ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

T20 World Cup: ಹೋಪ್ ಸಿಡಿಲಬ್ಬರಕ್ಕೆ ಬಸವಳಿದ ಅಮೆರಿಕ

ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಕ್ಕೆ ಜಯ; ರಸೆಲ್, ಚೇಸ್ ಅಮೋಘ ಬೌಲಿಂಗ್
Published 22 ಜೂನ್ 2024, 11:30 IST
Last Updated 22 ಜೂನ್ 2024, 11:30 IST
ಅಕ್ಷರ ಗಾತ್ರ

ಬ್ರಿಜ್‌ಟೌನ್, ಬಾರ್ಬಡೋಸ್ (ಪಿಟಿಐ): ಎಂಟು ಸಿಕ್ಸರ್ ಸಿಡಿಸಿದ ಶಾಯ್ ಹೋಪ್ ಸಿಡಿಲಬ್ಬರದ ಬ್ಯಾಟಿಂಗ್ ಬಲದಿಂದ ವೆಸ್ಟ್ ಇಂಡೀಸ್ ತಂಡವು ಅಮೆರಿಕ ಎದುರು ಜಯಭೇರಿ ಬಾರಿಸಿತು. 

ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 8ರ ಹಂತದ 2ನೇ ಗುಂಪಿನ  ಪಂದ್ಯದಲ್ಲಿ  ಆತಿಥೇಯ ತಂಡವು 9 ವಿಕೆಟ್‌ಗಳಿಂದ ಜಯಿಸಿತು. 

ಟಾಸ್ ಗೆದ್ದ ವಿಂಡೀಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆ್ಯಂಡ್ರೆ ರಸೆಲ್ (31ಕ್ಕೆ3) ಮತ್ತು ರಾಸ್ಟನ್ ಚೇಸ್ (19ಕ್ಕೆ3) ಅವರಿಬ್ಬರ ಪರಿಣಾಮಕಾರಿ ದಾಳಿಯಿಂದ ಅಮೆರಿಕ ತಂಡವು 128 ರನ್‌ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. 

ಗುರಿ ಬೆನ್ನಟ್ಟಿದ ವಿಂಡೀಸ್ ತಂಡವು ಕೇವಲ 65 ಎಸೆತಗಳಲ್ಲಿ 130 ರನ್ ಗಳಿಸಿ ಜಯಭೇರಿ ಬಾರಿಸಿತು. ಸಿಡಿ ಶಾಯ್ ಹೋಪ್ ಅಮೆರಿಕದ ಬೌಲರ್‌ಗಳನ್ನು ಕಾಡಿದರು. 

ಹೋಪ್ ಮತ್ತು ಜಾನ್ಸನ್ ಚಾರ್ಲ್ಸ್‌ (15; 14ಎ) ಅವರಿಬ್ಬರೂ ಮೊದಲ ವಿಕೆಟ್ ಜೊತೆಯಾಟದಲ್ಲಿ ಏಳು ಓವರ್‌ಗಳಲ್ಲಿ 67 ರನ್ ದಾಖಲಿಸಿದರು. ಹರಮೀತ್ ಸಿಂಗ್ ಬೌಲಿಂಗ್‌ನಲ್ಲಿ ಜಾನ್ಸನ್ ಕ್ಯಾಚ್ ಪಡೆದ ಮಿಲಿಂದ್ ಕುಮಾರ್ ಸಂತಸಪಟ್ಟರು. 

ಆದರೆ ಇದಾದ ನಂತರದ ಆಟದಲ್ಲಿ ಅಮೆರಿಕದವರಿಗೆ ಸಂಭ್ರಮಿಸುವ ಅವಕಾಶವನ್ನು ಹೋಪ್ ಮತ್ತು ಪೂರನ್ ನೀಡಲಿಲ್ಲ. 225ರ ಸ್ಟ್ರೈಕ್‌ರೇಟ್‌ನಲ್ಲಿ 27 ರನ್ ಗಳಿಸಿದ ಪೂರನ್  ಆಟದಲ್ಲಿ  3 ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದರು. 

ಹೋಪ್ ಮತ್ತು ಪೂರನ್ ಮುರಿಯದ ಎರಡನೇ ವಿಕೆಟ್ ಜೊತೆಯಾಟದಲ್ಲಿ 50 ರನ್‌ ಸೇರಿಸಿ, ತಂಡವನ್ನು ಗೆಲುವಿನ ದಡ ಸೇರಿಸಿದರು. 

ಅಮೆರಿಕ ತಂಡದ ಎಡಗೈ ಮಧ್ಯಮವೇಗಿ ಸೌರಭ್ ನೇತ್ರಾವಳ್ಕರ್, ಕನ್ನಡಿಗ, ಸ್ಪಿನ್ನರ್ ನಾಸ್ತುಷ್ ಕೆಂಜಿಗೆ  ಹಾಗೂ ಶ್ಯಾಂಡ್ಲಿ  ಆ್ಯನ್ ಅವರು ದುಬಾರಿಯಾದರು. ಎಂಟರ ಘಟ್ಟದಲ್ಲಿ ವಿಂಡೀಸ್ ತಂಡಕ್ಕೆ ಇದು ಎರಡನೇ ಪಂದ್ಯ ಮತ್ತು ಮೊದಲ ಗೆಲುವು. 

ಸಂಕ್ಷಿಪ್ತ ಸ್ಕೋರು:

ಅಮೆರಿಕ: 19.5 ಓವರ್‌ಗಳಲ್ಲಿ 128 (ಆಂಡ್ರೀಸ್ ಗೌಸ್ 29, ನಿತೀಶ್ ಕುಮಾರ್ 20, ಮಿಲಿಂದ್ ಕುಮಾರ್ 19, ವ್ಯಾನ್ ಶೈಕಾವಿಕ್ 18, ಅಲಿ ಖಾನ್ ಔಟಾಗದೆ 14, ಆ್ಯಂಡ್ರೆ ರಸೆಲ್ 31ಕ್ಕೆ3, ಅಲ್ಝರಿ ಜೋಸೆಫ್ 31ಕ್ಕೆ2, ರೊಸ್ಟನ್ ಚೇಸ್ 19ಕ್ಕೆ3)

ವೆಸ್ಟ್ ಇಂಡೀಸ್: 10.5 ಓವರ್‌ಗಳಲ್ಲಿ 1 ವಿಕೆಟ್‌ಗೆ 130 (ಶಾಯ್ ಹೋಪ್ ಔಟಾಗದೆ 82, ಜಾನ್ಸನ್ ಚಾರ್ಲ್ಸ್ 15, ನಿಕೊಲಸ್ ಪೂರನ್ ಔಟಾಗದೆ 27, ಹರಮೀತ್ ಸಿಂಗ್ 18ಕ್ಕೆ1) ಫಲಿತಾಂಶ: ವೆಸ್ಟ್ ಇಂಡೀಸ್ ತಂಡಕ್ಕೆ 9 ವಿಕೆಟ್‌ಗಳ ಜಯ.  ಪಂದ್ಯಶ್ರೇಷ್ಠ: ರಾಸ್ಟನ್ ಚೇಸ್. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT