ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದುಲೀಪ್‌ ಟ್ರೋಫಿ | 2ನೇ ಸುತ್ತಿನ ಪಂದ್ಯಗಳು: ರಿಂಕು, ಅಯ್ಯರ್‌, ಸುಂದರ್ ಮೇಲೆ ಗಮನ

Published : 11 ಸೆಪ್ಟೆಂಬರ್ 2024, 14:23 IST
Last Updated : 11 ಸೆಪ್ಟೆಂಬರ್ 2024, 14:23 IST
ಫಾಲೋ ಮಾಡಿ
Comments

ಅನಂತಪುರ: ಭಾರತ ಕ್ರಿಕೆಟ್‌ ತಂಡದೊಳಗೆ ಸ್ಥಾನ ಪಡೆಯಲು ಯತ್ನಿಸುತ್ತಿರುವ ರಿಂಕು ಸಿಂಗ್, ರಾಷ್ಟ್ರೀಯ ಆಯ್ಕೆಗಾರರಿಂದ ಅವಗಣನೆಗೆ ಒಳಗಾದ ಕೆಲವು ಅನುಭವಿ ಆಟಗಾರರು, ಗುರುವಾರ ಆರಂಭವಾಗುವ ದುಲೀಪ್‌ ಟ್ರೋಫಿ ಎರಡನೇ ಸುತ್ತಿನ ಪಂದ್ಯಗಳಲ್ಲಿ ಗಮನ ಸೆಳೆಯುವಂಥ ಪ್ರದರ್ಶನದ ನೀಡುವ ಗುರಿಯಲ್ಲಿದ್ದಾರೆ.

ದುಲೀಪ್ ಟ್ರೋಫಿ ಟೂರ್ನಿಯ ಮೊದಲ ಸುತ್ತಿನಲ್ಲಿ ಆಡಿದ್ದ ತಾರಾ ವರ್ಚಸ್ಸಿನ ಕೆಲವು ಆಟಗಾರರು, ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿಗೆ ಮುಂಚಿನ ರಾಷ್ಟ್ರೀಯ ಶಿಬಿರಕ್ಕೆ ಹಾಜರಾಗುವ ಕಾರಣ ಈ ಪಂದ್ಯದಲ್ಲಿ ಇನ್ನುಳಿದ ಪ್ರಮುಖ ಆಟಗಾರರ ನಿರ್ವಹಣೆಯ ಮೇಲೆ ಸಹಜವಾಗಿ ಗಮನ ನೆಟ್ಟಿದೆ. ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್‌ ಪಂದ್ಯ ಸೆ. 19ರಂದು ಚೆನ್ನೈನಲ್ಲಿ ಆರಂಭವಾಗಲಿದೆ.

ಹಾಲಿ ರಾಷ್ಟ್ರೀಯ ತಂಡದ ಆಟಗಾರ ಸರ್ಫರಾಜ್ ಖಾನ್ ಮಾತ್ರ ಎರಡನೇ ಸುತ್ತಿನಲ್ಲಿ ಆಡುತ್ತಿದ್ದಾರೆ.

ಪ್ರಮುಖರ ಗೈರಿನಲ್ಲಿ ರಿಂಕು ಸಿಂಗ್ ಪ್ರದರ್ಶನ ಕುತೂಹಲಕ್ಕೆ ಎಡೆಮಾಡಿದೆ. ಮೊದಲದರ್ಜೆ ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆಯ ಹೊರತಾಗಿಯೂ, ಅಚ್ಚರಿಯೆಂಬಂತೆ ಅವರನ್ನು ಈ ಟೂರ್ನಿಯ ಮೊದಲ ಸುತ್ತಿನ ಪಂದ್ಯಕ್ಕೆ ಆಯ್ಕೆ ಮಾಡಿರಲಿಲ್ಲ.

ಶುಭಮನ್ ಗಿಲ್ ರಾಷ್ಟ್ರೀಯ ತಂಡದಲ್ಲಿರುವ ಕಾರಣ, ಕನ್ನಡಿಗ ಬ್ಯಾಟರ್ ಮಯಂಕ್ ಅಗರವಾಲ್ ಅವರು ಭಾರತ ‘ಎ’ ತಂಡಕ್ಕೆ ನಾಯಕರಾಗಿದ್ದಾರೆ. 2022ರ ಮಾರ್ಚ್‌ನಲ್ಲಿ ಕೊನೆಯದಾಗಿ ಟೆಸ್ಟ್‌ ಆಡಿದ್ದ ಮಯಂಕ್, ರಾಷ್ಟ್ರೀಯ ತಂಡಕ್ಕೆ ಮರಳಬೇಕಾದರೆ ರನ್‌ ಹೊಳೆ ಹರಿಸಬೇಕಾಗಿದೆ.

ವೇಗದ ಬೌಲರ್‌ ಪ್ರಸಿದ್ಧ ಕೃಷ್ಣ ಎಡ ತೊಡೆಯ ಗಾಯದ ಪುನಶ್ಚೇತನದಲ್ಲಿದ್ದ ಕಾರಣ ಮೊದಲ ಸುತ್ತಿನ ಪಂದ್ಯ ಕಳೆದುಕೊಂಡಿದ್ದರು. ಅವರೂ ಈಗ ‘ಎ’ ತಂಡದಲ್ಲಿದ್ದಾರೆ. ಆಸ್ಟ್ರೇಲಿಯಾ ಪ್ರವಾಸ ಬಹುದೂರದಲ್ಲೇನೂ ಇರದ ಕಾರಣ ಅವರು ಇಲ್ಲಿ ತೋರುವ ನಿರ್ವಹಣೆ ಗಣನೆಗೆ ಬರಲಿದೆ.

ಪದಾರ್ಪಣೆ ಟೆಸ್ಟ್ ಪಂದ್ಯದಲ್ಲೇ ಯಶಸ್ಸು ಕಂಡಿದ್ದ, ‘ಬಿ’ ತಂಡದ ಆಟಗಾರ ಸರ್ಫರಾಜ್ ಅವರು ಮೊದಲ ಟೆಸ್ಟ್‌ನಲ್ಲಿ ತಮ್ಮ ಸೋದರ ಮುಷೀರ್ ಖಾನ್ ಶತಕದ ಮುಂದೆ ಕಳಾಹೀನರಾಗಿದ್ದರು. ಅವರು 181 ರನ್‌ಗಳು ‘ಎ’ ತಂಡದ ವಿರುದ್ಧ ಅಮೋಘ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಹೀಗಾಗಿ ಸರ್ಫರಾಜ್ ದೊಡ್ಡ ಮೊತ್ತದ ನಿರೀಕ್ಷೆಯಲ್ಲಿದ್ದಾರೆ.

‘ಸಿ’ ತಂಡದಲ್ಲಿರುವ ಎಡಗೈ ಸ್ಪಿನ್ನರ್ ಮಾನವ್ ಸುತಾರ್ ಮತ್ತೊಮ್ಮೆ ಉತ್ತಮ ಪ್ರದರ್ಶನದ ಗುರಿಯಲ್ಲಿದ್ದಾರೆ ಚೊಚ್ಚಲ ಟೆಸ್ಟ್ ಸರಣಿಯಲ್ಲಿ ನಿರಾಶೆ ಅನುಭವಿಸಿದ್ದ ರಜತ್ ಪಾಟೀದಾರ್ ಕೂಡ ದೀರ್ಘ ಮಾದರಿಯಲ್ಲಿ ರನ್ ಹಸಿವು ತೋರಬೇಕಾಗಿದೆ.

ಟೆಸ್ಟ್ ತಂಡದಿಂದ ಹೊರಬಿದ್ದಿರುವ ಶ್ರೇಯಸ್ ಅಯ್ಯರ್ ಭಾರತ ‘ಡಿ’ ತಂಡದ ನಾಯಕರಾಗಿದ್ದು, ಅಮೋಘ ಯಶಸ್ಸು ಮಾತ್ರ ಅವರನ್ನು ರಾಷ್ಟ್ರೀಯ ತಂಡಕ್ಕೆ ಮರಳಲು ದಾರಿ ಮಾಡಿಕೊಡಲಿದೆ. ಇದು ದೇವದತ್ತ ಪಡಿಕ್ಕಲ್, ಸಂಜು ಸಾಮ್ಸನ್ ಅವರಿಗೂ ಅನ್ವಯವಾಗಲಿದೆ.

ಕರ್ನಾಟಕದ ವೇಗಿ ವೈಶಾಖ ವಿಜಯಕುಮಾರ್ ‘ಸಿ’ ತಂಡದಲ್ಲಿದ್ದರೆ, ವಿದ್ವತ್ ಕಾವೇರಪ್ಪ ಅವರೂ ಡಿ ತಂಡದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT