ಭೂಮಿ ಬಿಸಿಯಾಗುತ್ತಿದೆ. ಋತುಗಳು ಏರುಪೇರಾಗುತ್ತಿವೆ. ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಬಳಕೆಯಿಂದ, ಆಧುನಿಕ ಜೀವನಶೈಲಿಯಿಂದ ಮಾಲಿನ್ಯದ ಹೊಗೆ ಭೂಮಿಯನ್ನು ಆವರಿಸುತ್ತಿದೆ.

ಭೂಮಿಯ ಆರೋಗ್ಯ ಕಾಪಾಡಿಕೊಳ್ಳಲೆಂದೇ ಇನ್ನೆರಡು ತಿಂಗಳ ನಂತರ ಪ್ಯಾರಿಸ್ನಲ್ಲಿ ನಡೆಯಲಿರುವ ಹವಾಮಾನ ಶೃಂಗಸಭೆಯಲ್ಲಿ ಭಾರತವೂ ಸೇರಿದಂತೆ ಜಗತ್ತಿನ 140ಕ್ಕೂ ಹೆಚ್ಚು ದೇಶಗಳು ಇಂಗಾಲ ಹೊರಸೂಸುವಿಕೆ ಪ್ರಮಾಣ ಕಡಿತಗೊಳಿಸಲು ಒಪ್ಪಂದವೊಂದಕ್ಕೆ ಸಹಿ ಹಾಕಲಿವೆ.

ಭಾರತ ಈಗಾಗಲೇ ತನ್ನ ಉದ್ದೇಶಿತ ಇಂಗಾಲ ಕಡಿತದ ಪ್ರಮಾಣ ಕುರಿತು ವಿಶ್ವಸಂಸ್ಥೆಗೆ ದಾಖಲೆ ಸಲ್ಲಿಸಿದೆ. 2030ರ ಹೊತ್ತಿಗೆ ನಮ್ಮ ವಿದ್ಯುತ್ ಅಗತ್ಯದಲ್ಲಿ ಶೇ 40ರಷ್ಟನ್ನು ನವೀಕರಿಸಬಹುದಾದ ಇಂಧನ ಮೂಲದಿಂದ ಪೂರೈಸುವುದಾಗಿ ಹೇಳಿದೆ.

ಕಳೆದ ವಾರ ಭಾರತಕ್ಕೆ ಬಂದಿದ್ದ ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್ ಸಹ ಸೌರವಿದ್ಯುತ್ಗಾಗಿ ₹ 7,304 ಕೋಟಿ ನೆರವು ನೀಡುವುದಾಗಿ ಘೋಷಿಸಿದ್ದಾರೆ. ಸೌರಶಕ್ತಿ ಮೂಲಕ ಗ್ರಾಮೀಣ ಭಾಗದ ಬಡ ಜನರ ಜೀವನ ಬದಲಾಯಿಸಬೇಕು ಎಂಬ ಕನಸು ಹೊತ್ತು, ತಮ್ಮ ‘ಸೆಲ್ಕೊ’ ಸಂಸ್ಥೆ ಮೂಲಕ ಎರಡು ದಶಕಗಳಿಂದ ಸುಸ್ಥಿರ ಅಭಿವೃದ್ಧಿಯನ್ನು ಪ್ರತಿಪಾದಿಸುತ್ತಿರುವ ಹರೀಶ್ ಹಂದೆ ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.

* ಪ್ಯಾರಿಸ್ ಶೃಂಗಸಭೆಗೆ ಮುನ್ನುಡಿಯಾಗಿ ಭಾರತ ತನ್ನ ಇಂಗಾಲ ಕಡಿತದ ಪ್ರಮಾಣದ ಬಗ್ಗೆ ಈಗಾಗಲೇ ದಾಖಲೆ ಸಲ್ಲಿಸಿದೆ. ಸೌರವಿದ್ಯುತ್ ಉತ್ಪಾದನೆ ಹೆಚ್ಚಿಸಲು ಕೋಟಿಗಟ್ಟಲೆ ವಿದೇಶಿ ಹಣವೂ ಹರಿದು ಬರುತ್ತಿದೆ. ಇಂತಹ ಕ್ರಮಗಳಿಂದ ಬದಲಾವಣೆ ಸಾಧ್ಯವೇ?
ಖಂಡಿತ ಇಲ್ಲ. ಜರ್ಮನಿಯೋ, ಅಮೆರಿಕವೋ ನೀಡುವ ನೆರವು ಬೃಹತ್ ಪ್ರಮಾಣದಲ್ಲಿ ಸೌರ ವಿದ್ಯುತ್ ಉತ್ಪಾದನೆಗೆ ನೆರವು ನೀಡುವಂಥದ್ದು. ನಮಗೆ ನಿಜವಾಗಿಯೂ ಬೇಕಾಗಿರುವುದು ವಿಕೇಂದ್ರೀಕರಣ. ನಮ್ಮ ಜನಸಂಖ್ಯೆಯಲ್ಲಿ ಶೇ 70ರಷ್ಟು ಜನ ಇರುವುದು ಹಳ್ಳಿಗಳಲ್ಲಿ. ಸೌರಶಕ್ತಿಯಿಂದ ಆ ಜನರಿಗೆ ಜೀವನೋಪಾಯ ಕಲ್ಪಿಸುವ ಮಾರ್ಗಗಳನ್ನು ಹುಡುಕಬೇಕಿದೆ. ಸೌರಶಕ್ತಿಯಿಂದಲೇ ಕೆಲಸ ನಿರ್ವಹಿಸುವ ಹೊಲಿಗೆ ಯಂತ್ರ, ರೇಷ್ಮೆ ನೂಲು ತೆಗೆಯುವ ಯಂತ್ರ, ನೇಯುವ ಯಂತ್ರ, ಲೇತ್ ಮಷೀನ್, ಮೆಕ್ಯಾನಿಕ್ ಸಲಕರಣೆಗಳನ್ನು ನಾವು ತಯಾರಿಸಬೇಕು. ಈ ನಿಟ್ಟಿನಲ್ಲಿ ಅನ್ವೇಷಣೆ, ಸಂಶೋಧನೆಗಳು ನಡೆಯಬೇಕಿದೆ. ಆ ಮೂಲಕ ನಾವು ಬಡರಾಷ್ಟ್ರಗಳಿಗೆ ಮಾದರಿಯಾಗಬಹುದು. ಸಿರಿವಂತ ದೇಶಗಳಿಗೆ ಸವಾಲು ಹಾಕಬಹುದು.

* ಈ ಬಗ್ಗೆ ಮತ್ತಷ್ಟು ವಿವರಿಸುವಿರಾ?
ಹವಾಮಾನ ಶೃಂಗಸಭೆ ಕುರಿತ ನಮ್ಮ ಅಪ್ರೋಚ್ ಬದಲಾಗಬೇಕು. ನಾವೀಗ ರಕ್ಷಣಾತ್ಮಕವಾಗಿ ಮುಂದಡಿ ಇಡುತ್ತಿದ್ದೇವೆ. ಅಮೆರಿಕ ಮೊದಲು ಮಾಲಿನ್ಯದ ಪ್ರಮಾಣ ಕಡಿಮೆ ಮಾಡಲಿ ಎನ್ನುತ್ತಿದ್ದೇವೆ. ಇಲ್ಲವೇ ಧಾರ್ಷ್ಟ್ಯದಿಂದ ನಾವಿಷ್ಟು ಮಾಲಿನ್ಯ ಕಡಿಮೆ ಮಾಡುತ್ತೇವೆ, ನೀವೆಷ್ಟು ಮಾಡುತ್ತೀರಿ ಎಂದು ಕೇಳುತ್ತಿದ್ದೇವೆ. ಈ ನಾವು ಮತ್ತು ನೀವು ನಡುವೆ ಭೂಮಿಗೆ ಹಾನಿಯಾಗುತ್ತಿದೆ. ಇಲ್ಲಿ ನಿಜವಾಗಿಯೂ ಸಂಘರ್ಷ ಇರುವುದು ಬಡವರು ಮತ್ತು ಶ್ರೀಮಂತರ ನಡುವೆ.

ನಮ್ಮ ತಲಾ ಇಂಗಾಲ ಹೊರಸೂಸುವಿಕೆ ಪ್ರಮಾಣ ಕಡಿಮೆ ಇದೆ ಎಂದು ಬೀಗುತ್ತೇವೆ. ಆದರೆ, ಗುಡಗಾಂವ್ನ ಸಿರಿವಂತ ವ್ಯಕ್ತಿಯೊಬ್ಬ ಸರಾಸರಿ ಯುರೋಪಿಯನ್ ವ್ಯಕ್ತಿಯಷ್ಟೇ ಇಂಗಾಲ ಮಾಲಿನ್ಯಕ್ಕೆ ಕೊಡುಗೆ ನೀಡುತ್ತಾನೆ. ಆದರೆ, ಆತ ಭಾರತೀಯ ಎನ್ನುವ ಕಾರಣಕ್ಕೆ ನಾವು ದಂಡ ವಿಧಿಸುತ್ತಿಲ್ಲ. ಭಾರತ ಮತ್ತು ಚೀನಾದ ಎಲ್ಲರೂ ಅಮೆರಿಕನ್ನರ ಜೀವನಶೈಲಿ ಅನುಸರಿಸಿದಲ್ಲಿ ನಮಗೆ ಒಂದಲ್ಲ ಎಂಟು ಭೂಮಿಗಳು ಬೇಕಾಗುತ್ತವೆ.

ಗಡಿಗಳೆಲ್ಲ ನಾವು ಮನುಷ್ಯರು ಮಾಡಿಕೊಂಡಿದ್ದು ತಾನೇ. ಒಂದು ವೇಳೆ ಅಮೆರಿಕ ಮತ್ತು ಭಾರತ ಒಂದೇ ದೇಶ ಎಂದು ಪರಿಗಣಿಸಿದಲ್ಲಿ ನಮ್ಮ ಇಂಗಾಲ ಹೊರಸೂಸುವಿಕೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿಬಿಡುತ್ತದೆ. ಒಂದೊಮ್ಮೆ ಬ್ರೆಜಿಲ್ ದೇಶ ಅಮೆಜಾನ್ ಅರಣ್ಯ ಕಡಿಯುತ್ತೇನೆ ಎಂದು ಹೊರಟರೆ ನಾವು ಕೈಕಟ್ಟಿ ಕೂರಲು ಸಾಧ್ಯವೇ? ಅಮೆಜಾನ್ ಕಾಡು ನಾಶವಾದರೆ ನಮ್ಮ ಮುಂಗಾರು ಮಾರುತಗಳ ಮೇಲೆ ಅದು ಪರಿಣಾಮ ಬೀರುತ್ತದೆ. ಪ್ಯಾರಿಸ್ನಲ್ಲಿ ದೇಶ, ದೇಶಗಳ ನಡುವೆ ನಡೆಸುವ ಚರ್ಚೆ ಅರ್ಥಹೀನ. ಒಟ್ಟಾರೆ ಚರ್ಚೆಯ ದಿಕ್ಕು ಬದಲಾಗಬೇಕು. ಭೂಮಿಯನ್ನು ಉಳಿಸಿಕೊಳ್ಳಲು ಜಗತ್ತಿನ ಸಿರಿವಂತರು ಮತ್ತು ಬಡವರ ನಡುವಣ ಒಪ್ಪಂದವಾಗಿ ಇದು ಬದಲಾಗಬೇಕು.

ಆದ್ದರಿಂದಲೇ ಬಡರಾಷ್ಟ್ರಗಳಿಗೆ ನಾವು ಮಾದರಿಯಾಗಬೇಕು ಎನ್ನುತ್ತಿದ್ದೇನೆ. ಆಫ್ರಿಕಾದ ದೇಶಗಳು ಅಭಿವೃದ್ಧಿಯಲ್ಲಿ ನಮಗಿಂತ ಸಾಕಷ್ಟು ಹಿಂದೆ ಇವೆ. ಬೃಹತ್ ಸೌರ ವಿದ್ಯುತ್ ಫಲಕಗಳ ವಿಚಾರ ಬಂದಾಗ ಅವು ಜರ್ಮನಿಯಂತಹ ದೇಶಗಳ ಕಡೆ ನೋಡುತ್ತವೆ. ಆದರೆ, ಸೌರವಿದ್ಯುತ್ನಿಂದ ನಡೆಯುವ ಹೊಲಿಗೆ ಯಂತ್ರ, ರೇಷ್ಮೆ ನೇಯುವ ಯಂತ್ರ, ಪಾಠೋಪಕರಣಗಳನ್ನು ನಾವು ತಯಾರಿಸಲು ಆರಂಭಿಸಿದರೆ ಗ್ರಾಮೀಣ ಭಾಗದಲ್ಲಿ ಜೀವನೋಪಾಯವನ್ನು, ಸಣ್ಣ ಉದ್ಯಮಿಗಳನ್ನು ನಾವು ಸೃಷ್ಟಿಸುತ್ತೇವೆ. ಜೀವನೋಪಾಯದ ಪ್ರಶ್ನೆ ಬಂದಾಗ ಆಫ್ರಿಕಾ ಹಾಗೂ ಆಗ್ನೇಯ ಏಷ್ಯಾದ ದೇಶಗಳು ನಮ್ಮ ಕಡೆ ನೋಡಲು ಆರಂಭಿಸುತ್ತವೆ, ಪರಿಹಾರಕ್ಕೆ ನಮ್ಮನ್ನು ಹುಡುಕಿಕೊಂಡು ಬರುತ್ತವೆ. ಭಾರತ ‘ಸೂಪರ್ ಪವರ್ ಆಫ್ ಸಲ್ಯೂಷನ್’ ಆಗಬೇಕು.

ಸೌರ ವಿದ್ಯುತ್ ಎಂಬುದು ನಿತ್ಯಜೀವನದ ಭಾಗವಾಗಬೇಕು. ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ಶಿಕ್ಷಣ, ಮಾನವ ಸಂಪನ್ಮೂಲ, ಆರ್ಥಿಕ ವ್ಯವಸ್ಥೆ ಹಾಗೂ ಸಂಶೋಧನೆಯ ಮಾರ್ಗ ನಮ್ಮದಾಗಬೇಕು. ಆಗ ನಾವು ಸಿರಿವಂತ ದೇಶಗಳಿಗೆ ‘ನೋಡಿ, ನಾವು 1.5 ಕೋಟಿ ಜನರಿಗೆ ಮಾದರಿ ಹಾಕಿಕೊಟ್ಟಿದ್ದೇವೆ. ನೀವೇನು ಮಾಡುವಿರಿ’ ಎಂದು ಕೇಳಬಹುದು.

* ಮಳೆ ನೀರು ಸಂಗ್ರಹದ ವಿಚಾರ ಬಂದಾಗ ಜನರಲ್ಲಿ ಹಾಗೂ ಸರ್ಕಾರದ ನೀತಿ ನಿರೂಪಣೆಯಲ್ಲೂ ಬದಲಾವಣೆ ಕಾಣುತ್ತಿದೆ. ಆದರೆ, ಸೌರಶಕ್ತಿ ವಿಚಾರಕ್ಕೆ ಬಂದಾಗ ಅಂತಹ ಅರಿವು ಕಾಣುತ್ತಿಲ್ಲ ಏಕೆ?
ಅದು ನಿಜ. ಸೌರಶಕ್ತಿ ಬಳಕೆ ವ್ಯಾಪಕಗೊಳಿಸಲು ಇರುವ ದೊಡ್ಡ ತೊಂದರೆ ನಮ್ಮಲ್ಲಿ ಕಟ್ಟಡ ಸಂಹಿತೆ ಇಲ್ಲದಿರುವುದು. ಮುಂದುವರಿದ ದೇಶಗಳಲ್ಲಿ ರಸ್ತೆ ಸಂಪರ್ಕ ಚೆನ್ನಾಗಿದೆ. ನಗರದ ಹೊರವಲಯದಲ್ಲಿ ವಾಸಿಸುವವರು ಗೃಹಬಳಕೆಗೆ ಸೌರಶಕ್ತಿ ಬಳಸಿಕೊಳ್ಳುತ್ತಾರೆ. ಮನೆಯ ಮೇಲೆ ಸೌರಫಲಕ ಅಳವಡಿಸಿ ಸೌರಶಕ್ತಿಯಿಂದಲೇ ನನ್ನ ಮನೆಯ ಬಹುತೇಕ ಅಗತ್ಯ ಪೂರೈಸಿಕೊಳ್ಳುತ್ತೇನೆ ಎಂದುಕೊಳ್ಳೋಣ. ನನ್ನ ಪಕ್ಕದ ಸೈಟ್ನವರು ಬಹುಮಹಡಿ ಕಟ್ಟಡ ಕಟ್ಟಿದಲ್ಲಿ ನನ್ನ ಮನೆಯ ಮೇಲೆ ನೆರಳು ಆವರಿಸುತ್ತದೆ. ಬೆಂಗಳೂರಿನಂತಹ ನಗರಗಳಲ್ಲಿ ಇದು ಪ್ರಾಯೋಗಿಕವಾಗಿ ಸಾಧ್ಯವಾಗುವುದಿಲ್ಲ. ಹುಬ್ಬಳ್ಳಿ–ಧಾರವಾಡ, ಉಡುಪಿ, ಕಲಬುರ್ಗಿ ಇತ್ಯಾದಿ ಸಣ್ಣ ನಗರಗಳಲ್ಲಿ ಸೌರಶಕ್ತಿ ಬಳಕೆಗೆ ಒತ್ತು ನೀಡಬಹುದು.

* ನೀವು ಐಐಟಿ ಪದವೀಧರರು. ಅನ್ವೇಷಣೆ ಹಾಗೂ ಸಂಶೋಧನೆ ಹೆಚ್ಚಬೇಕು ಎನ್ನುತ್ತಿದ್ದೀರಿ. ಈ ನಿಟ್ಟಿನಲ್ಲಿ ನಮ್ಮ ಐಐಟಿಗಳು ಹಾಗೂ ಐಐಎಸ್ಸಿಯಂತಹ ಸಂಸ್ಥೆಗಳು ಮುಂದಾಳತ್ವ ವಹಿಸಬೇಕೆ?
ಐಐಟಿ, ಐಐಎಸ್ಸಿಯಲ್ಲಿ ಭಾರಿ ಪ್ರಮಾಣದ ಹಣವಿದೆ. ಆದರೆ, ಐಐಟಿ ಪಠ್ಯಕ್ರಮದಲ್ಲಿ ಸಂಶೋಧನೆಗೆ ಒತ್ತು ಕಡಿಮೆ. ನಾನೊಬ್ಬ ಎಂಜಿನಿಯರ್ ಆದರೆ, ಥರ್ಮೊಡೈನಮಿಕ್ಸ್ ಸಮೀಕರಣ ಹಾಕಿ ಕಾರಿನ ಎಂಜಿನ್ ಹೇಗೆ ಕೆಲಸ ಮಾಡುತ್ತದೆ ಎಂದು ತೋರಿಸಿಕೊಡಬಲ್ಲೆ. ಆದರೆ, ಕಾರಿನ ಬಾನೆಟ್ ಎತ್ತಿದಲ್ಲಿ ಅದರ ಎಂಜಿನ್ನಲ್ಲಿ ಯಾವುದು ಎಲ್ಲಿರುತ್ತದೆ ಎಂಬುದು ತಿಳಿದಿರುವುದಿಲ್ಲ. ಐಐಟಿ ಕ್ಯಾಂಪಸ್ನ ಹೊರಗೆ ನೂರು ಮೀಟರ್ ದೂರದಲ್ಲಿ ನೀರು ಬರುವುದಿಲ್ಲ ಎಂದರೆ ಅದಕ್ಕೆ ಪರಿಹಾರ ಹುಡುಕಲು ನಮಗೆ ಬರುವುದಿಲ್ಲ. ಐಐಟಿಯಿಂದ ಹೊರಬಂದವರು ಲಕ್ಷಗಟ್ಟಲೇ ಸಂಬಳ ಪಡೆಯುತ್ತಾರೆ. 2-3 ಮನೆ ಕಟ್ಟಿಸಿಕೊಂಡು ವೈಯಕ್ತಿಕ ಸಂಪತ್ತು ಗಳಿಸಿಕೊಳ್ಳಬಹುದು. ಆದರೆ, ದೇಶಕ್ಕೆ ಏನು ಮಾಡುತ್ತೀರಿ ಎಂದು ನಾನು ಕೇಳುತ್ತೇನೆ.

ಖರಗ್ಪುರದಲ್ಲಿ ಓದುವಾಗ ಅರವಿಂದ್ ಕೇಜ್ರಿವಾಲ್ ಹಾಗೂ ಸುಂದರ್ ಪಿಚೈ ಇಬ್ಬರೂ ನನ್ನ ಹಾಸ್ಟೆಲ್ಮೇಟ್ಗಳಾಗಿದ್ದರು. ಕೇಜ್ರಿವಾಲ್ ಒಳ್ಳೆಯ ಸ್ನೇಹಿತರೂ ಹೌದು. ಅವರು ಪ್ರತಿಭಟನೆಯ ಮಾರ್ಗ ಹಿಡಿದಿದ್ದಾರೆ. ಪ್ರತಿಭಟನೆ ಒಳ್ಳೆಯದೇ. ಆದರೆ, ಜನರಿಗೆ ಪರಿಹಾರವನ್ನೂ ನೀಡಿ ಎಂದು ನಾನು ಹೇಳ್ತೇನೆ. ಪಿಚೈ ಗೂಗಲ್ ಮುಖ್ಯಸ್ಥರಾಗಿ ಕೀರ್ತಿ ಶಿಖರ ಏರಿದ್ದಾರೆ. ಗುಡ್, ಆದರೆ, ಅವರ ಕಂಪೆನಿಯಿಂದ ನನ್ನ ದೇಶದ 70 ಕೋಟಿ ಬಡವರ ಜೀವನ ಸುಧಾರಿಸುತ್ತದೆಯೇ? ಇವರ ಜೀವನಮಟ್ಟ ಸುಧಾರಿಸದೇ ನಮ್ಮದು ಶೇ 7ರ ವೃದ್ಧಿದರ ಎಂದು ಕೊಚ್ಚಿಕೊಳ್ಳುವುದರಲ್ಲಿ ಏನೂ ಅರ್ಥವಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲೇ ಬದಲಾವಣೆ ಬರಬೇಕಿದೆ. ಪಠ್ಯಕ್ರಮದಲ್ಲಿ ನವೀಕರಿಸಬಹುದಾದ ಇಂಧನದ ಕುರಿತು ಪಾಠ ಅಳವಡಿಸಿದಲ್ಲಿ ಅದನ್ನು ಬಾಯಿಪಾಠ ಮಾಡಿ ಅಂಕ ಗಳಿಸಿಬಿಡುತ್ತಾರೆ. ಈ ನಿಟ್ಟಿನಲ್ಲಿ ಪ್ರಾಯೋಗಿಕ ತರಬೇತಿಗಳು ಅಗತ್ಯ. ಐಟಿಐಗಳಲ್ಲಿ, ರುಡ್ಸೆಟ್ಗಳಲ್ಲಿ ಇತ್ತೀಚೆಗೆ ಮೊಬೈಲ್ ರಿಪೇರಿ ತರಬೇತಿ ಆರಂಭಿಸಿದಂತೆ ಸೌರವಿದ್ಯುತ್ ಉಪಕರಣಗಳ ರಿಪೇರಿಗೂ ತರಬೇತಿ ಆರಂಭಿಸಬೇಕು. ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಹಾಗೂ ಸಮಸ್ಯೆಗೆ ಪರಿಹಾರ ಹುಡುಕುವ ಮನೋಭಾವ ಬೆಳೆಸಬೇಕು. ವಿದ್ಯಾರ್ಥಿಗಳು ಪ್ರಶ್ನಿಸಿದಲ್ಲಿ, ನೀವು ಹೇಳಿದ್ದು ತಪ್ಪು ಎಂದಲ್ಲಿ ಅದನ್ನು ಒಪ್ಪಿಕೊಳ್ಳುವ ಮನೋಭಾವ ಶಿಕ್ಷಕರಲ್ಲೂ ಬರಬೇಕು.

* ಸೌರವಿದ್ಯುತ್ ಬಳಕೆ ಯಾವ ರಾಜ್ಯದಲ್ಲಿ ಹೆಚ್ಚಿದೆ. ಇದರ ಬಳಕೆಯಲ್ಲಿ ಯಾವ ದೇಶ ಮುಂಚೂಣಿಯಲ್ಲಿದೆ?
ಒಡಿಶಾದಲ್ಲಿ ಈ ಬಗ್ಗೆ ಸಾಕಷ್ಟು ಜಾಗೃತಿ ಮೂಡಿದೆ. ಅಲ್ಲಿನ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನವೀಕರಿಸಬಹುದಾದ ಇಂಧನ ಕುರಿತು ಅಪಾರ ಆಸಕ್ತಿ ಹೊಂದಿದ್ದಾರೆ. ಉತ್ತರ ಪ್ರದೇಶದಲ್ಲಿ ಸ್ವಲ್ಪಮಟ್ಟಿನ ಜಾಗೃತಿ ಮೂಡಿದೆ.

ಹಾಗೆ ನೋಡಿದಲ್ಲಿ ನಮ್ಮ ಗ್ರಾಮೀಣ ಭಾಗದಲ್ಲಿಯೂ ಸೌರಶಕ್ತಿ ಬಳಕೆ ಹೆಚ್ಚುತ್ತಿದೆ. ಅಲ್ಲದೇ ಜನರಿಗೆ ಅನುಕೂಲಕರವಾಗುವಂತೆ ಸೌರಶಕ್ತಿಯಿಂದ ಬಳಸಬಹುದಾದ ಫ್ಯಾನ್, ಟಿ.ವಿ, ಮಿಕ್ಸರ್ ಇತ್ಯಾದಿಗಳ ತಯಾರಿಕೆಗೆ ಉತ್ತೇಜನ ನೀಡಬೇಕಿದೆ. ಈಗ ಸೌರಶಕ್ತಿ ಯಂತ್ರಗಳಿದ್ದರೂ ಅವು ಅಷ್ಟೊಂದು ದಕ್ಷವಾಗಿಲ್ಲ. ದೇಶಗಳ ಪೈಕಿ ಸೌರಶಕ್ತಿ ಬಳಕೆಯಲ್ಲಿ ಬಾಂಗ್ಲಾದೇಶ ಅದ್ಭುತವಾದ ಪ್ರಗತಿ ಸಾಧಿಸಿದೆ. ಈ ವಿಚಾರದಲ್ಲಿ ಶ್ರೀಲಂಕಾ ಮತ್ತು ವಿಯೆಟ್ನಾಂನಂತಹ ದೇಶಗಳು ನಮಗಿಂತ ಮುಂದಿವೆ. ಕೇವಲ ಸೌರವಿದ್ಯುತ್ ಬಗ್ಗೆ ಹೇಳುತ್ತಿಲ್ಲ. ಸಂಜೆ 5.30ರ ಹೊತ್ತಿಗೆ ಕಚೇರಿಗಳು ಬಿಡುವ ಹೊತ್ತಿಗೆ ಶ್ರೀಲಂಕಾಕ್ಕೆ ಹೋಗಿ ನೋಡಿ. ಎಷ್ಟೇ ಟ್ರಾಫಿಕ್ ಜಾಮ್ ಆದರೂ ನಿಮಗೆ ಹಾರ್ನ್ ಕೇಳಿಸುವುದಿಲ್ಲ.

ವಿಯೆಟ್ನಾಂನಲ್ಲಿ ಮತ್ತೊಂದು ಅಚ್ಚರಿಯ ಅನುಭವವಾಯಿತು. ಸೌರವಿದ್ಯುತ್ ಯೋಜನೆ ಅಳವಡಿಸಲು ಅಲ್ಲಿನ ಕುಗ್ರಾಮವೊಂದಕ್ಕೆ ತೆರಳಿದ್ದೆವು. ರಾತ್ರಿ ಒಂದು ಗಂಟೆಯ ಹೊತ್ತಿಗೆ ರಸ್ತೆ ಬದಿಯ ಢಾಬಾದಲ್ಲಿ ಊಟಕ್ಕೆ ನಿಂತೆವು. ಢಾಬಾದಲ್ಲಿ 20-25ರ ವಯೋಮಾನದ ಐವರು ಯುವತಿಯರು ಕೆಲಸ ಮಾಡುತ್ತಿದ್ದರು. ಒಬ್ಬನೇ ಪುರುಷನೂ ಅಲ್ಲಿರಲಿಲ್ಲ. ಮಹಿಳೆಯರೂ ಢಾಬಾದಲ್ಲಿ ಕೆಲಸ ಮಾಡುತ್ತಾರೆಯೇ ಎಂದು ಪ್ರಶ್ನಿಸಿದೆ. ಯಾಕೆ ಮಾಡಬಾರದೇ ಎಂಬ ಮರುಪ್ರಶ್ನೆ ಬಂತು. ಅಲ್ಲ, ಸುರಕ್ಷತೆಯ ವಿಚಾರ ಅಂದೆ. ಸುರಕ್ಷತೆ ಏತಕ್ಕೆ ಎಂದು ಅಲ್ಲಿನ ಸ್ನೇಹಿತರು ಪ್ರಶ್ನಿಸಿದರು. ನಾನು ಮತ್ತೆ ಮಾತಾಡಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.