ಆಯೋಗ ಕೂಡ ಹೊಸ ವಿಷಯವನ್ನೇನೂ ಹೇಳದೆ, ತನಿಖೆಯನ್ನು ಮಧ್ಯದಲ್ಲೇ ಮುಗಿಸಿಬಿಟ್ಟಿತು. ‘ನೇತಾಜಿ ತೈಹೋಕುವಿನಲ್ಲಿ ವಿಮಾನ ಅಪಘಾತದಿಂದಲೇ ಮೃತಪಟ್ಟಿದ್ದು, ಅವರ ಅಸ್ಥಿಯನ್ನು ಟೋಕಿಯೊಗೆ ತೆಗೆದುಕೊಂಡು ಹೋದದ್ದು ನಿಜ’ ಎನ್ನುವುದೇ ಆ ವರದಿಯ ಸಾರಾಂಶವೂ ಆಗಿತ್ತು.

ಆಗ ಪ್ರಧಾನಿಯಾಗಿದ್ದ ಮೊರಾರ್ಜಿ ದೇಸಾಯಿ 1983ರ ಜುಲೈ 6ರಂದು ಸಮರ್ ಗುಹಾ ಅವರ ‘ನೇತಾಜಿ: ಡೆಡ್ ಆರ್ ಅಲೈವ್’ ಕೃತಿ ಬಿಡುಗಡೆ ಸಮಾರಂಭದಲ್ಲಿ ಆಸಕ್ತಿಕರ ಸತ್ಯವೊಂದನ್ನು ಬಯಲುಮಾಡಿದರು. ‘ಬೋಸ್ ಇನ್ನೂ ಬದುಕಿದ್ದು, ಸನ್ಯಾಸ ಸ್ವೀಕರಿಸಿದ್ದಾರೆ’ ಎಂದು ಒಂದಿಷ್ಟು ಜನ ಸೇರಿದ್ದ ಆ ಕಾರ್ಯಕ್ರಮದಲ್ಲಿ ಮೊರಾರ್ಜಿ ಹೇಳಿದರು. ಅದಕ್ಕೂ ಮೊದಲು ಸಂಸತ್ ಸದನದ ಕಲಾಪದಲ್ಲಿ ಅವರು ಶಾ ನವಾಜ್ ಸಮಿತಿ ಹಾಗೂ ಖೋಸ್ಲಾ ಆಯೋಗದ ವರದಿಗಳನ್ನು ನಿರಾಕರಿಸಿದ್ದರು.

ಆ ಎರಡೂ ತನಿಖೆಗಳನ್ನು ಪ್ರಧಾನಿಯೇ ಒಪ್ಪಿಲ್ಲವಾದ್ದರಿಂದ ನೇತಾಜಿ ನಾಪತ್ತೆಯ ಹಿಂದಿನ ಸತ್ಯ ಪತ್ತೆ ಮಾಡಬೇಕೆಂದು ಮತ್ತೆ ಒತ್ತಾಯ ತೀವ್ರಗೊಂಡಿತು. ನೇತಾಜಿ ನಿಗೂಢ ನಾಪತ್ತೆಯ ಕುರಿತು ದೇಶ ಹಾಗೂ ವಿದೇಶಗಳಲ್ಲಿ ಲಭ್ಯವಿರುವ ಎಲ್ಲಾ ದಾಖಲೆಗಳನ್ನು ದೊರಕಿಸಿಕೊಡಬೇಕು ಹಾಗೂ ಸತ್ಯಾನ್ವೇಷಣೆಗೆ ಹೊಸದಾಗಿ ತನಿಖೆ ಆರಂಭಿಸಬೇಕು ಎಂದು 1998ರ ಡಿಸೆಂಬರ್ನಲ್ಲಿ ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ಅವಿರೋಧ ನಿರ್ಣಯ ಕೈಗೊಂಡು, ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಯಿತು. ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದಕ್ಕೆ ಪ್ರತಿಕ್ರಿಯಿಸಿದ ಕೋಲ್ಕತ್ತ ಹೈಕೋರ್ಟ್, ‘ಈ ವಿವಾದಕ್ಕೆ ತೆರೆ ಎಳೆಯಲು ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ, ಚುರುಕಾದ ವಿಚಾರಣೆ ನಡೆಸಬೇಕು’ ಎಂದು ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಆದೇಶಿಸಿತು.

1999ರ ಮೇ ತಿಂಗಳಲ್ಲಿ ಪ್ರಕರಣದ ವಿಚಾರಣೆಗೆಂದು ಮುಖರ್ಜಿ ಅವರನ್ನು ಸರ್ಕಾರ ನೇಮಿಸಿತು. ಇದು ಕೂಡ ಏಕವ್ಯಕ್ತಿಯ ಆಯೋಗ. ಇದಷ್ಟೇ ಅಲ್ಲದೆ ವೈಯಕ್ತಿಕವಾಗಿ ಆಸಕ್ತಿಯುಳ್ಳ ಅನೇಕರು ನೇತಾಜಿ ನಿಗೂಢ ಕಣ್ಮರೆಯ ಹಿಂದಿನ ಸತ್ಯಗಳನ್ನು ಹುಡುಕತೊಡಗಿದರು.

ಹಿರಿಯ ಪತ್ರಕರ್ತ ಅನುಜ್ ಧರ್ ಸ್ವತಂತ್ರವಾಗಿ ಸತ್ಯಾನ್ವೇಷಣೆಗೆ ಮುಂದಾದರು. ಮಾಹಿತಿ ಹಕ್ಕು ಕಾಯ್ದೆಯಡಿ ಹಲವು ಪ್ರಮುಖ ಸಂಗತಿಗಳನ್ನು ಪತ್ತೆಮಾಡಿದರು. ವಿದೇಶಗಳ ವಿವಿಧ ಸರ್ಕಾರಗಳಿಗೆ ಪತ್ರಗಳನ್ನು ಬರೆದು, ಖುದ್ದು ಅಲ್ಲಿಗೆ ಹೋಗಿ ಮಾತನಾಡಿದರು. ಅವರ ಪ್ರಯತ್ನದಿಂದ ನೇತಾಜಿ ಕಣ್ಮರೆ ಕುರಿತ ಹಲವು ಮಹತ್ವದ ದಾಖಲೆಗಳು ಲಭ್ಯವಾದವು. ಬೋಸ್ ಅವರ ಕಡತಗಳಲ್ಲಿನ 10,000 ಪುಟಗಳು ಅವುಗಳಲ್ಲಿ ಮುಖ್ಯವಾದವು. ‘ಇಂಡಿಯಾಸ್ ಬಿಗ್ಗೆಸ್ಟ್ ಕವರ್-ಅಪ್’ ಎಂಬ ಕೃತಿಯಲ್ಲಿ ಅನುಜ್ ಅವರು ನೇತಾಜಿ ನಿಗೂಢ ಕಣ್ಮರೆಯ ವಿವರಗಳನ್ನು ನೀಡಿದರು. ನೇತಾಜಿ ಅವರ ಬಗೆಗಿನ ಮಹತ್ವದ ಮಾಹಿತಿಗಳ ಆಕರಮೂಲವಾಗಿ ಅನುಜ್ ಕೃತಿ ಪರಿಗಣಿತವಾಯಿತು.

2005ರಲ್ಲಿ ತೈವಾನ್ ಸರ್ಕಾರವು ಅನುಜ್ ಧರ್ ಅವರ ಇ–ಮೇಲ್ಗೆ ಉತ್ತರರೂಪದಲ್ಲಿ ಹೀಗೆ ಪ್ರತಿಕ್ರಿಯಿಸಿತು: ‘ಆಗಸ್ಟ್ 14ರಿಂದ 25 ಅಕ್ಟೋಬರ್ 1945ರ ಅವಧಿಯಲ್ಲಿ ಓಲ್ಡ್ ಮಟ್ಸುಯಾಮ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ವಿಮಾನ ಅಪಘಾತಗಳ ಕುರಿತ ಯಾವ ದಾಖಲೆಗಳೂ ಲಭ್ಯವಿಲ್ಲ’.

ನೇತಾಜಿ ಕುಟುಂಬದವರ ಖಾಸಗಿತನಕ್ಕೆ ಭಾರತದ ಬೇಹುಗಾರಿಕಾ ಸಂಸ್ಥೆಗಳು ವರ್ಷಗಟ್ಟಲೆ ಹೇಗೆಲ್ಲಾ ತೊಂದರೆ ಒಡ್ಡಿದವು ಎನ್ನುವ ಸತ್ಯವೂ ಬೆಳಕಿಗೆ ಬಂದಿತು. ನೇತಾಜಿ ಎಂದು ನಂಬಲಾದ ಸನ್ಯಾಸಿ ಅನುಭವಿಸಿದ ಕಷ್ಟಗಳು, 1945ರ ನಂತರ ರಷ್ಯಾದಲ್ಲಿ ನೇತಾಜಿ ಅನುಭವಿಸಿರಬಹುದಾದ ಚಿತ್ರಹಿಂಸೆ– ಇವೆಲ್ಲ ಸಂಗತಿಗಳು ರೆಕ್ಕೆಪುಕ್ಕ ಪಡೆದುಕೊಂಡವು.

ಮುಖರ್ಜಿ ಆಯೋಗ: ಮುಖರ್ಜಿ ಆಯೋಗವು ಹಲವು ಅಡೆತಡೆಗಳನ್ನು ಎದುರಿಸಬೇಕಾಯಿತು. ಪದೇ ಪದೇ ಮನವಿ ಸಲ್ಲಿಸಿದರೂ ಭಾರತ ಸರ್ಕಾರವು ಅನೇಕ ಪ್ರಮುಖ ದಾಖಲೆಗಳನ್ನು ಒದಗಿಸಲಿಲ್ಲ ಎಂದು ಆಯೋಗದ ವರದಿಯು ಟೀಕಿಸಿತು. ನೇತಾಜಿ ನಾಪತ್ತೆಯ ಸತ್ಯವನ್ನು ಪತ್ತೆಮಾಡಲು ಭಾರತ ಹಾಗೂ ವಿದೇಶಗಳಲ್ಲಿ ಹಲವು ಸಾರ್ವಜನಿಕ ಸಭೆಗಳನ್ನು ಆಯೋಗವು ಏರ್ಪಡಿಸಿತು.

ಜಪಾನ್ನಲ್ಲಿ ತನಿಖೆ ನಡೆಸಿದಾಗ, ಅಲ್ಲಿನ ಚಿತಾಗಾರದ ದಾಖಲೆಗಳಲ್ಲಿ ಬೋಸ್ ಎಂಬ ಹೆಸರೇ ಇರಲಿಲ್ಲ. ಇಚಿರೊ ಒಕುರಾ ಎಂಬ ಹೆಸರು ಮಾತ್ರ ಇತ್ತು. ಬೋಸ್ ಅವರ ಸಾವಿನ ನಿಗೂಢತೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಇಚಿರೊ ಒಕುರಾ ಹೆಸರಿನಲ್ಲಿ ಸರ್ಟಿಫಿಕೇಟ್ ನೀಡುತ್ತಿರುವುದಾಗಿ 1955ರಲ್ಲಿ ಜಪಾನ್ ಸರ್ಕಾರವು ಭಾರತ ಸರ್ಕಾರಕ್ಕೆ ಹೇಳಿತ್ತು. ವೈದ್ಯಕೀಯ ವರದಿ, ಪೊಲೀಸರು ತಾಳೆಮಾಡಿ ನೋಡಿದ ವರದಿ, ಚಿತಾಗಾರದ ಅನುಮತಿ ಹಾಗೂ ಚಿತಾಗಾರದಲ್ಲಿ ಸಂಸ್ಕಾರಗೊಂಡ ಶವಗಳ ವಿವರಗಳ ರಿಜಿಸ್ಟರ್ ಎಲ್ಲದರಲ್ಲೂ ಇಚಿರೊ ಒಕುರಾ ಹೆಸರೇ ಇದೆ. ದಾಖಲೆಗಳ ಪ್ರಕಾರ ‘ಒಕುರಾ ಜಪಾನಿನ ಯೋಧನಾಗಿದ್ದು, 1900ರ ಏಪ್ರಿಲ್ 9ರಂದು ಹುಟ್ಟಿದ್ದ. 1945ರ ಆಗಸ್ಟ್ 19ರಂದು ಹೃದಯಾಘಾತದಿಂದ ಮೃತಪಟ್ಟ. ಅವನ ಅಂತಿಮ ಸಂಸ್ಕಾರ ನಡೆದದ್ದು ಆಗಸ್ಟ್ 22ರಂದು’.

ಆಸಕ್ತಿಕರ ವಿಷಯವೆಂದರೆ, ಅಂತಿಮ ಸಂಸ್ಕಾರಕ್ಕೆ ಮುನ್ನ ತೆಗೆದದ್ದು ಎನ್ನಲಾದ ‘ನೇತಾಜಿ ಮೃತ ದೇಹದ’ ಫೋಟೊಗಳಲ್ಲಿ ಶಿರಭಾಗವೇ ಫ್ರೇಮ್ನಲ್ಲಿ ಇರಲಿಲ್ಲ. ಅಪಘಾತದಲ್ಲಿ ಮುಖವು ವಿಪರೀತ ಸುಟ್ಟುಹೋಗಿದ್ದು, ಅದು ನೋಡಲು ಬೀಭತ್ಸ ಎನ್ನುವಂತಿತ್ತು. ಆದ್ದರಿಂದ ಅದನ್ನು ಫೋಟೊಗ್ರಾಫ್ ಮಾಡಲಿಲ್ಲ ಎಂಬ ಕಾರಣ ನೀಡಲಾಗಿತ್ತು.

‘ಟೋಕಿಯೊದ ರೆಂಕೋಜಿ ದೇವಸ್ಥಾನದಲ್ಲಿ ಇರುವ ಅಸ್ಥಿ ನೇತಾಜಿ ಅವರದ್ದಲ್ಲ. ವಿಮಾನ ಅಪಘಾತದ ಕತೆ ಕಟ್ಟಿದ್ದು ನೇತಾಜಿ ಅವರನ್ನು ಪಾರುಮಾಡುವ ಉದ್ದೇಶದಿಂದ. ಜಪಾನ್ ಹಾಗೂ ತೈವಾನ್ ಸರ್ಕಾರಗಳಿಗೆ ಈ ವಿಷಯ ಗೊತ್ತಿತ್ತು ಹಾಗೂ ಈ ಕುರಿತು ತೈವಾನ್ ಸರ್ಕಾರ 1956ರಲ್ಲಿ ಕಳುಹಿಸಿದ ವರದಿಯನ್ನು ಭಾರತ ಸರ್ಕಾರ ಮುಚ್ಚಿಹಾಕಿತು. ನೇತಾಜಿ ಈಗ ಮೃತಪಟ್ಟಿದ್ದರೂ ಅವರ ಬದುಕಿನ ಕೊನೆಯ ಸಂದರ್ಭದ ಕುರಿತು ತನಿಖೆಯಾಗಬೇಕು’ ಎಂದು ಮುಖರ್ಜಿ ಆಯೋಗವು ಅಭಿಪ್ರಾಯಪಟ್ಟಿತು. ಭಾರತ ಸರ್ಕಾರವು ಈ ಆಯೋಗ ಪತ್ತೆಮಾಡಿದ ಅಂಶಗಳನ್ನು ಕೂಡ ತಿರಸ್ಕರಿಸಿತು.

(ಅಂಕಣಕಾರ್ತಿ ಚೂಡಿ ಶಿವರಾಂ ಹಿರಿಯ ಪತ್ರಕರ್ತೆ. ಅವರ ಲೇಖನಗಳು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವಿದೇಶಿ ವಿಶ್ವವಿದ್ಯಾಲಯಗಳು ಇವರ ಬರಹಗಳನ್ನು ಆಕರವಾಗಿಯೂ ಬಳಸಿಕೊಂಡಿವೆ. ಈ ಬರಹವು ಪ್ರಜಾವಾಣಿಯ ‘ಈ ಭಾನುವಾರ’ ಪುಟದಲ್ಲಿ ಸೆಪ್ಟೆಂಬರ್ 8, 2015ರಂದು ಮೊದಲ ಬಾರಿಗೆ ಪ್ರಕಟವಾಗಿತ್ತು ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.