ಸೋಮವಾರ, 2 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳೆಯರ ಏಷ್ಯಾ ಕಪ್ ಟಿ20 ಕ್ರಿಕೆಟ್: ಹರ್ಮನ್ ಬಳಗಕ್ಕೆ ಪಾಕ್ ಸವಾಲು

ಮಹಿಳೆಯರ ಏಷ್ಯಾ ಕಪ್ ಟಿ20 ಕ್ರಿಕೆಟ್: ಹಾಲಿ ಚಾಂಪಿಯನ್ ಭಾರತಕ್ಕೆ ಗೆಲುವಿನ ವಿಶ್ವಾಸ
Published 18 ಜುಲೈ 2024, 21:53 IST
Last Updated 18 ಜುಲೈ 2024, 21:53 IST
ಅಕ್ಷರ ಗಾತ್ರ

ದಂಬುಲಾ: ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡವು ಶುಕ್ರವಾರ ಇಲ್ಲಿ ಆರಂಭವಾಗಲಿರುವ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಬದ್ಧ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. 

ಈ ಟೂರ್ನಿಯು ಏಷ್ಯಾದ ತಂಡಗಳಿಗೆ  ಇದೇ ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯ ಪೂರ್ವಭಾವಿ ಸಿದ್ಧತೆಯ ವೇದಿಕೆಯೂ ಹೌದು. ಆದ್ದರಿಂದ ಹೆಚ್ಚು ಮಹತ್ವ ಪಡೆದುಕೊಂಡಿದೆ. 

ಹಾಲಿ ಚಾಂಪಿಯನ್ ಭಾರತ ತಂಡವು ಒಟ್ಟು ನಾಲ್ಕು ಟೂರ್ನಿಗಳ ಪೈಕಿ 3 ಸಲ ಚಾಂಪಿಯನ್ ಆಗಿದೆ. ಏಕದಿನ ಮಾದರಿಯಲ್ಲಿಯೂ ಎಲ್ಲ  ನಾಲ್ಕು ಸಲವೂ ಪ್ರಶಸ್ತಿ ಗೆದ್ದ ಹೆಗ್ಗಳಿಕೆ ಭಾರತ ತಂಡದ್ದು. ಆದ್ದರಿಂದ ಈ ಬಾರಿಯೂ ಪ್ರಶಸ್ತಿ ಜಯಿಸುವ ನೆಚ್ಚಿನ ತಂಡವಾಗಿಯೇ ಕಣಕ್ಕಿಳಿಯುತ್ತಿದೆ. 

ಭಾರತದ ವನಿತೆಯರ ತಂಡವು ಏಷ್ಯಾ ಕಪ್ ಟಿ20 ಟೂರ್ನಿಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವಾಗಿದೆ.  ಒಟ್ಟು 20 ಪಂದ್ಯಗಳಲ್ಲಿ 17ರಲ್ಲಿ ಜಯ ಸಾಧಿದೆ.  ಎರಡು ವರ್ಷಗಳ ಹಿಂದಿನ ಟೂರ್ನಿಯ ಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಜಯಿಸಿತ್ತು. 

ಟಿ20 ಮಾದರಿಯಲ್ಲಿ ಪಾಕಿಸ್ತಾನ ತಂಡದ ವಿರುದ್ಧವೂ  ಗೆಲುವಿನ ಉತ್ತಮ ದಾಖಲೆಯೂ ಭಾರತಕ್ಕಿದೆ. ಉಭಯ ತಂಡಗಳು 14  ಪಂದ್ಯಗಳಲ್ಲಿ ಮುಖಾಮುಖಿಯಾಗಿರುವ ಪಂದ್ಯಗಳಲ್ಲಿ 11ರಲ್ಲಿ ಭಾರತ ಜಯಿಸಿದೆ. 3ರಲ್ಲಿ ಸೋತಿದೆ. ಈ ಟೂರ್ನಿಯಲ್ಲಿ ಎ ಗುಂಪಿನಲ್ಲಿ ಎರಡೂ ತಂಡಗಳು ಆಡುತ್ತಿವೆ. 

ಈಚೆಗೆ ಭಾರತ ತಂಡವು ದಕ್ಷಿಣ ಆಫ್ರಿಕಾ ಎದುರು ನಡೆದಿದ್ದ 3  ಟಿ20 ಸರಣಿಯಲ್ಲಿ 1–1ರಿಂದ ಸಮಬಲ ಸಾಧಿಸಿತ್ತು. ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. 

ಕಳೆದ ಮೇ ತಿಂಗಳಿನಲ್ಲಿ ಪಾಕಿಸ್ತಾನ ತಂಡವು 0–3ರಿಂದ ಇಂಗ್ಲೆಂಡ್ ಎದುರು ಸೋತಿತ್ತು. ಈ ಋತುವಿನಲ್ಲಿ ಹೆಚ್ಚು ಪಂದ್ಯಗಳನ್ನು ಆಡುವ ಅವಕಾಶವೂ ತಂಡಕ್ಕೆ ಒದಗಿಬಂದಿಲ್ಲ. ಆದ್ದರಿಂದ ಪಾಕ್ ಆಟಗಾರ್ತಿಯರಲ್ಲಿ ಆತ್ಮವಿಶ್ವಾಸದ ಕೊರತೆ ಕಾಣುತ್ತಿದೆ. 

ಆದರೆ ಭಾರತ ತಂಡದ ಆಟಗಾರ್ತಿಯರು ಭರ್ತಿ ಆತ್ಮವಿಶ್ವಾಸದಲ್ಲಿದ್ದಾರೆ. ಸ್ಮೃತಿ ಮಂದಾನ, ಶಫಾಲಿ ವರ್ಮಾ ಅವರಿಗೆ ಬಿರುಸಿನ ಆರಂಭ ನೀಡುವ ಲಯ ಇದೆ. ಆಲ್‌ರೌಂಡರ್‌ ಪೂಜಾ ವಸ್ತ್ರಕರ್, ರಾಧಾ ಯಾದವ್, ದೀಪ್ತಿ ಶರ್ಮಾ ಮತ್ತು ಕನ್ನಡದ ಹುಡುಗಿ ಶ್ರೇಯಾಂಕಾ ಪಾಟೀಲ ಅವರು ಪಂದ್ಯದ ಫಲಿತಾಂಶವನ್ನು ತಮ್ಮ ತಂಡದತ್ತ ಒಲಿಸಿಕೊಳ್ಳುವ ಸಮರ್ಥರಾಗಿದ್ದಾರೆ.

ನಿದಾ ಧಾರ್ ನಾಯಕತ್ವದ ಪಾಕ್ ತಂಡದಲ್ಲಿರುವ ಇರಂ ಜಾವೇದ್, ಒಮೈಮಾ ಸೊಹೈಲ್, ಸಯಿದಾ ಅರೂಬ್ ಶಾ ಅವರು ಕಳೆದ ಒಂದು ವರ್ಷದಲ್ಲಿ ಯಾವುದೇ ಪಂದ್ಯಗಳಲ್ಲಿ ಆಡಿಲ್ಲ. ತಸ್ಮೀಯಾ ಪದಾರ್ಪಣೆ ಮಾಡಲಿದ್ದಾರೆ. 

ಪಾಕಿಸ್ತಾನ ತಂಡದ ನಿದಾ ಧಾರ್  –ಎಎಫ್‌ಪಿ ಚಿತ್ರ
ಪಾಕಿಸ್ತಾನ ತಂಡದ ನಿದಾ ಧಾರ್  –ಎಎಫ್‌ಪಿ ಚಿತ್ರ

ತಂಡಗಳು: ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ) ಸ್ಮೃತಿ ಮಂದಾನ ಶಫಾಲಿ ವರ್ಮಾ ಜಿಮಿಮಾ ರಾಡ್ರಿಗಸ್ ರಿಚಾ ಘೋಷ್ (ವಿಕೆಟ್‌ಕೀಪರ್) ಉಮಾ ಚೆಟ್ರಿ (ವಿಕೆಟ್‌ಕೀಪರ್) ಪೂಜಾ ವಸ್ತ್ರಕರ್ ದೀಪ್ತಿ ಶರ್ಮಾ ಅರುಂಧತಿ ರೆಡ್ಡಿ ರೇಣುಕಾ ಸಿಂಗ್ ಡಿ. ಹೇಮಲತಾ ಆಶಾ ಶೋಭನಾ ರಾಧಾ ಯಾದವ್ ಶ್ರೇಯಾಂಕಾ ಪಾಟೀಲ ಸಜೀವನ್ ಸಜನಾ. 

ಪಾಕಿಸ್ತಾನ: ನಿದಾ ಧಾರ್(ನಾಯಕಿ) ಅಲಿಯಾ ರಿಯಾಜ್ ಡೈನಾ ಬೇಗ್ ಫಾತಿಮಾ ಸನಾ ಗುಲ್ ಫಿರೋಜಾ ಇರಂ ಜಾವೇದ್ ಮುನೀಬಾ ಅಲಿ ನಜೀಹಾ ಅಲ್ವಿ (ವಿಕೆಟ್‌ಕೀಪರ್) ನಶ್ರಾ ಸಂಧು ಒಮೈಮಾ ಸೊಹೇಲ್ ಸಾಧಿಯಾ ಇಕ್ಬಾಲ್ ಸಿದ್ರಾ ಅಮಿನ್ ಸೈಯಿದಾ ಅರೂಬ್ ಶಹಾ ತಸ್ಮಿಯಾ ರುಬಾಬ್ ತುಬಾ ಹಸನ್.

ಪಂದ್ಯ ಆರಂಭ: ರಾತ್ರಿ 7 ನೇರಪ್ರಸಾರ: 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT